ಎದೆಯ ಮೇಲಿನ ಕವಿತೆ…

ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ

ಅವಳ ಕವಿತೆ!
ಸಾಕಿ
ಅವಳ
ತೊಡೆಯ ಮೇಲಿನ ಕವಿತೆ
ಮುಖವಾಡಗಳಿಗೆ ತೊಡೆತಟ್ಟಿದೆ

ಎದೆಯ ಮೇಲಿನ ಕವಿತೆ
ದ್ವೇಷದ ಎದೆಗೊದೆಯುತ್ತಿದೆ

ತುಟಿಯ ಮೇಲಿನ ಕವಿತೆ
ಕಟ್ಟಕಡೆಯವನಿಗೆ ಮುತ್ತಿಟ್ಟಿದೆ

ಕಳ್ಳುಬಳ್ಳಿಯ ಕವಿತೆ
ಎಳ್ಳುಬೆಲ್ಲ ಹಂಚಲು ಬಂದಿದೆ

ಅಂಗಳದ ಕವಿತೆ
ತಂಗಾಳಿಗೆ ಗುಂಗು ಹಿಡಿಸಿದೆ.

ನಿರುತ್ತರ
ಸಾಕಿ…
ಕುಡಿಯುತ್ತಿದ್ದೇನೆ

ಮಾತು ಕಥೆಯಾಗಿ
ಕವಿತೆ ಮೌನವಾಗಿದ್ದಕ್ಕೆ

ಕಥೆ ಮಾತೆಯಾಗಿ
ಸಂಗಾತಿ ಕವಿತೆಯಾಗಿದ್ದಕ್ಕೆ

ಮಾತೆ ಬೇರಾಗಿ
ಚಿಗುರು ಸಂಗಾತಿಯಾಗಿದ್ದಕ್ಕೆ

ಬೇರು ಚಿಗುರು
ಮುಖಾಮುಖಿಯಾಗದ್ದಕ್ಕೆ

ಏನೆಂದು ಪ್ರಶ್ನಿಸಬೇಡಿ
ನಿರುತ್ತರದಲಿ ಕುಂತಿದ್ದಕ್ಕೆ

ದೀಪಾವಳಿ
ಸಾಕಿ
ಬಯಲ

ಹಣತೆಯೆದಿರು
ಆ ಕತ್ತಲೇ ಬೆತ್ತಲಾಗಿದೆ

ಹಣತೆಯೆದಿರು
ಬೆಂಕಿ ದೀಪದ ಹುಳುವಾಗಿದೆ

ಅರಿವಿನ ಹಣತೆಯೆದಿರು
ದೀವಳಿಯೇ ಶರಣಾಗಿದೆ

ಹಣತೆಯ ಒಲವಿನೆದಿರು
ಮನಸೇ ತುಸು ಹಸನಾಗಿದೆ.

ಮಧುಶಾಲೆಯೊಳಗೆ…
ಸಾಕಿ
ಅಲ್ಲ್ಯಾರೋ…

ಯುದ್ಧದ ಸುದ್ದಿ ಎತ್ತಿದ್ದಾರೆ
ಮಧುರಸದಲಿ ಬುದ್ಧರಸ ಬೆರೆಸಿಕೊಡು

ಸಂಚಿನ ಯೋಜನೆಯಲ್ಲಿದ್ದಾರೆ
ಕೊಂಚ ಸಮರಸ ಬೆರೆಸಿಕೊಡು

ಇಲ್ಲದ ಗುಲ್ಲೆಬ್ಬಿಸುತ್ತಿದ್ದಾರೆ
ಗಲ್ಲಸವರಿ ಬೆಲ್ಲದ ನುಡಿಗಲಿಸಿಬಿಡು

ಮುಗ್ದ ಹುಡುಗರ ತಲೆ ತಿಕ್ಕುತ್ತಿದ್ದಾರೆ
ಒಳಗಿಳಿದಿದ್ದೆಲ್ಲವನ್ನೂ ಕಕ್ಕಿಸಿಬಿಡು

ನಶೆಯಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ
ಮುಖವಾಡ ಕಳಚಿ ಹೊರದಬ್ಬಿಬಿಡು

ಕವಿತೆ ಬರುವುದಂತೆ
ಸಾಕಿ.

ಮಾಯದ ಗಾಯಕೆ ಮುಲಾಮು
ಸವರಲು ಕವಿತೆ ಬರುವುದಂತೆ

ಸಾಯದ ನೋವುಗಳಿಗೆ ಸಾಂತ್ವನ
ಹೇಳಲು ಕವಿತೆ ಬರುವುದಂತೆ

ಮೌನದೆದೆಯ ಸೀಳಿ ಹೊಲಿದು
ಮಾತಿಗಿಳಿಸಲು ಕವಿತೆ ಬರುವುದಂತೆ

ಇರುಳ ಕರುಳೊಡನೆ ಬೆಳೆದಿಂಗಳ
ಬೆಸೆಯಲು ಕವಿತೆ ಬರುವುದಂತೆ

ಲೋಕ ವಿರೋಧಿಯ ಗುಡಿಸಲೊಳಗೆ
ಪವಡಿಸಲು ಕವಿತೆ ಬರುವುದಂತೆ

ಸುಣ್ಣದ ಕಲ್ಲಿಗೆ ಶಾಂತಿಯ
ಪಟ್ಟಕಟ್ಟಲು ಕವಿತೆ ಬರುವುದಂತೆ…

ಹೂ ಮಾತು…
ಸಾಕಿ
ಕಿತ್ತು ತಂದು ಮಾಲೆ ಮಾಡಿ
ಮುಡಿಯುತ್ತಾರೆ ನಾವು ಸಲ್ಲಾಪವಾಡುತ್ತೇವೆ

ಕಿತ್ತು ತಂದು ಪ್ರೇಮಿಯ ಕೈಗಿಕ್ಕಿನಿವೇದಿಸಿ
ಕೊಳ್ಳುತ್ತಾರೆ ನಾವು ವೇದನೆಗೊಳಗಾಗುತ್ತೇವೆ

ಕಿತ್ತು ತಂದು ದೇವರ ನೆತ್ತಿಗಿಕ್ಕಿ
ಬೇಡಿಕೊಳ್ಳುತ್ತಾರೆ ನಾವು ಕೂಡಿಕೊಳ್ಳುತ್ತೇವೆ

ಕಿತ್ತು ತಂದು ಸತ್ತವರೆದೆಗಿಕ್ಕಿ ದೂರ
ಸರಿಯುತ್ತಾರೆ ನಾವು ಸಂವಾದಿಸುತ್ತೇವೆ.

ನೋವು ತುಂಬಿದ ಕವಿತೆ!
ಸಾಕಿ
ಅವನೆಂದರೆ ನೆರಳಿರದ
ಮರ ಕರುಳಿರದ ಇರುಳು

ಅವನೆಂದರೆ ಹೊಳೆಯ ಮೇಲಿನ ಮಳೆ
ತೊಳೆದರೂ ಉಳಿವ ಕೊಳೆ

ಅವನೆಂದರೆ.. ಅವರಿವರ ನಡುವೆ
ಅಡ್ಡಗೋಡೆ ಕಟ್ಟುವ ವಡ್ಡ

ಅವನೆಂದರೆ ಅವಳ ಆತ್ಮಕಥೆಯಲ್ಲಿ
ಬೆತ್ತಲಾಗುವ ಕತ್ತಲು

ಅವನೆಂದರೆ ಕೀವು ತುಂಬಿದ ಗಾಯ
ನೋವು ತುಂಬಿದ ಕವಿತೆ.

‍ಲೇಖಕರು nalike

August 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮೋಹನ ಹಬ್ಬು

    ವೀರಲಿಂಗನಗೌಡ ಅವರ ಗಝಲ್ ರೀತಿಯ `ಎರೆಯ ಮೇಲಿನ್ ಕವಿತೆ’ಯ ಓದು ಅಪ್ಯಾಯಮಾನವಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: