ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ ‘ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್’

ಕೃಪಾ ದೇವರಾಜ್ ಅವರ ‘ಮಂತ್ರಪುಷ್ಪ…ಕಥೆಗಳ ಕ್ಯಾನ್ವಾಸ್’

ಅಹಲ್ಯಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಧನು ಸುನಿಲ್ ಅವರ ಬರಹ ಇಲ್ಲಿದೆ.

-ಧನು ಸುನಿಲ್

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಈ ಕೃತಿ ಪಡೆದಿದೆ.

ಈ ಕಥಾ ಸಂಕಲನವು ಆಕರ್ಷಕ ಮುಖಪುಟವನ್ನು ಹೊಂದಿದ್ದು ನೋಡಿದೊಡನೆಯೇ ಮನ ಸೆಳೆಯುವುದು. ಇದರ ಕಥಾ ವಸ್ತುವು ನಮ್ಮ ನಡುವೆ ಎಂದೋ ನಡೆದ, ಕೇಳಿದ, ನೋಡಿದ ಘಟನೆಗಳೊಂದಿಗೆ ಸಾಮ್ಯತೆಯನ್ನು ಹೊಂದಿವೆ ಎನಿಸುತ್ತದೆ. ಒಂದೊಂದು ಕಥೆಯನ್ನು ಓದುತ್ತಿದ್ದ ಹಾಗೆ ನಮ್ಮ ಊರಿನಲ್ಲಿ ಹೀಗೇ ಆಗಿತ್ತು ಅಲ್ವಾ ಅಂದುಕೊಳ್ಳುವುದಂತೂ ಸತ್ಯ. ಲೇಖಕಿ ಇಂತಹ ಸರಳ ಘಟನೆಗಳ ಸೂಕ್ಷ್ಮತೆಯನ್ನು ಗಮನಿಸಿ ಅಕ್ಷರ ರೂಪವನ್ನು ಕೊಟ್ಟಿರುವುದು ಶ್ಲಾಘನೀಯವಾಗಿದೆ.  

ಕೊಡಗಿನ ಭಾಷಾ ಶೈಲಿಯನ್ನೇ ಹೆಚ್ಚು ಕಥೆಗಳು ಒಳಗೊಂಡಿರುವುದು ಓದುಗರಿಗೆ ಒಂದು ವಿಶೇಷ, ವಿಶಿಷ್ಟ ರೀತಿಯ ಅನುಭವವನ್ನು ಕೊಡುತ್ತವೆ. ಆಡುಭಾಷೆಯನ್ನೇ ಅಕ್ಷರ ರೂಪದಲ್ಲಿ ಹಿಡಿದಿಟ್ಟಿರುವುದರಿಂದ ಮಂತ್ರಪುಷ್ಪ ಕಥಾ ಸಂಕಲನವು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿ ಬರುವ ಕೆಲ ಪಾತ್ರಗಳ, ಸ್ಥಳಗಳ, ವಸ್ತುಗಳ ವಿಶಿಷ್ಟ ರೀತಿಯ ಹೆಸರುಗಳು ಹಾಗೂ ಪದಗಳು ಆ ಪ್ರದೇಶಕ್ಕೆ ಸೀಮಿತವಾದಂತಹವುಗಳೇ ಆಗಿ ಬಹುವಾಗಿ ಆಕರ್ಷಿಸುತ್ತವೆ. 

ಇಲ್ಲಿ ಬರುವ ಕಥೆಗಳಲ್ಲಿ ಲವಲವಿಕೆಯಿಂದ ಕೂಡಿದ ಜೀವನವಿದೆ. ಪ್ರೀತಿ, ದ್ವೇಷ, ಮಮಕಾರ, ಅಭಿಮಾನ, ಅನುಬಂಧ, ಹೊಂದಾಣಿಕೆ, ಆತಂಕ, ಮುಗ್ದತೆ, ಕಿಚ್ಚು, ನಿರಾಶೆ, ಹತಾಶೆ ಹೀಗೆ ಎಲ್ಲ ರೀತಿಯ ಮಾನವರ ವಿವಿಧ ಸ್ವಭಾವಗಳ ಪಾತ್ರಗಳಿವೆ. ಒಂದೊಂದು ಕಥೆಯಲ್ಲೂ ಹಲವು ವ್ಯಕ್ತಿಗಳ, ವ್ಯಕ್ತಿತ್ವದ ಪರಿಚಯ ನಮಗಾಗುತ್ತಾ ಹೋಗುತ್ತದೆ. 

ಅಲ್ಲದೇ ಕೊಡಗಿನ ಕಾಫಿ ತೋಟಗಳ ರಮ್ಯತೆಯನ್ನು, ಹಸಿರು ಸಿರಿಯ ಸುಂದರವಾದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ರಸ್ತೆಗಳಲ್ಲಿ ಓಡಾಡುವಾಗ ಕಾಣಸಿಗುವ ನದಿ, ತೊರೆ, ಝರಿಗಳ ವರ್ಣನೆ, ಬೆಟ್ಟ ಗುಡ್ಡಗಳ ರಮಣೀಯ ವೈಭವ ಹೀಗೆ ಸಣ್ಣ ಪುಟ್ಟ ಘಟನೆಗಳನ್ನು ಸೂಕ್ಷ್ಮವಾಗಿ ಅಕ್ಷರದಲ್ಲಿ ಇಳಿಸಿದ್ದಾರೆ. ಈ ಪ್ರಕೃತಿ ಸೌಂದರ್ಯದ ವರ್ಣನೆ ಒಮ್ಮೆ ನಮ್ಮನ್ನು ಕೊಡಗಿಗೆ ಕೊಂಡೊಯ್ಯುತ್ತದೆ. ಬಾಲ್ಯದ ಆಟಗಳು, ಸೈಕಲ್ ತುಳಿಯಲು ಪರದಾಡುತ್ತಿದ್ದದ್ದು, ಮಳೆಯಲ್ಲಿ ತೊಯ್ದು ಬರುತಿದ್ದದ್ದು, ಎಟುಗಳು ಬೀಳುತ್ತಿದ್ದದ್ದು ಇತ್ಯಾದಿ ನೆನಪುಗಳು  ಮರುಕಳಿಸಿ ಓದುಗರ ಮೊಗದಲ್ಲಿ ತಿಳಿ ನಗುವೊಂದು ತೇಲಿ ಬರುವುದು.

ಹಾಗೆಯೇ ಎಸ್ಟೇಟ್ ಗಳಲ್ಲಿನ ಸಮಸ್ಯೆಗಳು ಹೇಗಿರುತ್ತವೆ, ಅಲ್ಲಿನ ಕೆಲಸಗಾರರು, ಮಾಲೀಕರು ಎದುರಿಸುತ್ತಿರುವ ಕಷ್ಟ ಕೋಟಲೆಗಳು ಮತ್ತು ಇವರ ನಡುವಿನ ಮುಸುಕಿನ ಗುದ್ದಾಟ. ಸಾಮಾನ್ಯವಾಗಿ ತೋಟ ಗದ್ದೆಗಳಲ್ಲಿ ಪ್ರಾಣಿ ಪಕ್ಷಿಗಳಿಂದ ಹಾನಿಯಾಗುವ ಬೆಳೆಗಳನ್ನು ರಕ್ಷಿಸಲು ಪರದಾಡುವ ರೈತನ ಪ್ರತಿದಿನದ ಗೋಳಾಟ ಮತ್ತು ಅವರ ಬದುಕಿನ ಬವಣೆಗಳ ಚಿತ್ರಣವನ್ನು ಕಥೆಯಲ್ಲಿ ಅಳವಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಕೊಡಗಿನಂತಹ ಗುಡ್ಡಗಾಡು ಪ್ರದೇಶದಲ್ಲಿ ಮಳೆಗಾಲದಲ್ಲಿನ ತೊಂದರೆಗಳು, ಅವುಗಳನ್ನು ಇಲ್ಲಿನ ಜನರು ಹೇಗೆ ಎದುರಿಸುತ್ತಾರೆ, ಸಮಸ್ಯೆಗಳ ನಡುವೆಯೇ ಅವರ ಜೀವನ ಸಾಗಿಸುವ ಕಲೆಯನ್ನು ಚಿತ್ರಿಸಿದ್ದಾರೆ. ಮಳೆಗಾಲದಲ್ಲಿ ಘಟಿಸುವ ಗುಡ್ಡ ಕುಸಿತದಿಂದ ಆದ ಭಯಾನಕ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಹಿಡಿದಿಟ್ಟಿದ್ದಾರೆ. ಕುಸಿತದಿಂದ ಆದ ಆಘಾತಗಳು, ಜನಜೀವನ ಅಸ್ತವ್ಯಸ್ತ ವಾಗಿ ಚಳಿ ಮಳೆಯಲ್ಲಿ ಅವರು ಅನುಭವಿಸಿದ ಕರುಳು ಹಿಂಡುವ ಭಯಾನಕ ಚಿತ್ರಣವೂ ನಮಗೆ ಇಲ್ಲಿ ಸಿಗುತ್ತದೆ. 

ಅಂತೆಯೇ ಆಧುನಿಕತೆಯ ಆಕರ್ಷಣೆಯಿಂದಲೋ, ಉದ್ಯೋಗವೆಂದೋ ಊರು ಬಿಟ್ಟವರು ನಗರಗಳಲ್ಲಿ ತೊಂದರೆಗೆ ಸಿಲುಕಿ ತಮ್ಮ ಹುಟ್ಟೂರಿಗೆ ಮರಳುವ ಚಿತ್ರಣವು  ಅವರಲ್ಲಿನ ರಕ್ಷಣಾತ್ಮಕ ಹಾಗೂ ಅಭಿಮಾನದ ಮನೋಭಾವವನ್ನು ಸೂಚಿಸುತ್ತದೆ. 

ಮಹಿಳೆಯರನ್ನು ಕೇಂದ್ರೀಕರಿಸಿ ಬರೆದಿರುವ ಕಥೆಗಳಲ್ಲಿ ಅವಳ ಮನದಾಳದ ಮಾತುಗಳನ್ನು ಕೇಳಬಹುದು. ಹೊರಗೆ ಕೆಲಸಕ್ಕೆ ಹೋಗುವ ಮಹಿಳೆಯರ ಮೇಲೆ ಆಗುವ ದೌರ್ಜನ್ಯದ ಬಗ್ಗೆಯೂ, ಕೆಲಸಕ್ಕೆಂದು ದೂರದ ಊರಿಗೆ ವಾಹನಗಳಲ್ಲಿ ಪ್ರಯಾಣಿಸುವಾಗ ಆಗುವ ಅನುಭವಗಳನ್ನು ಕಾಣಬಹುದು.

ಶ್ರೀಮಂತರ ದರ್ಪದಿಂದ ನಲುಗುವ ಬಡವರ ಕುಟುಂಬಗಳು ಹಾಗೂ ಅವರ ಸಂಘರ್ಷದ ಬದುಕಿನ ಚಿತ್ರಣವಿದೆ.

ಮಂತ್ರಪುಷ್ಪ ಕಥಾ ಸಂಕಲನವು ದಿನನಿತ್ಯದ ಆಗುಹೋಗುಗಳ ಎಳೆಗಳನ್ನೇ ಕಥೆಯ ಮುಖ್ಯ ವಸ್ತುವಾಗಿಟ್ಟು, ಸರಾಗವಾಗಿ ಓದಿಸಿಕೊಂಡು ಹೋಗುವಂತಹ ವಿಷಯ ವಸ್ತುವನ್ನು ಹೊಂದಿದ್ದು ಬಹಳ ಆಪ್ತವೆನಿಸುತ್ತವೆ. ಲೇಖಕಿ ಕೃಪಾ ದೇವರಾಜ್ ಅವರ ಬರವಣಿಗೆಯಲ್ಲಿ ಜೀವನದ ಬಗೆಗೆ ಪ್ರೀತಿಯಿದೆ, ಕಾಳಜಿಯಿದೆ, ಕರುಣೆ ಅನುಕಂಪ ತುಂಬಿದ ಮನವಿದೆ. ಪುಸ್ತಕವನ್ನು ಕೊಂಡು ಓದುವವರಿಗೆ ಯಾವುದೇ ಬೇಸರ ಬರದಂತೆ ಓದಿಸಿಕೊಂಡು ಹೋಗುತ್ತದೆ.

‍ಲೇಖಕರು Admin

21 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading