ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ‘ನಾನು ಕರ್ನಾಟಕದಲ್ಲಿರುವುದನ್ನೇ ಇಷ್ಟಪಟ್ಟೆ’

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು.

ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡಕ್ಕೆ ತಂದಿದ್ದಾರೆ.

ಖ್ಯಾತ ಸಂಗೀತಗಾರರೂ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ ಟಿ ಎಸ್ ಸತ್ಯವತಿ ಅವರು ಇದನ್ನು ಸಂಪಾದಿಸಿದ್ದಾರೆ.

ಈ ಕನ್ನಡ ಅವತರಣಿಕೆ ‘ಅವಧಿ’ಯಲ್ಲಿ ಧಾರಾವಾಹಿಯಾಗಿ ನಿಮ್ಮ ಮುಂದೆ…

7

೧೯೪೦ರ ದಶಕದ ಮೊದಲಭಾಗದಲ್ಲಿ ಶ್ರೀಕಂಠನ್‌ರ ಹಿರಿಯಣ್ಣ ವೆಂಕಟರಾಮಾಶಾಸ್ತ್ರೀಗಳು ರೇಡಿಯೋದಲ್ಲಿ ಉದ್ಯೋಗ ಮಾಡಲು ತಮ್ಮ ವಾಸಸ್ಥಾನವನ್ನು ಮದ್ರಾಸಿಗೆ ಸ್ಥಳಾಂತರಿಸುವ ಮೂಲಕ ಕುಟುಂಬದಲ್ಲಿ ಹೊಸ ಪದ್ಧತಿಯನ್ನು ಪ್ರಾರಂಭಿಸಿದರು. ಆಶ್ಚರ್ಯವೆಂದರೆ, ಯುವಕ ಶ್ರೀಕಂಠನ್ ಒಂದು ದಶಕದ ನಂತರ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ಮೇಲೂ ಅಣ್ಣನ ಮೇಲ್ಪಂಕ್ತಿಯನ್ನು ಅನುಸರಿಸಲಿಲ್ಲ. ಮದ್ರಾಸು ಶ್ರೇಷ್ಠ ಕಲಾವಿದರನ್ನು ತನ್ನೆಡೆಗೆ ಆಕರ್ಷಿಸುತ್ತ ಪರಂಪರಾನುಗತವಾಗಿ “ಕರ್ನಾಟಕ ಸಂಗೀತದ ಕಾಶಿ” ಎಂದು ಪ್ರಸಿದ್ಧವಾಗಿದ್ದರೂ, ಈ ಯುವ ವಿದ್ವಾಂಸನನ್ನು ಪ್ರಲೋಭನೆಗೊಳಿಸಲು ವಿಫಲಗೊಂಡಿದ್ದು ಚೋದ್ಯವೇ ಸರಿ.

ಸ್ವಾರಸ್ಯವೆಂದರೆ, ಈ ಸಮಯದಲ್ಲಿ ಮೈಸೂರಿನ ರಾಜಮನೆತನದ ರೂಪದಲ್ಲಿ ಸಮಾನಾಂತರವಾದ ಸಂಗೀತಧಾರೆಯೊಂದು ಅದಾಗಲೇ ಅಸ್ತಿತ್ವದಲ್ಲಿದ್ದು, ಕಲೆ ಮತ್ತು ಸಂಗೀತವನ್ನು ಪ್ರಚಾರ ಮಾಡುವ ಯಾವುದೇ ರಾಜರ ಆಸ್ಥಾನಕ್ಕೆ ಎಣೆಯಾಗುವಂಥ ಸಾಂಗೀತಿಕ ಪರಿಸರ ತನ್ನಲ್ಲಿರುವ ಕುರಿತು ಮೈಸೂರು ಅಭಿಮಾನ ತಳೆದಿತ್ತು.

ಅರಮನೆಯ ಸಂಗೀತ ಕಛೇರಿಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದ ಸಂದರ್ಶಕ ಸಂಗೀತ ವಿದ್ವಾಂಸರಿಗೆ ಆಸ್ಥಾನ ವಿದ್ವಾಂಸರ ಸ್ಥಾನಮಾನ ಅಥವಾ ಕನಿಷ್ಠ ಪಕ್ಷ ಅರಮನೆಯಲ್ಲಿ ಕಛೇರಿ ಮಾಡುವ ಅವಕಾಶವೇ ಮೊದಲಾದ ಪ್ರೋತ್ಸಾಹಕಗಳು ದೊರೆಯುತ್ತಿದ್ದುದಲ್ಲದೆ, ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಪ್ರಶಸ್ತ ಪಥಗಳು ಅವರಿಗಾಗಿ ಕಾದಿರುತ್ತಿದ್ದವು. ಸಾರ್ವಜನಿಕರಲ್ಲಿ ಸಂಗೀತದ ಕುರಿತು ಆಸಕ್ತಿಯನ್ನು ಪ್ರಚೋದಿಸಿದ ಸಂಗೀತಕ್ಷೇತ್ರದ ದಿಗ್ಗಜರಾದ ಮೈಸೂರು ಸದಾಶಿವ ರಾವ್, ಬಿಡಾರಂ ಕೃಷ್ಣಪ್ಪ, ಇವರೇ ಮೊದಲಾದವರ ಪ್ರಯತ್ನದಿಂದ ನಗರದಲ್ಲಿ ಸಂಗೀತದ ಕಾವು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿದ್ದುದಲ್ಲದೆ, ಸಾಂಕ್ರಾಮಿಕದಂತೆ ಬೆಂಗಳೂರಿನ ಹಲವು ಭಾಗಗಳಿಗೂ ಹಬ್ಬಿತು.

ಹೀಗೆ ರಾಮನವಮಿ ಮತ್ತು ಗೋಕುಲಾಷ್ಟಮಿಯ ಸಂದರ್ಭಗಳಲ್ಲಿ ಉತ್ಸವ ಕಛೇರಿಗಳ ಆಯೋಜನೆ ಸಂಗೀತ ವಲಯದ ನಿಯತವಾದ ಒಂದು ಲಕ್ಷಣವೇ ಆಗಿ ರೂಪುಗೊಂಡಿತು.

ಆ ದಿನಗಳಲ್ಲಿ ಸಂಗೀತಾಕಾಂಕ್ಷಿಗಳಿಗೆ ಮದ್ರಾಸು ವಿಪುಲ ಅವಕಾಶಗಳ ಪೀಠವಾಗಿದ್ದುದು ವಾಸ್ತವವೇ ಸರಿ. ಹೀಗಿದ್ದರೂ, ಸಂಗೀತಾನುಭವಕ್ಕೆ ಹೆಚ್ಚುಹೆಚ್ಚು ತೆರೆದುಕೊಳ್ಳುವ ಸಲುವಾಗಿ ಸಹ ಶ್ರೀಕಂಠನ್‌ರು ಮದ್ರಾಸಿನಲ್ಲಿ ನೆಲೆಸುವ ಕುರಿತು ಚಿಂತನೆ ಮಾಡದಿದ್ದುದೇಕೆ? ತಮ್ಮ ತಾಯ್ನಾಡಾದ ಕರ್ನಾಟಕದ ಕುರಿತ ಭಾವನಾತ್ಮಕ ಸೆಳೆತವೇ ಅವರಿಗೆ ಹೆಚ್ಚು ಪ್ರಿಯವಾಗಿತ್ತೇನು?

ಸಂಗೀತಶಾಸ್ತ್ರಜ್ಞರೂ ವಿಮರ್ಶಕರೂ ಆದ ರಾ.ಸತ್ಯನಾರಾಯಣ ಹೇಳುತ್ತಾರೆ: “ಶ್ರೀಕಂಠನ್‌ರೊಂದಿಗೆ ನನ್ನ ಸಂಪರ್ಕ ಸುಮಾರು ೬೦ ವರ್ಷಗಳಷ್ಟು ಹಳೆಯದು. ಅವರು ರುದ್ರಪಟ್ಣದಿಂದ ಮೈಸೂರಿಗೆ ಬಂದ ಕೆಲವೇ ವರ್ಷಗಳಲ್ಲಿ ಅವರ ಹೆಸರು ಜನಜನಿತವಾಯಿತು. “ಸೋನಾರ್ ಬೀದಿಯಲ್ಲಿರುವ ಆ ಸಂಕೇತಿ ಹುಡುಗ ಬಹಳ ಚೆನ್ನಾಗಿ ಹಾಡುತ್ತಾನೆ” ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಆ ಸಮಯದಲ್ಲಿ ಮೈಸೂರು ಸಹೋದರರಾದ ಶ್ರೀ ಚಂದ್ರಶೇಖರಯ್ಯ ಮತ್ತು ಶ್ರೀ ಸೀತಾರಾಂ ಅವರು ಪ್ರಸಿದ್ಧರಾಗಿದ್ದರು ಮತ್ತು ಶ್ರೀಕಂಠನ್ ತಮ್ಮ ಮನೆತನದಲ್ಲಿನ ಸಂಗೀತ, ಸಾಹಿತ್ಯ ಮತ್ತು ವೇದಜ್ಞಾನದ ಹಿನ್ನೆಲೆಯಲ್ಲಿ ತಮ್ಮ ನಾದಮಯ ಅಸ್ತಿತ್ವವನ್ನು ಪ್ರಕಾಶಗೊಳಿಸಲು ಪ್ರಾರಂಭಿಸಿದ್ದರು. ಕೃಷ್ಣರಾಜ ಒಡೆಯರು ಲಲಿತಕಲೆಗಳಿಗೆ ಉತ್ತೇಜನ ನೀಡುತ್ತ ಖ್ಯಾತಿಯ ಉತ್ತುಂಗದಲ್ಲಿದ್ದ ನಂತರ ಲಲಿತಕಲೆಗಳನ್ನು ಪ್ರೋತ್ಸಾಹಿಸುವಲ್ಲಿ ಸಮಾನ ಆಸಕ್ತಿ ಹೊಂದಿದ್ದ ಚಾಮರಾಜ ಒಡೆಯರ್ ಮೈಸೂರು ನಗರವನ್ನು ನಾದಮಾಧುರ್ಯದಲ್ಲಿ ಮೀಯಿಸಿದ್ದರು. ಆ ದಿನಗಳಲ್ಲಿ ರಾಜರ ಆಸ್ಥಾನವು ಸೃಜಿಸಿದ್ದ ಸ್ಪಂದನಶೀಲ ಪರಿಸರದಿಂದ ಸಂಗೀತಕ್ಕೆ ದೊರೆತ ಪ್ರಾಧಾನ್ಯತೆ ಅಸಾಧಾರಣವಾಗಿತ್ತು. ಅರಮನೆಗೆ ಭೇಟಿ ನೀಡುತ್ತಿದ್ದ ಪ್ರತಿಯೊಬ್ಬ ಸಂಗೀತ ವಿದ್ವಾಂಸರೂ ಇತರ ಕಲಾವಿದರ ಕಚೇರಿಗಳನ್ನು ಆಲಿಸುತ್ತಿದ್ದ ಆ ಮಹತ್ವದ ಕಾಲಘಟ್ಟವು “ಮೈಸೂರಿನ ಕರ್ನಾಟಕ ಸಂಗೀತದ ಸುವರ್ಣಯುಗ” ಎನಿಸಿತ್ತು.

ಹೀಗೆ ಕಲೆಗಳ ಮಿಡಿತದಿಂದ ಜೀವಂತವಾಗಿದ್ದ ಮೈಸೂರಿನ ಪರಿಸರದಲ್ಲಿ ಶ್ರೀಕಂಠನ್ ತಮ್ಮ ಸಂಗೀತಜೀವನವನ್ನು ಪ್ರಾರಂಭಿಸಿದ್ದರು. ಸಹಜವಾಗಿಯೇ, ಅವರು ‘ನಾನು ವಿದ್ಯೆ ಕಲಿಯಬಹುದಾದ ಸ್ಥಾನ ಇದು” ಎಂದು ಆಲೋಚಿಸಿದರು. ತಂಜಾವೂರು, ತಿರುವಾಂಕೂರು, ಬರೋಡಾ, ಬನಾರಸ್ ಮತ್ತು ಕಲ್ಕತ್ತದಂಥ ಎಲ್ಲ ರಾಜ್ಯಗಳಲ್ಲಿ, ತನ್ನ ನೆಲದಲ್ಲಿ ವಾಸಿಸುತ್ತಿದ್ದ ವಾಗ್ಗೇಯಕಾರರು ಹಾಗೂ ಸಂಗೀತಗಾರರಿಂದ ಕೂಡಿ ಸಂಗೀತದ ಕುರಿತು ಮೈಸೂರು ಉಚ್ಚಮಟ್ಟದ ಗೌರವಭಾವವನ್ನು ತಳೆದಿತ್ತು.”

ಹಿನ್ನೋಟವನ್ನು ಹಾಯಿಸುತ್ತ ತೊಂಬತ್ತರ ಹರೆಯದ ಆ ವಿದ್ವಾಂಸರು ನುಡಿಯುತ್ತಾರೆ: “ಮೈಸೂರಿನಲ್ಲೇ ಉಳಿಯುವ ನಿರ್ಧಾರ ಅತ್ಯಂತ ಚಾತುರ್ಯದ, ಅಷ್ಟೇ ಏಕೆ, ಅತ್ಯುತ್ತಮವಾದ ನಡೆಯಾಗಿತ್ತು. “ನಾನು ಚಿಕ್ಕವನಾಗಿದ್ದಾಗ ಮದ್ರಾಸಿಗೆ ಹೊರಟುಹೋಗುವ ಕುರಿತಾದ ಆಲೋಚನೆಗಳು ನನ್ನ ಮನದಲ್ಲೂ ಅಸ್ಪಷ್ಟವಾಗಿ ಸುಳಿಯುತ್ತಿದ್ದವು. ಆದರೆ ಅವು ನನ್ನನ್ನು ಮದ್ರಾಸಿಗೆ ಕರೆದೊಯ್ಯುವಷ್ಟು ಶಕ್ತಿಯುತವಾಗೇನೂ ಇರಲಿಲ್ಲ. ನಾನು ಅನುಭವಿಸಿರಬಹುದಾದ ಪ್ರಲೋಭನೆಗಳ ಸಮ್ಮುಖದಲ್ಲಿ ಅವು ಸಾಕಾರಗೊಳ್ಳದಷ್ಟು ‘ನನ್ನ ಮೈಸೂರ’ನ್ನು ಬಿಟ್ಟುಹೋಗುವ ನೋವು ಪ್ರಬಲವಾಗಿತ್ತು. ಈ ಭಾವನಾತ್ಮಕ ಕೊಂಡಿ ಮಾತ್ರವಲ್ಲದೆ, ವ್ಯಾವಹಾರಿಕ ಆಲೋಚನೆಗಳೂ ಕೂಡ ನಾನು ನನ್ನ ನಗರವನ್ನು ತೊರೆಯದಂತೆ ತಡೆದವು. ಅರಸರು ಸಂಗೀತದ ನೈಜ ಪೋಷಕರಾಗಿದ್ದುದರಿಂದ ಮೈಸೂರು ಅದಾಗಲೇ ಸ್ಪಂದನಶೀಲವಾದ ಸಂಗೀತದ ವಾತಾವರಣವನ್ನು ಹೊಂದಿತ್ತು. ಜ್ಞಾನದ ಅನ್ವೇಷಣೆ ಹಾಗೂ ಪ್ರಸಾರದ ಕುರಿತು ಉತ್ಸುಕರಾಗಿದ್ದ ದೊರೆಗಳಿಂದ ಲಲಿತಕಲೆಗಳು ಮತ್ತು ಸಂಗೀತಕ್ಕೆ ಪ್ರಚುರವಾದ ಪ್ರೋತ್ಸಾಹವಿತ್ತು. ಅವರ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ ಕೇಂದ್ರಬಿಂದುವಿನ ರೂಪದಲ್ಲಿದ್ದ ಸಂಗೀತದ ಪ್ರಭಾವ ವಿಸ್ತರಿಸಿ ಅಲ್ಪಾವಧಿಯ ಉತ್ಸವಗಳ ವೇದಿಕೆಗಳು ತಲೆಯೆತ್ತಿದವು. ಈ ವೇದಿಕೆಗಳು ಸ್ಥಳೀಯ ಪ್ರತಿಭೆಗಳನ್ನು ಸಮೃದ್ಧವಾಗಿ ಪೋಷಿಸುತ್ತಿದ್ದವು. ರಾಷ್ಟ್ರದ ಎಲ್ಲೆಡೆಗಳಿಂದ ಸಾಲುಸಾಲಾಗಿ ಬರುತ್ತಿದ್ದ ಪ್ರತಿಭೆಗಳು ನಗರದ ಸುಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಗಾರರ ಮನೆಗಳಲ್ಲಿ ನಡೆಯುತ್ತಿದ್ದ ಸಣ್ಣ ಸಭಾಕಛೇರಿಗಳತ್ತ ಚಿತ್ತೆöÊಸುತ್ತಿದ್ದವು.”

ಶ್ರೀಕಂಠನ್ ಮತ್ತೂ ಹೇಳುತ್ತಾರೆ, “ವೀಣೆ ಸುಬ್ಬಣ್ಣ, ಮುತ್ತಯ್ಯ ಭಾಗವತರು, ವೀಣೆ ಶೇಷಣ್ಣ, ವೀಣೆ ಶಾಮಣ್ಣ, ಮೈಸೂರು ಸದಾಶಿವರಾಯರು, ಮೈಸೂರು ವಾಸುದೇವಾಚಾರ್ಯರು, ವೀಣೆ ವೆಂಕಟಗಿರಿಯಪ್ಪ, ಎಂ.ಎ.ನರಸಿಂಹಾಚಾರ್ಯರು, ಮೈಸೂರು ಟಿ ಚೌಡಯ್ಯ ಮತ್ತು ಬಿಡಾರಂ ಕೃಷ್ಣಪ್ಪನವರು ಇಂಥ ವಿದ್ವಾಂಸರನ್ನು ನಿಯಮಿತವಾಗಿ ಕರೆತರುವಲ್ಲಿ ಪ್ರಮುಖರಾಗಿದ್ದರು. ಇಂಥವರ ಸನ್ನಿಧಿಯಲ್ಲಿ ನಿರಂತರವಾಗಿ ಕಲಿಯುತ್ತ ನಾನು ಆನಂದದಿಂದಿದ್ದೆ. ನಾನು ನನ್ನ ರಾಜ್ಯದಲ್ಲೇ ಉಳಿದುಕೊಳ್ಳುವುದನ್ನು ಆರಿಸಿಕೊಂಡೆ ಎಂದ ಮಾತ್ರಕ್ಕೆ ಇಂಥ ಘನವಿದ್ವಾಂಸರೊಡನೆ ಸಂವಾದ ನಡೆಸುವುದನ್ನು ನಾನು ಎಂದಿಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ನಾನು ಮದ್ರಾಸಿಗೆ ಹೋಗಿ ನೆಲೆಸುವುದನ್ನು ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ ಅಥವಾ ಮದ್ರಾಸಿನಲ್ಲಿ ವಾಸಿಸುವುದು ನನ್ನ ಪಾಲಿಗೆ ಮಹತ್ತರವಾದ ಪ್ರಲೋಭನೆಯಾಗಿ ಏಕೆ ಪರಿಣಮಿಸಲಿಲ್ಲ ಎನ್ನುವುದಕ್ಕೆ ವಿವರಣೆ ಇದು”

೧೯೩೨ನೇ ಸಾಲಿನಲ್ಲಿ ಶ್ರೀಕಂಠನ್ ಪ್ರವೇಶಿಸಿದ್ದು ಅರಸರ ಸಂಗೀತಮಯ ಮೈಸೂರನ್ನು…
ಇಷ್ಟರಲ್ಲಿ ಮೈಸೂರು ಒಂದು ಶ್ರೀಮಂತವೂ ಸಮೃದ್ಧವೂ ಆದ ರಾಜ್ಯವಾಗಿ ಬೆಳೆದಿತ್ತು. ಮಹಾರಾಜರ ಪ್ರೋತ್ಸಾಹದಿಂದ ಕಲೆ ಮತ್ತು ಸಂಸ್ಕೃತಿಗಳು ಉಚ್ಛಾçಯ ಸ್ಥಿತಿಯಲ್ಲಿದ್ದವು. ಭಾರತದ ಎಲ್ಲ ಪ್ರದೇಶಗಳಿಂದ ವಿದ್ವಾಂಸರು ಕಛೇರಿಗಳಿಗಾಗಿ ಅರಮನೆಯ ದರ್ಬಾರಿಗೆ ಮಾತ್ರವಲ್ಲದೆ ಸಂಗೀತದ ಎಲ್ಲ ರೂಪಗಳಿಗೆ ಉತ್ತೇಜನ ನೀಡುತ್ತಿದ್ದ ಸಭೆಗಳಿಗೂ ಭೇಟಿ ನೀಡುತ್ತಿದ್ದರು. ದಕ್ಷಿಣ ಭಾರತದ ಸಾಮ್ರಾಜ್ಯಗಳಲ್ಲಿ ಒಂದಾದ ಮೈಸೂರು ರಾಜ್ಯವು ಇಂದಿನ ಆಧುನಿಕ ಮೈಸೂರು ನಗರದ ಸನಿಹದಲ್ಲಿ ೧೩೯೯ ನೇ ಸಾಲಿನಲ್ಲಿ ಸ್ಥಾಪನೆಗೊಂಡಿತು.

ಒಡೆಯರ್ ರಾಜಮನೆತನದ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿತ್ತು ಮತ್ತು ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಮೈಸೂರು ರಾಜ್ಯ ಸ್ವತಂತ್ರವಾಯಿತು. ೧೭ ನೇ ಶತಮಾನದಲ್ಲಿ ಮೈಸೂರು ರಾಜ್ಯವು ಇಂದು ದಕ್ಷಿಣ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿರುವ ಹಾಗೂ ತಮಿಳುನಾಡಿನ ಭಾಗಗಳನ್ನು ಒಳಗೊಂಡಿರುವ ವಿಶಾಲವಾದ ಭೂಪ್ರದೇಶಗಳನ್ನು ತನ್ನ ಎಲ್ಲೆಯೊಳಗೆ ಅಂತರ್ಗತ ಮಾಡಿಕೊಂಡು, ಸ್ಥಿರಗತಿಯಿಂದ ವಿಸ್ತಾರಗೊಳ್ಳುತ್ತ ದಕ್ಷಿಣ ಭಾರತದ ಶಕ್ತಿಶಾಲಿ ರಾಜ್ಯವೆನಿಸಿತು. ೧೯೪೭ನೇ ಸಾಲಿನಲ್ಲಿ ಭಾರತದ ಒಕ್ಕೂಟದಲ್ಲಿ ಮೈಸೂರು ವಿಲೀನವಾಗುವವರೆಗೆ ಒಡೆಯರ್ ಮನೆತನ ಈ ರಾಜ್ಯವನ್ನು ಆಳಿತು.

ರಾಜಶಾಸನಕ್ಕೊಳಪಟ್ಟ ರಾಜ್ಯವಾಗಿದ್ದಾಗಲೇ, ಮೈಸೂರು ಭಾರತದ ಅತ್ಯಂತ ಆಧುನಿಕ ಮತ್ತು ನಗರೀಕರಣಗೊಂಡ ರಾಜ್ಯ ಎಂದು ಪರಿಗಣಿತವಾಯಿತು. ಮೈಸೂರಿನ ದೊರೆಗಳು ಲಲಿತ ಕಲೆಗಳಲ್ಲಿ ನುರಿತ ಪ್ರವರ್ತಕರೂ, ಪಂಡಿತರೂ, ಉತ್ಸಾಹಿ ಕಲಾಪೋಷಕರೂ ಆಗಿದ್ದುದರಿಂದ ಮೈಸೂರು ರಾಜ್ಯವು ೧೭೯೯ ರಿಂದ ೧೯೪೭ ರ ಅವಧಿಯಲ್ಲಿ ಕಲೆ ಮತ್ತು ಸಂಸ್ಕೃತಿಯ ಕೇಂದ್ರಸ್ಥಾನವಾಗಿ ಪ್ರವರ್ಧಮಾನಕ್ಕೆ ಬಂದಿತು. ಮೈಸೂರು ಅರಸರ ಕಲಾಪ್ರೀತಿಯ ಪರಂಪರೆ ಇಂದಿಗೂ ಮುಂದುವರಿಯುತ್ತಿದ್ದು ಸಂಗೀತ ಮತ್ತು ಕಲೆಯ ಮೇಲೆ ಪ್ರಭಾವ ಬೀರುತ್ತಿದೆ.

ಆದರೆ ಮೈಸೂರು ಆಗಾಗ ನೈಸರ್ಗಿಕ ವಿಕೋಪಗಳಿಗೂ ತುತ್ತಾಗುತ್ತಿತ್ತು. ಉದಾಹರಣೆಗೆ, ೧೮೭೭ ನೇ ಸಾಲಿನಲ್ಲಿ (ಬ್ರಿಟಿಷರ ನೇರ ಆಳ್ವಿಕೆಯ ಅಂತ್ಯಭಾಗದಲ್ಲಿ) ಮೈಸೂರಿನ ಮೇಲೆ ಅಪ್ಪಳಿಸಿ, ೭,೦೦,೦೦೦ ದಿಂದ ೧,೧೦೦,೦೦೦ ಜನರನ್ನು ಅಥವಾ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗವವನ್ನು ಬಲಿ ತೆಗೆದುಕೊಂಡ ಭೀಕರ ಬರಗಾಲ. ಇದಾದ ಕೆಲಕಾಲದಲ್ಲಿ ಎಂದರೆ, ೧೮೮೧ ನೇ ಸಾಲಿನಲ್ಲಿ, ಬ್ರಿಟಿಷ್ ಪದ್ಧತಿಯಲ್ಲಿ ಶಿಕ್ಷಣ ಪಡೆದ ಮಹಾರಾಜ ಚಾಮರಾಜ IX ಅವರು ರಾಜ್ಯಭಾರವನ್ನು ವಹಿಸಿಕೊಂಡರು. ಅವರು ದೈವಾಧೀನರಾದ ಮೇಲೆ, ಆಗ ೧೧ ವರ್ಷದ ಬಾಲಕನಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ೧೮೮೫ ನೇ ಸಾಲಿನಲ್ಲಿ ಸಿಂಹಾಸನವನ್ನು ಏರಿದರು.

೧೯೦೨ ನೇ ಸಾಲಿನಲ್ಲಿ ಕೃಷ್ಣರಾಜ ಒಡೆಯರು ಅಧಿಕಾರದ ಸೂತ್ರಗಳನ್ನು ಕೈಗೆತ್ತಿಕೊಳ್ಳುವವರೆಗೆ ಅವರ ಮಾತೃಶ್ರೀಯವರಾದ ಮಹಾರಾಣಿ ಕೆಂಪರಾಜಮಣ್ಣಿಯವರು ರೀಜೆಂಟರಾಗಿ ಆಳ್ವಿಕೆ ನಡೆಸಿದರು. ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಸಹಯೋಗದೊಂದಿಗೆ ತನ್ನ ಆಳ್ವಿಕೆಯ ಕಾಲದಲ್ಲಿ ಒಡೆಯರ್ ಅವರು ಮೈಸೂರು ರಾಜ್ಯವನ್ನು ವಿಶೇಷವಾಗಿ ಕೈಗಾರಿಕೆ, ಶಿಕ್ಷಣ, ಕೃಷಿ ಮತ್ತು ಕಲೆಗಳಲ್ಲಿ ಪ್ರಗತಿಪರವೂ ಆಧುನಿಕವೂ ಆದ ರಾಜ್ಯವನ್ನಾಗಿ ಪರಿವರ್ತಿಸಲು ಉಪಕ್ರ‍್ರಮಿಸಿದರು.

ಮೈಸೂರು ವಿಕಸನಗೊಂಡ ರೀತಿಯನ್ನು ನೋಡಿ ಮಹಾತ್ಮಾ ಗಾಂಧಿಯವರು ‘ರಾಮರಾಜ್ಯ’ಕ್ಕೆ ಹೋಲಿಸಿ ಒಡೆಯರ್ ರನ್ನು ‘ರಾಜರ್ಷಿ’ ಎಂದು ಕೊಂಡಾಡಿದರು. ಈ ಸಮಯದಲ್ಲಿ ಮೈಸೂರು ರಾಜ್ಯದಲ್ಲಿ ಶೈಕ್ಷಣಿಕ ಸೌಕರ್ಯಗಳ ಕುರಿತು ಪ್ರಾರಂಭಿಸಲಾದ ಕೆಲವು ಉಪಕ್ರಮಗಳು ಕರ್ನಾಟಕ ರಾಜ್ಯಕ್ಕೆ ಮುಂಬರುವ ದಶಕಗಳಲ್ಲಿ ಅಮೂಲ್ಯವಾದ ಸೇವೆ ಸಲ್ಲಿಸುವಂಥವಾದವು. ನಿಷ್ಣಾತ ಸಂಗೀತಗಾರರಾಗಿದ್ದ ಮಹಾರಾಜರು ತಮ್ಮ ಪೂರ್ವಿಕರಂತೆಯೇ ಲಲಿತಕಲೆಗಳ ಅಭಿವೃದ್ಧಿಗೆ ಅತೀವ ಕಳಕಳಿಯಿಂದ ರಾಜಾಶ್ರಯವನ್ನು ನೀಡಿದರು. ತರುವಾಯ ಅವರ ಸೋದರರ ಪುತ್ರರಾದ ಚಾಮರಾಜ ಒಡೆಯರು Instrument of Accession ಗೆ ಸಹಿ ಹಾಕುವುದರೊಂದಿಗೆ ಒಡೆಯರ್ ಮನೆತನದ ರಾಜ್ಯಭಾರ ಕೊನೆಗೊಂಡಿತು. ೯ನೇ ಆಗಸ್ಟ್ ೧೯೪೭ರಂದು ಮೈಸೂರು ಭಾರತದ ಒಕ್ಕೂಟವನ್ನು ಸೇರಿತು.

ಕನ್ನಡದ ಅಭಿವೃದ್ಧಿ ಮೈಸೂರು ಸಾಮ್ರಾಜ್ಯದ ಅವಧಿಯನ್ನು ಕನ್ನಡ ಸಾಹಿತ್ಯ ಅಭಿವೃದ್ಧಿಯಲ್ಲಿಯೂ ಅತ್ಯಂತ ಮಹತ್ವದ ಕಾಲಘಟ್ಟ ಎಂದು ಪರಿಗಣಿಸಲಾಗಿದೆ. ಮೈಸೂರಿನ ದರ್ಬಾರು ಸುವಿಖ್ಯಾತ ಬ್ರಾಹಣ ಹಾಗೂ ವೀರಶೈವ ಲೇಖಕರು ಮತ್ತು ವಾಗ್ಗೇಯಕಾರರಿಂದ ಅಲಂಕೃತವಾಗಿದ್ದುದಲ್ಲದೆ, ಮೈಸೂರಿನ ರಾಜರೇ ಸ್ವತಃ ಲಲಿತಕಲೆಗಳು ಹಾಗೂ ಸಂಗೀತ ಸಂಯೋಜನೆಯಲ್ಲಿ ಪಾರದರ್ಶಿಗಳಾಗಿದ್ದರು. ನೃತ್ಯದಲ್ಲಿ ನಾಟಕೀಯತೆಯ ಪ್ರಾತಿನಿಧ್ಯವನ್ನು ಹೊಂದಿದ್ದು, ಜಾನಪದ ಸಾಹಿತ್ಯದ ಒಂದು ಸ್ಥಳೀಯ ಪ್ರಕಾರವಾಗಿರುವ ಯಕ್ಷಗಾನ ಜನಮನ್ನಣೆಯನ್ನು ಗಳಿಸಿತು. ಮುಂದಿನ ದಿನಗಳಲ್ಲಿ ಕಂಡುಬಂದ ಗಮನಾರ್ಹ ಬೆಳವಣಿಗೆ ಎಂದರೆ ಕನ್ನಡ ಭಾಷೆಯ ಮೇಲೆ ಆಂಗ್ಲ ಸಾಹಿತ್ಯ ಮತ್ತು ಶಾಸ್ತ್ರೀಯ ಸಂಸ್ಕೃತ ಸಾಹಿತ್ಯಗಳು ಬೀರಿದ ಪ್ರಭಾವ.

೧೯ನೇ ಶತಮಾನದ ಮಧ್ಯಭಾಗದಲ್ಲಿ ತಂಜಾವೂರು ರಾಜರ ಅವನತಿಯೊಂದಿಗೆ, ವಿದ್ವಾಂಸರು, ಸಂಗೀತಗಾರರು, ನೃತ್ಯಗಾರರು ಮತ್ತು ಚಿತ್ರಕಲಾವಿದರು ಮೈಸೂರಿನ ದರ್ಬಾರಿಗೆ ಮಹಾವಲಸೆ ಬಂದು (ಸಂಗೀತಗಾರರಲ್ಲದ ಹಲವರು ಮದ್ರಾಸಿಗೆ ಜೀವನೋಪಾಯವನ್ನು ಅರಸಿ ವಲಸೆ ಹೋದುದರ ಜೊತೆಗೆ) ಆಳುವ ಪ್ರಭುಗಳ ಔದಾರ್ಯಪೂರಿತ ಆಶ್ರಯವನ್ನು ಪಡೆದರು. ಸಾರ್ವಜನಿಕರಲ್ಲಿ ಸಂಗೀತಾಸಕ್ತಿಯನ್ನು ಉದ್ದೀಪಿಸಲು ಸಂಗೀತಶಾಲೆಗಳ ಸ್ಥಾಪನೆ, ಐರೋಪ್ಯ ಸಂಗೀತದ ಪೋಷಣೆ ಮತ್ತು ಪುಸ್ತಕ ಪ್ರಕಾಶನ ಮೈಸೂರನ್ನು ಭಾರತದ ಇತರ ರಾಜಾಸ್ಥಾನಗಳ ನಡುವೆ ಎದ್ದು ಕಾಣುವಂತೆ ಮಾಡಿದವು. ಮಹಾರಾಜ ಕೃಷ್ಣರಾಜ III ಒಡೆಯರ್ ಮನೆತನದ ಕುಲದೇವತೆಯ ಗೌರವಾರ್ಥವಾಗಿ ಚಾಮುಂಡಿ ಅಥವಾ ಚಾಮುಂಡೇಶ್ವರಿ ಎಂಬ ಅಂಕಿತದೊಂದಿಗೆ ಕನ್ನಡದಲ್ಲಿ ಅನೇಕ ಜಾವಳಿಗಳನ್ನು ಮತ್ತು ಭಕ್ತಿಗೀತೆಗಳನ್ನು ‘ಅನುಭವ ಪಂಚರತ್ನ’ ಎನ್ನುವ ಶೀರ್ಷಿಕೆಯಡಿ ರಚಿಸಿದರು. ಮಹಾರಾಜ ಚಾಮರಾಜ IX ರು ೧೮೯೧ನೇ ಸಾಲಿನಲ್ಲಿ ಸಂಗೀತದ ಪುಸ್ತಕಗಳನ್ನು ಸಂರಕ್ಷಿಸಲು ಓರಿಯೆಂಟಲ್ ಲೈಬ್ರರಿಯನ್ನು ಪ್ರಾರಂಭಿಸಿದರು ಮತ್ತು ವಿವಿಧ ಸಂಗೀತ ಕಲಾವಿದರ ಫೋನೋಗ್ರಫಿಕ್ ರೆಕಾರ್ಡಿಂಗ್‌ಗಳನ್ನು ಅರಮನೆಯ ಗ್ರಂಥಾಗಾರಕ್ಕಾಗಿ ತರಿಸಿದರು.

ರಾಗ ಮತ್ತು ಭಾವಗಳಿಗೆ ಪ್ರಾಧಾನ್ಯತೆಯನ್ನು ನೀಡುವ ಒಂದು ವಿಶಿಷ್ಟ ಸಂಗೀತ ಸಂಪ್ರದಾಯ ಬೆಳೆದುಬಂದಿತು. ಅರಮನೆಯಲ್ಲಿ ಸ್ಥಾಪಿಸಲಾದ ರಾಯಲ್ ಸ್ಕೂಲ್ ಆಫ್ ಆರ್ಟ್ ಕಲಾ ಬೋಧನೆಯನ್ನು ಸಂಸ್ಥೀಕರಣಗೊಳಿಸಲು ನೆರವಾಯಿತು. ಸಂಗೀತಕೃತಿಗಳು ಮುದ್ರಣಗೊಂಡವು ಮತ್ತು ಅರಮನೆಯ ಸಂಗೀತ ವಿದ್ವಾಂಸರು ಐರೋಪ್ಯ ಸಂಗೀತ ಚಿಹ್ನೆಗಳನ್ನು ಬಳಸಲಾರಂಭಿಸಿದರು. ಪಾಶ್ಚಾತ್ಯ ಸಂಗೀತಕ್ಕೂ ಪ್ರೋತ್ಸಾಹ ದೊರೆಯಿತು. ಬೆಂಗಳೂರಿನಲ್ಲಿ ಬಿಥೋವನ್‌ನ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಅರಮನೆಯ ವಾದ್ಯವೃಂದದೊಂದಿಗೆ ಮಾರ್ಗರೆಟ್ ಕಸಿನ್‌ರ ಪಿಯಾನೋ ಕಚೇರಿ ನಡೆಯಿತು. ಸ್ವತಃ ಕರ್ನಾಟಕ ಕೃತಿಗಳ ಹೆಸರಾಂತ ವಾಗ್ಗೇಯಕಾರರಾಗಿದ್ದ ಮಹಾರಾಜ ಜಯಚಾಮರಾಜರು ರಷ್ಯನ್ ಗೀತಸಂಯೋಜಕ ನಿಕೊಲಾಸ್ ಮೆಡ್ಟರ್ನ್ರ ರೆಕಾರ್ಡಿಂಗ್‌ಗಳ ಸರಣಿಯನ್ನು ಪ್ರಾಯೋಜಿಸಿದರು ಮತ್ತು ಮೈಸೂರು ಆಸ್ಥಾನ ಕರ್ನಾಟಕ ಸಂಗೀತವು ಕಾಲಕ್ಕೆ ಅನುಗುಣವಾಗಿರುವಂತೆ ನೋಡಿಕೊಂಡಿತು. ಅರಮನೆಯ ವಾದ್ಯವೃಂದದ ಗ್ರಾಮಾಫೋನ್ ಧ್ವನಿಮುದ್ರಿಕೆಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಯಿತು.

ಆ ಶತಮಾನದ ವೀಣಾ ವಿದ್ವಾಂಸರಲ್ಲಿ ಮೇರುಪ್ರತಿಭೆಗಳಾದ ಶೇಷಣ್ಣ, ಸುಬ್ಬಣ್ಣ, ಶಾಮಣ್ಣ ಮತ್ತು ವೆಂಕಟಗಿರಿಯಪ್ಪನವರ ಕಾಲದಲ್ಲಿ, ವೀಣೆ ನುಡಿಸುವ ಅತ್ಯಂತ ಶೈಲೀಕೃತವಾದ ವಿಧಾನವು ‘ಮೈಸೂರು ಬಾನಿ’ ಎನ್ನುವ ಹೆಸರಿನಲ್ಲಿ ಹೊರಹೊಮ್ಮಿ, ಐತಿಹಾಸಿಕ ಪದ್ಧತಿಯೊಂದರ ವಿಕಸನಕ್ಕೆ ದಿಗ್ದರ್ಶಕವಾಯಿತು. ಇದು ಸಂಶ್ಲೇಷಣೆ ಮತ್ತು ಏಕೀಕರಣದ ಯುಗವೂ ಆಗಿತ್ತು. ಹಿಂದೂಸ್ಥಾನಿ ಪದ್ಧತಿಯ ಗಾಯಕರಾದ ಫಯ್ಯಾಜ್ ಖಾನ್, ಅಬ್ದುಲ್ ಕರೀಂ ಖಾನ್ ಮತ್ತು ಕಲ್ಕತ್ತದ ಪ್ರಸಿದ್ಧ ಸಿತಾರ್ ವಾದಕರಾಗಿದ್ದ ಆಫ್ತಾಬ್ ಬರ್ಕತ್ತುಲ್ಲಾ ಖಾನ್ ಅವರನ್ನು ಕಛೇರಿಗಳಿಗಾಗಿ ಮೈಸೂರಿನ ದರ್ಬಾರಿಗೆ ಆಹ್ವಾನಿಸಿ ಸನ್ಮಾನಿಸಲಾಯಿತು.

ಆಸ್ಥಾನದಲ್ಲಿನ ಕರ್ನಾಟಕ ಶೈಲಿಯ ಸಂಗೀತಗಾರರು ಹಿಂದೂಸ್ಥಾನಿ ರಾಗಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ, ಅಬ್ದುಲ್ ಕರೀಂ ಖಾನರು ಮೈಸೂರು ವಾಸುದೇವಾಚಾರ್ಯರ ಶಿಷ್ಯವೃತ್ತಿಯಲ್ಲಿ ಹಿಂದೂಸ್ಥಾನಿ ಪದ್ಧತಿಯ ಸರಗಂಗಳ ಸಂಪ್ರದಾಯದಂತೆ ಸೋಲ್ಫಾ ಸ್ವರಗಳ ಆಶು ಪ್ರಸ್ತುತಿಯ ಸಂದರ್ಭದಲ್ಲಿ ಕಲ್ಪನಾಸ್ವರಗಳನ್ನು ಅಳವಡಿಸಿಕೊಳ್ಳುವುದನ್ನು ಕಲಿತರು. ರವೀಂದ್ರನಾಥ ಟಾಗೋರರ ಸೋದರರ ಪುತ್ರಿಯಾದ ಸರಳಾದೇವಿ ಚೌಧುರಾಣಿಯವರು ಎರಡು ವರ್ಷಗಳ ತಮ್ಮ ಮೈಸೂರಿನ ವಾಸ್ತವ್ಯದ ಸಮಯದಲ್ಲಿ ಕರ್ನಾಟಕ ಸಂಗೀತದ ಸೊಬಗಿನ ಪರಿಚಯ ಮಾಡಿಕೊಂಡು, ಕಲ್ಕತ್ತೆಗೆ ಹಿಂದಿರುಗಿದ ಮೇಲೆ ಟಾಗೋರರಿಗೆ ತಾವು ಕಲಿತ ಕರ್ನಾಟಕ ಪದ್ಧತಿಯ ಸಂಗೀತವನ್ನು ಶ್ರವಣ ಮಾಡಿಸಿದರು. ಟಾಗೋರರು ಈ ಕೃತಿಗಳಲ್ಲಿ ನಿಚ್ಚಳವಾಗಿ ಮಡುಗಟ್ಟಿದ್ದ ಮೈಸೂರು ಶೈಲಿಯ ಛಾಪಿಗೆ ಮನಸೋತು, ಕರ್ನಾಟಕ ರಾಗಗಳನ್ನು ಆಧರಿಸಿದ ‘ಬಂಗಗಾನ್’ ಎನ್ನುವ ರವೀಂದ್ರ ಸಂಗೀತ ರಚನೆಗಳನ್ನು ಮಾಡಿದರು.

ಹೀಗೆ ಮೈಸೂರಿನಲ್ಲಿ ಇಂಥಾ ಕಲಾವೈಭವದ ಪರಿಸರವಿದ್ದಾಗ, ಶ್ರೀಕಂಠನ್ ಮತ್ತಷ್ಟು ಪರಿಣತಿ ಪಡೆಯಲು ಮತ್ತೆಲ್ಲಿಗಾದರೂ ತೆರಳುವ ಯೋಚನೆಯನ್ನು ಏಕೆ ತಾನೆ ಮಾಡಿಯಾರು? ತಾವು ಅನ್ವೇಷಿಸುತ್ತಿದ್ದ ನಿಧಿ ತಮ್ಮ ತಾಯ್ನೆಲದಲ್ಲೇ ಹುದುಗಿರುವಾಗ, ಶ್ರೀಮಂತರಾಗಲು ಅವರು ಮಾಡಬೇಕಾಗಿದ್ದುದು ಉತ್ಖನನವನ್ನು ಮಾತ್ರವೇ! “ಕಲಿಕೆಗೆ ಮಾರ್ಗಗಳು ಬಹಳ ಮುಖ್ಯ. ನಿಮ್ಮ ಪಯಣದಲ್ಲಿ ನೀವು ಅವುಗಳನ್ನು ಹುಡುಕಲು ಹೊರಟಾಗ ಹೆಚ್ಚು ಮಾರ್ಗಗಳನ್ನು ಕಂಡುಕೊಳ್ಳುತ್ತೀರಿ. ಕೊನೆಗೂ ಸಂಗೀತವಿದ್ಯೆ ನೀವು ಬದುಕಿರುವವರೆಗೂ ಕಲಿಯುವಂಥ ವಿದ್ಯೆ” ಎನ್ನುತ್ತಾರೆ ಅವರು!

‍ಲೇಖಕರು Admin

May 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: