ಒಂದು ಬ್ಲಾಗ್ ಪ್ರವಾಸ ಕಥನ

ಬ್ಲಾಗ್ ಮಂಡಲದ ಬಗ್ಗೆ ಬರೆದುಕೊಡಲು ಉದಯವಾಣಿ ಬಳಗದ ಗೆಳೆಯ ಪ್ರುಥ್ವಿ ರಾಜ  ಕವತ್ತಾರ್ ಸಾಕಷ್ಟು ಕಾಲದಿಂದ ಬೆನ್ನು ಬಿದ್ದಿದ್ದರು. ಬ್ಲಾಗ್ ಲೋಕದ ಅಪಾರತೆಯಲ್ಲಿ ಈಜುವುದು ಹೇಗೆ? ಎಂದು ತಿಳಿಯದೆ ನಾನು ಸುಮ್ಮನಾಗಿದ್ದೆ. ಕವತ್ತಾರ್ ಈ ಬಾರಿ ತಮ್ಮ ಪಟ್ಟು ಸಡಿಲಿಸಲಿಲ್ಲ. ಹಾಗಾಗಿ ಬರದೆಬಿಡುವ ಎಂದುಕೊಂಡೆ.

ಬ್ಲಾಗ್ ಲೋಕದ ನನ್ನ ಸಂಚಾರವನ್ನೇ ಏಕೆ ಬರೆಯಬಾರದು?. ಹೇಗಿದ್ದರೂ ಇದು ಬ್ಲಾಗ್ ಮಂಡಲ. ಅದಕ್ಕೆ ಒಂದು ಸುತ್ತು ಹೊಡೆದು ಬರುವ ಪ್ರವಾಸ ಕಥನ ಏಕಾಗಬಾರದು ಅನಿಸಿತು. ಹಾಗೆ ಮೂಡಿದ ಬರಹ ಇಲ್ಲಿದೆ.

ನನಗೆ ಗೊತ್ತ್ತು. ನಾನೇ ಇಷ್ಟಪಡುವ, ಕಕ್ಕುಲಾತಿಯಿಂದ ಓದುವ ಬ್ಲಾಗ್ ಗಳೇ ಹೆಸರೇ ಇಲ್ಲಿ ಬಂದಿಲ್ಲದಿರಬಹುದು. ಅದಕ್ಕೆ ಬರೆವ ಕಾಲಕ್ಕೆ ಆ ಹೆಸರುಗಳು ನೆನಪಿಗೆ ಬಂದಿಲ್ಲ ಎನ್ನುವುದಷ್ಟೇ ಅದಕ್ಕೆ ಕಾರಣ. ಬ್ಲಾಗ್ ಲೋಕವನ್ನು ನಾನು ಸಾಕಷ್ಟು ಪ್ರೀತಿಸಿದ್ದೇನೆ ಹಾಗೆ ಬ್ಲಾಗ್ ಲೋಕವೂ ನನ್ನನ್ನು ಅಪ್ಪಿಕೊಂಡಿದೆ. ಆ ಕಾರಣದಿಂದ ಈ ಬರಹ ಇಲ್ಲಿದೆ.

ಇನ್ನೊಂದು ಯೋಚನೆ ಬಂದಿದೆ. ಇನ್ನು ಮುಂದೆ ಪ್ರತೀ ದಿನ ಒಂದು ಬ್ಲಾಗ್ ಅನ್ನು, ಅದರ ಒಂದು ಲೇಖನವನ್ನು, ಆ ಬ್ಲಾಗ್ ನ ಚಿತ್ರದೊಂದಿಗೆ ಅದರ ವಿಶೇಷತೆಯನ್ನು ಯಾಕೆ ಪರಿಚಯಿಸಬಾರದು ಅಂತ? ಇದನ್ನು ಮಾಡಿ ಕೊಡಲು ನಮ್ಮ ಸುಶ್ರುತ ದೊಡ್ದೇರಿಯನ್ನು, ಟೀನಾ ರನ್ನೂ ಕೇಳಬೇಕೆಂದುಕೊಂಡಿದ್ದೇನೆ. ಅವರು ಸೈ ಎಂದರೆ ನಾಳೆಯಿಂದಲೇ ‘ಇಂದಿನ ಬೆಸ್ಟ್ ಬ್ಲಾಗ್’ ಅಂಕಣ ನಿಮ್ಮ ಮುಂದೆ…

ಬ್ಲಾಗ್  ಲೋಕದಲ್ಲಿ ತೆರೆದಷ್ಟೂ ಬಾಗಿಲು..

-ಜಿ ಎನ್ ಮೋಹನ್

‘ನೀವೇ ಯಾಕೆ ಒಂದು ಬ್ಲಾಗ್ ಶುರು ಮಾಡಬಾರದು?’ ಅಂತ ಕೇಳಿದ್ದು ಶ್ರೀದೇವಿ. ನಾನು ಆಗತಾನೆ ಮರು ಮುದ್ರಣ ಕಂಡಿದ್ದ ನನ್ನ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕವನ್ನು ಕೈನಲ್ಲಿಡಿದು ನಿಂತಿದ್ದೆ. ಅದು ಅಂತಿಂತ ದೇಶದ ಕಥನವಲ್ಲ. ಕ್ಯೂಬಾ ಕಥನ… ಒಂದು ದೈತ್ಯ ಶಕ್ತಿಯ ವಿರುದ್ಧ ಹಲ್ಲು ಕಚ್ಚಿ ನಿಂತ ಕ್ಯೂಬಾದ ಕಥನ. ಹೀಗಾಗಿ ಅದನ್ನು ಎಷ್ಟು ಜನ ಓದಿದರೂ ಕಡಿಮೆಯೇ ಎನಿಸಿತ್ತು. ಆದ್ದರಿಂದ ಇದನ್ನು ಅಂತರ್ಜಾಲದೊಳಗೆ ಸೇರಿಸುವ ಬಗೆ ಹೇಗೆ ಎಂದು ತಲಾಶ್ ನಡೆಸುತ್ತಿದ್ದೆ. ಆ ವೇಳೆಗೆ ಸಿಕ್ಕಿದ್ದು ಶ್ರೀದೇವಿ. ಸದಾ ಚಟುವಟಿಕೆಯ ಹುಡುಗಿ. ಎಲೆಕ್ಟ್ರಾನಿಕ್ ಮಾಧ್ಯಮದ ತಾಂತ್ರಿಕತೆಯ ಬಗ್ಗೆ ಸಾಕಷ್ಟು ಅರಿವಿದ್ದ ಈಕೆ ನೋಡ ನೋಡುವ ವೇಳೆಗೆ ಆನ್ ಲೈನ್ ಮಾಧ್ಯಮಕ್ಕೂ ಜಿಗಿದಿದ್ದಳು. ತನ್ನದೇ ‘ನೂರು ಕನಸು’ ಬ್ಲಾಗ್ ಆರಂಭಿಸಿದ್ದಳು. ಅದರಲ್ಲಿದ್ದ ಹಲವು ಲಿಂಕ್ ಗಳನ್ನು ನೋಡಿದ ನಾನು ಆ ಕೊಂಡಿಗೆ ಕ್ಯೂಬಾ ಪುಸ್ತಕವೂ ಸೇರಿಕೊಂಡರೆ ಒಳ್ಳೆಯದಲ್ಲಾ..ಅನಿಸಿ ಶ್ರೀದೇವಿಗೆ ಕೇಳಿದೆ. ಆಗಲೇ ಆಕೆ ಹೇಳಿದ್ದು ‘ನೀವೇ ಏಕೆ ಒಂದು ಬ್ಲಾಗ್ ಆರಂಭಿಸಬಾರದು?’ ಅಂತ.

ಹಾಗೆ ಆಕೆ ಕೇಳುವ ವೇಳೆಗೆ ನಾನು ರಾಮೋಜಿ ಫಿಲಂ ಸಿಟಿಗೆ ಬಂದು ಮೂರು ವರ್ಷಗಳಾಗಿತ್ತು. ವಿಸ್ತಾರವಾದ ೨೫೦೦ ಎಕರೆ ಜಾಗದಲ್ಲಿ ಹರಡಿಕೊಂಡು, ಹಾಲಿವುಡ್ ಅನ್ನೂ ಮೀರಿಸಿ ಬೆಳೆದು ನಿಂತ ಚಿತ್ರ ನಗರಿಯಲ್ಲಿ ನಾನು ಏಕತಾನತೆಯನ್ನು ಕಳೆದುಕೊಳ್ಳಲು ಕ್ಯಾಮೆರಾ ಹಿಡಿದು ಮೂಲೆ ಮೂಲೆ ಸುತ್ತಿದ್ದೆ, ಚಿತ್ರ ನಗರಿಯ ವಿಸ್ಮಯಗಳನ್ನೆಲ್ಲಾ ನನ್ನ ಕ್ಯಾಮೆರಾ ಪೆಟ್ಟಿಗೆಯೊಳಗೆ ಸೇರಿಸಿ ಆಗಿತ್ತು. ಮುಂದೇನು ಎನ್ನುವಾಗಲೇ ಈ ಬ್ಲಾಗ್ ಹುಳು ನನ್ನೊಳಗೆ ಹೊಕ್ಕಿತು. ರಾಮೋಜಿ ಫಿಲಂ ಸಿಟಿಯೊಳಗೆ ಕುಳಿತೇ ಜಗತ್ತನ್ನು ನೋಡುವ ಅವಕಾಶ ಏಕೆ ಬಿಡಬೇಕು ಎನಿಸಿತು.

ಇಂಟರ್ನೆಟ್ ಎನ್ನುವುದು ಜಗತ್ತಿಗೆ ಇರುವ ಕಿಟಕಿ ಎಂಬುದು ಆ ವೇಳೆಗೆ ಗೊತ್ತಾಗಿಹೋಗಿತ್ತು. ಇಂತಹ ತಾಂತ್ರಿಕ ವಿಸ್ಮಯಗಳ ಲೋಕಕ್ಕೆ ಸದಾ ನನ್ನನ್ನು ಪರಿಚಯಿಸುತಿದ್ದ ಎನ್ ಕೆ ವಸಂತರಾಜ್ ದೂರದೂರಲ್ಲಿ ಇದ್ದ ನನಗೆ ಫೋನ್ ಮಾಡಿ ‘ಮನೆಗೆ ಬನ್ನಿ, ನಿಮಗೆ ಒಂದು ಜಾದೂ ತೋರಿಸುತ್ತೇನೆ’ ಎಂದಿದ್ದರು. ಅದೇನು ನೋಡಿಯೇ ಬಿಡುವ ಅಂತ ಅವರ ಮನೆಯ ಬಾಗಿಲೂ ಬಡಿದಿದ್ದೆ. ಕಂಪ್ಯೂಟರ್ ಮುಂದೆ ಕೂರಿಸಿ ಏನೇನೋ ಬಟನ್ ಒತ್ತಿ, ಎದುರಿಗಿದ್ದ ಮೋಡೆಮ್ ನ್ನೂ ಕುಣಿಸಿ ಪಕ್ಕಾ ಕಿಂದರಿ ಜೋಗಿಯಂತೆ ಒಂದು ಜಾದೂ ಲೋಕದೊಳಗೆ ಕರೆದುಕೊಂಡು ಹೋಗಿಯೇ ಬಿಟ್ಟರು. ನನಗೋ ‘ಪಾತಾಳದಲ್ಲಿ ಪಾಪಚ್ಚಿ’ ಕಥೆ ನೆನಪಿಗೆ ಬಂದಿತ್ತು. ಅಲೈಸ್ ಆ ವಂಡರ್ ಲ್ಯಾಂಡ್ ಪ್ರವೇಶಿಸಿದಾಗಲೂ ಇಂತಹ ವಿಸ್ಮಯಕ್ಕೆ ಒಳಗಾಗಿದ್ದಳೋ ಇಲ್ಲವೋ, ಆದರೆ ನಾನಂತೂ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ಕೂತು ಬಿಟ್ಟೆ. ಏಕೆಂದರೆ ಕೇಳಿದ್ದೆಲ್ಲವನ್ನೂ ಕೊಡುವ ಅಕ್ಷಯ ಪಾತ್ರೆಯಂತೆ ಈ ಕಂಪ್ಯೂಟರ್ ನನಗೆ ಬೇಕಾದ ಫೋಟೋಗಳನ್ನೂ, ಮಾಹಿತಿಗಳನ್ನೂ, ಗೆಳೆಯರನ್ನೂ, ಕದ್ದು ಮುಚ್ಚಿ ನೋಡಬೇಕಾದ ಏನೇನನ್ನೋ ಹೀಗೆ ಎಲ್ಲವನ್ನೂ ತೆರೆದಿಡುತ್ತಾ ಹೋಗುತ್ತಿತ್ತು. ಅಷ್ಟು ದಿನದವರೆಗೆ ಕ್ಯೂಬಾ ಬಗ್ಗೆ ಮಾಹಿತಿ ಸಂಗ್ರಹಿಸಲು ನಾನು ಪಟ್ಟ ಕಷ್ಟ ಆ ಶಿವನಿಗೂ ಬೇಡ. ಆದರೆ ಈಗ ಕ್ಯೂಬಾ ಎಂದು ಒತ್ತಿದರೆ ಸಾಕು ಕ್ಷಣಾರ್ಧದಲ್ಲಿ ಕ್ಯೂಬಾ ಮಾತ್ರವಲ್ಲ, ಆ ಚೆಗೆವಾರಾ, ಫಿಡೆಲ್ ಕ್ಯಾಸ್ಟ್ರೋ ಎಲ್ಲಾ ಆಡಿಯೋ ಆಗಿ, ವಿಡಿಯೋ ಆಗಿ, ಫೋಟೋ ಆಗಿ ನನ್ನ ಮುಂದೆ ಬಿಡಿಸಿಟ್ಟಿತ್ತು.

ರಾಮೋಜಿ ಫಿಲಂ ಸಿಟಿ ಒಳಗೆ ಹೋಗುವಾಗಲೂ, ಹೊರಗೆ ಬರುವಾಗಲೂ ನೂರಾರು ಕಾವಲುಗಾರರ ಕಣ್ ತಪಾಸಣೆಗೆ ಒಳಪಡಬೇಕು. ಆದರೆ ಇವರಾರಿಗೂ ಗೊತ್ತಿಲ್ಲದಂತೆ ನಾನು ಇಂಟರ್ನೆಟ್ ಎಂಬ ಮಾಯಾ ಕುದುರೆ ಹತ್ತಿ ಸಿಕ್ಕ ಸಿಕ್ಕ ಕಡೆ ಹಾರಲು ತೊಡಗಿದೆ. ಒಂದು, ಇನ್ನೊಂದು, ಮತ್ತೊಂದು…ಹೀಗೆ ಒಂದೊಂದೇ ಬಾಗಿಲು ತೆಗೆಯುತ್ತಾ ಜಗತ್ತಿನ ಮೂಲೆ ಮೂಲೆ ಸುತ್ತುತ್ತಾ ಹೋದೆ. ಯಾರೊಬ್ಬನ ಕಣ್ಣಿಗೂ ಬೀಳಲಿಲ್ಲ.

ಹಾಗೆ ಕುದುರೆ ಹತ್ತಿ ಹಾರುವಾಗಲೇ ನನ್ನ ಕಣ್ಣಿಗೆ ಬಿದ್ದಿದ್ದು ‘ಅಗಸೆಯ ಅಂಗಳ’. ‘ಅಘನಾಶಿನಿಯವರು ತಮ್ಮ ಹಳ್ಳಿಯನ್ನು ಅಗಸೆ ಎಂದೇ ಕರೆಯುತ್ತಾರೆ. ತಾಯಿಗೆ ಅಬ್ಬೆ ಎಂಬಂತೆ. ಅಘನಾಶಿನಿ ನದಿ ಅರಬ್ಬಿ ಸಮುದ್ರವನ್ನು ಸೇರುವದಿಲ್ಲೇ. ಸುತ್ತಲಿನ ಗುಡ್ಡ, ಸಮುದ್ರ, ನದಿಯೇ ತೋರಣ. ಕುಮಟೆಯ ಮುಂದಿರುವ ಜಗತ್ತೇ ಅಂಗಳ.. ಎಂದು ತಮ್ಮ ಬ್ಲಾಗನ್ನು ಬಣ್ಣಿಸಿಕೊಂಡಿದ್ದ ವಿನಾಯಕ ಪಂಡಿತ ಅವರನ್ನು ಕಂಡೆ. ಅರೆ! ಇಂಟರ್ನೆಟ್ ಲೋಕಕ್ಕೆ ಎಲ್ಲರೂ ತಂತಮ್ಮ ಅಗಸೆಯ ಅಂಗಳವನ್ನು ತಂದು ಕೂಡಿಸಿಬಿಡಬಹುದಲ್ಲ ಎಂದು ಅಚ್ಚರಿಯಾಯಿತು. ನಮ್ಮ ಊರು, ನಮ್ಮ ಭಾಷೆ, ನಮ್ಮ ಸಂವೇದನೆ, ನಮ್ಮ ತುಡಿತ ಈ ಎಲ್ಲಕ್ಕೂ ಬ್ಲಾಗ್ ಲೋಕದಲ್ಲಿ ಅಕ್ಷರ ನೀಡಲು ಸಾಧ್ಯ ಎನ್ನುವುದು ನನಗೆ ಥ್ರಿಲ್ ನೀಡಿತ್ತು. ಆ ವೇಳೆಗಾಗಲೇ ಪತ್ರಕರ್ತ, ವಿನ್ಯಾಸಕಾರ ‘ಅಪಾರ’ನ ಸಂಪರ್ಕಕ್ಕೆ ಬಂದಿದ್ದೆ. ನನ್ನ ಕ್ಯೂಬಾ ಪುಸ್ತಕಕ್ಕೆ ವಿನ್ಯಾಸ ಮಾಡಿದ ಈ ಅಪಾರ ತಮ್ಮ ಕಥೆಗಳಿಂದಲೂ ನಮ್ಮನ್ನು ಕಾಡಿದವರು. ಅವರ ‘ಮೇಷ್ಟರ ಸೈಕಲ್ಲಿನ ಬೇಬಿ ಸೀಟು’ ಕಥೆ ಎಷ್ಟು ಕಾಡಿತ್ತೆಂದರೆ ಆ ಕಥೆಯೂ ಬ್ಲಾಗ್ ನಲ್ಲಿಯೇ ಕಣ್ಣಿಗೆ ಬಿತ್ತು. ಅಪಾರ ತಮ್ಮದೂ ಒಂದು ಬ್ಲಾಗ್ (ಅಪಾರ) ಆರಂಭಿಸಿ ಅದರಲ್ಲಿ ಕಥೆ, ತಮ್ಮದೇ ವಿಶಿಷ್ಟ ಪಂಚ್ ಇರುವ ಮದ್ಯಸಾರ, ತಮ್ಮ ಆರ್ಟ್ ವರ್ಕ್ ಎಲ್ಲವನ್ನೂ ಹಿಡಿದಿಟ್ಟಿದ್ದರು.

‘ಅನ್ವೇಷಣೆ ‘ ಸಾಹಿತ್ಯ ಪತ್ರಿಕೆಯ ಸಂಪಾದಕ, ಗೆಳೆಯ ಆರ್ ಜಿ ಹಳ್ಳಿ ನಾಗರಾಜ್ ಒಂದು ಸಲ ಫೋನ್ ಮಾಡಿದರು. ನಿನ್ನ ಎಕ್ಕುಂಡಿ ಲೇಖನ ಆನ್ಲೈನ್ ಗೆ ಏರಿಸುತ್ತೇನೆ ಅಂತ. ನಿಜಕ್ಕೂ ಆನ್ ಲೈನ್ ಲೋಕ ಗೊತ್ತಿಲ್ಲದ ದಿನಗಳು ಅವು. ‘ತುಷಾರ’ಕ್ಕಾಗಿ ಕವಿ ಸು ರಂ ಎಕ್ಕುಂಡಿಯವರ ಸಂದರ್ಶನ ಮಾಡಿದ್ದೆ. ನಂತರ ಅದೇ ಹುಮ್ಮಸ್ಸಿನಿಂದ ಎಕ್ಕುಂಡಿಯವರ ಕಾವ್ಯ ಲೋಕದ ಬಗ್ಗೆ ‘ಎಕ್ಕುಂಡಿ ನಮನ’ ಕೃತಿಯನ್ನು ಸಂಪಾದಿಸಿದ್ದೆ. ಆದರೆ ಈಗ ಆ ಎಕ್ಕುಂಡಿ ಲೇಖನ ಆನ್ಲೈನ್ ಪ್ರವೇಶಿಸುತ್ತಿದೆ ಎಂದಾಗ ನನಗೆ ಇನ್ನಿಲ್ಲದ ಬೆರಗು. ಆರ್ ಜಿ ಹಳ್ಳಿ ನಾಗರಾಜ್ ಹೇಳಿದ ಕಾರಣಕ್ಕಾಗಿ ಕಂಪ್ಯೂಟರ್ ಎದುರು ಕುಳಿತು ಎಕ್ಕುಂಡಿ ಎಂದು ಒತ್ತಿದ್ದೇ ತಡ ‘ಯೋಧ ನಡೆಯುವ ದಾರಿ, ಕವಿಯ ದಾರಿಯು ಕೂಡಾ..’ ಎನ್ನುವ ಲೇಖನ ಅದರೊಂದಿಗೆ ಎಕ್ಕುಂಡಿ ಫೋಟೋ, ಪುಸ್ತಕದ ಫೋಟೋ, ಜೊತೆಗೆ ನನ್ನ ಫೋಟೋ ಸಹಾ ಬಿಚ್ಚಿಕೊಳ್ಳುತ್ತಾ ಹೋಯಿತು.

ಅದು ‘ವಿಶ್ವ ಕನ್ನಡ’. ಡಾ ಯು ಬಿ ಪವನಜ ಅವರ ಕನಸಿನ ಕೂಸು. ಆನ್ ಲೈನ್ ಲೋಕದಲ್ಲಿ ಕನ್ನಡ ಸಾಹಿತ್ಯದ ಘಮವನ್ನು ಅರಳಿಸಿದ ಪತ್ರಿಕೆ. ಇದು ಆನ್ಲೈನ್ ಲೋಕದಲ್ಲಿ ಮೊದಲ ಪ್ರಯತ್ನವಿರಬೇಕು. ನನಗೆ ಗೊತ್ತಿಲ್ಲ. ಆದರೆ ಈ ವಿಶ್ವ ಕನ್ನಡ ದ ಬಲೆಗೆ ಬಿದ್ದ ನಂತರ ನಾನು ಅದರಿಂದ ಬಿಡಿಸಿಕೊಂಡು ಆಚೆ ಬರುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ನನ್ನ ಓರಿಗೆಯವರ, ಹಿರಿಯರ, ಕಥೆ ಕವನ ಓದುತ್ತಾ ಹಾಯಾಗಿ ಇದ್ದುಬಿಟ್ಟೆ.

ಇನ್ನು ನಾನೇ ವಿಶ್ವ ಕನ್ನಡಿಗ ಆದದ್ದಂತೂ ಇನ್ನೊಂದು ರೀತಿಯ ಕಥೆ. ಕಂಪ್ಯೂಟರ್ ಅಂದರೆ ಏನು ಎಂದು ಇನ್ನೂ ಇಡೀ ದೇಶ ಕಣ್ಣರಳಿಸಿ ಕೇಳುತ್ತಿದ್ದ ಕಾಲದಲ್ಲಿಯೇ ನಾನು ಕಂಪ್ಯೂಟರ್ ಹಿಂದೆ ಬಿದ್ದಿದ್ದೆ. ನಾನು ಕಂಪ್ಯೂಟರ್ ಕೊಂಡದ್ದು, ಅದಕ್ಕೆ ಬೇಕಾದ ಟೇಬಲ್ ಮಾಡಿಸಲು ಓಡಾಡಿದ್ದು, ಅದರೊಳಗೆ ಪ್ರೋಗ್ರಾಮ್ ಗಳನ್ನು ಕೂರಿಸಲು ಜನ ಬಂದದ್ದು, ಒಂದು ಮೌಸ್ ಕೊಳ್ಳಲು ಸುತ್ತಾಡಿದ ಬೀದಿಗಳು, ಈ ಎಲ್ಲಕ್ಕೂ ಮಾಡಿದ ಖರ್ಚು ನನ್ನ ಸಂಬಳವನ್ನೂ ತಿಂದು, ನನ್ನ ಬಂಧು ಬಾಂಧವರ ಜೋಬಿಗೂ ತೂತು ಬೀಳಿಸಿತ್ತು. ನಾನು ನನ್ನ ಮೊದಲ ಇ- ಮೇಲ್ ಐ ಡಿ ಯನ್ನು ಕಂಡ ಕ್ಷಣವಂತೂ ಕಣ್ಣಿಗೆ ಕಟ್ಟಿದಂತಿದೆ. ಆ ಇ- ಮೇಲ್ ನನಗೆ ಬ್ಲಾಗ್ ಲೋಕದಲ್ಲಿ ಹಾರುವ ಮೊದಲ ರೆಕ್ಕೆ ತೊಡಿಸಿತ್ತು. ಅದುವರೆಗೂ ಸರಿಯಾದ ಸಿಟಿಜನ್ ಆಗಿದ್ದೇನೋ ಇಲ್ಲವೋ ಗೊತ್ತಿಲ್ಲ. ಆದರೆ ‘ನೆಟಿಜನ್’ ಅಂತೂ ಆಗಿಬಿಟ್ಟೆ. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದರು ವಚನಕಾರರು. ಜಯಂತ್ ಕಾಯ್ಕಿಣಿ ಇಂಟರ್ನೆಟ್ ಬಂದ ನಂತರ ನಮ್ಮ ಮನೆ ಎಂಬ ಸ್ಥಾವರವೇ ಅಳಿಸಿ ಹೋಗುತ್ತಿದೆ. ಅಂತೂ ವಚನಕಾರರ ಮಾತು ಮತ್ತೆ ನಿಜವಾಯಿತು ಎಂದರು. ಹಾಗೆ ನಾನು ಫಿಲಂ ಸಿಟಿ ಎಂಬ ಸಿಟಿಯೊಳಗೆ ಸ್ಥಾವರವಾಗಿದ್ದುಕೊಂಡೇ ಜಂಗಮನಾಗತೊಡಗಿದ್ದೆ.

ಹಾಗೆ ಜಂಗಮನಾಗಿ ಸಂಚಾರ ಹೊರಡುವ ವೇಳೆಗಾಗಲೇ ಪತ್ರಕರ್ತ ಎಸ್ ಕೆ ಶ್ಯಾಮ್ ಸುಂದರ್ ಆರ್ಥಾತ್ ‘ಶಾಮಿ’ ಇಂಟರ್ನೆಟ್ ಲೋಕ ಹೊಕ್ಕಿದ್ದರು. ದಟ್ಸ್ ಕನ್ನಡ ಡಾಟ್ ಕಾಂ ಮೂಲಕ ಆನ್ಲೈನ್ ಪತ್ರಿಕೆ ಪ್ರಾರಂಭಿಸಿದ್ದರು. ವಿದೇಶದಲ್ಲಿ ಹರಡಿ ಹೋಗಿರುವ ಕನ್ನಡಿಗರಿಗೂ, ಕನ್ನಡಕ್ಕೂ ಒಂದು ಒಳ್ಳೆಯ ಸೇತುವೆಯನ್ನು ಕಟ್ಟಿಕೊಟ್ಟಿದ್ದರು. ಅಲ್ಲಿ ಸುದ್ದಿ ಇತ್ತು, ಅಂಕಣ ಇತ್ತು, ಕಥೆ, ಕವಿತೆ, ವಿಮರ್ಶೆ ಎಲ್ಲವೂ ಇತ್ತು. ಇದನ್ನು ಓದುತ್ತಾ ಇದ್ದ ಸಮಯದಲ್ಲೇ ‘ನೋಡು ಅದೋ ಅಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ..’ ಎನ್ನುವಂತೆ ಆನ್ ಲೈನ್ ಲೋಕಕ್ಕೆ ಬ್ಲಾಗ್ ನ ಹುಚ್ಚು ಹಿಡಿಸಿದ್ದು ‘ಚುರುಮುರಿ’ ‘ಸ್ವಲ್ಪ ಸಿಹಿ, ಸ್ವಲ್ಪ ಸ್ಪೈಸಿ’ ಎನ್ನುವ ಟ್ಯಾಗ್ ಲೈನ್ ಹೊತ್ತೇ ಕಣಕ್ಕಿಳಿದ ‘ಚುರುಮುರಿ’ ನೋಡನೋಡುತ್ತಿದ್ದಂತೆಯೇ ಕಂಪ್ಯೂಟರ್ ನಲ್ಲಿ ಕೀಲಿ ಒತ್ತಲು ಗೊತ್ತಿದ್ದವರನ್ನೆಲ್ಲಾ ಆಕರ್ಷಿಸಿಬಿಟ್ಟಿತು. ಹೇಳಲು ಇಂಗ್ಲಿಷ್ ಬ್ಲಾಗ್ ಆದರೂ ಸಹಾ ಇದರದ್ದು ಖಂಡಿತಾ ಕನ್ನಡ ಮನಸ್ಸು. ಈಗ ‘ಔಟ್ ಲುಕ್’ ವಾರಪತ್ರಿಕೆಯ ಸಂಪಾದಕರಾದ ಕೃಷ್ಣ ಪ್ರಸಾದ್ ಅವರು ಹುಟ್ಟು ಹಾಕಿದ ಚುರುಮುರಿಗೆ ಥೇಟ್ ಚುರುಮುರಿಗೆ ಮುಗಿಬೀಳುವಂತೆಯೇ ಎಲ್ಲರೂ ಮುಗಿಬಿದ್ದರು.

ನನ್ನೊಳಗೆ ಬ್ಲಾಗ್ ಕಿಚ್ಚು ಹತ್ತಿಸಿದ ಹಿರಿಮೆಯಂತೂ ‘ಚುರುಮುರಿ’ಗೆ ದಕ್ಕಬೇಕು. ‘ಮ್ಯಾನ್ ಫ್ರೈಡೇ’ಯಂತಿದ್ದ ರಾಜ್ ಕುಮಾರ್ ಎಂಬ ಡ್ರೈವರ್ ನನ್ನು ಮುಂದಿಟ್ಟುಕೊಂಡು ಆ ೨೫೦೦ ಎಕರೆ ಜಾಗದಲ್ಲಿ ಮೂಲೆ ಮೂಲೆ ಅಲೆದ ನನ್ನ ಅನುಭವ ಚುರುಮುರಿ ಇಲ್ಲದೆ ಬೆಳಕು ಕಾಣುತ್ತಿರಲಿಲ್ಲವೇನೋ. ನನಗೆ ಬೆಸ್ಟ್ ಅಂತ ಕಂಡಿದ್ದ ಫೋಟೋಗಳನ್ನೆಲ್ಲಾ ಚುರುಮುರಿಗೆ ಕಳಿಸತೊಡಗಿದೆ. ಅದು ಬ್ಲಾಗ್ ತೆರೆಯ ಮೇಲೆ ಕಾಣಿಸಿಕೊಂಡ ತಕ್ಷಣ ನನಗೆ ‘ಗೋಕುಲ ನಿರ್ಗಮನ’ ನಾಟಕದ ಹಾಡಿನಂತೆ ‘ಎನಗೆ ಬರುತಿದೆ ಜಗದ ಮುದ, ಕುಣಿದಲ್ಲದೆ ನಾ ತಾಳೆನಿದ..’ ಎನ್ನುವಂತೆಯೇ ಆಗುತ್ತಿತ್ತು. ದಿನಕ್ಕೆ ಹತ್ತು ಬಾರಿಯಾದರೂ ಅದನ್ನು ತಡವದೇ ನಾನು ಮುಂದೆ ಹೋಗುತ್ತಿರಲಿಲ್ಲ. ಚುರುಮುರಿ ನನಗೆ ಇನ್ನೂ ಹತ್ತಿರವಾಗಿದ್ದು ಇಡೀ ಬಳಗ ಟಿ ಎಸ್ ಸತ್ಯನ್, ರಾಮಚಂದ್ರ ಗುಹಾರನ್ನು ಮುಂದಿಟ್ಟುಕೊಂಡು ಬೆಂಗಳೂರು- ಮೈಸೂರು ರೈಲಿಗೆ ಆರ್ ಕೆ ನಾರಾಯಣ್ ಎಕ್ಸ್ಪ್ರೆಸ್ ಅಂತ ಹೆಸರಿಡಬೇಕು ಎಂದು ರಾಜ ಭವನದ ಬಾಗಿಲು ತಟ್ಟಿದ್ದಕ್ಕಾಗಿ. ಹೌದಲ್ಲಾ ಒಂದು ಬ್ಲಾಗ್ ಏನೇನೆಲ್ಲಾ ಮಾಡಬಹುದು? ಇದು ಗೊತ್ತಾದ ತಕ್ಷಣವೇ ನಾನು ಚುಕ್ಕಾಣಿ ಹಿಡಿದಿದ್ದ ಈಟಿವಿ ಚಾನಲ್ ನಲ್ಲಿ ಇದನ್ನು ಒಂದು ವಿಶೇಷ ಸುದ್ದಿಯಾಗಿಸಿಯೇ ಬಿಟ್ಟೆ. ಬ್ಲಾಗ್ ನಿಂದಲೇ ಹೆಕ್ಕಿದ ಸಂಗತಿಗಳು ನಮ್ಮ ಹೆಡ್ ಲೈನ್ ಆಗಿ ರಾರಾಜಿಸಿತ್ತು.

ಹಾಗೆ ಸುದ್ದಿ ಮಾಡಲು ತೊಡಗಿದಾಗಲೇ ನನಗೆ ಇನ್ನೂ ಒಂದು ಬೆಳಕು ಗೋಚರಿಸಿತು. ಯಾವ ಚಾನಲ್ ಗಳಿಗೂ, ಪತ್ರಿಕೆಗಳಿಗೂ ಬ್ಲಾಗ್ ಆಗ ವಿಷಯವೇ ಆಗಿರಲಿಲ್ಲ. ಆದರೆ ನನಗೆ ಅದು ಒಂದು ಒಳ್ಳೆಯ ಸುದ್ದಿ ಮೂಲವಾಗಿ ಕಾಣತೊಡಗಿತು. ಬೆಂಗಳೂರಿನವರಾದ ಡಾ ಮಹಮದ್ ಹನೀಫ್ ಆಸ್ಟ್ರೇಲಿಯಾದಲ್ಲಿ ಬಂಧನಕ್ಕೊಳಗಾಗಿದ್ದು ಆಗ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆಗ ನನ್ನ ಕಣ್ಣಿಗೆ ಬಿದ್ದದ್ದು ಚುರುಮುರಿ ಪ್ರಕಟಿಸಿದ್ದ ಒಂದು ಫೋಟೋ. ಆಸ್ಟ್ರೇಲಿಯನ್ ಪೋಲೀಸ್ ವ್ಯಾನ್ ನಲ್ಲಿ ಖೈದಿ ದಿರಿಸಿನಲ್ಲಿ ಅತಂತ್ರವಾಗಿ ಕುಳಿತಿದ್ದ ಫೋಟೋ. ಮರು ಬುಲೆಟಿನ್ ನಲ್ಲಿ ಈ ಫೋಟೋ ನಮ್ಮ ಮುಖ್ಯ ಹೆಡ್ ಲೈನ್ ನಲ್ಲೊಂದಾಗಿತ್ತು. ಆ ಫೋಟೋ ನೋಡಿ ಜನ ಬೆಚ್ಚಿಬಿದ್ದರು. ಹನೀಫ್ ಸ್ಥಿತಿ ಹೇಗಿದೆ ಎನ್ನುವುದಕ್ಕೆ ಪ್ರಥಮ ಪುರಾವೆಯನ್ನ ಇದು ಒದಗಿಸಿತ್ತು. ಆ ನಂತರ ನನಗೆ ಬ್ಲಾಗ್ ಗಳು ದೊಡ್ಡ ಸೋರ್ಸ್ ಆಗಿ ಬದಲಾದವು.

ಆಗ ಬಂತು- ‘ಮೈಸೂರ್ ಪೋಸ್ಟ್’. ಬ್ಲಾಗ್ ಎಂದರೆ ಇಂಗ್ಲಿಷ್ ಗಷ್ಟೇ ಸೈ ಎಂದುಕೊಂಡುಬಿಟ್ಟಿದ್ದ ಸಮಯದಲ್ಲಿ ಅಬ್ದುಲ್ ರಶೀದ್ ಬ್ಲಾಗ್ ಅಂಗಳ ಪ್ರವೇಶಿಸಿದರು. ಬ್ಲಾಗ್ ಎನ್ನುವುದು ಕನ್ನಡಕ್ಕೂ ಒಗ್ಗಿಕೊಳ್ಳುತ್ತದೆ ಎನ್ನುವುದನ್ನು ಆ ವೇಳೆಗಾಗಲೇ ಸಾಕಷ್ಟು ಜನ ತೋರಿಸಿಕೊಟ್ಟಿದ್ದರೇನೋ ಆದರೆ ರಶೀದ್ ರಂಗ ಪ್ರವೇಶದಿಂದ ಬ್ಲಾಗ್ ಓದಲು ಮಾತ್ರವಲ್ಲ, ಬ್ಲಾಗ್ ನಾವೂ ಯಾಕೆ ಆರಂಭಿಸಬಾರದು ಎನ್ನುವವರ ದಂಡೂ ಸೃಷ್ಟಿಯಾಯಿತು. ‘Everything but ಮೈಸೂರು’ ಎನ್ನುವ ಟ್ಯಾಗ್ ಲೈನ್ ಜೊತೆಗೆ ಕಾಣಿಸಿಕೊಂಡ ರಶೀದ್ ಷಿಲ್ಲಾಂಗಿನಿಂದ ಲಂಕೇಶರಿಗೆ ಬರೆದ ಪತ್ರಗಳನ್ನೂ, ಹೊಸದಾಗಿ ಬರೆಯಲು ಆರಂಭಿಸಿದ್ದ ‘ಹೂವಿನಕೊಲ್ಲಿ’ ಕಾದಂಬರಿಯನ್ನೂ, ‘ಮಾತಿಗೂ ಆಚೆ’ ಅಂಕಣದ ಬರಹಗಳನ್ನೂ ಬ್ಲಾಗ್ ಅಂಗಳಕ್ಕೆ ತಂದರು. ಚುರುಮುರಿ ಏನು ಮಾಡಿತ್ತೋ ಅದನ್ನು ಇನ್ನೊಂದೆಡೆ ರಶೀದ್ ಆರಂಭಿಸಿದರು. ನೆಟ್ ಪದ ಗೊತ್ತಿದ್ದವರಲ್ಲಾ ರಶೀದರ ಬ್ಲಾಗ್ ಹುಡುಕಿ ಬಂದರು. ಮೈಸೂರು ಪೋಸ್ಟ್ ಹುಡುಕಿ ಬಂದವರು ‘ಕೆಂಡ ಸಂಪಿಗೆ’ಗೂ ಬಂದರು.

ಹರಿಪ್ರಸಾದ್ ನಾಡಿಗ್ ಬ್ಲಾಗ್ ಲೋಕಕ್ಕೆ ಒಂದು ಛತ್ರವನ್ನೇ ನಿರ್ಮಿಸಿಕೊಟ್ಟರು. ಹರಿಪ್ರಸಾದ್ ನಾಡಿಗ್ ತಂಡ ರೂಪಿಸಿದ ಸಂಪದ, ಪ್ಲಾನೆಟ್ ಕನ್ನಡ ಒಂದು ನೆಮ್ಮದಿಯ ಸೂರನ್ನು ಬ್ಲಾಗ್ ಗಾಗಿ ತುಡಿಯುತ್ತಿದ್ದವರಿಗೆ ಒದಗಿಸಿಕೊಟ್ಟಿತು. ‘ಸಂಪದ’ ಬ್ಲಾಗ್ ಲೋಕಕ್ಕೆ ಹಲವು ರೀತಿಯ ಕೊಡುಗೆ ನೀಡಿತು. ಒಂದೆಡೆ ಬ್ಲಾಗ್ ಆರಂಭಿಸುವವರಿಗೆ ತಾಣ, ಇನ್ನೊಂದೆಡೆ ಎಲ್ಲಾ ಬ್ಲಾಗ್ ಬರಹಗಳನ್ನೂ ಒಂದೆಡೆ ಓದುವ ಸೌಲಭ್ಯ. ‘ಎಲೆಗಳು ನೂರಾರು, ಎಳೆಗಳು ನೂರಾರು, ಎಲೆಗಳ ಬಣ್ಣ ಒಂದೇ ಹಸಿರು’ ಎನ್ನುವಂತೆ ಎಲ್ಲೆಲ್ಲಿಯೋ ಬ್ಲಾಗ್ ಹೊಂದಿದ್ದರು ಸಂಪದ ಎಂಬ ತೋಟದಲ್ಲಿ ಸಿಕ್ಕರು. ಕೃಷಿ ಸಂಪದ, ಆರೋಗ್ಯ ಸಂಪದವನ್ನೂ ಹುಟ್ಟು ಹಾಕಿತು. ಯು ಆರ್ ಅನಂತಮೂರ್ತಿ ಅವರಿಗೆ ಒಂದು ಬ್ಲಾಗ್ ರೂಪಿಸಿ ಕೊಟ್ಟು ಅದನ್ನು ನಡೆಸಿತು. ಹೀಗೆ ಬ್ಲಾಗ್ ಲೋಕವೆಂಬ ಸಾಗರಕ್ಕೆ ಎಲ್ಲೆಲ್ಲಿಂದಲೋ ನದಿಗಳು ಕೂಡಿಕೊಳ್ಳಲು ಸಂಪದ ಒಂದು ಮಹತ್ವದ ತಿರುವಾಯಿತು.

ಕನ್ನಡ ಪುಸ್ತಕ, ಕನ್ನಡ ಪತ್ರಿಕೆ, ಕನ್ನಡತನ ಎಲ್ಲರಿಂದಲೂ ದೂರವಾಗಿ ವರುಷಗಳು ಕಳೆದು ಹೋಗಿದ್ದ ನನಗೆ ಕಂಪ್ಯೂಟರ್ ತೆರೆಯ ಮೇಲೆ ಸಂಭವಿಸುತ್ತಿದ್ದ ಈ ಎಲ್ಲಾ ಜಾದೂ ಮೋಡಿ ಹಾಕುತ್ತಿತ್ತು. ಇದ್ದಲ್ಲಿಯೇ ಪತ್ರಿಕೆಗಳನ್ನು ಓದುವ ಅವಕಾಶ ಆಗೀಗ ಶುರುವಾಗಿದ್ದ ಪತ್ರಿಕೆಗಳ ವೆಬ್ ಆವೃತ್ತಿಯಿಂದ ಸಿಕ್ಕಿತ್ತು. ಕನ್ನಡ ಪತ್ರಿಕೆ ಓದಲು ಎರಡು ದಿನ ಕಾಯಬೇಕಾದ ಪರಿಸ್ತಿತಿಯಲ್ಲಿದ್ದ ನನಗೆ ಇದು ಮರಳುಗಾಡಿನ ಓಯಸಿಸ್. ಕನ್ನಡ ಪುಸ್ತಕ ಸಿಗದ ಕಡೆ ಇದ್ದ ನಾನು ಈಗ ಬ್ಲಾಗ್ ಬರಹಗಳನ್ನು ಡೌನ್ ಲೋಡ್ ಮಾಡಿಕೊಂಡು ಮನೆಗೆ ಹೊತ್ತೊಯ್ಯತೊಡಗಿದೆ. ಈ ಸ್ಥಿತಿಯಲ್ಲಿ ಇದ್ದದ್ದು ನಾನೊಬ್ಬನೇ ಅಲ್ಲ. ನನ್ನಂತೆ ಅಷ್ಟೇ ಓದಿನ ಹಸಿವಿನ ವೆಂಕಟ್ರಮಣ ಗೌಡರೂ ಇದ್ದರು. ಆ ವೇಳೆಗಾಗಲೇ ಓದುಗರಲ್ಲಿ ಹೊಸ ಹಸಿವನ್ನು ಹುಟ್ಟು ಹಾಕಿದ್ದ ಗೌಡರೂ ನಾನೂ ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದ ಪ್ರಯಾಣಿಕರು. ವೆಂಕಟ್ರಮಣ ಗೌಡರು ಕಂಪ್ಯೂಟರ್, ಜೊತೆಗೆ ಇಂಟರ್ನೆಟ್ ಸಂಪರ್ಕವನ್ನೂ ತೆಗೆದುಕೊಳ್ಳಲಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ನಮ್ಮಿಬ್ಬರ ಬಾಂಧವ್ಯ ಇನ್ನೂ ಬಲವಾಯಿತು. ನೀವೇ ಏಕೆ ಬ್ಲಾಗ್ ಆರಂಭಿಸಬಾರದು ಎಂದು ಶ್ರೀದೇವಿ ಕೇಳಿದ್ದರಲ್ಲಾ..? ಆ ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿತ್ತು. ‘ಅವಧಿ’ ಬ್ಲಾಗ್ ತೆರೆಯ ಮೇಲೆ ಬಂದೇ ಬಿಟ್ಟಿತು. ಅದರಲ್ಲಿ ಏನಿರಬೇಕು, ಹೇಗಿರಬೇಕು ಎಂಬುದನ್ನು ದಿನಗಟ್ಟಲೆ ನಾನೂ ಗೌಡರೂ ಒಂದು ಸುಂದರ ಕನಸಿನಂತೆ ಹಂಚಿಕೊಂಡಿದ್ದೆವು. ಆದರೆ ನಮ್ಮಿಬ್ಬರಿಗೂ ಬ್ಲಾಗ್ನಲ್ಲಿ ಕನ್ನಡ ನುಡಿಸುವುದು ಗೊತ್ತಿರಲಿಲ್ಲ. ಆಗಿನ್ನೂ ಗೂಗಲ್ transliteration ಹುಟ್ಟಿರಲಿಲ್ಲ. ‘ನುಡಿ’ ‘ಬರಹ’ದಿಂದ ಯೂನಿಕೋಡ್ ಗೆ ಹೋಗುವುದು ಗೊತ್ತಿರಲಿಲ್ಲ. ಹಾಗಾಗಿ ಬೆಂಗಳೂರು, ಮೈಸೂರಿಗೆಲ್ಲಾ ಫೋನ್ ತಿರುಗಿಸಿದ್ದಾಯ್ತು. ಹೈದರಾಬಾದ್ ನಲ್ಲಿಯೇ ಇದ್ದ ಗೆಳೆಯರ ಸಹಾಯವನ್ನೂ ತೆಗೆದುಕೊಂಡಾಯ್ತು . ‘ಅಂತು ಇಂತೂ ಪ್ರೀತಿ ಬಂತು’ ಎನ್ನುವಂತೆ ನಮ್ಮ ಬ್ಲಾಗ್ ನಲ್ಲೂ ಕನ್ನಡ ಅರಳತೊಡಗಿತ್ತು. ಥೇಟ್, ‘ಇಷ್ಟು ಹಚ್ಚನೆ ಹಸಿರು ಗಿಡದಿಂ ಎಂತು ಮೂಡಿತು ಬೆಳ್ಳಗೆ..’ ಎಂಬಂತೆ.

ನಾನು ಆಫೀಸ್ ನಲ್ಲಿ ಕುಳಿತು ಬ್ಲಾಗ್ ಗೆ ಬರೆಯುತ್ತಾ, ಗೆಳೆಯರಿಂದ ಬರೆಸುತ್ತಾ, ನಾನೇ ಊರ್ಮಿಳೆ ಹೆಸರಲ್ಲಿ ‘ರಾಗಿರೊಟ್ಟಿ’ ಕಾಲಂ ಬರೆಯುತ್ತಾ, ಗೌಡರು ಅದಕ್ಕೆ ತಾಂತ್ರಿಕ ಸ್ಪರ್ಶ ನೀಡುತ್ತಾ, ಒಳ್ಳೆಯ ಬರಹವನ್ನು ಹೆಕ್ಕಿ ಕೊಡುತ್ತಾ, ತಾವೂ ಬರೆಯುತ್ತಾ ಅಂತೂ ‘ಅವಧಿ’ ಒಂದೊಂದೇ ಹೆಜ್ಜೆ ಮುಂದೆ ಇಟ್ಟೇಬಿಟ್ಟಿತು. ಬಹುಷಃ ನಾನು ಸಾಕಿನ್ನು ಅಂತ ಕೈ ಮೈ ಎಲ್ಲಾ ಕೊಡವಿಕೊಂಡು ರಾಮೋಜಿ ಫಿಲಂ ಸಿಟಿ ಇಂದ ಹೊರಗೆ ಬರಲು ಏನಪ್ಪಾ ಪ್ರೇರಣೆ ಎಂದು ಯಾರಾದರೂ ಕೇಳಿದರೆ ‘ಅದು ಬ್ಲಾಗ್’ ಎನ್ನುವ ಉತ್ತರ ನನ್ನ ಬಳಿ ಸದಾ ಸಿದ್ಧ.

ಇತ್ತ ಶ್ರೀದೇವಿ, ಶ್ರೀ, ಸಿಂಧು, ಶ್ರೀನಿಧಿ ಡಿ ಎಸ್, ಸುಶ್ರುತ ದೊಡ್ಡೇರಿ, ಟೀನಾ..ಹೀಗೆ ಹೊಸ ಹಂಬಲವಿದ್ದ, ಹೊಸ ಶೈಲಿಯಿದ್ದ ಹಲವರು ಬ್ಲಾಗ್ ಆರಂಭಿಸಿದ್ದರು. ದೂರದೂರಿಂದ ತ್ರಿವೇಣಿ ಶ್ರೀನಿವಾಸ ರಾವ್, ಸುಪ್ತ ದೀಪ್ತಿ, ರವಿಕೃಷ್ಣಾ ರೆಡ್ಡಿ, ಶಾಂತಲಾ ಭಂಡಿ, ನೀಲಾಂಜಲ, ನೀಲಾಂಜನ, ಕೇಶವ ಕುಲಕರ್ಣಿ, ಉದಯ ಇಟಗಿ ಬರೆಯತೊಡಗಿದ್ದರು. ಅರವಿಂದ ನಾವಡ, ಡಿ ಜಿ ಮಲ್ಲಿಕಾರ್ಜುನ್, ಶ್ರೀದೇವಿ ಕಳಸದ, ಎನ್ ಎ ಎಂ ಇಸ್ಮಾಯಿಲ್, ಬೇಳೂರು ಸುದರ್ಶನ, ರವಿ ದೊಡ್ದಮಾಣಿ, ರವಿ ಅಜ್ಜೀಪುರ, ಎಸ್ ಸಿ ದಿನೇಶ್ ಕುಮಾರ್, ಬಿ ಸುರೇಶ್, ಗುರುಪ್ರಸಾದ್ ಕಾಗಿನೆಲೆ, ಸಿದ್ಧು ದೇವರಮನಿ, ಚಾಮರಾಜ ಸವಡಿ, ಸುಘೋಷ್ ಎಸ್ ನಿಗಳೆ, ವಿಕಾಸ ಹೆಗಡೆ, ಸಂದೀಪ್ ಕಾಮತ್, ವೈಶಾಲಿ, ಅಲೆಮಾರಿ ಕುಮಾರ್, ಹರೀಶ್ ಕೇರ, ಗೋಪಾಲಕೃಷ್ಣ ಕುಂಟಿನಿ, ಟಿ ಜಿ ಶ್ರೀನಿಧಿ, ಹಂಸಾನಂದಿ, ಸಿರಿ ಹುಲಿಕಲ್, ಸುಧನ್ವ ದೇರಾಜೆ, ಹರಿಣಿ, ಪ್ರಕಾಶ್ ಶೆಟ್ಟಿ, ಸತೀಶ್ ಆಚಾರ್ಯ, ಮಂಜುನಾಥ ಸ್ವಾಮಿ, ಸತೀಶ್ ಶಿಲೆ, ಶ್ರೀನಿವಾಸ ಗೌಡ, ಶಿವಪ್ರಸಾದ್, ವೇಣುವಿನೋದ್, ವಿನಾಯಕ ಭಟ್ ಮೂರೂರು, ಜಿ ವಿ ಜಯಶ್ರೀ , ಕಾರ್ತಿಕ್ ಪರಾಡ್ಕರ್, ತಮ್ಮ ಬ್ಲಾಗ್ ನೊಂದಿಗೆ ಸೇರಿಕೊಂಡರು. ಆಗಲೇ ಪ್ರಣತಿ ಬ್ಲಾಗರ್ ಗಳ ಸಮ್ಮೇಳನಕ್ಕೆ ಮುಂದಾದದ್ದು. ‘ನನ್ನದೊಂದು ಪುಟ್ಟ ಹೆಜ್ಜೆ ಬ್ಲಾಗ್ ಲೋಕಕ್ಕೆ ದೊಡ್ಡ ಹೆಜ್ಜೆ ‘ಎನ್ನುವಂತೆ ಪ್ರಣತಿಯ ಉತ್ಸಾಹಿ ದಂಡು ದಿಢೀರ್ ನಡೆಸಿಯೇ ಬಿಟ್ಟ ಬ್ಲಾಗರ್ ಸಮಾವೇಶ ಹಲವು ಬ್ಲಾಗ್ ಮಿತ್ರರು ಒಂದೇ ಕೊಡೆಯಡಿ ಬರುವಂತೆ ಮಾಡಿತು.ಮಾತಾಡುವಂತೆ ಪ್ರೇರೇಪಿಸಿತು. ಬ್ಲಾಗ್ ಲೋಕದ ಸವಾಲುಗಳ ಬಗ್ಗೆ ಕಣ್ಣೋಟ ನೀಡಿತು.

ಹೀಗೆ ಒಟ್ಟಿಗೆ ಬಂದದ್ದಕ್ಕೆ ಒಂದು ಉದಾಹರಣೆಯೋ ಎಂಬಂತೆ ಮುಂಬೈ ನಲ್ಲಿ ಭಯೋತ್ಪಾದಕರ ದಾಳಿಯಾದಾಗ ‘ನೀಲಾಂಜಲ’ ನಾವು ಬ್ಲಾಗಿಗರೇಕೆ ಸುಮ್ಮನಿರಬೇಕು ಇದನ್ನು ಪ್ರತಿಭಟಿಸೋಣ ಎಂಬ ದನಿ ಎತ್ತಿದರು. ಹೌದಲ್ಲಾ ಅನಿಸಿದ ಬ್ಲಾಗರ್ ಗಳೆಲ್ಲರೂ ತಮ್ಮ ಬ್ಲಾಗ್ ನಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಭಯೋತ್ಪಾದನೆಯನ್ನು ವಿರೋಧಿಸಿದರು. ಹಾಗೆ ಬ್ಲಾಗಿಗರು ಸೇರಬೇಕು ಎನಿಸುವ ಉತ್ಸಾಹಕ್ಕಂತೂ ಕೊನೆಯೇ ಇರಲಿಲ್ಲ. ಅಮೆರಿಕಾದಿಂದ ಬಂದಿಳಿದ ‘ಸುಪ್ತದೀಪ್ತಿ’ ಜ್ಯೋತಿ ಮಹದೇವ್ ಅವರ ಜೊತೆ ಮಾತನಾಡಲು ಒಂದು ಪುಟ್ಟ ಟೀ ಪಾರ್ಟಿಯೇ ನಡೆಯಿತು. ಇನ್ನೊಮ್ಮೆ ಇದೇ ಸುಪ್ತದೀಪ್ತಿ ತ್ರಿವೇಣಿ ಶ್ರೀನಿವಾಸರಾವ್ ಅವರ ಜೊತೆ ಸೇರಿ ಬೆಂಗಳೂರಿನಲ್ಲಿ ಟೀ ಕುಡಿಸಿದರು. ಈ ಮಧ್ಯೆ ಶಿವು ಕೆ ಉತ್ಸಾಹದಿಂದಾಗಿ ಬ್ಲಾಗಿಗ ಕುಟುಂಬಗಳು ಸೇರಿ ಗಿಡ ನೆಡುವ ಕಾರ್ಯಕ್ರಮವೂ ನಡೆದು ಹೋಯಿತು. ಈಗ ಎಲ್ಲಿಯೇ ಕಾರ್ಯಕ್ರಮ ಜರುಗಿದರೂ ‘I am a Blogger’ ಅಂತ ಬಂದು ಗುರುತಿಸಿಕೊಳ್ಳುವವರು ಸಿಗುತ್ತಾರೆ. ಹೊಸ ನಂಟು, ಹೊಸ ಓದು ಸಿಕ್ಕುತ್ತದೆ.

ಇದು ಆದದ್ದೇ ಆಮೇಲೆ ಹಲವು ಬ್ಲಾಗರ್ ಗಳು ಬ್ಲಾಗ್ ಆರಂಭಿಸಲು ಇದ್ದ ಸಮಸ್ಯೆ, ಬ್ಲಾಗ್ ಗೆ ಬೇಕಾದ ಟೂಲ್ ಗಳು, ಒಬ್ಬರು ಇನ್ನೊಬ್ಬರ ಬ್ಲಾಗ್ ನಲ್ಲಿ ಲಿಂಕ್ ಕೊಡುವ, ಇನ್ನಷ್ಟು ಸಲಹೆ ನೀಡುವ ಕೆಲಸ ಆರಂಭವಾಯಿತು. ಬ್ಲಾಗ್ ಲೋಕಕ್ಕೆ ಇದು ಇನ್ನಿಲ್ಲದ ಚೈತನ್ಯದ ಚುಚ್ಚುಮದ್ದು. ಟೀನಾ ಬರೆದದ್ದು ಏನು ಎಂದು ನೋಡುವವರು ಮಾಲತಿ ಶೆಣೈ ಬ್ಲಾಗ್ ನಲ್ಲಿಯೂ ಇಣುಕಿ ಬಂದರು, ಯು ಆರ್ ಅನಂತಮೂರ್ತಿ ಓದಿದವರು ಕಳ್ಳ ಕುಳ್ಳ ಬ್ಲಾಗ್ ಗೂ, ಅಶೋಕ್ ಕುಮಾರ್ ಅವರ ಬ್ಲಾಗ್ ಗೂ ಬಂದರು. ಆ ವೇಳೆಗಾಗಲೇ ಸಾಕಷ್ಟು ಹೆಸರು ಮಾಡಿದ್ದ ಎಂ ಎಸ್ ಶ್ರೀರಾಮರ ಹಲವು ಬ್ಲಾಗ್ ಗಳನ್ನು ಓದಿದರು. ಒಂದೇ ಮಾತಿನಲ್ಲಿ ಹೇಳುವುದಾದರೆ ನಾಗೇಶ್ ಹೆಗಡೆ ಹೇಳುವಂತೆ ‘ಬ್ಲಾಗ್ ಮಂಡಲ’ವೊಂದು ಸೃಷ್ಟಿಯಾಗಿ ಹೋಯಿತು. ‘ಬಾರಿಸು ಕನ್ನಡ ಡಿಂಡಿಮವ..’ ಎಂದುಕೊಂಡಿದ್ದವರು ಈಗ ‘ಬ್ಲಾಗಿಸು ಕನ್ನಡ ಡಿಂಡಿಮವ’ ಎಂದೂ ಅರ್ಥ ಮಾಡಿಕೊಂಡರು.

‘ಇದು ಕನಸುಗಳ ಬೆಂಬತ್ತಿದ ನಡಿಗೆ’ ಎಂದು ಘೋಷಿಸಿಕೊಂಡು ಬಂದ ‘ಅವಧಿ’ಗಿದ್ದ ಮುಖ್ಯ ಆಸೆ ಬ್ಲಾಗ್ ಲೋಕಕ್ಕೆ ಒಂದು ಒಳ್ಳೆಯ ಓದಿನ ಸುಖ ನೀಡುವ ಪತ್ರಿಕೆಯನ್ನು ನೀಡಬೇಕು ಎನ್ನುವುದು. ಹಾಗಾಗಿಯೇ ಪಂಪ ಬೆಳ್ಳುಳ್ಳಿಯ ಬಗ್ಗೆ ಬಣ್ಣಿಸಿದ್ದರಿಂದ ಹಿಡಿದು, ನಾಗೇಶ್ ಹೆಗಡೆ ಕ್ವಾರಂಟೈನ್ ಕಷ್ಟಕ್ಕೆ ಸಿಲುಕಿದ್ದರಿಂದ ಹಿಡಿದು, ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಅನಾತ್ಮ ಕಥನ, ಜೋಗಿಯವರ ಜೋಗಿಮನೆ, ಚಂದ್ರಶೇಖರ ಆಲೂರರ ಹಾಡು ಪಾಡುವರೆಗೆ ಬಂದಿದೆ. ಒಂದು ಮ್ಯಾಗಜೈನ್ ಗೆ ಯಾವ ಲಕ್ಷಣಗಳಿರುತ್ತದೋ ಆ ಎಲ್ಲವನ್ನೂ ಒಳಗೊಳ್ಳಬೇಕು ಎನ್ನುವ ಹಂಬಲ ನಮಗಿತ್ತು. ಆ ಕಾರಣದಿಂದಲೇ ಆಹ್ವಾನ ಪತ್ರಿಕೆಗಳು, ಫೋಟೋ ಆಲ್ಬಮ್, ಆಡಿಯೋ ತುಣುಕುಗಳು, ವಿಡಿಯೋ ಹೀಗೆ ಎಲ್ಲವೂ ಜಾಗ ಪಡೆದುಕೊಂಡಿತು.

ಈ ಮಧ್ಯೆ ಬ್ಲಾಗ್ ನ ತಾಂತ್ರಿಕ ಲೋಕದಲ್ಲೂ ಆಗುತ್ತಾ ಹೋದ ಬದಲಾವಣೆಗಳು ಇನ್ನಷ್ಟು ಮತ್ತಷ್ಟು ಉತ್ಸಾಹದಿಂದ ಬ್ಲಾಗಿಗರು ಮುಂದೆ ಬರಲು ಕಾರಣವಾಯಿತು. ಯಾರು ಬ್ಲಾಗ್ ಓದುತ್ತಿದ್ದಾರೆ, ಯಾವಾಗ್ ಬ್ಲಾಗ್ ಓದುತ್ತಿದ್ದಾರೆ, ಏನು ಓದುತ್ತಿದ್ದಾರೆ, ಎಲ್ಲಿಂದ ಬ್ಲಾಗ್ ಓದುತ್ತಿದ್ದಾರೆ ಎಂಬ ಮಾಹಿತಿ ಬ್ಲಾಗ್ ಮೀಟರ್ ಗಳಿಂದ ಹೊರಬೀಳಲು ಆರಂಭವಾಯಿತು. ಕಳಸದಲ್ಲಿ ಕೂತು ಕೆನಡಾದ ಓದುಗನ ಜೊತೆ ಬಾಂಧವ್ಯ ಸಾಧಿಸಿಕೊಳ್ಳಬಹುದಾದ ದೊಡ್ಡ ಅವಕಾಶಕ್ಕೆ ಇದು ಹೆಬ್ಬಾಗಿಲು ತೆರೆಯಿತು. ಅದೇ ವೇಳೆ ವಿದೇಶದಲ್ಲಿದ್ದ ಕನ್ನಡಿಗರಿಗೆ ತಮ್ಮ ಭಾಷಿಕರೊಂದಿಗೆ ನಂಟು ಬೆಳೆಸಿಕೊಳ್ಳಲು ಬ್ಲಾಗ್ ವೇದಿಕೆಯಾಯಿತು. ತಾವು ಕನ್ನಡದ್ದಲ್ಲದ ನೆಲದಲ್ಲಿ ನಿಂತು ಬರೆದದ್ದನ್ನು ಕನ್ನಡ ಬಲ್ಲವರು ಓದುತ್ತಾರೆ, ಅದರ ಬಗ್ಗೆ ಒಂದೆರಡು ಮಾತು ಬರೆಯುತ್ತಾರೆ ಎನ್ನುವುದೇ ನ್ಯೂಜಿಲೆಂಡ್ ನಲ್ಲಿದ್ದವರಿಗೆ ನಗುವನಹಳ್ಳಿಗೆ ಬಂದು ಹೋದ ಸಂತಸ ನೀಡಿತು. ಇಲ್ಲಿ ಆಗುವ ಘಟನೆಗಳು, ನಾಟಕ, ಪುಸ್ತಕ ಬಿಡುಗಡೆ, ಮಾರುಕಟ್ಟೆಯಲ್ಲಿರುವ ಸಿ ಡಿ, ವಿಮರ್ಶೆಗೆ ಸಿಕ್ಕಿರುವ ಪುಸ್ತಕ ಎಲ್ಲದರ ಬಗ್ಗೆಯೂ ಓದಲು ಸಾಧ್ಯವಾಯಿತು. ಇದು ವಿದೇಶದಲ್ಲಿದ್ದವರಿಗೆ ಮಾತ್ರವಲ್ಲ ಇಷ್ಟು ದಿನ ಪೇಪರ್ ಸಿಗದ, ಚಾನಲ್ ಸಿಗಲು ಹರಸಾಹಸ ಮಾಡಬೇಕಾಗಿದ್ದ ಊರುಗಳಲ್ಲೂ ಇದೇ ಉತ್ಸಾಹ ಮೊರೆಯಿತು.

ಗೂಗಲ್ transliteration ಬಳಕೆಗೆ ಬಂದಿದ್ದೇ ತಡ ಬ್ಲಾಗಿಸಲು ಇನ್ನಷ್ಟು ಕಸುವು ಸಿಕ್ಕಿದೆ. ಬ್ಲಾಗ್ ಗಳ ಲೆಕ್ಕ ಪಟ್ಟಿ ಮಾಡಿದರೆ ೫೦೦ ಕ್ಕೂ ಮೀರಿ ಲೆಕ್ಕ ಸಿಗುತ್ತದೆ. ಬ್ಲಾಗ್ ಲಿಂಕ್ ನೀಡುವ ಸೈಟ್ ಗಳೇ ಸಾಕಷ್ಟಿವೆ. ಬ್ಲಾಗ್ ಬರಹಗಳನ್ನು ಒಂದುಗೂಡಿಸಿಕೊಡುವ ವ್ಯವಸ್ಥೆಯಿದೆ. ತಮ್ಮ ಮೇಲ್ ಬಾಗಿಲಿಗೆ ಬೇಕಾದ ಬ್ಲಾಗಿನ ಬರಹಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಇದೆ. ಗೂಗಲ್, ಯಾಹೂ ಹೀಗೆಸಾಕಷ್ಟು ರೀಡರ್ ಗಳಿವೆ. ಹಾಗಾಗಿಯೇ ಬ್ಲಾಗ್ ಈಗ ನಾಗಾಲೋಟದಲ್ಲಿದೆ.

‘ನಾನು ಯಾರು, ಯಾವ ಊರು, ಇಲ್ಲಿ ಯಾರೂ ಬಲ್ಲೋರಿಲ್ಲ… ಮೀನ ಹೆಜ್ಜೆ ಕಂಡೋರುಂಟು, ಬಾನ ಎಲ್ಲೇ ಬಲ್ಲೋರುoಟು, ನನ್ನ ಬಣ್ಣ ಕಂಡೋರಿಲ್ಲ’ ಅಂತ ಅಂದುಕೊಳ್ಳುತ್ತಿದ್ದವರೂ ಒಂದೆಡೆ ಸೇರಿ ಬರೆದದ್ದರ ಬಗ್ಗೆ ಮಾತನಾಡುವ, ಕಷ್ಟ ಸುಖ ಹಂಚಿಕೊಳ್ಳುವ ತಮ್ಮ ಕಾರ್ಯಕ್ರಮಗಳನ್ನು ತಿಳಿಸುವ ಹೀಗೆ ಒಂದೆಡೆ ಸೇರಬೇಕೆಂಬ ಹಂತಕ್ಕೆ ಬಂದಾಗ ರೂಪುಗೊಂಡದ್ದು ಕನ್ನಡ ಬ್ಲಾಗರ್ಸ್ ತಾಣ. ಈಗ ಇಲ್ಲಿನ ಸದಸ್ಯರ ಸಂಖ್ಯೆ ೪೦೦೦ ದಾಟಿ ಹೋಗಿದೆ. ಅಂದ ಮಾತ್ರಕ್ಕೆ ಇಲ್ಲಿರುವವರೆಲ್ಲರೂ ಬ್ಲಾಗ್ ಇರುವವರೇನಲ್ಲ. ಆದರೆ ಮೊದಲ ಬಾರಿಗೆ ಇಲ್ಲಿ ಬ್ಲಾಗಿಗರೊಂದಿಗೆ ಬ್ಲಾಗ್ ಓದುಗರೂ, ಇಲ್ಲಿ ಬಂದ ನಂತರ ಬ್ಲಾಗ್ ಆರಂಭಿಸಿದವರೂ ಸೇರಿದ್ದಾರೆ. ಪುಸ್ತಕ ಪ್ರಕಾಶಕರಾಗಿದ್ದ ಸೃಷ್ಟಿ ನಾಗೇಶ್ ಈಗ ಬ್ಲಾಗಿಗರು, ಪೇಪರ್ ಹಂಚುವ ಶಿವು ಕೆ ಈಗ ಬ್ಲಾಗ್ ಲೋಕದಲ್ಲಿದ್ದಾರೆ. ಕಟ್ಟಡಗಳ ಗುತ್ತಿಗೆದಾರ ಪ್ರಕಾಶ್ ಹೆಗಡೆ ಚಂದದ ಬ್ಲಾಗ್ ಹೊಂದಿದ್ದಾರೆ. ಪತ್ರಕರ್ತೆ ಭಾಗೇಶ್ರೀ, ಭಾಷಾ ಪಂಡಿತರಾದ ಪಂಡಿತಾರಾಧ್ಯ ತಮ್ಮ ಆಲೋಚನೆಗೆ ಬ್ಲಾಗ್ ರೂಪ ನೀಡಿದ್ದಾರೆ. ತೇಜಸ್ವಿಯವರ ಮಗಳು ಈಶಾನ್ಯೆ ಸಹಾ ಬ್ಲಾಗ್ ಲೋಕದಲ್ಲಿ ಬೆಟ್ಟ ಹತ್ತಿದ ಬಗ್ಗೆ ಹೇಳಿದ್ದಾರೆ. ಸಲ್ಲಾಪದ ಮೂಲಕ ಸುನಾಥ ಕಾಕಾ ಬೇಂದ್ರೆ ಕವಿತೆಗಳ ಹುಚ್ಚು ಹಿಡಿಸಿದ್ದಾರೆ. ಹೀಗೆ ಬ್ಲಾಗ್ ಲೋಕದಲ್ಲಿ ಎಷ್ಟೊಂದು ಬೆಳೆ.

ಬ್ಲಾಗ್ ಲೋಕ ಇಷ್ಟಕ್ಕೇ ನಿಂತಿಲ್ಲ. ಕಂಪ್ಯೂಟರೀಕರಣದ ಬೇಗದಲ್ಲಿ ಇನ್ನೂ ಹೆಚ್ಚು ಪ್ರದೇಶವನ್ನು ವ್ಯಾಪಿಸಿಕೊಳ್ಳುತ್ತ ಹೋಗುತ್ತಿದೆ. ಸಾಕಷ್ಟು ಕ್ಷೇತ್ರಗಳನ್ನು ಆವರಿಸಿದೆ. ಅಷ್ಟೇ ಅಲ್ಲ ಎಲ್ಲಾ ವಯೋಮಾನದವರನ್ನೂ ತೆಕ್ಕೆಗೆ ತೆಗೆದುಕೊಂಡಿದೆ. ಬಿ ಎ ವಿವೇಕ ರೈ ಅವರು ಜರ್ಮನಿಯಿಂದ ಬರೆಯುತ್ತಾರೆ. ಸಿ ಎನ್ ರಾಮಚಂದ್ರನ್ ಬ್ಲಾಗ್ ಅಂಗಳಕ್ಕೆ ಬಂದಿದ್ದಾರೆ. ಕಾಮರೂಪಿ ಅವರು ಬರೆದ ಬರಹಗಳು ಎಂತಹವರನ್ನೂ ಕಾಡುತ್ತದೆ. ಕೆ ವಿ ನಾರಾಯಣರ ಭಾಷಾ ಚಿಂತನೆಗಳು ಬ್ಲಾಗ್ ಲೋಕದಲ್ಲಿವೆ. ಫೋಟೋಗ್ರಫಿ ಬ್ಲಾಗ್ ಗಳಿಗಂತೂ ಲೆಕ್ಕವೇ ಇಲ್ಲ. ಜಿ ಎನ್ ಅಶೋಕ ವರ್ಧನ್ ಅವರು ತಮ್ಮ ಬ್ಲಾಗ್ ಮೂಲಕ ಎಲ್ಲರನ್ನೂ ಚಾರಣಕ್ಕೆ ಕರೆದೊಯ್ಯುತ್ತಾರೆ ಕಲಾವಿದರೂ ಬ್ಲಾಗ್ ಅಂಗಳಕ್ಕೆ ಕುಂಚ ಹಿಡಿದು ಬಂದಿದ್ದಾರೆ. ಬ್ಲಾಗ್ ಲೋಕದಲ್ಲಿ ಬಿತ್ತಿದ್ದೆಲ್ಲವೂ ಬೆಳೆಯಾಗಿದೆ.

ಇಂತಹ ಬ್ಲಾಗ್ ಲೋಕಕ್ಕೆ ಒಂದು ಮಾಯಾ ಕುದುರೆ ಏರಿ ಬಂದ ನಾನು ಇನ್ನೂ ಆ ಕುದುರೆಯಿಂದ ಇಳಿಯುವ ಮನಸ್ಸು ಮಾಡಿಲ್ಲ. ‘ಕೊಟ್ಟ ಕುದುರೆಯನೇರಲರಿಯದೆ..’ ಹಲವು ಬ್ಲಾಗಿಗರು ಹಿಂದಿರುಗಿರಬಹುದು ಆದರೆ ನನಗೆ ಬ್ಲಾಗ್ ಇನ್ನೂ ಮಾಯಾಲೋಕವೇ. ಹಾಗಾಗಿಯೇ ನಾನು ಕಂಡದ್ದು ಇಲ್ಲಿದೆ. ಇಲ್ಲಿರುವುದೆಲ್ಲವೂ ಸರಿ ಇಲ್ಲದೆಯೂ ಇರಬಹುದು. ಏಕೆಂದರೆ ಬ್ಲಾಗ್ ಎಂಬ ಮಹಾಸಾಗರದಲ್ಲಿ ಕಂಡವರಿಗೆ ಕಂಡಷ್ಟು ಮಾತ್ರ ದಕ್ಕುತ್ತದೆ,. ನಾನು ಹಾಡು ಬಂದ ಎಷ್ಟೊಂದು ಬ್ಲಾಗ್ ಗಳನ್ನು ನೆನಪಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಆದರೆ ಈ ಬ್ಲಾಗ್ ಸರಿತ್ಸಾಗರದಲ್ಲಿ ಎಷ್ಟನ್ನು ನೆನಪಿಟ್ಟುಕೊಳ್ಳುವುದು?. ಹಾಗಾಗಿ ನಾನು ಕಂಡ, ನನಗೆ ಬ್ಲಾಗ್ ಲೋಕ ತೋರಿಸಿದ್ದರ ಒಂದು ಜ್ಹಲಕ್ ಇಲ್ಲಿದೆ.

ಕೆ ಎಸ್ ನರಸಿಂಹ ಸ್ವಾಮಿ ಅವರು ‘ತೆರೆದ ಬಾಗಿಲು’ ಕವಿತೆ ಬರೆದಾಗ ಇಂಟರ್ನೆಟ್ ಖಂಡಿತಾ ಇರಲಿಲ್ಲ. ಆದರೆ ಈಗ ಇಂಟರ್ನೆಟ್ ಎನ್ನುವುದೇ ತೆರೆದ ಬಾಗಿಲು. ಅಥವಾ ತೆರೆದಷ್ಟೂ ಬಾಗಿಲು. ಒಂದು ಕ್ಲಿಕ್ಕಿಸಿದರೆ ಒಂದು ಲೋಕ. ಅದರಲ್ಲಿರುವ ಕೊಂಡಿ ಕ್ಲಿಕ್ಕಿಸಿದರೆ ಇನ್ನೊಂದು ಲೋಕ, ಅಲ್ಲಿಂದ ಮತ್ತೊಂದು ಲೋಕ.. ಹೀಗೆ ಅಲ್ಲಿ ತೆರೆದಷ್ಟೂ ಬಾಗಿಲುಗಳು. ಆ ಬಾಗಿಲಿನ ಒಳಗೆ ನಾನೂ ಇದ್ದೇನೆ ಹಾಗೆ ನೀವೂ, ಅವರೂ, ಇವರೂ..ಎಲ್ಲರೂ.

(‘ತರಂಗ’ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ)

 

‍ಲೇಖಕರು G

April 6, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

15 ಪ್ರತಿಕ್ರಿಯೆಗಳು

    • ಭಗವತಿ ಎಂ. ಆರ್

      ತುಂಬ ಸೊಗಸಾಗಿದೆ! ಇಷ್ಟವಾಯಿತು.

      ಪ್ರತಿಕ್ರಿಯೆ
  1. ಆಜಾದ್

    ಬಹಳ ಸಮಯೋಚಿತ ಲೇಖನ…ಅದೂ ಮೋಹನ್ ಸರಂಥಾ ಅನುಭವಿಯ ಲೇಖನಿಯಿಂದ…!! ಇದು ಬ್ಲಾಗಿಗರ ಪ್ರೋತ್ಸಾಹಕ್ಕೆ ಕೋಡು ಮೂಡಿಸಿದೆ…

    ಪ್ರತಿಕ್ರಿಯೆ
  2. ಐನಂಡ ಪ್ರಭು

    ಕನ್ನಡದ ಬ್ಲಾಗಿತಿಹಾಸದ ಬಗ್ಗೆ ಬರೆದ ಈ ಲೇಖನ ಸೊಗಸಾಗಿ ಓದಿಸಿಕೊಂಡಿತು. ಇಂಟರ್ನೆಟ್ ತೆರೆದಷ್ಟೂ ಬಾಗಿಲು; ಬ್ಲಾಗಿಲು ತೆರೆದಷ್ಟೂ ಹೊಸ ಲೇಖ-ಲೋಕಗಳು

    ಈ ಒಳ್ಳೆಯ ಲೇಖನಕ್ಕೆ ನಿಮಗೆ ಅಭಿನಂದನೆಗಳು!

    ಪ್ರತಿಕ್ರಿಯೆ
  3. shivu.k

    ಇದು ನಮ್ಮ ಬ್ಲಾಗಿಗರಿಗಾಗಿ ಬೇಕಿತ್ತು..ಥ್ಯಾಂಕ್ಸ್..ಮೋಹನ್ ಸರ್..

    ಪ್ರತಿಕ್ರಿಯೆ
  4. ಕುಮಾರ ರೈತ

    ಇಂಟರ್ ನೆಟ್ ಮತ್ತು ಕನ್ನಡ ಬ್ಲಾಗ್ ಲೋಕದ ಬಗ್ಗೆ ಚೆಂದದ ಬರಹ. ನೀವು ಹೇಳಿದಂತೆ ಇಂಟರ್ ನೆಟ್ ತೆರೆದ ಬಾಗಿಲು ಅಥವಾ ತೆರೆದಷ್ಟೂ ಬಾಗಿಲು.

    ಪ್ರತಿಕ್ರಿಯೆ
  5. usharai

    ಬ್ಲಾಗ್ ಲೋಕದ ಪ್ರವಾಸಕಥನ ನಿಜಕ್ಕೂ ಇಂಟರೆಸ್ಟಿಂಗ್ ಆಗಿ ಬಂದಿದೆ.

    ಪ್ರತಿಕ್ರಿಯೆ
  6. arun joladkudligi

    ಸಾರ್, ಬ್ಲಾಗ್ ಲೋಕದ ಪಯಣದ ಚರಿತೆ ಚೆನ್ನಾಗಿದೆ. ಕನ್ನಡದ ಒಳ್ಳೆಯ ಬ್ಲಾಗ್ ಗಳ ಪರಿಚಯ ಮಾಡುವುದು ಒಳ್ಳೆಯದೆ.ಕಾರಣ ಎಲ್ಲವನ್ನೂ ಎಲ್ಲರೂ ನೋಡಲಿಕ್ಕಾಗುವುದಿಲ್ಲ.ಬ್ಲಾಗಿಗರ ನಂಟನ್ನು ಬೆಸೆವ ನಿಮ್ಮ ಕೆಲಸಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  7. ಭಗವತಿ ಎಂ. ಆರ್

    ಲೇಖನ ಸೊಗಸಾಗಿದೆ. ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: