ಗಾಯತ್ರಿ ರಾಜ್ ಅವರ ಕೃತಿ ‘ಒಲವಿನ ಭಿನ್ನರಾಶಿ’
ಪುಸ್ತಕಾಗಾರ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಲೇಖಕರ ಮಾತು ಇಲ್ಲಿದೆ.
-ಗಾಯತ್ರಿ ರಾಜ್
ಯಾವುದೇ ಕಥೆ-ಕಾದಂಬರಿಯಾಗಲಿ ಅದು ಆ ಲೇಖಕನ ಬದುಕಿನ ಒಟ್ಟು ಅನುಭವಗಳ ಸಂಗಮ. ಎಲ್ಲೋ ನೋಡಿದ್ದು, ಯಾರಿಂದಲೋ ಕೇಳಿದ್ದು, ಯಾವುದೋ ಅನುಭವ, ಇನ್ಯಾವುದೋ ಆಪ್ತ ಭಾವ ಹೀಗೆ ಒಬ್ಬ ಲೇಖಕ ತನ್ನ ಕೃತಿಯನ್ನು ರೂಪಿಸಲು ತನ್ನೊಳಗಿನ ಭಾವನೆಗಳನ್ನೇ ಧಾರೆ ಎರೆಯುತ್ತಾನೆ. ಆದರೆ, ಅದೇ ಅಕ್ಷರಗಳು ಯಾರದೋ ಸ್ವಾರ್ಥಕ್ಕೆ ಸಿಲುಕಿ, ಮಾರುಕಟ್ಟೆಯ ಸರಕಾಗಿ ಹೋದಾಗ ಆ ಲೇಖಕನ ಮನಸ್ಸು ಪಡುವ ವೇದನೆ ಅಷ್ಟಿಷ್ಟಲ್ಲ. ತನ್ನದೇ ಅಸ್ತಿತ್ವದಂತಿದ್ದ ಬರಹವನ್ನು ಕಳೆದುಕೊಂಡಾಗ ಆ ಮನಸ್ಸಿನಲ್ಲಿ ಏಳುವ ಆಕ್ರೋಶ, ನೋವು ಎಷ್ಟು ಆಳವಾಗಿರಬಹುದು?
ಆ ತೊಳಲಾಟ, ಅದರ ನಡುವೆ ಕಳೆದುಹೋಗುವ ನಂಬಿಕೆಗಳು ಮತ್ತು ಇವೆಲ್ಲದರ ಆಚೆಗೂ ಉಳಿಯುವ ಪ್ರೀತಿಯ ಸೆಲೆಯನ್ನು ಕಂಡುಕೊಳ್ಳುವ ಪಯಣವೇ ಈ ‘ಒಲವಿನ ಭಿನ್ನರಾಶಿ’.
ಈ ಕಾದಂಬರಿಯ ಪುಟಗಳನ್ನು ನೀವು ತಿರುವುತ್ತಿದ್ದಂತೆ, ಇದು ಕೇವಲ ಸೋಲು-ಗೆಲುವಿನ ಲೆಕ್ಕಾಚಾರವಾಗಿ ಕಾಣುವುದಿಲ್ಲ. ಇದು ಅಕ್ಷರಗಳಿಗಾಗಿ, ಸ್ವಂತಿಕೆಗಾಗಿ ಮತ್ತು ಮನುಷ್ಯನೊಳಗೆ ಇನ್ನೂ ಜೀವಂತವಾಗಿರುವ ಒಲವಿಗಾಗಿ ನಡೆಯುವ ಒಂದು ಆಂತರಿಕ ಹೋರಾಟ. ನಮ್ಮಿಂದ ಕಸಿದುಕೊಳ್ಳಲಾದ ಭಾವನೆಗಳು, ಮನುಷ್ಯರ ಮುಖವಾಡಗಳು ಮತ್ತು ನಂಬಿಕೆಯ ಹೆಸರಿನಲ್ಲಿ ಆಗುವ ದ್ರೋಹ… ಇವೆಲ್ಲದರ ನಡುವೆಯೂ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಅಪರೂಪದ ಮಾನವೀಯತೆಯೂ ಇಲ್ಲಿ ಜೊತೆಯಾಗಿ ಸಾಗುತ್ತದೆ.
ಕೆಲವೊಮ್ಮೆ ಜೀವನ ನಮ್ಮಿಂದ ಎಲ್ಲವನ್ನೂ ಕಿತ್ತುಕೊಂಡಂತೆ ಭಾಸವಾಗಿ, ಕೈಯಲ್ಲಿ ಏನೂ ಉಳಿದಿಲ್ಲ ಎನಿಸುತ್ತದೆ. ಆದರೆ ಅದೇ ಖಾಲಿತನದಲ್ಲೇ ನಾವು ನಮ್ಮನ್ನು ಮರಳಿ ಕಂಡುಕೊಳ್ಳುವ ಹೊಸ ದಾರಿಯೊಂದು ತೆರೆದುಕೊಳ್ಳುತ್ತದೆ.
ಬದುಕಿನ ಹಾದಿಯಲ್ಲಿ ಎಲ್ಲರಿಗೂ ಒಲವು ಮತ್ತು ನೋವು ಒಂದೇ ಅಳತೆಯಲ್ಲಿ ದಕ್ಕುವುದಿಲ್ಲ. ಒಡೆದ ಗಾಜಿನ ಚೂರುಗಳಂತೆ, ಪ್ರತಿಯೊಬ್ಬರ ಪಾಲಿಗೂ ಬದುಕು ಬೇರೆ ಬೇರೆಯಾಗಿಯೇ ಹಂಚಿಹೋಗಿರುತ್ತದೆ. ಆದರೆ ಆ ಒಡೆದ, ಅಪೂರ್ಣ ತುಣುಕುಗಳೇ ಪರಸ್ಪರ ಬೆಸೆದುಕೊಂಡಾಗ, ಅವುಗಳ ನಡುವೆ ಕಾಣುವ ಹೊಂದಾಣಿಕೆಯೇ ಬದುಕಿಗೆ ಒಂದು ಅರ್ಥವನ್ನು ತಂದುಕೊಡುತ್ತದೆ.
ಬಹುಶಃ ಅದಕ್ಕೇ ಕೆಲವು ಸಂಬಂಧಗಳಿಗೆ ಯಾವುದೇ ಹೆಸರಿಡಲು ಸಾಧ್ಯವಿಲ್ಲ. ಕೆಲವು ಒಲವುಗಳು ಅಧಿಕಾರವನ್ನು ಚಲಾಯಿಸುವುದಿಲ್ಲ, ಪಡೆಯುವುದಕ್ಕಿಂತಲೂ ನೀಡುವುದರಲ್ಲೇ ಅವುಗಳಿಗೆ ನೆಮ್ಮದಿ. ಇನ್ನು ಕೆಲವು ಭೇಟಿಗಳು, ನಾವು ಬಯಸದಿದ್ದರೂ ನಮ್ಮ ಬದುಕಿನ ಹಾದಿಯನ್ನೇ ಬದಲಿಸಿಬಿಡುತ್ತವೆ. ಸತ್ಯ ಕೆಲವೊಮ್ಮೆ ಬೆಂಕಿಯಂತೆ ಸುಡಬಹುದು, ಆದರೆ ಕತ್ತಲಿನಲ್ಲಿ ದಾರಿ ತೋರುವ ಬೆಳಕೂ ಅದೇ ಆಗಿರುತ್ತದೆ. ದ್ರೋಹದ ಗಾಯ ಹಸಿಯಾಗಿದ್ದರೂ, ಯಾರೋ ತೋರುವ ಒಂದು ನಿಸ್ವಾರ್ಥ ಕಾಳಜಿ, ಒಂದೊಳ್ಳೆ ಮಾತು ಅಥವಾ ಜೊತೆಗಿರುವ ಮೌನ, ಆ ಗಾಯವನ್ನು ಮರೆಸಿ ಮತ್ತೆ ಬದುಕುವ ಧೈರ್ಯ ಕೊಡುತ್ತದೆ.
‘ಒಲವಿನ ಭಿನ್ನರಾಶಿ’ಯನ್ನು ಓದುತ್ತಾ ಹೋದಂತೆ, ನೀವು ಅಕ್ಷರಗಳ ಹಿಂದಿನ ನೋವನ್ನು, ಮೌನದೊಳಗೆ ಅಡಗಿರುವ ಮಿಡಿತವನ್ನು ಮತ್ತು ಪ್ರೀತಿಯ ಆಳದಲ್ಲಿ ಸಹಜ ರೂಪವನ್ನು ಕಾಣುತ್ತೀರಿ ಎಂದು ನಂಬಿದ್ದೇನೆ.
ಪುಸ್ತಕವನ್ನು ಓದಿ ಮುಗಿಸಿದ ಮೇಲೂ, ಈ ಕಥೆಯ ಕೆಲವು ಮುಖಗಳು ಮತ್ತು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡಬಹುದು. ಏಕೆಂದರೆ ಕೆಲವು ಕಥೆಗಳು ಕೊನೆಯ ಪುಟಕ್ಕೆ ಮುಗಿಯುವುದಿಲ್ಲವಂತೆ ಅವು ಓದುಗನ ಮನಸ್ಸಿನಲ್ಲೇ ಮತ್ತೊಂದು ಜೀವ ಪಡೆದು ಸದಾ ಜೀವಂತವಾಗಿರುತ್ತವೆ.
ಹಾರೈಕೆಗಳೊಂದಿಗೆ,






0 Comments