ಶೋಭಾ ನಾಯ್ಕ ಹಿರೇಕೈ ಓದಿದ ‘ಹಸೆ ಚಿತ್ತಾರ’

ಹಸೆ ಚಿತ್ತಾರವೆಂಬ ತಾಯ್ನೆಲದ ಅಸ್ಮಿತೆ…

ಶೋಭಾ ನಾಯ್ಕ ಹಿರೇಕೈ

ಕರ್ನಾಟಕದ ದೇಶೀ ಚಿತ್ರಕಲೆ ‘ಹಸೆ ಚಿತ್ತಾರ’ ಇದು ಶಿಕ್ಷಕ, ಸಾಹಿತಿ ಮತ್ತು ಹಸೆ ಚಿತ್ತಾರ ಕಲಾವಿದರಾದ ರವಿರಾಜ್ ಸಾಗರ್ ರವರ ಸಂಶೋಧನಾ ಕೃತಿ. ಅಪ್ಪಟ ಮಲೆನಾಡಿನ ಸಾಗರದ ಮಂಡಗಳಲೆಯ ಮಣ್ಣಿನ ಮಗನಾದ ರವಿರಾಜ್ ರವರು, ತಮ್ಮ ನೆಲದ ಕಲೆಯಾದ ಹಸೆ ಚಿತ್ತಾರವನ್ನು ಬಾಲ್ಯದಲ್ಲಿಯೇ ಬೆರಗು ಗಣ್ಣಿನಲ್ಲಿ ತುಂಬಿಕೊಳ್ಳುತ್ತಾ”, ಅರಸನ ಮನೆಯ ಬಣ್ಣದ ಚಿತ್ತಾರಕ್ಕಿಂತ ನಮ್ಮೂರ ಕೇರಿಯ ಹಸೆಗೋಡೆ ಚೆಂದ” ಎಂದು ಎಳೆ ತೆಗಿವಾಗೆಲ್ಲಾ ಹಾಡುವ ಅವ್ವಳ ಹಾಡು ಕೇಳುತ್ತಾ ಬೆಳೆದವರು. ಹೀಗಾಗಿ ಸಹಜವಾಗಿಯೇ ಅವರು ತಮ್ಮ ತನದ, ತಮ್ಮವರ , ತಮ್ಮದೇ ಆದ ಈ ಜಾನಪದ ಕಲೆಯ ಕಸುವು ಮತ್ತು ಸತ್ವವನ್ನು ಹೀರಿಕೊಂಡು ಅದನ್ನು ರಕ್ತಗತವಾಗಿಸಿಕೊಂಡಿದ್ದಾರೆ. ಮತ್ತು ಅಳಿವಿನಂಚಿಗೆ ಬಂದು ತಲುಪಿದ ಈ ಚಿತ್ತಾರವನ್ನು ಉಳಿಸುವಲ್ಲಿ ಜಾನಪದ ಕಲಾ ಲೋಕಕ್ಕೆ ತೀರ ಅಗತ್ಯವಾದ ಮಾರ್ಗದರ್ಶಿ ಹೊತ್ತಿಗೆಯಾಗಿ ಅವರ ಹಸೆ ಚಿತ್ತಾರವೆಂಬ ಸಂಶೋಧನ ಕೃತಿಯನ್ನು ನಮ್ಮ ಮುಂದಿಟ್ಟಿದ್ದಾರೆ.

ಹಸೆ ಚಿತ್ತಾರವೆಂದರೆ ಮದುವೆ ಸಂಪ್ರದಾಯದಲ್ಲಿ ವಧು ವರರನ್ನು ಕೂರಿಸಿ ಶಾಸ್ತ್ರ ಗಳನ್ನು ಮಾಡುವ ಸ್ಥಳದಲ್ಲಿನ ಗೋಡೆಯ ಮೇಲೆ ಚೌಕ ಅಥವಾ ಆಯತಾಕಾರದಲ್ಲಿ ಬರೆಯುವ ಚಿತ್ತಾರ. ಇದು ಮಲೆನಾಡಿನ ದೀವರ ಸಮುದಾಯದಲ್ಲಿ ಪ್ರಚಲಿತವಿದ್ದು ಇದರ ಮೂಲ ಹುಟ್ಟನ್ನು ಹುಡುಕುತ್ತಾ ಹೊರಟ ಲೇಖಕರು ಪ್ರಾಚೀನ ಮಾನವ ಕಂಡುಕೊಂಡ ‘ಆದಿಮ ‘ ಬಂಡೆ ಚಿತ್ರ ಕಲೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತಾರೆ.

ಮಹಾರಾಷ್ಟ್ರದ ವರ್ಲಿ ಕಲೆಯ ಹಿನ್ನಲೆಯನ್ನು ಅಧ್ಯಯನ ಮಾಡಿ ಅಲ್ಲಿಯ ವರ್ಲಿ ಕಲೆಗಳಿಗೂ ನಮ್ಮ ಮಲೆನಾಡಿನ ಹಸೆ ಚಿತ್ತಾರ ಕಲೆಗೂ ಇರುವ ಸಾಮ್ಯತೆ ಗಳಿವೆಯಾದರೂ… ಸಂಸ್ಕೃತಿ , ಪರಂಪರೆ, ಆಚರಣೆಯ ಭಾಗವಾಗಿರುವ ನಮ್ಮ ಹಸೆ ಚಿತ್ತಾರ, ಬುಟ್ಟಿ ಚಿತ್ತಾರಗಳು ವಿನ್ಯಾಸದ ದೃಷ್ಟಿಯಿಂದ ಆಚರಣೆಯ ಅಂತಸತ್ವಗಳಿಂದ ಕೂಡಿರುವ ವಿಶಿಷ್ಟ ಕಲಾ ವಿನ್ಯಾಸವಾಗಿದ್ದು ಸಾಕಷ್ಟು ವ್ಯತ್ಯಾಸ ಗಳನ್ನೂ ಹೊಂದಿದೆ ಎನ್ನುತ್ತಾರೆ.

ಚಚ್ಚೌಕ, ಚಿತ್ರ ಬರೆಯುವಿಕೆ, ಪಪ್ಪುಳಿ, ಬಾಸಿಂಗ, ರೇಖೆ ನಿಲಿಕೊಚ್ಚು, ಸೂರ್ಯ ಚಂದ್ರ ರ ಬರೆಯುವಲ್ಲಿ ಸಾಮ್ಯತೆಯನ್ನು ಗುರುತಿಸುವ ಲೇಖಕರ ಮಾತಿನಲ್ಲಿ ನಮಗೆ ನಮ್ಮ ಹಸೆ ಚಿತ್ತಾರದಲ್ಲಿನ ವೈವಿಧ್ಯತೆ ಯೂ ಕಣ್ಮುಂದೆ ಕಟ್ಟಿ ಕೊಳ್ಳುತ್ತದೆ.

೨೩೬ ಪುಟಗಳ ಈ ಪುಸ್ತಕದ ಒಡಲಲ್ಲಿ ಪ್ರತಿ ಪುಟವೂ ಈ ಕಲೆಯ ಕುರಿತು ಜ್ಞಾನವನ್ನು, ಪ್ರೀತಿಯನ್ನು ನಮ್ಮೆದೆಯೊಳಗೆ ಬಿತ್ತುತ್ತಾ ಹೋಗುತ್ತದೆ. ದೇಶೀ ಚಿತ್ರಕಲೆಯ ಪರಂಪರೆ, ಹಸೆ ಚಿತ್ತಾರದ ಸ್ವರೂಪ ವಿಧಗಳು ಮತ್ತು ವಿನ್ಯಾಸಗಳು, ನಾವೀನ್ಯತೆ ಗಳು ಮತ್ತು ಬೇರೆ ಬೇರೆ ಕಲಾವಿದರುಗಳ ಪರಿಚಯ, ಹಸೆ ಚಿತ್ತಾರದ ಸವಾಲುಗಳು, ಸಾಧ್ಯತೆಗಳು ಮತ್ತು ಇತರೇ ದೇಶೀ ಚಿತ್ರಕಲೆಗಳ ಕುರಿತು ಆಳವಾದ ಅಧ್ಯಯನ ವನ್ನು ಮಾಡಿ ಕೇವಲ ಕಲೆಯ ಬಗ್ಗೆ ಮಾಹಿತಿಯನ್ನು ಹೊತ್ತ ಹೊತ್ತಿಗೆಯನ್ನಾಗಿಸದೆ ತಮ್ಮ ನೆಲದ ಸಾಂಸ್ಕೃತಿಕ ಪರಂಪರೆ ಮತ್ತು ಜೀವನ ಸಂಪ್ರದಾಯಗಳ ಪ್ರತೀಕವಾಗಿ ಇಂದು ಸಾಹಿತ್ಯ ಲೋಕಕ್ಕೆ ಮತ್ತು ಜಾನಪದ ಕಲಾ ಲೋಕಕ್ಕೆ ತಮ್ಮ ಅಮೂಲ್ಯ ಕಾಣಿಕೆಯನ್ನು ಈ ಮೂಲಕ ನೀಡಿದ್ದಾರೆ ಸೋದರ ರವಿರಾಜ್ ರವರು.

ನಮ್ಮ ದೀವರ ಸಮುದಾಯದಲ್ಲಿ ಹಬ್ಬಗಳೆಂದರೆ ಅಲ್ಲಿ ಸಂಭ್ರಮದ ಜೊತೆ ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ಇರುತ್ತದೆ, ಹೆಣ್ಣಿನ ಸೌಂದರ್ಯ ಪ್ರಜ್ಞೆಯ ಪ್ರ ತೀಕವಾಗಿ ತನ್ನದೇ ಅಭಿವ್ಯಕ್ತಿಯ ಚಿತ್ತಾರವನ್ನು ತನ್ನದೇ ನಾವಿನ್ಯತೆಯೊಂದಿಗೆ ಬಿಡಿಸಲು ಆರಂಭಿಸಿದಂತೆ ಹಸೆ ಚಿತ್ತಾರದಲ್ಲಿ ವೈವಿಧ್ಯಮಯ ವಿನ್ಯಾಸ ಗಳು ಹುಟ್ಟಿಕೊಂಡವು ಎನ್ನುವ ಲೇಖಕರ ಮಾತನ್ನು ಓದುವಾಗ ನಾನೂ ಕೂಡಾ ಇದೇ ಕಲೆ ಇದೇ ಸಂಸ್ಕೃತಿಗಳ ಉಸಿರಾಡುತ್ತಾ ಹಸೆ ಚಿತ್ತಾರವನ್ನು ಬಿಡಿಸಿದ ಹಸೆಗೋಡೆಯ ಕೆಳಗೆ ಹಸೆ ಮಣೆ ಏರಿ ಬಂದವಳಾದ್ದರಿಂದ .. ಲೇಖಕರ ಮಾತು ಕೂಡಾ ನನ್ನ ಮಾತೇ ಎನ್ನುವಂತೆ ಭಾಸವಾಗುತ್ತವೆ. ಸೀದಾ ಎದೆಗಿಳಿಯುತ್ತವೆ.

ಮುಂದುವರಿದು … ಹಸೆ ಚಿತ್ತಾರ ವನ್ನು ಮಹಿಳಾ ಅಭಿವ್ಯಕ್ತಿಯಾಗಿ ಅವಳ ಕಲ್ಪನಾ ಶೀಲತೆಯನ್ನು ಮೆಚ್ಚಿಕೊಳ್ಳುತ್ತಾ ಚಿತ್ತಾರದಲ್ಲಿ ಮೂಡಿರುವ ಪ್ರತಿಯೊಂದು ಅಂಶಗಳಿಗೂ ವಿವಿಧ ದೃಷ್ಟಿ ಕೋನದಿಂದ ವಿಮರ್ಶಿಸಿ ಹಲವಾರು ಅರ್ಥ ವಿವರಣೆಗಳನ್ನು ಕೊಡುತ್ತಾರೆ. ಹಸೆ ಚಿತ್ತಾರ ಕೇವಲ ರೇಖೆ ಮತ್ತು ಬಣ್ಣಗಳ ಸಂಯೋಜನೆ ಯಲ್ಲ. ಸಾಂಪ್ರದಾಯಿಕ ಆಚರಣೆಗಳ ಅಂತರ್ಗತ ತತ್ವಶಾಸ್ತ್ರ ಎನ್ನುತ್ತಾ ಅಲ್ಲೊಂದು ತಾತ್ವಿಕ ಚಿಂತನೆಯು ಅಡಕವಾಗಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ.

ಇಷ್ಟೇ ಅಲ್ಲದೆ ಹಸೆ ಚಿತ್ತಾರದಷ್ಟೇ ವೈವಿಧ್ಯತೆ ಇರುವ ಮತ್ತು ಮಲೆನಾಡಿನ ರೈತರ ಸಾಂಸ್ಕೃತಿಕ ಆಚರಣೆಯ ಭಾಗವಾಗಿರುವ ‘ ಬುಟ್ಟಿ ಚಿತ್ತಾರ’. ಗಳ ಬಗ್ಗೆಯೂ ಈ ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದಾರೆ. ಭೂಮಿ ಹುಣ್ಣಿಮೆ ಹಬ್ಬದ ಸಂದರ್ಭದಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಎಡೆ ಇಟ್ಟು , ಚರಗ ಚಲ್ಲುವ ವೇಳೆ , ನೈಸರ್ಗಿಕ ಬಣ್ಣ ಬಳಸಿ ಬಿಡಿಸಿದ ‘ಭೂಮಣ್ಣಿ ಬುಟ್ಟಿ ‘ ಎಂದೇ ಕರೆಯುವ ಈ ಚಿತ್ತಾರದ ಬುಟ್ಟಿಯನ್ನೇ ಬಳಸಲಾಗುತ್ತದೆ. ಭೂಮಣ್ಣಿ ಬುಟ್ಟಿ ಚಿತ್ತಾರದಲ್ಲಿನ ಮೂಲಭೂತ ಅಂಶಗಳಾದ ಸುತ್ತೆಳೆ, ಜೋಡೆಳೆ, ಕೃಷಿ ಸಲಕರಣೆಗಳು, ಏಣಿ, ಒಕ್ಕಲುತನ, ಭತ್ತದ ಸಸಿ, ತೆನೆಹೊತ್ತ ಭತ್ತದ ಸಸಿ, ವಿವಿಧ ಪೈರುಗಳು, ಬಾಳೆಗೊನೆ ,ಅಡಿಕೆಮರ, ಜೊತೆಗೆ ನಲಿಕೊಚ್ಚು, ಗೊಂಬೆಸಾಲು, ಚೆಂಡು ಹೂ ಸಾಲು, ಬೆಟ್ಟಸಾಲು, ಪಪ್ಪುಳಿ, ಅರೆಪಪ್ಪುಳಿ ಮತ್ತಿತರ ಹಸೆ ಚಿತ್ತಾರದ ಮೋಟಿಪ್ಗಳೇ ಭೂಮಣ್ಣಿ ಬುಟ್ಟಿ ಚಿತ್ತಾರದಲ್ಲೂ ಮೂಲಭೂತ ಅಂಶಗಳಾಗಿರುವ ಮಾಹಿತಿಯನ್ನು ಓದುಗರಿಗೆ ರವಾನಿಸಿದ್ದಾರೆ.ಮತ್ತೂ…

ಗೋಡೆ ಚಿತ್ತಾರ, ಬಾಗಿಲು ಚಿತ್ತಾರಗಳು , ಇಡಕಲು ಚಿತ್ತಾರ, ಪಳತದ ಚಿತ್ತಾರ , ಚಾಪೆ ಚಿತ್ತಾರ ಮತ್ತು ತಿರುಗೆಮಣೆ ಚಿತ್ತಾರ , ವಸ್ತ್ರ ಚಿತ್ತಾರದ ಕುರಿತು ವಿವಿಧ ಚಿತ್ರವನ್ನೊಳಗೊಂಡ ಮಾಹಿತಿಗಳು ಇವರ ಶ್ರದ್ಧೆ ಮತ್ತು ಪರಿಶ್ರಮ ಕ್ಕೆ ಹಿಡಿದ ಕನ್ನಡಿಯಂತಿವೆ.

ಮತ್ತೊಂದು ಲೇಖಕರ ವಿಶೇಷತೆಯೆಂದರೆ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಅನೇಕ ಕಲಾವಿದರನ್ನು ಅವರ ಕಲಾ ಚಿತ್ತಾರ ಗಳ ಜೊತೆ ನಮಗೆ ಪರಿಚಯಿಸಿದ್ದಾರೆ ಈ ಪುಸ್ತಕ ದಲ್ಲಿ.

ಜವಳಿ ಉಧ್ಯಮದಲ್ಲಿ, ಗೃಹಲಂಕಾರದಲ್ಲಿ, ಈಗಾಗಲೇ ಹಸೆ ಚಿತ್ತಾರದ ವಿನ್ಯಾಸಗಳನ್ನು ಬಳಕೆ ಮಾಡುತಿದ್ದು.. ಉಧ್ಯಮವಾಗಿ ನಮ್ಮ ಕಲೆಯನ್ನು ಹೇಗೆ ಬೆಳೆಸಬಹುದೆನ್ನುವತ್ತ ಕೂಡಾ ಲೇಖಕರ ಚಿತ್ತ ಹರಿದಿರುವುದು ಅವರ ದೂರದೃಷ್ಟಿ ಮತ್ತು ಸೂಕ್ಷ್ಮ ಪ್ರಜ್ಞೆಯ ಕಲಾ ಪ್ರೀತಿಗೆ ಸಾಕ್ಷಿಯಾಗಿ ದೆ. ಅವರ,’ ಹಸೆ ಚಿತ್ತಾರ’ ದ ಈ ಸಂಶೋಧನಾ ಕೃತಿ ಕಲಾಲೋಕಕ್ಕೆ ಅಪೂರ್ವ ಕಾಣಿಕೆ ಮತ್ತು ಈ ನೆಲದ ಮಕ್ಕಳ ಅಸ್ಮಿತೆ.

‍ಲೇಖಕರು Admin

May 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Ravichandra

    ಚೆನ್ನಾಗಿ ಪರಿಚಯ ಮಾಡಿದಿರೀ…. ಆತ್ಮೀಯ ಲೇಖಕಿಗೂ ,ಅವಧಿಗೂ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: