ಕುಂ ವೀ ಕಾದಂಬರಿ ಝಲಕ್: ರಾಜಭವನವನ್ನು ಪ್ರವೇಶಿಸಿದರು..

ನಿನ್ನೆಯಿಂದ ಮುಂದುವರಿದದ್ದು… 

ಸ್ವಲ್ಪ ರಕ್ತದೊತ್ತಡ ಹೆಚ್ಚಿದ ಪರಿಣಾಮದಿಂದಾಗಿ ಪಕ್ಷದ ಈರ್ಮ ಈ ಚರ್ಚೆ ಶುಷ್ಕ ಎನ್ನಿಸುತ್ತಿಲ್ಲವೆ ಗಣ್ಯಮಾನ್ಯರೆ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ನೇರಪ್ರಶ್ನೆ! ತಾವು ರಾಜಿನಾಮೆ ಸಲ್ಲಿಸುವಿರೋ! ಅಥವಾ ಚುನಾಯಿತ ಶಾಸನಸಭೆ ವಿಸರ್ಜಿಸುವಿರೋ! ಮಧ್ಯಂತರ ಚುನಾವಣೆ ನಡೆದಲ್ಲಿ ತಾವು ಸಕ್ರಿಯವಾಗಿ ಪಕ್ಷದ ಗೆಲುವಿಗೆ ಶ್ರಮಿಸುವಿರೋ! ಎಂದ ಬಳಿಕ ಬಲಗೈಯನ್ನು ಹೃದಯಭಾಗದ ಮೇಲಿರಿಸಿಕೊಂಡರು.

ನಿಷ್ಪತ್ತಿ ಅವರಿಗೆ ಪ್ರತಿಕ್ರಿಯೆ ನೀಡುವುದು ಅನಿವಾರ್ಯವಾಯಿತು. ಸೂಕ್ತ ಮಾತುಗಳನ್ನು ಮನಸ್ಸಿನಲ್ಲಿ ಮೆಲುಕು ಹಾಕಿಕೊಳ್ಳಲೆಂದು ಮೌನವಹಿಸಿದರು. ಮೃದುಸ್ವಭಾವ, ಮಾತಿನ ಅತಿಕಡಿಮೆ ಬಳಕೆ, ನಾಚಿಕೆ ಹಿಂಜರಿಕೆ, ಆಧ್ಯಾತ್ಮ ಮನೋಗುಣ, ಮಹತ್ವಾಕಾಂಕ್ಷಾ ಶೂನ್ಯ ನಡವಳಿಕೆ ಶ್ರೀಯುತರ ರಾಜಕೀಯ ಹಿನ್ನಡೆಗೆ ಪ್ರಮುಖ ಕಾರಣ. ತಾವು ಎಂಥ ಆಧ್ಯಾತ್ಮಜೀವಿ ಎಂದರೆ ದೈನಂದಿನ ಪ್ರತಿಯೊಂದು ಕ್ರಿಯೆಗಳನ್ನು ಪ್ರಾರಂಭಿಸುವುದು ಮಂತ್ರಗಳ ಪಠಣದೊಂದಿಗೆ. ಲೌಕಿಕತೆಯನ್ನು ಅಲೌಕಿಕತೆಯ ಚೌಕಟ್ಟಿನೊಳಗೆ ಕಲಾತ್ಮಕವಾಗಿ ಅಳವಡಿಸುವಲ್ಲಿ ಶ್ರೀಯುತರು ನಿಷ್ಣಾತರು. ಏಕಕಾಲಕ್ಕೆ ಕ್ರೋಧಾರಣ್ಯವನ್ನೂ, ಋಷ್ಯಮೂಕ ಕಿಷ್ಕಿಂಧೆಯನ್ನೂ ಧ್ಯಾನಿಸುವ ಕಾರಣಕ್ಕೆ ಶ್ರೀಯುತರು ನಿರ್ಣಾಯಕ ಸಂದರ್ಭಗಳಲ್ಲಿ ಹಿಂಜರಿತವನ್ನು ಅನುಭವಿಸುವುದುಂಟು. ಈರ್ಮ ಅತಿನಿಷ್ಟುರತೆಯಿಂದ ಕೇಳಿದಾಗಲೂ ಅವರು ಮೌನವಹಿಸಿದ್ದಕ್ಕೆ ಅದೂ ಒಂದು ಕಾರಣ. ಅಧ್ಯಕ್ಷರು ತಮ್ಮ ಹಿತೈಷಿಗಳು ಮಾರ್ಗದರ್ಶಕರು. ತಮ್ಮನ್ನು ಮುಖ್ಯಮಂತ್ರಿ ಮಾಡುವಲ್ಲಿ ಶೀಯುತರ ಪಾತ್ರ ಸದಾ ಸ್ಮರಣೀಯ. ಅವರ ಪ್ರಶ್ನೆ ಕುರಿತು ಸ್ವಲ್ಪ ಗಲಿಬಿಲಿಗೊಂಡರು. ಬಳಿಕ ಚೇತರಿಸಿಕೊಂಡರು. ತಮ್ಮ ಮುಂದಿದ್ದ ನ್ಯಾ ಕಾನಕುಡಿಯವರ ವರದಿಯನ್ನು ಕಾಕಬಲಿಯವರ ಮುಂದೆ ಮೆಲ್ಲಗೆ ಸರಿಸಿದರು. ಅದು ನಿಮ್ಮಲ್ಲಿಯೇ ಇರಬೇಕೆಂದು ಸನ್ನೆ ಮಾಡಿದರು. ನಂತರ..

ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಸದ್ಯದ ಪರಿಸ್ಥಿತಿ ಅನುಕೂಲಕರವಾಗಿಲ್ಲ, ಇದು ತಮ್ಮೆಲ್ಲರಿಗೂ ತಿಳಿದ ವಿಷಯ. ಕೇವಲ ರಾಜಿನಾಮೆ ಸಲ್ಲಿಸಿದರೆ ಮಹಿಷ್ಮತಿರಾಜ್ಯದ ಆಡಳಿತ ಸ್ವಾರ್ಥಿಗಳ ಕಪಟಿಗಳ ಸ್ವಜನಪಕ್ಷಪಾತಿಗಳ ಬಂಡವಾಳಶಾಹಿ ಕೈಗೊಂಬೆಗಳ ಪಾಲಾಗುವುದು. ಆದ್ದರಿಂದ ಒಂದು ನಿರ್ಣಯಕ್ಕೆ ಬಂದಿರುವೆನು. ನಾಳೆ ಬೆಳೆಗ್ಗೆ ಎಂಟರಿಂದ ಒಂಬತ್ತರವರೆಗೆ ರಾಹುಕಾಲವಿರುವುದು. ಆ ನಂತರ ಸಹೋದ್ಯೋಗಿಗಳ ಸಂಗಡ ರಾಜಭವನವನ್ನು ಪ್ರವೇಶಿಸುವೆ. ಘನವೆತ್ತ ರಾಜ್ಯಪಾಲರಾದ ಗುಣಧಾಮ ಕಾಲ್ಗೋದ್ ಅವರನ್ನು ಭೆಟ್ಟಿಯಾಗುವೆ. ಸದ್ಯದ ರಾಜಕಾರಣವನ್ನು ಸೂಕ್ತಮಾತುಗಳಲ್ಲಿ ವಿವರಿಸುವೆ. ಆದರೆ ಶಾಸನಸಭೆಯನ್ನು ವಿಸರ್ಜಿಸಲು ಇನ್ನೂ ನಿರ್ಧರಿಸಿಲ್ಲ. ಮುಂದಿನದೆಲ್ಲ ದೈವೇಚ್ಚೆ ಎಂದು ಕರಜೋಡಿಸಿದರು. ಏನನ್ನೋ ಯೋಚಿಸುತ್ತಿದ್ದ ಈರ್ಮ

ನೀವು ರಾಜಿನಾಮೆ ಸಲ್ಲಿಸಲಿರುವುದು ವಿಷಾದಕರ ಸಂಗತಿ. ನಿಮ್ಮ ಆಡಳಿತ ವೈಖರಿಯಿಂದ ವರಿಷ್ಠರು ಸಂತೃಪ್ತರಾಗಿರುವರು. ಪುನಃ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದೆಂಬ ವಿಶ್ವಾಸ ನಮ್ಮೆಲ್ಲರಿಗಿದೆ. ಆದರೆ, ಹಲವು ಪಕ್ಷಗಳಿಗೆ ವಲಸೆ ಹೋಗಿರುವ ಪಕ್ಷದ ಹಿರಿಕಿರಿಯ ಕಾರ್ಯಕರ್ತರ ಮನವೊಲಿಸಬೇಕು, ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಬೇಕು, ನೀವು ಚುನಾವಣೆಯಲ್ಲಿ ಸಕ್ರಿಯರಾಗಬೇಕು. ದೈವೇಚ್ಚೆ ಇದ್ದಲ್ಲಿ ಪುನಃ ನೀವು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬೇಕು. ಇದು ವರಿಷ್ಠರು ಕಳಿಸಿರುವ ಸಂದೇಶದ ಸಾರಾಂಶ, ಇದಕ್ಕೆ ತಾವು ಏನು ಹೇಳುವಿರಿ? ಎಂದು ಕೇಳಿದರು. ಉಳಿದವರು ಹೌದೌದೆಂದು ಧ್ವನಿಗೂಡಿಸಿದರು.

ಸನ್ಮಾನ್ಯ ಜಗದುದರ ನಿಷ್ಪತ್ತಿ ಎಡಗೈಯಿಂದ ಕನ್ನಡಕ ತೆಗೆದರು. ಕಣ್ಣಲ್ಲಿನ ನೀರಿನ ಅಂಶವನ್ನು ಉತ್ತರೀಯ ಅಂಚಿನಿಂದ ಒರೆಸಿಕೊಂಡರು. ಗದ್ಗದಿತರಾಗಿ ತಾವು ಭಾವಜೀವಿಗಳೆಂದು ಅತಿಗಣ್ಯರಿಗೆ ಮನವರಿಕೆ ಮಾಡಿಕೊಟ್ಟರು. ದೀರ್ಘವಾಗಿ ಉಸಿರೆಳೆದುಬಿಟ್ಟರು. ಸ್ವಲ್ಪ ನೀರು ಕುಡಿದು ನಾಲಗೆಯನ್ನು ಪುನಃಶ್ಚೇತನಗೊಳಿಸಿದರು. ಎಲ್ಲರ ಮುಖಗಳ ಕಡೆ ದೈನ್ಯತೆಯಿಂದ ನೊಡಿದಬಳಿಕ..

ಮಹಿಷ್ಮತಿರಾಜ್ಯ ಪುರಾತನವಾದುದು ಪವಿತ್ರವಾದುದು. ಆದರೆ ರಾಜ್ಯದ ಬಹುಪಾಲು ರಾಜಕಾರಣಿಗಳು ಭ್ರಷ್ಟರು. ಮದ್ಯ ಮಾನಿನಿ ಹಣ ತೋಳ್ಬಲದ ನೆರವಿನಿಂದ ರಾಜಕಾರಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತದಾರನನ್ನೂ ಭ್ರಷ್ಟನನ್ನಾಗಿಸಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆಡಳಿತ ನಡೆಸುವವರು ಚುನಾಯಿತ ಜನಪ್ರತಿನಿಧಿಗಳಲ್ಲ. ನೇಪಥ್ಯದಲ್ಲಿದ್ದು ಆಡಳಿತ ನಡೆಸುವುದು ಗುತ್ತಿಗೆದಾರರು ಅಬಕಾರಿ ಕುಳಗಳು ಉದ್ಯಮಿಗಳು ಅಪರಾಧದ ಹಿನ್ನಲೆವುಳ್ಳವರು. ಜನಪ್ರತಿನಿಧಿಗಳ ದೌರ್ಬಲ್ಯಗಳನ್ನು ಅಸ್ತ್ರ ಮಾಡಿಕೊಳ್ಳುವುದು ಅವರೆ! ಇರದಿರುವ ದೌರ್ಬಲ್ಯಗಳನ್ನು ಸೃಷ್ಟಿಸುವುದು ಅವರೆ! ಭುವನವಿಜಯವನ್ನು ತಮ್ಮ ಮೂಗಿನನೇರಕ್ಕೆ ಕುಣಿಸುವುದು ಅವರೆ! ನನ್ನಂಥವರ ಚಾರಿತ್ರ್ಯಹರಣ ಮಾಡಲು ವಿಫಲ ಪ್ರಯತ್ನ ನಡೆಸಿದ್ದು ಸಹ ಅವರೆ! ಪತ್ರಿಕೆಗಳಲ್ಲಿ ನೀವೂ ಗಮನಿಸಿರಬಹುದು. ನಾನು ಅಂಥವನಾಗಿದ್ದರೆ ಖಂಡಿತ ಪೂಣರ್ಾವಧಿ ಅಧಿಕಾರದಲ್ಲಿರುತ್ತಿದ್ದೆ. ಮುಖ್ಯಮಂತ್ರಿ ಸ್ಥಾನಕ್ಕಿಂತ ಆತ್ಮಸಾಕ್ಷಿ ಮುಖ್ಯ. ಆದ್ದರಿಂದ ತಮ್ಮಲ್ಲಿ ಕೈಮುಗಿದು ವಿನಂತಿಸುವೆ, ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬೇಡಿ. ರಾಜಿನಾಮೆ ಸಲ್ಲಿಸಿದ ಬಳಿಕ ರಾಜಕೀಯ ಸನ್ಯಾಸ ಸ್ವೀಕರಿಸಲು ನಿರ್ಧರಿಸಿರುವೆ. ಇದು ಗುರುವರ್ಯರ ಕಟ್ಟಪ್ಪಣೆ ಎಂದು ಪುನಃ ಗದ್ಗದಿತರಾದರು.

ಶ್ರೀಯುತರು ಮಾತು ಆರಂಭಿಸಿದೊಡನೆ ಮೌನ ಆವರಿಸಲಾರಂಭಿಸಿತ್ತು. ತಮ್ಮ ಮಾತಿಗೆ ಪೂರ್ಣವಿರಾಮ ನೀಡಿದೊಡನೆ ಮೌನ ವಿಷಾದವಾಗಿ ಪರಿಣಮಿಸಿತು. ರಾಜಕಾರಣದ ಪ್ರತಿಕ್ರಿಯೆಗಾಗಿ ತಡಕಾಡಿದರು ಈರ್ಮ. ಆದರೆ ಹೊಳೆಯಲಿಲ್ಲ. ಅಕುಲ್ ದಕ್ಷಾರಿ ಕಡೆ ನೋಡಿದರು. ಓಘವಂತ್ ಸಿವಂಗಿ ಕಾನಕುಡಿಯವರ ಅವಿರತಶ್ರಮದ ವರದಿಯನ್ನು ತಮ್ಮ ಬ್ರಿಫ್ಕೇಸ್ಗೆ ಸೇರಿಸಿದರು. ಅದನ್ನು ಕೊನೆ ಕುರ್ಚಿಯಲ್ಲಿ ಕುಳಿತ್ತಿದ್ದ ನಗರದ ಪೋಲಿಸ್ ಆಯುಕ್ತ ಕಾಕಬಲಿ ಅವರ ಕಡೆ ತಳ್ಳಿದರು ಸದ್ದಾಗದಂತೆ. ಜವಾನ ಕಕ್ಕೋಲ ಗೋಡೆಗಾತು ಸಣ್ಣಪ್ರಮಾಣದ ನಿದ್ದೆಯನ್ನು ಆರಂಭಿಸಿದ್ದ, ರಾಜಕಾರಣದ ಮಾತುಗಳು ನಿದ್ದೆಗೆ ಜೋಗುಳಪ್ರಾಯದಂತಿದ್ದವು, ಮಾತು ಸ್ಥಂಭಿಸಿ ಮೌನ ಆವರಿಸಿದೊಡನೆ ಬಡಿದೆಬ್ಬಿಸಿದಂತೆ ಎಚ್ಚರವಾದ. ದಿಗ್ಭ್ರಮಿತನಾಗಿ ಕಣ್ಣರಳಿಸಿದ, ಕರೆದಿರಾ ಬುದ್ದಿ ಎಂದೂ ನುಡಿಯುತ್ತ ಒಂದೆರಡು ಹೆಜ್ಜೆ ಮುಂದಿರಿಸಿದ. ಎಲ್ಲರು ಅವನ ಕಡೆ ನೋಡಿದರು. ಅವನು ತಮ್ಮ ಮಾತುಗಳನ್ನು ಕೇಳಿಸಿಕೊಂಡಿರಲಾರ ಎಂದು ಸಮಾಧಾನಪಟ್ಟುಕೊಂಡರು. ಚರ್ಚೆಗೆ ಮಂಗಳ ಪಲುಕುವುದು ವಾಡಿಕೆ. ಸ್ಥೂಲದೇಹಿ ಈರ್ಮ ನಿಟ್ಟುಸಿರುಬಿಟ್ಟರು. ಗೋಡೆ ಗಡಿಯಾರದ ಕಡೆಗೂ ನಿಷ್ಪತ್ತಿಯವರ ಕಡೆಗೂ ಏಕಕಾಲಕ್ಕೆ ನೋಡಿದರು. ಯಾರಾದರು ಏನಾದರು ಪ್ರತಿಕ್ರಿಯಿಸಬಹುದೆಂದು ನಿರೀಕ್ಷಿಸಿದರು. ಮೌನಕ್ಕೆ ಪರ್ಯಾಯವಾಗಿ ಮಾತುಗಳಿರಲಿಲ್ಲ. ಎರಡೂ ಕೈಗಳನ್ನು ಟೇಬಲ್ಲಿಗೆ ಊರಿ ಮೇಲೆದ್ದರು. ಮುಖ್ಯಮಂತ್ರಿಗಳ ಕಡೆಗೆ ಅಭಿಮಾನದಿಂದ ನೋಡಿದರು. ಶ್ರೀಯುತರು ಸನ್ಯಾಸತ್ವಕ್ಕೆ ತಕ್ಕ ವ್ಯಕ್ತಿ ಎಂದು ನಿರ್ಧರಿಸಿದರು. ಮೆಲ್ಲಗೆ ನಡೆಯುವುದನ್ನು ಗಮನಿಸಿದ ನಿಷ್ಪತ್ತಿ ಸಹ ಮೇಲೆದ್ದರು. ನಿಂತು ತಮ್ಮ ಅಜಾನುಬಾಹುತನವನ್ನು ಸಾಬೀತುಪಡಿಸಿದರು. ಪರಸ್ಪರ ತೋಳುಗಳನ್ನು ಉದ್ದವಾಗಿ ಅರಳಿಸಿದರು. ಅವರನ್ನು ಇವರು ಅಲಂಗಿಸಿಕೊಂಡರೋ! ಇವರನ್ನು ಅವರು ಆಲಂಗಿಸಿಕೊಂಡರೋ! ದ್ವಿದಳ ಧಾನ್ಯದಂತೆ ನಿಧಾನವಾಗಿ ಬೇರ್ಪಟ್ಟರು. ಈರ್ವ ಶ್ರೀಯುತರನ್ನು ಅಪಾದಮಸ್ತಕ ದಿಟ್ಟಿಸುತ್ತ..

ಸನ್ಮಾನ್ಯ ಜಗದುದರ ನಿಷ್ಪತ್ತಿ ಅವರೆ, ನಿಮ್ಮ ನಿರ್ಧಾರ ಅಚಲ ಎಂಬುದು ನಮ್ಮೆಲ್ಲರಿಗೆ ಗೊತ್ತು. ಎರಡೂವರೆ ವರ್ಷಗಳ ಅವಧಿಯಲ್ಲಿ ಪಾರದರ್ಶಕ ವ್ಯಕ್ತಿತ್ವದ ನೀವು ಏರಿಳಿತಗಳನ್ನು ಕಂಡಿದ್ದೀರಿ, ಅಪಮಾನಗಳನ್ನು ಜೀರ್ಣಿಸಿಕೊಂಡಿದ್ದೀರಿ. ಎಲ್ಲಾ ಸಮಕಾಲೀನ ರಾಜಕಾರಣಿಗಳ ಮೇಲಿರುವಂತೆ ತಮ್ಮ ಮೇಲೂ ಮೊಕದ್ದಮೆಗಳಿವೆ. ಅವುಗಳನ್ನು ಇತ್ಯರ್ಥಗೊಳಿಸುವುದು ನಮ್ಮ ಜವಾಬ್ದಾರಿ. ನಿಶ್ಚಿಂತೆಯಿಂದಿರಿ ಮಾನ್ಯರೆ. ನಾಳೆಯೇ ತಾವು ಮುಖ್ಯಮಂತ್ರಿ ಸ್ಥಾನದಿಂದ ಗೌರವಪೂರ್ವಕವಾಗಿ ನಿರ್ಗಮಿಸಿ. ಪಕ್ಷದ ವರಿಷ್ಟರ ಅಭಿಪ್ರಾಯ ಇದೇ ಆಗಿದೆ. ಆದರೆ ಅಲ್ಲಿಯವರೆಗೆ ಈ ವಾರ್ತೆ ಗೋಪ್ಯವಾಗಿರಲಿ, ಮುಂದಿನ ಮುಖ್ಯಮಂತ್ರಿ ಯಾರೆಂದು ಪಕ್ಷದ ವರಿಷ್ಠರು ನಿರ್ಧರಿಸುವರು ಎಂದು ಅಸ್ಖಲಿತವಾಗಿ ನುಡಿದರು.

ಬಳಿಕ ಒಬ್ಬೊಬ್ಬರಂತೆ ಶ್ರೀಯುತರನ್ನು ಅಭಿನಂದಿಸಿದರು, ವಿಶ್ರಾಂತ ಜೀವನಕ್ಕೆ ಶುಭಹಾರೈಸಿದರು.

***

ಮರುದಿವಸ! ಮುಖ್ಯಮಂತ್ರಿ ಜಗದುದರ ನಿಷ್ಪತ್ತಿ ತಮ್ಮ ನಿವಾಸದಲ್ಲಿ ಇಷ್ಟದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಾತಃಕಾಲ ಏಳರಿಂದ ಎಂಟರವರೆಗೆ. ಕುಟುಂಬ ಸದಸ್ಯರ ಆತಂಕವನ್ನು ನಿವಾರಿಸಲಿಲ್ಲ. ಭೆಟ್ಟಿಯಾದ ಮಿತ್ರರಿಗಾಗಲೀ, ಕ್ಷೇತ್ರದ ಅತಿಗಣ್ಯ ಮುಖಂಡರಿಗಾಗಲೀ, ಆಪ್ತಸಹಾಯಕರಿಗಾಗಲೀ ನಿಜಸಂಗತಿ ತಿಳಿಸಲಿಲ್ಲ. ಎಲ್ಲರ ಸಂಗಡ ಲಘು ಉಪಹಾರ ಸೇವಿಸಿದರು. ಮೊಮ್ಮಕ್ಕಳನ್ನು ಹತ್ತಿರ ಕರೆದು ಮುದ್ದಿಸಿದರು. ಸಂತೋಷದ ರಾಯಭಾರಿಯಂತೆ ಕಂಗೊಳಿಸಿದರು. ಸಮಚಿತ್ತದಿಂದ ಖಾಸಗಿ ಕೋಣೆಯನ್ನು ಪ್ರವೇಶಿಸಿದರು. ಎರಡಕ್ಕೂ ಹೆಚ್ಚು ಕಪಾಟುಗಳಲ್ಲಿದ್ದ ರಾಜಕಾರಣದ ಅಚ್ಚಬಿಳಿವರ್ಣದ ಸಮವಸ್ತ್ರಗಳನ್ನು ಒಂದೊಂದಾಗಿ ಸ್ಪರ್ಶಿಸಿದರು. ಅಂತಿಮವಾಗಿ ಕೊನೆಯಕಪಾಟಿನಲ್ಲಿ ತಮ್ಮ ದಿವ್ಯನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಕೇಸರಿಮಿಶ್ರಿತ ಖಾದಿ ಉಡುಪನ್ನು ಕೈಗೆತ್ತಿಕೊಂಡರು. ನಾಸಿಕಾಗ್ರದಿಂದ ಮೂಸಿ ಪುಳಕಿತರಾದರು. ಕಳೆದ ರಾತ್ರಿ ತಾವು ಒರಟಾಗಿ ವರ್ತಿಸಿದ್ದಿರಬಹುದೆ! ಯೋಚಿಸಿದರು. ಅಂಥ ಅಸಹಜ ವರ್ತನೆಗೆ ಬಲಿಯಾದ ಗೋಡೆಗಡಿಯಾರವನ್ನು ಮತ್ತು ಕಕ್ಕೋಲನನ್ನು ಸ್ಮರಣೆಗೆ ತಂದುಕೊಂಡರು. ವಸ್ತ್ರಧಾರಣ ಮಾಡುತ್ತ ಪಶ್ವಾತ್ತಾಪ ಅನುಭವಿಸಿದರು. ಧರಿಸಿ.. ಹೊರಬಂದರು.

ಮಾಧ್ಯಮದವರು ಸಚಿವರು ಆಪ್ತರು ತಮ್ಮನ್ನು ಚುನಾಯಿಸಿದ ಪಂತುರಾವಳಿ ಶಾಸನಸಭಾ ಕ್ಷೇತ್ರದ ಕೆಲವು ಗಣ್ಯರು ಅಭಿಮಾನಿಗಳು ಮುಖ್ಯಮಂತ್ರಿಸ್ಥಾನದ ಮಹತ್ವಾಕಾಂಕ್ಷಿಗಳು ಮತ್ತಿತರರು ಗೋಚರಿಸಿದರು. ಅವರೆಲ್ಲರು ಪ್ರಶ್ನಾರ್ಥಕಚಿಹ್ನೆಗಳನ್ನು ಹೋಲುತ್ತಿದ್ದರು. ಶ್ರೀಯುತರನ್ನು ನೋಡಿ ವಿಸ್ಮಿತರಾದರು. ಕಣ್ಣಲ್ಲಿ ನೀರು ತಂದುಕೊಂಡವರಲ್ಲಿ ಮಾಧ್ಯಮದವರಿರಲಿಲ್ಲ. ಮ್ಲಾನವದನರಾದವರಲ್ಲಿ ಸಚಿವ ಸಹೋದ್ಯೋಗಿಗಳಿರಲಿಲ್ಲ. ನಿಡುಸುಯ್ಯುತ್ತಿದ್ದವರಲ್ಲಿ ಕುಟುಂಬದ ಸದಸ್ಯರಿರಲಿಲ್ಲ, ದಿಗ್ಭ್ರಮಿತರಾದವರಲ್ಲಿ ಕೈತೋಟದ ಮಾಲಿಗಳು ತರುಲತೆಗಳಿರಲಿಲ್ಲ. ಮೌನ ಅವಲಂಭಿತರಲ್ಲಿ ವಾಚಾಳಿಗಳಿರಲಿಲ್ಲ. ಪರಿಮಳಯುಕ್ತ ಸೂತಕ ವಾತಾವರಣ ನೆಲಸಿತ್ತು. ಎಲ್ಲರಲ್ಲಿ ಏನೋ ಹೇಳುವ ಹಂಬಲವಿತ್ತು, ಎಲ್ಲರಲ್ಲಿ ಏನೋ ಕೇಳುವ ಕುತೂಹಲವಿತ್ತು. ಆದರೆ ಮಾಧ್ಯಮ ಸಲಹೆಗಾರ ಡಾ ನೈಮಿತ್ತಿಕ ಇಂದಗಿ ಸನ್ಮಾನ್ಯರ ಶ್ರವಣೇಂದ್ರಿಯದಲ್ಲಿ ಸಾಂದಭರ್ಿಕ ಸಲಹೆ ಪ್ರಸಾದಿಸಿದರು. ಬಳಿಕ ಮಾಧ್ಯಮದವರ ಕಡೆಗೂ ನೋಡಿದರು. ವಿವಿಧ ಕೋನಗಳಲ್ಲಿ ಸುತ್ತುವರಿದ ಮಾಧ್ಯಮದವರು ಕೇಳಿದ ಪ್ರಶ್ನೆಗಳು ಹರಿತವಿದ್ದವು. ಅವುಗಳನ್ನು ಇವರು ನಿರೀಕ್ಷಿಸಿದ್ದರು. ಅಡ್ಡಗೋಡೆ ಮೇಲೆ ದೀಪವಿರಿಸಿದಂತೆ ಕ್ಲುಪ್ತವಾಗಿ ಉತ್ತರಿಸಿದರು. ಸಂಜೆವೇಳೆಗೆ ಮಹಿಷ್ಮತಿರಾಜ್ಯದ ರಾಜಕಾರಣ ಹೊಸರೂಪ ಪಡೆಯಲಿರುವುದಾಗಿ ಹೇಳುವುದನ್ನು ಮರೆಯಲಿಲ್ಲ. ಸಾಧ್ಯವಾದಷ್ಟು ಗೋಪ್ಯತೆ ಕಾಪಾಡಿದರು. ಮಾಧ್ಯಮದವರು ಅಲ್ಲಿಂದ ನಿರ್ಗಮಿಸಿದ ಬಳಿಕ..

ಸಂದರ್ಶಕರೊಂದಿಗೆ ಆಡಿದ ಮಾತುಗಳು ಸಹ ಸೌಜನ್ಯಯುತವಾಗಿದ್ದವು. ಅವರಲ್ಲಿ ಕೆಲವರನ್ನು ಹತ್ತಿರ ಬರಮಾಡಿಕೊಂಡರು. ಅವರ ಕಿವಿಯಲ್ಲಿ ಇವರೇನು ಹೇಳಿದರೋ! ಇವರ ಮಾತುಗಳನ್ನು ಅವರು ಯಾವ ಅರ್ಥದಲ್ಲಿ ಪರಿಭಾವಿಸಿದರೋ! ಕಾಲ್ನಡೆಗೆಯಲ್ಲಿ ಹೊರಟು ರಾಜಭವನವನ್ನು ತಲುಪುವುದೆಂದು ನಿರ್ಧರಿಸಿದರು. ನಿರ್ಧರಿತ ವೇಳೆಗೆ ನಡೆಗೆಗೆ ಚಾಲನೆ ನೀಡಿದರು. ಮಾಧ್ಯಮದವರೂ ಅವರನ್ನು ಹಿಂಬಾಲಿಸಿದರು. ಪೌಲಸ್ತ್ಯಹೋಟಲ್ ತಿರುವಿನಲ್ಲಿ ಕಾರ್ಯದರ್ಶಿ ಓಘವಂತ್ ಸಿವಂಗಿ ಶ್ರೀಯುತರ ದಿಬ್ಬಣ ಸೇರಿದರು. ಇನ್ನೊಂದು ವೃತ್ತದಲ್ಲಿ ಇನ್ನೊಬ್ಬರು, ಮಗದೊಂದು ವೃತ್ತದಲ್ಲಿ ಮತ್ತೊಬ್ಬರು! ರಾಜಭವನ ತಲುಪುವಷ್ಟರಲ್ಲಿ ಸಹವಂದಿಗರ ಸಂಖ್ಯೆ ವೃದ್ದಿಸಿತು, ವಂದಮಾಗಧರ ಸಂಖ್ಯೆ ಕ್ಷೀಣಿಸಿತು.

ರಾಜಭವನದ ಭದ್ರತಾ ಮುಖ್ಯಸ್ಥ ಏಣಧರ ಸುತಲ್ ಅವರೆಲ್ಲರನ್ನು ನೋಡಿದ, ಸಮೀಪಿಸಿ ತಡೆದ. ಸಿವಂಗಿ ಮತ್ತು ಸುತಲ್ ನಡುವಿನ ಮಾತುಕತೆ ಸ್ಥಳೀಯ ಭಾಷೆಯಲ್ಲಿ ನಡೆಯಲಿಲ್ಲ. ಆದ್ದರಿಂದ ಯಾರಿಗೂ ಅರ್ಥವಾಗಲಿಲ್ಲ. ಭದ್ರತೆಯಷ್ಟೇ ಮುಖ್ಯ ಮುತ್ಸದ್ದಿಗಳ ನಡುವೆ ಘಟಿಸುವ ಮಾತುಕತೆ! ಮುಖ್ಯಮಂತ್ರಿಗಳಿಗಿಂತ ಕಾರ್ಯದರ್ಶಿ ಓಘವಂತ್ ಸಿವಂಗಿಯವರ ಮುಖದಲ್ಲಿ ಲವಲವಿಕೆಯ ಲಾಸ್ಯವಿತ್ತು. ಕಾರಣ ಗುಣಧಾಮ ಕಾಲ್ಗೋಧ್ ಸಹ ಐಎಎಸ್ ಪದವೀಧರರು. ಕೇಂದ್ರ ಸರ್ಕಾರದಲ್ಲಿ ಅತ್ಯುನ್ನತ ಪದವಿಯಲ್ಲಿದ್ದವರು. ಆ ಅವಧಿಯಲ್ಲಿ ಇವರು ಅವರ ಅಧೀನ ಅಧಿಕಾರಿಯಾಗಿದ್ದವರು. ಅವರ ಕುಟುಂಬದ ನಿಕಟವರ್ತಿ ಸಹ ಆಗಿದ್ದರು. ಅವರ ಕೌಟುಂಬಿಕ ಸೂಕ್ಷ್ಮ ಸಮಸ್ಯೆಗಳನ್ನು ಬಗೆಹರಿಸಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದ ಶ್ರೀಯುತರ ಏಕೈಕ ಸುಪುತ್ರನನ್ನು ರಕ್ಷಿಸಿದ್ದರು. ಹೀಗಾಗಿ ಸಿವಂಗಿ ವಾರದಲ್ಲಿ ಎರಡು ಸಲ ರಾಜಭವನವನ್ನು ಪ್ರವೇಶಿಸುವರು, ಘನವೆತ್ತರಿಗೆ ರಾಜ್ಯದ ರಾಜಕೀಯ ಸೂಕ್ಷ್ಮಗಳನ್ನು ತಿಳಿಸುವರು, ಅವರ ಕುಟುಂಬ ಸದಸ್ಯರೊಂದಿಗೆ ಅನ್ಯೋನ್ಯತೆಯಿಂದ ಒಡನಾಡುವರು, ಮುಖ್ಯಮಂತ್ರಿ ಜಗದುದರ ನಿಷ್ಪತ್ತಿ ರಾಜಪಾಲರ ವಿಶ್ವಾಸಕ್ಕೆ ಪಾತ್ರರಾಗಿರುವುದಕ್ಕೆ ಸಿವಂಗಿ ಕಾರಣ. ಅಂಥ ಸಿವಂಗಿ..

ತಾವೇ ಮುಂಚಿತವಾಗಿ ನೇರವಾಗಿ ರಾಜಭವನವನ್ನು ಪ್ರವೇಶಿಸಿದರು. ರಾಜಪಾಲರಿಗೆ ದೂರದಿಂದ ವಂದಿಸಿದರು. ಘನವೆತ್ತರ ಕಣ್ಸನ್ನೆಯಂತೆ ಪಾಕಶಾಲೆಯನ್ನೂ ಪ್ರವೇಶಿಸಿದರು. ಅದಕ್ಕೂ ಮೊದಲು ಓಘವಂತ್ ಅಲ್ಲಿ ಕಪಿತ್ಥನಗರದ ಪಾಕಪ್ರವೀಣನನ್ನು ನೇಮಿಸಿದ್ದರು. ಪುಳಿಯೊಗರೆ ಬಿಸಿಬೇಳೆಬಾತ್ ಮಸಾಲೆದೋಸೆ ಇಡ್ಲಿಸಂಬಾರ್ ಪಳದ್ಯಗಳ ಪರಿಮಳವನ್ನು ರಾಜಭವನದಲ್ಲಿ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಾಕಶಾಲೆಯಲ್ಲಿನ ಚಟವಟಿಕೆಗಳನ್ನು ಗಮನಿಸಿದರು. ಸ್ವಾದಿಷ್ಟತಿಂಡಿತಿನಿಸುಗಳ ಪರಿಮಳವನ್ನು ಆಸ್ವಾದಿಸಿದರು. ಕೋಸುಂಬರಿಯನ್ನು ತಾವೇ ಮಾಡಿದರು. ರಾಜ್ಯಪಾಲರಿಗೆ ಹೆಚ್ಚು ಬಡಿಸುವಂತೆ ಸೂಚಿಸಿದರು. ದಕ್ಷಿಣಾತ್ಯ ಊಟೋಪಹಾರಗಳನ್ನು ಉತ್ತೇಜಿಸಿದರು. ಕೆಲವು ಖಾದ್ಯಗಳ ರುಚಿ ನೋಡಿದರು. ಉಪ್ಪು ಹುಳಿ ಖಾರಗಳ ಪ್ರಮಾಣ ಕುರಿತಂತೆ ಉಪಯುಕ್ತ ಸಲಹೆ ಸೂಚನೆ ನೀಡಿದರು. ಬಳಿಕ ಅಂತಃಪುರ ಸದೃಶ ಕೋಣೆಯನ್ನು ಪ್ರವೇಶಿಸಿದರು. ಶ್ರೀಮತಿ ರಾಜಪಾಲರೆದುರು ಬಾಗಿ ಪಾದಾಭಿವಂದನೆ ಸಲ್ಲಿಸಿದರು. ದಾಂತೇದೇವಿಯವರ ಕೃಪೆಗೆ ಪಾತ್ರರಾದರು. ಪರಸ್ಪರ ಕ್ಷೇಮಲಾಭದ ವಿನಿಮಯ ನಡೆಸಿದರು. ಅವರು ಅಪೇಕ್ಷಿಸದಿದ್ದರೂ ತಮ್ಮ ಪುತ್ರಿ ಅನುನಯ ಅಮೇರಿಕೆಯಲ್ಲಿ ವಸ್ತ್ರವಿನ್ಯಾಸಶಾಸ್ತ್ರ ಅಧ್ಯಯನ ಮಾಡುತ್ತಿರುವುದಾಗಿ, ಆಕೆ ವಿನ್ಯಾಸಗೊಳಿಸಿದ ಉಡುಪವನ್ನು ಹಾಲಿವುಡ್ ತಾರೆ ಏಂಜಲಿನಾ ಜೂಲಿ ಧರಿಸಿ ಶ್ಲಾಘಿಸಿದ್ದಾಗಿ ವಿವರಿಸಿದರು. ಹೀಗೆ ರಾಜಭವನದಲ್ಲಿ ಮಿಂಚಿನ ಹೊಳೆ ಹರಿಸಿದ ಬಳಿಕ ಸಿವಂಗಿ ಹರ್ಷಚಿತ್ತರಾದರು.

ಮುಖ್ಯಮಂತ್ರಿ ಜಗದುದರ ನಿಷ್ಪತ್ತಿಯವರಂತೆ ರಾಜ್ಯಪಾಲ ಗುಣಧಾಮ ಕಾಲ್ಗೋಧ್ ಸಹ ಆಧ್ಯಾತ್ಮ ಜೀವಿ. ಸಚಿವ ಸಂಪುಟದಲ್ಲಿನ ಬ್ರಹ್ಮಚಾರಿಗಳನ್ನು ಗುರುತಿಸಿ ಪ್ರೊತ್ಸಾಹಿಸುವುದು ಅವರಿಗೆ ಪ್ರಿಯವಾದ ಕೆಲಸ. ಉತ್ತರರಾಜ್ಯಗಳ ಸಾಧುಸಂತರನ್ನು ವಾಸ್ತುಶಾಸ್ತ್ರಜ್ಞರನ್ನು ಜ್ಯೋತಿಷಿಗಳನ್ನು ದಕ್ಷಿಣ ರಾಜ್ಯಗಳಿಗೂ, ದಕ್ಷಿಣರಾಜ್ಯಗಳಲ್ಲಿನ ಸಾಧು ಸಂತರನ್ನು ಮತ್ತಿತರ ಸನಾತನಿಗಳನ್ನು ಉತ್ತರರಾಜ್ಯಗಳಿಗೂ! ಈ ಕೊಡುಕೊಳ್ಳುವಿಕೆ ಅನೂಚಾನವಾಗಿ ನಡೆಯುತ್ತಿರುವುದು ತಮ್ಮೀರ್ವರ ಅಧಿಕಾರದವಧಿಯಲ್ಲಿ. ಪರಸ್ಪರ ಮನಸ್ಸಿನಲ್ಲಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು, ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರು.

ಒಮ್ಮೆ ಏನಾಯಿತೆಂದರೆ! ಆರಂಭದ ಮುಂಗಾರು ಅಧಿವೇಶನದ ಉದ್ಘಾಟನಾ ಭಾಷಣ ಮಾಡಲೆಂದು ಘನವೆತ್ತರು ಭುವನವಿಜಯವನ್ನು ವೈಭವೋಪೇತವಾಗಿ ಪ್ರವೇಶಿಸಿದ್ದರು. ಆ ಸಂದರ್ಭದಲ್ಲಿ ಅವರ ಸಂಗಡ ಪಂ ಮೇಳಂಬ ಉತ್ಕರ್ ಹೆಸರಿನ ಆಧುನಿಕ ಸನ್ಯಾಸಿ ಇದ್ದ, ಆತ ಸೂಟುಬೂಟು ಧರಿಸಿದ್ದ, ಆತ ಉತ್ತರಕುರುದೇಶಕ್ಕೆ ಸೇರಿದವನಿದ್ದ. ಆತ ಪ್ರಖ್ಯಾತ ವಾಸ್ತುಶಾಸ್ತ್ರಜ್ಞನಿದ್ದ. ಘನವೆತ್ತರು ಶಾಸಕರನ್ನು ಉದ್ದೇಶಿಸಿ ನೀಡಿದ ಉಪನ್ಯಾಸವನ್ನು ತದೇಕಚಿತ್ತದಿಂದ ಆಲಿಸಿದ. ಶಾಸಕರ ಮುಖಚಹರೆಗಳನ್ನು ಕೂಲಂಕಷ ಅಧ್ಯಯನ ಮಾಡಿದ. ಇದ್ದಕ್ಕಿದ್ದಂತೆ ಏನೋ ಹೊಳೆಯತ್ತಿರುವುದಾಗಿ ಉದ್ಗರಿಸಿದ. ಲಿಂಬೆಹಣ್ಣನ್ನು ಭ್ರೂಮಧ್ಯೆ ಇದ್ದ ಸಪ್ತವರ್ಣದ ತ್ರಿಶೂಲಾಕೃತಿ ತಿಲಕದ ಮೇಲಿರಿಸಿ ಪೈಶಾಚಿಕ ಮಂತ್ರ ಉಚ್ಚರಿಸಿದ. ಮಾರ್ಷಲ್ಗಳ ನೆರವಿನಲ್ಲಿ ಸಾಕ್ಷಾತ್ ಕಾರ್ಯದರ್ಶಿ ಓಘವಂತ ಸಿವಂಗಿ ಅವರ ಮಾರ್ಗದರ್ಶನದಲ್ಲಿ ಭುವನವಿಜಯದ ಒಳಹೊರಗು ತಿರುಗಾಡಿದ. ಘನವೆತ್ತರ ರೋಮಾಚ್ಛಾದಿತ ಕಿವಿಯಲ್ಲಿ ನುಡಿದ, ಅದು ಮಾರ್ಮಿಕವಾಗಿತ್ತು. ಘನವೆತ್ತರು ನವಮುಖ್ಯಮಂತ್ರಿಗಳ ಸ್ವಚ್ಛವಿದ್ದ ಕಿವಿಯಲ್ಲಿ ಪಿಸುನುಡಿದರು, ಅದೂ ಮಾರ್ಮಿಕವಾಗಿತ್ತು. ಘನವೆತ್ತರು ಸನ್ಮಾನ್ಯರಿಗೆ ಹೀಗೆಂದು ಹೇಳಿದರು. ಅವರ ಮಾತುಗಳಿಂದ ನಿಷ್ಪತ್ತಿ ಅಶ್ಚರ್ಯ ಸಂಭ್ರಮಪಟ್ಟರು. ಅವರ ಆಜ್ಞೆಯಂತೆ ಭುವನವಿಜಯದ ಪೂರ್ವಾಪರವಿದ್ದ ನೀಲನಕ್ಷೆಯನ್ನು ತರಿಸಿ ತೋರಿಸಿದರು. ಅದನ್ನು ಎರಡು ಹಗಲು ಮೂರು ದೀರ್ಘರಾತ್ರಿಗಳ ಪರ್ಯಂತ ಉತ್ಕರ್ ಪರಿಶೀಲಿಸಿದ.

ರಾಜಭವನದಲ್ಲಿ ಮೇಳಂಬ ಉತ್ಕರ್ ನೀಚಸ್ಥಾನದಲ್ಲಿ ಪದ್ಮಾಸನಯುಕ್ತರಾಗಿ ಕುಳಿತಿದ್ದ ತಂದೆ ವಯಸ್ಸಿನ ನಿಷ್ಪತ್ತಿಯವರನ್ನು ಉದ್ದೇಶಿಸಿ ಮಗೂ ನಿನ್ನ ಗ್ರಹಗತಿಗಳಿಗೂ ನೀನು ಮುಖ್ಯಮಂತ್ರಿ ಪದಗ್ರಹಣ ಮಾಡಿದ ವೇಳೆಯ ಗ್ರಹಗತಿಗಳಿಗೂ ನಡುವೆ ಅಜಗಜಾಂತರ ವ್ಯತ್ಯಾಸವಿರುವುದು. ಅದು ನಿನ್ನ ಆಡಳಿತದ ಮೇಲೆ ನೇರ ಪರಿಣಾಮ ಬೀರುವುದು. ಮುಂದಿನ ದಿವಸಗಳಲ್ಲಿ ನಿನ್ನ ಶತ್ರುಗಳ ಸಂಖ್ಯೆ ಹೆಚ್ಚುವುದು. ನಿನ್ನ ಆಡಳಿತ ಹಲವು ತೊಂದರೆಗಳಿಗೆ ಸಿಲುಕುವುದು. ಅದಕ್ಕೆ ಕಾರಣ ಭುವನವಿಜಯದ ಅಶಾಸ್ತ್ರೀಯ ವಾಸ್ತು. ಆಯತಾಕಾರದ ಅದು ವ್ಯಾಪಿಸಿರುವುದು ಉತ್ತರ ದಕ್ಷಿಣ ದಿಕ್ಕುಗಳ ನಡುವೆ, ಅದೂ ಕೇಸರಿ ವರ್ಣದ ಉಚ್ಚನ್ಯಾಯಾಲಯಕ್ಕೆ ಅಭಿಮುಖವಾಗಿ. ನ್ಯಾಯಮೂರ್ತಿಗಳು ರಾಹುಕೇತುಗಳಾಗಿ ಪರಿಣಮಿಸುವರು, ನಿನ್ನ ಆಡಳಿತದ ಮೇಲೆ ನೇರ ಪರಿಣಾಮ ಬೀರುವರು. ನಿನ್ನ ಆಡಳಿತವನ್ನು ಅಸ್ಥಿರಗೊಳಿಸುವವರಿಗೆ ಪರೋಕ್ಷವಾಗಿ ನೆರವಾಗುವರು, ಅದರಿಂದ ನಿನ್ನ ಆಡಳಿತದ ಕಾರ್ಯಕ್ಷಮತೆ ದಿನದಿಂದ ದಿನಕ್ಕೆ ಕುಸಿಯುವುದು, ಅಲ್ಲದೆ ನಿನ್ನ ಆಯುಷ್ಯ ಸಹ ಕ್ಷೀಣಿಸುವುದು. ನೀನು ಅಧಿಕಾರದ ಅವಧಿಯಲ್ಲಿ ಅಕಾಲ ಮರಣಕ್ಕೆ ತುತ್ತಾದರೆ ಆಶ್ಚರ್ಯವಿಲ್ಲ ಎಂದು ಹೇಳಿದರು, ಅದೂ ಏಕವಚನದಲ್ಲಿ. ಅಭಿಮುಖವಾಗಿ ಕುಳಿತ್ತಿದ್ದ ಗಣ್ಯರ ಕಡೆ ತೀಕ್ಷ್ಣ ನೋಟ ಬೀರಿದರು. ಅದರಿಂದ ಮಾನಸಿಕವಾಗಿ ಅಸ್ಥಿರವಾದ ಸನ್ಮಾನ್ಯರು..

ಅಯ್ಯೋ ಹಾಗೇನು ಗುರುಗಳೆ, ಇದಕ್ಕೆ ದಯವಿಟ್ಟು ಪರಿಹಾರ ಸೂಚಿಸಿ ಎಂದು ನೋವಿನಿಂದ ಉದ್ಗರಿಸಿದರು. ಕಣ್ಣುಗಳಲ್ಲಿ ನೀರು ತಂದುಕೊಂಡರು. ಅವರ ಆ ದಯನೀಯ ಸ್ಥಿತಿಯನ್ನು ಹತ್ತಿರವಿದ್ದ ಘನವೆತ್ತರು ಗಮನಿಸಿದರು, ಸಮೀಪಿಸಿ ಹೆಗಲ ಮೇಲೆ ಕೈಯಿರಿಸಿ ಸಂತೈಸಿದರು. ಅಂಜುವ ಅಗತ್ಯವಿಲ್ಲ ಶ್ರೀಯುತರೆ, ಗುರುಗಳಾದ ಶ್ರೀ ಉತ್ಕರ್ ಅಸಾಮಾನ್ಯ ವ್ಯಕ್ತಿತ್ವ ಉಳ್ಳವರು. ತ್ರಿಕಾಲಜ್ಞಾನಿಗಳು, ಜ್ಯೋತಿಷ್ಯಮಾರ್ತಾಂಡರು. ಅಪಾಯಕಾರಿ ಗ್ರಹಗಳ ಸ್ಥಾನಪಲ್ಲಟಗೊಳಿಸುವ ಅಲೌಕಿಕ ಶಕ್ತಿ ಈ ಮಹಿಮಾನ್ವಿತರಿಗಿದೆ. ಅವರು ಹಿಮಚ್ಛಾದಿತ ಕೈಲಾಸ ಪರ್ವತದ ತಪ್ಪಲಲ್ಲಿ ವರ್ಷಗಳ ಕಾಲ ತಪಸ್ಸು ಮಾಡಿದವರು, ವಾಸ್ತುಸಿದ್ದಿ ಕೈವಶ ಮಾಡಿಕೊಂಡಿರುವವರು. ಈ ಪವಾಡಪುರುಷರು ಇಟ್ಟರೆ ಶಾಪ ಕೊಟ್ಟರೆ ವರ. ಅಂಥ ವಾಕ್ಸಿದ್ದಿ ಇವರದು. ಗ್ರಹಗಳ ಕ್ರೌರ್ಯವನ್ನು ನಿವಾರಿಸುವ ಶಕ್ತಿ ಇವರಿಗಿದೆ.  ದಯವಿಟ್ಟು ಎದೆಗುಂದದೆ ಅವರು ನುಡಿಯಲಿರುವ ಮಾತುಗಳನ್ನು ಭಯಭಕ್ತಿಯಿಂದ ಆಲಿಸಿ, ಪಾಲಿಸಿ ಎಂದು ಧೈರ್ಯ ತುಂಬಿದರು. ಅವರ ಮಾತುಗಳಿಂದ ಚೇತರಿಸಿಕೊಂಡವರು ರಾಜ್ಯದ ಪ್ರಥಮ ಪ್ರಜೆ. ಅದಕ್ಕೆ ಪರಿಹಾರ ಸೂಚಿಸುವಂತೆ ಸನ್ಮಾನ್ಯರು ಆರ್ತತೆಯಿಂದ ಕೇಳಿಕೊಂಡರು. ಅದಕ್ಕೆ ಉತ್ಕರ್

ಅದಕ್ಕಿರುವ ಎಕೈಕ ಪರಿಹಾರ ಮಾರ್ಗ! ಅದೆಂದರೆ ಭುವನವಿಜಯವನ್ನು ಪೂರ್ವ ಪಶ್ಚಿಮಾಭಿಮುಖವಾಗಿ ಪುನಃ ನಿರ್ಮಿಸುವುದು, ಆಗ ಸಂಧ್ಯಾ ಸೂರ್ಯರಶ್ಮಿ ನೇರವಾಗಿ ಮುಖ್ಯಮಂತ್ರಿಗಳ ಸ್ಥಾನದ ಮೇಲೆ ಬೀಳುವುದರಿಂದ ಕಂಟಕಗಳು ತಾವಾಗಿಯೇ ಪರಿಹಾರವಾಗುವವು. ನೀನು ಪೂರ್ಣಾವಧಿ ಆಡಳಿತ ನಡೆಸುವಿ. ಶತಾಯುಷಿಯಾಗುವಿ ಎಂದು ಕಂಚಿನಕಂಠದಲ್ಲಿ ಕಾರಣಿಕ ನುಡಿದರು, ಬೆಚ್ಚಿಬೀಳಿಸಿದರು.

ಅವರ ಭವಿಷ್ಯವಾಣಿಯಿಂದ ಶ್ರೀಯುತರು ದಿಗ್ಭ್ರಮಿತರಾದರು. ಘನವೆತ್ತರತ್ತ ಅಸಹಾಯಕತೆಯಿಂದ ನೋಡಿದರು. ಅದಕ್ಕೆ ಘನವೆತ್ತರು ಇವರ ಸಲಹೆ ಪಾಲಿಸಿದಲ್ಲಿ ನಿಮಗೂ ಕ್ಷೇಮ ಮಹಿಷ್ಮತಿರಾಜ್ಯಕ್ಕೂ ಕ್ಷೇಮ. ಪರಿಶೀಲಿಸಿ ಕಾರ್ಯಗತಗೊಳಿಸಿಬಿಡಿರಿ, ಹೇಗೋ ಅಧಿಕಾರ ನಿಮ್ಮ ಕೈಯಲ್ಲಿದೆ, ನಿಮಗೆ ಬೆಂಬಲವಾಗಿ ನಾವಿರುವೆವು. ಅಲ್ಲದೆ ನಮ್ಮ ಅಳಿಯ ಆಪೋಶಕರ್ಮೇಹು ಕಟ್ಟಡಗಳನ್ನು ಕೆಡವಿ ಪುನಃ ನಿರ್ಮಿಸುವುದರಲ್ಲಿ ಪರಿಣಿತನಿರುವನು. ಅವನು ಕಂಟ್ರಾಕ್ಟರ್ ಮಾತ್ರವಲ್ಲ, ಅಂತರ್ರಾಷ್ಟ್ರೀಯ ಖ್ಯಾತಿಯ ಬಿಲ್ಡರ್ರು ಸಹ. ಆತ ನಿರ್ಮಿಸಿರುವ ಅಗಣಿತ ಕಟ್ಟಡಗಳು ಚಿಲಿ ಬ್ರೆಜಿಲ್ ಕೀನ್ಯಾ ಮತ್ತು ನೈಲ್ ಅಮೆಜಾನ್ ನದಿ ತೀರಗಳಲ್ಲಿ ಇಂದಿಗೂ ನಯನಮನೋಹವಾಗಿವೆ. ಸನ್ಮಿತ್ರರೆ ಅನ್ಯಥಾ ಭಾವಿಸದಿದ್ದರೆ ಇನ್ನೊಂದು ಸಂಗತಿ ತಿಳಿಸುವೆ, ನಮ್ಮ ಮೇಹು ಸುಜ್ಜಿತವೂ ಅತ್ಯಾಧುನಿಕವೂ ಆದಂಥ ಗುಡಿಸಲು ನಿಮರ್ಿಸಿದ್ದರು. ಅದಕ್ಕೆ ಅಂತರ್ರಾಷ್ಟ್ರೀಯ ಪ್ರಶಸ್ತಿ ಲಬಿಸಿತು. ಸ್ಯಾಂಟಿಯಾಗೋದಲ್ಲಿ ನಡೆದ ಸಮಾರಂಭದಲ್ಲಿ ಅಲ್ಲಿನ ಅಧ್ಯಕ್ಷ ಬಕಾಡೆ ಮೇಹುಗೆ ಎಮೆರಾಲ್ಡ್ ಆಫ್ ಆರ್ಕಟೆಕ್ಟ್ ಪ್ರಶಸ್ತಿ ನೀಡಿ ಸತ್ಕರಿಸಿದರು. ಈಗಲೂ ಅದರ ಪ್ರತಿಕೃತಿ ಬ್ರೆಜಿಲ್ ಮ್ಯೂಜಿಯಂನಲ್ಲಿದೆ. ನೀವು ತಿಳಿಯಲೇಬೇಕಾದ ಸಂಗತಿ ಯಾವುದೆಂದರೆ, ಲಂಡನ್ನಿನ ಬಂಕಿಂಗ್ಹ್ಯಾಮ್ ಪ್ಯಾಲೆಸ್ ಅಮೇರಿಕಾ ವೈಟ್ಹೌಸುಗಳಂಥ ಪ್ರಸಿದ್ದ ಐತಿಹಾಸಿಕ ಕಟ್ಟಡಗಳನ್ನು ಕೆಡವಿ ನಿರ್ಮಿಸಲು ಆಯಾ ದೇಶಗಳ ಪ್ರಧಾನಿಗಳು ನಮ್ಮ ಅಳಿಯನನ್ನು ಆಮಂತ್ರಿಸಿರುವರು. ಆದರೆ ಆತನಿಗೆ ಮಾತೃಭೂಮಿ ಎಂದರೆ ಪಂಚಪ್ರಾಣ. ಆದ್ದರಿಂದ ಈ ದೇಶದಲ್ಲಿ ಉಳಿದಿದ್ದಾನೆ. ಆತನಿಗೆ ಈ ಯೋಜನೆಯನ್ನು ಕೊಟ್ಟು ನೀವು ನಿಶ್ಚಿಂತೆಯಿಂದಿರಿ. ಕೆಂದ್ರ ಸರ್ಕಾರವನ್ನು ಒಪ್ಪಿಸುವ ಹೊಣೆ ನಮ್ಮದು. ಕೇವಲ ಐದಾರು ತಿಂಗಳೊಳಗೆ ಭುವನವಿಜಯವನ್ನು ಪೂರ್ವ ಪಶ್ಚಿಮಾಭಿಮುಖವಾಗಿ ನಿರ್ಮಿಸಿ ಸರ್ಕಾರಕ್ಕೆ ಒಪ್ಪಿಸುವನು, ಅದಕ್ಕೆ ಮಹರ್ಷಿ ಮೇಳಂಬ ಉತ್ಕರ್ಜೀ ಅವರ ಮಾರ್ಗದರ್ಶನ ಇದ್ದೇ ಇರುತ್ತದೆ. ಒಪ್ಪಿಗೆ ತಾನೆ! ಎಂದು ಸಲಹೆ ದಯಪಾಲಿಸಿದರು. ಅವರ ಮಾತುಗಳಿಂದ ಶ್ರೀಯುತರಿಗೆ ದಿಕ್ಕು ತೋಚದಾಯಿತು.

ಇನ್ನು ನಾಳೆಗೆ .. 

‍ಲೇಖಕರು Admin

January 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: