-ಮಂಜುನಾಥ್ ಲತಾ
ಕೆಮ್ಮೋಡಗಳ ಬಿತ್ತನೆಯಾದಾಗಲಿಂದ
ಸುರಿಯುತಿರುವುದು ಮುಟ್ಟಿನ ಮಳೆ.
ಕಫಗಟ್ಟಿದಂತೆ ನೆತ್ತರ ಕಣ ಕಣಗಳು
ಮರಗಳ ಕೊಂಬೆ, ಎಲೆ ತೊಟ್ಟುಗಳ ಮೇಲೆ.
ಮುಟ್ಟು ಹುಟ್ಟುವ ನದಿಗಳನ್ನು
ಬೊಗಸೆಯಲ್ಲಿ ಹಿಡಿಯಲಾಗುವುದಿಲ್ಲ:
ಅಲ್ಲಿ ಕೆನೆಗಟ್ಟಿದ ರಕ್ತ
ಪಾಯಸದಂತೆ ಸಿಗುತ್ತದೆ.
ನೆತ್ತರು ಕುಡಿಯುವ ಹೆಂಗಸರು ಅಲ್ಲಿ ನೆರೆಯುತ್ತಾರೆ.
ಮುಟ್ಟಿನ ಮಳೆ ನಡೆದ ದಾರಿಯಲ್ಲೆಲ್ಲ
ರಾಗಿ, ಭತ್ತದ ಪೈರುಗಳು ಹುಟ್ಟಿ, ತೆನೆ ಕಾಳುಗಳು ಬಲಿತು
ಅನ್ನ, ರಾಗಿ ರಸ ಮುದ್ದೆಗಳು ಚೆಲ್ಲಾಡುತ್ತವೆ.
ಊರ ಜನ ಆಯ್ದು ಹೊಲ ಗದ್ದೆಗಳಿಗೆ ಒಯ್ಯುತ್ತಾರೆ;
ಮುಟ್ಟಿನ ನೆತ್ತರು ಗೊಬ್ಬರವೆಂಬುದು ನಂಬಿಕೆ.
ಕೆಲವು ಅಪನಂಬಿಕೆಗಳಿವೆ:
ಮುಟ್ಟಿನ ಕಣಗಳು ಅಂಟಿದ ಮರಗಳು ಮತ್ತೆ ಚಿಗುರುವುದಿಲ್ಲವೆಂದು,
ಅಲ್ಲಿ ಹುಳುವೂ ಹುಟ್ಟುವುದಿಲ್ಲವೆಂದು.
ಆದರೆ ಅಂತಹ ಗಿಡ ಮರಗಳು
ಹೊಸ ಹುಟ್ಟು ಪಡೆದಂತೆ ನಳನಳಿಸುತ್ತಿವೆ ಇಲ್ಲಿ!
ಮುಳ್ಳು ಮೊನೆಗಳು ಮಾತ್ರ
ಕೆಂಪಗೆ ಹೊಳೆಯುತ್ತಿವೆ.
ಆಗಾಗ ಮುರಿದು ಬೀಳುವ ಮುಳ್ಳುಗಳು
ಗಾಳಿ ಹಾದಿಯಲ್ಲಿ ನೆಗೆದು ಹೋಗಿ
ಚುಚ್ಚಿಕೊಳ್ಳುತ್ತವೆ ರಕ್ತ ನದಿಗಳ ಎದೆಗಳಲ್ಲಿ.
ಎದೆ ಬಿಚ್ಚಿಕೊಂಡ ನದಿಗಳೀಗ
ಎದ್ದು ನಡೆಯುತ್ತಿವೆ ಊರು ಕೇರಿಗಳಲ್ಲಿ
ಅಪನಂಬಿಕೆಗಳು ಕೊಚ್ಚಿ ಹೋಗುತ್ತಿವೆ
ಹುಚ್ಚೆದ್ದ ನದಿಯೊಡಲುಗಳಲ್ಲಿ!






0 Comments