ಒಂದು ಹಲ್ಲನ್ನೂ ಅಭಿಮಾನಿಗಳು ಕಿತ್ತುಕೊಂಡುಹೋದರು!

ಯರ್ರಿಸ್ವಾಮಿ ಚಳ್ಳಕೆರೆ

ಸ್ವರ್ಗಕ್ಕೆ ಏಣಿ ಹಾಕಿದವನ ಸಮಾಧಿಯ ಎದುರು ನಿಂತಾಗ :

ಫ್ಲೊರೆನ್ಸ್ ಗೆ ಬಂದಮೇಲೆ ಈ ಜಾಗಕ್ಕೆ ಕಾಲಿಡದೇಹೋದರೆ ಇಲ್ಲಿಗೆ ಬಂದು ಏನು ಸಾರ್ಥಕ ಎಂದುಕೊಳ್ಳುತ್ತಲೇ ಏಳುದಿನ ಕಳೆದುಹೋಗಿದ್ದವು. ಈ ದಿನವಾದರೂ ನಾನು ಅಲ್ಲಿಗೆ ಹೋಗಿಬರುತ್ತೇನೆಂದು ಹೊರಟಾಗ ಮಗಳೂ ಜೊತೆಯಾದಳು

( ಈ ಸ್ಥಳದ ಕುರಿತು ನನ್ನ ವಿವರಣೆ ಕೇಳಿ ಆಕೆಯೂ ಕುತೂಹಲಗೊಂಡಿದ್ದಳು )

galileoನಾನು ಹೊರಟದ್ದು ವಿಜ್ಞಾನಿ ಗೆಲಿಲಿಯೋ ಸಮಾಧಿ ಸ್ಥಳಕ್ಕೆ. ಹೌದು ಫ್ಲೊರೆನ್ಸ್ ನ ಸಾಂತಾ ಕ್ರೂಸ್ ಬೆಸಿಲಿಕಾ ಚರ್ಚ್‌ನಲ್ಲಿ ಗೆಲಿಲಿಯೋನ ಸಮಾಧಿ ಇದೆ. ಗಣ್ಯಾತಿಗಣ್ಯರನ್ನು , ದೇಶಕ್ಕೆ ಜನತೆಗೆ ವಿಶೇಷ ಕೊಡುಗೆನೀಡಿದ ಕೀರ್ತಿವಂತರನ್ನು ಮಾತ್ರ ದೇವಸ್ಥಳ ಬೆಲಿಲಿಕಾದಲ್ಲಿ ಮಣ್ಣುಮಾಡಿ ಸ್ಮಾರಕ ನಿರ್ಮಿಸಲಾಗುತ್ತದೆ.

ಸಾಂತಾ ಕ್ರೂಸ್ ಚರ್ಚಿನ ಒಳಗೆ ಹೆಬ್ಬಾಗಿಲು ಪ್ರವೇಶಿಸುತ್ತಿದ್ದಂತೆ ಸಿಗುತ್ತದೆ ಗೆಲಿಲಿಯೋ ಸಮಾಧಿ. ಮೊದಲು ಸಮಾಧಿ ಎದುರು ನಿಂತು ಮಗಳಿಂದ ಒಂದು ಫೋಟೋ ತೆಗೆಸಿಕೊಂಡೆ. ಶ್ವೇತಶುಭ್ರ ಮಾರ್ಬಲ್ಲಿನಲ್ಲಿ ರೂಪುಗೊಂಡ ಸ್ಮಾರಕ ಅದು. ಒಂದು ಕಡೆ ಖಗೋಳ ಸುಂದರಿ, ಮತ್ತೊಂದುಕಡೆ ಗಣಿತ ಸುಂದರಿ, ನಡುವೆ ಗೆಲಿಲಿಯೋ ಕೈಯಲ್ಲಿ ಟೆಲಿಸ್ಕೋಪ್ ಹಿಡಿದು ಆಕಾಶ ದಿಟ್ಟಿಸುತ್ತಿರುವ ಆತನ ಎದೆಮಟ್ಟದ ಪ್ರತಿಮೆ. ಸ್ವರ್ಗವೆಂದು ಕಲ್ಪಿಸಿಕೊಂಡಿದ್ದ ದೂರದ ನಕ್ಷತ್ರ ಲೋಕಕ್ಕೇ ಏಣಿಹಾಕಿದವನೆಂದು ಮೇಲೆ ಏಣಿಯ ಚಿತ್ರ !

ಅಪ್ಪಾ , ಚರ್ಚಿನವರೇ ಗೆಲಿಲಿಯೋಗೆ ಜೈಲಿನ ಶಿಕ್ಷೆ ನೀಡಿದರು ಎಂದು ಓದಿದ್ದೇವೆ. ಇಲ್ಲಿನೋಡಿದರೆ ಅವರೇ ಇಂಥಾ ಗೌರವನೀಡಿ ಸ್ಮಾರಕ ಕಟ್ಟಿದ್ದಾರಲ್ಲ ? ಮಗಳ ಪ್ರಶ್ನೆ. ಮೌನ ಮಡುಗಟ್ಟಿದ್ದ ನಾನು ತುಟಿಬಿಚ್ಚದೆ.
ಚಿನ್ನು ಮರಿ, ಆ ಕಾಲ ಬಹಳ ಕ್ರೂರವಾಗಿತ್ತು.
ಬೈಬಲ್ ನಂಬಿಕೆಗಳಿಗೆ ವಿರುದ್ಧವಾಗಿ ಏನೂ ಆಲೋಚನೆಗಳು ಹುಟ್ಟುವಂತಿರಲ್ಲಿಲ್ಲ. ಕ್ರಿಯಾಶೀಲ ಮನಸ್ಸಿನ ಗೆಲಿಲಿಯೋ, ಟೆಲಿಸ್ಕೋಪ್ ಬಳಕೆಮಾಡಿ ದೂರದ ಲೋಕಗಳನ್ನು ನೋಡಿ ನಿರಂತರ ಅಧ್ಯಯನ ಮಾಡಿ, ಕಂಡುಕೊಂಡ ಸತ್ಯಗಳನ್ನು ಬರೆದು ಪ್ರಕಟಿಸಿದ. ಆ ಪ್ರಕಟಣೆಗೆ ಚರ್ಚ್ ಅನುಮತಿಯನ್ನೂ ನೀಡಿತ್ತು. ಆದರೂ ನಂತರ ತಪ್ಪಿತಸ್ಥನೆಂದು ತೀರ್ಪುನೀಡಿ ಸಾಯುವವರೆಗೂ ಬಂಧನದಲ್ಲಿರಬೇಕೆಂಬ ಶಿಕ್ಷೆನೀಡಿತು. ಇದೆಲ್ಲಾ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ನಿನಗೆ ತಿಳಿಯದ ಮಾಹಿತಿ ಹೇಳುತ್ತೇನೆ ಕೇಳು.

ಗೆಲಿಲಿಯೋ ಇದೇ ಫ್ಲೊರೆನ್ಸ್ ನಲ್ಲಿರುವ ಮನೆಯಲ್ಲಿ ಸಾಯುವವರೆಗೂ ಗೃಹಬಂಧನದಲ್ಲಿ ಇರಬೇಕಾಯಿತು. ಗೆಲಿಲಿಯೋ ಸಾವು ದಿಕ್ಕಿಲ್ಲದ ಸಾವಾಗಿತ್ತು. ಆತ ಇಟಲಿಯ ಮಹಾ ಪ್ರತಿಭೆ, ಆತನನ್ನು ಬೆಸಿಲಿಕದಲ್ಲಿ ಮಣ್ಣುಮಾಡಬೇಕೆಂದು ಕೆಲವರು ಮನವಿಮಾಡಿದರು. ಚರ್ಚ್ ನಿಂದ ಶಿಕ್ಷೆಗೂಳಗಾದವನಿಗೆ ಆ ಭಾಗ್ಯವಿಲ್ಲ ಎನ್ನಲಾಯಿತು. ಎಲ್ಲೋ ಒಂದು ಮೂಲೆಯಲ್ಲಿ ಮಣ್ಣುಗುಡ್ಡೆಮಾಡಿ ಮುಚ್ಚಲಾಯಿತು. ಇದು ಇಂಥವರ ಸಮಾಧಿ ಎಂಬ ಫಲಕಕೂಡಾ ಇರಲಿಲ್ಲ.

ಅಪ್ಪಾ , ಮತ್ತೆ ಈ ಸಮಾಧಿ ಹೇಗೆಬಂತು ?

ಅದೂ ಒಂದು ಕತೆಯೇ…

ಗೆಲಿಲಿಯೋ ಸತ್ತಮೇಲೆ, ಗೆಲಿಲಿಯೋನ ಬರಹ, ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಯಿತು. ಇಟಲಿಯ ಸುತ್ತಲಿನ ದೇಶಗಳಲ್ಲಿ ಟೆಲಿಸ್ಕೋಪ್ ಮೂಲಕ ಆನ್ವೇಷಣೆಗಳು ಶುರುವಾದವು. ಮೊದಮೊದಲು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಗೆಲಿಲಿಯೋನ ಪುಸ್ತಕಗಳ ಪ್ರಕಟಣೆಗೆ ಅನುಮತಿ ನೀಡಿದ ಚರ್ಚ್, ಐವತ್ತು ವರ್ಷ ಕಳೆಯುವುದರೊಳಗೆ ಯಥಾವತ್ತಾಗಿ ಪ್ರಕಟಿಸಲು ಕೈಬಿಟ್ಟಿತು. ಗೆಲಿಲಿಯೋ ನ ಚಿಂತನೆಗಳು, ಆನ್ವೇಷಣೆಗಳು ಜಗತ್ತನ್ನು ಆವರಿಸಿದವು.

ಫ್ಲೊರೆನ್ಸ್ ನಲ್ಲಿ ಬೀದಿಹೆಣವಾಗಿ ಮಲಗಿದ್ದ ಗೆಲಿಲಿಯೋ ಸತ್ತು 75 ವರ್ಷಗಳಾದಾಗ ವಿಶ್ವಮಾನ್ಯನಾಗಿಹೋಗಿದ್ದ. ಆಗ ಗೆಲಿಲಿಯೋ ಇಟಲಿಯ ಹೆಮ್ಮೆ , ಮಿನುಗುತಾರೆ ಎಂದು, ಆತನ ಸಮಾಧಿ ದೇವಸ್ಥಳ ಸಂತಾಕ್ರೂಸ್ ಬೆಸಿಲಿಕದಲ್ಲಿ ಇರಬೇಕೆಂದು ತೀರ್ಮಾನಿಸಿ ದಿಕ್ಕಿಲ್ಲದೆ ಬಿದ್ದಿದ್ದ ಹಳೆಯ ಸಮಾಧಿಯಿಂದ ಗೆಲಿಲಿಯೋ ದೇಹವನ್ನು ಕಿತ್ತುತೆಗೆದು ತಂದು ಬೆಸಿಲಿಕದಲ್ಲಿ ಈಗಿರುವ ಸಮಾಧಿ ಕಟ್ಟಲಾಯಿತು.

ಆ ಹೊತ್ತಿಗೆ ಗೆಲಿಲಿಯೋನ ದೇಹ ಅಮೂಲ್ಯವಾಗಿಹೋಗಿತ್ತು ! ಎಷ್ಟೇ ಎಚ್ಚರಿಕೆವಹಿಸಿದರೂ, ಅಲ್ಲಿಂದ ಇಲ್ಲಿಗೆ ದೇಹ ಸಾಗಿಸುವಾಗ ಗೆಲಿಲಿಯೋ ದೇಹದ ಎಡಗೈನ ಮೂರು ಬೆರಳುಗಳನ್ನ , ಒಂದು ಹಲ್ಲನ್ನೂ ಅಭಿಮಾನಿಗಳು ಕಿತ್ತುಕೊಂಡುಹೋದರು ! ತೀವ್ರ ತನಿಖೆಯ ನಂತರ ಅವುಗಳಲ್ಲಿ ಒಂದು ಬೆರಳುಮಾತ್ರ ಸಿಕ್ಕಿತು. ಉಳಿದವುಗಳನ್ನು ಇನ್ನೂ ಹುಡುಕುತ್ತಿದ್ದಾರೆ !

“ಸಿಕ್ಕರೆ ಹೇಳು, ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಎಷ್ಟು ಕೋಟಿಗಳೋ” ಮಗಳು ನಕ್ಕಳು.

‍ಲೇಖಕರು Admin

January 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: