ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆಯಲ್ಲ, ಇದು ನಮ್ಮದೇ ಬಾಲ್ಯದ ಕನ್ನಡಿ!

ನವೀನ್ ತೇಜಸ್ವಿ ಅವರ ಕಥಾ ಸಂಕಲನ ‘ಬಂಗಾರಕಡ್ಡಿ ಡೇರೆ ಹೂವು’

ಅಮೂಲ್ಯ ಪುಸ್ತಕ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ವಿಕಾಸ್ ನೇಗಿಲೋಣಿ ಅವರ ಬರಹ ಇಲ್ಲಿದೆ.

-ವಿಕಾಸ್ ನೇಗಿಲೋಣಿ

ನಾವು ಚಪ್ಪರಿಸಿ ತಿನ್ನುವ ಅದೆಷ್ಟೋ ಉಪ್ಪಿನಕಾಯಿ ಅದೆಷ್ಟೋ ಹಿಂದೆಯೇ ತಯಾರಾಗುತ್ತಿರುತ್ತದೆ, ಉಪ್ಪಿನ ನೀರಲ್ಲಿ ನೆನೆಹಾಕಿ ತಿಂಗಳುಗಟ್ಟಲೆ ಇಡುತ್ತಾರೆ, ಆಮೇಲೆ ಅದಕ್ಕೆ ಮಸಾಲೆ ಬೆರೆಸುತ್ತಾರೆ. ಮತ್ತೆ ಹಾಗೇ ಇಡುತ್ತಾರೆ. ಹಾಗಾಗಿ ಒಮ್ಮೆ ನೀವು ಉಪ್ಪಿನಕಾಯಿ ನಾಲಗೆ ಮೇಲಿಟ್ಟುಕೊಂಡು ಕಣ್ಮುಚ್ಚಿದರೆ ಹೋದ ಜನ್ಮವೆಲ್ಲಾ ಜ್ಞಾಪಕಕ್ಕೆ ಬರಬಹುದು, ಒಮ್ಮೆ ಪ್ರಯತ್ನಿಸಿ ನೋಡಿ. ನವೀನ್ ತೇಜಸ್ವಿ ಅವರ ಬಂಗಾರಕಡ್ಡಿ ಡೇರೆ ಹೂವು ಕಥಾ ಸಂಕಲನ ಕೂಡ ಓದಿ ಕೆಲ ತಿಂಗಳುಗಳೇ ಆದವು. ಜ್ಞಾಪಿಸಿಕೊಂಡರೆ ಹಲವು ಇಮೇಜುಗಳು ಕಣ್ಮುಂದೆ ಬರುತ್ತದೆ. ಊರಲ್ಲಿ ಸೋರುತ್ತಿರುವ ಜಂತಿಯನ್ನು ಸರಿ ಮಾಡಿಸಲಾಗದ ಅಮ್ಮ, ಅವಳು ಉಳಿಸಿದ ದುಡ್ಡಲ್ಲಿ ಮೊಮ್ಮಗನಿಗೆ ಕಡಗ ಕೊಂಡುಕೊಳ್ಳಬೇಕೆಂಬ ಅತ್ಯಾಸೆ ನೆನಪಾಗುತ್ತಿದೆ.

ಧಣಿಗಳ ಮನೆಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ, ಧಣಿಗಳ ಮಗಳ ರಹಸ್ಯ ಪ್ರೇಮಕತೆಗೆ ಅಡಿಕೆ ಚೀಲ ಹೊತ್ತು, ತಪ್ಪಿತಸ್ಥನಾಗುವುದು ನೆನಪಾಗುತ್ತದೆ. ಆ ಕೆಲಸದವನ ಮಗಳು ಕೋಪದಲ್ಲಿ ಧಣಿಗಳ ಮನೆಯ ಗಾಜಿನ ಕಿಟಕಿಗೆ ಹೊಡೆದ ಫಳ್ಳೆನ್ನೋ ಸದ್ದು ಅನುರಣಿಸುತ್ತಿದೆ. ದೂರದ ಸೊರಬಕ್ಕೆ ಹೆಂಡತಿಯನ್ನು ಚಿಕಿತ್ಸೆಗೆ ಕರೆದೊಯ್ಯಲು ಊರಿನ ಒಬ್ಬ ಧಣಿಗಳೂ ಕಾರು ನಿಲ್ಲಿಸದ ನಿರ್ದಯ ಪ್ರಸಂಗ ನೆನಪಾಗುತ್ತದೆ. ಹೆಂಡತಿ ಚಿಕಿತ್ಸೆಗೆ ಅಂತ ಮಾರಲು ಹೊರಟ ಕುರಿ ಇದ್ದಕ್ಕಿದ್ದಂತೇ ಪೇಟೆಯಲ್ಲಿ ಕಣ್ಮರೆಯಾಗಿ, ಅದಕ್ಕಾಗಿ ದಿಕ್ಕಟ್ಟಂತೆ ಹುಡುಕುವ ಒಬ್ಬ ಬಿಳಿಗಡ್ಡದ ಅಸಹಾಯಕ ಸಂತ ಜ್ಞಾಪಕಕ್ಕೆ ಬರುತ್ತಾನೆ.

ಗಂಡಾಳುಗಳಿಗೆ ಮಾತ್ರಾ ಜಾಸ್ತಿ ದುಡ್ಡೇಕೆ ಅಂತ ತನ್ನ ವಲಯದಲ್ಲಿ ಮಾತಾಡುವುದಲ್ಲದೇ, ಕಂಟ್ರಾಕ್ಟರ್ ಹತ್ತಿರ ಧಣಿಗಳ ಹತ್ತಿರ ಜಗಳವಾಡಿ, ಒಂದು ದೊಡ್ಡ ಮೂಟೆಯನ್ನು ಹೊತ್ತುಕೊಂಡು ಹೋಗಿ ದಡಮುಟ್ಟಿಸಿದ ದಿಟ್ಟ ಹೆಂಗಸು ನೆನಪಾಗುತ್ತಾಳೆ. ಊರಿಗೆ ಹೋದ ಹುಡುಗನೊಬ್ಬ, ದೇವಸ್ಥಾನಕ್ಕೆ ಹಣ್ಣು ಕಾಯಿ ಕೊಡಲು ಹೋದರೆ ಮೇಲ್ಜಾತಿಯವರ ಪೂಜೆ ಮುಗಿಯದೇ, ಇವನ ಹಣ್ಣುಕಾಯಿಯನ್ನು ಮುಟ್ಟದೇ ಹೋಗದ ಹತಾಶೆ ಇದೆ. ಸ್ಕೂಲಿನಲ್ಲಿ ನಡೆಯುವ ಪಂಕ್ತಿಭೇದ, ಮಾಂಸಾಹಾರ ಭೇದಗಳೆಲ್ಲಾ ಇಲ್ಲಿವೆ.

ಇವರ ಹೆಸರು ಮರೆತಿದೆ ಅಥವಾ ಅವರ ಹೆಸರನ್ನೆಲ್ಲಾ ಬರೀ ಕತೆಯ, ಓದಿನ ಭಾಗವಾಗಿ ಓದಿಕೊಳ್ಳುತ್ತಿದ್ದೆ. ಆದರೆ ಆ ಹೆಸರುಗಳೆಲ್ಲಾ ಕೇವಲ ನೆಪವಾಗಿ ನಾಲಗೆಗೆ, ಕಣ್ಣಿಗೆ ತಾಗುತ್ತಿದ್ದರು. ಯಾಕೆಂದರೆ ಈ ನವೀನ್ ಬರೆದಿರುವ ಕತೆಯ ಪಾತ್ರಗಳಿರುವ ಊರು, ನನ್ನ ಅಜ್ಜನ ಮನೆ ಇರುವ ಊರು. ಹಾಗಾಗಿ ಆಯಾ ಪಾತ್ರದ ಹೆಸರುಗಳ ಜಾಗದಲ್ಲಿ ನಾನು ಬಾಲ್ಯದಲ್ಲಿ ನೋಡಿದ ವ್ಯಕ್ತಿಗಳ ಹೆಸರು ಸ್ಥಾಪನೆಯಾಗಿಬಿಟ್ಟಿದೆ. ಹಾಗಾಗಿ ಕಣ್ಮುಚ್ಚಿದರೆ ನನಗೆ ಗೌರಿ, ಚೌಡ, ಕೆರೆಯ- ಹೀಗೆ ನಮ್ಮಜ್ಜನ ಮನೆಗೆ ಕೆಲಸಕ್ಕೆ ಬರುತ್ತಿದ್ದವರ ಹೆಸರುಗಳೇ ನೆನಪಾಗುತ್ತಿವೆ, ನವೀನ್ ಬರೆದ ಕತೆಯ ಪಾತ್ರಕ್ಕೆ ನನಗೆ ಗೊತ್ತಿರುವ ಇವರೆಲ್ಲರ ಮುಖಚಹರೆಗಳೇ ಹೊಂದಿಕೊಳ್ಳುತ್ತಿವೆ. ಹಾಗಾಗಿ ಈ ಕತೆಗಳು ಬರೀ ಕತೆಗಳಾಗಿ ನನ್ನೊಳಗೆ ಪ್ರವೇಸಿಸಲಿಲ್ಲ. ಅವು ನನ್ನ ಬಾಲ್ಯದ ಆತ್ಮಕತೆಯ ಭಾಗವಾಗಿಯೇ ಬಂದವು.

ಈ ಸಂಕಲನ ಓದಿದ ಮೇಲೆ ತೀವ್ರ ವಿಷಾದವಷ್ಟೇ ನನ್ನ ಕಾಡಲಿಲ್ಲ, ಆಗಲೇ ಇರೋ ಪಾಪಪ್ರಜ್ಞೆ ನನ್ನೊಳಗೆ ತೀವ್ರಗೊಂಡಿತು. ಈ ಪಾಪಪ್ರಜ್ಞೆ ಮೇಲ್ಜಾತಿಯಲ್ಲಿ ಹುಟ್ಟಿದವನಾಗಿ ನನ್ನೊಳಗೆ ಯಾವತ್ತಿಗೂ ಇರುವುದು. ಹಾಗೆ ಹೇಳಿದರೆ, ಬರೆದರೆ ಮೇಲ್ಜಾತಿಯ ಗುಣ, ಸ್ವಭಾವಗಳು ನನಗೆ ಅಂಟಿಯೇ ಇಲ್ಲ ಅಂತ ನನ್ನ ನಾನು ಸಂತನನ್ನಾಗಿಸಿಕೊಳ್ಳುವ ಹುನ್ನಾರ ಅಂತ ನನಗೇ ಅನ್ನಿಸುತ್ತದೆ, ಹಾಗಾಗಿ ಅದು ಮಾಡದಿರಲು ಪ್ರಯತ್ನಿಸುತ್ತೇನೆ. ಯಾಕೆ ನನ್ನೊಳಗೆ ಆ ಪಾಪಪ್ರಜ್ಞೆಯನ್ನು ಹೆಚ್ಚು ಮಾಡಿತೆಂದರೆ ಯಾಕೋ ಗೊತ್ತಿಲ್ಲ, ನವೀನ್ ಬರೆದ ಪ್ರಪಂಚದ ಪಾತ್ರಗಳು ನನಗರಿವಿಗೆ ಬರುತ್ತಿದ್ದರೂ ಅವರೆಲ್ಲಾ ನನಗೆ ಬರೀ ನಮ್ಮ ಮನೆಗಳಿಗೆ ಬರುವ ಕೆಲಸಗಾರರಷ್ಟೇ. ಅದರ ಹೊರತಾಗಿ ಅವರು ಬಾಲ್ಯದಲ್ಲಿ ನಮಗೆ ಹೇಳುತ್ತಿದ್ದ ರಂಜಕ ಕತೆಗಳು ರೋಮಾಂಚಗೊಳಿಸುತ್ತಿದ್ದವಷ್ಟೇ. ಅವರು ಒಂದು ದಿನ ಕಾಣಿಸಲಿಲ್ಲವೆಂದರೆ ಅವರ ಕತೆ ಕೇಳುವ ಕಾತರಕ್ಕೆ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೆವಷ್ಟೇ. ಅದಲ್ಲದೇ ಅವರ ಮನೆಯಲ್ಲಿ ಏನು ನಡೆಯುತ್ತಿದೆ, ಮನುಷ್ಯರಾಗಿ ಅವರ ಸಂಕಟವೇನು, ಅವರ ಅಗತ್ಯವೇನು, ಅವರ ರೋಗ ರುಜಿನವೇನು, ಅವರೊಳಗಿನ ಕೋಪ ಹೇಗಿದೆ, ಅವರ ಪ್ರೇಮಕಲ್ಪನೆಗಳೇನು- ಇವು ನಮಗೆ ಗೊತ್ತಿರಲಿಲ್ಲ ಅಥವಾ ಬೇಕಾಗಿರಲಿಲ್ಲ. ಹೌದು ಬೇಕಾಗಿರಲಿಲ್ಲ ಅನ್ನುವುದೇ ಹೆಚ್ಚು ಸರಿ. ಯಾಕೆಂದರೆ ಈ ‘ಬೇಕಾಗಿರಲಿಲ್ಲ’ ಅನ್ನುವುದರಲ್ಲಿ ಒಂದು ಅಂತಸ್ತು, ಜಾತಿಯ ಪಾಲಿಟಿಕ್ಸ್ ಇದೆ. ನಮ್ಮ ಭಾವಕೋಶದ ಭಾಗವಾಗಿ ಅವರನ್ನು ಮಾಡಿಕೊಂಡೇ ಇರುವುದಿಲ್ಲ, ಅವರನ್ನೆಲ್ಲಾ ಹೇಗೆ ಊರಾಚೆ ಇರಿಸಿರುತ್ತೇವೋ ಹಾಗೇ ಮನಸಿನಾಚೆ ಕೂಡ ಇರಿಸಿರುತ್ತೇವೆ. ಈ ಮಾನಸಿಕ untouchability ಅನ್ನುವ ಪಾಲಿಟಿಕ್ಸ್ ನ ಭಾಗವಾಗಿಯೇ ಆ ಪಾತ್ರಗಳೆಲ್ಲಾ ನಮಗೆ ಕೆಲಸಗಾರರಿಗಿಂತ ಮಿಕ್ಕ ಯಾವುದೇ ಪ್ರಾಮುಖ್ಯತೆ ಹೊಂದಿದವರಲ್ಲ.

ನವೀನ್ ಬರೆದಿರುವ ಈ ಸಂಕಲನ ಅಂಥದ್ದೊಂದು ಜ್ಞಾನೋದಯ ಮಾಡಿಸಿ ಅಲುಗಿಸಿಬಿಟ್ಟಿತು.
*
ನವೀನ್ ಬರೆದಿರುವುದು ಕಥಾ ಸಂಕಲನವೇ ಆದರೂ ಇದು ನಿಜಕ್ಕೂ ಒಂದು ಊರಿನ ಕಾದಂಬರಿ, ಒಂದು ಊರಿನ ಆತ್ಮಚರಿತ್ರೆ. ಇದರಲ್ಲೊಂದು ಚಂದದ ತಂತ್ರವಿದೆ, ಅದೇನೆಂದರೆ ಈ ಕತೆಯ ಎಲ್ಲಾ ಪಾತ್ರಗಳು ಎಲ್ಲಾ ಕತೆಗಳಲ್ಲೂ ಮತ್ತೆಮತ್ತೆ ಬರುತ್ತವೆ. ಒಂದು ಕತೆಯಲ್ಲಿ ಒಂದು ಪಾತ್ರ ಮುನ್ನಲೆಗೆ ಬಂದು, ತನ್ನ ಕತೆಯನ್ನು ಹೇಳಿಕೊಳ್ಳುತ್ತಿದ್ದರೂ ಉಳಿದ ಪಾತ್ರಗಳೆಲ್ಲಾ ಆ ಪಾತ್ರಕ್ಕೆ ಬೆನ್ನೆಲೆಯಾಗಿ ನಿಲ್ಲುತ್ತಾ ಹೋಗುತ್ತವೆ. ಜೊತೆಗೆ ಈ ಸಂಕಲನದಲ್ಲಿ ಬಹಳಷ್ಟು ಹೂವುಗಳೇ ಬರುತ್ತವೆ. ಎಲ್ಲಾ ಕತೆಗಳಿಗೂ ಅವರು ಹೂವಿನ ಹೆಸರನ್ನೇ ಇಟ್ಟಿದ್ದಾರೆ. ಆ ಹೂವಿನ ಹೆಸರು ಬರೀ ನೆಪವಲ್ಲ, ಆ ಹೂವಿನ ಗುಣ, ರೂಪ, ಸ್ವಭಾವವನ್ನು ಪ್ರತಿ ಕತೆಯ ರೂಪಕದಂತೆ ಹೆಣೆದಿದ್ದಾರೆ. ಈ ಸಂಕಲನವೆಲ್ಲಾ ಓದಿ ಮುಗಿಸಿದಾಗ ಮತ್ತೆ ಮತ್ತೆ ಒಂದು ಇಮೇಜು ಬರುತ್ತಲೇ ಇತ್ತು. ಅದ್ಯಾವುದೆಂದರೆ ನೀವು ಸಾಗರ, ಸೊರಬದ ಕಡೆಗೆ ಬಸ್ಸಲ್ಲಿ ಹೋಗುತ್ತಿದ್ದರೆ ಅಲ್ಲಿ ಹೂ ನೇಯುತ್ತಾ, ಹೂ ಕಟ್ಟುತ್ತಾ ಕುಳಿದ ಹಲವಾರು ಹೆಂಗಸರು ಕಾಣಸಿಗುತ್ತಾರೆ. ಅವರ ಕೈಲಿ ಹೂಮಾಲೆ ರೂಪುಗೊಳ್ಳುವ ಮ್ಯಾಜಿಕ್ಕು ಈ ಕಥನ ನೇಯ್ಗೆಯಲ್ಲೂ ಇದೆ. ಬಂಗಾರಕಡ್ಡಿ, ಅಬ್ಬಲಿಗೆ, ಕ್ವಾಟ್ಲೆ, ಚೆಂಡು, ಸುರಗಿ- ಹೀಗೆ ಹಲವು ಹೂಗಳಿವೆ. ಸೂಕ್ಷ್ಮವಾಗಿ ನೋಡಿದರೆ ಮಲ್ಲಿಗೆ ಇತ್ಯಾದಿ ಜನಪ್ರಿಯ, generally accepted ರಾಜಹೂಗಳು ಇಲ್ಲಿಲ್ಲ. ಕಾಗದದ ಹೂ ಥರದ ಪೂಜೆಗೂ ಸಲ್ಲದ ಹೂಗಳೂ ಇಲ್ಲಿ ಮಾನ್ಯವಾಗಿವೆ.

ಈ ಎಲ್ಲಾ ಕತೆಗಳಲ್ಲೂ ಲೇಖಕ ಒಂದು ವಿಷಯವನ್ನು ಪದೇಪದೇ ಅಂಡರ್ ಲೈನ್ ಮಾಡುತ್ತಾರೆ. ಅದೇನೆಂದರೆ ಓದು ಅಥವಾ ಶಿಕ್ಷಣ ಮಾತ್ರಾ ತನ್ನೂರಿನ ಈ ಕೇರಿಯ ಶೋಷಣೆಯನ್ನು ಹಿಮ್ಮೆಟ್ಟಿಸಬಲ್ಲದು. ಆ ಪ್ರಯತ್ನದಲ್ಲಿ ಎಲ್ಲಾ ಪಾತ್ರಗಳೂ ಒಗ್ಗಟ್ಟಿನಿಂದ ಒಮ್ಮತದಿಂದ ದುಡಿದಿವೆ.

ನವೀನ್ ಸಂಕಲನ ಕೇವಲ ಒಂದು ಕಥಾ ಸಂಕಲನವಲ್ಲ, ಇದು ಹೊಸ ತಲೆಮಾರಿನ ಚಿಂತಕ ಮಂಡಿಸಿದ ಸ್ವಸ್ಥ ಸಮಾಜದ preamble.

‍ಲೇಖಕರು Admin

8 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading