ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಾತ್ಮಕವಾಗಿ ಹೆಣೆದ ‘ಸರಸ್ವತಿಯ ಸಾಕ್ಷಿ’

ಉಷಾ ನರಸಿಂಹನ್ ಅವರ ‘ಸರಸ್ವತಿಯ ಸಾಕ್ಷಿ’

ಈ ಕೃತಿಗೆ ಚನ್ನಪ್ಪ ಅಂಗಡಿ ಅವರ ಒಂದು ಬರಹ ಇಲ್ಲಿದೆ.

-ಚನ್ನಪ್ಪ ಅಂಗಡಿ

ಉಷಾ ನರಸಿಂಹನ್ ತಮ್ಮ ಅನೂಚಾನವಾದ ಸಾಹಿತ್ಯ ಪಯಣದಲ್ಲಿ ಐದು ಕಥಾಸಂಕಲನ, ಆರು ಕಾದಂಬರಿಗಳನ್ನು ನೀಡಿದ್ದನ್ನು ನೋಡಿದರೆ ‘ಕಥನ’ ಅವರ ಬರವಣಿಗೆಯ ಪ್ರಮುಖ ಆಸಕ್ತಿ ಎನಿಸುತ್ತದೆ. ಪಯಣಕ್ಕೆ ಮುನ್ನ, ಅಂಗರಾಗ, ಗಂಧವಾಹ, ಎಂಬ ಕವನ ಸಂಕಲನಗಳು; ಕದಳೀ ಕಲ್ಯಾಣ, ಕಂಚುಗನ್ನಡಿ, ಚಿನಿವಾರನ ಮಗಳು, ಎನ್ನುವ ನಾಟಕಗಳು; ಸಾಹಿತ್ಯ ಸನ್ನಿಧಿ, ಸಂತೆಯ ಸರಕು, ಎಂಬ ಹೆಸರಿನ ಲಲಿತಪ್ರಬಂಧಗಳು, ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅವರು ಕ್ರಮಿಸಿದ ದೂರವನ್ನು ಸೂಚಿಸುತ್ತವೆ. ನಾಟಕ ರಚನೆ, ಅಭಿನಯ, ರೂಪಕಗಳ ನಿರ್ಮಾಣದಲ್ಲೂ ಅವರ ಪ್ರತಿಭೆ ಅನಾವರಣಗೊಂಡಿದೆ. ಮೈಸೂರಿನ ಸಾಂಸ್ಕೃತಿಕ ಪರಿಸರವನ್ನು ಅವರು ಬಳಸಿಕೊಂಡ ಬಗೆ ಇತರ ಬರಹಗಾರರಿಗೆ ಮಾದರಿಯಾಗಿದೆ. ಸರಳತೆ, ನಿರಂತರತೆ, ಜನಪ್ರಿಯತೆ, ಗೇಯತೆ ಅವರ ಸಾಹಿತ್ಯ ಸೃಷ್ಟಿಯಲ್ಲಿನ ಜನಪದೀಯ ಲಕ್ಷಣಗಳು. ಜನಮಾನಸವನ್ನು ಮುಟ್ಟಬೇಕು, ಸಹೃದಯನ ಮನಸ್ಸನ್ನು ತಟ್ಟಬೇಕು ಎಂಬ ಆಶಯ ಅವರ ಬರವಣಿಗೆಯುದ್ದಕ್ಕೂ ಕಾಣುತ್ತದೆ. ಸಾಂಸ್ಕೃತಿಕ ಲೋಕದ ಈ ನಿರೀಕ್ಷೆಯನ್ನು ಪೂರೈಸಲು ಅವರು ಪ್ರಯತ್ನಶೀಲರಾಗಿದ್ದಾರೆ. ಪತ್ರಿಕೆ ಹಾಗೂ ಇನ್ನಿತರ ಮಾಧ್ಯಮಗಳನ್ನು ಸಂದೇಶವಾಹಕಗಳಂತೆ ಬಳಸಿಕೊಳ್ಳುವ ಅವರದ್ದು ಮತ್ತೆಮತ್ತೆ ಜನರ ಬಳಿಗೆ ಹೋಗುವ ಮನೋಧರ್ಮ, ಸುತ್ತುಗಟ್ಟಿರುವ ಕಂದರವನ್ನು ದಾಟಬೇಕೆನ್ನುವ ಉತ್ಸುಕತೆ, ಅವರಿಗೆ ವಿವಿಧ ಸಾಹಿತ್ಯ ಸ್ಪರ್ಧೆಗಳಿಗೆ ಒಡ್ಡಿಕೊಳ್ಳುವ ಉಮೇದಿಯನ್ನು ನೀಡಿದೆ.

ಮಾಮಿ ಮತ್ತು ಇತರ ಕತೆಗಳು, ತಾವರೆದೇಟು, ಹರಿವ ನೀರು ಕೊರೆವ ಬಂಡೆ, ಕಾಲ ಹೊರಳಿನ ಚಹರೆ, ಸರಸ್ವತಿಯ ಸಾಕ್ಷಿ ಕಥಾ ಸಂಕಲನಗಳು; ಕಾಮಿನೀತಲ್ಪ, ಕೃಷ್ಣಮೃಗ, ಪರ್ಷಿಯಾ ಪರಿಮಳ, ಬೀಬಿ ನಾಚ್ಯಾರ್, ಕೆಂಡದ ರೊಟ್ಟಿ, ಆರ್ಯಾವರ್ತ, ಕಾದಂಬರಿಗಳ ಶೀರ್ಷಿಕೆಗಳು, ಧ್ವನಿಶಕ್ತಿಯಲ್ಲಿನ ಅವರ ನಂಬಿಕೆಗೆ ಪುರಾವೆಯಾಗಿವೆ. ಗದ್ಯ, ಪದ್ಯಗಳೆರಡರಲ್ಲೂ ಸಾಧನೆಯ ಹಾದಿಯಲ್ಲಿರುವ ಅವರ ಶಕ್ತಿಯೆಂದರೆ ಭಾಷೆಯ ಮೇಲಿನ ಹಿಡಿತ. ಅಭಿವ್ಯಕ್ತಿಯನ್ನು ಸಂವೇದನಾಶೀಲ ನಿವೇದನೆಯನ್ನಾಗಿ ಪರಿವರ್ತಿಸುವ ತುಡಿತ. ಇದನ್ನು ಭಾಷೆಯ ಮೂಲಕ ಸಾಧಿಸಲು ಜಾಗೃತವಾಗಿರುವ ಮಿಡಿತ.
ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಭಾಜನವಾಗಿರುವ ‘ಸರಸ್ವತಿಯ ಸಾಕ್ಷಿ’ ತಣ್ಣನೆಯ ಕ್ರಾಂತಿಯನ್ನು ಸದ್ದಿಲ್ಲದ ಭಾಷೆಯಲ್ಲಿ ಹೇಳುವ ವಿಶಿಷ್ಟ ಕಥಾ ಸಂಕಲನ. ಒಮ್ಮೆ ಕಾಡಿಸುವ, ಮತ್ತೊಮ್ಮೆ ಓದುಗನಿಂದ ಗುನುಗುನು ಹಾಡಿಸುವ ಸನ್ನಿವೇಶಗಳನ್ನು ಒಳಗೊಂಡ ಇಲ್ಲಿನ ಹಲವಾರು ಕಥೆಗಳು ಸಮಕಾಲೀನ ಮಹಿಳಾ ಚಿಂತನೆಯ ಬಿಸುಪನ್ನು ಪ್ರತಿನಿಧಿಸುತ್ತವೆ. ಹಸಿ ಸಿದ್ಧಾಂತ, ಹುಸಿ ಅಧ್ಯಾತ್ಮಗಳ ಹಂಗಿಲ್ಲದೆ ಬೆಳಕು ಕಂಡಡೆ ಚಿಗುರೊಡೆಯುವ ಉಷಾ ಅವರ ಬರವಣಿಗೆ ಸರಳತೆಯಲ್ಲಿ ಸಾಧಿಸಬಹುದಾದ ಮಾರ್ಗವೊಂದನ್ನು ಕಂಡುಕೊಂಡಿದೆ. ಸ್ಥಾಪಿತ ಮೌಲ್ಯಗಳನ್ನು ಅಲ್ಲಲ್ಲಿ ಕೆಣಕುತ್ತ, ಲಿಂಗರಾಜಕಾರಣವನ್ನು ಮೀರುವ ಹಲವು ಬಗೆಗಳನ್ನು ಶೋಧಿಸುವ ನಿಸ್ಪೃಹ ಪ್ರಯತ್ನವಿದೆ. ಯಶಸ್ಸಿನ ಪ್ರಮಾಣ ಪ್ರಶ್ನಾರ್ಹವಾದರೂ ಅನುಸಂಧಾನದ ಅಗತ್ಯತೆ ಪರಿಶೀಲನಾರ್ಹವಾಗಿದೆ. ಹೆತ್ತವರಿಗೇ ಗೊತ್ತು ಹೆರಿಗೆ ನೋವು ಎಂಬ ಮಾತಿನಂತೆ ಸ್ತ್ರೀಲೋಕದ ಭಾವಸಂಚಾರವನ್ನು ತಮ್ಮದೇ ಆದ ಶೈಲಿಯಲ್ಲಿ ದರ್ಶಿಸಲು ಪ್ರಯತ್ನಿಸಿದ್ದಾರೆ. ಪುರುಷ ಅಹಂಕಾರದಿಂದುಂಟಾದ ಗಾಯವನ್ನು ಬಗೆಯುತ್ತ, ಅದರ ಮತ್ತೊಂದು ಬದಿಯಲ್ಲಿ ಸಮಾಧಾನದ ಮುಲಾಮನ್ನು ಸವರಿದ್ದಾರೆ.

ದಾಟಲಾರದವರು, ಗೋಡೆಗೆ ಹೊಡೆದ ಮೊಳೆ, ಬದುಕು ನಿಲ್ಲುವುದಿಲ್ಲ. ವಿಂಡ್ ಚೈಮ್, ಹೊಸ ಜೀವನ ಡಾಟ್‌ಕಾಮ್, ಬ್ರೇಕಪ್ಪು, ಇಂತಹ ಕಥೆಗಳು ಪ್ರೀತಿ_ಪ್ರೇಮಗಳ ಭಿನ್ನ ರೂಪು, ಮುಖ, ಆಯಾಮ, ಹಂತಗಳನ್ನು ಪರಿಚಯಿಸುತ್ತವೆ. `ಸರಸ್ವತಿಯ ಸಾಕ್ಷಿ’ ಕಥೆಯು ವಿವಿಧ ಹಿನ್ನೆಲೆ, ಪ್ರಾಯ ಮನೋಧರ್ಮದ ವ್ಯಕ್ತಿಗಳು ಬದುಕನ್ನು ಎದುರುಗೊಳ್ಳುವ ಬಗೆಯಲ್ಲಿರುವ ವ್ಯತ್ಯಾಸವನ್ನು ಮಾರ್ಮಿಕವಾಗಿ ನಿರೂಪಿಸಿದೆ. ಇಲ್ಲಿನ ಬಹುತೇಕ ಕತೆಗಳಲ್ಲಿ ಲೇಖಕಿ ಸಾಮಾಜಿಕ ಕಟ್ಟುಪಾಡುಗಳ ಸೋಗಿನಡಿಯಲ್ಲಿ ಹುದುಗಿರುವ ಮೋಸ, ಕುಹಕ, ಕುಟಿಲತೆ, ಢೋಂಗಿತನವನ್ನು ನಿರ್ಭಿಡೆಯಿಂದ ಪ್ರಶ್ನಿಸುವ ಧೈರ್ಯವನ್ನು ತೋರಿದ್ದಾರೆ. ಕಲಾತ್ಮಕ ನಿರೂಪಣೆಯಲ್ಲೂ ವಾಸ್ತವಿಕ ದೃಷ್ಟಿಕೋನವನ್ನು ಬಿಟ್ಟುಕೊಡದ ಅವರ ಛಲ ಮೆಚ್ಚುವಂತದ್ದು.
ಉಷಾ ನರಸಿಂಹನ್ ಅವರ ‘ಸರಸ್ವತಿಯ ಸಾಕ್ಷಿ’ಯಲ್ಲಿನ ಹದಿನಾಲ್ಕು ಕಥೆಗಳ ನಿರೂಪಣೆಯಲ್ಲಿ ಶುದ್ಧ ಕಥನಕಲೆ ಎದ್ದು ಕಾಣುತ್ತದೆ. ಭಿನ್ನ ಕಥಾವಸ್ತುಗಳ ನಡುವೆಯೂ ಸೂತ್ರಬದ್ಧ ಹೆಣೆಯುವಿಕೆಯ ಜನಪ್ರಿಯ ಮಾದರಿಯ ಬರವಣಿಗೆಯನ್ನು ಇಲ್ಲಿ ಕಾಣಬಹುದು. ವಿಂಡ್ ಚೈಮ್, ಬ್ರೇಕಪ್ಪು, ಹೊಸ ಜೀವನ ಡಾಟ್‌ಕಾಂ, ಈಡಿಯಟ್ಟಾಗುವ ಖುಷಿ, ಇಂತಹ ಶಿರ್ಷಿಕೆಗಳು ಸ್ವಲ್ಪ ವಿಲಕ್ಷಣತೆಯನ್ನು ತೋರುತ್ತ ಹೊಸ ನಿರೀಕ್ಷೆಯನ್ನು ಹುಟ್ಟಿಸುತ್ತವೆ. ಮೊಲೆವಾಲು ನಂಜಾಗಿ. ಬದುಕು ನಿಲ್ಲುವುದಿಲ್ಲ. ಲೋಕ ಸತ್ಯವಾಗದ. ಮುಂತಾದ ಕಥೆಗಳು ಪರಂಪರೆಯ ಭಾಷೆಯೊಂದಿಗೆ ನಡೆದಂತೆ ಭಾಸವಾಗುತ್ತದೆ. ಇದೆಲ್ಲ ಶಿರ್ಷಿಕೆಯ ಸುತ್ತಮುತ್ತಲಿನ ಗ್ರಹಿಕೆ. ಉಷಾರವರ ಕಥೆಯ ಆಳಕ್ಕಿಳಿದಂತೆ, ಬದುಕಿನ ಸಂಕೀರ್ಣತೆ, ಮನುಷ್ಯನ ಸಹಜ ಗುಣ, ಅಸಹಜ ವರ್ತನೆ, ಮಿಂಚಿ ಮರೆಯಾಗುವ ಸೀಮಿತ ದರ್ಶನಗಳು ಗೋಚರಿಸುತ್ತವೆ. ಪಾತ್ರಗಳ ಮುಖಾಮುಖಿಯು ವಿಚಾರಗಳ ಘರ್ಷಣೆಯಾಗಿ ಪರಿವರ್ತನೆ ಹೊಂದಿ ಕಥೆಗೆ ಬಿಸುಪು ತಂದಿದೆ. ಇದರಿಂದ ಓದುಗನಿಗೆ ತೀಕ್ಷ್ಣ ಒಳನೋಟಗಳ ಪರಿಚಯವಾಗಲು ಸಾಧ್ಯವಾಗಿದೆ. ನೈತಿಕ ಅರಿವಿನಲ್ಲಾಗುವ ಬದಲಾವಣೆಯನ್ನು ಹೇಳಲು ಅವರು ಸರಳ ನಿರೂಪಣಾ ಕ್ರಮವನ್ನೇ ಅನುಸರಿಸಿದ್ದಾರೆ. ಬಹುತೇಕ ಕಡೆ ಜೀವನ ಗತಿಯ ಕಾಲಾನುಕ್ರಮದಲ್ಲೇ ಕಥೆಯ ಬೆಳವಣಿಗೆಯನ್ನು ಕಾಣಬಹುದಾಗಿದೆ. ರಾಚನಿಕ ಸ್ವರೂಪ ಮತ್ತು ಭಾಷಾ ಬಳಕೆ ಕೂಡ ಎಲ್ಲೂ ವಕ್ರವಾಗದೇ ನೇರ ನಡಿಗೆಯಲ್ಲಿ ಮುಂದುವರೆದಿದೆ. ಜನಸಮುದಾಯದಿಂದ ದೂರ ಸರಿದು ಸ್ವಗತದಲ್ಲಿ ಅಲವತ್ತುಕೊಳ್ಳುವ ಪಾತ್ರಗಳು, ಒಮ್ಮೆ ಸೋಲನ್ನು ಒಪ್ಪಿಕೊಂಡರೆ, ಮತ್ತೊಮ್ಮೆ ಸೋಲಿಗೆ ಸಮರ್ಥನೆ ಹುಡುಕುತ್ತವೆ, ಮಗದೊಮ್ಮೆ ಸೋಲಿನಲ್ಲಿಯೇ ನೈತಿಕ ವಿಜಯವನ್ನು ಕಂಡುಕೊಳ್ಳುತ್ತವೆ.

ಶೀರ್ಷಿಕೆ ಕಥೆ ‘ಸರಸ್ವತಿಯ ಸಾಕ್ಷಿ’ಯ ರಘುನಾಥ ಗಾಯಕವಾಡರು ಗ್ವಾಲಿಯರ್ ಘರಾಣಾದ ಸುಪ್ರಸಿದ್ಧ ಸಂಗೀತಗಾರರು. ವಂಶಪರಂಪರೆಯಾಗಿ ಬಂದ ಗಾಯನ ಕಲೆಯಲ್ಲಿ ಸಾಧನೆ ಮಾಡಿ ಸಿದ್ಧಿಯ ಉತ್ತುಂಗದಲ್ಲಿರುವವರು. ಅವರಲ್ಲಿ ಸಂಗೀತ ಕಲಿಯಲು ದೂರದ ವಾರಣಾಸಿಯಿಂದ ನೀನಾ ಚೌಧರಿ ಎಂಬ ಹುಡುಗಿ ಬಂದು, ಒಂದು ವರ್ಷವಾದಲ್ಲಿಂದ ಕಥೆಯ ಆರಂಭವಾಗುತ್ತದೆ. ಮೈಸೂರಿನ ಕಾರ್ಯಕ್ರಮಕ್ಕೆ ಬಂದು ಸಂಗೀತದ ಗಂಧಗಾಳಿಯಿಲ್ಲದ ಪಾರ್ವತಿಯ ಸೌಂದರ್ಯಕ್ಕೆ ಮನಸೋತು ಮಡದಿಯನ್ನಾಗಿ ಸ್ವೀಕರಿಸಿದ್ದರ ಹಿನ್ನೋಟವಿದೆ. ಶಿಷ್ಯಗೆ ವಿದ್ಯೆಯ ಧಾರೆಯನ್ನು ಎರೆಯುತ್ತ, ಅವಳ ಕಂಠಸಿರಿಯನ್ನು ಮೆಚ್ಚುತ್ತ, ಪಾಠ ಒಪ್ಪಿಸುವಿಕೆಗೆ ರೋಮಾಂಚನಗೊಳ್ಳುತ್ತ, ಮಧ್ಯೆ ಮಧ್ಯೆದಲ್ಲಿ ಅದೇಕೋ ಗುರುವರ್ಯರು ಕಂಪಿಸುತ್ತ ನಡೆದಿರುವ ವರ್ತಮಾನವೂ ಗೋಚರಿಸುತ್ತದೆ. ಕ್ಯಾಮರಾ ಹಿಡಿದು ಕಾಡು ಮೇಡು ಅಲೆಯುತ್ತ, ಅಪ್ಪನ ಸಂಗೀತ ರಿಯಾಜಿನ ವೇಳೆ ಮನೆಯಲ್ಲಿದ್ದನೆಂದರೆ ಕೋಣೆಯ ಬಾಗಿಲನ್ನು ಗಟ್ಟಿಯಾಗಿ ಮುಚ್ಚಿಕೊಳ್ಳುವ ಅರಸಿಕ ಪುತ್ರ ಸಾರಂಗನಿಗೆ ನೀನಾಳನ್ನು ಕಟ್ಟಬೇಕೆಂಬ ಕನಸಿನ ಭವಿಷ್ಯ ರೂಪುಗೊಳ್ಳುತ್ತದೆ. ಹೀಗೆ ಸಾಗುವ ಕಥೆಯ ಒಂದು ಹಂತದಲ್ಲಿ ಸಾರಂಗ-ನೀನಾ ನಡುವೆ ವಿಚಾರ ವಿನಿಮಯ ನಡೆದು ತಮ್ಮಿಬ್ಬರದ್ದು ಜನ್ಮಜನ್ಮಾಂತರದ ಅಪಜೋಡಿ ಎಂಬ ನಿರ್ಧಾರಕ್ಕೆ ಅವರೀರ್ವರೂ ಬರುತ್ತಾರೆ. ಇಂತಹ ಇಜ್ಜೋಡನ್ನು ದಂಪತಿಯನ್ನಾಗಿ ಕಲ್ಪಿಸಿಕೊಂಡಿದ್ದರ ಪ್ರಮಾದಕ್ಕಾಗಿ ತಾವೇ ಶಿಷ್ಯೆಯ ಪಾಣಿಗ್ರಹಣ ಮಾಡಿಕೊಳ್ಳಲು ಪ್ರಸ್ತಾಪ ಎದುರಾಗುವ ಪ್ರಸಂಗ ಕಂಡುಬರುತ್ತದೆ. ಈ ಅಸ್ವಾಭಾವಿಕ, ಆದರೆ ಅಸಾಧ್ಯವಲ್ಲದ ಸಂಗಮಕ್ಕೆ ಅವರೀರ್ವರೂ ಕೊಟ್ಟುಕೊಳ್ಳುವ ಕಾರಣಗಳಲ್ಲಿ ಕಥೆಯ ಹೂರಣ ಅಡಗಿದೆ. ಕೌಟುಂಬಿಕ ಚೌಕಟ್ಟನ್ನು, ಸಾಮಾಜಿಕ ಕಟ್ಟಳೆಯನ್ನು ಮೀರುವ ಮನಸ್ಸುಗಳ ತಲ್ಲಣ, ಮುಜಗರ, ಉತ್ಸಾಹ, ಉನ್ಮಾದ ಮತ್ತು ಇವುಗಳನ್ನೆಲ್ಲ ಬರಿಗಿರಿಸಿ ಸಾರುವ ದೈವಿಕ ಪ್ರೇಮ ಕಥೆಯ ಆತ್ಯಂತಿಕ ಗುರಿಯನ್ನು ಸ್ಪಷ್ಟಗೊಳಿಸಿದೆ.

ಗಂಡು ಹೆಣ್ಣಿನ ಸಂಬಂಧದ ಪರ್ಯಾಯ ಸಾಧ್ಯತೆಯನ್ನು ಶೋಧಿಸುವ ಈ ಯೋಚನಾ ಕ್ರಮ ತೀರ ಹೊಸದೇನೂ ಅಲ್ಲದಿದ್ದರೂ ನಿರ್ಭಿಡೆ ಮತ್ತು ನಿರುದ್ವಿಗ್ನವಾಗಿ ಹೇಳುವ ಕ್ರಮದಿಂದ ವಿಶಿಷ್ಟವೆನಿಸುತ್ತದೆ. ಅಸಹಜ ಸಂಯೋಜನೆ ಹುಟ್ಟು ಹಾಕುವ ಸೂಕ್ಷ್ಮ ಸಂಗತಿಗಳನ್ನು ಪರಿಹರಿಸಿ ಸ್ವಾಭಾವಿಕವಾಗಿ ಬದುಕುವ ಪರಿವರ್ತನಾಶೀಲ ನಡೆಯನ್ನು ಲೇಖಕಿ ತಮ್ಮ ಬರೆಹದಲ್ಲಿ ಕಾಣಿಸಿದ್ದಾರೆ. ಸರಸ್ವತಿಯ ಸಾಕ್ಷಿಯಲ್ಲಿ ರಘುನಾಥ ಮತ್ತು ನೀನಾ ಒಂದಾಗುವ ಸಂದರ್ಭದಲ್ಲಿ ಪರಸ್ಪರ ಕೇಳಿಕೊಳ್ಳುವ ಪ್ರಶ್ನೆಗಳಲ್ಲೇ ಬದುಕಿನ ಸೂಕ್ಷ್ಮಾತಿಸೂಕ್ಷ್ಮ  ಪರಿಹಾರ ಮಾರ್ಗಗಳು ತೆರೆದುಕೊಳ್ಳುತ್ತವೆ. ಇಂತಹ ಘಟನೆಗಳು ಕಲಾ ಪ್ರಪಂಚದಲ್ಲಿ ಆಗಾಗ ನಡೆಯುವುದು, ಚರ್ಚೆಗಳಗಾಗುವುದು, ತಂತಮ್ಮ ಮನೋಭೂಮಿಕೆಗೆ ಅನುಗುಣವಾಗಿ ಸಮರ್ಥಿಸಿಕೊಳ್ಳುವುದು. ಕಾಲಕ್ರಮೇಣ ಎಲ್ಲವನ್ನೂ ಮರೆತು ಸಹಜ ಬದುಕಿಗೆ ಮರಳುವುದು ನಡೆದೇ ಇರುತ್ತವೆ. ಆದರೆ ಈ ಘಟನಾ ಸರಣಿಯನ್ನು ಲೇಖಕಿ ಕಲಾತ್ಮಕವಾಗಿ ಹೇಳಿರುವ ಬಗೆ ಚಿತ್ರಕವಾಗಿದೆ. ಅವರೀರ್ವರ ಸಂಬಂಧ ಲೌಕಿಕ ಜಗತ್ತಿನ ವ್ಯವಹಾರಿಕತೆಯನ್ನು ಮೀರಿದ ಭಕ್ತ- ಭಗವಂತನ ಸಾಮರಸ್ಯವಾಗಿ ಪರಿಣಮಿಸುವುದು ಕಥೆಯ ಯಶಸ್ವಿನ ಬಹುಮುಖ್ಯ ಭಾಗವಾಗಿದೆ. ಕಥಾ ಸಂವಿಧಾನದಲ್ಲಿ ಅಲ್ಲಲ್ಲಿ ಸಿನಿಮೀಯ ಅಂಶಗಳು ಸೇರಿಕೊಂಡಂತೆ ಭಾಸವಾದರೆ, ಅದು ಓದುಗನ ತಪ್ಪೆಂದು ಹೇಳಲಾಗುವುದಿಲ್ಲ.

ಇಲ್ಲಿ ಕೇವಲ ಆದರ್ಶದ ಪ್ರಲಾಪವನ್ನು ಕಾಣದೆ ಗಂಡು ಹೆಣ್ಣಿನ ನಿಸರ್ಗ ಸಹಜ ಅಪೇಕ್ಷೆಗಳು ಚಲನಶೀಲವಾಗಿರುವ ವಾಸ್ತವತೆಯನ್ನು ಕಾಣುತ್ತೇವೆ. ಪ್ರಕೃತಿಯ ನಿಯಮದಂತೆ ನಡೆಯುವುದರಲ್ಲಿ ಮನುಷ್ಯನ ಹಿತವಡಗಿದೆ ಎಂಬ ಸತ್ಯದ ಪ್ರತಿಪಾದನೆಯನ್ನು ಕೂಡ ನೋಡಬಹುದಾಗಿದೆ. ‘ನಾನು ಹಾಡಿದ ತ್ಹುಮ್ರಿಗೆ ನಿಮ್ಮ ಶರೀರ ಪ್ರತಿಕ್ರಿಯಿಸಿದ ಪರಿ ನನಗೆ ಗೊತ್ತಿಲ್ಲವೆಂದುಕೊಂಡಿರಾ?’ ಎಂದ ನೀನಾ ‘ನಿಮ್ಮ ವಯೋಮಾನದ ಇತಿಮಿತಿಗಳು ನನಗೂ ಅರಿವಿದೆ’ ಅಂತ ಕೂಡ ಹೇಳುವ ಮೂಲಕ ಇವ್ಯಾವವೂ ದೌರ್ಬಲ್ಯಗಳಾಗಬೇಕಿಲ್ಲ ಎಂಬ ವಾಸ್ತವತೆಯನ್ನು ತಿಳಿಸುತ್ತಾಳೆ.

ಸಂಕಲನದ ‘ಉರಿಯ ತಬ್ಬಿ ನೆರೆಯುತ್ತಾ’ ಕಥೆ ಮನುಷ್ಯನ ಮನಸ್ಸಿನಾಳದ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಏನೋ ಮಾಡಲು ಹೋಗಿ ಏನೋ ಆಗುವ ಘಟನಾ ಕ್ರಮಗಳಿಗೆ ಉದಾಹರಣೆಯಾಗಿದೆ. ವಿವಾಹೇತರ ಸಂಬಂಧಗಳು ಸೃಷ್ಟಿಸುವ ಅಸಹಾಯಕತೆ ಮತ್ತು ಅಪಾಯಕತೆ ಇಲ್ಲಿ ಸ್ವಲ್ಪ ಹಸಿಹಸಿಯಾಗಿಯೇ ಚಿತ್ರಿತವಾಗಿದೆಯೆಂದರೆ ತಪ್ಪಾಗಲಿಕ್ಕಿಲ್ಲ. ವಿಷಾದ, ದುಗುಡ, ಅಪರಾಧಿ ಪ್ರಜ್ಞೆಗಳು ಜೀವನವನ್ನು ಹಿಂಸಿಸುವ ಪರಿ ಬೆಂಕಿಯ ಜ್ವಾಲೆಯಂತೆ ತಾಗುತ್ತದೆ.

ಶಂಕರ್ ಮತ್ತು ಸುಶೀಲರದ್ದು ಅನುರೂಪದ ಜೋಡಿ. ಸೊಸೆಯನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದ ಅತ್ತೆ, ಜೊತೆಗೆ ಮುದ್ದಾದ ಹೆಣ್ಣು ಮಗು. ಇಂತಹ ಸುಖದ ಬದುಕಿಗೆ ಬೆನ್ನುಹಾಕಿ ಸುಶೀಲೆ ನಾಪತ್ತೆ. ಮನೆಯೆದುರಿನ ದರ್ಜಿಯೊಂದಿಗೆ ಓಡಿ ಹೋದ ಆಕೆಗೆ ತಪ್ಪಿನ ಅರಿವಾಗುವಷ್ಟರಲ್ಲಿ ಗಂಡ ಆಕೆಯ ಮೇಲಿನ ಮನಸ್ಸು ತೆಗೆದು ನಿರ್ಲಿಪ್ತನಾಗಿದ್ದ. ಆದರೂ ಅವಳ ಸುತ್ತಲಿನ ಸಂಗತಿಗಳು ಒಂದಿಲ್ಲೊಂದು ರೂಪದಲ್ಲಿ ಇವನಲ್ಲಿಗೆ ಆಗಾಗ ಬಂದು ಹೋಗುತ್ತಿರುತ್ತವೆ. ಕೊನೆಗೊಂದು ದಿನ ಅವಳೇ ಬರುತ್ತಾಳೆ. ಮನೆಗೆ ಬಂದು ಏನೂ ನಡೆದೇ ಇಲ್ಲವೇನೋ ಎಂಬಂತೆ ಸಹಜವಾಗಿರಲು ಪ್ರಯತ್ನಿಸುತ್ತಾಳೆ. ಆದರೆ ಅವನಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಬೇಕಾಗಿರುತ್ತದೆ. ಸಣ್ಣಸಣ್ಣ ಕಾರಣಗಳನ್ನು ಪೋಣಿಸುತ್ತಾ, ದೊಡ್ಡದಾದ ಹುಚ್ಚು ಸಾಹಸಕ್ಕೆ ಕೈಹಾಕಿ ಹಲವು ಜೀವಿಗಳ ಬಾಧೆಗೆ ಕಾರಣಕರ್ತಳಾದ ತನ್ನನ್ನು ಸುಶೀಲಾ ಹಳಿದುಕೊಳ್ಳುತ್ತಾಳೆ. ಕಾಲ ಮಿಂಚಿರುತ್ತದೆ.

ದೈಹಿಕ ವಾಂಛೆಗಳನ್ನು ನಿಯಂತ್ರಿಸಿದೆ, ಕಾಮದ ಬೆಂಕಿಗೆ ಬಿದ್ದಾಗ ಕುಟುಂಬದಲ್ಲಿ ಏಳುವ ಜ್ವಾಲೆ ಯಾರನ್ನು ಹೇಗೆ ಸುಡುತ್ತದೆಯೆಂದು ಹೇಳಲಾಗದು. ಕಾಮದ ಕಣ್ಣಿಗೆ ಸಂಬಂಧಗಳು ಗೌಣವಾಗಿ, ಭಯ-ನಾಚಿಕೆಗಳನ್ನು ಗಾಳಿಗೆ ತೂರಿ, ಮುನ್ನುಗ್ಗುವುದೊಂದೇ ಕೆಲಸ. ಆ ಉರಿಯನ್ನು ಕುರುಡುಗಣ್ಣಿನಿಂದ ತಬ್ಬಿದವರು ತಮ್ಮನ್ನೂ, ತಮ್ಮವರನ್ನೂ ಸುಡುವಲ್ಲಿ ಹೇಗೆ ಮೂಲವಾಗುತ್ತಾರೆ ಎನ್ನುವುದು ಕಥೆ ಮುಂದುವರೆದಂತೆ ಮನವರಿಕೆಯಾಗುತ್ತ ಹೋಗುತ್ತದೆ.
ಇಲ್ಲಿ ಹೆಣ್ಣು ಗಂಡಿನ ಸಂಬಂಧ, ಅದರಲ್ಲೂ ಗಂಡ-ಹೆಂಡತಿ ಬಾಂಧವ್ಯ ವ್ಯಕ್ತಗೊಂಡು, ವ್ಯಾಖ್ಯಾನಕ್ಕೊಳಪಡುವ ರೀತಿ ಸ್ವಲ್ಪ ಗೊಂದಲಮಯವಾಗಿದೆ. ಅದರ ಸಂಕೀರ್ಣತೆಯನ್ನು ಎತ್ತಿ ತೋರುವುದಕ್ಕಾಗಿಯೇ ಲೇಖಕಿ ಹೀಗೆ ಕಥೆಯನ್ನ ಮುಂದುವರೆಸಿಕೊಂಡು ಹೋಗಿರಬಹುದು. ಒಟ್ಟಾರೆ ಕಥೆ ಮುಗಿಯುವುದರಲ್ಲಿ ಒಂದು ದಿಗ್ಭ್ರಾಂತ ಸ್ಥಿತಿಯನ್ನು ತಂದಿಡುತ್ತದೆ. ತಪ್ಪಿತಸ್ಥ ಸ್ಥಾನದಲ್ಲಿ ನಿಂತ ಹೆಂಡತಿ ಗಂಡನನ್ನು ಪ್ರಶ್ನಿಸುತ್ತ, ಅವನಲ್ಲಿ ದೋಷಗಳನ್ನು ಹುಡುಕುವ ಪ್ರಯತ್ನ ವಿಚಿತ್ರವಾಗಿದೆ. ಹೀಗೆಲ್ಲ ನಡೆಯಲು ಸಾಧ್ಯವೇ ಎಂಬ ಪ್ರಶ್ನೆಗಳಿಗೆ, ಹೀಗೂ ನಡೆಯಬಹುದಲ್ಲ ಎಂಬ ಉತ್ತರ ರೂಪದಲ್ಲಿ ಕಥೆಯ ಕೊನೆಯ ಭಾಗ ಇದ್ದಂತಿದೆ. ಇಂತಹ ಪ್ರಶ್ನೆ ಮತ್ತು ಉತ್ತರಗಳನ್ನು ಅರ್ಥೈಸಿ, ಅರಗಿಸಿಕೊಳ್ಳುವಷ್ಟು ಪ್ರೌಢಿಮೆಯನ್ನು ನಮ್ಮ ಸಮಾಜ ಬೆಳೆಸಿಕೊಂಡಿದೆಯೇ? ಎಂಬ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಈ ಕಥೆಯ ಶಂಕರನಲ್ಲಿ ನಾಯಕನಿಗಿಂತ ಪ್ರತಿನಾಯಕ ಹೆಚ್ಚು ದಟ್ಟವಾಗಿ ಕಾಣುತ್ತಿದ್ದಾನೆ. ಇಲ್ಲಿ ಕೇವಲ ನಾಯಕಿಯಷ್ಟೇ ಅಲ್ಲ, ಕಥಾನಾಯಕನೂ ಅಸಹಾಯಕನಾಗಿ ಸಂದಿಗ್ಧತೆಗೆ ಒಳಗಾಗುತ್ತಾನೆ. ಅವನ ಗೆಳೆಯರು, ಬಂಧುಗಳು ಛೇಡಿಸುವಂತೆ ಅವನೊಬ್ಬ ದುರ್ಬಲ ವ್ಯಕ್ತಿಯಾಗಿಯೇ ಉಳಿಯುತ್ತಾನೆ. ಒಬ್ಬ ದುರಂತ ನಾಯಕನಾಗಿ ಘನತೆಯ ಸೋಲು ಕೂಡ ಅವನಿಗೆ ದಕ್ಕುವುದಿಲ್ಲ. ಏಕೆಂದರೆ ಕಣ್ಮುಂದೆಯೇ ದ್ರೋಹವೆಸಗಿದ ಹೆಂಡತಿ ಕೇಳುವ ಪ್ರಶ್ನೆಗೆ ಅವನು ನಿರುತ್ತರನಾಗುತ್ತಾನೆ. ಕೊನೆಗೂ ಕಥೆ ಅಂತ್ಯವಾಗುವುದು ಅವಳ ಮಾತಿನಿಂದಲೇ ಎಂಬುದು ಗಮನಾರ್ಹವಾದ ಸಂಗತಿ.

ಇಲ್ಲಿ ಚಿತ್ರಿತವಾಗಿರುವುದು ವಾಸ್ತವತೆಯ ಒಂದು ಮುಖವೇ ಹೊರತು, ಇದೇ ಸಂಪೂರ್ಣ ವಾಸ್ತವತೆಯಲ್ಲ. ಸಣ್ಣ ಕಥೆ ಸುತ್ತಣ ಬದುಕಿನಿಂದ ಹೀಗೆ ನೋವು, ಹತಾಶೆ, ಸೋಲು, ವಿಷಣ್ಣತೆಗಳನ್ನು ಹೆಕ್ಕಿ ತೆಗೆದು ಮಾತನಾಡುತ್ತದೆ. ಈ ಪ್ರಕಾರವನ್ನು ಲೇಖಕಿ ತಮ್ಮ ಭಿನ್ನ ಕಥಾವಸ್ತುಗಳ ಮೂಲಕ ಸಮರ್ಥವಾಗಿ ನಿರ್ವಹಣೆ ಮಾಡುವಲ್ಲಿ ಸಾಕಷ್ಟು ಮುಂದೆ ಹೋಗಿದ್ದಾರೆ. ವಾಚ್ಯತೆಯನ್ನು ಮೀರುವ ಭಾಷಾ ಸೂಕ್ಷ್ಮತೆಯನ್ನು ಮತ್ತಷ್ಟು ಸಾಧಿಸಿ, ಇನ್ನೂ ಹೆಚ್ಚಿನ ಯಶಸ್ವೀ ಕಥೆಗಳನ್ನು ಕೊಡುವ ಸಾಮರ್ಥ್ಯ ಅವರಿಗಿದೆ.

‍ಲೇಖಕರು Admin

22 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading