ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು…

ಮೂಲ : ಯಾನ್ ಕ್ಯಾಪ್ಲಿನ್‌ಸ್ಕಿ

ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್

ಪೌರಸ್ತ್ಯ ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರುವ ಯುರೋಪಿಯನ್ ಮಾನವತಾವಾದಿಯೊಬ್ಬ ಬರೆದ ಕವನಗಳೆಂದು ಯಾನ್ ಕ್ಯಾಪ್ಲಿನ್‌ಸ್ಕಿಯವರ ಕಾವ್ಯದ ಬಗ್ಗೆ ಹೇಳಲಾಗಿದೆ. ಒಬ್ಬ ಬಂಡಾಯ ಕವಿಯಾಗಿ, ಅವರ ಕಾವ್ಯವು “ಜಗತ್ತಿನ ಪ್ರೀತಿಯ ಅಭಿವ್ಯಕ್ತಿಯ ಭಾಗವಾಗಿದೆ” ಹಾಗೂ “ನಾನು ಮೆಚ್ಚಿದ ಜನರ ಮತ್ತು ವಸ್ತುಗಳ ಒಂದು ದೀರ್ಘ ಕಾವ್ಯಾತ್ಮಕ ಪಟ್ಟಿ”ಯೆಂದು ಅವರ ಕಾವ್ಯದ ಬಗ್ಗೆ ಅವರೇ ಹೇಳಿರುವರು.

2021ರಲ್ಲಿ ನಿಧನರಾದ ಯಾನ್ ಕ್ಯಾಪ್ಲಿನ್‌ಸ್ಕಿಯವರು ಕಳೆದ ಐವತ್ತು ವರ್ಷಗಳ ಕಾಲ ಎಸ್ಟೋನಿಯಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖ ವ್ಯಕ್ತಿಯಾಗಿದ್ದರು. ಎಸ್ಟೋನಿಯಾದ ಟಾರ್ಟು ನಗರದಲ್ಲಿ 1941ರಲ್ಲಿ ಹುಟ್ಟಿದ ಯಾನ್ ಕ್ಯಾಪ್ಲಿನ್‌ಸ್ಕಿಯವರು ಟಾರ್ಟು ಯೂನಿವರ್ಸಿಟಿಯಲ್ಲಿ ರೊಮಾನ್ಸ್ ಭಾಷೆ ಹಾಗೂ ಭಾಷಾಶಾಸ್ತ್ರ ವಿಷಯದಲ್ಲಿ ಸ್ನಾತಕ ಪದವಿ ಪಡೆದರು. 1965 ರಿಂದ ಇವರು ಕವನಗಳು ಹಾಗೂ ಪ್ರಬಂಧಗಳನ್ನು ಪ್ರಕಟಿಸತೊಡಗಿದರು.

ಕವಿಯಾಗಿ, ಕ್ಯಾಪ್ಲಿನ್‌ಸ್ಕಿಯವರು ನಿಯತರೂಢಿಗಳನ್ನು ಬದಿಗಿಟ್ಟು, ನಿರಂತರ ಬದಲಾವಣೆಯಿಂದ ಕಾವ್ಯದ ಮೂಲ ಹರಿವಿನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರು. ಅವರು ಲಯ ಮತ್ತು ಪ್ರಾಸದೊಂದಿಗೆ ಗೀತಗಳಂತಹ ಕವನಗಳನ್ನು ಬರೆದರು. ಪದಗಳನ್ನು ಅಲ್ಪವಾಗಿ ಬಳಸಿಯೂ ಅಕ್ಷರಗಳ ಗೋಪುರಗಳನ್ನು ಕಟ್ಟುತ್ತಿದ್ದರು ಹಾಗೂ ಭವಿಷ್ಯಸೂಚಕ ದೀರ್ಘ ಕವನಗಳನ್ನೂ ಬರೆದರು. ಕ್ಯಾಪ್ಲಿನ್‌ಸ್ಕಿಯವರು ರೂಪಕಗಳ ಉಲ್ಲೇಖವಿಲ್ಲದ ಆಡುಮಾತಿನ ಭಾಷೆಯಲ್ಲಿ ಕವನ ಬರೆಯುವ ಮೂಲಕ ದೈನಂದಿನ ಜೀವನದ ಸರಳವಾದ ವಿಷಯಗಳನ್ನು ಕಾವ್ಯಾತ್ಮಕಗೊಳಿಸಿದರು.

ದೀರ್ಘಕಾಲದಿಂದ ಸೆಲ್ಟಿಕ್ ಪುರಾಣಗಳು ಮತ್ತು ಭಾಷೆಗಳು, ನೇಟಿವ್ ಅಮೆರಿಕನ್ನರು, ಮತ್ತು ಶಾಸ್ತ್ರೀಯ ಚೈನೀಸ್ ತತ್ವಶಾಸ್ತ್ರ ಮತ್ತು ಕಾವ್ಯಗಳಲ್ಲಿ ಆಸಕ್ತಿ ಹೊಂದಿದ್ದ ಕ್ಯಾಪ್ಲಿನ್‌ಸ್ಕಿಯವರ ಕಾವ್ಯದಲ್ಲಿ ಬೌದ್ಧಧರ್ಮದ ಪ್ರಭಾವ ಹೆಚ್ಚಾಗಿ ಕಂಡುಬರುತ್ತದೆ, ಹಾಗೂ ಈ ಮೂಲಕ ಅವರು ಎಸ್ಟೋನಿಯನ್ ಕಾವ್ಯದಲ್ಲಿ ಪೌರಸ್ತ್ಯ ಮಾರ್ಗವನ್ನು ಪರಿಚಯಿಸಿದರು.

ಎಸ್ಟೋನಿಯಾದಲ್ಲಿ ಕ್ಯಾಪ್ಲಿನ್‌ಸ್ಕಿಯವರನ್ನು “40 ಬುದ್ಧಿಜೀವಿಗಳ ಪತ್ರ”ದ ಒಬ್ಬ ಲೇಖಕ ಹಾಗೂ ಪ್ರವರ್ತಕರಲ್ಲಿ ಒಬ್ಬರು ಎಂದೂ ಗುರುತಿಸುತ್ತಾರೆ. “40 ಬುದ್ಧಿಜೀವಿಗಳ ಪತ್ರ”ವೆಂಬುದು 1980 ರಲ್ಲಿ ಎಸ್ಟೋನಿಯಾದ 40 ಪ್ರಸಿದ್ಧ ಬುದ್ಧಿಜೀವಿಗಳು ಆಗಿನ ಆಕ್ರಮಿತ ಎಸ್ಟೋನಿಯಾದಲ್ಲಿ ಸೋವಿಯತ್ ಅಧಿಕಾರಿಗಳ ವರ್ತನೆಯನ್ನು ಪ್ರತಿಭಟಿಸಿ ಸಹಿ ಮಾಡಿದ ಸಾರ್ವಜನಿಕ ಪತ್ರ.

1991 ರಲ್ಲಿ ಎಸ್ಟೋನಿಯಾ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯವನ್ನು ಮರಳಿ ಪಡೆದಾಗ, ಕ್ಯಾಪ್ಲಿನ್‌ಸ್ಕಿಯವರು ಕೆಲ ಕಾಲದ ಮಟ್ಟಿಗೆ, 1992 ರಿಂದ 1995 ರವರೆಗೆ, ವೃತ್ತಿಪರ ರಾಜಕಾರಣಿಯಾಗಿ ಎಸ್ಟೋನಿಯನ್ ಸಂಸತ್ತಿನ ಸದಸ್ಯರಾಗಿದ್ದರು. ಅವರು ‘ಸೆಂಟರ್ ಪಾರ್ಟಿ’ಯ ಸದಸ್ಯರಾಗಿ ಆಯ್ಕೆಯಾದರೂ, ಬೇಗನೆ ಪಕ್ಷವನ್ನು ತೊರೆದು ಸ್ವತಂತ್ರ ಪ್ರತಿನಿಧಿಯಾದರು. 2004 ರಲ್ಲಿ ಅವರು ಎಸ್ಟೋನಿಯನ್ ಸೋಶಿಯಲ್ ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದರು ಮತ್ತು 2005 ರಲ್ಲಿ ಟಾರ್ಟು ಸಿಟಿ ಕೌನ್ಸಿಲ್‌ನ ಸದಸ್ಯರಾಗಿ ಆಯ್ಕೆಯಾದರು.

ಕಳೆದ 30 ವರ್ಷಗಳಲ್ಲಿ, ಕ್ಯಾಪ್ಲಿನ್‌ಸ್ಕಿಯವರು ತಮ್ಮ ಸ್ವಂತ ಅಭಿಪ್ರಾಯಗಳಿಗಾಗಿ ಹಾಗೂ ಬಹಿರಂಗ ಮತ್ತು ಪ್ರಾಮಾಣಿಕ ದೃಷ್ಟಿಕೋನಗಳಿಗಾಗಿ ಹೆಸರುವಾಸಿಯಾಗಿದ್ದರು. ಎಸ್ಟೋನಿಯನ್ ಪ್ರಚಾರ ಮಾಧ್ಯಮಗಳಲ್ಲಿ ಅವರ ಲೇಖನಗಳು ಹಾಗೂ ಸಂದರ್ಶನಗಳು ಯಾವಾಗಲೂ ಸಾರ್ವಜನಿಕ ಗಮನವನ್ನು ಸೆಳೆಯುತ್ತಿದ್ದವು.

ಎಸ್ಟೋನಿಯನ್ ಭಾಷೆಯಲ್ಲಲ್ಲದೇ, ಕ್ಯಾಪ್ಲಿನ್‌ಸ್ಕಿಯವರು ಇಂಗ್ಲಿಷ್, ಫಿನ್ನಿಷ್, ಹಾಗೂ ರಷ್ಯನ್ ಭಾಷೆಗಳಲ್ಲೂ ಕವನಗಳು ಬರೆದರು. ಕವನಗಳ ಜತೆಜತೆಯಾಗಿ ಪ್ರಬಂಧಗಳು, ನಾಟಕಗಳು, ಮಕ್ಕಳ ಸಾಹಿತ್ಯ, ಹಾಗೂ ಒಂದು ಕಾದಂಬರಿಯನ್ನು ಕೂಡ ಬರೆದ ಕ್ಯಾಪ್ಲಿನ್‌ಸ್ಕಿಯವರ ಹೆಸರಿನಲ್ಲಿ ಸುಮಾರು ನಲವತ್ತು ಕೃತಿಗಳಿವೆ. ಅವರ ತಮ್ಮ ಪ್ರಬಂಧಗಳಲ್ಲಿ ಪರಿಸರ ಸಮಸ್ಯೆಗಳು, ಭಾಷೆಯ ತತ್ತ್ವಶಾಸ್ತ್ರ, ಶಾಸ್ತ್ರೀಯ ಚೈನೀಸ್ ಕವಿತೆಗಳು, ತತ್ವಶಾಸ್ತ್ರ, ಬೌದ್ಧಧರ್ಮ ಮತ್ತು ಎಸ್ಟೋನಿಯನ್ ರಾಷ್ಟ್ರೀಯತೆಗಳ ಬಗ್ಗೆ ಬರೆದಿದ್ದಾರೆ. 2007 ರಲ್ಲಿ ಕ್ಯಾಪ್ಲಿನ್‌ಸ್ಕಿಯವರ ಜೀವನಾಧಾರಿತ ಕಾದಂಬರಿ “ಸೀಸಮ ಯೋಗಿ” (Seesama jõgi – The Same River) ಪ್ರಕಟವಾಯಿತು. ಪೂರ್ಣಗೊಳ್ಳಲು ಹನ್ನೆರಡು ವರ್ಷಗಳನ್ನು ತೆಗೆದುಕೊಂಡ ಈ ಕಾದಂಬರಿಯು 1960ರ ದಶಕದ ಮಧ್ಯಕಾಲದ ಒಂದು ಬೇಸಿಗೆಯಲ್ಲಿ ನಡೆದ ಅತೀಂದ್ರಿಯವಾದ, ಬೌದ್ಧಿಕವಾಗಿ ಆಳವಾದ ಕಥೆಯಾಗಿದೆ.

ಹಲವಾರು ಸಾಹಿತ್ಯ ಪುರಸ್ಕಾರಗಳಿಗೆ ಪಾತ್ರರಾದ ಕ್ಯಾಪ್ಲಿನ್‌ಸ್ಕಿಯವರಿಗೆ 2016ರಲ್ಲಿ ‘ಯುರೋಪಿಯನ್ ಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು ಮತ್ತು ಅದೇ ವರ್ಷ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗಾಗಿ ಅವರ ಹೆಸರನ್ನು ನೇಮಿಸಲಾಯಿತು.

ಇಂಗ್ಲಿಷ್, ಫಿನ್ನಿಶ್, ಫ್ರೆಂಚ್, ನಾರ್ವೇಜಿಯನ್, ಸ್ವೀಡಿಷ್, ಡಚ್, ಐಸ್ಲ್ಯಾಂಡಿಕ್, ಹಂಗೇರಿಯನ್, ಜಪಾನೀಸ್, ಲ್ಯಾಟ್ವಿಯನ್, ಲಿಥುವೇನಿಯನ್, ರಷ್ಯನ್, ಹೀಬ್ರೂ, ಬಲ್ಗೇರಿಯನ್ ಮತ್ತು ಜೆಕ್ ಸೇರಿದಂತೆ ಹಲವು ಭಾಷೆಗಳಿಗೆ ಕ್ಯಾಪ್ಲಿನ್‌ಸ್ಕಿಯವರ ಕೃತಿಗಳನ್ನು ಅನುವಾದಿಸಲಾಗಿದೆ.

1 ಎಲ್ಲದರ ಬಗ್ಗೆಯೂ ಬರೆದಾಗಿದೆ
ಮೂಲ: All has been Written About
Translated from the Estonian by Jüri Talvet and H. L. Hix

ಎಲ್ಲದರ ಬಗ್ಗೆಯೂ ಬರೆದಾಗಿದೆ,
ಎಲ್ಲದರ ಬಗ್ಗೆಯೂ ಹಾಡಿಯಾಗಿದೆ.
ಸೇಬು ಮರಗಳಲ್ಲಿ ಹಾದುಬರುವ ಕಡಲಗಾಳಿಗಳು
ಮತ್ತು ಕವಿಗಳ ತಲೆಗಳ ಮೇಲಿರುವ ಗೂಡುಪೆಟ್ಟಿಗೆಗಳಲ್ಲಿ
ಗುಬ್ಬಿಮರಿಗಳ ಹಸಿವಿನ ಚಿಲಿಪಿಲಿಗಳ ಮಧ್ಯೆ
ಇನ್ನು ಮುಂದೆ ಬರೆಯುವಂತದ್ದರ ಹಾಗೂ
ಹಾಡುವಂತದ್ದರ ಅರ್ಥ ಕಡಿಮೆ ಕಡಿಮೆಯಾಗುತ್ತಾ,
ದನಿ ಮತ್ತೂ ಕ್ಷೀಣವಾಗಿ ಬರುತ್ತೆ.

ನೀನು ಇನ್ನೂ ಬದುಕಿದಷ್ಟು, ಮಾತಾಡಿದಷ್ಟು, ಬರೆದಷ್ಟು,
ನೀನೊಂದು ವಯಸ್ಸಾದ, ಸವೆದುಹೋದ
ದ್ವೀಪದಲ್ಲಿ ವಾಸವಾಗಿರುವೆಯೆಂದು ಇನ್ನೂ ಹೆಚ್ಚು ಸ್ಪಷ್ಟವಾಗುತ್ತೆ,
ಆ ದ್ವೀಪದಡಿಯಲ್ಲಿ ಇನ್ನೊಂದು ದ್ವೀಪವಿದೆ,
ಬೆಂಕಿಗೆ ಸಮೀಪ, ಬಹುಶಃ ಸತ್ಯಕ್ಕೂ ಸಮೀಪ,
ಆದರೆ ನಾವು ಇಲ್ಲಿ ಒಬ್ಬರಿಗೊಬ್ಬರು
ಹೇಳುವ ಮಾತುಗಳಿಂದ ಬಹುದೂರ
ಮತ್ತು ಬಾಲ್ಟಿಕ್ ಕಡಲ ಗಾಳಿಯಿಂದಲೂ ಬಹುದೂರ
ಇರುವಿಯೆಂದು ನಿನಗೆ ಇನ್ನೂ ಹೆಚ್ಚು ಸ್ಪಷ್ಟವಾಗುತ್ತೆ.

2. ಮಳೆಯ ಸಾಧ್ಯತೆ …
ಮೂಲ: The Possibility of Rain …
Translated from the Estonian by the poet and Fiona Sampson

ಮಳೆಯ ಸಾಧ್ಯತೆ … ಮಳೆ ಸಾಧ್ಯವೆಂದಾದರೆ
ಎಲ್ಲವೂ ಸಾಧ್ಯ: ಬಸಲೆಸೊಪ್ಪು, ಹೂಕೋಸು,
ಮೂಲಂಗಿ ಮತ್ತು ಸಬ್ಬಸಿಗೆ,
ಕ್ಯಾರೆಟ್‌ಗಳು ಬಟಾಟೆಗಳು ಕೂಡ,
ಕಪ್ಪು ಹಾಗೂ ಕೆಂಪು ಒಣದ್ರಾಕ್ಷೆಗಳು ಕೂಡ,
ಪುರ್ಣಚಂದ್ರನ ಪ್ರತಿಬಿಂಬ ಕಾಣುವ ಕೊಳದ
ಮೇಲೆ ಓಲಾಡುತ್ತಿರುವ ಕವಲುಬಾಲದ ಹಕ್ಕಿ ಕೂಡ,
ಹಾರುವ ಬಾವಲಿಗಳು ಕೂಡ.
ಮಕ್ಕಳು ಬ್ಯಾಡಮಿಂಟನ್ ಆಡಿ ಮನೆಯೊಳಗೆ ಹೋಗುತ್ತಾರೆ.
ಪಡುವಣದಲ್ಲಿ ಮಬ್ಬು ಕವಿದಿದೆ. ಮೆಲ್ಲ ಮೆಲ್ಲನೆ ನನ್ನ
ಅಂಗಗಳಲ್ಲಿನ ಆಯಾಸ ಗೆಲುವಾಗಿ ಮಾರ್ಪಡುತ್ತದೆ.
ಕೊಲೋನ್ ನಗರಕ್ಕೆ ಹೋಗಲು ಒಂದು ಏರೊಪ್ಲೇನನ್ನು
ಎರವಲಿಗೆ ತೊಗೊಂಡೆನೆಂದು ಕನಸು ಕಾಣುವೆ.
ನಾನೂ ಕೂಡ ಮನೆಯೊಳಗೆ ಹೋಗಬೇಕು.
ಆಕಾಶ ಕತ್ತಲಾಗುತ್ತಿದೆ,
ಬರ್ಚ್ ಮರದ ರೆಂಬೆಗಳ ಮೂಲಕ
ಅರ್ಧಚಂದ್ರ ಹೊಳೆಯುತ್ತಿದ್ದಾನೆ.
ರಸವಾದಿಯೊಬ್ಬನ ಬಟ್ಟಿಪಾತ್ರೆ ನಾನು ಎಂದು
ಹಠಾತ್ತಾಗಿ ನನಗನಿಸಿತು
ಆ ಪಾತ್ರೆಯಲ್ಲಿ – ಶೆಕೆ, ಬೆಸರ, ಭರವಸೆ, ಹೊಸ
ವಿಚಾರಗಳು – ಇವೆಲ್ಲ ಕರಗಿ ಏನೋ ವಿಚಿತ್ರವಾದದ್ದು,
ಬಣ್ಣಬಣ್ಣದ್ದು, ಹೊಸತೊಂದು
ಹೊರಬರುತಿದೆಂದು ನನಗನಿಸುತಿದೆ.

3 ಮಹಾ ಕೊಡಲಿ
ಮೂಲ: The Great Axe
Translated from the Russian by Sasha Dugdale

ಎಲ್ಲರಿಗೂ ಗೊತ್ತಿತ್ತು ಅಂವ ಚಿಕ್ಕಂದಿನಿಂದಲೇ
ಒಂದು ಕೊಡಲಿಯಾಗುವ ಕನಸು ಹೊತ್ತಿದ್ದನೆಂದು
ಶತ್ರುಗಳೊಡನೆ ಕಾದಾಡಲು, ತಲೆಗಳ, ರೆಂಬೆಗಳ ಕೊಚ್ಚಿಹಾಕಲು.
ಅವನು ದೊಡ್ಡವನಾಗಿ ಕೊಚ್ಚಿಹಾಕಿದ –
ಸಿಬುರುಗಳು ಹಾರಿದವು, ತಲೆಗಳು ಉರುಳಿದವು,
ಆಗ ಎಲ್ಲರಿಗೂ ಖಾತ್ರಿಯಾಯಿತು:
ಅಂವ ಬೇರೆಲ್ಲ ಕೊಡಲಿಗಳಿಗಿಂತ ಹರಿತವಾದ,
ಅತಿ ನಿರ್ದಯಿಯಾದ ಕೊಡಲಿ,
ಗಟ್ಟಿಯಾದ ಉಕ್ಕಿನಿಂದ ಎರಕಹೊಯ್ದು ಮಾಡಲ್ಪಟ್ಟ,
ಎಂದೂ ತುಕ್ಕು ಹಿಡಿಯದ ಕೊಡಲಿ.
ಆದರೆ ಯಾರಿಗೂ ಎಂದೂ ಗೊತ್ತಾಗಬಾರದು
ಅವನು ಸಾಧಾರಣ ಕಬ್ಬಿಣದ ಕೊಡಲಿಯೆಂದು.
ಅವನಿಗೆ ತುಕ್ಕೆಂದರೆ ಭಯ. ಕನ್ನಡಿಯ ಮುಂದೆ ತನಿಯಾಗಿ ನಿಂತು
ಅವನು ಪರಿಶೀಲಿಸುತ್ತಾನೆ, ಕೊಡಲಿಯ ಧಾರೆಯ ಮೇಲೆ ಅವೇನು
ಹೊಸ ಕೆಂಚುಬಣ್ಣದ ಕಲೆಗಳೇ?
ಅವನ್ನು ತೊಳದು ಹಾಕಲು ಪ್ರಯತ್ನಿಸಿದ,
ತುಕ್ಕಿನ ಕಲೆಗಳನ್ನು ತಾಜಾ ರಕ್ತದ ಕಲೆಗಳಿಂದ ಮರೆಸಲು ಪ್ರಯತ್ನಿಸಿದ,
ಆದರೆ ತುಕ್ಕು ಹರಡಿತು, ರಕ್ತದಿಂದ ಅದನ್ನು ಮರೆಸಲಾಗಲಿಲ್ಲ.
ಆ ಒಂದು ದಿನದ ವರೆಗೆ, ಅಂದು ಅಂವ ಕೋಪದಿಂದ ಕನ್ನಡಿಯನ್ನು
ನುಚ್ಚುನೂರು ಮಾಡಿದ, ಅದರೊಳಗೆ ಬಿದ್ದ,
ತನ್ನನ್ನು ತಾನು ಕಂಡುಕೊಂಡ ಕನ್ನಡಿಯ ಆಚೆ ಬದಿಯಲ್ಲಿ
ಅಡವಿಯ ಅಂಚಿನಲ್ಲಿ, ದೊಡ್ಡ ಕೆಸರುಗುಂಡಿಯ ಪಕ್ಕದಲ್ಲಿ.
ಆಗ ಅರಿತ ಅಂವ ಅವನ ಜಾಗ ಅಲ್ಲಿಯೇ,
ಆ ಕೆಸರಗುಂಡಿಯಲ್ಲಿಯೇ ಎಂದು,
ಅಲ್ಲಿ ತಾನು ಮತ್ತೆ ಒಂದು ಹಿಡಿ ಕೆಸರು-ಕಂದು ಬಣ್ಣದ
ಜವುಗಿನ ಅದಿರಾಗಿ ಮಾರ್ಪಡಬಹುದು.

4 ಮೌನ ಯಾವಾಗಲೂ ಇದೆ ಇಲ್ಲಿ
ಮೂಲ: Silence is Always Here and Everywhere
Translated from the Estonian by the poet with Fiona Sampson

ಮೌನ ಯಾವಾಗಲೂ ಇದೆ ಇಲ್ಲಿ,
ಇದೆ ಎಲ್ಲೆಲ್ಲಿಯೂ;
ಕೆಲವೊಮ್ಮೆ ಹೆಚ್ಚು ಸ್ಪಷ್ಟವಾಗಿ ಕೇಳುತ್ತೆ ನಮಗೆ:
ಹುಲ್ಲುಗಾವಲಿನಲ್ಲಿ ಮಂಜಿದೆ,
ಉಗ್ರಾಣದ ಬಾಗಿಲು ತೆರೆದಿದೆ,

ದೂರದಲ್ಲೇಲ್ಲೋ ರೆಡ್ವಿಂಗ್ ಹಕ್ಕಿಯೊಂದು ಹಾಡುತಿದೆ
ಮತ್ತೊಂದು ಬಿಳಿ ಚಿಟ್ಟೆ ಎಡೆಬಿಡದೆ ರೆಕ್ಕೆ ಬಡಿಯುತ್ತಿದೆ
ಮುಳುಗುವ ಸೂರ್ಯನ ಹಿನ್ನೆಲೆಯಲ್ಲಿ ಮೆಲ್ಲನೆ ಓಲಾಡುತ್ತುರುವ
ಎಲ್ಮ್ ಮರದ ರೆಂಬೆಯ ಸುತ್ತ.
ಮುಸ್ಸಂಜೆಯು ಎಲ್ಲವನ್ನು ಮುಖವಿಲ್ಲದಂತೆ
ಮಾತಿಲ್ಲದಂತೆ ಬಿಟ್ಟು ಹೋಗಿದೆ,
ಬೆಳಕು ಮತ್ತು ಕತ್ತಲ ನಡುವೆ
ಅಂತರ ಮಾತ್ರ ಉಳಿದಿದೆ –
ಇದೊಂದು ನಡುಬೇಸಿಗೆಯ ರಾತ್ರಿ ಅಷ್ಟೆ
ಮೇಜಿನ ಮೇಲಿದ್ದ ಹಳೆಯ ಪಾಕೆಟ್ ಗಡಿಯಾರವೊಂದು
ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿದೆ
ಜೋರಾಗಿ ಟಿಕ್‌-ಟಿಕ್ ಅನ್ನುತ್ತಾ.

5 ನಾನು ದಿನಾ ಒಂದು ಕವನ ಬರೆಯುತ್ತೇನೆ
ಮೂಲ: I Write a Poem Every Day

ನಾನು ದಿನಾ ಒಂದು ಕವನ ಬರೆಯುತ್ತೇನೆ,
ಆದಾಗ್ಯೂ, ಈ ಬರಹಗಳನ್ನು ಕವನಗಳೆಂದು
ಕರೆಯಬಹುದೊ ನನಗೆ ಖಾತ್ರಿಯಿಲ್ಲ.
ಇದು ಕಷ್ಟವೇನಲ್ಲ, ವಿಶೇಷವಾಗಿ ಈಗ,
ಟಾರ್ಟು ನಗರದಲ್ಲೀಗ ವಸಂತಮಾಸ,
ಎಲ್ಲವೂ ಅದರದರ ರೂಪ ಬದಲಿಸಿಕೊಳ್ಳುತ್ತಿವೆ:
ಪಾರ್ಕುಗಳು, ತೋಟಗಳು, ರೆಂಬೆಗಳು, ಮೊಗ್ಗುಗಳು
ಮತ್ತೆ ಶಹರದ ಮೇಲೆ ತೇಲುತ್ತಿರುವ ಮೋಡಗಳು,
ಆಕಾಶವೂ, ತಾರೆಗಳೂ ಸಹ.
ನನಗೆ ಮಾತ್ರ ಸಾಕಷ್ಟು ಕಣ್ಣುಗಳು, ಕಿವಿಗಳು
ಹಾಗೂ ಸಮಯವಿದ್ದಿದ್ದರೆಂದನಿಸುತ್ತದೆ,
ಏಕೆಂದರೆ ಈ ಸೌಂದರ್ಯ ನಮ್ಮನ್ನು ಸುಳಿಯಂತೆ ಒಳಗೆಳೆದುಕೊಳ್ಳುತ್ತದೆ
ಎಲ್ಲವನ್ನೂ ಒಂದು ಕಾವ್ಯಾತ್ಮಕ ಭರವಸೆಯ ತೆರೆಯಲ್ಲಿ ಹೊದೆಯುತ್ತದೆ
ಆದರೆ ಇಲ್ಲಿ ಒಂದು ವಿಷಯ ಮಾತ್ರ ವಿಲಕ್ಷಣವಾಗಿ
ಎದ್ದು ಕಾಣುತ್ತದೆ:
ಬಸ್ ಸ್ಟಾಪಿನಲ್ಲಿ ಕೂತಿರುವ ಅರೆ-ಮರುಳು ಮನುಷ್ಯ
ತನ್ನ ಕೊಳಕಾದ ಊನವಾದ ಪಾದಗಳಿಂದ
ಬೂಟುಗಳನ್ನು ಕಳಚುತ್ತಿದ್ದಾನೆ,
ಅವನ ಕೋಲು ಮತ್ತು ಉಣ್ಣೆ ಟೋಪಿ ಅವನ ಬದಿಯಲ್ಲಿ ಬಿದ್ದಿವೆ:
ಅದೇ ಟೋಪಿ ಅವನ ತಲೆಯಲ್ಲಿತ್ತು
ನೀನು ಅವನನ್ನು ಆ ದಿನ ನೋಡಿದಾಗ
ಬೆಳಗ್ಗೆ ಮೂರು ಘಂಟೆಯ ಹೊತ್ತು
ಅಂವ ಅದೇ ಬಸ್‌ಸ್ಟಾಪಿನಲ್ಲಿ ನಿಂತಿದ್ದಾಗ
ನೀನಿದ್ದ ಟ್ಯಾಕ್ಸಿ ಅವನ ದಾಟಿ ಹೋದಾಗ
ಆಗ ಡ್ರೈವರ್ ಅಂದ: ‘ಆ ಹುಚ್ಚ ಮತ್ತೆ ಕುಡಿದಿದ್ದಾನೆ.’

‍ಲೇಖಕರು Admin

May 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. prathibha nandakumar

    ಅನುವಾದ ಚೆನ್ನಾಗಿದೆ. ಮೂಲ ಕುತೂಹಲಕಾರಿಯಾಗಿದೆ. ಹಿಂದೆಯೂ ನೀವು ಈ ಕವಿಯ ಕವನ ಅನುವಾದ ಮಾಡಿದ ನೆನಪು.

    ಪ್ರತಿಕ್ರಿಯೆ
  2. ಜಯಶ್ರೀನಿವಾಸ ರಾವ್

    ನೀವು ತೋರಿಸಿದ ಆಸಕ್ತಿಗೆ ಧನ್ಯವಾದಗಳು, ಪ್ರತಿಭಾ-ಗಾರು … ಹೌದು, ಇವರ ಕವನಗಳ ಅನುವಾದ ಮಾಡಿ ಫೇಸ್ ಬುಕ್ ನಲ್ಲಿ ಒಂದೊಂದಾಗಿ ಪೋಸ್ಟ್ ಮಾಡಿದ್ದೆ … ಅವೆಲ್ಲವನ್ನೂ ಕೂಡಿಸಿ ಇಲ್ಲಿ ಕೊಟ್ಟಿರುವೆ.

    ಜಯಶ್ರೀನಿವಾಸ ರಾವ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: