ನೀವು ಯಾವತ್ತೂ ಒಬ್ಬಂಟಿಯಲ್ಲ..

ಆರ್ ಟಿ ವಿಠ್ಠಲಮೂರ್ತಿ

ನೀವು ಯಾವತ್ತೂ ಒಬ್ಬಂಟಿಯಲ್ಲ
ನಿಮ್ಮ ಸುತ್ತ ಒಂದು ರಕ್ಷಾ ಕವಚವಿರುತ್ತದೆ!

ಅಣ್ಣಾ!ಯಾಕೆ, ಏನು ಅಂತ ಕತೆ ಕೇಳಬೇಡ. ತಿರುಗಿ ನೋಡದೆ ಓಡು ಅಂತ ನನ್ನ ಕೈ ಹಿಡಿದುಕೊಂಡಿದ್ದೇ ನೇತ್ರ ರಾಜು ಓಡತೊಡಗಿದರು.
ಅವರು ಕೈ ಹಿಡಿದುಕೊಂಡು ಓಡತೊಡಗಿದ್ದೇ ತಡ, ನಾನು ಯೋಚಿಸದೆ ಬೆನ್ ಜಾನ್ಸನ್ ತರ ಓಡತೊಡಗಿದೆ. ಹೀಗೆ ಇಬ್ಬರೂ ಓಡಿ ಓಡಿ ಸುಸ್ತಾಗಿ ಬಂದು ಒಂದು ಕಡೆ ನಿಂತು ತಿರುಗಿ ನೋಡುತ್ತೇವೆ. ಒಂದು ಹೆಣ್ಣಾನೆ ತನ್ನ ಮರಿಯ ಜತೆ ನಿಂತಿದೆ. ಇನ್ನೂ ಎತ್ತಿದ ಅದರ ಸೊಂಡಿಲು ಹಾಗೇ ಇದೆ.
ಅದನ್ನು ನೋಡಿದ್ದೇ ಗಾಬರಿಯಾಗಿ ನಾನು, ಏನಣ್ಣಾ, ಈ ಆನೆಗಳು ನಮ್ಮ ಹಿಂದೆಯೇ ನಿಂತಿವೆ ಅನ್ನುವುದು ಶುರುವಿನಲ್ಲೇ ನಮಗೆ ಗೊತ್ತಾಗಲಿಲ್ಲವಲ್ಲ?ಎಂದೆ. ಅದಕ್ಕೆ ನೇತ್ರ ರಾಜು: ಮನುಷ್ಯನೆತ್ತರ ಹುಲ್ಲು ಬೆಳೆದು ನಿಂತಿದೆ.ಅದಕ್ಕಾಗಿ ಅವು ಬಂದಿದ್ದೇ ಗೊತ್ತಾಗಲಿಲ್ಲ ಎಂದು ನಿಟ್ಟುಸಿರು ಬಿಟ್ಟರು.

ಅದೆಲ್ಲ ಸರಿ, ಆದರೆ ಮಗುವಿನ ಜತೆ ಇರುವ ತಾಯಿ ಆನೆ ಅತ್ಯಂತ ಅಪಾಯಕಾರಿ.ಆದರೂ ಅದೇಕೆ ನಮ್ಮನ್ನು ಅಟ್ಟಿಸಿಕೊಂಡು ಬರಲಿಲ್ಲ?ಹಾಗೇನಾದರೂ ಅದು ಅಟ್ಟಿಸಿಕೊಂಡು ಬಂದು ಬಡಿದಿದ್ದರೆ ಇಬ್ಬರೂ ಓಂ ನಮಃ ಶಿವಾಯ ಎಂದು ಬಿಡುತ್ತಿದ್ದೆವಲ್ಲ ಅಣ್ಣಾ ಎಂದೆ.
ಹೀಗೆ ನಾವು ಒಬ್ಬರನ್ನೊಬ್ಬರು ಪರಸ್ಪರ ಅಣ್ಣಾ ಅಂತ ಸಂಭೋಧಿಸಿಕೊಳ್ಳುವುದು ಮಾಮೂಲಾಗಿತ್ತು. ಅಂದ ಹಾಗೆ ಅವತ್ತು ಮೈಸೂರಿಗೆ ಹೋಗಿದ್ದ ನಾನು ನೇತ್ರರಾಜು ಅವರ ಆಫೀಸಿಗೆ ಹೋಗಿದ್ದೆ. ಹೋದವನು ಇದ್ದಕ್ಕಿದ್ದಂತೆ, ಅಣ್ಣಾ, ನಿಮಗೇನು ಕೆಲಸ? ಕುಖ್ಯಾತ ನರಹಂತಕ ವೀರಪ್ಪನ್ ಹಲವರನ್ನು ಬಂಡೀಪುರದಿಂದ ಕಿಡ್ ನ್ಯಾಪ್ ಮಾಡಿದ್ದಾನಂತೆ. ಈ ಹಿಂದಿನಿಂದಲೂ ಆತನ ಕಿಡ್ ನ್ಯಾಪ್ ಗಳನ್ನು ನೋಡಿದರೆ ಆತ ತುಂಬ ದೂರ ಹೋಗಿರಲಾರ. ಹೀಗಾಗಿ ಒಂದು ಸಲ ಹೋಗಿ ವೀರಪ್ಪನ್ ನೋಡೋಕೆ ಟ್ರೈ ಕೊಡೋಣ. ಸಿಕ್ಕರೆ ಸುದ್ದಿ. ಇಲ್ಲದಿದ್ದರೆ ಬ್ಯೂಟಿಫುಲ್ ಫಾರೆಸ್ಟು ಎಂದಿದ್ದೆ.

ನೇತ್ರರಾಜು ಅರೆಕ್ಷಣವೂ ಯೋಚಿಸದೆ, ಹೆಗಲಿಗೆ ಕ್ಯಾಮೆರಾ ನೇತು ಹಾಕಿಕೊಂಡು, ತಮ್ಮ ಬೈಕ್ ತೆಗೆದುಕೊಂಡು ಬಂಡೀಪುರಕ್ಕೆ ನನ್ನೊಂದಿಗೆ ಹೊರಟೇ ಬಿಟ್ಟರು. ಅರೇ, ಆಫೀಸು ಅಂದೆ. ಅಯ್ಯೋ, ಅದನ್ನು ಮನೆಯವರು ನೋಡ್ಕೋತಾರೆ. ವೀರಪ್ಪನ್ ನೋಡೋಕೆ, ಫೋಟೋ ತೆಗೆಯೋಕೆ ಒಂದು ಅವಕಾಶ ಸಿಕ್ಕರೆ ಯಾಕೆ ಬಿಡುವುದು? ನಡಿಯಣ್ಣಾ ಎಂದರು ನೇತ್ರರಾಜು.

ಪತ್ರಿಕೋದ್ಯಮದಲ್ಲಿ ರಿಸ್ಕು ತೆಗೆದುಕೊಂಡು ಫೋಟೋ ಹೊಡೆಯುವವರು ಅಪರೂಪ. ನಾನು ನೋಡಿದಂತೆ ಮೈಸೂರಿನ ನೇತ್ರ ರಾಜು, ಬೆಂಗಳೂರಿನ ಕೆ.ಎಂ.ವೀರೇಶ್. ಪತ್ರಕರ್ತರಾದರೂ ನಮ್ಮ ನಡುವೆ ಕಾಡಿನ ರಾಜನಂತೆ ಇರುವ ವಿನಯ್ ಮಾಧವ್. ಹೀಗೆ ಕೆಲ ಮಂದಿ ಗೆಳೆಯರಿದ್ದಾರೆ. ಒಂದು ಅಪರೂಪದ ಫೋಟೋ ಸಿಗುತ್ತದೆ ಪ್ರಾಣವನ್ನೂ ಲೆಕ್ಕಿಸದೆ ನುಗ್ಗುವವರು. ಇವರನ್ನೆಲ್ಲ ನಾನು ತಪಸ್ವಿಗಳು ಅಂತ ಕರೆಯುತ್ತೇನೆ. ಯಾಕೆಂದರೆ ಒಂದು ಫೋಟೋಗಾಗಿ ಯಾವುದೇ ರಿಸ್ಕು ತೆಗೆದುಕೊಳ್ಳಲು ತಯಾರಿರುವ ಜೀವಗಳು ಇವು.

ಆಗ ಪತ್ರಿಕೋದ್ಯಮಕ್ಕೆ ಬಂದು ಕೆಲವೇ ವರ್ಷಗಳಾಗಿದ್ದವಲ್ಲ? ಆಗ ನಮ್ಮದೊಂದು ಗೆಳೆಯರ ಹಿಂಡಿತ್ತು. ಒಬ್ಬರಿಗಿಂತ ಒಬ್ಬರು ಒಳ್ಳೆಯ ಕೆಲಸಗಾರರು. ಮಾನವೀಯ ಗುಣಗಳುಳ್ಳವರು. ನಾನಾಗ ಮೈಸೂರಿನ ಆಂದೋಲನ ಪತ್ರಿಕೆಗೆ ಬೆಂಗಳೂರು ಕರೆಸ್ಪಾಂಡೆಂಟು. ಆಗೆಲ್ಲ ಪ್ರತಿ ತಿಂಗಳು ಸಂಬಳ ತೆಗೆದುಕೊಳ್ಳುವ ನೆಪದಲ್ಲಿ ಮೈಸೂರಿಗೆ ಹೋಗಿ ಬಿಡುತ್ತಿದ್ದೆ.

ಅದ್ಯಾಕ್ರೀ ಬರಕ್ಕೆ ಹೋಗ್ತೀರಿ? ನಾವೇ ಕಳಿಸ್ತೀವಿ ಬಿಡ್ರಪ್ಪ ಅಂತ ನಮ್ಮ ಎಡಿಟರು ರಾಜಶೇಖರ ಕೋಟಿ ಪ್ರೀತಿ ತೋರುತ್ತಿದ್ದರಾದರೂ, ಅಲ್ಲಿದ್ದ ಗೆಳೆಯರ ದಂಡಿನಲ್ಲಿ ಗುಂಡಾಗಿ ಕಾಲ ಕಳೆಯುವುದು ಹೇಗೆ? ಹಾಗಂತಲೇ ಪ್ರತಿ ತಿಂಗಳು ಮೈಸೂರಿಗೆ ಹೋಗಿ ಬಿಡುತ್ತಿದ್ದೆ. ಆಗ ಆಂದೋಲನದಲ್ಲೇ ಇದ್ದ (ಈಗ ವಿಜಯ ಕರ್ನಾಟಕದಲ್ಲಿದ್ದಾರೆ) ನಾಗಮಂಗಲ ಪ್ರಕಾಶ್, ಸಂಯುಕ್ತ ಕರ್ನಾಟಕದಲ್ಲಿದ್ದ ರುದ್ರಣ್ಣ ಹರ್ತಿಕೋಟೆ, ಅದೇ ರೀತಿ ಕೂಡ್ಲಿ ಗುರುರಾಜ್, ಓಂಕಾರ್, ಚಿನ್ನಸ್ವಾಮಿ ವಡ್ಡಗೆರೆ, ಉಮೇಶ್ ಭಟ್, ಪ್ರಭು, ರಾಮಚಂದ್ರ ಗಂಗಾ, ನೇತ್ರ ರಾಜು ಹೀಗೆ ಗೆಳೆಯರದೊಂದು ದಂಡು ಸೇರಿ ಬಿಡುತ್ತಿತ್ತು.

ಸಂಜೆಯಾಯಿತು ಎಂದರೆ ಏನು ಕೇಳುತ್ತೀರಿ ನಮ್ಮ ಸಂತೋಷ ಕೂಟಗಳ ಕತೆ? ಮೈಸೂರು ಮೊದಲೇ ಸಾಂಸ್ಕೃತಿಕ ರಾಜಧಾನಿ. ಹೀಗಾಗಿ ರೈತ ಚಳವಳಿಯಿಂದ ಹಿಡಿದು, ದಲಿತ ಚಳವಳಿಯ ತನಕ,ನಾಟಕಗಳಿಂದ ಹಿಡಿದು ಹೊಸತಾಗಿ ಬಂದ ಚಲನಚಿತ್ರಗಳ ತನಕ ಹತ್ತಾರು ವಿಷಯಗಳ ಬಗ್ಗೆ ಬರೀ ಮಾತು, ಮಾತು, ಮಾತು. ನಿಜ ಹೇಳಬೇಕೆಂದರೆ ಮಾತೆಂಬುದು ಎಷ್ಟೋ ಸಲ ಜ್ಯೋತಿರ್ಲಿಂಗವಾಗಿ ಬಿಡುತ್ತಿತ್ತು.

ಈ ಪೈಕಿ ಕೂಡ್ಲಿ ಗುರುರಾಜ್ ಮತ್ತು ರಾಮಚಂದ್ರ ಗಂಗಾ ಅಮೋಘ ಹಾಡುಗಾರರು. ನಾವು ಮೈಸೂರಿನ ಜಲದರ್ಶಿನಿಯಲ್ಲೋ, ಗೌರ್ಮೆಂಟ್ ಕ್ವಾರ್ಟರ್ಸಿನಲ್ಲೋ, ಮಾನಸ ಗಂಗೋತ್ರಿಯ ಬಯಲಿನಲ್ಲೋ ಇಡೀ ರಾತ್ರಿ ಅವರ ಹಾಡು ಕೇಳುತ್ತಾ, ಮಾತನಾಡುತ್ತಾ ಕಾಲ ಕಳೆದುಬಿಡುತ್ತಿದ್ದೆವು. ಇಂತಹ ಗೋಷ್ಟಿಗಳಿಗೆ ನಮಗೆಲ್ಲ ಹಿರಿಯಣ್ಣನಂತಿದ್ದ ಟೈಮ್ಸ್ ಆಫ್ ಇಂಡಿಯಾದ ಮರಮ್ ಕಲ್ ಆಗಾಗ ಬರುತ್ತಿದ್ದರೂ ಅವರದು ಸ್ಟ್ರಿಕ್ಟು ಲೈಫು. ಉಳಿದಂತೆ ನಮ್ಮದೆಲ್ಲ, ಯೇ ದೋಸತಿ ಹಮ್ ನಹೀ ಚೋಡೆಂಗೆ ಅನ್ನುವ ಶರಂಪರ ಪ್ರೀತಿ.

ಹೀಗೆ ಒಂದು ಸಲ ಮೈಸೂರಿಗೆ ಹೋಗಿದ್ದ ಮರುದಿನವೇ ನೇತ್ರ ರಾಜು ಜತೆ ಬಂಡೀಪುರಕ್ಕೆ ಹೊರಟಿದ್ದೆ. ಅವತ್ತು ಬಂಡೀಪುರದ ಅರಣ್ಯವನ್ನು ಲಿಟರಲಿ, ಇಬ್ಬರೂ ಜಾಲಾಡಿಬಿಟ್ಟಿದ್ದೆವು. ಹೇಗಾದರಾಗಲೀ ಒಂದು ಸಲ ವೀರಪ್ಪನ್ ನನ್ನ ನೋಡಿಬಿಡಬೇಕು. ಒಂದು ಸಂದರ್ಶನ ಮಾಡಿಬಿಡಬೇಕು ಎಂಬುದು ನನ್ನ ಹಪಹಪಿಯಾದರೆ, ಆತನ ಫೋಟೋ ತೆಗೆದು ಕನ್ನಡ ಪತ್ರಿಕೋದ್ಯಮದಲ್ಲಿ ಸಣ್ಣದೊಂದು ಕ್ರಾಂತಿ ಮಾಡಿಬಿಡಬೇಕು ಎಂಬುದು ನೇತ್ರರಾಜು ಬಯಕೆ.

ಹೀಗಾಗಿ ಬೆಟ್ಟ, ಗುಡ್ಡ, ನದಿ, ಕಾಲುವೆ, ಮರ, ಗಿಡ ಅನ್ನದೆ ಕಂಡ ಕಂಡಲ್ಲಿ ತಿರುಗಾಡಿದೆವು. ಸಂಜೆಯ ತನಕ ಅಲೆದರೂ ಊಹೂಂ, ವೀರಪ್ಪನ್ ಪಡೆ ಎಲ್ಲಿದೆ ಎಂಬುದರ ಸುಳಿವೇ ಇಲ್ಲ.ಕೊನೆಗೆ ಬಂಡೀಪುರದಿಂದ ಸ್ವಲ್ಪ ಮುಂದೆ ಹೋದರೆ ಒಂದು ಸೇತುವೆ ಇದೆ. ಅಲ್ಲಿಗೆ ನಾನು, ನೇತ್ರ ರಾಜು ಹೋಗಿ ಕೇಳಿದೆವು. ಅದಕ್ಕವರು ವಿಸ್ಮಯದಿಂದ ನಮ್ಮತ್ತ ನೋಡಿ: ರೀ, ನಿಮಗೇನು ತಲೆಗಿಲೆ ಕೆಟ್ಟಿದೆಯಾ? ಹೋಗಿ ಹೋಗಿ ವೀರಪ್ಪನ್ ನನ್ನು ನಿಮ್ಮ ನೆಂಟ ಎಂಬಂತೆ ಹುಡುಕಿಕೊಂಡು ಬಂದಿದ್ದೀರಲ್ಲ? ಬೇಕೆಂದಾಗಲೆಲ್ಲ ಹೋಗಿ ನೋಡಿಕೊಂಡು ಬರಲು ನೀವೇನು ಅವನ ಚಿಕ್ಕಪ್ಪನ ಮಕ್ಕಳಾ? ಅಥವಾ ನಿಮ್ಮನ್ನೇನು ನಕ್ಕೀರನ್ ಗೋಪಾಲ್ ಅಂದುಕೊಂಡಿದ್ದೀರಾ? ಆತನಂತೆ ನೀವೇನು ವೀರಪ್ಪನ್ ಗೆ ಕ್ಲೋಸಾ? ಕತ್ತಲಾಗುತ್ತಿದೆ. ಸುಮ್ಮನೆ ಹೋಗ್ರೀ. ನೂರಾರು ಪೋಲೀಸರು ಹುಡುಕಿದರೂ ಆತ ಕೈಗೆ ಸಿಗುತ್ತಿಲ್ಲ. ನಿಮಗೆ ಸಿಗುತ್ತಾನಾ?ಎಂದರು.

ಇನ್ನೇನು ಮಾಡುವುದು? ಸರಿ, ನಾನು, ನೇತ್ರರಾಜು ಕಾಲೆಳೆಯುತ್ತಾ ಹೊರಟೆವು. ಸುಧಾರಿಸಿಕೊಳ್ಳಲು ಒಂದು ಹುಲ್ಲಿನ ಜೊಂಡಿರುವ ಕಡೆ ನಿಂತೆವು ನೋಡಿ. ಮರುಕ್ಷಣವೇ ಹೊರಟಿತು ನೇತ್ರರಾಜುವಿನ ಕೂಗು, ಅಣ್ಣಾ, ಏನು, ಎತ್ತ ಅಂತ ಕತೆ ಕೇಳಬೇಡ. ತಿರುಗಿ ನೋಡದೆ ಓಡು. ಸರಿ, ಇಬ್ಬರೂ ಓಡಿ ಬಚಾವಾದೆವು.

ಹೀಗೆ ತಿರುಗಿ ನೋಡಿದರೆ ಪತ್ರಿಕೋದ್ಯಮದಲ್ಲಿ ಅಪಾಯ ಎಂಬುದು ತನ್ನಿಂತಾನೇ ನೂರಾರು ಸಲ ಬಂದು ಮಾಯವಾಗಿದೆ. ಪ್ರತಿ ಸಲವೂ ಬಚಾವಾಗಿದ್ದೇನೆ. ಇದೇ ತರ ಒಂದು ಸಲ, ನಾನು ಮತ್ತು ರವಿ ಬೆಳಗೆರೆ ಕಾರ್ಗಿಲ್ ಯುದ್ಧಕ್ಕೆ ಹೋಗಿದ್ದೇವೆ. ಆ ಟೈಮಿನಲ್ಲಿ ಪತ್ರಿಕೆಯ ವರದಿಗಾರರೊಬ್ಬರು ಕೊಡಗಿನ ರಾಜಕಾರಣಿಯೊಬ್ಬರ ವಿರುದ್ಧ ಒಂದು ಲೇಖನ ಬರೆದಿದ್ದಾರೆ. ಹೀಗೆ ಬರೆದವರು ಟೈಪಿಂಗಿಗೆ ಕೊಡುವಾಗ: ಹೇಗಿದ್ದರೂ ಪೊಲಿಟಿಕಲ್ ರಿಪೋರ್ಟರ್ ವಿಠ್ಢಲಮೂರ್ತಿ ಅವರೇ ಅಲ್ಲವಾ? ಲೇಖನಕ್ಕೆ ಅವರ ಬೈ ಲೈನ್ ಹಾಕಿಬಿಡಿ ಎಂದಿದ್ದಾರೆ. ಅವರು ಕೂಡಾ ಹಿಂದೆ ಮುಂದೆ ನೋಡದೆ ನನ್ನ ಹೆಸರು ಹಾಕಿದ್ದಾರೆ.

ಇದಾಗಿ ಎಷ್ಟೋ ವರ್ಷಗಳು ಕಳೆದಿವೆ. ಇದ್ದಕ್ಕಿದ್ದಂತೆ ಒಂದು ದಿನ ಲಂಕೇಶ್ ಪತ್ರಿಕೆಯ ಟಿ.ಕೆ.ತ್ಯಾಗರಾಜ್ ಕ್ಲಬ್ಬಿನಲ್ಲಿ ಸಿಕ್ಕಿದವರು, ಅರೇ, ಇದೇನ್ರೀ? ಇಂತವರ ಮೇಲೆ ಆರ್ಟಿಕಲ್ ಬರೆದಿದ್ದೀರಿ. ಕೇಸು ಕೋರ್ಟಿಗೆ ಹೋಗಿದೆ. ಅಟೆಂಡೂ ಮಾಡಿಲ್ಲ. ಹೀಗಾಗಿ ಇಂಗ್ಲೀಷ್ ಪತ್ರಿಕೆಯಲ್ಲಿ ನಿಮ್ಮ ಮತ್ತು ನಿಮ್ಮ ಎಡಿಟರ್ ಹೆಸರು ಹಾಕಿ ಜಾಹೀರಾತು ನೀಡಿದ್ದಾರೆ ಎಂದರು.

ಅಚ್ಚರಿಯಿಂದ ಪತ್ರಿಕೆ ತಿರುವಿ ನೋಡಿದರೆ ಅದಾಗಲೇ ಪ್ರಕರಣ ಗಂಭೀರ ರೂಪಕ್ಕೆ ತಿರುಗಿದೆ. ತಮ್ಮ ವಿರುದ್ಧ ಬರೆದಿದ್ದರಿಂದ ಕೋಪಗೊಂಡ ರಾಜಕಾರಣಿ ಕ್ರಿಮಿನಲ್ ಸೂಟ್ ಹಾಕಿದ್ದಾರೆ. ಇನ್ನೇನು ಕೋರ್ಟ್ ತೀರ್ಪು ಬರಬೇಕು. ಸರಿ, ನಾನು ರವಿ ಬೆಳಗೆರೆ ಅವರಿಗೆ ವಿಷಯ ತಿಳಿಸಿದ್ದೇ ಮಡಿಕೇರಿಯಲ್ಲಿ ಒಬ್ಬರು ಲಾಯರ್ ಅವರನ್ನು ನಮ್ಮ ಪರವಾಗಿ ವಾದಿಸಲು ಗೊತ್ತು ಮಾಡಿದೆ.

ಎಲ್ಲವೂ ಸರಿ, ಆದರೆ ಅವರ ವಿರುದ್ಧ ಬರೆದ ಪತ್ರಕರ್ತನೂ ಇಲ್ಲ. ಲೇಖನಕ್ಕೆ ಸಂಬಂಧಿಸಿದ ದಾಖಲೆಗಳೂ ಇಲ್ಲ. ಏನು ಮಾಡುವುದು? ತೀರ್ಪು ನಮ್ಮ ವಿರುದ್ಧ ಬರುವುದು, ಜೈಲು ಶಿಕ್ಷೆ ಮತ್ತು ದಂಡ ಬೀಳುವುದು ಗ್ಯಾರಂಟಿ. ಮಡಿಕೇರಿ ಕೋರ್ಟಿನಿಂದ ಬಂದು ಹೈಕೋರ್ಟಿಗೆ ಅಪೀಲು ಹಾಕಿಕೊಂಡರೂ ಅಷ್ಟೇ. ನನಗೆ ತಲೆ ಬಿಸಿ ಶುರುವಾಯಿತು. ಪತ್ರಕರ್ತರಾದವರಿಗೆ ಗೊತ್ತಿರುತ್ತದೆ. ಮೊದಲನೆಯದಾಗಿ ಕೋರ್ಟು, ಕಛೇರಿ ಅಂತ ತಿರುಗುವುದೇ ಅಬ್ಬೋ ಅನ್ನುವಂತಹ ಕೆಲಸ. ಅದರಲ್ಲೂ ದಾಖಲೆಯೇ ಇಲ್ಲದೆ ಹೋರಾಡಬೇಕು ಎಂದರೆ ಗದೆ, ಬಿಲ್ಲು-ಬಾಣ ಇಟ್ಟುಕೊಂಡವರ ಎದುರು ನಿರಾಯುಧರಾಗಿ ಹೋರಾಡಿದಂತೆ. ಯೇ, ನನ್ನ ಬೋಟಿ, ಕಲೀಜಾ, ಲಿವರ್ರು ಸ್ಟ್ರಾಂಗು ಬಿಡ್ರೀ ಅನ್ನಲು ಅದೇನು ಬಹಿರಂಗ ಸಮರವಲ್ಲ, ಕಾನೂನು ಸಮರ.

ಹೀಗಾಗಿ ಯಾರ ವಿರುದ್ಧವಾದರೂ ಬರೆದರೆ, ದಾಖಲೆ ಬೇಕೇ ಬೇಕು.ಇಲ್ಲವಾದರೆ ಗೋ..ವಿಂದಾ. ಸರಿ,ನಾನು ಸೀದಾ ಸದರಿ ರಾಜಕಾರಣಿಯ ಬಳಿ ಹೋದೆ. ಹೇಳಬೇಕೆಂದರೆ ಅವರಿಗೆ ನಾನವರಿಗೆ ಫೇಶಿಯಲಿ ತುಂಬ ಕ್ಲೋಸು. ಆದರೆ ಅವರಿಗೆ ನನ್ನ ಹೆಸರು ಮಾತ್ರ ಗೊತ್ತಿಲ್ಲ. ಅಂದ ಹಾಗೆ ಈ ಹೊತ್ತಿಗಾಗಲೇ ಅವರು ಧರ್ಮಸಿಂಗ್ ಸರ್ಕಾರದಲ್ಲಿ ಮಂತ್ರಿ. ಯಾವಾಗ ಅವರನ್ನು ನೋಡಲು ಹೋದೆನೋ? ಆಗವರು ಖುಷಿಯಿಂದ, ಅರೇ, ಬನ್ನಿ, ಬನ್ನಿ, ರೌಂಡ್ಸಿನಲ್ಲಿ ನಿಮಗೆ ಕೊಡಲು ಏನು ಸುದ್ದಿ ಇಲ್ಲವಲ್ಲ? ಎಂದರು.

ಸಾರ್, ನಾನೀಗ ರೌಂಡ್ಸ್ ಗೆ ಬಂದಿಲ್ಲ. ನೀವು ನಮ್ಮ ವಿರುದ್ಧ ಕೇಸು ಹಾಕಿದ್ದೀರಿ. ತೀರ್ಪು ನಮ್ಮ ವಿರುದ್ಧವೇ ಬರುವಂತಿದೆ ಎಂದೆ. ಅದಕ್ಕವರು, ನಿಮಗೇನು ಸಂಬಂಧ? ಲೇಖನ ಬರೆದಿದ್ದು ಆರ್.ಟಿ.ವಿಠ್ಢಲಮೂರ್ತಿಯಲ್ಲವಾ? ಎಂದು ಕೇಳಿದರು. ಅದಕ್ಕೆ ನಾನು, ಹೌದು ಸಾರ್, ನಾನೇ ಆರ್.ಟಿ.ವಿಠ್ಢಲಮೂರ್ತಿ. ಆದರೆ ಲೇಖನ ನಾನು ಬರೆದಿದ್ದಲ್ಲ. ಬರೆದಿದ್ದರೆ ಇಲ್ಲಿಯ ತನಕ ಬರುತ್ತಿರಲಿಲ್ಲ ಎಂದೆ. ಅಷ್ಟು ಮಾತಾಡಿದ್ದೇ ತಡ, ತಕ್ಷಣವೇ ಅವರು: ಅದು ನಿಮ್ಮ ಹೆಸರಾ? ಒಳ್ಳೆ ಕತೆ. ನಿಮ್ಮನ್ನು ಜೈಲಿಗೆ ಕಳಿಸಿ ನನಗೇನು ಲಾಭ? ಇರಿ ಅಂದವರೇ ತಮ್ಮ ಪರ ವಾದಿಸುತ್ತಿದ್ದ ವಕೀಲರಿಗೆ ಫೋನು ಮಾಡಿ, ಎಂಟು ವರ್ಷದಿಂದ ನಡೆಯುತ್ತಿರುವ ಈ ಕೇಸು ಕ್ಲೋಸು ಮಾಡಿಬಿಡಿ ಎಂದರು. ಅರೇ, ಕ್ಲೋಸು ಮಾಡಿ ಎಂದರೆ ಹೇಗೆ? ಒಂದು ಸಲ ಎಡಿಟರು ಮತ್ತು ರಿಪೋರ್ಟರು ಮಡಿಕೇರಿ ಕೋರ್ಟಿಗೆ ಬರಬೇಕಲ್ಲ? ರಾಜಿ ಮಾಡಿಕೊಳ್ಳಲು ಕನಿಷ್ಟ ಸಹಿ ಹಾಕಬೇಕಲ್ಲ? ಎಂದರು.

ಸರಿ, ನಾನು ಮತ್ತು ರವಿ ಬೆಳಗೆರೆ ಮಡಿಕೇರಿಯಲ್ಲಿದ್ದ ನಮ್ಮ ಸ್ನೇಹಿತ ಹೆಚ್.ಟಿ. ಅನಿಲ್ ಹಾಗೂ ನಮ್ಮ ವಕೀಲರಿಗೆ ಫೋನು ಮಾಡಿ ಹೊರಟೆವು. ಅಲ್ಲಿ ಹೋದ ಕೂಡಲೇ ಐದೇ ನಿಮಿಷದಲ್ಲಿ ರಾಜಿ ಪ್ರಕ್ರಿಯೆ ಮುಗಿದು ಹೋಯಿತು. ಎಲ್ಲರೂ ಸೇರಿ ಹೊರಗೆ ಬರುವಾಗ, ಈ ಕೇಸಿನಲ್ಲಿ ಇರುವ ವಿಠ್ಢಲಮೂರ್ತಿ ಎಂದರೆ ಇವರೇ ಅಂತ ಗೊತ್ತಿರಲಿಲ್ಲ ನೋಡಿ. ಗೊತ್ತಿದ್ದಿದ್ದರೆ ಎಂಟು ವರ್ಷ ಟೈಮು ವೇಸ್ಟು ಮಾಡಿಕೊಳ್ಳುತ್ತಿರಲಿಲ್ಲ ಅಂದರು ಆ ರಾಜಕಾರಣಿ.

ಅದರರ್ಥ, ಬದುಕಿನಲ್ಲಿ ನೀವೇನೇ ಮಾಡಿ. ಆದರೆ ವಿನಯ ಎಂಬುದನ್ನು ಮಗುವಿನಂತೆ ಕಾಪಾಡಿಕೊಂಡು ಬನ್ನಿ. ಅನ್ಯಾಯ ಕಂಡಾಗ ಟೀಕೆ ಮಾಡಿ. ಆದರೆ ವಿನಯವನ್ನುಮಾತ್ರ ಕಳೆದುಕೊಳ್ಳಬೇಡಿ. ಬದುಕಿನ ಯಾವುದೇ ಕ್ಷೇತ್ರವಿರಲಿ, ವಿನಯ ನಿಮ್ಮನ್ನು ಪೊರೆಯುತ್ತದೆ. ಬೆಳೆಸುತ್ತದೆ. ಎದುರಿಗಿದ್ದವರಲ್ಲಿ ನಿಮ್ಮ ಬಗ್ಗೆ ಪ್ರೀತಿ ಮೊಳೆಯುವಂತೆ ಮಾಡುತ್ತದೆ.

ಹೇಳಿದರೆ ನಿಮಗೆ ಈ ರೀತಿ ನನ್ನ ವಿರುದ್ಧ ದಾಖಲಾದ ಡಜನ್ನು ಗಟ್ಟಲೆ ಕೇಸುಗಳ ಬಗ್ಗೆ ಹೇಳಬಹುದು. ಅಲ್ಲೆಲ್ಲ ನನ್ನನ್ನು ಬಚಾವು ಮಾಡಿದ್ದು ವಿನಯವೇ. ಇದನ್ನೆಲ್ಲ ಯಾಕೆ ನೆನೆಸಿಕೊಂಡೆ ಎಂದರೆ ನಿಮಗೆಲ್ಲ ಭಾರತೀಯ ಚಿತ್ರರಂಗದ ಅಪೂರ್ವ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಗೊತ್ತಿರುತ್ತಾರೆ.

ಅದೆಷ್ಟು ಸಾವಿರ ಹಾಡುಗಳನ್ನು ಹಾಡಿ, ಕೇಳುಗರು ತಲ್ಲಣಗೊಳ್ಳುವಂತೆ, ಕಣ್ಣೀರು ಹಾಕುವಂತೆ, ಮಮ್ಮಲ ಮರುಗುವಂತೆ, ಹಕ್ಕಿಯ ಹಾಗೆ ಹಾರಾಡುವಂತೆ ಮಾಡಿದ್ದಾರೋ? ಗೊತ್ತಿಲ್ಲ. ಒಂದು ಸಲ ಹಾಯ್ ಬೆಂಗಳೂರ್ ಪತ್ರಿಕೆಯ ಸಮಾರಂಭಕ್ಕಾಗಿ ಅವರನ್ನು ಏರ್ ಫೋರ್ಟಿನಿಂದ ವೆಸ್ಟ್ ಎಂಡ್ ಹೋಟೆಲ್ ಗೆ ಕರೆದುಕೊಂಡು ಬರುವ ಅವಕಾಶ ನನಗೆ ಸಿಕ್ಕಿತು.

ನಾನಾಗ ಗೆಳೆಯ ರಾಮಚಂದ್ರ ಅವರ ಜತೆಗೂಡಿ ನಮ್ಮ ನಾಗರಾಜ ರೆಡ್ಡಿ ಅವರ ಬೆಂಜ್ ಕಾರು ತೆಗೆದುಕೊಂಡು ಏರ್ ಪೋರ್ಟಿಗೆ ಹೋದೆ. ಅಲ್ಲಿಂದ ಕರೆದುಕೊಂಡು ಬಂದು ಹೋಟೆಲ್ ಗೆ ಬಿಟ್ಟು ಹೊರಡಬೇಕು. ಆಗ ಸ್ವಲ್ಪ ಹೊತ್ತು ನಿಂತು ಎಸ್.ಪಿ ಅವರನ್ನು ಕೇಳಿದೆ. ಸಾರ್, ನೀವು ಇಷ್ಟು ಎತ್ತರ ಬೆಳೆದಿದ್ದೀರಿ. ಆದರೆ ಇದುವರೆಗೆ ನಿಮ್ಮಲ್ಲಿ ಅಹಂಕಾರದ ಲವಲೇಶವೂ ಕಾಣಲಿಲ್ಲವಲ್ಲ? ಎಂದೆ. ಅದಕ್ಕವರು: ಇದೆಲ್ಲ ದೇವರ ದಯೆ. ನಾನು ಬೆಳೆದಿದ್ದಲ್ಲ. ನಿಮಗೆ ಗೊತ್ತಿರಲಿ. ನೀವು ಒಬ್ಬಂಟಿಯಲ್ಲ. ನಿಮ್ಮನ್ನು ರಕ್ಷಿಸಲು ಒಂದು ರಕ್ಷಾ ಕವಚವನ್ನೇ ಪ್ರಕೃತಿ ದಯಪಾಲಿಸಿರುತ್ತದೆ. ಈ ರಕ್ಷಾ ಕವಚದ ದಯೆಯಿಂದ ನಿಮ್ಮೆದುರು ಈ ಎಸ್.ಪಿ.ಬಾಲಸುಬ್ರಮಣ್ಯಂ ನಿಂತಿದ್ದಾನೆ. ಅಷ್ಟೇ. ಇದನ್ನರ್ಥ ಮಾಡಿಕೊಂಡು ವಿನಯದಿಂದ ಇರಿ, ನಿಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಅಂತ ಅದಕ್ಕೆ ಗೊತ್ತಿರುತ್ತದೆ. ಅದು ಕರೆದುಕೊಂಡು ಹೋಗುವ ದಿಕ್ಕಿಗೆ ನೀವು ಹೋಗಿ. ಅಷ್ಟೇ ಎಂದರು. ನಾನು ಮೂಕನಾಗಿದ್ದೆ.

ಅದ್ಯಾಕೋ, ಇವತ್ತು ಇವೆಲ್ಲ ನೆನಪಿಗೆ ಬಂತು. ಮಗುವಿನ ಜತೆ ಸೊಂಡಿಲು ಎತ್ತಿ ನಿಂತಿದ್ದ ಆನೆ ನಮ್ಮನ್ನು ಕನಿಷ್ಟ ಅಟ್ಟಿಸಿಕೊಂಡು ಬರದಿದ್ದುದು, ಎಂಟು ವರ್ಷ ಸತತವಾಗಿ ನಮ್ಮ ವಿರುದ್ಧ ಕಾನೂನು ಸಮರ ನಡೆಸಿದ್ದ ರಾಜಕಾರಣಿ ಒಂದೇ ಮಾತಿಗೆ ಕೇಸು ವಾಪಸು ತೆಗೆದುಕೊಂಡಿದ್ದು. ಲೆಜೆಂಡ್ ಆಗಿ ಬೆಳೆದು ನಿಂತಿರುವ ಎಸ್.ಪಿ.ಬಾಲಸುಬ್ರಮಣ್ಯಂ ಕೋಟಿ ರೂಪಾಯಿ ಕೊಟ್ಟರೂ ದಕ್ಕದ ಬದುಕಿನ ದಿವ್ಯ ಸೂತ್ರ ಹೇಳಿದ್ದು.

ಇವೆಲ್ಲ ಏನನ್ನು ಸೂಚಿಸುತ್ತವೆ? ನೀವು ಒಬ್ಬಂಟಿಯಲ್ಲ.ನಿಮ್ಮ ಸುತ್ತ ಒಂದು ರಕ್ಷಾ ಕವಚವಿದೆ ಎಂಬುದನ್ನಲ್ಲವೇ? ಅದನ್ನು ಗಮನಿಸದೆಯೇ, ಅಯ್ಯೋ, ಜೀವನದಲ್ಲಿ ನಾನು ಒಬ್ಬಂಟಿ. ನನ್ನವರು ಅಂತ ನನಗ್ಯಾರೂ ಇಲ್ಲ ಎಂದು ಎಷ್ಟೋ ಸಲ ಕೊರಗುತ್ತೇವೆ. ಆದರೆ ನಿಜಕ್ಕೂ ನಾವು ಒಂಟಿಯಲ್ಲ. ನಮ್ಮ ಸುತ್ತ ಪ್ರಕೃತಿ ಒಂದು ರಕ್ಷಾ ಕವಚವನ್ನು ನಿರ್ಮಿಸಿರುತ್ತದೆ. ಅದನ್ನು ಗುರುತು ಹಚ್ಚುವಲ್ಲಿ ನಾವು ವಿಫಲರಾಗಿರುತ್ತೇವೆ ಅಷ್ಟೇ.

ಹಾಗಂತ ಇವತ್ತು ನಮ್ಮ ಕಾಡಿನ ರಾಜ ವಿನಯ್ ಮಾಧವ್ ಜತೆ ಆನೆ ನಮ್ಮನ್ನುಸುಮ್ಮನೆ ಬಿಟ್ಟ ವಿಷಯ ಮಾತನಾಡಿದೆ. ಅದಕ್ಕವರು. ನಿಮ್ಮ ಲಕ್ಕು ಚೆನ್ನಾಗಿದೆ. ಆ ಆನೆಗೇನಾದರೂ ಪಕ್ಕದಲ್ಲಿದ್ದ ಮರಿ ಆನೆ, ಮೊಟ್ಟ ಮೊದಲು ಮಗುವಾಗಿದ್ದರೆ ನಿಮ್ಮ ಕತೆ ಮುಗಿಯುತ್ತಿತ್ತು. ಆದರೆ ಅಷ್ಟೊತ್ತಿಗಾಗಲೇ ಅದು ಎರಡೋ, ಮೂರು ಮರಿಗಳಿಗೆ ಜನ್ಮ ನೀಡಿ, ಸಲಹಿದ ಅನುಭವ ಹೊಂದಿದೆ. ಹೀಗಾಗಿ ನಿಮ್ಮಿಂದ ತನ್ನ ಮಗುವಿಗೆ ಅಪಾಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದೆ. ಹೀಗಾಗಿ ಬಚಾವಾಗಿದ್ದೀರಿ ಎಂದು ಗಂಭೀರವಾಗಿ ಹೇಳಿದರು. ನಿಜ, ಪ್ರಕೃತಿಯ ರಕ್ಷಾ ಕವಚ ಯಾವ್ಯಾವ ರೀತಿ ನಮ್ಮನ್ನು ಕಾಪಾಡುತ್ತದೋ?ಎಂದುಕೊಂಡೆ.

‍ಲೇಖಕರು Avadhi

May 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: