ನಿನ್ನೆರಡು ಕಣ್ಣುಗಳು

 ಜಿ.ಪಿ.ಬಸವರಾಜು

ಊರು ಕೇರಿಗಳನೆಲ್ಲ ಮೀರಿ

ಧಗಧಗ ಉರಿದ ಬೆಂಕಿಯ

ಜ್ವಾಲೆಗಳಲ್ಲಿ ನಿನ್ನೆರಡು ಕಣ್ಣುಗಳು

ನಿಗಿನಿಗಿ ಹೊಳೆಯುತ್ತಿವೆ ಜಾರ್ಜ್‍ ಫ್ಲಾಯ್ಡ್

 

ಅಮೆರಿಕ, ಬ್ರಿಟನ್ನು, ಫ್ರಾನ್ಸು, ಜರ್ಮನಿ

ಇಟಲಿ, ಸ್ವೀಡನ್ನು ಎಲ್ಲ ಬಿಳಿ ಭೂಮಿಗಳಲ್ಲಿ

ಥಟ್ಟನೆ ಎದ್ದುನಿಂತ ಕಪ್ಪು ಕಣ್ಣುಗಳು

ಹೊಳೆಯುತ್ತಿವೆ ಜಗದ ಬೆಳಕನ್ನೆಲ್ಲ ಹೀರಿ

 

ತಣ್ಣಗೆ ನೋಡುತ್ತಿವೆ ಆ ಕಣ್ಣುಗಳು: ಹಿಂಸೆ-

ಯ ಅಟ್ಟಹಾಸವನ್ನು, ಅಹಂಕಾರವನ್ನು

ಪಸೆ ಆರಿದ ಹೃದಯಗಳ ಬರಡುತನವನ್ನು

ನೋಡುತ್ತಿವೆ ಕನಿಕರದಿಂದ ಕರುಣೆಯಿಂದ

 

ಜಾರ್ಜ್‍ ಫ್ಲಾಯ್ಡ್, ಮುಚ್ಚಲಾಗದ ನಿನ್ನ ಕಣ್ಣುಗಳು

ನಿಶ್ಚಲ ಕಣ್ಣುಗಳು, ನೆಟ್ಟ ನೋಟದ ಕಣ್ಣುಗಳು

ನೋಡುತ್ತಿವೆ ಯುಗಕ್ಕೇ ಕಣ್ಣುನೆಟ್ಟಂತೆ, ಎಲ್ಲವನ್ನು

ಸಹಿಸುತ್ತ, ಎಲ್ಲ ಕಾಲಗಳ ತುಳಿತವನ್ನು ದರ್ಪ-

ದೌರ್ಜನ್ಯಗಳನ್ನು ನೋಡುತ್ತಿವೆ ಎವೆ ಪಿಳುಕಿಸದೆ

 

ಮುಚ್ಚಿದ ಜಗದ ಕಣ್ಣುಗಳ ತೆರೆಸಲು ನೋಡುತ್ತಿವೆ

ನಿನ್ನುಸಿರು ನಿಂತರೂ ನಿನ್ನ ಕಣ್ಣಬೆಳಕು ಕಂದುವುದಿಲ್ಲ,

ಕಿಡಿಕಾರುವುದಿಲ್ಲ, ಕ್ಷಣಕಾಲ ಜ್ವಾಲೆಗಳು ಧಗಧಗಿಸಿ

ಉರಿದಾಗಲೂ ನೋಡುತ್ತವೆ ತಣ್ಣಗೆ ಯುಗಯುಗದ

ತಲ್ಲಣಗಳಿಗೆ ಮೆಲುದನಿಯ ಕೊರಳಾಗಿ ಎದೆಯ ಹಾಡಾಗಿ

 

ಶ್ವೇತಭವನದ ನೆಲಮಾಳಿಗೆಯ ಕರಾಳ ಬಂಕುಗಳ

ಆಳದಲ್ಲಿರುವ ಕತ್ತಲೆಯ ಕಣ್ಣು ತೆರೆಸಲು ನೋಡುತ್ತಿವೆ

ಈ ಕಣ್ಣುಗಳು, ಹೊಳೆಯುವ, ಕೋರೈಸುವ ಕುಕ್ಕುವ

ಈ ಬೆಳಕನ್ನು ಎದುರಿಸಲಾರರು ಯಾರೂ, ತಡೆಯ-

ಲಾರದು ಏನೂ, ಶತಮಾನಗಳ ನೋವು ತುಂಬಿದ

ಈ ಕಣ್ಣುಗಳು ಹೇಳುವ ಕತೆಗಳು ಸಾಲು ಸಾಲು

ಬರೆಯಲಾರರು ಯಾರೂ ಈ ಕಣ್ಣುಗಳ ನಿರೂಪಗಳನ್ನು

ನೀನು ಮೊದಲಲ್ಲ, ಕೊನೆಯೂ ಅಲ್ಲ, ಕಪ್ಪನೆಯ

ಕರಾಳ ರಾತ್ರಿಯ ಬಾನುತುಂಬ ಬೆಳಕಿನ ಚುಕ್ಕೆ-

ಗಳು ಹೊಳೆಯುತ್ತಿವೆ ಬೆಳಗಲು, ಕತ್ತಲೆಯನ್ನು

ಕಳೆಯಲು, ಆ ಬೆಳಕಲ್ಲಿ ನೋಡಿಕೊಳ್ಳಲಿ ಎಲ್ಲರೂ

ತಮ್ಮ ಮುಖಗಳನ್ನು, ಬಣ್ಣಬಣ್ಣಗಳನ್ನು ಮರೆತು,

 

ನಿನ್ನ ಕೊನೆಯುಸಿರನ್ನು ಬಿಡಲಿಲ್ಲ ಅವರು ತುಳಿದರು

ನೆಲದಾಳಕ್ಕೆ, ತೀರದ ಚೈತನ್ಯ ನೀನು ಪುಟಿದೇಳುವೆ

ಭೂಮಿಯಾಳದ, ನೋವಿನಾಳದ, ಬಣ್ಣಗಳ ಆಳದ

ನೋವಿನಿಂದ, ಜಗದ ಕೊರಳಾಗಿ ಕೊರಳ ದನಿಯಾಗಿ,

 

ಚಾಟಿಯ ಏಟುಗಳು ಕಪ್ಪನೆಯ ಚರ್ಮ ಸುಲಿದಾಗ

ಕಬ್ಬಿಣದ ಸರಪಳಿಯು ಬಿಗಿದಾಗ ಉಸಿರುಕಟ್ಟಿದ

ಕಪ್ಪು ಜೀವಗಳು ಯಮ ಯಾತನೆಯ ನೋವಿನಲ್ಲಿ

ನಲುಗಿದಾಗ ನೋಡುತ್ತಲೇ ಇದ್ದವು ಈ ಕಣ್ಣುಗಳು

 

ಕಪ್ಪನೆಯ ಮೈಯಿಂದ ಹರಿದ ನೆತ್ತರು ಹೊಳೆಯಾಗಿ

ನದಿಯಾಗಿ ಒಡಲು ಬಿರಿದು ಕಡಲ ಕೂಡಿದಾಗ ನೀರೆಲ್ಲ

ಕೆಂಪು ಕೆಂಪು ಉಪ್ಪುಉಪ್ಪು, ಉಪ್ಪು ನೀರನ್ನೇ ಉಂಡು

ಬೆಳೆದ ಮೀನುಗಳೆಲ್ಲ ಮೇಲೆದ್ದು ಬಂದು ಹೇಳುತ್ತವೆ

ಬಣ್ಣಗಳ ಕತೆಯನ್ನು, ಕಣ್ಣುಗಳ ಕತೆಯನ್ನು, ನೆಲದಾಳದ,

ನೀರಿನಾಳದ, ಮನದಾಳಗಳ ಕೊನೆಯಿಲ್ಲದ ಕತೆಗಳನ್ನು

ಯುಗದಿಂದ ಯುಗಕೆ ನೆತ್ತರನು ಹರಿಸಿದವರ ಕತೆಯನ್ನು

 

ಬಣ್ಣವನ್ನೇ ಉಂಡು, ಬಣ್ಣವನ್ನೇ ಕಣ್ತುಂಬಿಕೊಂಡವರು

ಬಿಡಲಿಲ್ಲ ನಿನ್ನನ್ನು ಗಾಳಿ ತುಂಬಿಕೊಳ್ಳಲು ನಿನ್ನ ಕಪ್ಪು

ಒಡಲಿಗೆ, ನಿನ್ನ ಕತ್ತಿನ ಮೇಲಿಟ್ಟ ಕಾಲಿಗೆ ಇರಲಿಲ್ಲ ಕರುಣೆ

ಆಗಲೂ ನೀನು ತಣ್ಣಗೆ ನೋಡುತ್ತಿದ್ದೆ ಹಿಂಸೆಯ ಕರಾಳವನ್ನು

ಆಗಲೂ ನೀನು ಹಾಡುತ್ತಿದ್ದೆ ನಿನ್ನೊಡಲ ನಿಲ್ಲದ ಹಾಡನ್ನು

 

‘ಕಪ್ಪು ಜೀವವೂ ಲೆಕ್ಕಕ್ಕಿದೆ’ ಎಂಬ ಹಾಡು ತುಂಬುತ್ತಿದೆ

ಬೀದಿಬೀದಿಗಳನು, ಊರುಊರುಗಳನು ಗಡಿರೇಖೆಗಳ

ದಾಟಿ ಮೀಟುತ್ತಿದೆ ಎದೆಎದೆಯ, ನೆಲದ ದನಿಯ, ಎದೆ

ಸೆಟೆದು ನಿಂತವರು ಬಣ್ಣಗಳ ಮರೆತವರು ಕೇಳುತ್ತಿದ್ದಾರೆ

ಕಣ್ಣೀರಿನ ಬಣ್ಣ ಯಾವುದೆಂದು ಹೇಳಿಬಣ್ಣ ಯಾವುದೆಂದು

 

ಒಳಹೊರಗು ಬೆಳಗಿದರೆ ಬಾನತುಂಬ ಏಳು ಬಣ್ಣ

ಬಣ್ಣಗಳು ಬೆರೆತು ಕಣ್ಣು ತುಂಬುವುದು ಕಾಮನಬಿಲ್ಲು

ಯಾವ ಬಣ್ಣದಲಿ ಯಾವ ಬಣ್ಣ ಸಹಜ ಕೂಡುಬಾಳು

ಚರ್ಮದ ಬಣ್ಣ, ಕೂದಲಿನ ಬಣ್ಣ, ಕಣ್ಣು, ಹುಬ್ಬು, ನಾಲಗೆ

ಕೈಕಾಲುಗಳ ಅಸಲಿ ಬಣ್ಣ, ಬಗೆ ಭಿನ್ನ, ಹಗೆ ಎಲ್ಲಿ?

(ಅಮೆರಿಕದ ಮಿನಿಯಪೊಲಿಸ್‍ನಲ್ಲಿ ಪೊಲೀಸ್‍ ಕಸ್ಟಡಿಯಲ್ಲಿದ್ದ ಕಪ್ಪು ಮನುಷ್ಯ ಜಾರ್ಜ್ ಫ್ಲಾಯ್ಡ ನನ್ನು ಪೊಲೀಸ್‍ ಅಧಿಕಾರಿಯೊಬ್ಬ ಕೊಂದ ಬಗೆ ಇಡೀ ಜಗತ್ತನ್ನು ದಂಗುಬಡಿಸಿದೆ. ಅಮೆರಿಕ, ಇಂಗ್ಲಂಡ್, ಫ್ರಾನ್ಸ್ ಗಳಲ್ಲಿ ಕಪ್ಪು ಬಿಳಿ ಎನ್ನುವ ಭೇದವನ್ನು ಮರೆತು ಮಾನವತೆಯನ್ನು ಪ್ರೀತಿಸುವವರೆಲ್ಲ ಸಿಟ್ಟಿಗೆದ್ದು ಮಾನವ ಹಕ್ಕುಗಳಿಗಾಗಿ ಭಾರೀ ಪ್ರಮಾಣದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.)

‍ಲೇಖಕರು nalike

June 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಪ್ರಕಾಶ್ ಕೊಡಗನೂರ್

    ಜಾರ್ಜ್ ಫ್ಲಾಯ್ಡ್ ಸತ್ತು ಬದುಕಿದ ; ಆರಿಹೋಗಿದ್ದ ಸಂಘರ್ಷದ ದೀಪವನ್ನು ಮತ್ತೆ ಬೆಳಗಿಸಿದ. ಕಾವ್ಯ ತಟ್ಟಿತು ಕರುಳು.

    ಪ್ರತಿಕ್ರಿಯೆ
  2. ರಾಜು ಹೆಗಡೆ

    ಚೆನ್ನಾಗಿದೆ, ಇನ್ನೂ ಸಾಂದ್ರವಾಗಿ ಹೇಳಬಹುದಿತ್ತೇನೊ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: