-ಸತ್ಯರಂಗಸುತ
ಮನುಷ್ಯ ಸಂಬಂಧಗಳು ಒಂದು ನದಿಯಿದ್ದಂತೆ. ಅದು ಹರಿಯುವಾಗ ತನ್ನ ದಡಗಳನ್ನು ಸವರುತ್ತಾ, ಮಣ್ಣಿನ ಘಮವನ್ನು ಹೊತ್ತು ಮುಂದಕ್ಕೆ ಸಾಗುತ್ತದೆ. ಆ ದಡಗಳೇ ಅದರ ಸೌಂದರ್ಯ, ಆ ಒಡನಾಟವೇ ಅದರ ಜೀವಾಳ. ಆದರೆ ಇಂದು, ಅತಿವೇಗದ ಬದುಕಿನ ಬಿರುಗಾಳಿಯಲ್ಲಿ ಆ ನದಿ ಬತ್ತಿಹೋಗುತ್ತಿದೆಯೇ? ಅಥವಾ ನಾವು ಮನುಷ್ಯರೇ ಅದರ ದಡಗಳಿಂದ
ಬಹಳ ದೂರ ಸರಿದುಬಿಟ್ಟಿದ್ದೇವೆಯೇ?. ನಾವೆಲ್ಲರೂ ಕುಳಿತು ಆಲೋಚಿಸಬೇಕಾದ ಗಹನ ವಿಚಾರವಿದು.
ಕಳೆದ ವರ್ಷ ಚಿತ್ರದುರ್ಗದ ಒಂದು ಮನೆಯೊಳಗೆ ಆರು ಜನರ ಅಸ್ಥಿಪಂಜರಗಳು ಪತ್ತೆಯಾಗಿದ್ದ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತು. ಆದರೆ ಆ ಘಟನೆಯ ಅತ್ಯಂತ ಭಯಾನಕ ಅಂಶ ಅಸ್ಥಿಪಂಜರಗಳಲ್ಲ. ಆರು ಜೀವಗಳು ಈ ಲೋಕದಿಂದ ಮರೆಯಾಗಿದ್ದರೂ, ಹಲವಾರು ತಿಂಗಳುಗಳ ಕಾಲ ಅವರ ಬಗ್ಗೆ ಯಾರೂ ವಿಚಾರಿಸದಿರುವುದು, ಅವರ ಮನೆ ಬಾಗಿಲು ತೆರೆಯದೇ ಇದ್ದರೂ ಯಾರೂ “ಏನಾಯಿತು?” ಎಂದು ಕೇಳದಿರುವುದೇ ನಿಜವಾದ ದುರಂತ. ಹಾಗಾದರೆ ಆ ಆರೂ ಜನ ಯಾರ ಸಂಪರ್ಕವೂ ಇಲ್ಲದೇ ದ್ವೀಪಗಳಂತೆ ಬದುಕಿದ್ದರೇ?. ಇದು ಕೇವಲ ಒಂದು ಮನೆಯ ಸಾವುಗಳ ವಿಶ್ಲೇಷಣೆಯಲ್ಲ; ಈ ಕಾಲದ ಸಂಬಂಧಗಳ ಮೌನ ಸಮಾಧಿಯ ಕಥೆ.
ಒಂದು ಕಾಲದಲ್ಲಿ ಕುಟುಂಬ ಎಂದರೆ ಕೇವಲ ನಾಲ್ಕು ಗೋಡೆಗಳ ಮನೆ ಅಲ್ಲ; ಅದು ಭಾವನೆಗಳ ಸಾಮ್ರಾಜ್ಯವಾಗಿತ್ತು.ತುಂಬಿದ ಕುಟುಂಬಗಳಲ್ಲಿ ಅಜ್ಜ-ಅಜ್ಜಿ, ಚಿಕ್ಕಪ್ಪ-ದೊಡ್ಡಪ್ಪ, ಅತ್ತೆ-ಮಾವ ಮಕ್ಕಳು ಮೊಮ್ಮಕ್ಕಳು ಎಲ್ಲರೂ ಒಂದೇ ಗೂಡಿನಡಿ ಬದುಕುತ್ತಿದ್ದರು. ಸಂಬಂಧಗಳು ರಕ್ತದಿಂದ ಮಾತ್ರವಲ್ಲ, ಹೃದಯದಿಂದಲೂ ಬೆಸೆದಿದ್ದವು.
ಆಗ ಹಳ್ಳಿಯಲ್ಲಿ ಒಂದು ಮಗುವಿಗೆ ಜ್ವರ ಬಂದರೂ ಇಡೀ ಬೀದಿಗೆ ಗೊತ್ತಾಗುತ್ತಿತ್ತು. ಯಾರ ಮನೆಯಲ್ಲಾದರೂ ಮದುವೆ ಎಂದರೆ ಅದು ಆ ಮನೆಯ ಕಾರ್ಯಕ್ರಮವಾಗಿರಲಿಲ್ಲ; ಊರಿನ ಸಂಭ್ರಮವಾಗುತ್ತಿತ್ತು. ಸಾವು ನೋವು ಸಂಭವಿಸಿದರೆ ಇಡೀ ಊರೇ ಕಣ್ಣೀರಾಗುತ್ತಿತ್ತು ಮಿಡಿಯುತ್ತಿತ್ತು. ಸಂತೋಷ ಬಂದರೆ ಎಲ್ಲರೂ ಸೇರಿ ಸಂಭ್ರಮಿಸಿ ನಗುತ್ತಿದ್ದರು. ಅಳುವುದಾದರು ಕೂಡ. ಸಂಜೆಯ ಹೊತ್ತಿಗೆ ಮನೆಯ ಮುಂಭಾಗ ಕುಳಿತಿದ್ದ ಅಜ್ಜಿ, ಹೊಲದಿಂದ ಮಗ ಬಂದನೋ, ಶಾಲೆಯಿಂದ ಮೊಮ್ಮಗ ಬಂದನೋ, ಅತ್ತೆಮನೆಯಿಂದ ಮಗಳು ಪತ್ರ ಬರೆದಳೋ ಎಂದು ದಾರಿಯತ್ತ ಕಣ್ಣಿಟ್ಟು ಕಾಯುತ್ತಿದ್ದಳು. ಆ ಕಾಳಜಿಯೇ ಮಧುರ ಸಂಬಂಧಗಳ ಜೀವಾಳವಾಗಿತ್ತು. ಏಕೆಂದರೆ ಅಂದು ಮೊಬೈಲ್ ಇರಲಿಲ್ಲ; ಆದರೆ ಮನಸ್ಸುಗಳು ಸಂಪರ್ಕದಲ್ಲಿದ್ದವು.
ಆದರೆ ಇಂದು ನಮ್ಮ ಮೊಬೈಲ್‌ನಲ್ಲಿ ನೂರಾರು ಸಂಖ್ಯೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ‘ಫ್ರೆಂಡ್ಸ್’ ಇದ್ದಾರೆ. ಆದರೆ ಪಕ್ಕದ ಮನೆಯವರ ಹೆಸರು ಕೂಡ ಗೊತ್ತಿಲ್ಲದ ಪರಿಸ್ಥಿತಿಗೆ ನಾವು ಬಂದು ನಿಂತಿದ್ದೇವೆ.ಎಷ್ಟೋ ಮಕ್ಕಳಿಗೆ ಅಜ್ಜಿ ತಾತ ಮತ್ತಿತರ ಹತ್ತಿರದ ಸಂಬಂಧಿಕರ ಹೆಸರೇ ಗೊತ್ತಿಲ್ಲ. ಹೆಸರಿಗಷ್ಟೇ ಇಲ್ಲಿ ಸಾವಿರಾರು ಸಂಪರ್ಕಗಳು, ಆದರೆ ಒಂದರಲ್ಲೂ ಹೃದಯಪೂರ್ವಕ ಆತ್ಮೀಯತೆ ಇಲ್ಲ. ಒಂದು ಕಾಲದಲ್ಲಿ ಎರಡು ದಿನ ಮನೆ ಬಾಗಿಲು ತೆರೆಯದಿದ್ದರೆ ನೆರೆಹೊರೆಯವರು ವಿಚಾರಿಸುತ್ತಿದ್ದರು. ಇಂದು ವರ್ಷಗಳಾದರೂ ಒಬ್ಬರ ಬದುಕು-ಸಾವಿನ ಬಗ್ಗೆ ಯಾರಿಗೂ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವರ್ಷಗಳಿಂದ ಪಕ್ಕದ ಮನೆಯವರೊಂದಿಗೆ ವಾಸಿಸುತ್ತಿದ್ದರೂ, ಅವರ ನೋವು-ನಲಿವುಗಳ ಬಗ್ಗೆ ತಿಳಿಯದ ಜನರಿದ್ದಾರೆ. ಲಿಫ್ಟ್‌ನಲ್ಲಿ ಭೇಟಿಯಾದಾಗ ಒಂದು ಸಣ್ಣ ನಗು ಕೂಡ ವಿನಿಮಯವಾಗದ ದಿನಗಳು ಬಂದಿವೆ. ಮನೆಯ ಪಕ್ಕದಲ್ಲಿರುವ ಮನುಷ್ಯನಿಗಿಂತ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಸಾಮಾಜಿಕ ಜಾಲತಾಣದ ವ್ಯಕ್ತಿ ಹೆಚ್ಚು ಪರಿಚಿತನಾಗಿದ್ದಾನೆ. ಇದು ಪ್ರಗತಿಯಲ್ಲ ಸಂಬಂಧಗಳ ನಿಧಾನಗತಿಯ ಮರಣ. ಹಾಗಾದರೆ ಸಂಬಂಧಗಳು ಈ ಪರಿ ನಶಿಸಲು ಕಾರಣವೇನು? ಎಂದು ಹುಡುಕುತ್ತಾ ಹೊರಟರೆ,
೧. ಅತಿಯಾದ ಆತ್ಮಕೇಂದ್ರಿತ ಬದುಕು :- “ನನಗೇನೂ ತೊಂದರೆ ಇಲ್ಲದಿದ್ದರೆ ಸಾಕು” ಎಂಬ ಮನೋಭಾವ ಮನುಷ್ಯನ ಮನಸ್ಸನ್ನು ಕಠಿಣಗೊಳಿಸಿದೆ. ಪರರ ನೋವು ನಮ್ಮನ್ನು ಮುಟ್ಟುವುದೇ ಇಲ್ಲ. ಚಿತ್ರದುರ್ಗದ ಘಟನೆಯಲ್ಲಿ ಆರು ಜೀವಗಳು ಮರೆಯಾಗಿದ್ದರೂ ಯಾರೂ ವಿಚಾರಿಸದಿರುವುದು ನಮ್ಮ ಸಂವೇದನೆಗಳು ಎಷ್ಟರ ಮಟ್ಟಿಗೆ ಬತ್ತಿಹೋಗಿವೆ ಎಂಬುದಕ್ಕೆ ಸಾಕ್ಷಿ.
೨. ವೇಗದ ಬದುಕಿನ ವ್ಯಾಮೋಹ ;- ಇಂದು ನಾವು ಸಮಯವಿಲ್ಲ ಎಂದು ಹೇಳುತ್ತೇವೆ. ಆದರೆ ನಿಜವಾಗಿಯೂ ಸಮಯವಿಲ್ಲವೇ? . ಗಂಟೆಗಟ್ಟಲೆ ಮೊಬೈಲ್ ಪರದೆಯ ಮುಂದೆ ಕಳೆಯುವ ನಾವು, ಅಮ್ಮನ ಜೊತೆ ಹತ್ತು ನಿಮಿಷ ಮಾತನಾಡಲು ಸಮಯವಿಲ್ಲವೆಂದು ಹೇಳುತ್ತೇವೆ. ಸಾವಿರಾರು ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವ ನಾವು, ಹಳೆಯ ಗೆಳೆಯನ ಕ್ಷೇಮಕುಶಲವನ್ನು ವಿಚಾರಿಸಲು ನೆಪ ಹುಡುಕಿ ಹಿಂಜರಿಯುತ್ತೇವೆ. ಸಮಯದ ಕೊರತೆಯಲ್ಲ; ಮನಸ್ಸಿನಲ್ಲಿ ಸಂಬಂಧಗಳನ್ನು ಉಳಿಸಿ ಬೆಳೆಸಿಕೊಲ್ಲುವಲ್ಲಿ ಇರುವ ಇಚ್ಛಾಶಕ್ತಿಯ ಕೊರತೆಯೇ ನಮ್ಮನ್ನು ಕಾಡುತ್ತಿದೆ.
೩. ಅಪನಂಬಿಕೆಯ ಗೋಡೆಗಳು:- ನಗರ ಜೀವನದಲ್ಲಿ ಅಪರಿಚಿತರನ್ನು ನಂಬುವುದು ಕಷ್ಟ ಎಂಬ ಭಯ, ಸಂಬಂಧಗಳ ಸಹಜ ಹರಿವಿಗೆ ತಡೆಗೋಡೆಯಾಗಿದೆ. ಮನೆಗಳ ಸುತ್ತ ಕಾಂಪೌಂಡ್ ಗೋಡೆಗಳು ಎತ್ತರವಾಗುತ್ತಾ ಹೋದಂತೆ, ಹೃದಯಗಳ ಸುತ್ತಲೂ ಕಾಣದ ಬೇಲಿಗಳು ನಿರ್ಮಾಣವಾಗಿವೆ.
೪. ಸಂಬಂಧಗಳ ಜಾಗದಲ್ಲಿ ವ್ಯವಹಾರಗಳು:- ಇಂದು ಅನೇಕ ಸಂಬಂಧಗಳು ಅಗತ್ಯ ಮುಗಿಯುವವರೆಗೂ ಮಾತ್ರ ಉಳಿಯುತ್ತಿವೆ. ಕೆಲವರು ಕೆಲಸವಿದ್ದಾಗ ಮಾತ್ರ ನೆನಪಿಸಿಕೊಳ್ಳುತ್ತಾರೆ. ಲಾಭವಿದ್ದಾಗ ಮಾತ್ರ ಮಾತನಾಡುತ್ತಾರೆ. ಪ್ರಯೋಜನವಿದ್ದಾಗ ಮಾತ್ರ ಭೇಟಿಯಾಗುತ್ತಾರೆ. ಹೀಗೆ ಸಂಬಂಧಗಳು ನಿಧಾನವಾಗಿ ವ್ಯವಹಾರಗಳಾಗಿ ಮಾರ್ಪಡುತ್ತಿವೆ.
“ಬಾವಿ ಒಣಗಿದ ಮೇಲೆ ನೀರಿನ ಬೆಲೆ ಗೊತ್ತಾಗುತ್ತದೆ.” ಎಂಬ ಗಾದೆಯ ಮಾತಿನಂತೆ “ಮನುಷ್ಯ ದೂರವಾದ ಮೇಲೆ ಸಂಬಂಧದ ಮೌಲ್ಯ ಅರ್ಥವಾಗುತ್ತದೆ.”
ಹಿಂದೆ ಒಂದು ಮನೆಯಲ್ಲಿ ಐದು ಸಹೋದರರು ಒಟ್ಟಿಗೆ ಬದುಕುತ್ತಿದ್ದರು. ಊಟದ ತಟ್ಟೆ ಒಂದೇ ಆಗಿರಬಹುದು; ಆದರೆ ಹೃದಯಗಳು ಬೇರೆಬೇರೆ ಇರಲಿಲ್ಲ.
ಇಂದು ವಿಶಾಲ ಮನೆಗಳಿವೆ. ಪ್ರತ್ಯೇಕ ಕೊಠಡಿಗಳಿವೆ. ಪ್ರತ್ಯೇಕ ವಾಹನಗಳಿವೆ. ಆದರೆ ಒಂದೇ ಮನೆಯೊಳಗೆ ಬದುಕುವವರು ಕೂಡ ಪರಸ್ಪರ ಅಪರಿಚಿತರಾಗುತ್ತಿದ್ದಾರೆ. ಹಣದ ವ್ಯಾಮೋಹ ಹೆಚ್ಚಿದಂತೆ ಮನಸ್ಸುಗಳ ನಡುವಿನ ಅಂತರವೂ ವೃದ್ಧಿಸುತ್ತಾ ಸಾಗಿದೆ. ಹಣ ಸೌಕರ್ಯಗಳನ್ನು ಕೊಡಬಹುದು. ಆದರೆ ಅದರಿಂದ ನಿಷ್ಕಲ್ಮಷವಾದ ಪ್ರೀತಿಯನ್ನು ಆತ್ಮೀಯತೆಯನ್ನು ಖರೀದಿಸಲು ಸಾಧ್ಯವಿಲ್ಲ. ಹೂವಿನ ಪರಿಮಳವನ್ನು ಹಣದಿಂದ ಕೊಳ್ಳಬಹುದು; ಆದರೆ ತಾಯಿಯ ಮಮತೆಯನ್ನು ಕೊಳ್ಳಲಾಗದು.
ಚಿತ್ರದುರ್ಗದ ಅಸ್ಥಿಪಂಜರಗಳು ನಮ್ಮ ಸಾಮಾಜಿಕ ಸಂಬಂಧಗಳ ನಡುವಿನ ಮೌನಕ್ಕೆ ಜೀವಂತ ಸಾಕ್ಷಿಗಳು.
ಆ ಅಸ್ಥಿಪಂಜರಗಳೆಲ್ಲವೂ ಒಟ್ಟಾಗಿ ಕೇಳಿದ ಪ್ರಶ್ನೆ ಒಂದೇ ಒಂದು “ಒಬ್ಬ ಮನುಷ್ಯ ಕಾಣೆಯಾಗಿದ್ದರೆ ಅವನನ್ನು ಹುಡುಕುವವರು ಯಾರೂ ಇಲ್ಲದಷ್ಟು ನಾವು ದೂರವಾಗಿಬಿಟ್ಟೇವೇ?”.
ಈ ಪ್ರಶ್ನೆ ಹಲವಾರು ಹಂತಗಳಲ್ಲಿ ಉತ್ತರ ನೀಡುತ್ತಾ ಮುಂದುವರೆಯುತ್ತದೆʼ. ಅವು ಕನ್ನಡಿಯಂತೆ ನಮ್ಮ ಮುಖ ತೋರಿಸಿವೆ. ಸಂಬಂಧಗಳು ಒಂದೇ ದಿನ ಸಾಯುವುದಿಲ್ಲ. ಒಂದು ಕರೆ ಮಾಡದೆ ಹೋದಾಗ ಸ್ವಲ್ಪ ಸಾಯುತ್ತವೆ.
ಒಂದು ಭೇಟಿಯನ್ನು ಮುಂದೂಡಿದಾಗ ಸ್ವಲ್ಪ ಸಾಯುತ್ತವೆ. ಒಬ್ಬರ ನೋವನ್ನು ನಿರ್ಲಕ್ಷಿಸಿದಾಗ ಮತ್ತಷ್ಟು ಸಾಯುತ್ತವೆ.
ಕೊನೆಗೆ ದೇಹ ಬದುಕಿದ್ದರೂ ಸಂಬಂಧಗಳು ಸತ್ತಿರುತ್ತವೆ.
ಹಾಗಾದರೆ , ಮತ್ತೆ ಸಂಬಂಧಗಳಲ್ಲಿ ಜೀವಂತಿಕೆಯನ್ನು ತರುವುದು ಈಗಿನ ತುರ್ತು ಅಗತ್ಯವಾಗಿದೆ.
ಈ ಸಂಬಂಧಗಳನ್ನು ಉಳಿಸಲು ದೊಡ್ಡ ತ್ಯಾಗಗಳ ಅಗತ್ಯವಿಲ್ಲ. ಒಬ್ಬ ಹಳೆಯ ಗೆಳೆಯನಿಗೆ ಕರೆ ಮಾಡಿದರೆ ಸಾಕು.
ತಿಂಗಳುಗಳಿಂದ ಮಾತನಾಡದ ಅಣ್ಣ-ತಮ್ಮ,ಅಕ್ಕ-ತಂಗಿ ಬಂಧು ಬಳಗವನ್ನು ಸಂಪರ್ಕಿಸಿದರೆ ಸಾಕು.ಎದುರು ಸಿಕ್ಕಾಗ ಪ್ರೀತಿಯಿಂದ ಮಾತನಾಡಿದರೆ ಸಾಕು.ಒಂಟಿಯಾಗಿ ಬದುಕುತ್ತಿರುವ ವೃದ್ಧ ನೆರೆಹೊರೆಯವರ ಕ್ಷೇಮ ವಿಚಾರಿಸಿದರೆ ಸಾಕು. ತಾಯಿ-ತಂದೆಯರ ಜೊತೆ ಸ್ವಲ್ಪ ಹೊತ್ತು ಕುಳಿತು ಮಾತನಾಡಿದರೆ ಸಾಕು. ಹಬ್ಬ ಹರಿದಿನಗಳಲ್ಲಿ ಪರಸ್ಪರ ಶುಭಾಶಯ ಹಂಚಿಕೊಂಡರೆ ಸಾಕು.
ಬನ್ನಿ ತಂತ್ರಜ್ಞಾನದ ಪರದೆಯನ್ನು ಮೀರಿ, ಮುಖಾಮುಖಿಯಾಗಿ ಮಾತನಾಡೋಣ. ಏಕೆಂದರೆ ಸಂಬಂಧಗಳಿಗೆ ಬೇಕಾಗಿರುವುದು ಹಣವಲ್ಲ, ಸಮಯ. ಸಮಯದೊಂದಿಗೆ ಬೆರೆತ ಪ್ರೀತಿಯೇ ಬಾಂಧವ್ಯದ ಉಸಿರು. ಇಂದು ಜಗತ್ತು ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನಗಳು ಅದ್ಭುತಗಳನ್ನು ಸೃಷ್ಟಿಸುತ್ತಿವೆ. ಆದರೆ ಮನುಷ್ಯನ ಬದುಕನ್ನು ಸುಂದರವಾಗಿಸುವುದು ಯಂತ್ರಗಳಲ್ಲ, ಸಂಬಂಧಗಳು.ಸಾವು ದೇಹದ ಅಂತ್ಯ ಮಾತ್ರ. ಆದರೆ ವಿಚಾರಿಸುವವರು ಯಾರೂ ಇಲ್ಲದಿರುವುದು ಸಂಬಂಧಗಳ ಅಂತ್ಯ.
ಒಂದು ಕಾಲದಲ್ಲಿ ಮನೆಯ ಅಂಗಳದಲ್ಲಿ ಅರಳಿದ ಮಲ್ಲಿಗೆಯ ಪರಿಮಳದಂತೆ ಹರಡಿದ್ದ ಆತ್ಮೀಯತೆ, ಇಂದು ಬೇಸಿಗೆಯ ಬಾವಿಯಲ್ಲಿ ಉಳಿದ ಕೊನೆಯ ಹನಿ ನೀರಿನಂತೆ ಅಪರೂಪವಾಗಿದೆ. ಬಹುಶಃ ಸಂಬಂಧಗಳು ಎಲ್ಲಿಗೂ ಹೋಗಿಲ್ಲ. ನಾವೇ ಅವುಗಳಿಂದ ದೂರ ನಡೆದಿದ್ದೇವೆ.ಆದ್ದರಿಂದ ಮತ್ತೊಮ್ಮೆ ಹಿಂದಿರುಗಿ ನೋಡೋಣ. ನಮ್ಮವರ ಕೈ ಹಿಡಿಯೋಣ. ಪ್ರೀತಿಯ ಎರಡು ಮಾತುಗಳನ್ನಾದರೂ ಹಂಚಿಕೊಳ್ಳೋಣ. ಏಕೆಂದರೆ ಕೊನೆಗೆ ಮನುಷ್ಯನ ಬದುಕನ್ನು ಅಳೆಯುವುದು ಅವನು ಸಂಪಾದಿಸಿದ ಆಸ್ತಿಯಿಂದಲ್ಲ, ಅವನಿಗಾಗಿ ಕಣ್ಣೀರಿಡುವ ಹೃದಯಗಳ ಸಂಖ್ಯೆಯಿಂದ. ಆ ಮಧುರ ಸಂಬಂಧಗಳ ಸುವಾಸನೆ ಮತ್ತೆ ನಮ್ಮ ಮನೆಗಳಲ್ಲಿ ಮೂಡಲಿ. ಆತ್ಮೀಯತೆಯ ಅಕ್ಕರೆಯ ದೀಪಗಳು ಮತ್ತೆ ಹೊತ್ತಿ ಉರಿಯಲಿ. ಮನುಷ್ಯ ಮನುಷ್ಯನಿಗೆ ಮತ್ತೆ ಆಸರೆಯಾಗಲಿ.






0 Comments