‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್-ಭೂರಮೆ

‘ಅವಧಿ’ ಇಂದಿನಿಂದ ಬೆಸ್ಟ್ ಬ್ಲಾಗ್ ಅನ್ನು ಆಯ್ಕೆ ಮಾಡಿ ನಿಮ್ಮ ಮುಂದೆ ಮಂಡಿಸುತ್ತಿದೆ. ಇದಕ್ಕೆ ಸಾಥ್ ನೀಡಿದವರು ‘ಸುಶ್’ ಅಂತಲೇ ಹೆಸರಾದ ಸುಶ್ರುತಾ ದೊಡ್ಡೇರಿ. ಲಲಿತ ಪ್ರಬಂಧಕ್ಕೆ ‘ಕನ್ನಡಪ್ರಭ-ಅಂಕಿತ ಪುಸ್ತಕ ‘ಜಂಟಿ ಪುರಸ್ಕಾರ ಪಡೆದ ಲೇಖಕ. ಕವಿತೆಯ ಮೂಲಕ ಮೋಡಿ ಮಾಡಿ ಬಿಡಬಲ್ಲ ಹುಡುಗ. ದಿನಕ್ಕೆ ೫೦೦ಕ್ಕೂ ಹೆಚ್ಚು ಬ್ಲಾಗ್ ಗಳನ್ನು ಸುತ್ತಿ ಬರುವ ಈ ಅಲೆಮಾರಿಯೇ ಈ ಕೆಲಸಕ್ಕೆ ಸೈ ಎನ್ನುವುದು ‘ಅವಧಿ’ಯ ಅಭಿಪ್ರಾಯ. ಜೊತೆಗೆ ಈತ ಗುಣ ಪಕ್ಷಪಾತಿ.

ಇವರ ಜೊತೆಗೆ ಟೀನಾ ಸಹಾ ಆಯ್ಕೆ ನಡೆಸಬೇಕು ಎನ್ನುವುದು ನಮ್ಮ ಬಯಕೆ. ಟೀನಾ ಜೊತೆ ಇನ್ನೂ ಮಾತನಾಡಿಲ್ಲ. ಇಬ್ಬರ ಜುಗಲ್ ಬಂದಿಯಲ್ಲಿ ಎಷ್ಟೊಂದು ಬ್ಲಾಗ್ ಗಳು ನಿಮ್ಮ ಬಾಗಿಲು ತಟ್ಟಲಿವೆ. ಇದೇ ಬರಹಗಳು ನಮ್ಮ’ ಕನ್ನಡ ಬ್ಲಾಗರ್ಸ್’ ನಲ್ಲೂ ಪ್ರಕಟಗೊಳ್ಳುತ್ತದೆ. ಅಲ್ಲಿಗೂ ಬಂದು ಹೋಗಿ..

ಇವತ್ತಿನ ಆಯ್ಕೆ- ಭೂರಮೆ

‘ಭೂರಮೆ’ಯ ಪ್ರಕೃತಿಪ್ರೀತಿ

 

ಒಮ್ಮೆ ಮೇಲಿನಿಂದ ಕೆಳಗಿನವರೆಗೆ ಸ್ಕ್ರಾಲ್ ಮಾಡಿದರೆ ಸುಮಾರು ಪ್ರಾಣಿಗಳು, ಪಕ್ಷಿಗಳು, ಕೀಟಗಳು, ಹಸಿರು ಕಂಡಿತೆಂದರೆ ಅದು ಸುಮ ಸುಧಾಕಿರಣ್ ಅವರ ’ಭೂರಮೆ’ ಬ್ಲಾಗ್. “ಬೆಟ್ಟ, ಗುಡ್ಡ, ಕಾಡುಗಳೆಂದರೆ ಪ್ರಾಣ. ಜೀವಶಾಸ್ತ್ರದಲ್ಲಿ ತುಂಬಾ ಆಸಕ್ತಿ” ಅನ್ನೋ ಅವರ ಪರಿಚಯಕ್ಕೆ ಅವರ ಬ್ಲಾಗ್ ಬರಹಗಳು ಇಂಬು ಕೊಡುತ್ತವೆ. ಅಲ್ಲೆಲ್ಲೋ ಟರ್ಕಿ ಕೋಳಿಯೊಂದು ಕೆಂಪು ಕತ್ತೆತ್ತಿ ’ಹಾಯ್’ ಎಂದರೆ ಮತ್ತೊಂದೆಡೆ ಬಂಡೀಪುರದಲ್ಲಿ ಕಾದಾಡುತ್ತಿರುವ ಕಾಡುಕೋಣಗಳು ಹೆದರಿಸುತ್ತವೆ. ಲಘು-ವಿನೋದದ ದಾಟಿಯಲ್ಲಿರುವ ಇವರ ಪ್ರಕೃತಿಪ್ರೀತಿಯ ಬರಹಗಳು ಓದುವಾಗ ಮುದ ನೀಡುವುದಲ್ಲದೇ ನಮಗೆ ತಿಳಿಯದ ಸುಮಾರು ವಿಷಯಗಳನ್ನು ತಿಳಿಸುತ್ತವೆ. ಕತೆ, ಪ್ರವಾಸಕಥನಗಳನ್ನೂ ಸುಮಾ ಬರೆಯುತ್ತಾರೆ.

’ಸರಳುಗಳ ಹಿಂದಿನಿಂದ’ -ಸುಮಾ ಇಂದು ಬರೆದಿರುವ ಪುಟ್ಟ ಕತೆ. ಸ್ವಾತ್ರಂತ್ರ್ಯ ಬಯಸುವ ಪುಟ್ಟ ಮಗುವಿನ ಹಂಬಲಕ್ಕೆ ಕತೆ ಕಣ್ಣಾಗಿದೆ. ನಗರ ಜೀವನದ ಅನಿವಾರ್ಯತೆಗಳು ಮತ್ತು ಸಿರಿವಂತಿಕೆ ತರುವ ದರ್ಪಗಳು ತಟ್ಟದ ಮಕ್ಕಳ ಮುಗ್ದ ಜಗತ್ತು ಇಲ್ಲಿ ಅನಾವರಣಗೊಂಡಿದೆ. ಮಗಳ ಕಣ್ಣಲ್ಲಿ ಪ್ರತಿಫಲಿಸುತ್ತಿರುವ ಸರಳುಗಳಾಚೆಯ ಲೋಕವನ್ನು ನೋಡುತ್ತ ತಾಯಿ ತನ್ನ ಬಾಲ್ಯಕ್ಕೆ ಜಾರುತ್ತಾಳೆ. ಕತೆ ಮುಗಿಯುವಾಗ ನಿಮ್ಮ ಕಣ್ಣೂ ಒದ್ದೊದ್ದೆ..

-ಸುಶ್ರುತ ದೊಡ್ಡೇರಿ

ಹುಟ್ಟಿದ್ದು ಶಿವಮೊಗ್ಗದ ಸಾಗರ ತಾಲ್ಲೂಕಿನ ಚಿಕ್ಕ ಹಳ್ಳಿ ಕಾನುಗೋಡಿನಲ್ಲಿ. ಈಗಿರುವುದು ಬೆಂಗಳೂರು.ಪತಿ ಸುಧಾಕಿರಣ್, ಮಗಳು ಇಂಚರ. ಬೆಟ್ಟ,ಗುಡ್ಡ ,ಕಾಡುಗಳೆಂದರೆ ಪ್ರಾಣ. ಜೀವಶಾಸ್ತ್ರದಲ್ಲಿ ತುಂಬಾ ಆಸಕ್ತಿ.ಓದು ಮೆಚ್ಚಿನ ಹವ್ಯಾಸ. ಬರೆಯುವ ಅಭ್ಯಾಸ ಕಡಿಮೆ.ಮನಸ್ಸಿನ ತುಮುಲಗಳನ್ನು ಕಳೆಯಲು ಬರೆದು ನಂತರ ಹರಿದೆಸೆಯುವ ಅಭ್ಯಾಸವಿತ್ತು. ಅನೇಕ ಬ್ಲಾಗ್ ಬರಹಗಳನ್ನು ಓದಿ ,ನಾನೂ ಬರೆಯಬಲ್ಲೆನೆಂಬ ವಿಶ್ವಾಸ ಹುಟ್ಟಿ ಬರೆಯಲು ಪ್ರಾರಂಭಿಸಿದ್ದೇನೆ.

ಸರಳುಗಳ ಹಿಂದಿನಿಂದ

ನಾಲ್ಕನೆ ಮಹಡಿಯ ಬಾಲ್ಕನಿಯಲ್ಲಿ ನಿಂತು ಗ್ರಿಲ್ ಸರಳುಗಳನ್ನು ಹಿಡಿದು ನೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದಾಳೆ ಮಗಳು ಎದುರುರಸ್ತೆಯಲ್ಲಿ ಆಡುವ ಕಟ್ಟಡ ಕಾರ್ಮಿಕರ ಮಕ್ಕಳೆಡೆಗೆ.

ಒಂದು ಕ್ಷಣ ಸಿನೆಮಾಗಳಲ್ಲಿ ತೋರಿಸುವ ಜೈಲಿನ ಕೈದಿಗಳ ನೆನಪಾಯಿತು ನನಗೆ.

ಬೀಳುವ ಚಡ್ಡಿಯನ್ನೊಂದು ಕೈಯಲ್ಲಿ ಹಿಡಿದುಕೊಂಡೇ ಓಡುತ್ತಿರುವ ಆ ಪುಟ್ಟ ಹುಡುಗ , ಗೊಣ್ಣೆ ಸುರಿಸುತ್ತಾ ಓಡುತ್ತಿರುವ ಈ ಹುಡುಗಿಯನ್ನು ಇನ್ನೇನು ಹಿಡಿದೇ ಬಿಟ್ಟ ….

ಓಡು ಓಡು .. ನಿಂತಲ್ಲೇ ಕೂಗುತ್ತಿದ್ದಾಳೆ ಮಗಳು , ಇವಳೇ ಸಿಕ್ಕಿಬಿದ್ದಳೇನೋ ಎಂಬ ಭಾವದಲ್ಲಿ . ಕಣ್ಣುಗಳಲ್ಲೇನೋ ಹೊಳಪು.

 

ಅಮ್ಮ ನಾನೂ ಅಲ್ಲಿ ಆಡಲು ಹೋಗಲೆ? ಕೇಳಿದ್ದಳೊಮ್ಮೆ . ಸುಮ್ಮನಿರಿಸಿದ್ದೆ ಅವರ ಕೊಳಕುತನ , ಕೆಟ್ಟ ಭಾಷೆ, ಹರುಕು ಬಟ್ಟೆ ಅದು ಇದು ಹೀಗೆ ನೂರೆಂಟು ಕಾರಣ ಕೊಟ್ಟು.

ಛೆ! ಆ ಬೀದಿ ಮಕ್ಕಳ ಜೊತೆ ಆಡಲು ಕಳಿಸುವುದೆ ? ನಮ್ಮ ಅಂತಸ್ತೇನು ? ಪಕ್ಕದ ಬಿಲ್ಡಿಂಗಿನ ಮಿಸೆಸ್ ಶರ್ಮ , ಎದುರು ಮನೆಯ ಮಿಸೆಸ್ ರಾವ್ , ಕೊನೆ ಮನೆಯ ನಿಕಿತಾ ಜೈನ್ ಎಲ್ಲ ಏನೆಂದಾರು!

ಅಂದಿನಿಂದ ಇವಳದು ನಿತ್ಯ ಸಾಯಂಕಾಲ ಇದೇ ಕಾಯಕ …..ಬಾಲ್ಕನಿಯಲ್ಲಿ ನಿಂತು ಗ್ರಿಲ್  ನಲ್ಲಿ ಹಣುಕಿ ಹೊರನೋಡುತ್ತಾ ನಿಲ್ಲುವುದು ….

ಆ ಬೀದಿ ಮಕ್ಕಳಾಡುವ ಆಟಗಳನ್ನು ಕಣ್ತುಂಬಿಕೊಳ್ಳುವುದು , ತಾನೇ ಆಡುತ್ತಿರುವಂತೆ ಪ್ರತಿಕ್ರಿಯಿಸುವುದು .

 

ಕತ್ತಲೆಯಾಗುವವರೆಗೂ ಅವರ ಆಟ ಮುಂದುವರೆಯುತ್ತದೆ . ಇವಳ ನೋಟವೂ…. ನಂತರ ಕಾಲು ಸೋತಂತೆ , ಮಂಕು ಮುಖದಿಂದ ಒಳಬರುತ್ತಾಳೆ.

 

ಅವಳ ಈ ದಿನಚರಿ ತಪ್ಪಿಸಲು ನಾನು ಏನೇನೆಲ್ಲ ಮಾಡಿದೆ ಗೊತ್ತೆ ? ಕಂಪ್ಯೂಟರ್ ಗೇಮ್ಸ್ , ವಿಡಿಯೋ ಗೇಮ್ಸ್ , ಕಾರ್ಟೂನ್ ಫಿಲ್ಮ್ , ರಿಮೋಟ್ ಏರೋಪ್ಲೇನ್ ………ಒಂದೇ ಎರಡೇ …ಊಹುಂ ….ಯಾವುದೂ ಅವಳ ಕಣ್ಣುಗಳಲ್ಲಿ ಬೀದಿ ಮಕ್ಕಳ ಆಟ ನೋಡುತ್ತಿರುವಾಗ ಕಾಣುವ ಹೊಳಪನ್ನು ತರಲಿಲ್ಲ.

 

ಇಂದೇಕೊ ನನ್ನ ಸಮೃದ್ಧ ಬಾಲ್ಯದ ನೆನಪಾಗುತ್ತದೆ . …. ತುಂಬಾ ಮಳೆ ಎಂದು ಶಾಲೆಗೆ ರಜೆ ಕೊಟ್ಟರೆ ಸಾಯಂಕಾಲದವರೆಗೂ ರಸ್ತೆ ,ಚರಂಡಿ ನೀರಿನಲ್ಲಿ ಅಟವಾಡುತ್ತಿದ್ದುದು … ಮನೆಯೆದುರಿನ ಚಿಕ್ಕ ಹಳ್ಳದ ನೀರಿನಲ್ಲಿರುತ್ತಿದ್ದ ಬಣ್ಣ ಬಣ್ಣದ ಕಲ್ಲುಗಳನ್ನು ತೇಯ್ದು ಆ ಬಣ್ಣಗಳನ್ನು ಮೈ ,ಮುಖಕ್ಕೆಲ್ಲ ಬಳಿದುಕೊಂಡು ಯಕ್ಷಗಾನದ ಬಣ್ಣದ ವೇಷ ಕಟ್ಟಿದ್ದು…. ಮಾವಿನಮರದ ಕೊಂಬೆಗೆ ಜೋಕಾಲಿ ಕಟ್ಟಿ ಜೋರಾಗಿ ಜೀಕಿ ಬಿದ್ದದ್ದು …. ಸೈಕಲ್ ಕಲಿಯುತ್ತೇನೆಂದು ಹೊಂಗೆ ಮರದ ಬಳಿಯ ಏರಿನಿಂದ ಸ್ಪೀಡಾಗಿ ಬಂದು ಜಾರಿ ಬಿದ್ದು ಕಾಲು ಮುರಿದುಕೊಂಡದ್ದು …..ಮದುವೆಯಾಟ ಆಡೋಣ ಎಂದು ಪುಟ್ಟ ರಶ್ಮಿಗೂ ಮತ್ತು ತುಂಟ ರಾಮುಗೂ ಶೃಂಗರಿಸಿ ಕುಳ್ಳಿರಿಸಿ ಆರತಿ ಎತ್ತಿದ್ದು …..ತಂಗಿಗೆ ಸ್ಕೂಟರ್ ಸವಾರಿ ಮಾಡಿಸುತ್ತೇನೆಂದು ತೆಂಗಿನ ಹೆಡೆಯ ಮೇಲೆ ಕೂರಿಸಿ ಎಳೆದದ್ದು ……ಅವಳಿಗೆ ಸೌತೆಮಿಡಿ ಕೊಡುತ್ತೇನೆಂದು ಕಹಿಹಿಂಡಲೆ ಕಾಯಿ ತಿನ್ನಿಸಿ ಅಳಿಸಿದ್ದು ……ಕಣ್ಣೆ ಮುಚ್ಚೆ ಆಟವಾಡುವಾಗ ದೊಡ್ಡಜ್ಜನಮನೆಯ ಕತ್ತೆಲೆಕೋಣೆಯಲ್ಲಿ ಗಂಟೆಗಟ್ಟಲೆ ಅವಿತು ಕುಳಿತದ್ದು……ಅಜ್ಜನ ಹತ್ತಿರ ತೆಂಗಿನ ಮಡಿಲುಗಳ ಚಾಪೆ ನೇಯಿಸಿಕೊಂಡು ಸೀಮಾ ಮನೆಯ ಅಂಗಳದಲ್ಲಿ ಗುಡಿಸಲು ಕಟ್ಟಿ ಖಾರಅವಲಕ್ಕಿ ಮಾಡಿ ತಿಂದ್ದದ್ದು…….ಕೆಳಗಿನ ಗದ್ದೆಯ ಹೊಳೆಯ ಒಂಟಿ ಸಂಕದ ಮೇಲೆ ದೊಂಬರ ಹುಡುಗಿಯಂತೆ ಸರ್ಕಸ್ ಮಾಡಿ ನಡೆಯುತ್ತಿದ್ದುದು…. ಭತ್ತದ ಕಣದ ಮೂಲೆಯಲ್ಲಿದ್ದ ಹುಲ್ಲಿನ ಗೊಣಬೆ ಹತ್ತಿ ಜಾರುತ್ತಿದ್ದುದು….ತುಳಸಿಯೊಂದಿಗೆ ಹುಣಸೇ ಮರದ ಹಿಂದೆ ಅವಿತು ಕುಳಿತು, ಸಾಯಂಕಾಲದ ವೇಳೆ ಆಚೆ ದಿಂಬದ ತನ್ನ ಮನೆಗೆ ಹೋಗುತ್ತಿದ್ದ ಮಡಿವಾಳ ಗಂಗೆಯನ್ನು ಗೂಬೆಯಂತೆ ಕೂಗಿ ಹೆದರಿಸುತ್ತಿದ್ದುದು…..ಬೇಸಗೆ ಬಂತೆಂದರೆ ರಸ್ತೆಯಲ್ಲಿ ಡಾಂಕಿ ಮಂಕಿ, ಉಪ್ಪಾಟ , ಸಗಣಿ ಕೋಲು ಇತ್ಯಾದಿ ಆಟಗಳನ್ನು ರಾತ್ರೆಯವರೆಗೂ ಆಡುತ್ತಿದ್ದುದು …..ಸಾಯಂಕಾಲ ರೈಲು ನೋಡಲು ದೂರದ ಬ್ಯಾಣದ ಬಳಿಯಿದ್ದ ರೈಲ್ವೆ ರಸ್ತೆಗೆ ಓಡುತ್ತಿದ್ದುದು……….ಒಹ್ ನೆನೆದಷ್ಟೂ ಮುಗಿಯದ ನೆನಪಿನ ಸುರುಳಿ !

 

ವಾಸ್ತವದ ಈ ಲೋಕಕ್ಕೆ ಜಾರಿದಾಗ ಗ್ರಿಲ್ ಹಿಂದೆ ನಿಂತ ಮಂಕು ಕಣ್ಗಳ ಮಗಳ ಮುಖ ನೋಡಿ ನನ್ನ ಕಣ್ಣಂಚು ಒದ್ದೆಯಾಗುತ್ತದೆ .

ನಿಧಾನಕ್ಕೆ ಹೊರಬಾಗಿಲು ತೆಗೆದು , ಹೋಗು ಪುಟ್ಟ ಎನ್ನುತ್ತೇನೆ ….ಸಂತಸದಿಂದ ಅರಳುವ ಅವಳ ಕಣ್ಗಳ ಬೆಳಕಲ್ಲಿ

ಮಿಸೆಸ್ ಶರ್ಮ, ಮಿಸೆಸ್ ರಾವ್ , ನಿಖಿತಾ ಜೈನ್ ಎಲ್ಲರೂ ಮಸುಕಾಗುತ್ತಾರೆ.

‍ಲೇಖಕರು G

April 7, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. D.RAVIVARMA

    TUMBA CHENNAGIDE.NANAGONDU MATU NENAPU BARTIDE MAKKALANNU BELESABEDI BELEYALU AVAKASHA MADI KODI,AVARA KANASUGALANNU HOSAKIHAKUVA NAMMA SOPHISTICATION ENNUVA PEDAMBUTADINDA NAVU HORA BANDU MAKKALANNU MUKTAVAGI TUMBUHRUDAYADINDA BELESADIDDARE MUNDINA AVARA KARALA BAVISYAKKE NAVU HONEGARARAGUTTEVE MANAKALAKUVA NIMMA BARAHAVANNU ELLA PARENTS ODABEKASTE OMME TAREJAMINPAR NODADIDRE NODI ..RAVI VARMA HOSPET

    ಪ್ರತಿಕ್ರಿಯೆ
  2. D.RAVIVARMA

    AVADIGONDU ANANTA VANDANE IVATTINA BLOG PRATI TANDE TAYIYARU ODALEBEKADADDU NANGANTU SUDDEN AGI AMIRKHAN DAVARA TAREJAMINPAR NENAPAYTU BARAHAGARARIGU MATTU NIMAGU MATTUMME ANTARALADA VANDANEGALU KEEPIT UP.RAVI VARMA HOSPET

    ಪ್ರತಿಕ್ರಿಯೆ
  3. ಸಂದೀಪ್ ಕಾಮತ್

    ನಂಗೂ ಈ ಬ್ಲಾಗ್ ಇಷ್ಟ 🙂

    ಪ್ರಿಯ ರವಿ ವರ್ಮ ,

    ಇಂಟರ್ನೆಟ್ ಲೋಕದಲ್ಲಿ all caps ಅಂದರೆ ಎಲ್ಲವನ್ನೂ ಕ್ಯಾಪಿಟಲ್ ಲೆಟರ್ಸ್ ನಲ್ಲಿ ಬರೆಯೋದು ಸಭ್ಯ ಲಕ್ಷಣ ಅನ್ನಿಸಲ್ಲ. ದಯವಿಟ್ಟು ಬೇಸರ ಮಾಡ್ಕೋಬೇಡಿ.

    ಪ್ರತಿಕ್ರಿಯೆ
  4. shamala

    ಸುಮಾ ಅವರೆ..
    ಕಥೆ ನಿಜಕ್ಕೂ ಅಮ್ಮನ ಮನಸ್ಸಿನ ತುಮುಲವನ್ನು ಚೆನ್ನಾಗಿ ಬಿಂಬಿಸಿದೆ. ಹೌದು ನಾವು ಮೊದಲು ಮಕ್ಕಳನ್ನು ಮಕ್ಕಳಂತೆಯೇ ಬೆಳೆಯಲು ಬಿಡಬೇಕು. ನಮ್ಮ ಅಂತಸ್ಥಿನ ದೃಷ್ಟಿಯಿಂದ ಬದುಕು ನೋಡುವುದನ್ನು ಅವರಿಗೆ ಕಲಿಸುವ ಕೆಲಸ ಬೇಡ ಆಲ್ವಾ…? ಪುಟ್ಟಿ ಕಬ್ಬಿಣದ ಸರಳುಗಳ ಹಿಂದಿಂದ ಆಚೆ ಬಂದು ಅರಳಿದ ಕಣ್ಣುಗಳಿಂದ ಖುಷಿಯಾಗಿ ಆಡಲು ಹೋದ ದೃಶ್ಯ ಕಲ್ಪಿಸಿಕೊಂಡು ನನ್ನ ಮನಸ್ಸೂ ಅರಳ್ತು. ಧನ್ಯವಾದಗಳು ಚಿಕ್ಕ ಚೊಕ್ಕ ಮುದ್ದಾದ ಕಥೆಗೆ.

    ಶ್ಯಾಮಲ

    ಪ್ರತಿಕ್ರಿಯೆ
  5. prakashchandra k

    Uthana bloggalannu ayke maadi odugara mundiduva Avadhiya nirdhaara nijakkoo olleyadu. Onde kade uthama bloggalannu noduva avakaasha odugarige siguthade. Abhinandanegalu.

    ಪ್ರತಿಕ್ರಿಯೆ
  6. Arvind Subbanna

    Nice and thought provoking. The story reminds me of my dad smiling at the complaints brought to him by my neighbors regarding his son, viz., me, playing with children of non-descript class.

    By letting her daughter out, the mother has really averted a psychological disaster, which was about to befall and left an indelible negative impact on the kid.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: