-ನಾಗರಾಜ ಮಗ್ಗದ
ದೈನೇಸಿಯೊಬ್ಬನ ಪಶ್ಚಾತ್ತಾಪದ ನಿವೇದನೆ
ಈ ಸಲ ನಿನ್ನ ಕಪ್ಪಿಟ್ಟ ಮುಖ ನೋಡಿದಾಗ
ಕರುಳು ಚುರುಕ್ಕೆಂದಿತು
ಅಲ್ಲಿ,
ಬದುಕು ಮುದ್ರೆಯೊತ್ತಿದ
ನಿಸ್ತೇಜ ಛಾಯೆಗೆ
ಕಾರಣಗಳನ್ನು ಹುಡುಕುತ್ತಿದ್ದೇನೆ…
ನೋವುಗಳನ್ನುಂಡ ಜೀವ
ನಗೆಯ ಕೂಸನ್ನು ಹೆರುವ ಪ್ರತೀ ಘಳಿಗೆಯಲ್ಲೂ,
ನಿನ್ನ ಕೈ ತಪ್ಪಿದ ತಪ್ಪುಗಳನ್ನೇ
ಇಟ್ಟುಕೊಂಡು ಹಗೆ ಸಾಧಿಸುವಾಗ
ನಾನು ಹೃದಯಶೂನ್ಯನಾಗುತ್ತೇನೆ.
ಏಕಾಂತದ ಗಡಿ ದಾಟಿ ಬಂದ
ನಿನ್ನ ಮೌನದ ಉತ್ತರಗಳ ತಿವಿತಕ್ಕೆ,
ಘಾಸಿಗೊಂಡ ಹೃದಯ ಅನ್ಯಾಯವಾಗಿ
ಅಪರಾಧಿಯಾಗುತ್ತದೆ.
ನಿನ್ನ ಈ ಸ್ಥಿತಿಗೆ ಕಾರಣಗಳ ಹುಡುಕಿ ಹುಡುಕಿ
ಸುಸ್ತಾಗಿ ನಿದ್ರೆ ಹೋದವನಿಗೆ
ನೀನೇ ಬಂದು ಚಾದರ ಹೊದಿಸಿದ್ದು
ಮುಂಜಾನೆ ಗೊತ್ತಾಗುತ್ತದೆ;
ಕಣ್ಣ ಹನಿಗಳು ನಿನ್ನ ಪಾದಗಳ
ಒದ್ದೆಯಾಗಿಸುತ್ತವೆ.
ಹೂವಿನ ಪ್ರೀತಿಯುಂಡ ಚಿಟ್ಟೆಗಳಿಗೆ
ಕೃತಜ್ಞತೆಯಿಲ್ಲ.
ನಗುವಿನ ಸಮಾಧಿ ಕಟ್ಟಲು ಹೆಣಗಾಡುತ್ತಿವೆ!
ನಂಬುತ್ತೀಯ ನೀನು ಇನ್ನೂ
ಕರುಳ ಕೊಯ್ಯುವ ಕೊಲೆಗಡುಕರ ಜಾತಿಯನ್ನು
ಏಕೆಂದರೆ
ನಂಬಿಕೆ, ನಗು, ಪ್ರೀತಿ ನಿನ್ನೊಡನೆ
ಜನ್ಮ ತಾಳಿದವು
ಅವರಂತೆ ನಾನೂ ನಿನ್ನನ್ನು ಮೂದಲಿಸಿದ್ದೇನೆ,
ಕೊಲ್ಲಲು ಪ್ರಯತ್ನಿಸಿದ್ದೇನೆ
ಆಗಲಾದರೂ ನನ್ನ ಮೇಲೆ ಬೆಂಕಿ ಕೆಂಡಗಳ
ಎಸೆಯಬಹುದಿತ್ತಲ್ಲವೇ
ಎದೆಗೆ ಚೂರಿ ಚುಚ್ಚಿಕೊಳ್ಳುವಾಗ
ತಡೆದು ನಿಲ್ಲಿಸಬಾರದಿತ್ತು ನೀನು
ನಿನ್ನ ಕಪ್ಪಿಟ್ಟ ಮುಖ ಮೊದಲ ಬಾರಿಗೆ ಕಂಡಿದ್ದೇನೆ.
ಕ್ಷಮಿಸಿ ಬಿಡು ,
ಆ ಘಾತುಕರ ಗುಂಪಿಗೆ ನನ್ನ ಸೇರಿಸಬೇಡ.






0 Comments