ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ ಎಸ್ ಡಿ ಎಂಬ ಮಾಯೆ!!

-ಡಾ ನಾ. ದಾಮೋದರ ಶೆಟ್ಟಿ

ಯಾಕೆ ಥೆಮಾ ತಂಡದವರು ಈ ನಾಟಕಕ್ಕೆ ‘ಎಲ್ ಎಸ್ ಡಿ’ ಎಂಬ ಹೆಸರಿಟ್ಟರು? ಅದೂ ಮೂವರು ನಟಿಯರು ಮಾತ್ರ ನಟಿಸಿದ ನಾಟಕ!
ರಂಗಶಂಕರದೊಳಕ್ಕೆ ಪ್ರವೇಶಿಸುವಾಗ ನನ್ನ ತಲೆಯಲ್ಲಿದ್ದ ಯೋಚನೆ ಅದೇ ಆಗಿತ್ತು.

ನಾಟಕ ನೋಡ ತೊಡಗಿದಾಗ ಅದು ಆ ಮೂವರ ಹೆಸರಿನ ಮೊದಲ ಅಕ್ಷರಗಳು ಎಂಬುದು ಅರಿವಾಗಿ ಸಮಾಧಾನದ ನಿಟ್ಟುಸಿರು ಹೊಮ್ಮಿತು. ನಾಟಕ ನೋಡುತ್ತಲೇ ಬಡವರು ಅಮಲೇರಿಸಿಕೊಂಡರೆ ಅವರ ಮನಸ್ಸಿನಲ್ಲಿ ಲೋಕದ ಡೊಂಕಿನ ಬಗ್ಗೆ ಏನೇನು ವಿಚಾರ ಹೊರಳಬಲ್ಲುದು ಎಂಬ ವಾಸ್ತವವೂ ಬೆಳಕಿಗೆ ಬಂತು. ಎಲ್ ಎಸ್ ಡಿ ಎಂದರೆ ಲಕ್ಷ್ಮಿ, ಸರಸ್ವತಿ, ದುರ್ಗೆಯರು ಎಂಬುದು ಒಂದರ್ಥವಾದರೆ ಅಮಲು ಪದಾರ್ಥ ಎಂಬ ಅರ್ಥವೂ ಅಂತರ್ಗತಗೊಂಡಿರುವುದು ಗೋಚರಿಸುತ್ತದೆ.

ನಾಟಕವನ್ನು ಡಾ.ಎಸ್.ವಿ.ಕಷ್ಯಪ್ ರಚಿಸಿದ್ದಾರೆ. ಅದರ ಒಟ್ಟು ಪರಿಕಲ್ಪನೆಯ ಬಗ್ಗೆ ಕಲಾವಿದೆಯರಾದ ಸುನೇತ್ರಾ ಪಂಡಿತ್, ಸ್ನೇಹಾ ಕಪ್ಪಣ್ಣ ಹಾಗೂ ಡಾ. ಸುಷ್ಮಾ ಎಸ್.ವಿ. ಬಹಳ ತಲೆಕೆಡಿಸಿಕೊಂಡಿದ್ದಾರೆ. ಹಾಗಲ್ಲದಿದ್ದರೆ ಇಂಥದ್ದೊಂದು ನಾಟಕ ನಿರ್ಮಾಣವಾಗುವುದು ದುಸ್ತರವೆ.

ಒಂದೆಂದರೆ ಅಭಿನಯಿಸಿದ ಮೂವರೂ ಪ್ರಕಾಂಡ ನಟಿಯರು!ಪೈಪೋಟಿಗಿಳಿದು ಅಭಿನಯಿಸಿದ್ದರು. ಒಬ್ಬರನ್ನು ಮೀರಿಸುವ ಮತ್ತೊಬ್ಬರು! ಮೂವರೂ ಹಲವಾರು ಪಾತ್ರಗಳಿಗೆ ಕಾಯಕಲ್ಪ ನೀಡಿದ್ದಾರೆ. ಎಲ್ ಎಸ್ ಹಾಗೂ ಡಿ -ಮೂವರೂ ಧನಿಕರ ಮನೆಯಲ್ಲಿ ಚಾಕರಿ ಮಾಡುವವರು. ಅವರೇ ಆಯಾ ಮನೆಯ ಮಾಲಿಕರಾಗಿ ಅಭಿನಯಿಸಿದಾಗ ಆಯಾ ಪಾತ್ರಗಳ ಚರ್ಯೆಯೇ ಬದಲಾಗುವುದು ನಟಿಯರ ಅಭಿನಯ ಚಾತುರ್ಯದ ಕೈಗನ್ನಡಿ.

ನಾಟಕದ ಪ್ರಾರಂಭದಿಂದ‌ ತೊಡಗುವ ನಗು, ನಾಟಕದಾದ್ಯಂತ ಅನುರಣನಗೊಳ್ಳುತ್ತಲೇ ಸಾಗುತ್ತದೆ. ಪ್ರತಿಯೊಂದು ಸಂಭಾಷಣೆಯ ನಡುವಣ ಮೌನ, ತಕ್ಷಣ ಮುಂದಿನ ಮಾತನ್ನು ಪಂಚ್ ಮಾಡುವ ಬಗೆ -ನಾಟಕದ ನಾಟಕೀಯತೆಯನ್ನು ಎತ್ತರಕ್ಕೆ ಒಯ್ಯುತ್ತದೆ. ತುಂಬು ಅಂಗಣದ ಪ್ರೇಕ್ಷಕರ ಚಪ್ಪಾಳೆಯ ನಡುವೆ ಎಷ್ಟೋ ಪಂಚ್ ಗಳು ಅರಿವಿಗೆ ಬಾರದೆ ಹೊರಟುಹೋಗಿವೆ.

ನಗೆಗಡಲಿನ ನಡುವೆ ಮನೆಚಾಕರಿಯವರ ಮಾತಿನೊಳಗೆ ಹುದುಗಿರುವ ನೋವನ್ನು ನಾಟಕ ಉದ್ದಕ್ಕೂ ಓತಪ್ರೋತಗೊಳಿಸಿಕೊಂಡಿದೆ. ಧನಿಕರ ಮನೆಯ ಆಳುಗಳ ಬದುಕು ಎಂಥ ದಯನೀಯ ಸ್ಥಿತಿಯದ್ದು ಎಂಬುದರ ಚಿತ್ರಣವೊಂದನ್ನು ಎಲ್ ಎಸ್ ಡಿ ನಾಟಕ ಅಭೂತಪೂರ್ವಕವಾಗಿ ಕಟ್ಟಿಕೊಡುತ್ತದೆ. ನಾಟಕದ ಮರುಪ್ರದರ್ಶನವನ್ನು ಪ್ರೇಕ್ಷಕರು ಕಾಯುವಂತೆ ಮಾಡಿದೆ.

‍ಲೇಖಕರು Admin

8 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading