ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಳೆ ಮತ್ತು ಮಳೆ..

-ಬಾಗೂರು ಮಾರ್ಕಾಂಡೇಯ

1, ಇಳೆ ಮತ್ತು ಮಳೆ

ಮಳೆಯ ಕಮ್ಮಿನ ಜೊತೆಗೆ ಮಲ್ಲಿಗೆಯ ಘಮವಿದೆ
ಇಳೆಯ ಹೊಸತನ ಉತ್ಸಾಹ ಸೊಗವ ಹೆಚ್ಚಿಸಿದೆ
ಹಳೆಯದೆಲ್ಲವು ಹೊಸತೇ ಆದಂತೆ ನಳನಳಿಸಿದೆ

ಬಂದ ಮಳೆರಾಯ ದಯೆಯಲಿ ಜೀವ ನಮಿಸಿದೆ

ಮೊದಲ ಮುಗಾರಿನ ಆರ್ಭಟವು ಕುಣಿವಂತಿದೆ
ಬೆದೆಯನಿಮ್ಮೆಟ್ಟಿಸೊ ಹದಕೆ ಭುವಿ ಮೈದೆರೆದಿದೆ
ಎದೆಗನಸು ಅರಳುವಂತೆ ಮೊಳಕೆಗಣ್ಣ ಬಿಡಿಸಿದೆ

ಬಂದ ಮಳೆರಾಯ ದಯೆಯಲಿ ಜೀವ ನಮಿಸಿದೆ

ಎಲ್ಲಿತ್ತೋ ಮುಗಿಲ ಸಭೆ ತಣಿದು ಮೊಗೆವಂತಿದೆ
ಎಲ್ಲೆಲ್ಲಿಯೂ ನೀರು ಚಿಮ್ಮಿಹೊಮ್ಮಿ ಹರಿಯುತ್ತಿದೆ
ಎಲ್ಲೆ ಮೀರುವ ಉತ್ಸಾಹ ಪ್ರೇಮಿಗಳನೆ ತಬ್ಬುತ್ತಿದೆ

ಬಂದ ಮಳೆರಾಯ ದಯೆಯಲಿ ಜೀವ ನಮಿಸಿದೆ

ಆಸೆ ಅರಕ್ಷಣವೆ ಶಾಂತವಾಗಿ ವಸುಧೆ ನಕ್ಕಂತಿದೆ
ಹಸೆಯನೇರಿದ ಪರಿ ತೃಷೆಯಡಗಿಸಿ ನದಿ ಸೇರಿದೆ
ನಸೆಯ ಮಬ್ಬಡಗಿ ನಾಚಿಕೆ ವಸುಂದರೆಗೇನಾಗಿದೆ

ಬಂದ ಮಳೆರಾಯ ದಯೆಯಲಿ ಜೀವ ನಮಿಸಿದೆ

ಬಾರೆ ಬಾ ಭಾವಗಳ ಖನಿ ಮೌನಲಿಸ ಮಾತಿಲ್ಲದೆ
ತಾರೆ ಸೊಗದನುಭವವ ತಣಿಸಿನ್ನ ಎಲ್ಲ ನಮ್ಮದೆ
ವಾರೆನೋಟದರಸಿ ಮಳೆಯಲಿ ಮಿಯ್ಯಬಾರದೆ

ಬಂದ ಮಳೆರಾಯ ದಯೆಯಲಿ ಜೀವ ನಮಿಸಿದೆ

  1. ನಿರಾಸೆ

ಕರಗುತಿದೆ ಕಣ್ಣಲಿ ಕನಸು ಮರೆಸಿ ನೋವನು
ನರನಾಡಿಗಳಲಿ ಸಂಕೋಚ ಸಹಿಸಿ ಎಲ್ಲವನು
ವರವೋ ಶಾಪವೋ ಭ್ರಮೆ ಪ್ರೇಮ ಅಲ್ಲೇನು

ತುಟಿ ಬಿರಿಯದೆ ಮಾತು ತೆರೆದಿಡುವ ಕಣ್ಣನು
ಕಟಿ ಕಾವ್ಯೋತ್ಕರ್ಷ ರಸಕ್ಷಣ ಸಂಪುಟವೇನು
ನಟಿಸಲುಂಟೇ ನವಪಲ್ಲವ ಮರೆಸಲೆಲ್ಲವನು

ಸಹಿಸಿ ಸಿಹಿಕಹಿ ಮಾಯೆ ಪರೀಕ್ಷೆಯೊಂದನು
ಸಹಿ ಗೀಚುವ ಸಂಶಯದಿರುಸುಮುರಿಸೇನು
ಕಹಿಯನುಭವ ಸರಿಸಿರೆ ನವೋಲ್ಲಾಸವೇನು

ಬಿಗಿವ ಸೂತ್ರ ಪಾತ್ರ ತೆರೆವ ದಾರಿಯೊಂದನು
ನಗಿಬೆಳಕಲಿ ಚೈತನ್ಯವಾಹಿನಿ ಒಲುಮೆಯನು
ಬಿಗಿವ ತೋಳ್ತೆಕ್ಕೆ ಕ್ಷಮಿಸಲೆಲ್ಲ ಒಲಿದವರನು

  1. ಮೆಲುಮಾತು

ನಿನ್ನ ಕಣ್ಣಲಿ ಸಂದೇಶವೊಂದು ಬೆಳಕ ಸವಿಮಾತಿದೆ
ನನ್ನೊಳೇನೋ ಅವ್ಯಕ್ತ ಕಲ್ಪನೆ ಅದಕೆ ತಾಳೆಯಾಗಿದೆ
ನಿನ್ನ ಸಾಮಿಪ್ಯಕ್ಕೆಳೆಸುತಿಹ ಬಂಧ ದಿಟವೆ ಆದಂತಿದೆ

ತೇಲುವ ಮುಂಗುರುಳ ಖುಷಿ ಮತ್ತೇನನೋ ಹೇಳಿದೆ
ಕಾಲು ಕುಣಿವಂತೇನೊ ಗೆಜ್ಜೆದನಿ ಹಿಮ್ಮೇಳಗೊಟ್ಟಿದೆ
ವಾಲುವ ಮನದ ಬಿಂಬ ಕಂಗಳಲಿ ಪ್ರತಿಫಲಿಸುತ್ತಿದೆ

ನಗುವ ಹೂಮೊಗ ತುಟಿಗೆ ಅದುರುವ ನಾಚಿಕೆಯಿದೆ
ಬಿಗುಮಾನವೇನೋ ಬಳ್ಳಿಯೊಡಲನೇ ತಬ್ಬಿದಂತಿದೆ
ಸಿಗುವ ನಳಿದೋಳಿನಲಿ ತೂಗಿ ನವಪಲ್ಲವ ಹಾಡಿದೆ

ಗಲ್ಲಕ್ಕಿಟ್ಟ ಕೈಯ್ಯಬೆರಳ ಬಣ್ಣ ಪ್ರೀತಿ ಗಾಢತೆ ಕಂಡಿದೆ
ನಲ್ಲನನೇ ಅನುಸರಿಸುತಿಹ ನೋಟ ಸೂತ್ರವೆಣೆದಿದೆ
ಬೆಲ್ಲಗಲ್ಲದಲ್ಲಿನ ಸವಿಯ ಮೊಗೆವಾಟ ಚೈತ್ರ ನಾಚಿದೆ

  1. ರಾಧೆಯ ಅಳಲು

ಬಂದಂತೆಯೆ ಹೊರಟ ರಾಧೆಯ ಗೊಲ್ಲನೆ ತಡೆವನೇನು
ಚಂದಮೊಗ ನೊಂದಹಾಗಿದೆ ಯಾರಿದರ ಕಾರಣವೇನು
ಗಂಧಘಮದಿ ಮರೆಸಿದೆ ಸೆರಗು ಕಣ್ಣಂಚಿನ ದುಖವನು

ಮೌನಮುನಿಸಿನ ಕಾರಣ ಕೇಳುವ ಸಮಯವಲ್ಲವೇನು
ಧ್ಯಾನವೇ ಕೊಳಲಿಡಿದು ಸ್ವರಹುಡುಕಿ ನುಡಿಸುವನೇನು
ಕಾನನದ ಗಿರಿಏರಿ ಕುಳಿತವನ ಬಳಿಬಂದಹೊರಟರೇನು

ನಿರೀಕ್ಷೆಗಳ ಒಲವ ಸಂಪುಟ ಕಣ್ಣಲಿ ಹನಿಗಟ್ಟಿದುದೇನು
ಪರೀಕ್ಷಿಸಿಹುದೆ ರಾಧೆ ಹುಸಿಕೋಪ ತಲ್ಲೀನ ಗೊಲ್ಲನನು
ಸರಿತಪ್ಪಿನರಿವಿಲ್ಲ ನಿರಾಸೆ ನಿಷ್ಟೂರ ಸಹಿಸಿ ಮೌನವನು

ಎಲ್ಲಬಲ್ಲ ಗೊಲ್ಲಗೆ ಒಲಿದ ಹೆಣ್ಣ ಮನವ ಅರಿಯನೇನು
ಕಲ್ಲಕರಗಿಸೊ ಸ್ವರಮಾಂತ್ರಿಕ ಸನಿಹವೆ ಸೂಜಿಗಲ್ಲೇನು
ನಲ್ಲನ ಮೇಲೆ ಹುಸಿಕೋಪ ಕರಗಿ ಬಿಗಿವ ತೋಳಲ್ಲೇನು

ನೋಡು ಕರಗಿಹಳು ತೆರೆದ ತೋಳಿನಲಿ ಮುಚ್ಚಿಕಣ್ಣನು
ಪಾಡುಪಟ್ಟುದುದು ದಿಟವೆ ಬೆರಳು ಒರೆಸಿ ಹನಿಗಣ್ಣನು
ಹಾಡು ಹರಿದಿಹುದಲ್ಲ ಕೊಳಲಲಿ ಅಮೃತ ಕಿವಿಗಿಂಪನು

  1. ಪ್ರಶ್ನೆಯೊಂದಿದೆ ಹೂವಿನಲಿ

ಹೂವಿಗೊಂದೇ ಪ್ರಶ್ನೆ ಮಾಲೆಗಟ್ಟಿ ಮಾರುತಿಹರೆ ನನ್ನನು
ಸಾವಿಗೋ ಸಡಗರಕೋ ಉದ್ದನೆ ಹೇರಳಿಗೊ ತಿಳಿಯೆನು
ಕಾವಿ ತೊಟ್ಟವರು ಪೂಜೆಗೇರಿಸೆ ಏತಕೊ ನಗುತಿರುವೆನು

ಬಿತ್ತಲಿಲ್ಲ ಬೀಜ ನೀರುಣಿಸಿ ಗೊಬ್ಬರ ಹಾಕಿದುದ ಕಾಣೆನು
ಮತ್ತಾವ ಹಕ್ಕು ನನ್ನ ಗಿಡದಿಂದ ಬಿಡಿಸಿರೆ ನೋಯನೇನು
ಕತ್ತೆತ್ತಿ ನೋಡದ ಮಧುಮಕ್ಕಳ ಕೊರಳ ಮಾಲೆಯಾದೆನು

ನಲ್ಲೆಯನೊಲಿಸೆ ಬೇಕು ಶೃಂಗಾರಕೆ ಸಿಂಗರಿಸುವರೆನ್ನನು
ಎಲ್ಲೆ ದಾಟೊ ಪರಿಮಳಕೆ ಮರುಳರು ಹೊಗಳುವರೆನ್ನನು
ಕಲ್ಲೆದೆಯನು ಕರಗಿಸೋ ಸೊಗವೆನ್ನದೆಲ್ಲ ಪ್ರೀತಿಗಾಣೆನು

ನವುರದೊಳದೊಡಲನಿಡಿದು ಕಟ್ಟುವರು ಮಾಲೆಯನು
ಕವುಚಿ ಬುಟ್ಟಿಗಳಲಿ ಮಾರುತಿರೆ ಹುಡುಕಲೇ ಸಜ್ಜನರನು
ಕಾವು ಏರಿಸಿ ಬಿಸಿಲಲಿ ನಳನಳಿಸೆ ಹೂಬನ ಮರೆವೆನೇನು

ಚೆಲುವಿನೊಡತಿಯ ಮುಡಿಯಲ್ಲಿ ನಗುವೆನಂದರು ಕವಿ
ಗೆಲುವಿಗೆ ಹಾರ ಕಳ್ಳ ಕೃಷ್ಣನ ಜುಟ್ಟತುದಿಗೆ ಸಿಕ್ಕಿಸಲೆ ಸವಿ
ಮೆಲುಮಾತುಗಳ ತೂಗುಮಂಚದಲರಡಿ ಪ್ರೀತಿ ಮನವಿ

‍ಲೇಖಕರು Admin

22 May, 2026

1 Comment

  1. Lakshmi H

    Chennagive kavanagalu Sir.

    Maresadiru nenapannu pade pade keluttheve.
    Dhanyavadagalu..
    Ananthalakshmi H Kurki

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading