ನೀರಾ ನೀತಿಯ ರೂವಾರಿ ಇನ್ನಿಲ್ಲ…

ಅಣೇಕಟ್ಟೆ ವಿಶ್ವನಾಥ್

ಸುಮಾರು 2013ರ ಸುಮಾರಿಗೆ ಒಂದು ಫೋನ್ ಬಂತು.

‘ಅಣೇಕಟ್ಟೆ ವಿಶ್ವನಾಥ್ ರವರೆ ನಾನು ಕೃಷ್ಣ ಅಂತ ಮಾತಾಡೋದು’

‘ಹೌದು ಸರ್’.

‘ನೀವು ಈ ಸಿರಿಸಮೃದ್ಧಿಯೊಳಗೆ ನೀರಾ ಬಗ್ಗೆ ಲೇಖನ ಬರೆದಿದ್ದೀರಲ್ಲ ಅದರ ಬಗ್ಗೆ ಮಾತಾಡೋಕೆ ಫೋನ್ ಮಾಡಿದೆ’.

-ಈ ರೀತಿ ಲೇಖನಗಳ ಓದಿ ಅನೇಕರು ನನಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಇದೇ ತರ ಇದೂ ಒಂದು ಕಾಲ್ ಎಂದು ಮಾತಿಗೆ ಶುರುಮಾಡಿದೆ. ಮಾತನಾಡುತ್ತಿದ್ದ ಆ ವ್ಯಕ್ತಿ ನಾನು ಲೇಖನದಲ್ಲಿ ಬರೆಯದೆ ಇರುವ ಅನೇಕ ವಿಚಾರಗಳ ಕುರಿತು ಚರ್ಚಿಸಿದರು. ಅಷ್ಟೆ ಅಲ್ಲ ಅವರು ಅಬಕಾರಿ ಕಾಯಿದೆ ಕುರಿತು ವಿಚಾರಗಳನ್ನು ನನ್ನಿಂದ ಕೇಳಿ ಪಡೆದರು. ನನಗೆ ಆಶ್ಚರ್ಯವಾಯಿತು.

ಸರಿಯಾಗಿ 26 ನಿಮಿಷ ಹೀಗೆ ಚರ್ಚಿಸಿದ ಬಳಿಕ ನಾನು ಕೇಳಿದೆ ‘ಸರ್ ನೀವೇನು ಮಾಡಿಕೊಂಡಿದಿರಾ ಸರ್?’ ಎಂದೆನು. ‘ನಾನು ಬಿಡ್ರಿ, ಏನು ಮಾಡ್ತಿಲ್ಲ. ಆವಾಗ 2004-08ರತನಕ ಸ್ಪೀಕರ್ ಆಗಿದ್ದೆ’ ಎಂದರು. ಅಂತಹ ಸರಳತೆ ನಾನು ಮತ್ತೊಬ್ಬರಲ್ಲಿ ನೋಡಿರಲಿಲ್ಲ. ಅನೇಕ ಮಾಜಿಗಳು ಯಾವುದಾದರೂ ಇಲಾಖೆಗೆ ಫೋನ್ ಮಾಡಬೇಕೆಂದರೆ ಮೊದಲು ಪಿಎಗಳಿಂದ ಮಾತನಾಡಿಸುವುದು ನಾನು ಕಂಡಿದ್ದೆನು. ಆಗಾಗ ಫೋನ್ ಮಾಡಿ ನೀರಾ ಬಗ್ಗೆ ಮಾತನಾಡುತ್ತಿದ್ದರು.

ಕೃಷ್ಣರವರು ಹಾಗೂ ಆಗಿನ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಆಪ್ತರಾಗಿದ್ದ ಕಾರಣ ನೀರಾ ನೀತಿ ಕರ್ನಾಟಕದಲ್ಲಿ ಅನುಷ್ಠಾನ ಮಾಡಿಸಲು ಇವರೇ ಸೂಕ್ತ ವ್ಯಕ್ತಿ ಎಂದು ನನಗೆ ತಿಳಿದು ನಾನು ಅವರ ಹಿಂದೆ ಬಿದ್ದೆ. ಅಷ್ಟು ಹೊತ್ತಿಗೆ ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಟಿಕೆ ಜೋಸ್ ಅವರು ಕೇರಳ ಸರ್ಕಾರವನ್ನು ಒಪ್ಪಿಸಿ ಸಿಹಿನೀರಾ ನೀತಿಯನ್ನು ಜಾರಿಗೊಳಿಸಿದ್ದರು ಹಾಗೂ ಕರ್ನಾಟಕದ ತೋಟಗಾರಿಕಾ ಪ್ರಿನ್ಸಿಪಲ್ ಸೆಕ್ರೆಟರಿಯನ್ನು ಭೇಟಿಯಾಗಿ ಕರ್ನಾಟಕದಲ್ಲಿಯೂ ನೀರಾ ನೀತಿಯನ್ನು ಅನುಷ್ಠಾನಗೊಳಿಸಲು ಮನವರಿಕೆ ಮಾಡಿದ್ದರು. ಆದರೆ ಅಧಿಕಾರಿಗಳು ಇದಕ್ಕೆ ಮನಸ್ಸು ಮಾಡಿರಲಿಲ್ಲ.

ನಾನು ಕೃಷ್ಣರವರು ಫೋನ್ ಮಾಡಿದಾಗಲೆಲ್ಲಾ ಕೇರಳದಲ್ಲಿ ಏನಾಗುತ್ತಿದೆ ಎಂದು ತಿಳಿಸುತ್ತಿದೆ. ಅವರು ಬೆಂಗಳೂರಿಗೆ ಬಂದಾಗ ಒಮ್ಮೆ ಬಂದು ಭೇಟಿಮಾಡಲು ತಿಳಿಸಿದರು. ಎಲ್ ಎಚ್ ನಲ್ಲಿ ಒಮ್ಮೆ ಭೇಟಿಯಾಗಿ ಎಲ್ಲಾ ವಿವರಗಳನ್ನು ನೀಡಿ ಮುಖ್ಯಮಂತ್ರಿಯವರ ಅಪಾಯಿಂಟ್ ಮೆಂಟ್ ಪಡೆದುಕೊಳ್ಳಲು ಕೇಳಿಕೊಂಡೆ. ಅದರಂತೆ ಅವರು ಮಾನ್ಯ ಮುಖ್ಯಮಂತ್ರಿಯವರ ಅಪಾಯಿಂಟ್ ಮೆಂಟ್ ಪಡೆದುಕೊಂಡರು. ಈ ಸಭೆಯಲ್ಲಿ ಅಬಕಾರಿ, ತೋಟಗಾರಿಕಾ ಹಾಗೂ ಹಣಕಾಸು ಇಲಾಖೆಗಳ ಮುಖ್ಯಸ್ಥರು ಇರುವಂತೆ ಸೂಚಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೃಷ್ಣದಲ್ಲಿ ಸಭೆಯನ್ನು ದಿನಾಂಕ 13 ಮಾರ್ಚ್ 2015ರಂದು ಕರೆದರು.

ಈ ಸಭೆಯಲ್ಲಿ ಶ್ರೀ ಸಿದ್ಧರಾಮಯ್ಯನವರು ಕಛೇರಿಯ ಒಳಗೆ ನೀರಾ ವ್ಯವಸ್ಥೆಯನ್ನು ಅಧಿಕಾರಿಗಳ ಮೂಲಕ ಮಾಡಿಸಿದ್ದೆವು. ನೀರಾ ಮತ್ತು ಸೇಂದಿ ಬಗ್ಗೆ ಅಧಿಕಾರಿಗಳಲ್ಲಿ ರಾಜಕಾರಣಿಗಳಲ್ಲಿ ಅನೇಕ ತಪ್ಪುಕಲ್ಪನೆಗಳು ಇದ್ದವು. ಸಿಹಿನೀರಾ ಕುಡಿದಾಗ ಅದು ನೀಡುವ ಅನುಭವ ತಪ್ಪುಕಲ್ಪನೆಗಳನ್ನು ಹೋಗಲಾಡಿಸುತ್ತದೆ ಎಂಬುದು ನನ್ನ ನಂಬಿಕೆಯಾಗಿತ್ತು. ಸಭೆಯಲ್ಲಿ ಕೃಷ್ಣರವರು ವಿವರಿಸಲು ನನಗೆ ಸೂಚಿಸಿದರು. ನಾನು ಸುಮಾರು 15 ನಿಮಿಷ ಅವರಿಗೆ ವಿವರಿಸಿದೆ. ಅಷ್ಟುಹೊತ್ತಿಗೆ ಎಲ್ಲರೂ ನೀರಾ ಸೇವಿಸಿದ್ದರು.

ಶ್ರೀ ಸಿದ್ಧರಾಮಯ್ಯನವರು ‘ಇವರು ಹೇಳುತ್ತಿರುವುದೆಲ್ಲಾ ಹೌದಾ? ನಿಮ್ಮ ಅಭಿಪ್ರಾಯವೇನು?’ ಎಂದು ಅಧಿಕಾರಿಗಳನ್ನು ಕೇಳಿದರು. ಅಧಿಕಾರಿಗಳು ಸಹಮತ ನೀಡಿದ್ದರಿಂದ ಅದೇ ತಿಂಗಳು ಬಜೆಟ್ ನಲ್ಲಿ ನೀರಾ ನೀತಿ ರೂಪಿಸುವುದಾಗಿ ಘೋಷಿಸಿದರು. ನಂತರ ಇದು ಬಜೆಟ್ ಘೋಷಣೆಯಾಗಿ ಮಾತ್ರ ಉಳಿಯಿತು. ಇದಾದ ನಂತರ ಬೆಳಗಾಂ ಅಧಿವೇಶನದಲ್ಲಿ ನಾನು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ವಿವರಿಸಿದೆ. ತಿಪಟೂರಿಗೆ ಬಂದಾಗಲೂ ಅಭಿನಂದಿಸಿ ಅವರ ಗಮನಕ್ಕೆ ತಂದೆನು.

ಇದಾದ ನಂತರ ಸರ್ಕಾರದ ಮೇಲೆ ಪ್ರಭಾವ ಬೀರಲು ತುಮಕೂರು ವಿಶ್ವವಿದ್ಯಾಲಯದ ಜೊತೆಗೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಕಾಸರಗೋಡಿನ ಸಹಭಾಗಿತ್ವದಲ್ಲಿ ಕೃಷ್ಣರವರ ಮುಂದಾಳತ್ವದಲ್ಲಿ ನಾನು ರಾಷ್ಟ್ರ ಮಟ್ಟದ ಸಿಹಿನೀರಾ ನೀತಿ ಕುರಿತ ವಿಚಾರ ಸಂಕಿರಣ ಹಮ್ಮಿಕೊಂಡೆನು. ಇದಕ್ಕೆ ಉದ್ಘಾಟನೆಗೆ ಅಂದಿನ ಕಾನೂನು ಮಂತ್ರಿಯಾಗಿದ್ದ ಜಯಚಂದ್ರರವನ್ನು ಕರೆದಿದ್ದೆವು.

ಕಾರ್ಯಕ್ರಮ ಉದ್ಘಾಟನೆಯೇ ಜಯಚಂದರರವರಿಗೆ ನೀರಾ ಕುಡಿಸುವುದರಿಂದ ಆಗಿತ್ತು. ನೀರಾ ಕುಡಿಸಲು ಸಿಪಿಸಿಆರ್ ಐ ನಿರ್ದೇಶಕರಾದ ಚೌಡಪ್ಪನವರು ಒಪ್ಪಿದ್ದರು. ಈ ವಿಚಾರ ಅವರಿಗೆ ಗೊತ್ತಿರಲಿಲ್ಲ. ಮಾಧ್ಯಮದವರೆದುರು ನೀರಾ ಕುಡಿದು ಉದ್ಘಾಟಿಸಬೇಕೆಂದು ತಿಳಿಸಿದಾಗ ಜಯಚಂದ್ರರವರು ತಬ್ಬಿಬ್ಬಾದರು. ರೈತರೆಲ್ಲಾ ಕುಡಿಯಬೇಕೆಂದು ಒತ್ತಾಯಿಸಿದಾಗ ಕುಡಿದರು. ಉದ್ಘಾಟನಾ ಭಾಷಣದಲ್ಲಿ ಜಯಚಂದ್ರ ‘ನಾನು ಹೆಚ್ಚು ಮಾತನಾಡಿದರೆ ಕುಡಿದು ಏನೇನೋ ಮಾತಾಡಿದಾರೆ ಅಂತಾರೆ, ಇಲ್ಲಿಂದ ಹೋದ ಬಳಿಕ ನೀರಾ ನೀತಿ ಕರಡಿಗೆ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಪಡೆಯುತ್ತೇನೆ.’ ಎಂದು ತಿಳಿಸಿದರು.

ಕೃಷ್ಣರವರು ಈ ಸಂದರ್ಭದಲ್ಲಿ ಜಯಚಂದ್ರರವರಿಗೆ ಇದನ್ನು ಆದ್ಯತೆ ಮೇಲೆ ಪರಿಗಣಿಸಲು ಒತ್ತಾಯಿಸಿದರು. ಕ್ಯಾಬಿನೆಟ್ ಒಪ್ಪಿಗೆ ದೊರಕಿದರೂ ವಿಧಾನಸಭೆಯಲ್ಲಿ ಮಂಡನೆಯಾಗಿರಲಿಲ್ಲ. ಈ ಸಂದರ್ಭದಲ್ಲಿ ಮತ್ತೊಮ್ಮೆ ಸಿದ್ಧರಾಮಯ್ಯನವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದೆವು. ಕೃಷ್ಣ ಮತ್ತು ನಾನು ಖುದ್ಧಾಗಿ ಭೇಟಿಯಾಗಿ ನೀರಾ ನೀತಿಯ ಕರಡು ಬಾಕಿ ಉಳಿದಿರುವುದನ್ನು ಗಮನಕ್ಕೆ ತಂದೆವು. ಕೃಷ್ಣರವರು ಯಾವುದೇ ಕೆಲಸಕ್ಕೆ ಸಿದ್ಧರಾಮಯ್ಯನವರ ಹತ್ತಿರ ಹೋದರೂ ನೀರಾ ನೀತಿ ಕರಡಿನ ವಿಚಾರ ಮಾತನಾಡಿ ಬರುತ್ತಿದ್ದರು. ಏನೇನೊ ಒತ್ತಡಗಳಿಂದ ಸಿದ್ಧರಾಮಯ್ಯನವರು ಇದನ್ನು ಗಮನಕ್ಕೆ ಹಾಕಿಕೊಂಡಿರಲಿಲ್ಲವೇನೊ.

ಕೃಷ್ಣರವರು ಒಮ್ಮೆ ಅವರನ್ನು ದೂರಕ್ಕೆ ಕರೆದು ‘ಈ ನೀರಾದು ಒಂದಿಷ್ಟು ಗಮನಕ್ಕೆ ಹಾಕ್ಕೊಳಯ್ಯ ಇಲ್ದಿದ್ರೆ ಕೆಟ್ಟ ಹೆಸರು ಬರುತ್ತದೆ’ ಎಂದು ಹೇಳಿದರು. ಅಲ್ಲಿಂದ ಮುಂದೆ ಮುಖ್ಯಮಂತ್ರಿಯವರೆ ಮುತುವರ್ಜಿ ವಹಿಸಿ ನೀರಾ ನೀತಿ ಜಾರಿಗೊಳಿಸಿದರು. ಭಾರತ ದೇಶದಲ್ಲಿಯೆ ನೀರಾ ನೀತಿಯನ್ನು ಜಾರಿಗೊಳಿಸಿದ ಎರಡನೇ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ನಂತರ ನಿರಂತರ ನೀರಾ ಬೆಳವಣಿಗೆ ಏನಾಯ್ತು ಎಂದು ವಾರಕ್ಕೊಮ್ಮೆ ನನಗೆ ಫೋನ್ ಮಾಡಿ ವಿಚಾರಿಸುತ್ತಿದ್ದರು. ನಾನು ಬರುತ್ತೀನಿ ಒಮ್ಮೆ ಕೇರಳಕ್ಕೆ ಕರೆದುಕೊಂಡು ಹೋಗು ಎಂದು ಪದೇ ಪದೇ ಹೇಳುತ್ತಿದ್ದರು. ಯಾವತ್ತು ಹೋಗಬೇಕು ಅಂತ ಡೇಟ್ ಫಿಕ್ಸ್ ಮಾಡಿ ಹೇಳಿ ಸರ್, ನಾನು ಕರೆದುಕೊಂಡು ಹೋಗಿ ತೋರಿಸಿಕೊಂಡು ಬರ್ತಿನಿ ಎನ್ನುತ್ತಿದ್ದೆ. ಈ ಆರೋಗ್ಯ ಸ್ವಲ್ಪ ಸರಿಹೋಗಲಿ ಕಣಯ್ಯ ಎನ್ನುತ್ತಿದ್ದರು. ಅವರ ಸರಳತೆ, ಬದ್ಧತೆ, ಉತ್ಸಾಹ ನನಗೆ ಚೈತನ್ಯ ನೀಡುತ್ತಿತ್ತು.

ನನ್ನ ವೈಯಕ್ತಿಕ ಕಾರಣದಿಂದ ನಾನು ನೀರಾ ನೀತಿಯ ನಂತರ ಅದನ್ನು ರೈತರ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿಲ್ಲ. ಕೃಷ್ಣರವನ್ನು ಇಡೀ ರಾಜ್ಯದ ತೆಂಗು ಬೆಳೆಗಾರರು ಎಂದೆಂದಿಗೂ ನೆನಪಿನಲ್ಲಿಟ್ಟಿಕೊಳ್ಳಬೇಕು. ಈ ನೀತಿಯ ಹಿಂದೆ ಅವರ ಅಪಾರ ಶ್ರಮ ಇದೆ. ಕೃಷ್ಣರವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ನೆನಪುಗಳು. ಅವರು ಬಿಟ್ಟುಹೋದ ಹೆಜ್ಜೆಗುರುತು ನಮ್ಮೊಂದಿಗಿವೆ. ಹೋಗಿ ಬನ್ನಿ ಸರ್. ನಮನಗಳು.

‍ಲೇಖಕರು Avadhi

May 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: