ಕವಿತೆಯೇ.. ಕವಿತೆ ಬರೆದಂತೆ

ಶೋಭಾ ಹಿರೇಕೈ ಕಂಡ್ರಾಜಿ

ಸ್ಮಿತಾ ಅಮೃತರಾಜ್ ಸಾಹಿತ್ಯ ಲೋಕಕ್ಕೆ ಚಿರಪರಿಚಿತ ಹೆಸರು, ಗದ್ಯ ಮತ್ತು ಕಾವ್ಯ ಪ್ರಕಾರಗಳೆರಡರಲ್ಲೂ ಸೈ ಎನಿಸಿಕೊಂಡಿರುವ ಸ್ಮಿತಾ. ಈಗಾಗಲೇ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಈಗ ತಾನೇ ಮತ್ತೆ ಮೂರು ಪುಸ್ತಕ ಗಳನ್ನು ಒಮ್ಮೆಲೇ ಬಿಡುಗಡೆ ಮಾಡುವುದರ ಮೂಲಕ ಸಾಹಿತ್ಯದ ನಂಟನ್ನು ಮತ್ತೂ ಗಟ್ಟಿಯಾಗಿಸಿ ಕೊಂಡಿದ್ದಾಳೆ. ಅದಕ್ಕಾಗಿ ಗೆಳತಿ ಸ್ಮಿತಾ ಳಿಗೆ ಪ್ರೀತಿಯ ಅಭಿನಂದನೆಗಳು.

‘ಒಂದು ವಿಳಾಸದ ಹಿಂದೆ’ ಎಂಬ ಲಲಿತ ಪ್ರಬಂಧ, ‘ಹೊತ್ತಗೆಯ ಹೊತ್ತು’ ಎಂಬ ಪುಸ್ತಕ ವಿಮರ್ಶೆ, ಮತ್ತು ‘ಮಾತು ಮೀಟಿ ಹೋಗುವ ಹೊತ್ತು’ ಎಂಬ ಕವನ ಸಂಕಲನದ ಹೊಚ್ಚ ಹೊಸ ಪ್ರತಿಗಳು ನನ್ನ ಕೈಸೇರಿ ತಿಂಗಳಾಗಿದೆ. ಮೂರನ್ನೂ ಓದಿ ಮುಗಿಸಿದ ಮರು ಕ್ಷಣದಲ್ಲೇ ನನ್ನ ಪುಟ್ಟ ಅನಿಸಿಕೆ ಹೊತ್ತ ಸಂದೇಶ ಪುಸ್ತಕಗಳೊಡತಿಯ ವಾಟ್ಸಪ್ ಕದ ತಟ್ಟಿ ಒಳ ಹೋಗಿ ಕುಳಿತೂ ಆಗಿದೆ. ಕಾವ್ಯ ನನಗೆ ಕೈಗೂಸುಗಳಂತೆ. ಹಾಗಾಗಿಯೇ ಮತ್ತೆ ಸ್ಮಿತಾಳ ಕವಿತೆಗಳನ್ನು ಕೈಗೆತ್ತಿಕೊಂಡೆ. ಮರು ಓದಿನ ಬಳಿಕ, ಮಾತು ಮೀಟಿ ಹೋದ ಭಾವಗಳು, ಮಾತಾಗದೆ ಉಳಿದ ಮಾತುಗಳು, ಮಾತೇ ಆಗದ ಮೌನವೊಂದು ನನ್ನಂತರಂಗದ ಜೀವ ತಂತುವನ್ನು ಮೀಟುತ್ತಿರುವುದರಿಂದ, ಸ್ಮಿತಾಳ ‘ಮಾತು ಮೀಟಿ ಹೋಗುವ ಹೊತ್ತು’ ಕವನ ಸಂಕಲನದ ಕುರಿತು ನಾಲ್ಕು ಮಾತು.

ಕವಿತೆ ಸಾಲಿನ ಮೂಲಕ
ನೀ ನನ್ನ ಕಾಣುವಿಯಾದರೆ
ಸಾವಿಲ್ಲದ ನೋವಿಲ್ಲದ ಜೀವಂತ ಜಿನುಗುವ ಕವಿತೆಯಾಗುವೆ. ಎನ್ನುತ್ತ, ಕವಿತೆಯೇ ತಾನಾಗುತ್ತ, ಕವಿತೆಯೇ ಕವಿತೆ ಬರೆದಂತ ಅನುಭೂತಿ ಸ್ಮಿತಾ ಕವಿತೆಗಳನ್ನು ಓದುವಾಗ ನಮ್ಮದಾಗುತ್ತದೆ. ಸ್ತ್ರೀಯರ ಮನೋಲೋಕದ ಭಾವ ವೈಶಿಷ್ಟ್ಯಗಳನ್ನು, ವೇದನೆ ಸಂವೇದನೆಗಳನ್ನು, ಪ್ರಕೃತಿಯನ್ನೇ ರೂಪಕವಾಗಿಸಿಕೊಂಡು ಸ್ಮಿತಾಳು ಕವಿತೆ ಹೆಣೆವ ಪರಿಯೇ ಆಪ್ತ. ಕಾರಣ ಅವಳ ಕವಿತೆ ಓದುತ್ತೊದುತ್ತ ನಾವೇ ಆ ಕವಿತೆಯಾಗಿ ಬಿಡುತ್ತೇವೆ. ಅಂಥ ಕಾವ್ಯ ಸಮ್ಮೋಹನ ಯುಕ್ತಿಯೇ.. ಸ್ಮಿತಾಳ ಕವಿತೆಗಳ ಶಕ್ತಿ.

ಮಾತು ಮೀಟುವ ಸ್ಮಿತಾಳ ಮೊದಲ ಕವಿತೆಯ ಒಡಲೊಳಗಿರುವ‌ (ಆದರೂ ನಾವು ಮರವಾಗಿದ್ದೇವೆ) ಈ ಸಾಲುಗಳ ನೋಡಿ,
ಇನ್ನೇನು ಆಳಕ್ಕೆ ಬೇರನ್ನೂರಿ
ಭದ್ರವಾಗಿ ಬಿಡಬೇಕು.
ಪಕ್ಕನೆ! ಬುಡದಿಂದ ಕಿತ್ತದ್ದಷ್ಟೇ ಗೊತ್ತು
ಅದೆಂಥಾ ಯಾತನೆ
ಶೃಂಗಾರಗೊಂಡ ಕುಂಡದಲ್ಲಿಟ್ಟು
ಹಸ್ತಾಂತರಿಸುವ ಹೊತ್ತು.

ಹೆಣ್ಣಿನ ಜೀವನದಲ್ಲಿ ಬರುವ ಮದುವೆಯೆಂಬ ಒಂದು ಸಂಸ್ಕ್ರತಿಯ ಸತ್ವವನ್ನೇ ನೋವಿನಿಂದ ನೋಡುವಂತೆ ಮಾಡಿದ ಕವಿತೆ. ಗಂಡನ ಮನೆ ಹೆಣ್ಣಿಗೆ ಮಣ್ಣಿನ ಕುಂಡವಾಗಬಲ್ಲದೇ ಹೊರತು, ಬೇರಿಳಿಯಲು ಅನುವಾಗುವ ಮೃದು ಮಣ್ಣಾಗಲಾರದು.
ಕವಿತೆ ಮುಂದುವರಿದು..
ಗಟ್ಟಿಯಾಗಿ ಬೇರಿಳಿಸ ಬೇಕೆನ್ನುವಷ್ಟರಲ್ಲಿ
ಮತ್ತೊಮ್ಮೆ ಕತ್ತು ಕುಲುಕಿಸಿ ನೆಟ್ಟಲ್ಲಿ ಅಲುಗಾಡಿಸಿ
ಕಿತ್ತಿಟ್ಟ ನೋವು, ಪದೇ ಪದೇ ಪುನರಾವರ್ತನೆಯ ಗೋಳು
ಎನ್ನುವುರಲ್ಲೇ.. ಹೆಣ್ಣಿನ ಸಹನೆ ತ್ಯಾಗಗಳ ಬದುಕನ್ನು ಸಂಕೇತಿಸುತ್ತಾ,ತನ್ನ ಅಸ್ತಿತ್ವವನ್ನು, ಅಸ್ಮಿತೆಯನ್ನು ಉಳಿಸಿಕೊಳ್ಳುವಲ್ಲಿ ಹೆಣ್ಣು ಪಡುವ ಪಾಡನ್ನು ಹನಿಗಣ್ಣಾಗುವಂತೆ ಸಾಲುಗಳಲ್ಲಿ ಹಿಡಿದಿಟ್ಟ ಮಾತುಗಳು ಕೇವಲ ಕವಯತ್ರಿಯದೊಂದೇ ಅಲ್ಲದೇ ಇಡೀ ಹೆಣ್ಣು ಕುಲದ ಅನುಭವಜನ್ಯ ಕಾಣ್ಕೆಗಳಂತೆ ಕಾವ್ಯ ಲೋಕಕ್ಕೆ ದಕ್ಕಿದೆ. ಹೆಣ್ಣು ಪ್ರಕೃತಿಯ ಪ್ರತಿರೂಪ. ಪ್ರಕೃತಿಯ ರೂಪಕದಲ್ಲಿ ಸ್ಮಿತಾಳ ಹಲವು ಕವಿತೆಗಳು ಭಿನ್ನ ದನಿ ಪಡೆಯುತ್ತವೆ. ಅದಕ್ಕೊಂದು ಉದಾಹರಣೆ ಯಾಗಿ, ನದಿ ದಿಕ್ಕು ಬದಲಿಸಿದೆ ಕವಿತೆಯ ಸಾಲುಗಳು…

ಝುಳು ಝುಳೆಂದು ಹರಿಯುವ
ನನ್ನೂರಿನ ತಿಳಿನೀರ ನದಿ
ಈಗ ಕೆನ್ನೀರ ಕಡಲು.
ಈ ಕವಿತೆಯ ಪೂರ್ಣ ಓದಿನಿಂದ ಇದು ಊರು ಕೇರಿಗಳ ಕೊಚ್ಚಿಕೊಂಡು ಹೋದ ಕೊಡಗಿನ ಪ್ರವಾಹಕ್ಕೆ ನದಿ ಬದಿಯ ಕವಯತ್ರಿ ಕಂಗಾಲಾಗಿ ಕವಿತೆ ಬರೆದದ್ದೆಂದು ತೋಚಿದರೂ.. ನಿಸರ್ಗದ ಮುನಿಸಿಗೆ ಪರೋಕ್ಷ ಕಾರಣ ನಾವೇ ಎಂದು ಮನಸ್ಸು ಹೇಳುತ್ತಿದ್ದರೂ.. ಕವಿತೆಯ ಒಳಪ್ರಜ್ಞೆ ಯಲ್ಲಿ ಹೆಣ್ಣೆ ಹರಿಯುತ್ತಿರುತ್ತಾಳೆ. ಶಾಂತ ನದಿಯಂತೆ ತೆಪ್ಪಗೆ ಎಲ್ಲ ಸಹಿಸುತ್ತ, ಹಸಿರುಕ್ಕಿಸುತ್ತ, ಜೀವದಾಯಿನಿಯಾಗಿ ಬದುಕುವ ಹೆಣ್ಣು ಸಹನೆ ಮೀರಿದರೆ ಪ್ರವಾಹವನ್ನೇ ಉಕ್ಕಿಸಬಲ್ಲಳು.

ಮತ್ತೀಗ ನದಿ ತಿಳಿಯಾಗಿದೆ
ಮುಖ ನೋಡಿಕೊಳ್ಳಬಹುದು ಎನ್ನುತ್ತಾರೆ
ಎನ್ನುವಲ್ಲಿ… ತಹಬದಿಗೆ ಬಂದ ಮನಸನ್ನು ಧ್ವನಿಸುತ್ತಾ.. ನಮ್ಮ ಭಾವಗಳನ್ನು ನೆಮ್ಮದಿಯ ದಡ ಸೇರಿಸುತ್ತಾಳೆ ಕವಯಿತ್ರಿ.

ಭಾಷೆಯನ್ನು ಸೃಜನಶೀಲವಾಗಿ ಹೇಗೆ ದುಡಿಸಿಕೊಳ್ಳುತ್ತೇವೆ, ಬಳಸಿಕೊಳ್ಳುತ್ತೇವೆ ಎಂಬುದರಲ್ಲೇ ಒಂದು ಕಾವ್ಯದ ಯಶಸ್ಸಿದೆ ಎಂದು ಎಂದೋ ಓದಿದ ಸಾಲಗಳು ಸ್ಮಿತಾಳ ಕವಿತೆ ಓದುವಾಗ ನೆನಪಾಗುತ್ತವೆ. ಈ ದಿಶೆಯಲ್ಲಿ ಸ್ಮಿತಾ ಗೆದ್ದಿದ್ದಾಳೆ ಅನ್ನಿಸುತ್ತದೆ.

ಯಾವುದೇ ಕಸರತ್ತಿಲ್ಲದೆ ಸೀದಾ ಸಾದ, ಸರಳ ಆಡು ಭಾಷೆಯಲ್ಲಿ ಯೇ ದಟ್ಟವಾದ ಭಾವಗಳನ್ನು ಹೊಳೆಸುವ ಸ್ತ್ರಿ ಸಂವೇದನೆಯ ಕುಕ್ಕರ್ ಈಗ ಮೊದಲಿನಂತಿಲ್ಲ ಎಂಬ ಕವಿತೆಯಲ್ಲಿ ಕುಕ್ಕರ್… ದಹಿಸಿಕೊಳ್ಳುತ್ತಿರುವ ಅದೆಷ್ಟೋ ಹೆಣ್ಣು ಜೀವಗಳ ರೂಪಕವಾಗಿ, ಎದೆಯ ಕಾವು ಹೆಚ್ಚಾಗಿ
ತಕ ತಕನೆ ಕುಣಿದು
ಕೊತ ಕೊತನೆ ಕುದಿದು
ಪ್ರತಿಭಟನೆಯ ಕೂಗು ಓಣಿ ತಿರುವಿನವರೆಗೂ
ಎನ್ನುವಲ್ಲಿ
ಹೆಣ್ಣಿನಲ್ಲಿರುವ ಒಳ ಬಂಡಾಯದ ಕೂಗೊಂದು ಸಾದೃಶ್ಯವಾಗಿ ನಿಲ್ಲುತ್ತದೆ

ಪಾತ್ರ ಕವಿತೆಯಲ್ಲಿ ಅಡುಗೆಗೆ ಬಳಸುವ ಕರಿಬೇವು ಅಡುಗೆ ಮಾಡುವ ಅನೇಕ ತಾಯಂದಿರ ಪಾತ್ರವನ್ನೇ ಕಣ್ಣಿಗೆ ಕಟ್ಟುತ್ತದೆ.

ಅಡುಗೆಯ ಪರಿಪೂರ್ಣತೆಗೆ
ಸೈ ಎಂದು ಟೊಂಕ ಕಟ್ಟಿ ನಿಂತ ಕರಿಬೇವು
ಪಾತ್ರ ಮುಗಿದಾದ ಮೇಲೆ
ನೇಪಥ್ಯದಲ್ಲುಳಿದು ನಾಪತ್ತೆಯಾಗುವುದು ಯಾತರ ನ್ಯಾಯ…
ಅಲ್ಲವೇ? ಇಷ್ಟೇ ಅಲ್ಲವೇ.. ಅದೆಷ್ಟೋ ತಾಯಂದಿರ ಬದುಕು. ಅಥವಾ ನನ್ನದೇ ಬದುಕು ಅಂತನ್ನಿಸಿಬಿಟ್ಟ ಕರಿಬೇವಿನ ಕಥೆ… ನಮ್ಮ ವ್ಯಥೆಯೇ ಆಗುತ್ತದೆ.

ಮಹಿಳೆಯರಿಗೆ ಹೊರ ಜಗತ್ತಿನ ಲೋಕಾನುಭವ ಸಹಜವಾಗಿಯೇ ಕಡಿಮೆ ಇರುತ್ತದೆ. ಕೃಷಿಕ ಮಹಿಳೆಯಾದರಂತೂ ಮುಗಿಯಿತು. ಅವರ ಅನುಭವದ ಒಡನಾಟದಲ್ಲಿ ಅಡುಗೆ ಮನೆಯದ್ದೇ ಅಗ್ರಸ್ಥಾನ. ಅಡುಗೆಮನೆ, ಒಲೆ ತಪ್ಪಲೆ, ಕಿಡಕಿ ಬಾಗಿಲು, ಕುಕ್ಕರ್ ಹೊಸ್ತಿಲ ದಾಟಿ ಸ್ವಲ್ಪ ಈಚೆ ಬಂದರೆ ಬಾವಿಕಟ್ಟೆ, ಅಂಗಳದ ಹಳದಿ ಹೂವು, ಹಿತ್ತಲಿನ ಬಸಳೆ, ತೊಂಡೆ ಚಪ್ಪರ, ಹಸಿಮಣ್ಣು, ಖಾಲಿ ಜಾಗ ಹೀಗೆ.. ತನ್ನ ಸೀಮಿತ ಭಾವವಲಯದಲ್ಲೇ ಹೊಸ ಮಿಂಚೊಂದ ಮಿಂಚಿಸಿ ಎದೆ ಗೂಡ ಝಗ್ಗೆನಿಸಿ ಬಿಡುವ, ಕೆಲವು ಕಡೆ ಕಣ್ಣ ಹನಿಗಳ ಜಾರಿಸಿ ಬಿಡುವ, ಮತ್ತೆ ಕೆಲವೆಡೆ ಒಲವಲ್ಲೇ ತೋಯಿಸಿ ಬಿಡುವ ಅನೇಕ ಕವಿತೆಗಳಿವೆ. ಸೋನೆ ಹನಿ ಹನಿ ಹನಿದ ಹೊತ್ತು, ಗೆರೆ, ಪುರಾವೆ, ಹಾಡಾಗಿ ಆವರಿಸು,ಆತ್ಮ ಸಖಿ ನೆನಪಾಗಲೇ ಇಲ್ಲವೇ.. ಈ ಕವಿತೆಗಳೆಲ್ಲ ಗುಪ್ತ, ಸುಪ್ತ ಕೃಷ್ಣ ಪ್ರಜ್ಞೆಯನ್ನು ಜಾಗೃತಿಸುವ ಕವಿತೆಗಳು
ಪುಟದ ನಡುವಲಿ ಇಟ್ಟ ಪುಟ್ಟ ನವಿಲುಗರಿಯಂತಿವೆ.

ಇವುಗಳಾಚೆ ಸ್ಮಿತಾಳದ್ದು ಇನ್ನೊಂದು ಬಗೆಯ ಕವಿತೆಗಳಿವೆ.‌ ಅಪ್ಪನ ಸಾವಿನಂತಹ ಖಾಸಗಿ ನೋವೊಂದು ಕಣ್ಣಲ್ಲಿ ಹನಿಯಿಳಿಸಿ ಕಾಡುವ ಕವಿತೆಯಾಗುತ್ತದೆ. ಸೈನಿಕನ ಸಾವಿಗೆ ಮರುಗಿ ಗಡಿ ರೇಖೆಯ ಉದ್ದಕ್ಕೂ ಗುಲಾಬಿ ನೆಟ್ಟು, ಗಡಿಯಾಚೆಯ ಮಕ್ಕಳಿಗೆ ಪಾರಿವಾಳ ಹಾರಿಸಲು ಹೇಳುತ್ತಾಳೆ, ಗುಲಾಬಿ ಪಾರಿವಾಳಗಳು ಪ್ರೀತಿ, ಶಾಂತಿಯ ಸಂಕೇತಗಳಾಗಿ ಯುದ್ಧ ವಿರೋಧಿ ನಿಲುವನ್ನು, ವಿಶ್ವ ಮಾನವ ಸಂದೇಶ ಸಾರುತ್ತದೆ ಕವಿತೆ. ಕವಿತೆಯ ಆಶಾದಾಯಕ ತೀರ್ಮಾನ ಕ್ಕೆ ಓದುಗನ ತಲೆ ಬಾಗುತ್ತದೆ.

ಮತ್ತೊಂದು ಗಮನ ಸೆಳೆದ ಕವಿತೆ ‘ಸ್ಥಾನ ಪಲ್ಲಟವಾದಾಗ’. ಅಜ್ಜಿ ಬಳಸಿದ್ದ ಅಂಟುವಾಳ ಕಾಯಿ, ಮತ್ತು ಕವಯಿತ್ರಿ ಬಳಸುವ ತರಹೆವಾರಿ ಸೋಪುಗಳು ಸಾಂಸ್ಕೃತಿಕ ಪರಂಪರೆ ಮತ್ತು ವರ್ತಮಾನದ ಕೊಂಡಿಯಾದ ರೂಪಕಗಳಾಗಿ ಚಿತ್ರಣ ಪಡೆಯುತ್ತದೆ.

ಅಂತಿಮವಾಗಿ ‘ಮಾತು ಮೀಟಿ ಹೋಗುವ ಹೊತ್ತು’ ನಮ್ಮ ಬುದ್ಧಿ ಭಾವಗಳನ್ನು ಮೀಟಿ ಹೃದಯಕ್ಕೆ ಹತ್ತಿರ ವಾಗಿ ಬಿಡುತ್ತದೆ. ಒಳದನಿಗಳ ವಿಶೇಷ ತೆಯಿಂದ ಕಾವ್ಯ ಗೆಲ್ಲುತ್ತದೆ. ಸ್ಮಿತಾಳ ಕೊನೆಯ ಕವಿತೆ ‘ತಿರುವು’ ಹೇಳುವಂತೆ

ಮಗಳು ಎದೆಯುದ್ದ ಬೆಳೆದು, ಅಪ್ಪನ ಕಿಸೆಯಿಂದಲೇ ನೋಟು ಎಣಿಸಿ ಲೆಗಿನ್ ಟಾಪೊಂದ ಅಮ್ಮನ ಕೈಯೊಳಗಿತ್ತು ತೊಟ್ಟುಕೋ ! ಅಂತ ಫರ್ಮಾನು ಹೊರಡಿಸಿದ್ದು ತೀರಾ ಇತ್ತೀಚಿನ ಬೆಳವಣಿಗೆ. ಮಗಳು ನೀಡುವ ಲೆಗಿನ್ಟಾಪ್ ಪ್ರತಿಮೆ ಧ್ವನಿಸುವ ಸಕಾರಾತ್ಮಕತೆಯಲ್ಲಿ.. ನಮ್ಮೆಲ್ಲರಿಗೂ ಹೊಸ ತಿರುವೊಂದು ಸಿಕ್ಕೇ ಬಿಟ್ಟಿತೇನೋ ಎಂಬ ತೃಪ್ತಿ ದಕ್ಕುತ್ತದೆ.

ಹೀಗೇ.. ೫೨ ಕವನಗಳ ಮಡಿಲಲ್ಲಿ ಅದೆಷ್ಟೋ ಮುತ್ತಂತ ಸಾಲುಗಳಿವೆ. ನಮ್ಮದೇ ಅನ್ನಿಸುವ ಅದೆಷ್ಟೋ ಭಾವಗಳಿವೆ. ನವಿರು ನವಿರಾದ ನವಿಲಂತ ನೆನಪುಗಳಿವೆ.ಬದುಕಿನ ದರ್ಶನವಿದೆ. ಸಂಸ್ಕ್ರತಿಯಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಹೂಮನಸಿಂದ ಬರೆದ ಕವಿತೆಗಳಲ್ಲಿ ಕನ್ನಡ ಕಸ್ತೂರಿಯ ಕಂಪಿದೆ.

ಈ ಸಂಕಲನಕ್ಕೆ ‘ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಹಸ್ತ ಪ್ರತಿ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಗೆಳತಿ ಸ್ಮಿತಾಳ ನ್ನು ಅಭಿನಂದಿಸುತ್ತಾ ಮುಂದಿನ ಕಾವ್ಯ ಯಾನಕ್ಕೆ ಶುಭ ಕೋರುತ್ತಾ… ಮುಂದೆ, ಆದಷ್ಟು ವರ್ತಮಾನದ ಜರೂರುಗಳಿಗೆ ಸ್ಪಂದಿಸುವ ಬರಹಗಳನ್ನು ಸ್ಮಿತಾಳಿಂದ ನಿರೀಕ್ಷಿಸುತ್ತಾ… ಹೊತ್ತಲ್ಲದ ಹೊತ್ತಲ್ಲೂ ಕಾಡಿದ, ಇಷ್ಟು ಬರೆದಾದ ಮೇಲೂ ಮಾತು ಮುಗಿಯದೇ… ಇನ್ನೂ ಮಾತನ್ನು ಮೀಟುತ್ತಲೇ ಇರುವ ಈ ಕೃತಿ ಸಾಹಿತ್ಯ ಲೋಕದಲ್ಲಿ ಎಲ್ಲ ಗೌರವಕ್ಕೂ ಪಾತ್ರವಾಗಲಿ.

‍ಲೇಖಕರು Avadhi

May 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Vasundhara k m

    ಒಳ್ಳೆಯ ಓದು ಹಾಗೂ ಅನಿಸಿಕೆ. ಸ್ಮಿತಾ ಹಾಗೂ ಶೋಭಾ ಇಬ್ಬರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ
  2. Nagaraj Harapanahalli

    ಶೋಭಾ, ಕವಯಿತ್ರಿ ಮಾತ್ರವಲ್ಲ, ವಿಮರ್ಶಕಿ‌ ಎಂದು ಸಾಬೀತು ಮಾಡಿದ್ದಾರೆ. “ಗಂಡನ‌ ಮನೆ ಹೂ ಗಿಡದ ಕುಂಡವೇ ಹೊರತು, ಬೇರಿಳಿವ ಮಣ್ಣಲ್ಲ” ಎಂಬ ಸಾಲು ಇಷ್ಟವಾಯಿತು. ಸ್ಮಿತಾ ಅವರ ಕವಿತೆಗಳ ಸೂಕ್ಷ್ಮ ಆಯಾಮವನ್ನು ಶೋಭಾ ಸೊಗಸಾಗಿ ಬರೆದಿದ್ದಾರೆ.
    ಇಬ್ಬರಿಗೂ ಅಭಿನಂದನೆಗಳು…

    ಪ್ರತಿಕ್ರಿಯೆ
    • ಸಂಗೀತ ರವಿರಾಜ್

      ಶೋಭಾವಾರವರು ಉತ್ತಮ ಕವಯತ್ರಿ ಆಗಿರುವುದಕ್ಕೆ ಸ್ಮಿತಾರ ಕವಿತೆಗಳ ಬಗ್ಗೆ ಇಷ್ಟೊಳ್ಳೆಯ ವಿಚಾರ ವ್ಯಕ್ತಪಡಿಸಲು ಸಾಧ್ಯವಾಯಿತು. ಅಭಿನಂದನೆಗಳು

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: