ಹೊಸಗಾಲದ ಹುಡುಗ ಹುಡುಗಿಯರು ಹೆದರುವುದು ಕತ್ತಲೆಗೆ ಮತ್ತು ಕವಿತೆಗೆ..

ಜೋಗಿ 

ಯಾರೋ ಹೇಳಿ­ದರು; ಹೊಸ­ದಾಗಿ ಬರೆ­ಯಲು ಶುರು­ಮಾ­ಡಿ­ರುವ ಲೇಖ­ಕ­ರೆಲ್ಲ ಪದ್ಯ ಬರೆ­ಯು­ತ್ತಾರೆ. ಒಂದು ಲೇಖ­ನ­ವನ್ನೋ ಕತೆ­ಯನ್ನೋ ಬರೆ­ಯಲು ತುಂಬ ಸಮಯ ಬೇಕಾ­ಗು­ತ್ತದೆ. ಆದರೆ ಪದ್ಯ ಹಾಗಲ್ಲ, ಎಲ್ಲೆಂ­ದ­ರಲ್ಲಿ ಥಟ್ಟನೆ ಬರೆ­ದು­ಬಿ­ಡ­ಬ­ಹುದು. ದೀಪಾ­ವಳಿ ವಿಶೇ­ಷಾಂ­ಕಕ್ಕೋ, ಇನ್ಯಾ­ವುದೋ ಸಂಕ­ಲ­ನಕ್ಕೋ ಪದ್ಯ ಕೇಳಿ­ದರೆ ಕೂಡಲೇ ಕಳಿ­ಸು­ತ್ತಾರೆ. ಅದೇ ಕತೆ­ಯನ್ನೋ ಪ್ರಬಂ­ಧ­ವನ್ನೋ ಕೇಳಿ­ದರೆ ತಡ­ಮಾ­ಡು­ತ್ತಾರೆ.

ಕವಿ­ತೆ­ಯೆಂ­ದರೆ ಸಂಗ್ರ­ಹ­ವಾಗಿ ಹೇಳು­ವುದು ಅನ್ನುವ ನಂಬುಗೆ ಹೊಸ­ಕಾ­ಲದ ಕವಿ­ಗ­ಳ­ಲ್ಲಿದೆ. ಬಹುಶಃ ಅದು ಎಲ್ಲ ಕಾಲದ ತರುಣ ಕವಿ­ಗ­ಳಲ್ಲೂ ಇತ್ತೆಂದು ಕಾಣು­ತ್ತದೆ. ಕವಿ­ತೆಯ ಮೂಲಕ ಏನು ಹೇಳ­ಬೇಕು ಅನ್ನು­ವುದು ಕೂಡ ಮೊದಲೇ ನಿರ್ಧಾ­ರ­ವಾ­ಗಿ­ಬಿ­ಟ್ಟಂತೆ ಅನೇ­ಕರು ಬರೆ­ಯು­ತ್ತಾರೆ. `ಸ­ಬ್ಜೆಕ್ಟು ರೆಡಿ­ಯಾ­ಗಿದೆ. ಬರೆ­ಯೋದು ಮಾತ್ರ ಬಾಕಿ. ಒಂದೆ­ರಡು ದಿನ­ದಲ್ಲಿ ಬರೆ­ದು­ಕೊ­ಡು­ತ್ತೇನೆ’ ಅಂತ ಅನೇಕ ಕವಿ­ಗಳು ಹೇಳು­ವು­ದುಂಟು. ಆಧು­ನಿಕ ಸಂದ­ರ್ಭ­ದಲ್ಲಿ ನಾನು ಸ್ವತಂ­ತ್ರಳು ಅಂದು­ಕೊಂ­ಡಿ­ರುವ ಮಹಿಳೆ ಸೂಕ್ಪ್ಮಾ­ವಾಗಿ ಹಿಂದಿನ ಕಾಲ­ಕ್ಕಿಂತ ಹೆಚ್ಚು ಶೋಷ­ಣೆಗೆ ಒಳ­ಗಾ­ಗಿ­ದ್ದಾಳೆ. ಇದರ ಬಗ್ಗೆ ಒಂದು ಪದ್ಯ ಬರೀ­ತಿ­ದ್ದೀನಿ ಅಂತ ಕವಿ­ಯೊ­ಬ್ಬರು ಸಂದ­ರ್ಶ­ನ­ವೊಂ­ದ­ರಲ್ಲಿ ಹೇಳಿ­ಕೊಂ­ಡಿ­ದ್ದರು.

ಹಾಗೆ ಹೇಳಿ ಕೇಳಿ ಬರು­ವುದು ಕವಿ­ತೆ­ಯಾ­ಗು­ತ್ತದಾ? ಕವಿ­ತೆಯ ಮೂಲಕ ಏನನ್ನು ಹೇಳ­ಬೇಕೋ ಅದನ್ನು ನಾಲ್ಕು ಸಾಲಲ್ಲೋ ಒಂದು ಪ್ಯಾರಾ­ದಲ್ಲೋ ಹೇಳಿ­ಬಿ­ಡ­ಬ­ಹು­ದಾ­ದರೆ ಕವಿತೆ ಯಾಕೆ ಬೇಕು? ಅದನ್ನು ಹಾಗೇ ಮಾತಲ್ಲೇ ಹೇಳಿ ಸುಖ­ವಾ­ಗಿ­ರ­ಬ­ಹು­ದಲ್ಲ? ಪದ್ಯ­ವೆಂ­ಬುದು ಕವಿ­ತೆ­ಯೆಂ­ಬುದು ಒಂದು ಮಾಧ್ಯಮ ಮಾತ್ರವಾ? ಅದು ಕೇವಲ ಒಂದು ಪ್ರಕಾ­ರವಾ? ಹಾಗೆ ಹೇಳು­ವು­ದನ್ನು ಹೀಗೆ ಹೇಳುವ ಒಂದು ವಿಧಾ­ನವಾ?

ಬಾವಿ­ಯೊ­ಳ­ಗಡೆ ನೀರು; ಮೇಲ­ಕ್ಕಾವಿ;
ಆಕಾ­ಶ­ದು­ದ್ದಕೂ ಅದರ ಕಾರಣ ಬೀದಿ;
ಕಾರ್ಮು­ಗಿಲ ಖಾಲಿ ಕೋಣೆಯ ಅಗೋ­ಚರ ಬಿಂದು
ನವ­ಮಾ­ಸವೂ ಕಾವ ಭ್ರೂಣ­ರೂಪಿ-
ಅಂತ­ರ­ಪಿ­ಶಾಚಿ ಗುಡು­ಗಾಟ, ಸಿಡಿ­ಲಿನ ಕಾಟ-
ಭೂತ­ರೂ­ಪಕ್ಕೆ ಮಳೆ ವರ್ತ­ಮಾನ.
ಅಗೆ­ದುತ್ತ ಗದ್ದೆ­ಗಳ ಕರ್ಮ­ಭೂ­ಮಿಯ ವರಣ;
ಭತ್ತ­ಗೋ­ಧುವೆ ಹಣ್ಣು ಬಿಟ್ಟ ವೃಂದಾ­ವನ.
ಗುಡಿ­ಗೋ­ಪು­ರ­ಗಳ ಬಂಗಾರ ಶಿಖರ.

ಯಾವ ಮೇಷ್ಟ್ರು ಕೂಡ ಈ ಸಾಲು­ಗ­ಳನ್ನು ಅರ್ಥ­ಮಾ­ಡಿ­ಸ­ಲಾರ. ಪದ್ಯ ಅರ್ಥ­ವಾ­ಗು­ವು­ದಕ್ಕೆ ಇರುವ ಸಂಗ­ತಿಯೇ ಅಲ್ಲ. ಅದು ಅನು­ಭ­ವ­ಕ್ಕಷ್ಟೇ ದಕ್ಕುವ ಅಕ್ಪ­ರ­ಲೋಕ. ಏನೂ ಹೇಳದೇ ಎಲ್ಲ­ವನ್ನೂ ಹೇಳು­ವುದು ಕವಿ­ತೆಯ ಜಾಯ­ಮಾನ. ಏನಾ­ದರೂ ಹೇಳ­ಲಿ­ಕ್ಕೆಂದೇ ಹೊರ­ಟರೆ ಅದು ಸುತ್ತೋ­ಲೆ­ಯಾ­ಗು­ತ್ತದೆ. ಕರ­ಪತ್ರ ವಾಗು­ತ್ತದೆ. ವರ­ದಿಯೋ ಟೀಕೆಯೋ ಹೇಳಿ­ಕೆಯೋ ಆಗು­ತ್ತದೆ. ಪದ್ಯ ಅದಾ­ವುದೂ ಅಲ್ಲ. ಅದು ಮಂತ್ರದ ಹಾಗೆ ವೇದ್ಯ­ವಾ­ಗು­ವಂ­ಥದ್ದು. ಅರ್ಥ­ವನ್ನು ಮೀರಿದ್ದು.

ಮೇಲೆ ಸೂಚಿ­ಸಿದ ಗೋಪಾ­ಲ­ಕೃಷ್ಣ ಅಡಿ­ಗರ `ಭೂತ’ ಕವ­ನ­ವನ್ನು ಓದುತ್ತಾ ಹೋಗಿ; ಹುಟ್ಟು, ಸಾವು, ವಿಷಾದ, ಅವ­ಮಾನ, ತಲ್ಲಣ, ನಿರಾಶೆ ಎಲ್ಲವೂ ಸುತ್ತಿ ಸುಳಿದು ಹೋಗು­ತ್ತವೆ. ಕೊನೆ­ಯಲ್ಲಿ ಕಣ್ಣ­ಮುಂದೆ ಅನೂ­ಹ್ಯ­ವಾದ ಚಿತ್ರ­ವೊಂ­ದನ್ನು ಅನಾ­ಯಾ­ಸ­ವಾಗಿ ಮೂಡು­ತ್ತದೆ. ಭೂತ ರೂಪಕ್ಕೆ ಮಳೆ ವರ್ತ­ಮಾನ ಅನ್ನುವ ಸಾಲಿಗೆ ಬರುವ ಹೊತ್ತಿಗೆ ಸಾವು ಬದು­ಕಾಗಿ ಮಾರ್ಪಾಟು ಹೊಂದಿ­ರು­ತ್ತದೆ.
ಇದು ಎಲ್ಲ­ರಿಗೂ ಹೀಗೇ ಆಗ­ಬೇ­ಕೆಂ­ದಿಲ್ಲ. ಕವಿ­ತೆಯ ಶಕ್ತಿಯೇ ಅದು. ಅದು ಒಬ್ಬೊ­ಬ್ಬ­ರನ್ನು ಒಂದೊಂದು ತೆರ­ನಾಗಿ ಸ್ಪರ್ಶಿ­ಸು­ತ್ತದೆ;

ಮೈಯೆಲ್ಲ ಗಡ­ಗು­ಟ್ಟು­ತ್ತ­ಲಿ­ದೆಯೇ?
ಬೆದ­ರಿ­ಸಿ­ದ­ವ­ರಾರು?
ಮುಖ ತೊಯ್ದಿದೆ, ಕಣ್ಣೀ­ರಿನ ಹನಿ­ಯನು
ಹರಿ­ಯಿ­ಸಿ­ದ­ವ­ರಾರು?
ಯಾರೂ ಕಾಣದ ಆ ಮರೆ­ಯೊ­ಳಗೆ
ಕುಲು­ಕುಲು ಎನು­ತಿದೆ ಮೆಲು­ನ­ಗೆಯ ನೊರೆ
ನಿನ್ನೆಯ ಹಾಡಿನ ದನಿ­ಯಿನ್ನೂ ಗುಣು-
ಗುಣಿ­ಸುವ ಮಾಯೆ­ಯೆಂ­ಥದು ಹೇಳು.
ಏ ಗಾಳಿ,
ಆ ಕತೆ­ಯ­ನೊ­ರೆದು ಮುಂದಕೆ ತೆರಳು

**­*­**

ಕವಿ­ತೆ­ಯೆಂ­ದರೆ ಬದುಕು. ಬರೆ­ಯ­ದಿ­ರು­ವುದು ಸಾವು. ಅಡಿ­ಗ­ರೊಮ್ಮೆ ಹೇಳಿ­ದರು;ಕಾವ್ಯ ನನಗೆ ಜೀವ­ನ್ಮ­ರ­ಣದ ಪ್ರಶ್ನೆ. ಬಹುಶಃ ಅದೇ ಸರಿ. ಹಸಿ­ವೆಯ ಹಾಗೆ ಕಾಡ­ದಿ­ದ್ದರೆ, ದಾಹದ ಹಾಗೆ ಕಂಗೆ­ಡಿ­ಸದೇ ಇದ್ದರೆ, ಕಾಮದ ಹಾಗೆ ತಪಿ­ಸದೇ ಇದ್ದರೆ, ಸಾವಿನ ಹಾಗೆ ಮೋಹಿ­ಸದೇ ಹೋದರೆ ಪದ್ಯ ಬರೆ­ಯ­ಬಾ­ರದು. ಕವಿತೆ ಬರೆದು ಕವಿ­ಯಲ್ಲ ಅನ್ನಿ­ಸಿ­ಕೊ­ಳ್ಳುವ ಬದಲು, ಬರೆ­ಯದೇ ಒಂದಲ್ಲ ಒಂದು ದಿನ ಕವಿ­ಯಾ­ದೇನು ಅಂತ ಕಾಯು­ವುದು ಮೇಲು.

ಕಾವ್ಯಕ್ಕೆ ವಿಚಿ­ತ್ರ­ವಾದ ಸಮ­ಸ್ಯೆ­ಗ­ಳಿವೆ. ಅನಂ­ತ­ಮೂ­ರ್ತಿ­ಯ­ವರ ಬರ­ಹ­ಗ­ಳಲ್ಲಿ ಆಗುವ ಹಾಗೆ, ಎಷ್ಟೋ ಸಾರಿ ಗದ್ಯಕ್ಕೆ ಪದ್ಯದ ತಳ­ಮ­ಳ­ಗ­ಳನ್ನು ಹೊತ್ತು­ಕೊ­ಳ್ಳುವ ಶಕ್ತಿ­ಯಿದೆ. ಆದರೆ ಪದ್ಯ ಹಾಗಲ್ಲ, ಅದು ಗದ್ಯದ ಭಾರಕ್ಕೆ ಮುಳು­ಗು­ತ್ತದೆ. ಜಯಂತ ಕಾಯ್ಕಿಣಿ ಬರೆದ ಅನೇಕ ಕವಿ­ತೆ­ಗ­ಳನ್ನೂ ಇದಕ್ಕೆ ಉದಾ­ಹ­ರ­ಣೆ­ಯಾಗಿ ಕೊಡ­ಬ­ಹುದು.

ಕವಿ­ಗಳ ಸಮ­ಸ್ಯೆ­ಯೆಂ­ದರೆ ಅವರು ಗೊತ್ತಿ­ರುವ ಸಂಗ­ತಿ­ಗಳ ಕುರಿತು ಬರೆ­ಯು­ತ್ತಾರೆ. ಗೊತ್ತಿ­ರು­ವು­ದರ ಕುರಿತು ಬರೆ­ದದ್ದು ಯಾವತ್ತೂ ಕವಿತೆ ಆಗ­ಲಾ­ರದು. ಬರೆ­ಯುವ ಹೊತ್ತಿಗೆ ಕವಿಗೂ ಗೊತ್ತಿ­ಲ್ಲದೇ ಹೋದದ್ದು ಮಾತ್ರ ಕಾವ್ಯ­ವಾಗಿ ಒಡ­ಮೂ­ಡು­ತ್ತದೆ. ಮಹಾ­ಭಾ­ರ­ತವೋ ರಾಮಾ­ಯ­ಣವೋ ಕಾವ್ಯ­ವಾ­ಗು­ವುದ ಅದ­ರ­ಲ್ಲಿ­ರುವ ಕಥ­ನದ ಅಂಶ­ದಿಂ­ದಲ್ಲ, ಬೆರ­ಗು­ಗೊ­ಳಿ­ಸುವ ಕವಿಗೂ ಗೊತ್ತಿ­ಲ್ಲದ ಸತ್ಯ­ಗಳ ಅನಾ­ವ­ರ­ಣ­ದಿಂದ.

ಗೊತ್ತಿ­ಲ್ಲದ್ದು ಗೊತ್ತಾ­ಗುವ ಕ್ಪಣಕ್ಕೆ ಒಳ್ಳೆಯ ಉದಾ­ಹ­ರಣೆ ಲಂಕೇ­ಶರ ಅವ್ವ;

ಕಾಲು ಶತ­ಮಾ­ನದ ಬಳಿಕ;
ಜಗ­ಳ­ಗಂ­ಟಿ­ಯಾ­ಗಿದ್ದ ಈ ಅವ್ವ ಈಗ ನನ್ನಲ್ಲಿ
ವಿನಯ ಮತ್ತು ಮೌನ.

ಹಾಗೆ ಗೊತ್ತಿ­ಲ್ಲದೇ ಹುಟ್ಟಿದ್ದು ರಾಮಾ­ಯಣ. ಗೊತ್ತಿ­ಲ್ಲದೇ ಹುಟ್ಟಿದ್ದು ಕುಮಾ­ರ­ವ್ಯಾ­ಸನ ಭಾರತ. ಬೇಂದ್ರೆಯ ಎಷ್ಟೋ ಕವಿ­ತೆ­ಗ­ಳಿಗೆ ಗೊತ್ತಿಲ್ಲ, ಗುರಿ­ಯಿಲ್ಲ. ತುಂಬ ಸರ­ಳ­ವಾಗಿ ಹೇಳ­ಬೇ­ಕೆಂ­ದರೆ ಕೆಎಸ್ ನರಸಿಂಹಸ್ವಾಮಿ ಬರೆ­ದದ್ದೂ ಅದೇ;
ಗೋರಿ­ದೀ­ಪದ ಕೆಳಗೆ ಹಲ್ಲಿ ಐದರ ಹರಕೆ
ತಳ­ವಿ­ರದ ತಟ್ಟೆ­ಯಲ್ಲಿ ಐದು ಗೆಜ್ಜೆ
ಪಳ­ಯು­ಳಿಕೆ ಕನ­ಸಾ­ಚೆ­ಗೈದು ಬಣ್ಣದ ಹಸೆಗೆ
ಬಂದ ಸುಂದರಿ ನಿನಗೆ ಎಷ್ಟು ಲಜ್ಜೆ?

ಮಾತಿ­ನಲ್ಲಿ ಹುಟ್ಟಿದ್ದು ಗದ್ಯ, ಆತ್ಮ­ದಲ್ಲಿ ಹುಟ್ಟಿದ್ದು ಪದ್ಯ; ಒಳ್ಳೆಯ ಕವಿ­ಗಾಗಿ ಮಾತಿ­ಗಾಗಿ ತಡ­ಕಾ­ಡು­ತ್ತಾನೆ. ಥಟ್ಟನೆ ಹೊರ­ಹೊ­ಮ್ಮಿ­ದರೆ ಅದು ‘ಚಿಕ್ಕ­ಮ­ಗ­ಳೂರು ಕಣ್ಣನ್ ‘ ಸಾಹಿ­ತ್ಯ­ವಾ­ಗು­ತ್ತ­ದೆಯೇ ಹೊರತು ಕವಿತ್ವ ಆಗು­ವು­ದಿಲ್ಲ. ಕವಿ ಏನನ್ನೋ ಹೇಳ­ಹೊ­ರ­ಟಾಗ ಅದು ಅನು­ಭ­ವವೂ ಆಗಿ­ರು­ವು­ದಿಲ್ಲ, ಅನು­ಭಾ­ವವೂ ಆಗಿ­ರು­ವು­ದಿಲ್ಲ. ಅವೆ­ರ­ಡನ್ನೂ ಮೀರಿದ ಇನ್ನೇನೋ ಆಗಿ ಅವ­ನಿಗೇ ಗೊತ್ತಾ­ಗದ ಹಾಗೆ ಬರೆ­ಸಿ­ಕೊಂಡು ಬಿಡು­ತ್ತದೆ;

Nor dread nor hope attend
A dying animal;
A man awaits his end
Dreading and hoping all
Many times he died
Many times rose again
A great man in his pride
confronting murderous man
casts derision upon
Supersession of breath;
He knows death to the bone
Man has created death.

ಯೇಟ್ಸನ ಈ ಪದ್ಯದ ಸೊಬ­ಗನ್ನು ನೋಡಿ. ಇಲ್ಲಿಯ ಒಂದು ಅಕ್ಪ­ರ­ವನ್ನು ಕಿತ್ತರೂ ಕೂಡ ಇಡೀ ಪದ್ಯ ಅರ್ಥ ಕಳ­ಕೊ­ಳ್ಳು­ತ್ತದೆ. ಸಾವಿನ ನಿಗೂ­ಢ­ತೆ­ಯನ್ನು ಮೀರಿ ನಿಲ್ಲುವ ಪ್ರಯತ್ನ ಇದಲ್ಲ. ಕೇವಲ ಚಿಂತ­ನೆ­ಗ­ಳನ್ನೇ ಹರ­ಳು­ಗ­ಟ್ಟಿ­ರುವ ಈ ಸಾಲು­ಗ­ಳನ್ನು ಒಟ್ಟಾಗಿ ಓದಿ­ಕೊಂ­ಡಾಗ ಅವು ಕೇವಲ ಚಿಂತ­ನೆ­ಗ­ಳಷ್ಟೇ ಆಗಿ ಉಳಿ­ಯು­ವು­ದಿಲ್ಲ. ಕೊನೆ­ಯಲ್ಲಿ ಅರಿ­ವಾ­ಗುವ ಭಾವ ಇಡೀ ಕವಿ­ತೆ­ಯನ್ನು ಬೆಳ­ಕಾ­ಗಿ­ಸು­ತ್ತದೆ. ಮನುಷ್ಯ ತನ್ನ ಯೋಚ­ನೆ­ಯಲ್ಲಿ, ಬುದ್ಧಿ­ವಂ­ತಿ­ಕೆ­ಯಲ್ಲಿ, ಜ್ಞಾನ­ದಲ್ಲಿ ಸಾಯುವ ಮೊದಲೇ ಸಾವನ್ನು ಕಾಣ­ಬಲ್ಲ. ಅದರ ಭೀಕ­ರ­ತೆ­ಯನ್ನು ಅರಿ­ಯ­ಬಲ್ಲ. ಆದರೆ ಪ್ರಾಣಿ­ಗ­ಳಿಗೆ ಸಾವೆಂ­ಬುದೇ ಇಲ್ಲ. ಯಾಕೆಂ­ದರೆ ಅವು­ಗ­ಳಿಗೆ ಸಾವಿನ ಬಗ್ಗೆ ಏನೇನೂ ಗೊತ್ತಿಲ್ಲ!
ಒಂದು ಕವಿ­ತೆ­ಯಲ್ಲಿ ಒಬ್ಬ ಕವಿಯ ವ್ಯಕ್ತಿತ್ವ ಅಭಿ­ವ್ಯ­ಕ್ತ­ಗೊ­ಳ್ಳು­ತ್ತದೆ ಅನ್ನು­ವುದೂ ಸುಳ್ಳು. ಕವಿ ಯಾವುದು ಅಲ್ಲವೋ ಅದು ಕವಿ­ತೆ­ಯಾಗಿ ಮೂಡು­ತ್ತದೆ. ಹೀಗಾಗಿ ಬೇಂದ್ರೆ ಹೇಳಿದ್ದು ನಿಜ; ಬೇಂದ್ರೆ­ಯೊ­ಳಗೆ ಒಬ್ಬ ಕವಿ­ಯಿ­ದ್ದಾನೆ. ಆ ಕವಿ ಬೇಂದ್ರೆಯೇ ಆಗಿ­ರ­ಬೇ­ಕಿಲ್ಲ. ಹಾಗೆ ನೋಡಿ­ದರೆ ಯಾವ ಲೇಖ­ಕನೂ ಇಡಿ­ಯಾಗಿ ಅವ­ನೊ­ಬ್ಬನೇ ಆಗಿ­ರು­ವು­ದಿಲ್ಲ. ಆತ ತನ್ನ ಕಾಲದ ಅಸಂ­ಖ್ಯಾತ ರೂಪ­ಕ­ಗಳ, ಪ್ರತಿ­ಮೆ­ಗಳ, ತಲ್ಲ­ಣ­ಗಳ ಒಟ್ಟು ಮೊತ್ತ.

ದೇವರು ರುಜು ಮಾಡಿ­ದನು; ಕವಿ ಪರ­ವ­ಶ­ನಾ­ಗುವ ಅದ ನೋಡಿ­ದನು!

ಅಲ್ಲಿ ಬರೀ ಕುವೆಂಪು ಮಾತ್ರ ಇದ್ದಿ­ದ್ದರೆ ಬಹುಶಃ ಅವರು ಪರ­ವ­ಶ­ರಾ­ಗು­ತ್ತಿ­ರ­ಲಿಲ್ಲ; ಬರೀ ನೋಡು­ತ್ತಿ­ದ್ದರು.

‍ಲೇಖಕರು Admin

January 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Gubbachchi Sathish

    ಕಾವ್ಯದ ವಿದ್ಯಾರ್ಥಿಗಳಿಗೆ ಜೋಗಿ ಮೇಷ್ಟರ ಪಾಠ ಚೆನ್ನಾಗಿದೆ.
    ಕವಿ­ತೆ­ಯೆಂ­ದರೆ ಬದುಕು. ಬರೆ­ಯ­ದಿ­ರು­ವುದು ಸಾವು. ಅಡಿ­ಗ­ರೊಮ್ಮೆ ಹೇಳಿ­ದರು;ಕಾವ್ಯ ನನಗೆ ಜೀವ­ನ್ಮ­ರ­ಣದ ಪ್ರಶ್ನೆ. ಬಹುಶಃ ಅದೇ ಸರಿ. ಹಸಿ­ವೆಯ ಹಾಗೆ ಕಾಡ­ದಿ­ದ್ದರೆ, ದಾಹದ ಹಾಗೆ ಕಂಗೆ­ಡಿ­ಸದೇ ಇದ್ದರೆ, ಕಾಮದ ಹಾಗೆ ತಪಿ­ಸದೇ ಇದ್ದರೆ, ಸಾವಿನ ಹಾಗೆ ಮೋಹಿ­ಸದೇ ಹೋದರೆ ಪದ್ಯ ಬರೆ­ಯ­ಬಾ­ರದು. ಕವಿತೆ ಬರೆದು ಕವಿ­ಯಲ್ಲ ಅನ್ನಿ­ಸಿ­ಕೊ­ಳ್ಳುವ ಬದಲು, ಬರೆ­ಯದೇ ಒಂದಲ್ಲ ಒಂದು ದಿನ ಕವಿ­ಯಾ­ದೇನು ಅಂತ ಕಾಯು­ವುದು ಮೇಲು.
    ಥ್ಯಾಂಕ್ಯೂ ಸರ್.

    ಪ್ರತಿಕ್ರಿಯೆ
  2. sangeetha raviraj

    ಕವಿತೆಯ ಬಗೆಗೇ ‘ಅರ್ಥವತ್ತಾದ ಮಾತುಗಳು ಸರ್

    ಪ್ರತಿಕ್ರಿಯೆ
  3. ಶಮ, ನಂದಿಬೆಟ್ಟ

    ಶಿವ ಶಿವಾ ಅತ್ತ ಹಳಬರೆನಿಸಿಕೊಳ್ಳುವಷ್ಟು ವಯಸ್ಸಾಗದೇ ಹೊಸಬರೆನಿಸಿಕೊಳ್ಳುವಷ್ಟು ಧೈರ್ಯವಿಲ್ಲದೇ ಹೀಗೇ ಏನೂ ಬರೆಯೂ ಆಗದೇ ಇರುವ ನನ್ನಂಥವರನ್ನು ಈ ಥರ ಬರೆದು ಬರೆದೇ ತಲೆ ಕೆಡಿಸಬಲ್ಲವರಿದ್ದರೆ ಅವರ ಹೆಸರು “ಜೋಗಿ” ಅನ್ವರ್ಥ ನಾಮ !!!

    ಪ್ರತಿಕ್ರಿಯೆ
  4. ಅನಿಲ ತಾಳಿಕೋಟಿ

    ಕೆಲವೊಬ್ಬರಿರುತ್ತಾರೆ – ಮಾತಾಡಿದೆಲ್ಲವೂ ತಾನೇ ತಾನೇ ಅರ್ಥ ಸ್ಪುರಿಸುವಂತೆ.
    ಇನ್ನೂ ಕೆಲವೊಬ್ಬರಿರುತ್ತಾರೆ -ಮಾತಾಡಿದೆಲ್ಲವೂ ತಾನೇ ತಾನಾಗಿ ಹಾಡಾದಂತೆ
    ಇನ್ನೂ ಇನ್ನೂ ಕೆಲವೇ ಕೆಲವೊಬ್ಬರಿರುತ್ತಾರೆ – ಗದ್ಯ ಬರಹವೆಲ್ಲವೂ ಪದ್ಯದಂತೆ ಸೊಗಸಾಗಿಸುವವರು.
    ಜೋಗಿ ಯಾವ ಗುಂಪಿನಲ್ಲಿ ಬರತ್ತಾರೆ ಹೇಳುವ ಅಗತ್ಯವಿಲ್ಲ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: