ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರ ಮಕ್ಕಳ ಕಾದಂಬರಿ ‘ಸೋನು‘
ಈ ಕೃತಿಯನ್ನು ಅಭಿನವ ಪ್ರಕಾಶನ ಪ್ರಕಟಿಸಿದೆ.
ಈ ಕೃತಿಯ ಕುರಿತ ಶ್ರೀಧರ ಗಸ್ತಿಅವರ ಬರಹ ಇಲ್ಲಿದೆ.
–ಶ್ರೀಧರ ಗಸ್ತಿ
ಮಕ್ಕಳ ಮನಸ್ಸಿನ ಮೌನ ಮಿಡಿತಗಳನ್ನು ಆಲಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಬಾಲ್ಯದ ತುಂಟಾಟ, ಕೌತುಕ, ಹಸಿವು, ಭಯ, ಕನಸು ಮತ್ತು ಮುಗ್ಧತೆಯಲ್ಲಿ ಅಡಗಿದ ನಾದವನ್ನು ಕೇಳಬಲ್ಲ ಹೃದಯವೇ ನಿಜವಾದ ಮಕ್ಕಳ ಸಾಹಿತ್ಯವನ್ನು ಸೃಷ್ಟಿಸುತ್ತದೆ. ಆ ರೀತಿಯ ಸಂವೇದನಾಶೀಲ ಹೃದಯದ ಸಾಹಿತಿಗಳಲ್ಲಿ ಹಿರಿಯರಾದವರು ತಮ್ಮಣ್ಣ ಬೀಗಾರ. ಶಿಕ್ಷಕ ವೃತ್ತಿಯ ದೀರ್ಘ ಅನುಭವವು ಅವರಿಗೆ ಮಕ್ಕಳ ಮನಸ್ಸಿನ ಅಂತರಂಗವನ್ನು ಅರಿಯುವ ಕಣ್ಣು ಕೊಟ್ಟಿದೆ. ಮಕ್ಕಳೊಂದಿಗೆ ಕಳೆದ ಅನುದಿನದ ಒಡನಾಟ, ತಮ್ಮದೇ ಬಾಲ್ಯದ ನೆನಪುಗಳ ಬೆಂಕಿಯಲ್ಲಿ ಕರಗಿದ ಅನುಭವಗಳು, ಅವರ ಸಾಹಿತ್ಯಕ್ಕೆ ಜೀವಂತಿಕೆಯ ಸ್ಪರ್ಶ ನೀಡಿವೆ. ಅವರ ಸಾಹಿತ್ಯಯಾನದಲ್ಲಿ ಬಾವಲಿ ಗುಹೆ ಕೃತಿಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರವು ಅವರ ಬರವಣಿಗೆಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಇದೀಗ ಸೋನು ಕಿರು ಕಾದಂಬರಿಯ ಮೂಲಕ ಓದುಗರ ಮನಸ್ಸನ್ನು ತೇವಗೊಳಿಸುವ ಬದುಕಿನ ಸತ್ಯವನ್ನು ಅವರು ಅನಾವರಣಗೊಳಿಸಿದ್ದಾರೆ.
ಕಿರಿದಾದ ಗಾತ್ರದ ಕಾದಂಬರಿಯಾದರೂ ಸೋನು ಬದುಕಿನ ದೊಡ್ಡ ವ್ಯಥೆಯನ್ನು ಹೊತ್ತು ತರುತ್ತದೆ. ಇದು ಕೇವಲ ಒಬ್ಬ ಬಾಲಕನ ಕಥೆಯಲ್ಲ; ಹಸಿವಿನ ಎದುರು ಬಾಲ್ಯವನ್ನು ಕಳೆದುಕೊಂಡ ಅನೇಕ ಮಕ್ಕಳ ಬದುಕಿನ ಪ್ರತಿಬಿಂಬವಾಗಿದೆ. ಶಾಲೆಯ ಗಂಟೆ ಶಬ್ದ ಕೇಳಿದಾಗ ಅಕ್ಷರದ ಕನಸು ಕಾಣುವ, ಆದರೆ ಹೊಟ್ಟೆಯ ಹಸಿವು ಆ ಕನಸನ್ನು ನುಂಗಿಬಿಡುವ ಮಕ್ಕಳ ಅಸಹಾಯಕತೆಯ ಚಿತ್ರಣ ಈ ಕಾದಂಬರಿಯಲ್ಲಿ ಮರ್ಮಭೇದಿಯಾಗಿ ಮೂಡಿದೆ. ಕಥಾನಾಯಕ ಸೋನು ಶಾಲೆಗೆ ಹೋಗಿ ಕಲಿಯಬೇಕೆಂಬ ಹಂಬಲ ಹೊತ್ತವನಾದರೂ ಬದುಕಿನ ಕಠಿಣ ವಾಸ್ತವತೆ ಅವನ ಕೈಗೆ ಪುಸ್ತಕದ ಬದಲು ಚಿಂದಿಯ ಚೀಲವನ್ನು ಹಿಡಿಸುತ್ತದೆ.
ಸೋನುವಿನ ತಾಯಿ ಲಚ್ಚೀ ಈ ಕಾದಂಬರಿಯ ಜೀವಾಳ. ಬಡತನದ ನಡುವೆ ಮಗನು ಓದಿ ಮನುಷ್ಯನಾಗಬೇಕು ಎಂಬ ಅವಳ ಕನಸು ತಾಯ್ತನದ ಅತ್ಯಂತ ಮೃದು ಮುಖವನ್ನು ತೆರೆದಿಡುತ್ತದೆ. ಗಂಡ “ಕೆಲಸಕ್ಕೆ ಕಳಿಸಿದರೆ ನಾಲ್ಕು ರೂಪಾಯಿ ಬರುತ್ತವೆ” ಎಂದು ಹೇಳುವಾಗ, “ನೀನೇ ದುಡಿದು ಶಾಲೆಗೆ ಕಳಿಸು” ಎಂಬ ನಿರ್ದಯ ಮಾತಿನ ಎದುರು ಲಚ್ಚೀ ಕುಗ್ಗುವುದಿಲ್ಲ. ನಾಲ್ಕಾರು ಮನೆಯ ಕಸಮುಸುರೆ ಕೆಲಸ ಮಾಡಿಕೊಂಡಾದರೂ ಮಗನನ್ನು ಶಾಲೆಗೆ ಕಳಿಸಬೇಕು ಎಂಬ ಅವಳ ಹಠ, ಬಡತನದ ನಡುವೆಯೂ ಕನಸು ಕಾಣುವ ತಾಯಿಯ ಧೈರ್ಯವನ್ನು ಪ್ರತಿನಿಧಿಸುತ್ತದೆ. ಆದರೆ ಸಮಾಜದ ಕ್ರೂರತೆ ಬಡವರ ಮಕ್ಕಳನ್ನು ಯಾವ ಕ್ಷಣದಲ್ಲಾದರೂ ಅಪರಾಧಿಗಳಾಗಿ ಗುರುತಿಸಲು ಸಿದ್ಧವಾಗಿರುತ್ತದೆ. ಮನೆಯ ಯಜಮಾನನ ಮಗಳು ಚರಂಡಿಗೆ ಬಿದ್ದಾಗ ಕಾರಣವಿಲ್ಲದೇ ಸೋನುವಿನ ಮೇಲೆ ಹೊರೆ ಹಾಕುವುದು, ಹಣ್ಣು ಕದಿಯದಿದ್ದರೂ ಕಳ್ಳನೆಂದು ಬೆನ್ನಟ್ಟುವುದು — ಇವೆಲ್ಲ ಸಮಾಜದ ವರ್ಗಸಂವೇದನೆಯ ಕರಾಳ ಮುಖವನ್ನು ಬಿಚ್ಚಿಡುತ್ತವೆ.
ಆದರೆ ಈ ಕಾದಂಬರಿ ಕೇವಲ ಕ್ರೌರ್ಯದ ಕಥೆಯಾಗಿ ಉಳಿಯುವುದಿಲ್ಲ. ಮಾನವೀಯತೆಯ ಸಣ್ಣ ಸಣ್ಣ ಕಿರಣಗಳು ಕತ್ತಲಿನ ನಡುವೆ ಮಿನುಗುತ್ತವೆ. “ಸೋನು ಅಣ್ಣನಿಗೆ ಹೊಡೆಯಬೇಡಿ, ನಾನೇ ಬಿದ್ದದ್ದು” ಎಂದು ಸತ್ಯ ಹೇಳುವ ಪುಟ್ಟ ಹುಡುಗಿಯ ಧೈರ್ಯ, ತನ್ನ ಹಸಿವಿನ ಅನುಭವದಿಂದಲೇ ಅರ್ಧ ರೊಟ್ಟಿಯನ್ನು ಸೋನುವಿಗೆ ತಂದುಕೊಡುವ ಫಾತೀಮಾಳ ಮಮತೆ, ಹಸಿವಿನಿಂದ ಬಸವಳಿದ ಬಾಲಕನ ಕಣ್ಣಿನಲ್ಲಿ ನೋವನ್ನು ಗುರುತಿಸಿ ನೆರವಾಗುವ ಅಬ್ದುಲ್ಲ ಕಾಕಾ, ತಾಯಿಯ ಪ್ರೀತಿಯಂತೆ ಸೋನುವನ್ನು ಶಾಲೆಗೆ ಸೇರಿಸಿಕೊಳ್ಳುವ ಕಮಲಾ ಟೀಚರ್ — ಇಂತಹ ಪಾತ್ರಗಳು ಮಾನವೀಯತೆ ಇನ್ನೂ ಸತ್ತಿಲ್ಲ ಎಂಬ ಭರವಸೆಯನ್ನು ಮೂಡಿಸುತ್ತವೆ.
ಕಾದಂಬರಿಯ ಕೊನೆಯ ಭಾಗ ಹೃದಯವನ್ನು ಚೂರಾಗಿಸುತ್ತದೆ. ಪೋಲಿಯೋ ಹಾಕಿಸಿಕೊಳ್ಳಲು ಹೋಗಿದ್ದ ತಾಯಿ ಮತ್ತು ತಂಗಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ಮುಂದಿನ ವರ್ಷ ಅವರ ಚಿತ್ರಗಳನ್ನು ಪೋಲಿಯೋ ಜಾಗೃತಿ ಪೋಸ್ಟರ್‌ಗಳಲ್ಲಿ ಕಂಡು ಸೋನು ಅವನ್ನು ಕಿತ್ತುಕೊಂಡು ಓಡುವ ದೃಶ್ಯ ಮನಸ್ಸನ್ನು ನಡುಗಿಸುತ್ತದೆ. ತನ್ನ ದುಃಖವನ್ನು ಯಾರೂ ಅರ್ಥಮಾಡಿಕೊಳ್ಳದ ಜಗತ್ತಿನಲ್ಲಿ “ಕಳ್ಳ” ಎಂಬ ಆರೋಪದಿಂದ ಓಡುತ್ತಾ ಓಡುತ್ತಾ ಕೊನೆಗೆ ಶಾಲೆಯ ಕಂಪೌಂಡ್ ಹಾರಿ ಕಮಲಾ ಟೀಚರ್ ಅಪ್ಪುಗೆಯಲ್ಲಿ ಸೇರುವ ಕ್ಷಣ ಓದುಗರ ಕಣ್ಣಲ್ಲಿ ನೀರು ತರಿಸುತ್ತದೆ. ಆ ಅಪ್ಪುಗೆ ಕೇವಲ ಒಬ್ಬ ಶಿಕ್ಷಕಿಯ ಸಾಂತ್ವನವಲ್ಲ; ಅದು ಸಮಾಜದಿಂದ ನಿರಾಕರಿಸಲ್ಪಟ್ಟ ಬಾಲ್ಯಕ್ಕೆ ದೊರಕಿದ ಆಶ್ರಯದ ಸಂಕೇತವಾಗಿದೆ.
ಒಟ್ಟಿನಲ್ಲಿ ಸೋನು ಕಾದಂಬರಿ ಹಸಿವು, ಬಡತನ, ಮಾನವೀಯತೆ ಮತ್ತು ಬಾಲ್ಯದ ಕನಸುಗಳ ಸಂಗಮವಾಗಿದೆ. ತಮ್ಮಣ್ಣ ಬೀಗಾರ ಅವರು ಸರಳ ಭಾಷೆಯೊಳಗೆ ಬದುಕಿನ ಆಳವಾದ ನೋವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಕೃತಿ ಓದುಗರ ಕಣ್ಣನ್ನು ಮಾತ್ರವಲ್ಲ, ಮನಸ್ಸನ್ನೂ ತೋಯಿಸುವ ಶಕ್ತಿಯುಳ್ಳದ್ದು.






0 Comments