-ದಸ್ತಗೀರಸಾಬ್ ದಿನ್ನಿ
ಮಗುವಿನ ಅಳು….
ಕನಸು ಮೊಳಕೆ ಒಡೆದ ರಾತ್ರಿ
ಸುತ್ತಲೂ ಬೆಳದಿಂಗಳು ಹಬ್ಬಿದೆ.
ಯಾಕೋ ಓಣಿಯ ನಾಯಿ ಅರಚುತಿದೆ
ಬೀಸುವ ಗಾಳಿಗೆ
ಎಲೆಗಳು ಸದ್ದು ಮಾಡುತ್ತ ಬಿದ್ದವು.
ಮನೆಯ ಎದುರಿನ ಗುಡ್ಡ
ಬಣ್ಣ ಮೆತ್ತಿಕೊಂಡ ಲಲನೆಯಂತೆ ಕಾಣುತಿದೆ.
ಗುಡ್ಡದ ಆಚೆಯ ನದಿ ಮೌನವಾಗಿ ಹರಿಯುತಿದೆ
ಅದರ ಕಾಲು ನೋಯುತಿರಬಹುದು
ಸಂಕೋಚದಿ ಹೇಳುತ್ತಿಲ್ಲ .
ಊರ ಅಂಚಿನ ಗುಡಿಯಿಂದ
ಶರೀಫರ ಗೀತೆ ತೇಲಿ.. ತೇಲಿ ಬರುತಿದೆ
ಎದೆ ಹಾಲಿಗೆ ರಚ್ಚೆ ಹಿಡಿದು ಮಗು ಅಳುತಿದೆ
ಮಗ್ಗಲು ಬದಲಿಸಿ ತಲೆ ಸವರಿ
ಸಮಾಧಾನ ಮಾಡುವ ಪ್ರೀತಿಯ ಕೈಗೆ
ಅದರ ಮನ ಕರಗುತ್ತಿಲ್ಲ .
ಕಳ್ಳ ಬೆಕ್ಕು ಮೆಲ್ಲನೆ ಅಡಿಗೆ ಮನೆಗೆ
ಹೆಜ್ಜೆ ಹಾಕುತಿದೆ
ಗುಡುಗು… ಸಿಡಿಲು….
ಚಿಟ್ ಚಿಟ್….. ಚಿಡಿಲ್…ಚಿಟ್ ಚಿಡಿಲ್…
ರೊಯ್ಯ….. ಎನ್ನುವ ಗಾಳಿ
ಬಿಟ್ಟು ಬಿಡದೆ ಸುರಿಯುವ ಮಳೆ
ಯಾರೋ ಒಂದೇ ಸವನೆ
ಬಾಗಿಲು ಬಡಿಯುತ್ತಿದ್ದಾರೆ…..
ಬೇಗ ಬಾಗಿಲು ತೆಗಿರೋ…. ಬಾಗಿಲು
ಈಗ
ಮಗುವಿನ ಅಳು ಕೇಳುತ್ತಿಲ್ಲ .






0 Comments