ಕಪ್ಪುಹಕ್ಕಿಯ ಕಾರುಣ್ಯದ ರೆಕ್ಕೆಯೊಳಗೆ… 

ಅನುಪಮಾ ಪ್ರಸಾದ್

ಬೆಳಕು ನೆಲ ತಲುಪದ

ದಟ್ಟಡವಿಯ ಕಗ್ಗತ್ತಲ ಖಂಡದಲಿ

ಕರಿಗಂಬಳಿ ಹೊದ್ದು ಕೊಂಡಂತೆ

ಹುಟ್ಟಿದ ಕಪ್ಪುರೆಕ್ಕೆಯ ಪುಟ್ಟ ಹಕ್ಕಿಗೆ

ಕಣ್ಣು ತೆರೆಯುವ ಮೊದಲೇ

ಎದೆಗೆ ಇರಿದದ್ದು ಜೀವ ಯಾತನೆಯ ಕೂಗು..

ಸ್ವಚ್ಚಂದ ಉಸಿರಿಗಾಗಿ

ಪೊಟರೆಯಿಂದ ಕತ್ತು

ಹೊರಚಾಚಿದರೆ ಕಂಡದ್ದು

ವಲಸೆ ಬಂದ

ಬಿಳಿಗಿಡುಗನ ಬಲಿಷ್ಠ ರೆಕ್ಕೆಗಳಡಿ

ತನ್ನ ನೆಲದಲೇ ಅಮರಿ

ವಿಲಗುಡುತ್ತಿರುವ ಕಪ್ಪು ರೆಕ್ಕೆಗಳು

ತನ್ನವರೊಡನೆ ರೆಕ್ಕೆ ಬಿಚ್ಚಲು ಕಪ್ಪು ಹಕ್ಕಿಗೆ

ಬೇಕಿತ್ತು ತನ್ನದೇ ಆಕಾಶ

ಪುಟ್ಟ ಎದೆಗೂಡಿಗೆ ಬೇಕಿತ್ತು ಮುಗ್ಗು ಹೊಡೆಯದ ಗಾಳಿ..

ಕಪ್ಪುರೆಕ್ಕೆಗಳ ಮೂಲೆ ಮುದುರುಗಳ

ಕೊಡಹಿ ಬಿಚ್ಚಿ ಹರಡಿದರೆ ಗಬಕ್ಕನೆ

ಅಮುಕಿ ನೊರೆಯಲು ಹೊಣೆಯುತ್ತಿತ್ತು ಬಿಳಿರೆಕ್ಕೆ

ಮುಚ್ಚಿ ಮುದುಡಿದರೆ ಸೇದಿ ಹೋಗುವ ತನ್ನ ರೆಕ್ಕೆಗಳ

ಜೀವಮಿಡಿತದ ಕೂಗಿಗೆ ಕಪ್ಪುಹಕ್ಕಿಯ ಎದೆಗೂಡು ಲಾವವಾಗಿ

ದೇಹವೇ ವಜ್ರವಾಗಿ ರೆಕ್ಕೆ ಬಿಚ್ಚಿದೊಡನೆ

ಮುದುರಿ ಮುರುಟಿದ್ದ ಲಕ್ಷಲಕ್ಷ ಕಪ್ಪುರೆಕ್ಕೆಗಳೆಲ್ಲ

ಫಡಫಡನೆ ಹೊಡೆದುಕೊಂಡು ‘ಮಡಿಬಾ..(ಪಿತಾಮಹ) ಮಡಿಬಾ..’ ಎಂದು

ಕೊರಳೆತ್ತಿ ಹಾಡಿದ್ದೇ;

ಸೀಳಲೆರಗಿದ ಬಿಳಿಗಿಡುಗನ ಮುಳ್ಳುನಖಗಳೇ ಮೊಂಡಾಗಿ

ಕೊನೆಗೊಮ್ಮೆ ರಾಚುವ ದೈತ್ಯ ರೆಕ್ಕೆಗಳಾಚೆಯೂ ವಿಸ್ತರಿಸಿಕೊಂಡ

ಕಪ್ಪುಹಕ್ಕಿಯ ಕಾರುಣ್ಯ ತುಂಬಿದ ಪುಟ್ಟ ರೆಕ್ಕೆಗಳ

ಬೃಹತ್ ನೆರಳಲೇ ಗೂಡು ಕಟ್ಟಿದ

ಬಿಳಿಗಿಡುಗನೆದೆಯೊಳಗಿನ ಕುಟುಕುಟುಕುವ

ಪಾಪ ಭಯ ನಿರಂತರ ಜೀವಭಯವಾಗಿ

ವಿಶ್ರಾಂತಿಗೆ ನಡೆದವನ

ಕರೆಯುತಿದೆ ಮತ್ತೆ ಬಾ `’ಮಡಿಬಾ..’ ಮತ್ತೆ ಬಾ.. ‘ಮಡಿಬಾ..’

ಪಾಪ! ಗೊತ್ತಿಲ್ಲ ಅವುಗಳಿಗೆ

ಮಡಿಬಾ ತನ್ನುಸಿರ ತಾ ನಿಂತ ನೆಲಕೆ ಬಿತ್ತಿ ನಡೆದಿರುವನೆಂದು..

(ಮಂಡೇಲಾ ತೀರಿಕೊಂಡ ಕ್ಷಣದಲ್ಲಿ ದಕ್ಷಿಣ ಆಫ್ರಿಕಾದ ಬಿಳಿಯರ ಅತಂತ್ರ ಮನಸ್ಥಿತಿ, ಅಗೋಚರ ಭೀತಿಯ ನೆನೆದು ಆ ಕ್ಷಣದಲ್ಲಿ ಬರೆದಿಟ್ಟ ಸಾಲುಗಳನ್ನ ಎಲ್ಲೂ ಹೊರಗಿಟ್ಟಿರಲಿಲ್ಲ. ಇಂದು ಜಾರ್ಜ್ ಫ್ಲಾಯ್ಡ್ ಮೇಲೆ ಬಿಳಿಚರ್ಮ ಹೊದ್ದವರ ಜನಾಂಗೀಯ ಕ್ರೌರ್ಯದ ಅಸಹ್ಯಕರ ಕ್ರೂರ ನರ್ತನ ಮತ್ತೆ ಮತ್ತೆ ಇದನ್ನ ನೆನಪಿಸಿತು.)

‍ಲೇಖಕರು nalike

June 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Sudha Hegde

    ಆ ದೃಶ್ಯ ನೊಇಡಿದಾಗಿನಿಂದ ಬಾಯಿಂದ ಮಾತು ಹೊರಡುತ್ತಿಲ್ಲ

    ಪ್ರತಿಕ್ರಿಯೆ
    • Anupama prasad

      ಹ್ಹಂ.. ಸುಧಾ, ಮನುಷ್ಯನೊಳಗಿನ ಕ್ರೌರ್ಯ ಯಾವ ಯಾವ ರೂಪದಲ್ಲಿ ಹೊರ ಬರುವುದಿದೆಯೊ..

      ಪ್ರತಿಕ್ರಿಯೆ
  2. V s shanbhag mumbai

    ಬಹಳ ಕಾಲದ ಈ ಸಮಸ್ಯೆ ಮತ್ತೆ ತನ್ನ ಹರಿಕೆದರ ದಿರಲಿ.ನಿಮ್ಮ ಕವಿತೆ ಪಾಶವೀ ಕೃ ತ್ಯವನ್ನು ಅದರ ಎಲ್ಲ ಮಗ್ಗುಲು ಗಳ ಮೂಲಕ ಸೆರೆಹಿಡಿದಿದ್ದಿರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: