ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏಸೊಂದು ಚೆನ್ನಿತ್ತು..

-ಎಚ್. ಗೋಪಾಲಕೃಷ್ಣ 

ನನ್ನ ಬಗ್ಗೆ ನಿಮಗೆ ಈಗಲೇ ಸಾಕಷ್ಟು ಗೊತ್ತಿರಬಹುದು..ಗೊತ್ತಿಲ್ಲದೇ ಇರುವ ವಿಷಯ ಹೇಳೋಣ ಅಂತ ಆಸೆ…. ಅಂದರು ನಮ್ಮ ಹಿರಿಯ ದೊಡ್ಡಪ್ಪ. ಇವರ ಊರು ಹರೇ ಸಮುದ್ರ.ಈ ದೊಡ್ಡಪ್ಪನಿಗೆ ಐದುವರ್ಷ ಹಿಂದೇನೆ ಇರಬೇಕು ಆಗಲೇ ಎಂಬತ್ತರ ಹಬ್ಬ ಆಗಿತ್ತು. ಅಂದರೆ ಈಗ ಅವರಿಗೆ ಕನಿಷ್ಠ ಅಂದರೂ ಎಂಬತ್ತೈದು ಇರಬೇಕು.ಇವರನ್ನು ದೊಡ್ಡ ದೊಡ್ಡಪ್ಪ ಅಂತ ನಾವು ಕರೆಯೋದು. ಯಾಕೆ ಅಂದರೆ ಇವರಗಿಂತಲೂ ಚಿಕ್ಕ ದೊಡ್ಡಪ್ಪ ಇನ್ನೊಬ್ಬರಿದ್ದಾರೆ.

ಈ ದೊಡ್ಡಪ್ಪ ನಮ್ಮ ತಂದೆ ಕಡೆಯವರು. ನಮ್ಮದು ಆಗ ಅಂದರೆ ನಾವು ಚಿಕ್ಕವರಿದ್ದಾಗ ಕೂಡು ಕುಟು oಬ ಅಂದರೆ ಅಂದರೆ ಏನು ಹೇಳೋದು? ಇರಿ ಅದನ್ನ ಮೊದಲು ಹೇಳುತ್ತೇನೆ. ನಮ್ಮತಾತ ಅಜ್ಜಿ,ತಂದೆ ತಾಯಿ ನಾಲ್ಕು ಜನ ಅಣ್ಣತಮ್ಮಂದಿರು ಇದು ನಮ್ಮ ಕುಟು oಬ ಅಂತ ಆದರೆ ನಮ್ಮ ಜತೆಗೆ ಇನ್ನೂ ಅಷ್ಟು ಜನ ಇದ್ದರು. ದೊಡ್ಡಪ್ಪ ನಮ್ಮ ತಂದೆಯ ಚಿಕ್ಕಪ್ಪನ ಮಗ ಅಪ್ಪನಿಗಿಂತಲೂ ವಯಸ್ಸಿನಲ್ಲಿ ಹಿರಿಯರು. ಅದರಿಂದ ಅವರು ದೊಡ್ಡ ದೊಡ್ಡಪ್ಪ. ಅವರ ಹೆಂಡತಿ ಮೂರು ಮಕ್ಕಳು ಇದೊಂದು ಗುಂಪು. ಇನ್ನೊಂದು ಗುಂಪು ಅಂದರೆ ಅಪ್ಪನ ಸೋದರತ್ತೆ, ಅವರ ಸಂಸಾರ. ಅವರು ಗಂಡ ಹೆಂಡತಿ ನಾಲ್ಕು ಮಕ್ಕಳು… ಇಷ್ಟೂ ಜನ ಒಂದು ಮನೇಲಿ ವಾಸ. ಅದರ ಜತೆಗೆ ಮನೆಗೆ ಬoದು ಹೋಗುವ ನೆಂಟರು ಇಷ್ಟರು.. ಹೀಗೆ ಫ್ಲೋಟಿಂಗ್ ಜನ ಬೇರೆ.

ಹೀಗಾಗಿ ಕೆಲವು ಸಲ ಹೊಸಬರು ನಮ್ಮ ಜತೆ ಇದ್ದಾಗ ಅವರು ಯಾರಿಗೆ ನೆಂಟರು ಎನ್ನುವ ಕುತೂಹಲ ಹುಟ್ಟುತ್ತಿತ್ತು. ಇದು ಪ್ರತಿನಿತ್ಯದ ಸಂಗತಿ.

ಇಂತಹ ಒಂದು ಮನೆಯ ಸಂಗತಿಯನ್ನು ಬೆಳಿಗ್ಗೆಯಿಂದ ಶುರು ಹಚ್ಚುತ್ತೇನೆ.ಆಗ ಇಂತಹ ಮನೆಗಳು ಸಾಮಾನ್ಯ.

ಬೆಳಿಗ್ಗೆ ಬೆಳಿಗ್ಗೆ ನಾಲ್ಕು ನಾಲ್ಕುವರೆಗೆ ಅಡುಗೆ ಮನೆಯಲ್ಲಿ ಸೌದೆ ಒಲೆ ಹತ್ತಿಸುತ್ತಿದ್ದರು. ಅದರ ಮೇಲೆ ಕಾಫಿ ತಯಾರಿ ಶುರು ಆಗುತ್ತಿತ್ತು.ಇದು ನಮ್ಮಜ್ಜಿ ಮತ್ತು ನನ್ನ ಅಮ್ಮನ ಉಸ್ತುವಾರಿಯಲ್ಲಿ ಆದರೆ ಇತ್ತ ಬಚ್ಚಲು ಮನೆಯಲ್ಲಿ ತಾತ ಮತ್ತು ದೊಡ್ಡಪ್ಪ ಐವತ್ತು ಕೊಡ ಹಿಡಿಯುವ ಹಂಡೆಯ ಒಲೆಗೆ ಸೌದೆ ಸೀಳಿ ಅದಕ್ಕೆ ತುಂಬಿ ನೀರು ಕಾಯಿಸುವ ಕಾಯಕಕ್ಕೆ ಇಳಿಯುತ್ತಿದ್ದರು. ಒಲೆಯ ಪಕ್ಕ ದೊಡ್ಡ ಸೀಮೆಂಟ್ ತೊಟ್ಟಿ ಮತ್ತು ಅದರ ತುಂಬಾ ಬಾವಿಯಿಂದ ಮನೆಯ ಮಧ್ಯ ವಯಸ್ಕರು ಸೇದಿ ಸೇದಿ ಹಾಕಿದ ನೀರು. ಅದರ ಪಕ್ಕವೇ ಬಾವಿ. 

ಬಾವಿ ಪಕ್ಕ ಮೂರು ಒಗೆಯುವ ಕಲ್ಲುಗಳು. ಇದು ಮನೆಮಂದಿಯ ಬಟ್ಟೆ ಒಗೆಯಲು ಇದೇ ಜಾಗ. ಬಟ್ಟೆ ಒಗೆಯುವ ಸೊಗಸಿನ ಬಗ್ಗೆ ಮುಂದೆ ಹೇಳುತ್ತೇನೆ. ನನ್ನ ಹೈಸ್ಕೂಲ್ ಸಹಪಾಠಿ ಒಬ್ಬರು ಸಿಕ್ಕಾಪಟ್ಟೆ ಓದಿರುವವರು, ಸರ್ಕಾರೀ ಆಸ್ಪತ್ರೆಯಲ್ಲಿ ದೀರ್ಘಕಾಲ ವೈದ್ಯವೃತ್ತಿ ಮಾಡಿರುವ ಮಹಿಳೆ, ಇವರಿಗೆ ಬಟ್ಟೆ ಒಗೆಯುವುದು ಎಂದರೆ ತುಂಬಾ ಖುಷಿಯಂತೆ!ಅದೇ ರೀತಿ ಮತ್ತೂ ಕೆಲವರು ಗೆಳೆಯರಿದ್ದಾರೆ. ಅವರಿಗೂ ಬಟ್ಟೆ ಒಗೆಯುವುದು ತುಂಬಾ ಇಷ್ಟವಂತೆ. ಇದರ ಬಗ್ಗೆ ಮುಂದೆ ಯಾವಾಗಲಾದರೂ ವಿವರವಾಗಿ ಹೇಳುತ್ತೇನೆ…!

ಬಾವಿ ದಾಟಿದರೆ ಅದರ ಪಕ್ಕದ ಇಟ್ಟಿಗೆಯಲ್ಲಿ ಕಟ್ಟಿದ ಪುಟ್ಟ ಪುಟ್ಟ ಪುಟಾಣಿ ರೂಮುಗಳಂತೆ(ಇದು ನಾಲ್ಕು ಬೈ ನಾಲ್ಕು ಸೈಝಿನವು )ಕಾಣಿಸುವುದು ನಮ್ಮ ಮೂರು ಕಕ್ಕಸು ಮನೆ. ಅಲ್ಲಿ ಆಗಲೇ ಮನೆಮಂದಿಯ ಓಡಾಟ ಶುರು.

ಕಕ್ಕಸುಗಳು ಆಗ ಅಂದರೆ ಒಳಚರಂಡಿ ವ್ಯವಸ್ಥೆ ಬರುವ ಮುನ್ನ ಹೇಗಿದ್ದವು ಎಂದರೆ ಅದೇ ಒಂದು ದೊಡ್ಡ ಕತೆ. ಅದನ್ನು ಪುಟ್ಟದಾಗಿ ಹೇಳಬೇಕು ಅಂದರೆ ಅದಕ್ಕೂ ನಿಮಗೆ ಎಪಿಟೋಮಿಜ್ epitomize ಮಾಡಬೇಕು. ಮನೆಯ ಹಿಂಭಾಗಕ್ಕೆ ಈ ಕಕ್ಕಸು ಇರುತ್ತಿತ್ತು. ಎರಡು ಅಥವಾ ಇನ್ನೂ ಹೆಚ್ಚಿನ ಮೆಟ್ಟಲು ಹತ್ತಿ ಬಾಗಿಲು ಎಳೆಯಬೇಕು. ಒಳಹೊಕ್ಕರೆ ಎರಡೂ ಕಾಲಿನ ಪಾದದ ಆಕಾರದ ಅಚ್ಚು. ಈ ಅಚ್ಚುಗಳ ಮಧ್ಯೆ ಒಂದು ಒಂದು ಒಂದೂವರೆ ಅಡಿ ವ್ಯಾಸದ ಕಿಂಡಿ. ಪಾದದ ಅಚ್ಚಿನ ಮೇಲೆ ಕುಕ್ಕರುಗಾಲಿನಲ್ಲಿ ಕೂತು ಮಲವಿಸರ್ಜನೆ. ಅದು ಕೆಳಗೆ ಇರುವ ಬುಟ್ಟಿಗೆ ಬೀಳುತ್ತಿತ್ತು. ಇವುಗಳ ವಿಲೇವಾರಿಗೆ ಎಂದೇ ಒಂದು ಗುಂಪು, ವಾರಕ್ಕೊಮ್ಮೆ ಇದನ್ನು ಹೊತ್ತು ಊರಾಚೆ ಸಾಗಿಸುವ ವ್ಯವಸ್ಥೆ ಇದ್ದದ್ದು. ಒಳಚರಂಡಿ ಬಂದ ನಂತರ ಈ ವ್ಯವಸ್ಥೆ ನಾಮಾವಶೇಷ ವಾಯಿತು. ಎರಡು ಸಾಲಿನ ಮನೆಯ ಹಿಂಭಾಗದಲ್ಲಿ ಒಂದು ಚಿಕ್ಕ ಓಣಿ ಇದ್ದು ಎರಡೂ ಸಾಲಿನ ಮನೆಗಳ ಕಕ್ಕಸು ಮನೆ ಈ ಓಣಿಗೆ ಅಂಟಿಕೊಂಡಿರುತ್ತಿತ್ತು. ಇದಕ್ಕೆ ಕನ್ ಸರ್ವನ್ಸಿ ರಸ್ತೆ ಎನ್ನುವ ಹೆಸರು ಪ್ರಚಲಿತ ವಿತ್ತು.(ಇದರ ಬಗ್ಗೆ ವಿಸ್ತರವಾದ ಲೇಖನ ಮುಂದೆ ಬರಲಿದೆ!)

ಇಲ್ಲಿಂದ ಮುಂದಕ್ಕೆ ಬಂದರೆ ಬಚ್ಚಲು, ಅದರ ನಂತರ ಅಡುಗೆಮನೆ, ಅದರ ನಂತರ ಎರಡೂ ಕಡೆ ಐದೋ ಆರೋ ರೂಮುಗಳು ಅದನ್ನು ದಾಟಿದರೆ ಒಂದು ದೊಡ್ಡ ಹಾಲು ಅಥವಾ ಊಟದ ಮನೆ. ಇದು ಆದ ನಂತರ ದೊಡ್ಡ ಪಡಸಾಲೆ, ಅದರ ಪಕ್ಕ ವರಾಂಡ.. ಮನೆಯ ಟಾಪೋಗ್ರಾಪಿ ಹೀಗೆ ನಾನು ಕೊನೆಯಿಂದ ಹೇಳಿದೆ. ತಿರುವ ಮುರುವ ಓದಿದರೆ ನಿಮಗೆ ಎಂಟ್ರಿಯಿಂದ ಅಂದರೆ ಮುಂಬಾಗಿಲಿನಿಂದ ಒಂದು ಐಡಿಯಾ ಸಿಗಬಹುದು!

ಈಗ ಕಾಫಿ ಕೇಂದ್ರಕ್ಕೆ ಬನ್ನಿ. ಸೌದೆ ಒಲೆಮೇಲೆ ಒಂದು ದೊಡ್ಡ ಡಬರಿ ಅದರಲ್ಲಿ ಮರಳುತ್ತಿರುವ ನೀರು. ಪಕ್ಕದ ಇನ್ನೊಂದು ಒಲೆಮೇಲೆ ಹಾಲು, ಅದೂ ಕುದಿ ಹತ್ತಿದೆ.ಇನ್ನೇನು ಉಕ್ಕಬೇಕು..

ಅಜ್ಜಿ ಮರಳುತ್ತಿರುವ ನೀರು ಪಾತ್ರೆಯನ್ನು ದೊಡ್ಡ ಬಟ್ಟೆಯ ಸುರುಳಿಯಲ್ಲಿ ಹಿಡಿದು ಪಕ್ಕದಲ್ಲೇ ಇಟ್ಟಿರುವ ಅರ್ಧ ಕಾಲು ಭಾಗ ಕಾಫೀಪುಡಿ ತುಂಬಿರುವ ಪಾತ್ರೆಗೆ ಸುರಿಯುತ್ತಾರೆ. ಇಡೀ ಅರ್ಧ ಮೈಲು ಸುತ್ತ ಕಾಫಿ ಪುಡಿ ಗಮ ಗಮ ಹಬ್ಬುತ್ತೆ. ಹತ್ತು ನಿಮಿಷದ ನಂತರ ಈ ಪಾತ್ರೆಯಿಂದ ಮೇಲಿನ ತಿಳಿ ಬಗ್ಗಿಸುವ ಕಾರ್ಯ ಶುರು. ಅದು ಹೇಗೆ ಅಂದರೆ ಇನ್ನೊಂದು ಡಬರಿ ಮೇಲೆ ತೆಳು ಬಟ್ಟೆ ಹೊದ್ದಿಸಿ ಅದರ ಮೇಲೆ ಕಾಫೀಪುಡಿ ಡಬರಿಯಲ್ಲಿನ ನೀರನ್ನು ನಿಧಾನವಾಗಿ ಸುರಿಯೋದು. ಕಾಫಿ ಪುಡಿ ತೆಳು ಬಟ್ಟೆಯಲ್ಲಿ ಉಳಿದುಕೊಂಡು ಕಾಫಿ ನೀರು ಕೆಳಗಿನ ಡಬರಿ ಗೆ ಸೇರುತ್ತೆ. ಇದೇ ಕಾಫಿ ಡಿಕಾಕ್ಷನ್!

ಕಾಫಿ ಡಿಕಾಕ್ಷನ್ ಒಲೆ ಮೇಲೆ ಇಟ್ಟು ಅದಕ್ಕೆ ಹಾಲು ಸೇರಿಸಿ ಬೆಲ್ಲದ ಉಂಡೆ ಹಾಕಿ, ಅದು ಕರಗಿದರೆ ಕಾಫಿ ರೆಡಿ. ಸಕ್ಕರೆ ಇನ್ನೂ ಅಷ್ಟು ಚಾಲ್ತಿಗೆ ಬಂದಿರದ ಕಾಲ ಅದು.ಕಾಫಿ ಚರಟ ಸೇರಿರುವ ಬಟ್ಟೆ ಹಿಂಡಿ ಹಿಂಡಿ ಅದರಿಂದ ಡಿಕಾಕ್ಷನ್ ಹೊರ ಬರೋದು ತಾನೇ? ಈ 

 ಡಿಕಾಕ್ಷನ್ ಚರಟ ಸೇರಿರುವ ಬಟ್ಟೆ ಅಮ್ಮನ ಅಜ್ಜಿಯ ಸೀರೆಯ ಬಾಳೆಕಾಯಿ ಆಕಾರದವು. ಈಗ ಸೀರೆಯ ಬಾಳೆಕಾಯಿ ಕಥೆಗೆ ಬರಲೇ?

ಮನೆಯ ಹೆಂಗಸರು ಆಗ ಹದಿನೆಂಟು ಮೊಳದ ಸೀರೆ ಉಡುತ್ತಿದ್ದ ಕಾಲ.ಈಗಿನ ಐದು ಮೊಳದ ಸೀರೆಯ ಬಗ್ಗೆ ಯಾರೂ ಕಲ್ಪನೆಯನ್ನೇ ಮಾಡಿರಲಿಲ್ಲ. ಪೆಟ್ಟಿಕೋಟ್ ಹೆಸರು ಗೊತ್ತಿರಲಿಲ್ಲ.

 ಸೊಂಟಕ್ಕೆ ಸೀರೆಯ ಒಂದು ತುದಿ ಮತ್ತು ಒಂದು ಸುತ್ತು ಸುತ್ತಿದನಂತರದ ಅಂಚು ಹಿಡಿದು ಬಿಗಿ ಗಂಟು ಹಾಕುತ್ತಿದ್ದರು. ಸೀರೆ ಸುತ್ತಿಕೊಳ್ಳುತ್ತಾ ನೆರಿಗೆಗಳು ಹೊರಬರುತ್ತಿತ್ತು/ಮೂಡುತ್ತಿತ್ತು.ನಂತರ ಫೈನಲ್ ಅಂದರೆ ನೆರಿಗೆಯ ಮೇಲು ಭಾಗವನ್ನು ಸೀರೆಯ ಗಂಟಿನ ಹೊರಭಾಗದಲ್ಲಿ ಇಟ್ಟು ಅದನ್ನು ಹೊರಮುಖವಾಗಿ ಸಿಕ್ಕಿಸುವುದು. ಇದು ಬಾಳೆಕಾಯಿ ಆಕಾರದಲ್ಲಿ ಮೂಡುತ್ತಿತ್ತು. ಕಾಫಿ ಪುಡಿ ಹಿಂಡಿದ ಬಟ್ಟೆ ಹಾಗೂ ಈ ಸೀರೆ ಸಿಕ್ಕಿಸಿಕೊಂಡದ್ದು ಎರಡೂ ಬಾಳೆಕಾಯಿ ತರಹ ತೋರುತ್ತಿದ್ದವು. ಮಾಧ್ವರ ಮನೆಯಲ್ಲಿ ಕಚ್ಛೆ ಸೀರೆ ಉಡಬೇಕಾದರೆ ಅರ್ಧ ನೆರಿಗೆ ಹಿಡಿದ ನಂತರ ಅದು ಕಚ್ಛೆ ರೂಪ ಪಡೆಯಲು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಿತ್ತು. ಆಗಿನ್ನೂ ಈಗಿನ ಹಾಗೆ ರೆಡಿಮೇಡ್ ಕಚ್ಛೆಗಳು ಹುಟ್ಟಿರಲಿಲ್ಲ!ಬಾಳೆಕಾಯಿ ಕಚ್ಛೆ ಸೀರೆ ಉಟ್ಟಾಗ ಕೊಂಚ ಸಪೂರ ಆಗಿರುತ್ತಿತ್ತು. ಬಾಳೆಕಾಯಿ ಸೀರೆ ಈಗ ನಿಮಗೆ ಕಾಣಲು ಸಿಗದು!ಈಗ ಯಾವುದಾದರೂ ಹಳೇ ಲೋ ಬಜೆಟ್ ಸಿನಿಮಾದಲ್ಲಿ ಹುಡುಕಿದರೆ ನಿಮಗೆ ಈ ಬಾಳೆಕಾಯಿ ಸೀರೆ ಕಾಣಬಹುದೇನೋ. ಅದರೆ ಕಾಫಿ ಶೋಧಿಸಿದ ಬಾಳೆಕಾಯಿ ಖಂಡಿತ ನೀವು ಕಲ್ಪಿಸಿಕೊಳ್ಳಬೇಕಷ್ಟೆ!

ಕಾಫಿ ರೆಡಿ ಆಯ್ತಾ? ಗಂಡಸರು ನೇರ ಅಡುಗೇಮನೆಗೆ ಹಾಜರು, ಅವರ ಹಿಂದೆ ಅವರ ಹೆಂಡರು. ದೊಡ್ಡ ಕಂಚಿನ ಲೋಟ ಅರ್ಧ ಸೇರು ಹಿಡಿಸಬಹುದು ಇದರಲ್ಲಿ. ಕಾಫಿ ಸಮಾರಾಧನೆ ಆಗುತ್ತಿದ್ದ ಹಾಗೆ ಸ್ಕೂಲಿಗೆ ಹೋಗುವ ಮಕ್ಕಳಿಗೆ ರಾಗಿ ಹುರಿಹಿಟ್ಟು, ತಾಳಿಪಿಟ್ಟು, ಡಬರಿ ರೊಟ್ಟಿ… ಹೀಗೆ ಏನಾದರೊಂದು, ಅದರ ನಂತರ ಕಂಚಿನ ಲೋಟದ ತುಂಬಾ ಹಾಲು.

ಮಕ್ಕಳ ತಾಯಂದಿರು ಮಕ್ಕಳನ್ನು ಸ್ಕೂಲಿಗೆ ಕಳಿಸುವಾಗ ಇತ್ತ ಹಿರಿಯ ಹೆಂಗಸರು ತಿಂಡಿಗೆ ತಯಾರಿ ಮಾಡುತ್ತಾರೆ. ಉಪ್ಪಿಟ್ಟು ತುಂಬಾ ಅಪ್ಯಾಯ ಮಾನ್ಯ ತಿಂಡಿ ಆಗ. ರವೆ, ಅವಲಕ್ಕಿ, ಗಂಜಿ,….. ಹೀಗೆ ವರೈಟಿಗಳು. ಮನೆಗೆ ಬಂದವರಿಗೆ ತಟ್ಟೆಯಲ್ಲಿ ಗೋಪುರದ ಹಾಗೆ ಪೇರಿಸಿ ತಿಂಡಿ ಕೊಡುತ್ತಿದ್ದರು. ನಾನು ಬೆಳೆದು ಅನಕೃ ಪುಸ್ತಕ ಓದುವಾಗ ಗೋಪುರದ ತಿಂಡಿ ನೆನಪು ಬರುತ್ತಿತ್ತು. ಅಂದಹಾಗೆ ನಮ್ಮ ಮನೆಯಲ್ಲಿ ಎಲ್ಲರಿಗೂ ಓದುವ ಚಟ. ಅನಕೃ, ತರಾಸು ಪುಸ್ತಕಗಳು,ಕೊರವಂಜಿ ನಗುವನಂದ ಮಾಸಿಕಗಳು, ಹಲವು ವಾರಪತ್ರಿಕೆಗಳು, ಎರಡು ಕನ್ನಡ ಪತ್ರಿಕೆಗಳು … ಮನೆಯಲ್ಲಿ ಎದ್ದು ಕಾಣುತ್ತಿತ್ತು. ಚಿತ್ರಾನ್ನ, ಬಿಸಿಬೇಳೆ ಬಾತ್, ಹುಗ್ಗಿ ಮುಂತಾದ ಒಟ್ಟಿಗೆ ತಯಾರಿಸಬಹುದಾದ ಅಕ್ಕಿಯ ತಿಂಡಿಗಳನ್ನು ಬೆಳಿಗ್ಗೆ ಮಾಡುತ್ತಿರಲಿಲ್ಲ, ಕಾರಣ ಬೆಳಿಗ್ಗೆ ಬೆಳಿಗ್ಗೆ ಅನ್ನ ತಿನ್ನಬಾರದು ಎನ್ನುವ ರೂಲು. ಒಮ್ಮೆ ಅಜ್ಜಿ ಬಳಿ ಅಜ್ಜಿ ಯಾಕೆ ಬೆಳಿಗ್ಗೆ ತಿಂಡಿಗೆ ಚಿತ್ರಾನ್ನ ಮಾಡಲ್ಲ ಅಂತ ಕೇಳಿದ್ದೆ.ಅಜ್ಜಿ ಆಶ್ಚರ್ಯ ದಿಂದ ನನ್ನನ್ನು ನೋಡಿ ಅದು ಮುಸುರೆ ಅಲ್ವಾ ಅಂತ ಕೇಳಿತ್ತು. ನಾನು ಫಾಕ್ಟರಿ ಗೆ ಸೇರಿದ ಮೇಲೇನೆ ಬೆಳಿಗ್ಗೆ ತಿಂಡಿ ಅಂತ ಚಿತ್ರಾನ್ನ, ಬಿಸಿಬೇಳೆಭಾತ್, ಪೊಂಗಲ್ ಮೊದಲಾದ ಅಕ್ಕಿಯ ಪದಾರ್ಥಗಳನ್ನು ಫ್ಯಾಕ್ಟರಿ ಕಾoಟೀನ್ ನಲ್ಲಿ ತಿಂದದ್ದು!ಇಡ್ಲಿ ವಾರಕ್ಕೊಮ್ಮೆ, ಅದರ ಜತೆಗೆ ತೆಂಗಿನ ಚಟ್ನಿ, ಕಡಲೆಕಾಯಿ ಚಟ್ನಿ ಮತ್ತು ಗಸಗಸೆ ಪಾಯಸ. ಇಡ್ಲಿಗೆ ಸಾಂಬಾರ್ ಎನ್ನುವುದು ಹೋಟಲಲ್ಲಿ ನಂತರ ಅಂಟಿದ್ದು!ದೋಸೆ, ಪೂರಿ ಚಪಾತಿ ಮೊದಲಾದ ಸಮಯ ಹಿಡಿಯುವ ತಿಂಡಿ ಬೇಕು ಅಂದರೆ ಅವು ರಜಾದಿವಸ ಕಾಯಬೇಕು, ಕಾರಣ ಅವಕ್ಕೆ ಹೆಚ್ಚು ಸಮಯ ಬೇಕು. ಪರೋಟ ರೋಟಿ ರುಮಾಲೆ ರೋಟಿ….ಮೊದಲಾದವುಗಳ ಹೆಸರು ಇನ್ನೂ ಕೇಳಿರಲಿಲ್ಲ ನಾವು!ಗೋಬಿ ಪನ್ನೀರ್ ಇವನ್ನೆಲ್ಲಾ ಕೇಳಿದ್ದು ನೋಡಿದ್ದು ನಾವು ಬೆಳೆದು ದೊಡ್ಡವರಾದಮೇಲೆ!ಈರುಳ್ಳಿ ಟೊಮೊಟೊ ಬೆಳ್ಳುಳ್ಳಿ ಇವೆಲ್ಲಾ ಪರಿಚಯ ಆಗಿದ್ದು ಕೂಡ ಬೆಳೆದು ದೊಡ್ಡವರಾದ ಮೇಲೆ.

ಇನ್ನು ಊಟದ ಮೊದಲು ಐದಾರು ಸಲ ಕಾಫಿ ಸಮಾರಾಧನೆ ಆಗುತ್ತಿತ್ತು. ಗಂಡಸರು ಕಚೇರಿಗೆ ಕೆಲಸಕ್ಕೆ ಹೋಗುವ ಮುನ್ನ ಕಾರಿಯರ್ ನಲ್ಲಿ ಊಟ ತುಂಬಿಸಿಕೊಂಡು ಹೋಗುತ್ತಿದ್ದರು. ಕೆಲವರು ಮನೆಯಲ್ಲಿಯೇ ಬಿಸಿ ಬಿಸಿ ಅನ್ನದ ಮೇಲೆ ಇನ್ನೂ ಪೂರ್ತಿ ಆಗಿಲ್ಲದ ಹುಳಿ, (ಇದಕ್ಕೆ ಸಾಂಬಾರ್ ಅನ್ನುತ್ತಾರೆ ಅಂತ ಎಷ್ಟೋ ವರ್ಷದ ನಂತರ ತಿಳಿಯಿತು )ಅಂದರೆ ಬೇಳೆ ಕಟ್ಟು ಸುರಿದುಕೊಂಡು ಉಫ್ ಉಫ್ ಅಂತ ಊದಿ ಗಬಾ ಗಬಾ ತಿಂದು ಆಫೀಸಿಗೆ ಓಡುತ್ತಿದ್ದರು.

ಒಟ್ಟಾರೆ ಸಂಸಾರದಲ್ಲಿ ಕೆಲಸ ಕಾರ್ಯಗಳನ್ನು ಹೇಗೆ ಹಂಚುಕೊಳ್ಳುತ್ತಿದ್ದರು, ಅದರ ಉಸ್ತುವಾರಿ ಹೇಗೆ ನಡೀತಿತ್ತು, ಮನೆಗೆ ಸೊಸೆ ಹೊಸದಾಗಿ ಎಂಟ್ರಿ ಆದಾಗ ಅದು ಹೇಗೆ ಸಂಸಾರಕ್ಕೆ ಹೊಂದಿಕೊಳ್ಳುತ್ತಿದ್ದಳು…. ಇವೆಲ್ಲಾ ಒಂದು Phd ವಿಷಯ. ಮುಂದೆ ಎಂದಾದರೂ ಇದರ ಬಗ್ಗೆ ಹೇಳುತ್ತೇನೆ.ಮಧ್ಯಾಹ್ನದ ಊಟದ ವಿಶೇಷವನ್ನು ಮತ್ತೊಮ್ಮೆ ನೀವು ಸಿಕ್ಕಾಗ ಹೇಳುತ್ತೇನೆ. ಯಾಕೆ ಅಂದರೆ ಅದು ತುಂಬಾ ತುಂಬಾ ದೀರ್ಘ ವಾದದ್ದು!ಈಗ ಸೀದಾ ಸಂಜೆಗೆ ಹಾರುತ್ತೇನೆ.

ಸಂಜೆ ಅಂದರೆ ಹಕ್ಕಿಗಳು ಗೂಡು ಸೇರುವ ಸಮಯ. ಸಮಯಕ್ಕೆ ಸರಿಯಾಗಿ ಮನೆಗೆ ಸೇರಿಕೊಂಡರೆ ಅದು ಎಲ್ಲರಿಗೂ ನೆಮ್ಮದಿ. ಕೊಂಚ ತಡ ಆದರೂ ದೊಡ್ಡವರ ತಳಮಳ ನೋಡುವ ಹಾಗಿಲ್ಲ.ಅದರಲ್ಲೂ ಹೆಣ್ಣುಮಕ್ಕಳು ಬರುವುದು ತಡ ಆದರೆ ಮನೆಯ ಗಂಡಸರು ಕಾತರದಿಂದ ಕಾಯುವರು. 

ಸಂಜೆ ಮಕ್ಕಳಿಗೆ ಕೈ ತುತ್ತಿನ ಟಿಫಿನ್.ಚಕ್ಕಲಿ ಕೋಡುಬಳೆ ಬೋಂಡಾ ಬಜ್ಜಿ ಆಂಬೊಡೆ ಗುಲಪಾವಟೆ ಚೌ ಚೌ ತರಹದ ತಿನಿಸು ಮತ್ತು ಜತೆಗೆ ಲೋಟದ ಭರ್ತಿ ಹಾಲು. ಮಕ್ಕಳು ಸಂಜೆ ಆಟ ಮುಗಿಸಿ ಬಂದ ನಂತರ ಅವರಿಗೆ ಸಂಧ್ಯಾವಂದನೆ, ದೇವರ ಶ್ಲೋಕಗಳು, ರಾಮಾಯಣ ಮಹಾಭಾರತದ ಕತೆಗಳು, ಅಂದಿನ ಪಾಠ ನಾಳಿನ ಪಾಠದ ಬಗ್ಗೆ…. ಇದು ಮುಖ್ಯವಾಗಿ ಮನೆಯ ಹಿರಿಯರ ಕೆಲಸ. ದೇವರಿಗೆ ಸಂಬಂಧ ಪಟ್ಟವು ಎಂದರೆ ತಾತ ಅಜ್ಜಿ ದೊಡ್ಡಪ್ಪ ದೊಡ್ಡಮ್ಮ ಇವರದ್ದು. ಶಾಲೆ ಪಾಠಗಳನ್ನು ಚಿಕ್ಕ ತರಗತಿ ಅವರಿಗೆ ದೊಡ್ಡ ತರಗತಿಯವರು ಹೇಳಿಕೊಡುವುದು. ದೊಡ್ಡ ತರಗತಿ ಅವರಿಗೆ ಆಗಲೇ ಕಾಲೇಜಿಗೆ ಹೋಗುತ್ತಿದ್ದ ಅಥವಾ ಕಾಲೇಜು ಮುಗಿಸಿದ್ದ ಹಿರಿಯ ಅಣ್ಣನೋ ಅಕ್ಕನೋ ಜವಾಬ್ದಾರಿ ಹೊರುತ್ತಿದ್ದರು.ತಮಾಷೆ ಎಂದರೆ ಯಾರೂ ಯಾವ ಪರೀಕ್ಷೆಯಲ್ಲಿಯೂ ನಪಾಸು ಆಗುತ್ತಿರಲಿಲ್ಲ!ಫೇಲು ಅನ್ನುವ ಪದ ಗೊತ್ತಿರಲಿಲ್ಲ.

ಮನೆಯ ಹಿರಿಯ ಸೊಸೆ ಮತ್ತು ಅಜ್ಜಿ ಮಿಕ್ಕ ಹೆಂಗಸರಿಗೆ ಸಲಹೆ ಸೂಚನೆ ನೀಡುತ್ತಾ ಅಡುಗೆ ಕೆಲಸಕ್ಕೆ ನಿರ್ದೇಶನ ಮಾಡುತ್ತಾರೆ. ಕಾಲದ ಪರಿವೆ ಇಲ್ಲದೇ ಮನೆಗೆ ಜನ ಬರುತ್ತಿದ್ದರು. ಮನೆಯಲ್ಲಿ ಆಯುರ್ವೇದದ ಅಲ್ಪ ಸ್ವಲ್ಪ ಚಿಕಿತ್ಸೆ ಗೊತ್ತಿದ್ದ ದೊಡ್ಡಪ್ಪ, ಅಜ್ಜಿ, ತಾತ ಇವರು ತಜ್ಞರು! 

ಅಜ್ಜಿಯಂತೂ ಮುಟ್ಟು ತಡವಾದ ಹೆಣ್ಣುಗಳಿಗೆ, ಮತ್ತೇನೋ ಸಮಸ್ಯೆ ಇರುವವರಿಗೆ ಅದೇನೋ ಕಷಾಯ ಮಾಡಿಕೊಡುವರು.ಮನೆಯಲ್ಲಿ ಯಾವಾಗಲೂ ಸೊಗದೆ ಬೇರು, ಬೇವಿನ ಎಣ್ಣೆ, ಕುಪ್ಪಿ ಮಾತ್ರೆ, ಅಳಲೆ ಕಾಯಿ, ತ್ರಿಫಲ ಚೂರ್ಣ… ಮೊದಲಾದವು ಇದ್ದೇ ಇರುತ್ತಿತ್ತು. ಮಕ್ಕಳ ಸಣ್ಣಪುಟ್ಟ ಖಾಹಿಲೆಗಳಿಗೆ ನೂರಕ್ಕೆ ನೂರು ಮನೆ ವೈದ್ಯವೇ. ಓಮ್ ಕಾಳಿನ ಕುದಿಸಿದ ನೀರು,ತುಳಸಿ ರಸ ಮೊದಲಾದವುಗಳು ಮನೆಯಲ್ಲಿ ರೆಡಿ ಸ್ಟಾಕು.

 ಕೆಲವು ಈಗಲೂ ಕಣ್ಣಿಗೆ ಕಟ್ಟಿದ ಹಾಗಿರುವ ಅಜ್ಜಿಯ ಚಿಕಿತ್ಸೆ ಎಂದರೆ.. ಮಕ್ಕಳಿಗೆ ಚಿಟಿಕೆ ಹಾಕುವುದು. ಫಿಟ್ಸ್ ಬಂದ ಮತ್ತು ಚಟುವಟಿಕೆ ಇಲ್ಲದ ಆರೆಂಟು ತಿಂಗಳಿನ ಕೂಸುಗಳನ್ನು ಅಜ್ಜಿಯ ಬಳಿ ಕರೆತರುತ್ತಿದ್ದರು. ಅಜ್ಜಿ ಆ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಟ್ಟುತ್ತಾ ಸಮಾಧಾನ ಮಾಡುವಳು. ಪಕ್ಕದಲ್ಲಿ ಒಂದು ಎಣ್ಣೆಯ ದೀಪ. ಅದರ ಪಕ್ಕ ಬಳೆಯ ಚೂರುಗಳು.ಅಜ್ಜಿ ದೀಪಕ್ಕೆ ಬಳೆ ಚೂರು ಹಿಡಿದು ಕಾಯಿಸುವರು. ಅದು ಬಿಸಿಯಾದ ಹಾಗೆ ಅದನ್ನು ಮಗುವಿನ ಕಣ್ಣು ಕಿವಿಯ ನಡುವಿನ (ಅಂದರೆ ಮುದ್ರೆ ಹಾಕುವ )ಜಾಗಕ್ಕೆ ಒತ್ತುವಳು. ಬಿಸಿಗೆ ಮಗು ಕಿಟಾರನೆ ಕಿರುಚಿ ಅಳುತ್ತಿತ್ತಾ? ನಂತರದ ಎರಡು ಮೂರು ದಿವಸದಲ್ಲಿ ಮಗು ಮತ್ತೆ ಲವಲವಿಕೆಯಿಂದ ಆಡುವುದು. ಈ ರೀತಿಯ ಅಸಂಖ್ಯೆ ಚಿಕಿತ್ಸೆ ಅಜ್ಜಿ ನೀಡುತ್ತಿತ್ತು. ಮತ್ತೊಂದು ಚಿಕಿತ್ಸೆ ಎಂದರೆ ಮಗು ಎರಡು ಮೂರು ದಿವಸ ಕಕ್ಕ ಮಾಡದೇ ಒದ್ದಾಡುವಾಗ ಅಜ್ಜಿ ಅದಕ್ಕೆ ಚಿಕಿತ್ಸೆ ನೀಡುತ್ತಿತ್ತು. ತೊಡೆಯ ಮೇಲೆ ಮಗುವನ್ನು ಮಲಗಿಸಿ ಹೊಟ್ಟೆ ಸವರುತ್ತ ವಿಳೆದೆಲೆ ಮೇಲೆ ಎಣ್ಣೆ ಸವರಿ ಕಾಯಿಸಿ ಹೊಟ್ಟೆ ಮೇಲೆ ಇಡುವುದು ಮೊದಲ ಹಂತ. ಇದರಿಂದ ಕಟ್ಟಿರುವ ಹೊಟ್ಟೆ ಸರಿಹೋಗದಿದ್ದರೆ ಮಗುವಿನ ಗುದ ದ್ವಾರದಲ್ಲಿ ಸೋಪು ಇಟ್ಟು ಕಕ್ಕ ಮಾಡಿಸುವುದು. ಇಂತಹ ಅದೆಷ್ಟೋ ಚಿಕಿತ್ಸೆ ಮನೆಯಲ್ಲಿನ ಹಿರಿಯರು ಕಲಿತಿದ್ದರು.

ವಾಯು ನಾರಾಯಣ ಸೊಪ್ಪು, ಬೇಧಿ ಸೊಪ್ಪು.. ಮೊದಲಾದವು ಹಿತ್ತಲಲ್ಲಿ ಬೆಳೆಯುತ್ತಿತ್ತು. ಪ್ರತಿ ದ್ವಾದಶಿ ದಿವಸ ಅಗಸೆ ಸೊಪ್ಪಿನ ಪಲ್ಯ, ಕೆಂಪಕ್ಕಿ ಅನ್ನದ ಗಂಜಿ ಊಟಕ್ಕೆ ಇರಲೇ ಬೇಕು..

ಗರ್ಭಿಣಿಯರಿಗೆ, ಹೆರಿಗೆ ಆದವರಿಗೆ ಚಿಕಿತ್ಸೆ ಮತ್ತು ಔಷಧ ತಯಾರಿ ಹಾಗೂ ವಿತರಣೆ ಮತ್ತೊಂದು ವಿಶೇಷ. ಸೌಭಾಗ್ಯ ಶುಂಠಿ, ಜೀರಿಗೆ ಲೇಹ್ಯ ಮೊದಲಾದ ರುಚಿರುಚಿಯ ಲೇಹ್ಯಗಳು ಯಾವಾಗಲೂ ಮನೆಯಲ್ಲಿರುತ್ತಿತ್ತು.ಹೊಟ್ಟೆ ಕೆಟ್ಟು ಸುಮಾರು ಜನ ಬರುತ್ತಿದ್ದರು. ದೊಡ್ಡ ತಂಬಿಗೆಯಲ್ಲಿ ಕೆಂಡ ತುಂಬಿ ಅದನ್ನು ದಾಟಿಸುತ್ತಿದ್ದರು. ನಂತರ ಚೆಂಬು ಅಗಲದ ನೀರು ತುಂಬಿದ ತಟ್ಟೆಯಲ್ಲಿ ಬೋರಲು ಬೀಳುತ್ತಿತ್ತು. ಅದು ತಟ್ಟೆಗೆ ಬೆಸುಗೆ ಹಾಕಿದ ಹಾಗೆ ಅಂಟಿಕೊಂಡು ಎರಡು ಮೂರು ದಿವಸದ ನಂತರ ಬಿಡುತ್ತಿತ್ತು.

ರಾತ್ರಿ ಊಟಕ್ಕೆ ಅನ್ನ, ಸಾರು, ಬೆಳಿಗ್ಗೆ ಮಿಕ್ಕಿದ ಹುಳಿ,ಪಲ್ಯ ಮಜ್ಜಿಗೆ ಎಂಟರ ಸುಮಾರಿಗೆ. ಊಟದ ನಡುವೆ ಮಾತು ಕೂಡದು ಮತ್ತು ತಟ್ಟೆಗೆ ಬಡಿಸಿದ ಯಾವುದನ್ನೂ ಚೆಲ್ಲಬಾರದು.. ಎನ್ನುವ ನಿಯಮ. ಒಂದೊಂದು ಅಗಳೂ ಒಂದು ಕೋಟಿ ಲಿಂಗಕ್ಕೆ ಸಮಾನ, ಅದರಿಂದ ಏನನ್ನೂ ತಟ್ಟೆಯಲ್ಲಿ ಬಿಡಬಾರದು ಎನ್ನುವ ಪಾಠ ಬುದ್ಧಿ ತಿಳಿಯುವ ಮೊದಲೇ ಮೆದುಳಿನಲ್ಲಿ ಆಳವಾಗಿ ಕೂತಿರುತ್ತಿತ್ತು. ರಾತ್ರಿ ಊಟದ ನಂತರ ಮತ್ತೆ ಲೋಟ ಹಾಲು. ಒಂಬತ್ತಕ್ಕೆ ಹುಡುಗರು ಸಾಲಾಗಿ ಒಂದುಕಡೆ ಮಲಗಿದರೆ ಎದುರು ಸಾಲಿನಲ್ಲಿ ಹುಡುಗಿಯರು ಅದೇ ರೀತಿ ಕಾಲು ಗೋಡೆಯೆಡೆಗೆ ಮಾಡಿ ಮಲಗುವುದು.

ಸಂಸಾರದ ಕಷ್ಟ ಸುಖವನ್ನು ಎಲ್ಲರೂ ಹಂಚಿಕೊಂಡು ಬದುಕು ನಡೆಸುವರು. ಸಹಜವಾಗಿ ಇಂತಹ ಪರಿಸರದಲ್ಲಿ ಬೆಳೆದ ಮಕ್ಕಳು ಒಂದು ರೀತಿ ಮಾನಸಿಕವಾಗಿ ದೈಹಿಕವಾಗಿ ಗಟ್ಟಿ ಜೀವದವರು. ಸುಖ ದುಃಖ ಗಳನ್ನು ಸಮಚಿತ್ತದಿಂದ ನೋಡುವ ಮನೋಸ್ಥೈರ್ಯ ಇರುವವರು.ಜತೆಗೆ ಜೀವನವನ್ನು ಸಂಪೂರ್ಣವಾಗಿ ಅದು ಬಂದಹಾಗೆಯೇ ಸ್ವೀಕರಿಸುವ ಸ್ಥಿತಪ್ರಜ್ಞರು.

ಒಂದಾನೊಂದು ಕಾಲದಲ್ಲಿ ಏಸೊಂದು ಸುಖವಿತ್ತು.. ಅಂತೇನೋ ಒಂದು ಹಾಡಿದೆಯಂತೆ. ಅಂತಹ ಕಾಲವನ್ನು ನಮ್ಮ ಪೀಳಿಗೆ ಕಂಡಿತ್ತು..!

ಕೃಪೆ : ಅಪರಂಜಿ 

‍ಲೇಖಕರು Admin

11 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading