–ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್
ಕನ್ನಡ ರಾಜ್ಯೋತ್ಸವ ಮತ್ತೊಮ್ಮೆ ಬಂದಿದೆ. ಆದರೆ ಈ ಉತ್ಸವಕ್ಕೆ ಅಡೆತಡೆಗಳು ಏನಿದೆ ಎಂಬುದನ್ನು ನಾವು ಗ್ರಹಿಸಬೇಕಿದೆ. ಏಕೆಂದರೆ ಕನ್ನಡ ನುಡಿ ಕೃತಕ ಬುದ್ಧಿಮತ್ತೆ ಯುಗದಲ್ಲಿ ಎಷ್ಟರ ಮಟ್ಟಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಜೀವಂತವಾಗಿದೆ. ಹಾಗೆಯೇ ಪ್ರಸ್ತುತ ದಿನಮಾನಗಳಲ್ಲಿ ಕನ್ನಡದ ಮಹತ್ವ ಹೇಗೆ ಕಡೆಗಣಿಸಲ್ಪಟ್ಟಿದೆ, ಕನ್ನಡಕ್ಕೆ ಒದಗಿರುವ ಆಪತ್ತಿನಿಂದ ಕನ್ನಡವನ್ನು ಕಾಪಾಡುವುದು ಹೇಗೆ ಎಂಬ ಆಲೋಚನೆ ಬಂದರೆ ಕನ್ನಡ ರಾಜ್ಯೋತ್ಸವದ ಆಚರಣೆಗೆ ಸಾರ್ಥಕತೆ ಬರುವುದು. ಕಿಲೋಮೀಟರ್ಗಳವರೆಗೆ ಕನ್ನಡದ ಬಾವುಟವನ್ನು ಹಿಡಿದರೆ ಕನ್ನಡ ಉಳಿಯಲು ಸಾಧ್ಯವೇ? ನವೆಂಬರ್ ಒಂದರಂದು ಕನ್ನಡಿಗರಾದ ನಾವು ಉಳಿದ ದಿನಗಳಲ್ಲಿ ಕನ್ನಡಿಗರಾಗಿ ಬದುಕುವುದಿಲ್ಲ ಏಕೆ ಎಂಬ ಹಲವು ಪ್ರಶ್ನೆಗಳೊಂದಿಗೆ ಈ ಲೇಖನ ನಿಮ್ಮೊಂದಿಗೆ ಮಾತನಾಡಲು ಬಯಸುತ್ತದೆ.
ತೀ.ನಂ.ಶ್ರೀಕಂಠಯ್ಯನವರ ‘ಕನ್ನಡಿಗನ ಕೊರಗು’ ಕವಿತೆಯಲ್ಲಿನ ಆತಂಕದ ನುಡಿಗಳು ನಮ್ಮ ಎದೆಗೆ ಬೀಳಬೇಕಾಗಿದೆ.
ಸೊಕ್ಕಿನಲಿ ಜೊತೆಯವರ ಕೂಟದಲಿ
ನಾವು ಸಮ ನಿಮಗೊಂದು ನುಡಿವ ಬಲವಿಲ್ಲ!
ಮಿಕ್ಕವರು ಕಡೆಗಣಿಸಿ ನೂಕಿದಾ ಕಡೆ ಬಿದ್ದು, ಯಾವ ಮಂಕೋ ಕವಿದು ಹುದುಗಿರುವೆವಲ್ಲ?
ಈ ಮೇಲಿನ ಸಾಲುಗಳು ಕನ್ನಡದ ಹಲವು ಸಂಕೀರ್ಣತೆಗಳನ್ನು ತೋರ್ಪಡಿಸುತ್ತಿದೆ.
ಕನ್ನಡ, ಕನ್ನಡಿಗ, ಕರ್ನಾಟಕವೆಂದು ಬೀಗುವ ಕಾಲ ಹೊರಟು ಹೋದಂತಿದೆ. ಏಕೆಂದರೆ ಕನ್ನಡತನಕ್ಕೆ ಬರಗಾಲ ಸೃಷ್ಟಿಯಾಗುತ್ತಿದೆ. ಕನ್ನಡ ಮಾತನಾಡುವ ಸ್ವಾತಂತ್ರ್ಯ ಸದ್ಯದಲ್ಲಿಯೇ ಜೈಲು ಸೇರಲಿದೆ. ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ ಮಹನೀಯರ ತ್ಯಾಗ ಬಲಿದಾನವನ್ನು ನಾವು ಅವಮಾನಿಸುತ್ತಿದ್ದೇವೆ.ಕಾರಣ ಕನ್ನಡ ನಮ್ಮ ಆತ್ಮದ ಭಾಷೆಯಾಗಿಲ್ಲ.ಅದು ಬಾಹ್ಯದ ಭಾಷೆಯಾಗಿ ಮಾರ್ಪಡುತ್ತಿದೆ.ಕನ್ನಡ ಆಯ್ಕೆ ಮಾಡುವ ಅಧಿಕಾರವು ನಮ್ಮದಲ್ಲ. ಏಕೆಂದರೆ ಬಂಡವಾಳ ಶಾಹಿಗಳ ಆಂಗ್ಲದ ವ್ಯಾಮೋಹಕ್ಕೆ ಕನ್ನಡ ಕಾಣೆಯಾಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಗ್ರಹಿಸಿದಾಗ ಸಾಫ್ಟ್ ವೇರ್ ಕ್ಷೇತ್ರದಲ್ಲಿ ದುಡಿಯುವ ಕನ್ನಡಿಗರಿಗೆ ಇತರೆ ರಾಜ್ಯದವರು ಗೌರವ ಕೊಡುತ್ತಿಲ್ಲ.ಕನ್ನಡ ನೆಲದಲ್ಲಿ ಸ್ಥಾಪನೆಯಾದ ಕಂಪನಿಗಳು ಕನ್ನಡಿಗರಿಗೆ ಉದ್ಯೋಗವನ್ನು ಒದಗಿಸುವಲ್ಲಿ ಹಿಂದೇಟು ಹಾಕುತ್ತಿವೆ.ಅಲ್ಲಿ ಕನ್ನಡ ಮಾತಾಡುವ ಹಕ್ಕು ಇಲ್ಲ. ನಾವು ನಮ್ಮತನ ಕಳೆದುಕೊಂಡು ಗುಲಾಮರಾಗುತ್ತಿದ್ದೇವೆಯೇ? ಎಂಬ ಸಂದೇಹ ಬರುತ್ತಿದೆ.
ಕನ್ನಡ ಮಾಧ್ಯಮಗಳ ಶಾಲೆ ಕ್ರಮೇಣ ಕಡಿಮೆಯಾಗುತ್ತಿವೆ. ಕನ್ನಡ ಕೇವಲ ಅಭಿಮಾನಕ್ಕೆ ಸೀಮಿತವಾಗಿ, ಆತ್ಮಹತ್ಯೆಗೆ ಸಿದ್ಧತೆ ನಡೆಸುತ್ತಿದೆ.ಕಾನ್ವೆಂಟ್ ಶಾಲೆಗಳಲ್ಲಿ ಕನ್ನಡ ಆಟಕ್ಕುಂಟು ಲೆಕ್ಕಕ್ಕಿಲ್ಲ, ಅಥವಾ ಪಠ್ಯವೇ ಇಲ್ಲ ಎಂಬಂತಾಗಿದೆ.ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಇರಬೇಕೆಂಬ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯ ಪ್ರಾಧಿಕಾರಗಳ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ.ಇದನ್ನು ನೋಡಿಯೂ ಕನ್ನಡಿಗರು ಕಣ್ಮುಚ್ಚಿ ಕುಳಿತಿದ್ದಾರೆನಿಸುತ್ತದೆ.
ಕುವೆಂಪು ಕನ್ನಡಿಗರ ಕನ್ನಡದ ಮನಸ್ಥಿತಿ ಪರಿಸ್ಥಿತಿಗಳ ಬಗ್ಗೆ,
‘ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ’ ಕವಿತೆ ಪ್ರಸ್ತುತ ಸಮಸ್ಯೆಗಳ ಹೂರಣವನ್ನು ಪ್ರತಿಬಿಂಬಿಸುತ್ತದೆ.
ಕೇವಲ ಕವಿ-ಕಾವ್ಯದ ಸಭೆ, ವಿಚಾರ ಸಂಕಿರಣ,ಸಮಾರಂಭಗಳಲ್ಲಿ ಕನ್ನಡ ಮೊಳಕೆ ಚಿಗುರಿ ನಶಿಸುತ್ತಿದೆ. ಅಕಾಡೆಮಿಗಳು ಬಲ್ಲವರ ದಾಳಗಳಾಗಿ ಕಾರ್ಯನಿರ್ವಹಿಸುತ್ತಿವೆ. ಕನ್ನಡ ಪ್ರೇಮ ತೋರಿಕೆಗಾಗಿ ಸಭೆಗಳು ಏರ್ಪಡುತ್ತಿವೆ. ಕನ್ನಡದ ಅಭಿಮಾನ ಲೆಕ್ಕಾಚಾರದಲ್ಲಿದೆ.ಹಣದ ವ್ಯಾಮೋಹದಲ್ಲಿದೆ. ಕನ್ನಡ ನಾಡು ನುಡಿಗಾಗಿ ಹೋರಾಟ ಮಾಡಿದ ಸಾಹಿತಿಗಳನ್ನ ವಿಚಾರವಾದಿಗಳನ್ನ ಆಯ್ಕೆ ಮಾಡದ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಈಗ ಕಂಗಾಲಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತೆ ಆಡಳಿತ ಅಧಿಕಾರಿಗಳ ಉಮೇದುವಾರಿಕೆ ಶುರುವಾಗಿದೆ. ನಿವೃತ್ತ ಅಧಿಕಾರಿಗಳು ಕನ್ನಡ ಸಾಹಿತ್ಯದ ಸೇವೆ ಮಾಡಲು ಸರ್ಕಾರದ ಅಂಗ ಸಂಸ್ಥೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇವರಿಂದ ಕನ್ನಡ ಸೇವೆ ಎಷ್ಟರಮಟ್ಟಿಗೆ ಗಟ್ಟಿಗೊಳಲು ಸಾಧ್ಯ. ಕನ್ನಡವನ್ನು ಗಟ್ಟಿಗೊಳಿಸುವ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಅವಕಾಶವನ್ನು ಸದಸ್ಯರು ಮತದಾನ ಮಾಡುವ ಮೂಲಕ ಕನ್ನಡತನವನ್ನು ಉಳಿಸಬೇಕು, ಬೆಳಸಬೇಕು.ಇಲ್ಲದಿದ್ದರೆ ಅಧಿಕಾರದ ವ್ಯಾಮೋಹದವರಿಗೆ ಮತ ಹಾಕಿದರೆ ಮತ್ತೆ ಕನ್ನಡ ಮನಸ್ಸುಗಳಿಗೆ ಮುಖಭಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬಂತೆ ಈ ಮೊದಲಿನ ಘಟನೆ ನಮಗೆ ಎಚ್ಚರಿಕೆ ಗಂಟೆಯಾದರೆ ಸಾಕು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಕನ್ನಡ ಮನಸ್ಸಿನ ಹೃದಯ ಶ್ರೀಮಂತಿಕೆಯ ಸೃಜನಶೀಲ ವ್ಯಕ್ತಿಯನ್ನು ಆಯ್ಕೆ ಮಾಡುವುದು ಒಳಿತು. ಇಲ್ಲದಿದ್ದರೆ ಇದೊಂದು ಪುಂಡಪೋಕರಿಗಳ ಪರಿಷತ್ತಾಗಿ ಪರಿಣಮಿಸಿ ಕನ್ನಡದ ಮಾನ ಹರಾಜಾಗುತ್ತದೆ.’ಕನಸಿನೊಳಗೊಂದು ಕಣಸು’ಕವಿತೆಯಲಿ ಬೇಂದ್ರೆ ‘ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ’ ಎಂಬ ಮಾತು ಅರಗಿಸಿಕೊಳ್ಳಲು ಸಾಧ್ಯವೇ? ಮುಂದಿನ ಕನ್ನಡ ಸಂಸ್ಕೃತಿ ಯ ಭವಿಷ್ಯ ಹೀಗಾಗಬಾರದು ಎಂಬ ಕಳಕಳಿಯ ಮಾತು ನೆನಪಾಗುತ್ತದೆ.
ಇನ್ನು ಕನ್ನಡ ಚಲನಚಿತ್ರಗಳ ಶೀರ್ಷಿಕೆಗಳು ಆಂಗ್ಲಮಯ. ಕನ್ನಡ ನಟರ ಬಿರುದು ಬಾವಲಿಗಳು ಆಂಗ್ಲವಾಗಿವೆ. ಕನ್ನಡ ಚಲನಚಿತ್ರಗಳ ಹಾಡು,ಸಂಭಾಷಣೆ ಆಂಗ್ಲವಾಗಿ ಕನ್ನಡ ಕ್ಷೀಣಿಸುತ್ತಿದೆ. ಸದಭಿರುಚಿಯ ಕನ್ನಡ ಅಭಿಮಾನ ಉದ್ಯಮವಾಗತೊಡಗಿದೆ. ಕನ್ನಡ ಚಲನಚಿತ್ರ ಅಕಾಡೆಮಿ ಕನ್ನಡ ಪರವಾಗಿ ಧ್ವನಿಯತ್ತದೆ ಮಂಕಾಗಿದೆ. ಕನ್ನಡದಲ್ಲಿ ಹೊಸ ಪದಗಳ ಟಂಕಸಾಲೆ ಬರಿದಾಗಿದೆಯೇ? ಜರ್ಮನಿಯಿಂದ ಬಂದ ಕಿಟ್ಟಲ್ ಕನ್ನಡ ಕಲಿತು ಕನ್ನಡ ಶಬ್ದಕೋಶವನ್ನು ರಚಿಸಿದ. ಇಂತಹ ಅಭಿಮಾನ ಹುಟ್ಟುವುದಕ್ಕೆ ನಾವು ಕಂಕಣ ಕಟ್ಟಿಕೊಳ್ಳಬೇಕಲ್ಲವೇ? ಸುದ್ದಿ ವಾಹಿನಿಗಳಲಿ ಬಳಸುವ ಭಾಷೆ ಮೂಡುವ ಅಕ್ಷರಗಳು ಎಲ್ಲವೂ ಆಂಗ್ಲದ ಅಧಿಪತ್ಯದ ಪ್ರತಿಷ್ಠಾಪನೆಗೆ ನಾಂದಿ ಹಾಡುತ್ತಿದೆ. ಖಾಸಗಿ ಬಾನುಲಿಗಳು ಕನ್ನಡವನು ಕೊಲ್ಲುತ್ತಿವೆ.
ಕನ್ನಡದಲ್ಲಿ ಸಂಶೋಧನೆ ಮಾಡಿದ ಸಂಶೋಧಕರನ್ನು ಗುರುತಿಸುವ ಜಾಯಮಾನವು ನಮ್ಮ ವಿಶ್ವವಿದ್ಯಾಲಯಗಳಿಗೆ, ಕನ್ನಡ ಮನಸ್ಸುಗಳಿಗೆ ಇಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಹಿಂದಾಗಿ ಜಾತೀಯತೆ ಮುಂದಾಗಿದೆ. ಶಿಫಾರಸು ಇರುವವರಿಗೆ ಮಾತ್ರ ಗೋಷ್ಠಿಗಳಲ್ಲಿ ಅವಕಾಶವನ್ನು ಕೊಡುವರು. ಪ್ರತಿಭೆಗಳನ್ನು ಇಲ್ಲಿ ಜಾತಿಯ ಲೆಕ್ಕದಲ್ಲಿ ಅಳಿಯಲಾಗುತ್ತಿದೆ.ಇನ್ನು ಸಾಹಿತಿಗಳ ಪ್ರತಿಷ್ಠಾನದ ಹೆಸರಲ್ಲಿ ಸಾಹಿತ್ಯ ಪರಿಸರ ಬೆಳೆಯುತ್ತಿದ್ದರು ಅದು ಕೂಡ ಗೌಣವಾಗಿದೆ. ಹೊಸ ತಲೆಮಾರಿನ ವಿದ್ವಾಂಸರಿಗೆ ವೇದಿಕೆಯನ್ನು ಕಲ್ಪಿಸಿಕೊಡದ ಹಿರಿಯ ಸಾಹಿತಿಗಳ ವರ್ಗ. ಹಿರಿಯರಾದವರು ಕಿರಿಯರನ್ನು ಪಕ್ಕದಲ್ಲಿಟ್ಟು ತಿದ್ದಬೇಕಲ್ಲವೇ?
ಈ ಕನ್ನಡ ಮನಸ್ಥಿತಿಯವರು ಸ್ವ ವಿಮರ್ಶೆ ಮಾಡಿಕೊಳ್ಳಬೇಕಲ್ಲವೇ?
ತಾಲೂಕು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗಳಲ್ಲಿನ ಅನುದಾನದ ಕೊರತೆ, ಅನುಭವಿಗಳ ಕೊರತೆ. ಎಲ್ಲಾ ಜನಾಂಗದವರಿಗೆ ಸರಿಸಮಾನವಾದ ಸ್ಥಾನಮಾನ ಹಂಚಿಕೆಯಾಗಿಲ್ಲ. ಪ್ರತಿಷ್ಠಿತ ಜಾತಿಯ ಸಮುದಾಯದ ವ್ಯಕ್ತಿ ಅದನ್ನು ನಿಯಂತ್ರಿಸುತ್ತಿದ್ದಾನೆ.ಇದು ಕನ್ನಡಕ್ಕೆ ಮಾಡುವ ಮಹಾದ್ರೋಹವೆಂದು ಕನ್ನಡಪರ ಹೋರಾಟಗಾರರು ಧ್ವನಿ ಎತ್ತಬಾರದೆ?
ಪ್ರತಿಯೊಂದು ವ್ಯಾಪಾರ ವಹಿವಾಟುಗಳಲ್ಲಿ ಕನ್ನಡ ಭಾಷೆ ಮಾಯವಾಗಿದೆ .ಆಂಗ್ಲ ಅವತರಣಿಕೆಯಲ್ಲಿ ಅಂಗಡಿಗಳ ಹೆಸರು ನಮೂ ದಾಗಿರುತ್ತದೆ.ಯಾಂತ್ರಿಕ ಯುಗದಲ್ಲಿ ಇದು ಅನಿವಾರ್ಯವೆಂಬಂತೆ ಬಂಡವಾಳ ಶಾಹಿಗಳು ತಮ್ಮ ಮೊಂಡುತನ ತೋರಿಸುತ್ತಿದ್ದಾರೆ. ಭೌತಿಕವಾಗಿ ದೇಹ ಮಾತ್ರ ಕನ್ನಡ. ಆದರೆ ಆತ್ಮ ಕನ್ನಡವಾಗಿ ಕಾಣಿಸುತ್ತಿಲ್ಲ.ಹೀಗೆ ಮುಂದುವರಿದರೆ ಕನ್ನಡದ ಅಸ್ಮಿತೆಯನ್ನು ನಮ್ಮ ಮಕ್ಕಳಿಗೆ ಹೇಳಲು ಅಸಾಧ್ಯವಾಗುತ್ತದೆ.ಕನ್ನಡ ಪರಿಸರವನ್ನು ನಾವು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದೇವೆ.ಬ್ಯಾಂಕಿನ ವಹಿವಾಟುಗಳಲ್ಲಿ ಕನ್ನಡ ಕಾಣಿಸುವುದೇ ಇಲ್ಲ. ಮಾತನಾಡುವದಂತು ದೂರದ ಮಾತು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.ಕನ್ನಡವೇ ಸತ್ಯ,ಕನ್ನಡವೇ ನಿತ್ಯ ಎಂಬ ಮಾತಿಗೆ ತೂಕವಿಲ್ಲ . ಅದರ ಸತ್ವ ಸ್ವರೂಪ ಹಳಿಸುತ್ತಿದೆ. ರಂ. ಶ್ರೀ ಮುಗುಳಿ ಅವರ ‘ಎಂಥ ನಾಡಿದು’ ಕವಿತೆಯಲ್ಲಿನ “ಹುಲುಸಾಗಿ ಬೆಳೆ ಹೋಗಿ, ಹುಲ್ಲು ಕೊಳೆ ತುಂಬಿಹುದೋ “ಎಂಬ ಸಾಲುಗಳು ನಿಜವಾಗುವ ಭಯ ಕಾಡುತ್ತಿದೆ. ನಮ್ಮ ನಾಡಿನ ಶ್ರೀಮಂತ ಇತಿಹಾಸವನ್ನು ಮರೆತು ಜೀವಿಸುತ್ತಿದ್ದೇವೆಯೇ ಎಂಬ ನಾಚಿಕೆ ನಮಗೆ ಬರುತ್ತಿಲ್ಲವೆಂಬುವುದೇ ಸೋಜಿಗ. ‘ಕನ್ನಡ ನುಡಿ ನನ್ನ ಜೀವಿತದ ಅನ್ನ’ವಾಗಲಿ ಎಂಬ ಕವಿತೆಯ ಕೊನೆಯ ಸಾಲುಗಳು ಕನ್ನಡ ಮರೆತ ಮನಸುಗಳಿಗೆ ಸಂಜೀವಿನಿಯಾಗಲಿ.
ಕನ್ನಡ ನಾಡಿಗಾಗಿ ದುಡಿಯುತ್ತಿರುವ ಕನ್ನಡ ವೇದಿಕೆಗಳು ಸಮಂಜಸವಾದ ರೀತಿಯಲ್ಲಿ ಕನ್ನಡವನ್ನು ಕಟ್ಟುವಲ್ಲಿ ಸೋಲುತ್ತಿವೆ.ಕನ್ನಡಕ್ಕಾಗಿ ನೂರೊಂದು ಸಂಘ ಸಂಸ್ಥೆಗಳು ಒಡಕುಗೊಂಡಿವೆ. ಸ್ವ ಪ್ರತಿಷ್ಠೆಯಲ್ಲಿ ಆರ್ಭಟ ಹೆಚ್ಚಾಗಿ ಕನ್ನಡವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದಂತೆ ಭಾಸವಾಗುತ್ತಿದೆ. ಬೇರೆ ರಾಜ್ಯ ದವರು ಕರ್ನಾಟಕದಲ್ಲಿ ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಬೇರೆ ರಾಜ್ಯದವರ ದರ್ಬಾರ್ ಶುರುವಾಗಿ ಬಹಳಕಾಲವಾಯಿತು. ಗಡಿಗಳಲಿ ಕನ್ನಡ ಭಾಷೆ ಅನಾಥವಾಗಿದೆ. ಕನ್ನಡದ ಕಾನೂನುಗಳು ಅನ್ಯರಿಗೆ ಅನ್ವಯಿಸುವ ನಿಟ್ಟಿನಲ್ಲಿ ಕನ್ನಡ ಪ್ರೇಮವನ್ನು ಹುಟ್ಟು ಹಾಕಬೇಕಾಗಿದೆ. ‘ವಿಶ್ವ ಲಿಪಿಗಳ ರಾಣಿ’ ಇಂದು ಅನಾಥ ಪ್ರಜ್ಞೆಯಲ್ಲಿದೆ.
ಕನ್ನಡದ ಮೇಲೆ ಪ್ರೀತಿ ಅಭಿಮಾನ ಇದ್ದರೆ ಸಾಲದು.ಅದು ಕಾರ್ಯ ಪ್ರವೃತ್ತಿಯಲ್ಲಿ ಕಾಣಬೇಕು.ಕನ್ನಡಿಗರು ಎಲ್ಲಾ ಭಾಷೆ,ಧರ್ಮಗಳ ಸಹಿಷ್ಣುಗಳು.ಒಂದೇ ಶ್ರೇಷ್ಠವೆಂಬ ಪರಿಕಲ್ಪನೆಯಲ್ಲಿ ಕರ್ನಾಟಕವಿಲ್ಲ.ಕರ್ನಾಟಕ ಸಣ್ಣ ಭಾರತವೆಂದರೆ ತಪ್ಪಿಲ್ಲ. ವಿಶ್ವ ವಿನೂತನ ಕನ್ನಡ ಪ್ರಜ್ಞೆ ಜಗತ್ತಿನಾದ್ಯಂತ ಚದುರಿದೆ. ಆದರೆ ಕನ್ನಡ ಮನಸ್ಸುಗಳು ಸಂಕುಚಿತಗೊಂಡಿವೆ.ಕನ್ನಡ ಅಂಕಿಗಳು ಬಳಸುವವರಿಲ್ಲದೆ ಅನಾಥವಾಗಿವೆ. ಆಂಗ್ಲ ಅಂಕಿಗಳ ಸಾಮ್ರಾಜ್ಯದ ಮುಂದೆ ಕನ್ನಡ ಸಂಖ್ಯೆಗಳು ಕಣ್ಣಿದ್ದು ಕುರುಡಾಗಿವೆ. ಅವುಗಳ ಅಸ್ತಿತ್ವಕ್ಕಾಗಿ ಹೋರಾಟ ಯಾರು ಮಾಡಬೇಕೆಂಬ ಪ್ರಶ್ನೆ ಎದುರಾಗಿದೆ.ಕರುನಾಡಿನಲಿ ಕನ್ನಡ ಕಣ್ಮಣಿಯಾಗಿ ಪ್ರಕಾಶಿಸಬೇಕು. ಕುವೆಂಪು ಅವರ
‘ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನನಡವಾಗಿರು’ ಎಂಬ ಕವಿಯ ಆಶಯ ಗಾಳಿ ಗೋಪುರವಾಗದಿರಲಿ.
ಕುವೆಂಪುರವರು ಕನ್ನಡಕ್ಕೆ ಆಗುವ ಸಂಕಷ್ಟಗಳನ್ನು ಈ ಮೊದಲೇ ಅರಿತಿದ್ದರೆ ಅನಿಸುತ್ತದೆ.
“ಪರಕಿಯರೆಲ್ಲರಾಶೀರ್ವಾದ ಕರವೆತ್ತಿ
ಹರಸುತ್ತ ಬರುವರೈ ಮೊದಲು ಮೊದಲು ಕಡೆಗದುವೆ ಕುತ್ತಿಗೆಗೆ ಕರವಾಳವಾಗುವುದು ನಮ್ಮ ನಾಲಗೆ ನಮಗೆ ಕೀಳುತೊದಲು” ಎಂಬ ನುಡಿಗಳು ಎಚ್ಚರಿಸುತ್ತಿವೆ.ನಮ್ಮ ನಾಡಿನಲ್ಲಿ ನಾವು ಪರಕೀಯರಾಗುವ ಕಾಲ ಸನ್ಹಿತವಾಗಿದೆ ಎಂಬ ದೂರ ದೃಷ್ಟಿ ಇದೆ. ವ್ಯಾಪಾರದ ನೆಪದಲ್ಲಿ ಬ್ರಿಟಿಷರು ಭಾರತವನ್ನು
ಆಳಿದ ಹಾಗೆ ಕನ್ನಡವನ್ನು ಅನ್ಯಭಾಷಿಕರು
ನಿರ್ನಾಮ ಮಾಡಲು ತಂತ್ರ ರೂಪಿಸುತ್ತಿದ್ದಾರೆಯೇ?
ಕನ್ನಡ ಭಾಷೆ ಎಲ್ಲಾ ಭಾಷೆಗಳನ್ನು ಒಳಗೊಂಡು ಸಮೃದ್ಧಿಯ ಸಂಕೇತವಾಗಿದೆ ಆದರೆ ಈ ಒಳಗೊಳ್ಳುವಿಕೆಯೇ ಮುಂದೊಂದು ದಿನ ಕನ್ನಡ ಭಾಷೆಯ ಅಳಿವಿಗೆ ದಾರಿ ಮಾಡಿಕೊಡುತ್ತದೆ ಎಂಬ ಆತಂಕವು ಮನೆ ಮಾಡಿದೆ ಈಗಾಗಲೇ ಬಹಳಷ್ಟು ಪದಗಳು ಸಂಸ್ಕೃತ, ಪೋರ್ಚುಗೀಸ್ , ಉರ್ದು, ಹಿಂದಿ, ತಮಿಳ್, ತೆಲುಗು, ಮರಾಠಿ, ಕೊಂಕಣಿ, ಇಂಗ್ಲಿಷ್ ಭಾಷೆಗಳು ಸಮ್ಮಿಶ್ರವಾಗಿ ಕನ್ನಡ ರೂಪ ಪಡೆಯುತ್ತಿದೆ.ಕನ್ನಡದ ಸಾಹಿತ್ಯ ಕೃತಿಗಳು ಅನ್ಯ ಭಾಷೆಗಳಿಗೆ ಅನುವಾದಗೊಳ್ಳುವುದು ಅಪರೂಪ. ಆದರೆ ಅನ್ಯ ಭಾಷೆಯಿಂದ ಕನ್ನಡಕ್ಕೆ ಬರುವ ಅನುವಾದಗಳೆ ಹೆಚ್ಚಾಗಿವೆ. ಹಾಗಾದರೆ ಕನ್ನಡದ ಅಸ್ಮಿತೆ ಗುರುತಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಪ್ರತಿಯೊಬ್ಬರನ್ನು ಕಾಡುವಂತಾಗಲಿ. ಕುವೆಂಪು ಅವರು ಹೇಳುವ ಹಾಗೆ ‘ಇರುವಲ್ಪ ಶಕ್ತಿಯನ್ನು ಇರುವಲ್ಪ ದ್ರವ್ಯವನ್ನು ಪರಭಾಷೆಮೋಹಕ್ಕೆ ಚೆಲ್ಲಬೇಡಿ ‘ ಎಂಬ ಮಾತನ್ನು ಕೇಳಿಸಿ ಕೊಳ್ಳದೆ ಹೋದರೆ ಕನ್ನಡ ಕನ್ನಡಿಗ ಕರ್ನಾಟಕ ಕೇವಲ ವಸ್ತು ಸಂಗ್ರಹಾಲಯದಲ್ಲಿರುವ ವಸ್ತುಗಳಾಗಿ ನೋಡಬೇಕಾದ ದಿನಗಳು ದೂರವಿಲ್ಲ.
ಹಾಗಾಗಿ ಬೆನಗಲ್ ರಾಮರಾಯರ ಈ ಕೆಳಗಿನ ಸಾಲುಗಳನ್ನು ಎಚ್ಚರಿಕೆಯಿಂದ ಮಗನ ಮಾಡಿಕೊಳ್ಳುವುದು ಅನಿವಾರ್ಯ.
ಕನ್ನಡವೇ ಧನ ಧಾನ್ಯ,ಕನ್ನಡವೇ ಮನೆ ಮಾನ್ಯ, ಕನ್ನಡವೇ ಎನಗಾಯಿತು,ಕಣ್ಣು ಕಿವಿ ಬಾಯಿ. ಎಂಬ ಸಾಲುಗಳು ಅಡಿಯಿಂದ ಮೂಡಿವರೆಗೆ ಅಪ್ಪಿಕೊಳ್ಳಬೇಕು ಒಪ್ಪಿಕೊಳ್ಳಬೇಕು ಅಂದಾಗ ಮಾತ್ರ ಕರ್ನಾಟಕದ ಏಕೀಕರಣದ ಯಶೋಗಾಥೆ ಚಿರಾಯುವಾಗಿರಲು ಸಾಧ್ಯ. ಸಿರಿಗನ್ನಡ ನಮ್ಮ ಬಾಳಿನ ಉಸಿರಾಗಲಿ,ಹಸಿರಾಗಲಿ,ಮನೆಯ ದೀಪವಾಗಲಿ ಮನಮನದ ರೂಪವಾಗಲಿ, ಸರ್ವರ ಏಳಿಗೆಗೆ ಕನ್ನಡ ಮುನ್ನುಡಿ ಬರೆಯಲಿ.
ಏಕೆಂದರೆ ಕನ್ನಡವೇ ನಮಗೆ ಬಂಗಾರವಾಗಬೇಕೆಂದು ದಿನಕರ ದೇಸಾಯಿ ಅವರು ‘ನನ್ನ ಬಂಗಾರ’ ಕವಿತೆಯಲ್ಲಿ ಕನ್ನಡವನ್ನು ಕುರಿತು ನುಡಿದ ಮಾತುಗಳು ಅದ್ಬುತ.
“ಬಂಗಾರವೆನ್ನುವುದು ಕನ್ನಡ ಭಾಷೆ
ನುಡಿಯಲ್ಲಿ ಒಡ ಮೂಡುವುದು ನನ್ನ ಆಸೆ
ನನ್ನ ಮಡದಿಗೆ ಕೂಡ ಕನ್ನಡವೇ ಚಿನ್ನ
ಕನ್ನಡದ ನುಡಿ ನನ್ನ ಜೀವಿತದ ಅನ್ನ “
ಕನ್ನಡ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕನ್ನಡ ಅನ್ನ ಕೊಡುವ ಭಾಷೆಯಾಗಲಿ ಎಂಬ ಹಾರೈಕೆಯೇ ಬಹುದೊಡ್ಡದು .
‘ಕನ್ನಡಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದಾ
ಜೋಗುಳದ ಹರಕೆ ಇದು
ಮರೆಯದಿರು ಚಿನ್ನ…






0 Comments