ಕನಸುಗಳಿಲ್ಲದ ಹಾದಿಯಲ್ಲಿ ಕಾಣೆಯಾಗಿ ಹೋದ ಕುಟ್ಟ ಬ್ಯಾರಿ

ಹೀಗೊಂದು ನೆನಪು 

ಪುರುಷೋತ್ತಮ ಬಿಳಿಮಲೆ 

೧೯೬೦ರ ದಶಕದ ಆರಂಭದ ದಿನಗಳವು.ಪಶ್ಚಿಮ ಘಟ್ಟಗಳ ಭಾಗವಾದ ಬಂಟಮಲೆಯ ತಪ್ಪಲಲ್ಲಿ ನಮ್ಮದು ಕೇವಲ ಐದು ಮನೆಗಳು. ಕಾಡೊಳಕ್ಕೆ ಇರುವ ನಮ್ಮ ಮನೆಗೆ ಸಾಮಾನ್ಯವಾಗಿ ಆಗಾಗ ಬರುತ್ತಿದ್ದವನೆಂದರೆ ಒಬ್ಬ ಬ್ಯಾರಿ.

ಅವನ ನಿಜವಾದ ಹೆಸರೇನೆಂದು ಯಾರಿಗೂ ತಿಳಿದಿಲ್ಲ.ಆತನ ತಲೆ ನುಣ್ಣಗಾಗಿದ್ದು,ಅದರಲ್ಲಿ ಒಂದೂ ಕೂದಲಿರಲಿಲ್ಲವಾದ್ದರಿಂದ ನಾವು ಅವನನ್ನು ‘ಕುಟ್ಟ ಬ್ಯಾರಿ’ ಎಂದು ಕರೆಯುತ್ತಿದ್ದೆವು. ಪಂಚೆ ಉಟ್ಟು, ಮಾಸಿದ ಅಂಗಿ ತೊಟ್ಟು, ತಲೆಯಲ್ಲಿ ಒಂದು ಗೋಣಿ ಚೀಲ ಹೊತ್ತುಕೊಂಡು,ಆತ ಬಂಟಮಲೆಯೊಳಕ್ಕೆ ಪ್ರವೇಶಿಸುತ್ತಿದ್ದ.ಬಂದವನೇ ‘ಯಜಮಾನ ಉಂಟೋ’ ಅಂತ ಕೇಳುತ್ತಿದ್ದ. ‘ಇಲ್ಲ’ ಅಂದರೆ ಅಂಗಳ ದಾಟಿ ಮುಂದಿನ ಮನೆಗೆ ಮಾತಿಲ್ಲದೇ ಹೋಗುತ್ತಿದ್ದ. ‘ಇದ್ದಾರೆ’ಅಂದರೆ, ಅಪ್ಪ ಬರುವವರೆಗೆ ಕಾದು ಅಪ್ಪನ ಮುಖ ಕಾಣುತ್ತಲೇ ‘ನಮಸ್ಕಾರ’ಅಂತ ಹೇಳಿ ಜಗಲಿಯ ಮೇಲೆ ಕುಳಿತು ಕಾಲನ್ನು ಅಂಗಳದತ್ತ ಇಳಿಬಿಡುತ್ತಿದ್ದ. ಅಪ್ಪ ಅವರೊಡನೆ ಸುದೀರ್ಘ ಪಟ್ಟಾಂಗಕ್ಕೆ ಸಿದ್ಧವಾಗುತ್ತಿದ್ದರು.

handsಅಪ್ಪನ ಜೊತೆ ಪಟ್ಟಾಂಗ ಆರಂಭಿಸುವ ಮುನ್ನ ಕುಟ್ಟ ಬ್ಯಾರಿಗೆ ಒಂದು ಬೀಡಿ ಏರಿಸಲೇಬೇಕು. ಅಪ್ಪ ಸಾಮಾನ್ಯವಾಗಿ ಬೀಡಿ ಸೇದುವ ಚಟದವರಲ್ಲ. ಆದರೂ ಕುಟ್ಟ ಬ್ಯಾರಿಯ ಬೀಡಿ ಸೇದುವ ಶೈಲಿಗೆ ಮರುಳಾಗಿದ್ದ ಅವರು ‘ನನಗೂ ಒಂದು ಬೀಡಿ ಕೊಡು’ ಎಂದು ಹೇಳಿದಾಗ ಕುಟ್ಟ ಬ್ಯಾರಿ ಅದೆಲ್ಲಿಂದಲೋ ಒಂದು ಸಾಧು ಬೀಡಿ ತೆಗೆದು ಅಪ್ಪನ ಕೈಗಿಟ್ಟು ‘ಒಲೆಯಿಂದ ಉರಿಸಿಕೊಳ್ಳಿ’ ಅಂತ ಹೇಳಿದಾಗ ಬೀಡಿ ನನ್ನ ಕೈಗೆ ಬರುತ್ತಿತ್ತು. ನಾನು ಛಂಗನೆ ಜಿಗಿದು,ಅಡಿಗೆ ಮನೆ ಸೇರಿ, ಬೀಡಿ ಉರಿಸಿ, ಒಂದು ದಮ್ಮು ಸೇದಿ, ಮರುಕ್ಷಣದಲ್ಲಿ ಬೀಡಿಯನ್ನು ಅಪ್ಪನ ಕೈಯಲ್ಲಿಡುತ್ತಿದ್ದೆ.

ಅಷ್ಟರಲ್ಲಿ ಅವರಿಬ್ಬರ ನಡುವೆ ಪಟ್ಟಾಂಗ ಆರಂಭವಾಗುತ್ತಿತ್ತು. ಅದೊಂದು ರಮ್ಯಾದ್ಭುತ ಲೋಕ.

ಆ ಕಾಲದಲ್ಲಿಯೇ ಕುಟ್ಟ ಬ್ಯಾರಿ ಪುತ್ತೂರು,ಬಂಟ್ವಾಳ,ಮಂಗಳೂರು ವರೆಗೆ ಹೋಗಿಬರುತ್ತಿದ್ದನಾದ್ದರಿಂದ ಅವನ ಅನುಭವ ಲೋಕ ಅಪಾರವಾಗಿತ್ತು. ಅವನು ಭೇಟಿ ಮಾಡುತ್ತಿದ್ದ ಬಗೆಬಗೆಯ ಜನಗಳು, ಮಂಗಳೂರು ಬಂದರಿನಲ್ಲಿ ಅವನು ಬಾಳೆಕಾಯಿ ಮಾರಲು ಪಟ್ಟ ಶ್ರಮ, ಹಿಂದೆ ಬರುವಾಗ ಪಾಣೆಮಂಗಳೂರು ಸೇತುವೆ ಬಳಿ ಉಂಟಾದ ಸಣ್ಣ ಅಫಘಾತ, ಇತ್ಯಾದಿಗಳನ್ನು ಆತ ಸೊಗಸಾಗಿ ವರ್ಣನೆ ಮಾಡುತ್ತಿದ್ದ. ಜೊತೆಗೆ, ಅಡಿಕೆ ಧಾರಣೆಯಲ್ಲಿ ಇಳಿತ, ಕಾಳುಮೆಣಸಿಗೆ ಬಂದ ರೋಗ, ಇತ್ಯಾದಿಗಳ ಬಗೆಗೂ ಆತ ವಿವರ ನೀಡುತ್ತಿದ್ದ.ಅವನ ಬಂಧುಗಳ್ಯಾರೋ ಕೇರಳದಲ್ಲಿ ಸತ್ತುಹೋದದ್ದು,ಹುಡುಗನೊಬ್ಬ ಬೊಂಬಾಯಿಗೆ ಓಡಿ ಹೋದದ್ದು ಕೂಡಾ ಅವನ ವಿವರಣೆಯಲ್ಲಿ ಕೇಳಿಬರುತ್ತಿತ್ತು.

ಕುಟ್ಟ ಬ್ಯಾರಿಯ ವಿಶಾಲವಾದ ಅನುಭವ ಲೋಕಕ್ಕೆ ತೆರೆದುಕೊಳ್ಳುತ್ತಿದ್ದಂತೆ ಆತನ ಬಗ್ಗೆ ನನಗೆ ಅತೀವ ಗೌರವ ಉಂಟಾಗುತ್ತಿತ್ತು. ರೇಡಿಯೋ, ವರ್ತಮಾನ ಪತ್ರಿಕೆಗಳಿಲ್ಲದ ಬಂಟಮಲೆಗೆ ಕುಟ್ಟ ಬ್ಯಾರಿ ಎಲ್ಲವೂ ಆಗಿದ್ದ.

ಗಂಟೆಗಟ್ಲೆ ಮಾತಾಡಿದ ಆನಂತರ ಕುಟ್ಟ ಬ್ಯಾರಿ ವಿಷಯಕ್ಕೆ ಬರುತ್ತಿದ್ದ. ಏನಾದರೂ ಇದ್ರೆ ಕೊಡಿ ಅಂತ ದುಂಬಾಲು ಬೀಳುತ್ತಿದ್ದ. ಕೊನೆಗೆ ಅಪ್ಪ ಸ್ವಲ್ಪ ಅಡಿಕೆ, ಗೇರು ಬೀಜ ಮತ್ತು ಬಾಳೆಗೊನೆ ಕೊಟ್ಟರೆ ಅದಕ್ಕೆ ಒಂದಷ್ಟು ದುಡ್ಡು ಕೊಟ್ಟು ಮುಂದೆ ಸಾಗುತ್ತಿದ್ದ. ಅಪ್ಪನಲ್ಲಿ ಕೊಡಲು ಏನೂ ಇಲ್ಲದಿದ್ದರೂ ಆತನಿಗೇನೂ ಬೇಸರವಿರಲಿಲ್ಲ. ಸ್ವಲ್ಪ ಅಡಿಕೆ ಕೊಟ್ಟರೆ ಅದನ್ನು ನಮ್ಮ ಅಂಗಳದಲ್ಲಿಯೇ ಒಣಗಲು ಬಿಟ್ಟು ಹೋಗುತ್ತಿದ್ದ. ಅದರಿಂದ ಒಂದಡಿಕೆಯೂ ಕಾಣೆಯಾಗದಂತೆ ಅಪ್ಪ ನೋಡಿಕೊಳ್ಳುತ್ತಿದ್ದರು. ಅಪ್ಪನ ಮೇಲಿನ ಅವನ ವಿಶ್ವಾಸ, ಬ್ಯಾರಿ ಮೇಲಿನ ಅಪ್ಪನ ವಿಶ್ವಾಸ ಕರಾವಳಿ ಕಟ್ಟಿಕೊಂಡ ಬಂದ ಪರಂಪರೆಯ ಬಹು ದೊಡ್ಡ ಭಾಗವಾಗಿತ್ತು.

ಅಪ್ಪನ ಜೊತೆಗೆ ಕುಳಿತು,ಆತನ ಪಟ್ಟಾಂಗಕ್ಕೆ ಕಿವಿಗೊಡುವ ನನ್ನ ಬಗೆಗೆ ಕುಟ್ಟ ಬ್ಯಾರಿಗೆ ವಿಶೇಷ ಪ್ರೀತಿ.ಒಮ್ಮೊಮ್ಮೆ ನಾನು ಪಂಜದಲ್ಲಿ ಯಕ್ಷಗಾನ ನೋಡಲು ಹೋಗುತ್ತಿದ್ದಾಗ ಆತ ಆಟ ಸುರುವಾಗುವ ಮುನ್ನ ಟೆಂಟ್ ಬಳಿ ಪ್ರತ್ಯಕ್ಷನಾಗುತ್ತಿದ್ದ. ‘ಬನ್ನಿ ಯಜಮಾನ್ರೇ’ಅಂತ ಹೇಳಿ ಅಲ್ಲೆಲ್ಲೋ ಕರೆದುಕೊಂಡು ಹೋಗಿ, ಚಹಾ ಕುಡಿಸಿ, ಮತ್ತೆಲ್ಲೋ ಕಾಣೆಯಾಗಿಬಿಡುತ್ತಿದ್ದ. ಕುಟ್ಟ ಬ್ಯಾರಿಯ ಚಹಾದಿಂದಾಗಿ ಕಿಸೆಯಲ್ಲಿಯೇ ಉಳಿದ ನಾಲ್ಕಾಣೆಯಿಂದ ಮುಂದೆ ಇನ್ನೊಂದು ಯಕ್ಷಗಾನ ನೋಡಲು ಸಾಧ್ಯವಾಗುತ್ತಿತ್ತು ಮತ್ತು ಅದಕ್ಕಾಗಿ ಅಪ್ಪನನ್ನು ಗೋಗರೆಯುವುದು ತಪ್ಪುತ್ತಿತ್ತು.

ಕಾಲಾನಂತರ ನಾನು ಕಾಲೇಜು ಸೇರಿದ್ದೆ. ರಜೆಯಲ್ಲಿ ಊರಿಗೆ ಹೋಗಿದ್ದಾಗ ಒಮ್ಮೆ ಕುಟ್ಟ ಬ್ಯಾರಿ ಸಿಕ್ಕಿದ್ದರು. ಮುಖ ಬಾಡಿತ್ತು, ಸುಸ್ತಾದವರಂತೆ ಕಾಣುತ್ತಿದ್ದರು. ನನ್ನನ್ನು ನೋಡಿ ‘ ಒಂದು ಉಪಕಾರ ಆಗಬೇಕಲ್ಲ ಯಜಮಾನರೇ” ಅಂದರು. ‘ಏನು ಹೇಳಿ? ಅಂದೆ.‘ಸರಕಾರ ಬಡವರಿಗೆ ಐದು ಸೆಂಟ್ಸ್ ಜಾಗ ಕೊಡುತ್ತದೆ ಅಂತಲ್ಲ? ನನಗೆ ಒಂದು ಅರ್ಜಿ ಬರೆದುಕೊಡಿ, ಹಾಗೆ ಯಾರಿಗಾದರೂ ಹೇಳಿ ಜಾಗ ಕೊಡಿಸಿ, ನನಗೆ ಇದೇ ಊರಲ್ಲಿ ಸಾಯಬೇಕು ಅಂತ ಆಸೆ’ ಅಂದರು.

ನಾನು ಅರ್ಜಿಯೇನೋ ಬರೆದುಕೊಟ್ಟೆ,ಆದರೆ ಕಾರಣಾಂತರಗಳಿಂದ ಅವರಿಗೆ ಐದು ಸೆಂಟ್ಸ್ ಜಾಗ ಕೊನೆವರೆಗೂ ದೊರೆಯಲೇ ಇಲ್ಲ. ನಾನು ಕೊನೆಯ ಬಾರಿ ಅವರನ್ನು ಕಂಡಾಗ ಐದು ಸೆಂಟ್ಸ್ ಜಾಗಕ್ಕಾಗಿ ಅವರು ಕಣ್ಣೀರಿಡುತ್ತಿದ್ದರು. ಅವರಿಗದು ಕೊನೆವೆರಗೂ ದೊರಕಲೇ ಇಲ್ಲ.

ಈಗ ಹಿಂದೂ ಕೋಮುವಾದಿಗಳು ಅನ್ಯ ಮತ ದ್ವೇಷ ಬಿತ್ತುತ್ತಿರುವಾಗ,ಈ ಪುಣ್ಯ ಭೂಮಿ ಭರತ ಖಂಡದಲ್ಲಿ ಐದು ಸೆಂಟ್ಸ್ ಜಾಗದ ಕನಸು ಕಾಣುತ್ತಾ, ಕೊನೆಗೆ ಕನಸುಗಳಿಲ್ಲದ ಹಾದಿಯಲ್ಲಿ ಕಾಣೆಯಾಗಿ ಹೋದ ಕುಟ್ಟ ಬ್ಯಾರಿ ತೀವ್ರವಾಗಿ ನೆನಪಾಗುತ್ತಾರೆ.

‍ಲೇಖಕರು Admin

January 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಬಸವರಾಜ ಪುರಾಣಿಕ

    ನಿಮ್ಮ ಕರಳು ಮಿಡಿಯುವ ಆಪ್ತ ಬರಹದಲ್ಲಿ ಕೊನೆಯ ಪ್ಯಾರಾದಲ್ಲಿ ಻ದೇಕೆ ಥೇಟ್ ಪ್ಲೆಯಿಂಗ್ ಟು ದಿ ಗ್ಯಾಲರಿ ಆಗರುವಿರಿ?
    ಬ್ಯಾರಿಯಂಥವರಿಗೆ ಗೇಣು ಭೂಮಿ ದೊರೆಯದ್ದು ನೋವು. ಅದಕ್ಕೆ ಬಾಲಾಗಸಿ ಜೊಡಿಸುವುದು ತಪ್ಪು..

    ಪ್ರತಿಕ್ರಿಯೆ
  2. ರಘುನಂದನ ಕೆ

    ಬರಹದ ಆಪ್ತತೆಗೆ ಶರಣು, ಆದರೆ ಕೊನೆಯ ಸಾಲು ಆಪ್ತತೆಯನ್ನ ಕೆಡಿಸುತ್ತಿದೆ,
    ಅದೇ ವಾಕ್ಯವನ್ನ ಮತ್ತೆ ಮತ್ತೆ ಓದಿದರೆ ಅದರ ಸತ್ಯಾಸತ್ಯತೆಯ ಬಗ್ಗೆ ಲೇಖಕರಿಗೂ ಅನುಮಾನ ಬರಬಹುದೇನೋ,
    ಸುಂದರ ಬರಹವೊಂದು ಇಂತಹ ಹೇಳಿಕೆಗಳಿಂದ ಹಾಳಾಗದಿರಲಿ…
    ಧನ್ಯವಾದ.

    ಪ್ರತಿಕ್ರಿಯೆ
  3. Samvartha 'Sahil

    kitnaa hai badnaseeb ‘Zafar’ dafn kay liye
    do gaz zamin bhi na mili kuu-e-yaar mein.

    ~ Bahaddur Shah Zafar

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: