ನೇತ್ರಣ್ಣ…

ವಿನೋದಕುಮಾರ್ ಬಿ ನಾಯ್ಕ್

ನಾವೆಲ್ಲ ಅವರನ್ನು‌ ಕರೆಯುತ್ತಿದ್ದುದೇ ಹಾಗೆ. ಪಾದರಸಕ್ಕಿಂತಲೂ ಚುರುಕು. ಸದಾ ನಗುಮುಖ. ಕ್ಯಾಮೆರಾ ಕೈಗೆ ಬಂದಾಕ್ಷಣ ಸುತ್ತಲಿನ ಜಗತ್ತನ್ನೇ ಮರೆತುಬಿಡುತ್ತಿದ್ದ ಕಾಯಕ ಸಂತ. ನಾನು ಮೈಸೂರಿನಲ್ಲೇ ಓದಿ‌ ಬೆಳೆದಿದ್ದ ಕಾರಣ ‘ನೇತ್ರರಾಜು’ ಎನ್ನುವ ಹೆಸರು ಪರಿಚಿತವಾಗಿಯೇ ಇತ್ತು. ಆದರೆ, ಅವರನ್ನು ಭೇಟಿಯಾಗಿದ್ದು ಮಾತ್ರ ‘ಆಂದೋಲನ’ ದಿನಪತ್ರಿಕೆಯ ಕಚೇರಿಯಲ್ಲಿ. ನೇತ್ರಣ್ಣ ಅದಾಗಲೇ ಬಹಳ ಫೇಮಸ್ ಆಗಿದ್ರು.

ವೀರಪ್ಪನ್ ಕಾರ್ಯಾಚರಣೆ ಕುರಿತಂತೆ ಯಾರಿಗೂ ಸಿಗದ ಅಪರೂಪದ ಫೋಟೋಗಳನ್ನು ತೆಗೆದಿದ್ದರು. ಆಂದೋಲನದಲ್ಲಿ ಕೆಲಸ ಮಾಡುತ್ತಿದ್ದಾಗ ಬರೆದ ನನ್ನ ಅನೇಕ ವರದಿಗಳಿಗೆ, ಲೇಖನಗಳಿಗೆ ನೇತ್ರಣ್ಣನ ಫೋಟೋಗಳು ಜೀವ ತುಂಬುತ್ತಿದ್ದವು. ನನ್ನನ್ನು ತಮ್ಮನಂತೇ ಸದಾ ಬಾಚಿ ತಬ್ಬಿಯೇ ಮಾತನಾಡಿಸುತ್ತಿದ್ದ ನೇತ್ರಣ್ಣ ಅಸೈನಮೆಂಟುಗಳಿಗೆ ಅನೇಕ ಬಾರಿ ತಮ್ಮ ಬೈಕಿನಲ್ಲೇ ಕೂರಿಸಿಕೊಂಡು ಹೋಗಿದ್ದಾರೆ. ಅವರ ಜತೆ ಕುಡಿದ ಚಹಾ ಲೆಕ್ಕವಿಲ್ಲ.

ನಾನು ಕಾಡಿನ‌ ಬಗ್ಗೆ ಅತಿ ಹೆಚ್ಚು ಬರೆಯುತ್ತಿದ್ದೆ. ಆಗೆಲ್ಲ ‘ವಿನೋದ ಕಾಡಿನ ಬಗ್ಗೆ ಬರೆಯೋರೇ ಕಡಿಮೆ ಕಣೋ. ನೀನು ದಿನಾಲೂ‌ ಬರಿ. ಹೆಚ್ಚೆಚ್ಚು ಬರೀಬೇಕು. ಕಾಡಿಗೆ ವರದಿಗೆ ಹೋದಾಗ ಫೋಟೋ ತೆಗೆಸಬೇಕು ಅಂದ್ರೆ ನನಗೆ ಒಂದು ದಿನ ಮುಂಚಿತವಾಗಿಯೇ ಹೇಳು. ನನಗೂ ಕಾಡು ಇಷ್ಟ. ನಾನು ಬೈಕ್ ತಗೊಂಡು ಬರುವೆ’ ಎನ್ನುತ್ತಿದ್ದರು. ಕಾಡಿನ ಸುತ್ತಾಟವನ್ನು ಬಹಳ ಇಷ್ಟಪಡುತ್ತಿದ್ದರು. ಮೈಸೂರಿನ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಹೀಗೆ ಎಲ್ಲ ಐತಿಹಾಸಿಕ ಕ್ಷಣಗಳ ಸೆರೆಹಿಡಿದುಕೊಟ್ಟ ಧೀಮಂತ.

ಸುದ್ದಿಗೆ ಬೇಕಾದ ಫೋಟೋಗಳಂದರೆ ಹೇಗಿರಬೇಕು ಎಂದು ಚಿತ್ರ ತೆಗೆದು ತೋರಿಸಿದ ಧೀರ. ಮೈಸೂರಿನ ಸಾಕ್ಷಿ ಪ್ರಜ್ಞೆಯಂತಿದ್ದ ನೇತ್ರಣ್ಣ ಪ್ರತಿದಿನ ಇಡೀ ಮೈಸೂರನ್ನು ಒಂದು ರೌಂಡ್ ಕಡ್ಡಾಯವಾಗಿ ಹಾಕುತ್ತಿದ್ದರು. ಆದ್ದರಿಂದಲೇ ಯಾರಿಗೂ ಸಿಗದ, ಯಾರೂ ನೋಡದ ದೃಶ್ಯಗಳು ಇವರಿಗೆ ಸಿಗುತ್ತಿದ್ದವು. ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ಮೈಸೂರಿನಲ್ಲಿ‌ ನೇತ್ರಣ್ಣ ಮಾಡಿದಷ್ಡು ಪ್ರಯೋಗಗಳನ್ನ ಯಾರೂ ಮಾಡಿಲ್ಲ, ಮಾಡಲಿಲ್ಲ. ಮಾಧ್ಯಮರಂಗಕ್ಕೆ ಬರುವ ಹೊಸಬರನ್ನು‌ ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಅಜಾತ ಶತ್ರುವಾಗಿದ್ದರು.

ಒಂದು‌ ದಿನ ಅದ್ಯಾವುದೋ‌‌ ಕಾರಣಕ್ಕೆ ಅರಣ್ಯ ಇಲಾಖೆಯ ವಸತಿಗೃಹದಲ್ಲಿದ್ದ ನಮ್ಮ ಮನೆಯ ಎದುರಿಗೆ ಇದ್ದ ಮರವನ್ನ ನಮ್ಮ ತಂದೆ ಬೆಳ್ಳಂಬೆಳಗ್ಗೆ ಕಟ್ ಮಾಡಿಸುತ್ತಿದ್ದರು. ನಾನು ರಾತ್ರಿ ಪಾಳಿ ಮುಗಿಸಿ‌ಬಂದು ಮಲಗಿದ್ದೆ. ಮರ ಕಡಿವ ಸದ್ದಿಗೆ ಎಚ್ಚರವಾಗಿ ಎದ್ದು ಬಂದು‌ ನೋಡಿದರೆ ಆಗಲೇ ನಾಲ್ಕೈದು ಬೃಹತ್ ಕೊಂಬೆಗಳನ್ನು ಕಡಿದುಬಿಟ್ಟಿದ್ದರು. ಒಂದೆಡೆ ನಮ್ಮಪ್ಪನ‌ ಮೇಲೆ ಕೋಪ, ಮತ್ತೊಂದು‌ ಕಡೆ ಆ ಮರ ಉಳಿಸಬೇಕೆನ್ನು‌ವ ಧಾವಂತದಿಂದ ನಾನು ತಕ್ಷಣ ನೇತ್ರಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅವರು ನಮ್ಮ ಮನೆ ನೋಡಿದ್ದರಿಂದ ತಕ್ಷಣ ಬರುವುದಾಗಿ ಹೇಳಿ ಹತ್ತು‌ ನಿಮಿಷದಲ್ಲಿ‌ ಬಂದೇ ಬಿಟ್ಟರು. ಅಷ್ಟೇ ಅಲ್ಲ ಜತೆಗೆ ನಮ್ಮ ಒಂದಷ್ಟು‌ ಪತ್ರಕರ್ತ ಮಿತ್ರರನ್ನೂ‌ ಜತೆಗೆ ಕರೆತಂದಿದ್ದರು.‌ ಎಲ್ಲ‌ ಸೇರಿ ಪ್ರತಿಭಟನೆ ಮಾಡಿ ಮರ ಕಡಿತ‌ ನಿಲ್ಲಿಸಿದೆವು.

ನೇತ್ರಣ್ಣ ಅದನ್ನೂ ಸುದ್ದಿ‌ ಮಾಡಿಸಿದರು. ಅವರಿಗೆ ಯಾರಲ್ಲೂ ಕೆಟ್ಟದು ಕಾಣುತ್ತಿರಲಿಲ್ಲ. ಯಾರ ಬಗ್ಗೆಯೂ ಕೆಟ್ಟದನ್ನು ಮಾತನಾಡಿದ್ದನ್ನು ನಾನು ಕೇಳಿಲ್ಲ. ಪತ್ರಕರ್ತರಲ್ಲಿ ಇದು ಅತ್ಯಂತ ಅಪರೂಪದಲ್ಲಿ ಅಪರೂಪವಾದ ವ್ಯಕ್ತಿತ್ವ. ನೇತ್ರಣ್ಣನ ಬಗ್ಗೆ ನನಗೆ ಬಹಳ ಪ್ರೀತಿ. ಆದ್ದರಿಂದಲೇ ನನ್ನ ಮದುವೆಯ ಫೋಟೋಗಳನ್ನೂ ಅವರಿಂದಲೇ ತೆಗೆಸಿದ್ದೆ. ಅವರಿಗೆ ತಾವು ತೆಗೆದ ಫೋಟೋ ತೃಪ್ತಿಯಾಗದಿದ್ದರೆ ಒಂದೇ ಒಂದು ಒಳ್ಳೆಯ ಫೋಟೋಗೋಸ್ಕರ ಅನೇಕ ರೀಲುಗಳನ್ನೇ ಖಾಲಿ ಮಾಡುತ್ತಿದ್ದರು.

ಡಿಜಿಟಲ್ ಕ್ಯಾಮೆರಾ ಜಮಾನಾ ಬಂದ ಮೇಲೆ ಮೈಸೂರಿನ ಪತ್ರಕರ್ತರೆಲ್ಲ ‘ನೇತ್ರಣ್ಣ, ಇನ್ನು ಎಷ್ಟು ಬೇಕಾದರೂ ಫೋಟೋ ತೆಗಿ’ ಅಂತಾ ತಮಾಷೆ ಮಾಡುತ್ತಿದ್ದರು. ನೇತ್ರಣ್ಣ ತೆಗೆದ ಫೋಟೋಗಳು ಹೇಗೆ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿವೆಯೋ ಅದೇ ರೀತಿ ಅವರೂ ಸಹ ನಮ್ಮ ಮನಸ್ಸಿನಲ್ಲಿ‌ ಸದಾ ನೆಲೆಸಿರುತ್ತಾರೆ.

ನೇತ್ರಣ್ಣಾ…ನಿನಗೊಂದು ಲಾಸ್ಟ್ ಅಪ್ಪುಗೆ..

‍ಲೇಖಕರು Avadhi

May 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: