-ವನಜಾಕ್ಷಿ ಎಸ್ ಮರಳಕುಂಟೆ
ಸೆರಗು
ಹುಟ್ಟಿನಿಂದ ಶುರುವಾಗಿ
ಸೆಳೆಯುವ ಸೆರಗು
ಮಮಕಾರವ ತುಂಬಿ ಕೊಟ್ಟು
ಸಲಹುವ
ಅಮ್ಮನ ನೆರಳು
ಸೀರೆಯುಟ್ಟು ನಲಿದು
ಎಲ್ಲರಿಂದ ಹೊಗಳಿಸಿಕೊಳ್ಳುತ್ತಾ
ಬಾಲ್ಯದ ಹಸಿಹಸಿ ನೆನಪು
ಹಸಿರಾಗಿಸುವ
ಅಮ್ಮನ ಬಿಂಬ
ಯವ್ವನದ ಸೂಚಿಯಾಗಿ
ನೆರೆದವರಲ್ಲಿ ಹೆಣ್ಣಾಗಿ
ಹರಸುವವರ ಕಣ್ಮಣಿಯಾಗಿ
ನಾಚಿ ನೀರಾಗುವ
ಕುವರಿಯ ಕುರುಹು
ಹೆಣ್ತನ ಅರಳುತ್ತಾ
ಕುಡಿಮೀಸೆಯ ಯುವಕರಲ್ಲಿ
ಬಯಕೆಗಳನ್ನು ಹೊಮ್ಮಿಸುತ್ತಾ
ಹೊಂಬಾಳೆಯಾಗುವ
ತರುಣಿಯ ತಳಮಳ
ಹಸೆಯ ಹೊಸ ಹೊಸಿಲಲ್ಲಿ
ಇನಿಯನ ಕುಡಿ ನೋಟಕ್ಕೆ
ಸೀರೆಯ ತುದಿಯ ನುಣುಚಿ
ಮಂದಸ್ಮಿತೆಯಾಗುವ
ವಧುವಿನ ವಸಂತ
ನವಮಾಸದ ಕನಸು
ಮಡಿಲ ತುಂಬುವ ಗಳಿಗೆಯಲ್ಲಿ
ಶಾಸ್ತ್ರದ ಸಡಗರಕ್ಕೆ
ಸಾಕ್ಷಿಯಾಗುವ
ಬಸಿರ ಬಾಗಿನ
ಮತ್ತದೇ ಸೆರಗು ಹಸುಗೂಸಿನ
ನಿತ್ಯ ಸುರಕ್ಷಾ ಕವಚ
ಅಮ್ಮಳೆಂಬ ಗರ್ವದ ಪ್ರತೀಕ
ಅಮ್ಮಳಂತಾಗುವ
ಉತ್ಸಾಹದ ಉನ್ಮಾದ






0 Comments