ದೇವಸ್ಯ ಶಂಭಣ್ಣ ಇನ್ನಿಲ್ಲ ಎಂದರೆ..

ಮೂರ್ತಿ ದೇರಾಜೆ ವಿಟ್ಲ

‘ದೇವಸ್ಯ ಶಂಭಣ್ಣ ಇನ್ನಿಲ್ಲ ಎಂದರೆ ನಂಬಿಕೆ ಬರುತ್ತಿಲ್ಲ…’ ಎನ್ನುವ ಮಾತು ನಿಜವೇ ಆದರೂ ಪೂರ್ತಿ ನಿಜ ಅಂತ ನನಗೆ ಕಾಣುತ್ತಿಲ್ಲ. ಯಾಕೆಂದರೆ ಕಳೆದ ಹಲವಾರು ವರ್ಷಗಳಿಂದ ಅವರು ಬದುಕಿದ್ದು ಹಾಗೆಯೇ. ಲೋಕದ ಪಾಲಿಗೆ ಇಲ್ಲದಂತೆಯೇ. ಅವರನ್ನು ಹೇಗೆಂದು ವಿವರಿಸುವುದು. ಎಷ್ಟೇ ಹೇಳಿದರೂ ಅರ್ದಂಬರ್ದ ಆದೀತಷ್ಟೇ ಹೊರತು ಪೂರ್ತಿ ಆಗಲಾರದು. ಒಬ್ಬ ಕಲಾವಿದನೇ..? ಒಬ್ಬ ಒಳ್ಳೆಯ ಕೃಷಿಕನೇ…? ಒಬ್ಬ ಮೆಕ್ಯಾನಿಕಲ್ ಇಂಜಿನಿಯರೇ …? ಒಬ್ಬ ಸಂಶೋಧಕನೇ….? ಒಬ್ಬ ದಾರ್ಶನಿಕನೇ…? ಅವೆಲ್ಲವೂ ಹೌದು ಎನ್ನುವುದು ನನಗಾದ ಅನುಭವ.

ನನಗೆ ಅವರ ಪರಿಚಯ ೧೯೭೨ನೇ ಇಸವಿಯ ನಂತರ. ಮೊದಲಿನ ಕತೆ ಅಲ್ಪಸ್ವಲ್ಪ ಅವರ ಬಾಯಿಂದಲೇ ಕೇಳಿ ತಿಳಿದದ್ದು. ಅವರ ಮಾತಿನಲ್ಲೇ ಹೇಳುವುದಿದ್ದರೆ… ‘ಶ್ಯಾಮ ಎನ್ನುವ ಹೆಸರಿನ ನನ್ನನ್ನು ಹಾಗೇ ಕರೆದರೆ ಅದಕ್ಕೊಂದು ಅರ್ಥವಿರುತ್ತಿತ್ತು. ನನ್ನ ಮೈ ಬಣ್ಣ ಹಾಗೇಯೇ ಇದ್ದದ್ದು. ಕರಿ ಹೆಗ್ಗಣದ ಹಾಗಿದ್ದೆ. ಹಾಗಾಗಿಯೋ ಏನೋ ಚಿಕ್ಕವನಿದ್ದಾಗ ನಾನು ಯಾರಿಗೂ ಇಷ್ಟದಂವ ಅಲ್ಲ. ಮನೆಯವರಿಗೂ ಅಷ್ಟೇ, ಸಂಬಂಧಿಕರಿಗೂ ಅಷ್ಟೆ…. ಹಾಗಾಗಿ ನಾನು ಎಲ್ಲರ ಪಾಲಿಗೂ ‘ಶಂಭು’ ಆದೆ. ಆಡು ಮಾತಿನಲ್ಲಿ ‘ಶಂಭು’ ಎಂದರೆ ಗೊತ್ತಲ್ಲ…!!

ಶಾಲೆಯಲ್ಲೂ ಅಷ್ಟೆ… ಟೀಚರುಗಳು ಹೇಳುತ್ತಿದ್ದ ಮಾತು. ‘ಮಕ್ಕಳೇ ನೀವು ಪಾಠದಲ್ಲಿ ಫಸ್ಟ್ ಬರಬೇಕು, ಆಟದಲ್ಲೂ ಫಸ್ಟ್ ಬರಬೇಕು, ನಮ್ಮ ಶಾಲೆಗೆ ಹೆಸರು ತರಬೇಕುʼ…ಅಂತ. ನಾನು ಯಾವ ಆಟದಲ್ಲೂ ಇರುತ್ತಿರಲಿಲ್ಲ… ಪಾಠದಲ್ಲಿ ಅಂತೂ ಹೆಡ್ಡ. ಹಾಗಾಗಿ ಅಲ್ಲಿಯೂ ‘ಶಂಭು’ವೇ. ಎಲ್ಲರಿಗೂ ಅವರ ಶಾಲಾ ದಿನಗಳು ಅಂದರೆ ಸುವರ್ಣ ಯುಗವೇ… ನನಗೆ ಮಾತ್ರ ನನ್ನ ಜೀವನದ ಅತ್ಯಂತ ಕೆಟ್ಟ ದಿನಗಳು ನನ್ನ ಶಾಲೆಯ ದಿನಗಳು…’ ಇದನ್ನು ಅವರು ನಗಾಡುತ್ತಾ ಹೇಳಿದ್ದು, ಹೊರತು ವಿಶಾದದಿಂದಲ್ಲ ಎನ್ನುವುದು ದೊಡ್ಡ ಸಂಗತಿ.

‘ಆದರೂ ಚಿಕ್ಕಂದಿನಲ್ಲಿ ‘ಎಟೆನ್ಷನ್ ಸಿಕ್’ ಅಂತ ಹೇಳ್ತಾರಲ್ಲ… ಎಲ್ಲರ ಗಮನ ತನ್ನೆಡೆಗೆ ಸೆಳೆಯಬೇಕು ಎನ್ನುವ ಖಾಯಿಲೆ… ಅದು ನನಗೂ ಇದ್ದಿರಬೇಕು… ಹಾಗಾಗಿ ಮನೆಯಲ್ಲಿ ಹಗ್ಗಕ್ಕೆ ಹಲಗೆಯನ್ನು ಕಟ್ಟಿದ ಒಂದು ತೊಟ್ಟಿಲು ಇರುತ್ತಿತ್ತು… ಮನೆಯಲ್ಲಿ ಜನ ಸೇರಿದಾಗಲೆಲ್ಲ… ನಾನು ಆ ತೊಟ್ಟಿಲಿನಲ್ಲಿ ನಿಂತುಕೊಂಡು ಜೋರು ತೂಗುತ್ತಾ… ‘ರಿದರಿದ ರಿಂದ …. ರಿದರಿದ ರಿಂದ ’ ಅಂತ ಹೇಳ್ತಿದ್ದೆ. ಯಾಕೆ ಹಾಗೆ ಮಾಡಿದೆ…. ಯಾಕೆ ಹಾಗೆ ಹೇಳಿದೆ ನನಗೆ ಗೊತ್ತಿಲ್ಲ… ಅಲ್ಲಿದ್ದವರೆಲ್ಲಾ…. ‘ಅದಾ ಶಂಭು ಎಂತದೋ ಹೇಳ್ತಾಂ…’ ಅಂತ ನನ್ನನ್ನು ನೋಡುತ್ತಿದ್ದರು. ನನಗೆ ಅಷ್ಟೇ ಬೇಕಾಗಿತ್ತಷ್ಟೆ…’ ಹೀಗೆ ಹೇಳಿ ನಗಾಡುತ್ತಿದ್ದರು.

ಆದರೆ ಅವರಲ್ಲಿ ಬಾಲ್ಯದಿಂದಲೇ, ಚಿತ್ರ ಬರೆಯುವ ಪ್ರತಿಭೆ ಸಂಗೀತದ ಪ್ರತಿಭೆ ಇತ್ತಂತೆ. ಇದು ಅವರು ಹೇಳಿದ್ದಲ್ಲ ಬೇರೆಯವರ ಮೂಲಕ ನನಗೆ ತಿಳಿದು ಬಂದದ್ದು. ಮೌತ್ ಆರ್ಗನ್ ನುಡಿಸುತ್ತಾ ಇದ್ದರು, ಗುರುಗಳಿಂದ ಕಲಿತದ್ದಲ್ಲ, ರೇಡಿಯೋದಲ್ಲಿ ಬರುತ್ತಿದ್ದ ಸಿನೀಮಾ ಹಾಡುಗಳನ್ನು ಕೇಳಿಯೇ ಕಲಿತದ್ದು. ಆ ಕಾಲದಲ್ಲಿಯೇ ಎಲ್ಲಿಂದಲೋ ಹವಾಯಿಯನ್ ಗಿಟಾರ್ ತಂದು ಅದನ್ನು ನುಡಿಸುತ್ತಿದ್ದರಂತೆ. ಆದರೆ ಇದೆಲ್ಲಾ ‘ಕೆಲಸ ಇಲ್ಲದವರು ಮಾಡುವ ಕೆಲಸ…’ ಎಂದೇ ಪ್ರತೀತಿ ನಮ್ಮ ಸಮಾಜದಲ್ಲಿ.

ಹೈಸ್ಕೂಲಿನಲ್ಲಿದ್ದಾಗ ಶೇಕ್ಸ್ಪಿಯರ್ ಬರೆದ ಕಿಂಗ್ ಲಿಯರ್ ನಾಟಕದಲ್ಲಿ… ಕಿಂಗ್ ಲಿಂಕರ್‌ನ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದರು ಅಂತ ಗೆಳೆಯರೊಬ್ಬರು ನೆನಪು ಮಾಡಿಕೊಳ್ತಾ ಇದ್ದರು. ಅಂತೂ ಅವರೊಬ್ಬ ಒಳ್ಳೆಯ ನಟ ಎನ್ನುವುದು ಅವರು ಮಾತಾಡುವಾಗ ಅವರ ಮುಖ ಭಾವದಿಂದಲೇ ಗೊತ್ತಾಗುತ್ತಿತ್ತು. ಆ ಮೇಲೆ ಅವರು ಆರ್ಕಿಟೆಕ್ಚರ್ ಪದವಿ ಪಡೆಯಲು ಮುಂಬಯಿಗೆ ಹೋದರು ಅಲ್ಲಿ, ಆರ್ಕಿಟೆಕ್ಚರ್ ನ ಜೊತೆಗೆ ಹಿಂದೂಸ್ಥಾನಿ ಸಂಗೀತ ಕಲಿತರು. ಬಾಂಸುರಿ ಮೆಚ್ಚಿನ ವಾದ್ಯವಾಯಿತು. ಪಾಶಾತ್ಯ ಸಂಗೀತವನ್ನೂ ಸಾಕಷ್ಟು ಕಲಿತರು.

ಕೆಲವು ಪ್ರಸಿದ್ಧಿ ಪಡೆದ ಸಂಗೀತಗಾರರ ಕುರಿತು ಅವರು ಹೇಳುವ ಕ್ರಮ ಇತ್ತು. ‘ಇವರಿಗಿಂತ ಎಷ್ಟೋ ಒಳ್ಳೆಯ ಸಂಗೀತ ತಜ್ಞತೆ ಇರುವ
ನೂರಾರು ಜಟಕಾ ಸಾಬಿಗಳಿದ್ದಾರೆ ಮುಂಬಾಯಿಯಲ್ಲಿ… ಅವರು ಅದೃಷ್ಟ ಪಡೆದು ಬರಲಿಲ್ಲ… ಅಷ್ಟೆ. ಆದರೆ ಅವರೆಲ್ಲಾ ಸಂತೃಪ್ತಿಯಿಂದಲೇ ಬದುಕುತ್ತಿದ್ದರು. ಸಂಗೀತವೇ ಅವರ ಉಸಿರು…ʼ ಅಂತ…. ಆಗಾಗ ಹೇಳುತ್ತಿದ್ದರು. ಮುಂಬಾಯಿಯಿಂದ ಪುನಃ ಊರಿಗೆ ಹಿಂತಿರುಗಿ ಕೃಷಿಯಲ್ಲಿ ತೊಡಗಿಸಿಕೊಂಡರು. ಕೃಷಿ ಅವರ ಇಷ್ಟದ ವಿಷಯವೂ ಆಗಿತ್ತು.

ವಿಟ್ಲದಲ್ಲಿ ನಾವು ಗೆಳೆಯರೆಲ್ಲಾ ಸೇರಿ ‘ಸಾಮ್ರಾಟ್ ಅಶೋಕ’ ನಾಟಕ ಮಾಡಿದಾಗ ಸಂಗೀತದ ಹೊಣೆ ನನಗಿದ್ದರೂ, ಅಶೋಕನ ಮನಃ ಪರಿವರ್ತನೆಯ ಸಂದರ್ಭಕ್ಕೆ ಬೇಕಾದ ಸಂಗೀತ ನೀಡುವುದು ನನ್ನ ಮಿತಿಯನ್ನು ಮೀರಿದ್ದಾಗಿತ್ತು. ಹಾಗೆ ಅವರ ಬಳಿ ಹೋದೆ. ನನಗೆ ಬೇಕಾದದ್ದು ಏನು ಎನ್ನುವುದನ್ನು ಕೇಳಿ ತಿಳಿದುಕೊಂಡು ಮರುದಿನ ಬರಲು ತಿಳಿಸಿದರು. ಮರುದಿನ ಹೋದಾಗ, ತಾನೇ ನುಡಿಸಿದ್ದ ಐದು ನಿಮಿಷದ ಟ್ಯೂನ್ ಒಂದನ್ನು ಅವರ ‘ಗ್ರಂಡಿಗ್ ಸ್ಪೂಲ್ ಟೇಪ್ ರೆಕಾರ್ಡರ್’ ನಲ್ಲಿ ದ್ವನಿ ಮುದ್ರಿಸಿಕೊಂಡದ್ದನ್ನು ಕೇಳಿಸಿದರು. ಕೇವಲ ತಂಬೂರಿ ಬಳಸಿ ಸಣ್ಣಗೆ ಒಂದು ಆಲಾಪನೆ ಅಷ್ಟೆ. ನಾನು ದಂಗಾಗಿ ಹೋಗಿದ್ದೆ. ನನ್ನ ನಿರೀಕ್ಷೆಯಲ್ಲಿದ್ದ ಸಂಗೀತಕ್ಕಿಂತ ಎಷ್ಟೋಪಟ್ಟು ಹೆಚ್ಚು ಚೆನ್ನಾಗಿತ್ತು ಅದು. ಅಲ್ಲಿಂದ ನನಗೆ ಅವರ ಒಡನಾಟ ಹೆಚ್ಚಾಯಿತು. ನನ್ನನ್ನು ತಮ್ಮ ಆಪ್ತ ಬಳಗದಲ್ಲಿ ಒಬ್ಬ ಎಂದು ಪರಿಗಣಿಸಿಕೊಂಡರು.

ಆ ಮೇಲೆ ವಿಟ್ಲದಲ್ಲಿ ಮೋಹನ ಸೋನರ ವಿನ್ಯಾಸದ ‘ಚೋಮನ ದುಡಿ’ ನಾಟಕಕ್ಕೆ ಅವರನ್ನೇ ಬರಲು ಕೇಳಿಕೊಂಡೆ. ಆಧುನಿಕ ನಾಟಕ ಪ್ರಪಂಚ ಅವರ ಗಮನಕ್ಕೇ ಬಂದಿರಲಿಲ್ಲ. ಹಾಗಾಗಿ ಸಂಗೀತ ಮೆಲೋಡ್ರಾಮ ಆದೀತೋ ಎನ್ನುವ ಅಳುಕು ನನಗಿತ್ತು. ಆದರೆ ಅವರು ಅಪ್ಪಟ ಜನಪದ ಶೈಲಿಯ ಸಂಗೀತವನ್ನು ಬಳಸಿದ್ದು ನನಗೆ ಆಶ್ಚರ್ಯವನ್ನೇ ಉಂಟುಮಾಡಿತ್ತು.

ಅದಕ್ಕಾಗಿ ‘ದುಡಿ’ಯೊಂದನ್ನು ಎಲ್ಲಿಂದಲೋ ತಂದು ಅದನ್ನು ನುಡಿಸುವ ಕ್ರಮವನ್ನು ತಾವೇ ಕಲಿತು ಹಿನ್ನೆಲೆಯಲ್ಲಿ ನುಡಿಸಿದ್ದರು. ಸಹಜತೆ ಬರುವುದಕ್ಕಾಗಿ ಚೋಮನ ಪಾತ್ರವಹಿಸಿದ ನಟ ಮಂಜು ವಿಟ್ಲ ಅವರೊಂದಿಗೆ ತುಂಬಾ ರಿಹರ್ಸಲ್ ಮಾಡಿ, ಸ್ವತಃ ಚೋಮ ಪಾತ್ರಧಾರಿಯೇ… ವೇದಿಕೆಯಲ್ಲಿ ‘ದುಡಿ’ ನುಡಿಸಿದ್ದು ಎಂದೇ ಎಲ್ಲರೂ ನಂಬುವಂತೆ ಆಗಿತ್ತು… ಎರಡು ತಿಂಗಳು ನಡೆದ ನಾಟಕದ ಅಭ್ಯಾಸದ ಸಮಯದಲ್ಲಿ ಪ್ರತಿದಿನ ಹಾಜರಿರುತ್ತಿದ್ದರು.

ಹಗಲೂ ರಾತ್ರಿಯ ಭಿನ್ನತೆ ತೋರಿಸಲು ಹಕ್ಕಿಗಳ,ಪ್ರಾಣಿಗಳ ದ್ವನಿಯನ್ನೂ… ರಾತ್ರಿ ಎಲ್ಲಾ ಗದ್ದೆಯ ಬದಿ ಕುಳಿತು ದ್ವನಿ ಮುದ್ರಿಸಿಕೊಂಡಿದ್ದರು.
ನಾಟಕದಲ್ಲಿ ಚೋಮ, ಒಟ್ಟೂ ಸಿಟ್ಟಿನಲ್ಲಿ ಕೋಣಗಳಿಗೆ ಹೊಡೆಯುವ ದೃಶ್ಯವಿದೆ. ಆ ಸಂಗೀತವನ್ನೂ ದ್ವನಿಮುದ್ರಿಸಿ ತಂದಿದ್ದರು. ‘ಮನೆಯಲ್ಲೇ ಇರುವ ಕೋಣಗಳಿಗೆ ಬೆತ್ತದಲ್ಲಿ ಹೊಡೆದು ಅವುಗಳ ಕಿರಿಚಾಟ ರೆಕಾರ್ಡ್ ಮಾಡಿಕೊಂಡದ್ದು…’ ಎಂದು ಹೇಳಿ ಸಣ್ಣಗೆ ನಗಾಡಿದ್ದರು. ನಿಜವಾಗಿಯೂ ನಮಗೆ ಸ್ವಲ್ಪ ಕಸಿವಿಸಿ ಆಗಿತ್ತು. ನಾಟಕಕ್ಕಾಗಿ ಇಷ್ಟು ಹಿಂಸೆ ಮಾಡಬೇಕಿತ್ತೇ ಅಂತ ಕಂಡಿತ್ತು. ಮರು ದಿನ ಅವರ ಮನೆಗೆ ಹೋದಾಗ ನಿಜ ಗೊತ್ತಾಗಿತ್ತು. ಅವರ ಪತ್ನಿ ಹೇಳಿದ್ದರು… ‘ಇವರು ಹೌದೋ…! ಕೋಣಗಳಿಗೆ ಹೊಡೆಯುವುದು, ಮೈಮೇಲೆ ಸೊಳ್ಳೆ ಬಂದು ಕುಳಿತರೂ ಹೊಡೆಯುವ ಜಾತಿ ಅಲ್ಲ ಇದು… ದಿಂಬು ಇಟ್ಟುಕೊಂಡು ಅದಕ್ಕೆ ಕೋಲಿನಿಂದ ಬಡಿಯುತ್ತಾ… ಬಾಯಲ್ಲೇ ಕೋಣಗಳ ಕಿರುಚಾಟ ಮಿಮಿಕ್ರಿ ಮಾಡಿ ರೆಕಾರ್ಡ್ ಮಾಡಿಕೊಂಡದ್ದು….’ ಅಂತ. ಹಾಗೆ ಹೇಳುವಾಗ. ‘ಹೇಗಾದ್ರೂ ಇರ್ಲಿ … ಅಂತೂ ಸರಿ ಆಗಿದೆಯಲ್ಲಾ..’ ಅಂತ ನಗಾಡಿದ್ದರು ಶಂಭಣ್ಣ.

ನನ್ನಲ್ಲಿ ಎಲೆಕ್ಟಾನಿಕ್ ಕೀ ಬೋರ್ಡ್ ಇದ್ದದ್ದನ್ನು… ಗಮನಿಸಿ ಚರ್ಚ್ ನ ದೃಷ್ಯಕ್ಕೆ ಮಾತ್ರ ಅದನ್ನು ನನ್ನಿಂದ ನುಡಿಸಿದ್ದರು. ವಿಟ್ಲದ ಚೋಮನದುಡಿಯ ಯಶಸ್ಸಿನಲ್ಲಿ ದೇವಸ್ಯ ಶ್ಯಾಮ ಭಟ್ಟರ ಪಾತ್ರ ದೊಡ್ದದು. ಹಾಗೆಂದು ಬೇರೆ ಕಡೆಯಿಂದ ಆ ನಾಟಕಕ್ಕೆ ಕರೆಬಂದಾಗ…
ಬೇರೆ ಕಡೆ ಹೋಗಿ, ಅಲ್ಲಿ ಆ ನಾಟಕ ಆಡುವುದು ಅವರಿಗೆ ಅಷ್ಟು ಮನಸ್ಸಿರಲಿಲ್ಲ. ‘ಚೋಮನ ದುಡಿ ನಾಟಕ’ ನೋಡಬೇಕಾದವರು ವಿಟ್ಲಕ್ಕೇ ಬರಲಿ ಅಂತ ಹೇಳುತ್ತಿದ್ದರು. ಬಿ.ವಿ.ಕಾರಂತರೂ ಹಾಗೇ ಹೇಳುತ್ತಿದ್ದರು. ಕೆ.ಆರ್.ಎಸ್, ಅರಮನೆ, ಜೂ ನೋಡುವುದಕ್ಕೆ ಅಂತಲೇ… ಮೈಸೂರಿಗೆ ಜನ ಬರುವುದಿಲ್ಲವೇ ಹಾಗೇ ರಂಗಾಯಣದ ನಾಟಕ ನೋಡಲೂ ಇಲ್ಲಿಗೆ ಬರುವಂತಾಬೇಕು ಎನ್ನುತ್ತಿದ್ದರು.

ಬಿವಿ ಕಾರಂತರೂ ಶ್ಯಾಮಭಟ್ಟರು ಇಬ್ಬರ ಹುಟ್ಟೂರೂ ಮಂಚಿಯೇ… ಅತೀ ಸಮೀಪದಲ್ಲಿಯೆ ಮನೆ. ಚಿಕ್ಕಂದಿನಲ್ಲಿ ಅವರೊಂದಿಗೆ ಆಟವಾಡಿದ ನೆನಪಿತ್ತಂತೆ ಶಂಭಣ್ಣನಿಗೆ. ಅವ್ರು ಊರು ಬಿಟ್ಟು ಹೋದಾಗಲೇ ಇವರು ಊಹಿಸಿದ್ದರಂತೆ, ಕಾರಂತರು ಜಗತ್ಪçಸಿದ್ಧರಾಗುತ್ತಾರೆ ಅಂತ.
ಹಾಗೆಂದು ಕಾರಂತರ ನಾಟಕಗಳನ್ನು ಇವರು ನೋಡಲಿಲ್ಲ, ಅವರ ಬಗಗಿನ ಸುದ್ದಿಗಳನ್ನೂ ಇವರು ಓದಲಿಲ್ಲ. ಬಿವಿ ಕಾರಂತರ ಅಣ್ಣ ಒಬ್ಬ ಇದ್ದರಂತೆ ತುಂಬಾ ಬೋಳೇ ಸ್ವಭಾವ. ಆತನನ್ನು ಉಳಿದವರೆಲ್ಲಾ ಸೇರಿ, ತಮಾಶೆ ಮಾಡುತ್ತಾ ಗೋಳುಹೊಯ್ದುಕೊಳ್ಳುತ್ತಾ ಇದ್ದರಂತೆ.
ಇದನ್ನು ಶಂಭಣ್ಣ ಬೇಸರದಿಂದ ನೆನಪಿಸಿಕೊಂಡಿದ್ದರು.

ಆ ನಂತರ ಅಮೃತ ಸೋಮೇಶ್ವರರ ‘ಗೋದೋಳು’ ತುಳುನಾಟಕವನ್ನು ಕನ್ನಡದಲ್ಲಿ ಆಡಿಸುವ ಪ್ರಯತ್ನ ಮಾಡಿದ್ದರು ಮೋಹನ ಸೋನ.
ಆಗ ಶಂಭಣ್ಣ ಒಂದು ‘ಟೈಟಲ್ ಮ್ಯೂಸಿಕ್’ ಕಂಪೋಸ್ ಮಾಡಿದ್ದರು. ತುಳು ಜನಪದ ಹಾಡು ‘ಡೆನ್ನಾನ ಡೆನ್ನಾನ..’ ಹಾಡನ್ನು ಇಲ್ಲಿನ ಜನಪದ ದಾಟಿಯಯ ಜೊತೆಗೆ, ಕಾಡು ಮನುಷ್ಯರ ಹಾಡಿನ ದಾಟಿ ಸೇರಿಕೊಂಡ ಸಂಯೋಜನೆ. ಎಷ್ಟು ಅದ್ಭುತವಾಗಿತ್ತು ಎಂದರೆ ನಾಟಕದ ಕೇಂದ್ರ ಬಿಂದುವಾಗಿದ್ದ ಕ್ರೌರ್ಯಕ್ಕೇ ಒಂದು ರೂಪಕವಾಗಿತ್ತು. ಅವರಲ್ಲಿಗೆ ಹೋದಾಗ ನೋಡಿದ್ದೆ, ಅವರು ಬಾನ್ಸುರಿ ನುಡಿಸುತ್ತಾ ಕುಳಿತರೆ ಊಟ ತಿಂಡಿಯ ಪರಿವೆಯೂ ಇರುತ್ತಿರಲಿಲ್ಲ. ಪಾಶ್ಚಾತ್ಯ ಸಂಗೀತದ ನಿಜವಾದ ಮಾರ್ದವತೆಯನ್ನು ನನಗೆ ತಿಳಿಸಿಕೊಟ್ಟವರೇ ಶಂಭಣ್ಣ
ಜಿಮ್ ರೀವ್ಸ್, ಕ್ಲಿಫ್ ರಿಚಾರ್ಡ್ಸ್ ಮುಂತಾದವರ ಹಾಡುಗಳ ಹುಚ್ಚನ್ನು ನನಗೆ ಹಿಡಿಸಿದವರೂ ಅವರೇ.

ಅವರ ಸಂಶೋಧನೆಗಳೆಂದರೆ ಅದ್ಭುತವಾದದ್ದು… ೭೦ರ ದಶಕದಲ್ಲಿ ಒಂದು ಪ್ರೊಜೆಕ್ಟರ್ ತಯಾರಿಸಿದ್ದರು. ಅದು ಕೇವಲ ಒಂದು ಬ್ರೀಫ್ ಕೇಸಿನಷ್ಟು ಚಿಕ್ಕದು. ೧೦೦ ವಾಟ್ಸ್ ನ ಬಲ್ಬಿನ ಬೆಳಕಿನಲ್ಲಿ ಕಾರ್ಯವೆಸಗುತ್ತಿತ್ತು. ‘ದೋ ಕಲಿಯಾಂ’ ಎನ್ನುವ ಹಿಂದಿ ಸಿನೇಮವನ್ನು ಧ್ವನಿ ಸಹಿತವಾಗಿ ಅದರಲ್ಲಿ ನನಗೆ ತೋರಿಸಿದ್ದರು. ಸಮುದ್ರದ ಅಲೆಯಿಂದ ವಿದ್ಯುತ್ ತಯಾರಿಸಬಹುದು ಎನ್ನುವುದನ್ನು ನಲುವತ್ತು ವರ್ಷ ಹಿಂದೆಯೇ ಹೇಳಿದ್ದರು. ಈ ಸೊಲಾರ್ ಪ್ಲಾಂಟ್ ಎನ್ನುವ ಹೆಸರೇ ಕೇಳದಿದ್ದ ಕಾಲದಲ್ಲಿ ಅವರು ಅದನ್ನು ತಯಾರಿಸಿದ್ದರು. ಪೋರ್ಟೇಬಲ್ ಗೋಬರ್ ಗ್ಯಾಸ್ ಯುನಿಟ್ ತಯಾರಿಸಿದ್ದರು.

ವಿದ್ಯುತ್ ಅವ್ಯವಸ್ಥೆಯಿಂದ ಕೃಷಿಕರು ಕಂಗೆಡುವುದನ್ನು ನೋಡಿ ಉಗಿಯಿಂದ ನೀರೆತ್ತುವ ಪಂಪು ತಯಾರಿಸಿದ ಸುದ್ದಿ ಸ್ವಲ್ಪ ಪ್ರಚಾರವಾಗಿತ್ತು.
ದೂರದರ್ಶನದವರು ಅವರ ಸಂದರ್ಶನ ನಡೆಸಿದ್ದರು. ಮತ್ತೆ ಆ ಸುದ್ದಿ ಯಾರಿಗೂ ನೆನಪಿಲ್ಲವಾಗಿತ್ತು. ಅವರು ಮಾತ್ರ ತನ್ನ ಕೃಷಿ ಉಪಯೋಗಕ್ಕಾಗಿ ಉಗಿ ಪಂಪನ್ನೇ ಬಳಸುತ್ತಿದ್ದರು.

ಪ್ರಕೃತಿಯಲ್ಲೇ ಅಪರಿಮಿತವಾದ ಶಕ್ತಿ ಇದೆ, ಅದನ್ನು ಉಪಯೋಗಿಸಿಕೊಂಡು ಕಡಿಮೆ ವೆಚ್ಚದಲ್ಲಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ವಿವರಿಸುತ್ತಿದ್ದರು. ಹತ್ತು ಅಡಿ ಎತ್ತರದ ನೀರಿನ ಟ್ಯಾಂಕ್ ಕಟ್ಟಿ ಅದರಿಂದ ನೀರು ಹರಿಸಿ. ಜನರೇಟರ್ ಮೂಲಕ ಮನೆ ಖರ್ಚಿಗೆ ಬೇಕಾದ ವಿದ್ಯುತ್ ತಯಾರಿಸಬಹುದು, ಮತ್ತೆ ಅದೇ ವಿದ್ಯುತ್ತಿನಿಂದ ಟ್ಯಾಂಕಿಗೆ ನೀರನ್ನು ತುಂಬಿಸಬಹುದು, ಹೀಗೆ ನಿರಂತರವಾಗಿ, ಖರ್ಚಿಲ್ಲದೇ ನೀರೂ ಬೆಳಕು ಪಡೆಯಬಹುದು ಎನ್ನುವುದನ್ನು ವಿವರಿಸುತ್ತಿದ್ದರು. ಅವರು ಏನೇ ತಯಾರಿಸುತ್ತಿದ್ದರೂ ತಮ್ಮ ಮನೆಯಲ್ಲೇ ಇದ್ದ ಚಿಕ್ಕ ವರ್ಕ್ಶಾಪಿನಲ್ಲಿ ಆ ಕಾಲದಾಲ್ಲಿ ತೀರಾ ಅಪರೂಪವಾಗಿದ್ದ ‘ರಾಯಲ್ ಎನ್ ಫೀಲ್ಡ್ ಬುಲ್ಲೆಟ್’ ಬೈಕ್ ಅವರಲ್ಲಿತ್ತು.

ದ್ವಿಚಕ್ರವಾಹನದ ಬಗ್ಗೆ ‘ಟು ಸ್ಟ್ರೋಕ್’ ಗಿಂತ ಫೋರ್ ಸ್ಟ್ರೋಕ್ ವಾಹನಗಳು ಒಳ್ಳೆಯದು, ಆದರ ನಮ್ಮ ಭಾರತಕ್ಕೆ ೧೦೦ ಸಿಸಿ ಗಿಂತ ಹೆಚ್ಚು ಬೇಡ ಎಂದು ಅವರು ೭೦ ದಶಕದಲ್ಲೇ ಹೇಳಿದ್ದರು ಅದಕ್ಕಾಗಿ ಸ್ವಲ್ಪ ಪ್ರಯತ್ನ ಮಾಡಿದ್ದರೂ ಅರ್ದದಲ್ಲೇ ಕೈ ಬಿಟ್ಟಿದ್ದರು. ಭಾರತದಲ್ಲಿ ಮೊದಲ ೧೦೦ ಸಿಸಿ ಫೋರ್ ಸ್ಟ್ರೋಕ್ ಬೈಕ್ ‘ಹೀರೋ ಹೋಂಡ’ ಬಂದದ್ದೇ ೮೦ರ ದಶಕದಲ್ಲಿ..

ಇನ್ನು ಅವರು ಸೈಕಾಲಜಿಯ ಬಗ್ಗೆ, ಫಿಲಾಸೊಪಿಯ ಬಗ್ಗೆ ತಮ್ಮದೇ ಅನುಭವದ ಹಿನ್ನೆಲೆಯಲ್ಲಿ ಮಾತಾಡುತ್ತಿದ್ದರು. ಅದು ನನಗೆ ಲಕ್ಷ್ಮೀಶ ತೋಳ್ಪಾಡಿಯವರು ಮಾತಾಡುವುದಕ್ಕೆ ಕನೆಕ್ಟ್ ಆಗುತ್ತಿತ್ತು. ನನ್ನ ಪರಿಚಯದಿಂದ ಒಂದು ಸಾರಿ ನಮ್ಮ ಮನೆಗೆ ಬಂದವರು ನನ್ನ ತೀರ್ಥರೂಪರನ್ನು ಕಂಡು, ತುಂಬಾ ಮೆಚ್ಚಿಕೊಂಡಿದ್ದರು ಅವರಲ್ಲಿ ಮಾತಾಡಲು ಆಗಾಗ ಬರುತ್ತಿದ್ದರು. ಟೀಪಾಯಿ ಮೇಲಿದ್ದ ಚಿಕ್ಕ ವಸ್ತು ಒಂದನ್ನು ಕೈಯಿಂದ ಮುಚ್ಚಿ, ಈಗ ಅದು ನಿಜವಾಗಿ ಆಲ್ಲಿ ಇದೆಯೇ.?? ನಾನು ಕೈ ಮುಚ್ಚಿದಾಗ ಅಲ್ಲಿಂದ ನಿಜವಾಗಿ ಮಾಯವಾಗಿ ಮತ್ತೆ ಕೈ ತೆಗೆದಾಗ ಅಲ್ಲಿ ಪ್ರತ್ಯಕ್ಷವಾಗಿರಲೂಬಹುದಲ್ಲ..!! ಹೀಗೆಲ್ಲಾ ಮಾತಾಡುತ್ತಿದ್ದರು. ಅವರಿಬ್ಬರ ಮಾತುಕತೆಯ ಅದ್ಯಾತ್ಮ ನನಗೆ ಜೀರ್ಣವಾಗುತ್ತಿರಲಿಲ್ಲ.

‘ನಿನ್ನ ತೀರ್ಥರೂಪರನ್ನು ಅವರ ಕೊನೆಯದಿನಗಳಲ್ಲಾದರೂ ಪರಿಚಯವಾದದ್ದು ತನ್ನ ಭಾಗ್ಯ…’ ಎಂದಿದ್ದರು. ಅವರ ಅರ್ಥ ಕೇಳಿದವರಲ್ಲ, ಅವರ ಪುಸ್ತಕಗಳನ್ನು ಓದಿದವರಲ್ಲ, ಅವರ ಬಗ್ಗೆ ಇತರರು ಮಾತಾಡುವುದನ್ನು ಕೇಳಿದವರೂ ಅಲ್ಲ. ಮತ್ತೆ ಯಾಕೆ ಹಾಗೆಂದಿದ್ದರು ಅಂತ ನನಗೆ ಆಗ ಅರ್ಥ ಆಗಿರಲಿಲ್ಲ. ನನ್ನಲ್ಲೇ ಹೇಳುತ್ತಿದ್ದಮಾತು… ‘ಈಗ ಕೇಸರಿಬಾತು ತಿಂಡಿ ನಮಗೆ ರುಚಿ ಆಯ್ತು. ಮತ್ತೊಮ್ಮೆ ಅದನ್ನು ತಿನ್ನದೇ… ಅದರ ನೆನಪು ಮಾಡಿಕೊಂಡರೆ.. ಕೇಸರಿ ಬಾತು ತಿಂದ ಹಾಗೇ ಆಗಲಿಕ್ಕಿಲ್ವೋ..?’ ಇದು ಸ್ವಲ್ಪ ಮಟ್ಟಿಗೆ ನನಗೆ ಅರ್ಥವಾಗಿತ್ತು. ‘ಅನುಭವವು ಸವಿಯಲ್ಲ ಅದರ ನೆನಪೇ ಸವಿಯು’ ಎನ್ನುವ ಕಡೆಂಗೋಡ್ಲು ಶಂಕರ ಭಟ್ಟರ ಕವನ, ‘ನೆನಪಾಗಿಯೋ ಏನೋ…!! ‘ಈಗ ಮನುಷ್ಯರ ದೇಹ ಚಿಕ್ಕ ಚಿಕ್ಕ ಕಣಗಳಿಂದ ಕೂಡಿದ್ದು, ಅದನ್ನು ವಿಭಜಿಸಿ, ಕೂಡಿಸುವ ಯಂತ್ರವೊಂದು ಇದ್ದರೆ… ಇಲ್ಲಿ ವಿಭಜಿಸಿ, ಅಮೇರಿಕಾದಲ್ಲೋ, ಇಂಗ್ಲೇಂಡಿನಲ್ಲೋ ಪುನಃ ಜೋಡಿಸಿದರೆ… ಇಲ್ಲಿ ಮಾಯವಾಗಿ ಮರುಕ್ಷಣದಲ್ಲಿ ಅಲ್ಲಿ ಪ್ರತ್ಯಕ್ಷವಾಗಬಹುದಲ್ಲ…!! ಈ ಮನೋವೇಗ ಅಂತ ಹೇಳ್ತಾ ಇದ್ದದ್ದು ಹೀಗೇ ಆಗಿರ್ಲಿಕ್ಕಿಲ್ವೋ…? ‘ಇದೆಲ್ಲಾ ಅವರ ಜಿಜ್ಞಾಸೆಗಳು. ಪುಸ್ತಕ ಓದುವ ಹವ್ಯಾಸವೂ ಅವರಿಗೆ ಇದ್ದಹಾಗೆ ನನಗೆ ನೆನಪಿಲ್ಲ. ರೇಡಿಯೊ ಟಿ.ವಿ.ಗಳೂ ದೂರ. ಉಪನ್ಯಾಸ ಕೇಳುವುದು, ಯಕ್ಷಗಾನ ನಾಟಕ, ಸಿನೀಮಾ ಇತ್ಯಾದಿ ನೋಡುವುದನ್ನು ನಿಲ್ಲಿಸಿ ಎಷ್ಟೋ ವರ್ಷ ಆಗಿತ್ತು. ಆದರೂ ಇಂತಹಾ ಜ್ಞಾನ ಎಲ್ಲಿಂದ, ಹೇಗೆ ಬಂತು…? ಪ್ರಾಯಷಃ ‘ಹೊಳಹು’ ಎಂದರೆ ಇದೇ ಆಗಿರಬಹುದು.

ಇಷ್ಟೆಲ್ಲಾ ಇದ್ದರೂ ನಾಕು ಜನಕ್ಕೆ ತನ್ನ ವಿಷಯ ಗೊತ್ತಾಗಬೇಕು ಎನ್ನುವ ಚಪಲವೇ ಅವರಲ್ಲಿರಲಿಲ್ಲ. ಆದರೆ ತಮಗೆ ಹೊಳೆದದ್ದನ್ನು, ತಾವು ಕಂಡು ಹಿಡಿದದ್ದನ್ನು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುವುದು ಅವರಿಗೆ ಇಷ್ಟ. ಅದರಲ್ಲೊಂದು ಮುಗ್ಧತೆ ಇತ್ತು. ಸಂತೋಷ ಇತ್ತು. ತಾನು ಅನುಭವಿಸಿದ ಕಷ್ಟ ನೋವುಗಳನ್ನು ನುಂಗಿಕೊಂಡು, ಸಮಚಿತ್ತದಿಂದ ವ್ಯವಹರಿಸುತ್ತಿದ್ದವರು ಅವರು. ಇನ್ನೂ ಇಂತಹಾ ಅನೇಕ ಜ್ಞಾನ ಸಂಪತ್ತು ಅವರ ಬಳಿ ಇತ್ತು. ಹೊರ ಪ್ರಪಂಚಕ್ಕೆ ಗೊತ್ತಾಗದೇ ಹೋಯಿತು.

ಅವರು ಇನ್ನಿಲ್ಲ ಅಂದರೆ ನಂಬುವುದು ಹೇಗೇ…? ನಂಬದಿರುವುದು ಹೇಗೇ…?

‍ಲೇಖಕರು Avadhi

May 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: