‘One Gandhi please…’

GNM light version

ಜಿ ಎನ್ ಮೋಹನ್

‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು. ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು. ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು. ಟೆಡ್ ಟರ್ನರ್ ಕೊಲ್ಲಿ ಯುದ್ಧಕ್ಕೆ ಆಂಟೆನಾ ಜೋಡಿಸಿದ್ದೇ ತಡ ಜಗತ್ತು ಟೆಲಿವಿಷನ್ ಎಂಬ ಮಾಯಾ ಜಿಂಕೆಯ ಬೆನ್ನ ಹಿಂದೆ ಬಿತ್ತು.  ಮತ್ತೆ ಬಾಗಿಲು ತೆರೆದು ಟೆಡ್ ಟರ್ನರ್ ನಮ್ಮ ಮುಂದೆ ನಿಂತಾಗ ಅವರ ಕೈಯಲ್ಲಿ ಒಂದು ಪುಟ್ಟ ಪ್ರತಿಮೆ.

GNM with ted turnerಟೆಡ್ ಜೊತೆ ಲೋಕಾಭಿರಾಮವಾಗಿ ಹರಟೆ ಕೊಚ್ಚುತ್ತಾ ‘ನಿಮಗೆ ತೀರಾ ಇಷ್ಟವಾದವರು ಯಾರು? ಜೇನ್ ಫಾಂಡಾಳನ್ನು ಬಿಟ್ಟರೆ..’ ಅಂತ ಕೇಳಿದ್ದೆ. ಅದಕ್ಕೆ ಉತ್ತರವಾಗಿ ಟೆಡ್ ಈ ಪ್ರತಿಮೆ ಹಿಡಿದು ನಿಂತಿದ್ದರು. ‘ವಾಹ್, ಗಾಂಧಿ!’ ಅಂತ ಆಶ್ಚರ್ಯದ ಉದ್ಘಾರ ಹೊರಟಿದ್ದು ನನ್ನಿಂದ ಮಾತ್ರವಲ್ಲ ಪಕ್ಕದಲ್ಲಿಯೇ ಚಿಲಿ, ದಕ್ಷಿಣ ಆಫ್ರಿಕಾ, ಸ್ಲೊವೇನಿಯಾ. ಜೆಕ್, ಜರ್ಮನಿ, ಕೀನ್ಯಾ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ ದೇಶದ ಎಲ್ಲರ ಬಾಯಿಂದಲೂ ಈ ಉದ್ಘಾರ ಹೊರಬಿತ್ತು.

ಇನ್ನೇನು ಸಿ ಎನ್ ಎನ್ ಕಚೇರಿಯಿಂದ ಬೀಳ್ಗೋಳ್ಳಲು ಎರಡೇ ಎರಡು ದಿನ ಬಾಕಿ ಇತ್ತು. ಅಟ್ಲಾಂಟಾದ ಮೂಲೆ ಮೂಲೆಯನ್ನೆಲ್ಲಾ ಜಾಲಾಡಿಬಿಡೋಣಾ ಎಂದು ದಂಡು ಕಟ್ಟಿ ಹೊರಟಿದ್ದು ಮಾರ್ಟಿನ್ ಲೂಥರ್ ಕಿಂಗ್ ನೆನಪಿನ ಮನೆಗೆ. ಇನ್ನೂ ಕಾಂಪೌಂಡ್  ಒಳಗೆ ಕಾಲಿಟ್ಟಿರಲಿಲ್ಲ. ಅಲ್ಲಿ ಆಳೆತ್ತರದ ಪ್ರತಿಮೆ– ಅದು ಗಾಂಧಿ. ನನ್ನ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದ ದಕ್ಷಿಣ ಆಫ್ರಿಕಾದ ನೋಕ್ವಾಸಿ ಶಬಲಾಲ ಓಡಿಹೋಗಿ ಆ ಗಾಂಧಿಯ ಕೆನ್ನೆಗೊಂದು ಮುತ್ತು ತೂರಿದಳು. ನನ್ನ ಕ್ಯಾಮೆರಾ ‘ಕ್ಲಿಕ್’ ಎಂದಿತು.

ಶಾಪ್ ಹಾಪಿಂಗ್ ಮಾಡುತ್ತಾ ಮಾಡುತ್ತಾ ಸಮಯ ರಾತ್ರಿ ಮೂರರ ಗಡಿ ದಾಟಿತ್ತು. ಗೆಳೆಯರ ಜೊತೆ ಇನ್ನೂ ಸುತ್ತುವುದಕ್ಕೆ ನಾನು ಸಿದ್ದನಿರಲಿಲ್ಲ. ಎಲ್ಲರಿಗೂ ಒಳ್ಳೆಯ ಹಗ್ ಕೊಟ್ಟು ‘ಗುಡ್ ಬೈ’ ಹೇಳಿದೆ.  ’ಹುಷಾರು, ಇದು ಆಮೇರಿಕಾ, ಒಬ್ಬನೇ ಹೋಗುತ್ತಿದ್ದೀಯಾ’ ಎಂದು ಜೆಕ್ ಗೆಳೆಯ ಮೆರೆಕ್ ಬ್ರಾಡ್ಸ್ಕಿ ಪಿಸುಗಟ್ಟಿದ. ಭಾರತದಿಂದ ಹೊರಡುವಾಗಲೂ ಎಲ್ಲರದ್ದೂ ಇದೇ ಕಿವಿಮಾತು ಟ್ಯಾಕ್ಸಿ ಏರಿದೆ. ಜೇಬಿನಲ್ಲಿದ್ದ ಪಾಸ್ ಪೋರ್ಟ್, ಡಾಲರ ಗಳ ಮೇಲೆ ಎರಡಲ್ಲ, ಹತ್ತು ಕಣ್ಣಿಟ್ಟಿದ್ದೆ. ರೊಯ್ರಂನೆ ಬೀದಿ ಬೀದಿ ಸುತ್ತಿದ ಟ್ಯಾಕ್ಸಿ ನನ್ನ ಹೋಟಲ್ ಮುಂದೆ ನಿಂತಿತ್ತು. ಟ್ಯಾಕ್ಸಿ ಮೀಟರ್, ಅದಕ್ಕೆ ಹತ್ತು ಪರ್ಸೆಂಟ್ ಟಿಪ್ಸ್ ಸೇರಿಸಿ ಡ್ರೈವರ್ ಕೈಗಿಟ್ಟೆ. ನಾನು ಟಿಪ್ಸ್ ಎಂದು ಕೊಟ್ಟ ಹತ್ತು ಡಾಲರ್ ನೋಟನ್ನು ಆತ ನನ್ನ ಕೈಗೇ ತುರುಕಿದ. ಯಾಕೆ ಎಂದು ಕೇಳಿದೆ. ‘ಗಾಂಧಿ?’ ಅಂತ ಕೇಳಿದ . ನಾನು ‘ಯಸ್, ಇಂಡಿಯಾ’ ಎಂದೆ. ಕೈ ಬೀಸುತ್ತಾ ಹೊರಟೇ ಬಿಟ್ಟ.

ಗೆಳತಿ ನೇಮಿಚಂದ್ರ ಪೆರುವಿನ ಪವಿತ್ರ ಕಣಿವೆಗಳನ್ನು ಹುಡುಕುತ್ತಾ  ದಕ್ಷಿಣ ಅಮೆರಿಕಾ ಹೊಕ್ಕಿದ್ದರು. ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ? ಎಂಬಂತೆ ಸ್ಪಾನಿಷ್ ನೆಲದಲ್ಲಿ ಇಂಗ್ಲಿಷ್ ಗೇನು ಕೆಲಸ?. ಹೇಗಪ್ಪಾ ಇಲ್ಲಿನವರ ಜೊತೆ ಮಾತಾಡುವುದು ಎಂದು ನೇಮಿ ಕಕ್ಕಾಬಿಕ್ಕಿಯಾಗಿದ್ದರು. ಆದರೆ, ಅದು ಕೆಲವೇ ಕ್ಷಣ ಅಷ್ಟೆ. ಜನ ಅವರನ್ನು ಮುತ್ತಿಕೊಳ್ಳತೊಡಗಿದ್ದರು. ಎಲ್ಲರ ಬಾಯಲ್ಲೂ ‘ಗ್ಯಾಂಡಿ’ ಪದ. ಗೊತ್ತಿಲ್ಲದ ದೇಶದಲ್ಲಿ ಗಾಂಧಿ ಮಾತು ಕೂಡಿಸುವ ಸೇತುವೆಯಾಗಿ ಹೋಗಿದ್ದರು.

gandhi1ಅದಲ್ಲಾ ಬಿಡಿ, ಒಬ್ಬ ಪುಟ್ಟ ಹುಡುಗಿ ಬರಾಕ್ ಒಬಾಮಾಗೆ ಪ್ರಶ್ನೆ ಎಸೆದಳು. ನೀವು ಔತಣ ಕೂಟ ಏರ್ಪಡಿಸಿದರೆ ಅದಕ್ಕೆ ಆಹ್ವಾನಿಸಬೇಕೆಂದು ಬಯಸುವವರ ಪೈಕಿ  ಮೊದಲು ಯಾರು ನಿಲ್ಲುತ್ತಾರೆ. ಒಬಾಮ ಒಂದು ಕ್ಷಣವೂ ತಡಮಾಡದೆ ಹೇಳಿದರು- ಗಾಂಧಿ.

ಅಮೇರಿಕಾದಿಂದ ಬೀಳ್ಕೊಡುವಾಗ ನೆನಪಿಗೆಂದು ನಾನು ಇಲ್ಲಿಂದ ಕೊಂಡೊಯ್ದಿದ್ದ ಗಣೇಶನನ್ನು ಕೈಗಿಡುತ್ತಿದ್ದೆ. ತಕ್ಷಣ ಅವರು ಇನ್ನೊಂದು ಕೈಯನ್ನೂ ಚಾಚುತ್ತಿದ್ದರು. ‘One Gandhi please…’  ಎನ್ನುತ್ತಿದ್ದರು. ನಾನು ಪ್ರತಿ ಬಾರಿ ಮುದುಡಿಹೋಗುತ್ತಿದ್ದೆ. ಗಾಂಧಿ ನನಗೆಷ್ಟು ಗೊತ್ತು ಎಂಬ ಪ್ರಶ್ನೆ ಧುತ್ತನೆ ಎದ್ದು ನಿಲ್ಲುತ್ತಿತ್ತು. ಪ್ರಾಥಮಿಕ ತರಗತಿಯ ಪಠ್ಯ ಪುಸ್ತಕಗಳಲ್ಲಿನ ಗಾಂಧಿ ತಾತ ಆಮೇಲೆ ನಮ್ಮ ತಲೆಮಾರಿನವರಿಗೆ ಮತ್ಯಾವಾಗ ಕಿವಿಗೆ ಬೀಳ್ತಾನೆ ಎಂದು ಯೋಚಿಸುತ್ತಾ ಹೋದೆ. ತಕ್ಷಣ ನನಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ರಾಮಮೂರ್ತಿ ಬರೆದ ಕಾರ್ಟೂನ್ ನೆನಪಿಗೆ ಬಂತು. ಅಪ್ಪ, ಮಗ ಗಾಂಧಿ ಪ್ರತಿಮೆಯ ಮುಂದೆ ಹಾದು ಹೋಗುತ್ತಿದ್ದಾರೆ ಪ್ರತಿಮೆ ತೋರಿಸಿ ಮಗ ಅಪ್ಪನಿಗೆ ಕೂಗಿ ಹೇಳ್ತಿದಾನೆ- ‘ಅಪ್ಪಾ ಬೆನ್ ಕಿಂಗ್ಸ್ಲೆ’ ರಿಚರ್ಡ್ ಆಟಿನ್ ಬರೋ ನಿರ್ದೇಶಿಸಿದ  ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ಗಾಂಧಿ’ ಸಿನಿಮಾದಲ್ಲಿ ಗಾಂಧಿ ಪಾತ್ರ ಮಾಡಿದ ನಟ ಬೆನ್ ಕಿಂಗ್ಸ್ಲೆ. ಇವತ್ತು ಗಾಂಧಿಗೂ ಬೆನ್ ಕಿಂಗ್ಸ್ಲೆಗೂ ಇರುವ ಗೆರೆಯೇ ಅಳಿಸಿಹೋಗುತ್ತಿದೆ.

ಎಚ್ ನಾಗವೇಣಿ ಬರೆದ ‘ಗಾಂಧಿ ಬಂದ’ ನನ್ನನ್ನು ಮತ್ತೆ ಮತ್ತೆ ಸೆಳೆದು ಕೊಳ್ಳುವ ಕೃತಿ. ಅಂದಿನ  ‘ಕನ್ನಡ’ ಜಿಲ್ಲೆಗೆ ಗಾಂಧಿ ಬಂದ ಹಿನ್ನೆಲೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಥನ ಇದು. ಗೊತ್ತಿಲ್ಲದ ಒಬ್ಬ ಗಾಂಧಿ ಎಲ್ಲಿಯೋ ಇರುವವರನ್ನು ಬದಲಿಸುತ್ತಾ ಹೋಗುತ್ತಾನೆ. ‘ಗಾಂಧಿ ಬಂದ’ ಎಂಬ ಹೆಸರಿಡುವ ಮುನ್ನ ಕಲಾವಿದ ಸುದೇಶ್ ಮಹಾನ್ ಕಾದಂಬರಿಗೆ ‘ಮಾಯಿದ ಪುರುಷೆ’ ಎನ್ನುವ ಹೆಸರಿಡ ಬೇಕು ಎಂದು ನಾಗವೇಣಿಯ ಜೊತೆ ವಾದ ಮಾಡುತ್ತಾ ಇದ್ದ. ತುಳುವಿನಲ್ಲಿ ‘ಮಾಯಿದ ಪುರುಷೆ’ ಎಂದರೆ ‘ಮಾಯದ ಪುರುಷ’ ಎಂದರ್ಥ. ಈ ಎಲ್ಲಾ, ಈ ಎಲ್ಲವೂ ನನ್ನ ನೆನಪಿಗೆ ಬರುತ್ತಾ ಹೋದದ್ದು ಮಾಧ್ಯಮ ಲೋಕದ ಬಹುದೊಡ್ಡ ಥಿಯರಿ “medium is the message “ ಎನ್ನುವುದು ನೆನಪಿಗೆ ಬಂದಾಗ . ಹೌದಲ್ಲಾ  ಗಾಂಧಿ ಎಂಬ ಗಾಂಧಿ ತಾವೇ ಒಂದು ಸಂದೇಶವಾಗಿ ಬದುಕಿಬಿಟ್ಟರು.

ಮೊನ್ನೆ ಸಂಚಯದ ಡಿ ವಿ ಪ್ರಹ್ಲಾದ್  ಗಾಂಧಿಯವರ ‘ಹಿಂದ್ ಸ್ವರಾಜ್’ ಕುರಿತ ವಿಶೇಷ ಸಂಚಿಕೆ ರೂಪಿಸಿದ್ದರು. ಮಾತು ಮಾತು ಮಥಿಸುತ್ತಿದ್ದಾಗ ಯಾಕೋ ನನಗೆ ಎಂಟು ಮಂದಿ ಕುರುಡರು  ಆನೆ ಮುಟ್ಟಿದ ಕಥೆ ನೆನಪಿಗೆ ಬಂತು. ಹಾಗೆ ನೆನಪಿಗೆ ಬರಲು ಕಾರಣ ಅಬು ಅವರ ವ್ಯಂಗ್ಯ ಚಿತ್ರ. ನಾವೆಲ್ಲರೂ ಆ ಕುರುಡರಂತೆ ಗಾಂಧಿ ಎಂಬ ಆನೆಯನ್ನು ಮುಟ್ಟುತ್ತಿದ್ದೇವೆ. ಒಬ್ಬೊಬ್ಬರಿಗೂ ಗಾಂಧಿ ಒಂದೊಂದು ರೀತಿಯಲ್ಲಿ ಕೈಗೆಟುಕಿದ್ದಾರೆ. ನನಗೂ ಅಷ್ಟೇ ಗಾಂಧಿ ಕೈಗೆಟುಕಿದ್ದು ಒಬ್ಬ ಪತ್ರಕರ್ತರಾಗಿ.

ಲಂಕೇಶ್ ಪತ್ರಿಕೆ ಮಾರುಕಟ್ಟೆಗೆ ಬಂದಾಗ ನಮಗೆಲ್ಲಾ ಆಶ್ಟರ್ಯವಾಗಿ ಹೋಗಿತ್ತು. ಜಾಹಿರಾತು ಇಲ್ಲದೆ ಬದುಕುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆ ಕುಣಿದಾಡುತ್ತಿತ್ತು.  ಏನೇ ಬರಲಿ, ಜಾಹಿರಾತು ನನ್ನ ಪತ್ರಿಕೆಯಲ್ಲಿರುವುದಿಲ್ಲ ಎಂದು ಲಂಕೇಶ್ ಘೋಷಿಸಿ ಕುಳಿತಿದ್ದರು. ಜಾಹಿರಾತಿಲ್ಲದೆ ಒಂದು ಪತ್ರಿಕೆ ನಡೆಸಲು ಸಾಧ್ಯ ಎಂಬುದನ್ನು ಗಾಂಧಿ ತೋರಿಸಿಕೊಟ್ಟಿದ್ದರು ಎಂಬುವುದು ಅರ್ಥವಾಗುತ್ತಿರುವುದು  ಈಗ. ಗಾಂಧೀಜಿಗೆ ವೈದ್ಯರೊಬ್ಬರು ಬೆಡ್ ರೆಸ್ಟ್ ಹೇಳಿದರು. ಮಲಗಿ ಸಾಕಾದ ಗಾಂಧೀಜಿ ಪತ್ರಿಕೆಯ ಪ್ರಬಂಧ, ಜಾಹಿರಾತು ತಿರುವಿಹಾಕುತ್ತಾ ಹೋದರು. ಜಾಹಿರಾತಿನ ಬಗ್ಗೆ ಅವರ ಅಸಹನೆ ಎಷ್ಟು ಹೆಚ್ಚುತ್ತಾ ಹೋಯಿತೆಂದರೆ ಅಯೋಗ್ಯ ಜಾಹಿರಾತು ಅನ್ನುವ ಸಂಪಾದಕೀಯವನ್ನೇ ಬರೆದರು. ಗಾಂಧಿಯವರ ವಾದ ಇಷ್ಟೆ. ಯೋಗದ ಪುಸ್ತಕ ಅಂತ ಜಾಹಿರಾತು ಕೊಡುತ್ತಾರೆ, ಆದರೆ ಆ ಪುಸ್ತಕ ಪಟ್ಟಿ ನೋಡಿದರೆ ಅಲ್ಲಿರೋದು ಒಂದೇ ಒಂದು ಯೋಗದ ಪುಸ್ತಕ . ಇನ್ನುಳಿದದ್ದೆಲ್ಲಾ ಸೆಕ್ಸ್ ಬುಕ್ ಗಳು ಅನ್ನೋ ಆಕ್ರೋಶ ಅವರದ್ದು. ಇದನ್ನೆಲ್ಲಾ ನನ್ನ ಪತ್ರಿಕೆಗೆ ಹೇಗೆ ತರಲಿ ಅನ್ನೋ ತಲೆ ಬಿಸಿ ಅವರದ್ದು.

gandhi3ಗಾಂಧಿಗೆ ಪತ್ರಿಕೋದ್ಯಮ ಅನ್ನೋದು ಬರಿ ಪತ್ರಿಕೋದ್ಯಮ ಆಗಿರಲಿಲ್ಲ. ಅವರೇ ಹೇಳಿಕೊಳ್ಳುವ ಪ್ರಕಾರ ಅದು ಅವರ ಆತ್ಮದ ತಳಮಳಕ್ಕೆ ನೀಡಿದ ಅಕ್ಷರ ರೂಪವಾಗಿತ್ತು.ಗಾಂಧಿಗೆ ಗಾಂಧಿಯನ್ನು ನೋಡಿಕೊಳ್ಳುವ ಒಂದು ಕನ್ನಡಿಯಾಗಿ ಅದು ರೂಪುಗೊಳ್ಳುತ್ತಿತ್ತು. ಗಾಂಧಿ ಪತ್ರಿಕೆಗೆ ಬರೆಯುತ್ತಲೇ ತಮ್ಮ ದೌರ್ಬಲ್ಯಗಳನ್ನೂ ಕಂಡುಕೊಳ್ಳುತ್ತಾ ಹೋದರು. ಪತ್ರಿಕೆ ಎನ್ನುವುದು ಒಂದು ಉದ್ಯಮ ಆಗುವುದೇ ಗಾಂಧಿಗೆ ಸರಿ ಬರದ ವಿಚಾರವಾಗಿತ್ತು. Journalism should never be prostituted for selfish ends or for the sake of carrying livelihood ಅಂದಿದ್ದರು.

ಭಾರತದ ಪತ್ರಿಕೋದ್ಯಮ ಅಂದರೆ ಬ್ರಿಟಿಷರು ಕಿಸಕ್ಕನೆ ನಗುವ ಪರಿಸ್ಥಿತಿ ಇತ್ತು. ಭಾರತದ ಪತ್ರಿಕೆ ಓದಿದರೆ ಅರೇಬಿಯನ್ ನೈಟ್ಸ್ ಕಥೆ ಓದಿದ ಹಾಗಿರುತ್ತದೆ ಅಂತ ಬ್ರಿಟನ್ನಿನ ಪ್ರಧಾನಿ ಬೆಂಜಮಿನ್ ಡಿಸ್ರೇಲಿ ನಗಾಡಿದ್ದ. ಅಂತಹ ಕಾಲದಲ್ಲೇ ಗಾಂಧಿ ಪತ್ರಿಕೆಯ ಅಂಗಳ ಪ್ರವೇಶಿಸಿದರು. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವಾಗ ಗಾಂಧಿ ರೈಲು ಡಬ್ಬಿಯಿಂದ ಬಿಳಿಯರು ಎಸೆದ ಸೂಟ್ ಕೇಸನ್ನು ಮಾತ್ರ ಹೊತ್ತು ತರಲಿಲ್ಲ. ಪ್ರತಿಭಟನೆಯ ಕಿಚ್ಚನ್ನೂ, ಪತ್ರಿಕೆ ಎಂಬ ಕಂದೀಲನ್ನೂ ಹಿಡಿದುಕೊಂಡೇ ಬಂದರು. ಯಂಗ್ ಇಂಡಿಯಾ ಕೈಗೆತ್ತಿಕೊಂಡರು. ನವ ಜೀವನ, ಸತ್ಯಾಗ್ರಹಿ, ಹರಿಜನ, ಹರಿಜನ ಬಂಧು, ಹರಿಜನ ಸೇವಕ…ಹತ್ತು ಭಾಷೆಯನ್ನು ಆವರಿಸಿ ನಿಂತರು. ಅಷ್ಟೇ ಅಲ್ಲ, ಏನಿಲ್ಲೆಂದರೂ ಐದು ದಶಕ ಅವರಿಗೆ ಪತ್ರಿಕೆ ಇನ್ನೊಂದು ಊರುಗೋಲೇ ಆಗಿಹೋಗಿತ್ತು.

‘ಗಾಂಧಿ ಜರ್ನಲಿಸಂ’  ಖದರ್ರೇ ಬೇರೆ ಇತ್ತು. ಗಾಂಧಿ ಎಲ್ಲಿರ್ತಾರೋ ಅದೇ ಪೇಪರ್ ಆಫೀಸ್ ಕೂಡಾ ಆಗ್ತಿತ್ತು. ಜೊತೆಯಲ್ಲಿದ್ದವರೇ ಜರ್ನಲಿಸ್ಟ್ ಗಳು. ಗಾಂಧಿ ಜೊತೆ ಇರೋದಿಕ್ಕೆ, ನೋಡೋದಿಕ್ಕೆ ಬಂದವರು, ಅವರೆಲ್ಲಾ ಇರ್ಲಿ, ಕಸ್ತೂರಬಾ ಗಾಂಧೀನೆ  ಎಷ್ಟೋ ಸಲಾ ಪ್ರಿಂಟಿಂಗ್ ಕೆಲಸಕ್ಕೂ ಕೈ ಹಾಕಬೇಕಾಗಿ ಬರ್ತಿತ್ತು. ಗಾಂಧಿ ಪ್ರವಾಸ ಹೊರಟರು ಅಂದ್ರೆ ಟ್ರೇನ್ ನಲ್ಲಿ ಅವರು ಮಾತ್ರ ಅಲ್ಲ ಅವರ ಮೇಕೆಗಳು, ಪ್ರಿಂಟಿಂಗ್ ಸಾಮಾನುಗಳೂ ಡಬ್ಬಿ ಏರ್ತಿದ್ದವು.

ಪತ್ರಿಕೆಗೆ ಒಂದು ಎಥಿಕ್ಸ್ ಇರ್ಬೇಕು ಅನ್ನೋದು ಗಾಂಧಿಯವರಿಗೆ ಗೊತ್ತಾಗಿತ್ತು. ಜಾಹೀರಾತಿಲ್ಲದೆ ಪತ್ರಿಕೆ ನಡೆಸೋದಕ್ಕಾಗಲ್ಲ ಅಂತ ಸುಳ್ಳು ಹೇಳೋ ಜಾಹೀರಾತೆಲ್ಲಾ ಹಾಕೋದಿಕ್ಕೆ ಆಗುತ್ತಾ. ಒಂದಿಷ್ಟು ನೀತಿ ನಿಯಮ ಇರ್ಬೇಕು, ಪತ್ರಕರ್ತರ ಸಂಘಗಳು ನಿಬಂಧನೆ ಮಾಡ್ಬೇಕು ಅಂತಿದ್ರು. ಗುಲ್ವಾಡಿ ಅವರ ಪುಸ್ತಕ ತೆಗೆದು ನೋಡಿ. ಗಾಂಧಿ ಹೇಳಿದರಂತೆ- ‘ಪತ್ರಕರ್ತರು ನಡೆದಾಡೋ ಪ್ಲೇಗ್ ನಂತ ಮಹಾರೋಗಿಗಳು. ಪತ್ರಿಕೆಗಳು ಬೈಬಲ್, ಕುರಾನ್, ಗೀತೆ ಎಲ್ಲವನ್ನೂ ಒಂದರಲ್ಲೇ ಅಳವಡಿಸೋ ಕೃತಿಗಳಾಗಿವೆ. ಇಷ್ಟರಲ್ಲೇ ರಾಜಕೀಯ ದೊಂಬಿಯಾಗಲಿದೆ ಅಂತ ಪತ್ರಿಕೆಗಳಲ್ಲಿ ಪ್ರಕಟವಾದರೆ ದೆಹಲಿಯಲ್ಲಿರುವ ಎಲ್ಲಾ ಕತ್ತಿ, ಬಾರುಕೋಲುಗಳು ಕ್ಷಣ ಮಾತ್ರದೊಳಗೆ ಮಾರಾಟವಾಗುತ್ತವೆ. ಜನರು ಧೈರ್ಯಶಾಲಿಗಳಾಗಬೇಕೆಂದು ಪತ್ರಿಕೆಗಳು ಕಲಿಸಿಕೊಡಬೇಕೇ ಹೊರತುಅವರಲ್ಲಿ ಭಯವನ್ನು ಹುಟ್ಟಿಸುವುದಲ್ಲ’.

ಕಾಲೇಜಿನಲ್ಲಿದ್ದಾಗ ನಮ್ಮ ನಡುವೆ ಒಂದು ಹಾಡು ಭಾರೀ ಪಾಪ್ಯುಲರ್ ಆಗಿತ್ತು.’ಗಾಂಧಿ ಹೇಳಿಕೊಟ್ಟ ಪಾಠ, ಗುರುವಿಗೆ ತಿರುಮಂತ್ರ ಮಾಟ, ಸತ್ಯಾಗ್ರಹ- ಸ್ಟ್ರೈಕ್, ಸ್ಟ್ರೈಕ್,  ಸ್ಟ್ರೈಕ್…’ ಅಂತ ಹೇಳಿ ಸ್ಟ್ರೈಕ್ ಗೆ ಇಳೀತಿದ್ವಿ. ಈಗ ‘ಗಾಂಧಿ ಜರ್ನಲಿಸಂ’ಗೆ ಬಂದಿರೋ ಸ್ಥಿತೀನೂ ಅದೇ. ಇವತ್ತಿನ ಪತ್ರಿಕೋದ್ಯಮ ಗಾಂಧಿ ಎಂಬ ಗುರುವಿಗೇ ತಿರುಮಂತ್ರ ಹೇಳುತ್ತಿದೆ. ಗಾಂಧಿಯ ನೆನಪಿನ ಓಣಿಯಲ್ಲಿ ನಡೆಯುತ್ತಾ ಇರುವಾಗ ಏಕೋ ಗೋವಿಂದ ಪೈ ಬರೆದ ‘ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು…’ ಸಾಲುಗಳು ನೆನಪಿಗೆ ಬಂತು. ಹೌದು, ನೀ ಇನ್ನಿನಿಸು ದಿನ ಬದುಕಬೇಕಿತ್ತು…

gandhi5ಬುಕ್ ಟಾಕ್

ಪತ್ರಕರ್ತರಾಗಿ  ಗಾಂಧೀಜಿಯನ್ನು ನೋಡುವ ಪ್ರಯತ್ನವೇ ‘ಮಹಾ ಪತ್ರಕರ್ತ ಮಹಾತ್ಮ ಗಾಂಧೀಜಿ’. ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಈ ಕೃತಿ ರಚಿಸಿದ್ದಾರೆ. ಗಾಂಧಿ ಪತ್ರಕರ್ತರಾಗಿ ೮ ಪತ್ರಿಕೆಗಳನ್ನು ಮುನ್ನಡೆಸಿದ ರೀತಿಯನ್ನುಒರೆಗೆ ಹಚ್ಚಿ ನೋಡಿದ್ದಾರೆ. ಇದರ ಜೊತೆಗೆ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೋದ್ಯಮ ಹೇಗಿತ್ತು? ಪತ್ರಿಕೆಗಳು ಹೇಗೆ ಬ್ರಿಟಿಷರ ವಿರುಧ್ಧದ ಅಂದೋಲನಕ್ಕೆ ವೇಗ ವರ್ಧಕಗಳಾಗಿದ್ದವು ಎಂಬುದನ್ನೂ ಚರ್ಚಿಸಿದ್ದಾರೆ. ಗಾಂಧಿಯವರ ನಂಬಿಕೆ, ಅವರ ಭಾಷೆ, ಶೈಲಿ ಎಲ್ಲದರ ಬಗ್ಗೆ  ಈ ಕೃತಿಯಲ್ಲಿ ಕಣ್ಣೋಟವಿದೆ. ಗಾಂಧಿಯವರ ಸಂಪಾದಕೀಯಗಳನ್ನು ಉಲ್ಲೇಖಿಸುತ್ತಾ ಹೋಗಿರುವುದು ಕೃತಿಗೆ ಮೌಲ್ಯ ತಂದುಕೊಟ್ಟಿದೆ. ಗಾಂಧಿ ಕುರಿತು ಬಂದಿರುವ ಸಾಕಷ್ಟು ವ್ಯಂಗ್ಯ ಚಿತ್ರಗಳನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಗಾಂಧಿ ಹೇಗೆ ಎಲ್ಲರ ಮಧ್ಯೆ ಹರಡಿಹೋಗಿದ್ದರು ಎಂಬ ಸೂಚನೆಯನ್ನು ಈ ಚಿತ್ರಗಳು ನೀಡುತ್ತವೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಈ ಕೃತಿಯನ್ನು ಹೊರತಂದಿದೆ.

ಕೆಂಪ್ ಮೆಣಸಿನ್ಕಾಯ್

ಗಾಂಧಿ ಫೋಟೋ ಬೇಕಾಗಿತ್ತು. ಸರ್ವಂತರ್ಯಾಮಿ ಗೂಗಲ್ ಸಾಹೇಬರ ಮೊರೆ ಹೊಕ್ಕೆ. ಗೂಗಲ್ ಸರ್ಚ್ ನಲ್ಲಿ ‘ಗಾಂಧಿ’ ಅಂತ ಬರೆದು ಬಟನ್ ಒತ್ತಿದ್ದೇ ತಡ, ಗಂಡು ಹೆಣ್ಣುಗಳೆಲ್ಲಾ ಎದ್ದು ಬಂದ್ರು. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮೇನಕಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ, ವರುಣ್ ಗಾಂಧಿ ಎಲ್ಲಾರ್ನೂ ಪಕ್ಕಕ್ಕೆ ತಳ್ಳಿ ನೋಡ್ತೀನಿ.. ಅರೆ..!ಇನ್ನೂ ಒಬ್ಬ ಗಾಂಧಿ ಇದಾರೆ. ಯಾರಪ್ಪ ಅಂತ ನೋಡಿದ್ರೆ ‘ಹ್ವಾಯ್, ಅವ್ರು ನಮ್ಮ ಪೂಜಾ ಗಾಂಧಿ ಮಾರಾಯ್ರೇ..!!’

‍ಲೇಖಕರು Admin

January 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರಘುನಂದನ ಕೆ

    ಗಾಂಧಿಯೆಂಬ ಆನೆಯನ್ನು ಎಷ್ಟೆಲ್ಲ ಅರ್ಥಸಿಕೊಂಡರೂ ಮತ್ತಷ್ಟು ಬಾಕಿ ಉಳಿಯುತ್ತಲೇ ಇರುತ್ತದೆ,
    ಸಹಜ ವಿವರಗಳಾಚೆಯ ಗಾಂಧಿಯನ್ನ ತಿಳಿಸಿಕೊಟ್ಟಿದ್ದೀರಿ,
    ವಿಶ್ವದೆದುರಿನ ಗಾಂಧಿಯನ್ನ ನೆನಪಿಸಿದ್ದೀರಿ, ಧನ್ಯವಾದ .…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: