ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಟ್ಟ ಗುರುತು

– ರುಕ್ಮಿಣಿ ನಾಗಣ್ಣವರ

ನೀನು ಕಾಲೂರಿ ನಿಂತ ಮೇಲೆ
ನನ್ನೊಳಗಿನ ನಿಶ್ಶಬ್ದತೆ
ಹಿಂದಿನ ಮೌನವಾಗಿರಲಿಲ್ಲ
ಒಡೆದ ಮಡಕೆಯೊಳಗೆ
ನೀರು ತನ್ನ ದಾರಿಯನ್ನು
ತಾನೇ ಹುಡುಕಿಕೊಂಡಂತೆ
ಅವಿತಿಟ್ಟಿದ್ದ ಭಾವಗಳು
ಒಂದೊಂದಾಗಿ ಹೊರಬಂದವು

ನನ್ನ ನಿನ್ನ ನೆರಳ ನಡುವೆ
ಯಾವ ದಾರಿಯೂ ಇಲ್ಲ
ಆದರೂ
ದಿಕ್ಕು ತಪ್ಪಿದ ಮನಸ್ಸಿಗೆ
ನೀ ನಡೆದು ಹೋದ
ಹೆಜ್ಜೆಯ ಗಂಧ ಉಳಿದಿದೆ

ನಡುವೆ
ಎರಡು ತೀರಗಳಷ್ಟು ದೂರ
ಒಂದೇ ಅಲೆಯಷ್ಟು ಹತ್ತಿರ
ಮಧ್ಯೆ ಮಾತ್ರ
ಮೌನವಾಗಿ ಜಿನುಗುವ
ಹೆಸರಿಲ್ಲದ ಒರತೆ

ನೀನು ಬಿಟ್ಟುಹೋದ
ಯಾವುದೋ ಗುರುತು
ನನ್ನೊಳಗೆ ಇನ್ನೂ ಒಸರುತ್ತಿದೆ
ಕುಸಿದ ನೆನಪಿನ
ಸಡಿಲ ಮಣ್ಣಿನೊಳಗೆ
ಯಾವುದೋ ಹಸಿರು
ಕಣ್ಣು ತೆರೆಯುತ್ತಿದೆ

ಮುರಿದುದ್ದನ್ನು
ಮತ್ತೆ ಮೊದಲಿನಂತಾಗಿಸುವ
ಹಠವಿಲ್ಲ
ಕೆಲವು ಬಿರುಕುಗಳು
ಮುಚ್ಚುವುದಕ್ಕಲ್ಲ
ಅವುಗಳೊಳಗೆ
ಹೊಸ ಗಾಳಿ ಬರಲು

ಒಂದು ದಿನ
ನಿನ್ನ ಕಡೆಯಿಂದ
ಸಣ್ಣ ಅಲೆಯೊಂದು
ನನ್ನ ದಡ ತಲುಪಿದರೆ

ನನ್ನನ್ನು ಸೋಕಿ ಹೋದ
ಆ ಒಂದು ಅಲೆಯೊಳಗೆ
ಎಷ್ಟೊಂದು ಕಡಲು
ಉಳಿದಿತ್ತೆಂದು
ನಾನು ಸುಮ್ಮನೆ ಓದುತ್ತಿರುತ್ತೇನೆ.

‍ಲೇಖಕರು Admin

8 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading