ಸಮತಾ ಆರ್ ಅವರ ‘ಹುಡುಗಿ ನೋಡುವ ಶಾಸ್ತ್ರ’

ಸಮತಾ ಆರ್

ನಮ್ಮ ದೇಶದಲ್ಲಿ ಮಧ್ಯಮ ವರ್ಗದ ತಂದೆ ತಾಯಂದಿರ ಒಂದು ಅತಿದೊಡ್ಡ ತಲೆಬಿಸಿ ಅಂದರೆ ತಮ್ಮ ಹೆಣ್ಣು ಮಕ್ಕಳಿಗೆ ಒಂದು ಒಳ್ಳೆ ವರ ನೋಡಿ ಮದುವೆ ಮಾಡಿ ಕೊಡುವುದು. ಮಗಳು ಎಷ್ಟೇ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ಒಳ್ಳೆ ಸಂಪಾದನೆ ಮಾಡುತ್ತ ಚೆನ್ನಾಗಿದ್ದರೂ, ಮದುವೆಯಾಗದ ಹೊರತು ಅವಳ ಬಾಳು ಅಪೂರ್ಣ ಅಂತ ಪರಿಗಣಿಸಿ ಬಿಡುತ್ತಾರೆ. ಹಾಗಾಗಿ ಮದುವೆ ಎಂಬ ಬಂಧನಕ್ಕೆ ಒಳಗಾಗಲು ಇಷ್ಟವಿರಲಿ ಇಲ್ಲದಿರಲಿ ತಲೆಯೊಡ್ಡಲೆಬೇಕಾದ ಅನಿವಾರ್ಯತೆ ನಮ್ಮ ಹೆಣ್ಣು ಮಕ್ಕಳಿಗೆ. ಅಲ್ಲದೆ ಇಪ್ಪತ್ತೈದು ಮೂವತ್ತರ ಒಳಗೆ ಮದುವೆಯಾದರೆ ಸರಿ ಇಲ್ಲದಿದ್ದರೆ ಮೂವತ್ತು ಮೀರಿ ಹೋದರೆ ಒಳ್ಳೆ ಹುಡುಗ, ಒಳ್ಳೆ ಮನೆ ಸಿಗೋದಿಲ್ಲ ಅನ್ನೋ ಆತಂಕ ಬೇರೆ ಹೆತ್ತವರಿಗೆ. ಹಾಗಾಗಿ ಮಗಳ ಓದು ಮುಗಿದ ತಕ್ಷಣವೇ ವರಗಳ ಬೇಟೆ ಶುರು ಮಾಡಿ ಬಿಡುತ್ತಾರೆ. ಈಗೇನೋ ಸಾಮಾಜಿಕ ಜಾಲತಾಣಗಳು, ನೂರಾರು ಸಂಬಂಧ ಜೋಡಿಸೋ ವೆಬ್ಸೈಟ್ ಗಳು ಇರುವುದರಿಂದ ಸ್ವಲ್ಪ ಕೆಲಸ ಹಗುರವೆ. ಇನ್ನು ಪರಿಚಯದವರು, ನೆಂಟರಿಷ್ಟರು, ಮದುವೆ ಬ್ರೋಕರ್ ಗಳ ಸಹಾಯದಿಂದ ಕೂಡ ಹುಡುಗರನ್ನು ಹುಡುಕಲು ಪ್ರಾರಂಭಿಸುತ್ತಾರೆ.

ಸರಿ ಎಲ್ಲೋ ಒಬ್ಬ ಹುಡುಗ ಇದ್ದಾನೆ, ಅವನ ಮನೆಯವರು, ಅವನು ಹುಡುಗಿ ನೋಡಲು ಬರುತ್ತಾರೆ ಅಂತ ಗೊತ್ತಾದ ಮೇಲೆ ಮನೆಯಲ್ಲಿ ಗಾಬರಿಯೋ ಗಾಬರಿ. ಕೆಲವು ಪಂಗಡಗಳಲ್ಲಿ ಹುಡುಗಿಯನ್ನೆ ಹುಡುಗನ ಮನೆಗೆ ಕರೆದುಕೊಂಡು ಹೋಗಿ ತೋರಿಸೋ ಸಂಪ್ರದಾಯ ಇದ್ದರೂ ಹೆಚ್ಚಿನದಾಗಿ ಹುಡುಗನ ಮನೆಯವರು ಹೆಣ್ಣು ನೋಡಲು ಬರುವ ಪದ್ಧತಿಯೇ ಬಹಳ ರೂಢಿಯಲ್ಲಿದೆ. ಇತ್ತೀಚಿನ ಕಾಲದಲ್ಲಿ ಹುಡುಗ ಹುಡುಗಿ ಯಾವುದಾದ್ರೂ ಹೋಟೆಲ್ ನಲ್ಲೋ, ಸ್ನೇಹಿತರ ಮನೆಯಲ್ಲೋ, ಮಾಲ್ ಗಳಲ್ಲೋ ಭೇಟಿಯಾಗಿ ಮಾತನಾಡುವ ಅವಕಾಶ ಇದ್ದರೂ ಈಗೊಂದು ಇಪ್ಪತ್ತು ವರ್ಷಗಳ ಹಿಂದೆ ಅಂತಹದಕ್ಕೆಲ್ಲ ಅವಕಾಶ ಬಹಳ ಕಡಿಮೆಯೇ. ಹೆಣ್ಣು ನೋಡೋದು ಅಂದ್ರೆ ಹುಡುಗಿ ಮನೆಗೆ ಹೋಗಿ ನೋಡೋದೇ.

ಗಂಡಿನ ಕಡೆಯವರು ಬರುವ ದಿನ ಬೆಳಗ್ಗೆಯಿಂದಲೇ ಚಹಾ ಉಪಹಾರಗಳ ತಯಾರಿ ಮಾಡಿ, ಹುಡುಗಿಯನ್ನು ಚೆನ್ನಾಗಿ ಅಲಂಕರಿಸಿ, ಮನೆಗೆ ಯಾರಾದರೂ ತಮ್ಮ ಕಡೆಯ ಹಿರಿಯರನ್ನು ಕರೆಸಿ ಸಿದ್ಧತೆ ನಡೆಸೋರು. ಹುಡುಗ ಬಂದ ಮೇಲೆ ಚೆನ್ನಾಗಿ ಉಪಚರಿಸಿ, ಹುಡುಗಿ ತೋರಿಸಿ ಎರಡೂ ಕಡೆ ಒಪ್ಪಿಗೆಯಾದ ಮೇಲೆಯೇ ಮುಂದಿನ ಮಾತು ಕಥೆ ನಡೆಸೋರು. ಕೆಲವು ಸಾರಿ ಎಲ್ಲವೂ ಸರಾಗವಾಗಿ ಜರುಗಿ ಸುಲಭವಾಗಿ ಮದುವೆ ನಡೆದು ಹೋದರೂ ಕೆಲವೊಮ್ಮೆ ಚಿತ್ರ ವಿಚಿತ್ರ ಕಾರಣಗಳಿಂದ ಮದುವೆ ನಿಂತು ಹೋಗಿರುವುದು ಇದೆ. ನನ್ನ ಗೆಳತಿಯರಲ್ಲಿ ಕೆಲವರನ್ನ ಹುಡುಗ ನೋಡಲು ಬಂದಾಗ ನಡೆದ ಕೆಲವು ಪ್ರಸಂಗಗಳು ಸಿಕ್ಕಾಬಟ್ಟೆ ನಗೆ ಉಕ್ಕಿಸುತ್ತವೆ.

ನನ್ನ ಕಾಲೇಜ್ ದಿನಗಳ ಗೆಳತಿಯೊಬ್ಬಳ ನೋಡಲು ಒಬ್ಬ ಒಳ್ಳೆ ಕೆಲಸದಲ್ಲಿರುವ, ಮನೆ ಕಡೆ ಚೆನ್ನಾಗಿರುವ ಹುಡುಗ ಬಂದಿದ್ದ. ಹುಡುಗ ಸ್ವಲ್ಪ ಕಪ್ಪು ಅಂತ ಬ್ರೋಕರ್ ಮುಂಚಿತವಾಗಿ ಹೇಳಿದ್ದರೂ ಹುಡುಗನ ನೋಡಿದ ಮೇಲೆಯೇ ತಿಳಿದಿದ್ದು ಸ್ವಲ್ಪ ಕಪ್ಪಲ್ಲ ಕಡುಗಪ್ಪು ಅಂತ. ಸರಿ ಇನ್ನು ಹಾಲಿನಂತೆ ಬೆಳ್ಳಗಿದ್ದ ಹುಡುಗಿ ಒಪ್ಪಿಯಾಳೇ? “ಅಮ್ಮ ಬೇಡಾ” ಅನ್ನೋ ಒಂದೇ ರಾಗ ಅವಳದು. ಅವರಮ್ಮನಿಗೆ ಈ ಸಂಬಂಧ ಬಿಡಲು ಸ್ವಲ್ಪವೂ ಇಷ್ಟವಿಲ್ಲ. “ಬಣ್ಣ ಏನೂ ಶಾಶ್ವತವಾ? ಒಳ್ಳೆ ಹುಡುಗ, ಒಳ್ಳೆ ಜನ ನೀನಾದರೂ ಸ್ವಲ್ಪ ಹೇಳಮ್ಮ” ಅಂತ ನನಗೆ ಗಂಟು ಬಿದ್ದರು.
ನಾನೂ “ಲೇ, ಬಣ್ಣಕ್ಕಿಂತ ಗುಣ ಮುಖ್ಯ ಅಲ್ವೇನೆ, ಒಂದು ಸಣ್ಣ ಕಾರಣಕ್ಕೆ ಇಷ್ಟು ಒಳ್ಳೆ ಸಂಬಂಧ ಬಿಡ್ತಾರಾ? ಸುಮ್ನೆ ಒಪ್ಕೊ” ಅಂದ್ರೆ ಅವಳೂ “ಹೋಗೆ, ಎಷ್ಟು ಕಪ್ಪಿದ್ದಾನೆ ಗೊತ್ತಾ? ಮದ್ವೆ ಯಾದ್ರೇ ನಾನು ಕಾಡಿಗೆ ತಗೊಳ್ಳೋ ಹಾಗೇ ಇಲ್ಲ. ಬಾರೋ ಇಲ್ಲಿ ಅಂತ ಹೇಳಿ ಅವನ ಕೆನ್ನೆ ಮುಟ್ಟಿ ಬೇಕಾದಷ್ಟು ಕಾಡಿಗೆ ತೊಗೊಬಹುದು” ಅಂತ ನಗಾಡಿದಳು. ಆದರೂ ಅವಳಮ್ಮ ಹಠ ಬಿಡದೆ ಅವನೊಟ್ಟಿಗೆ ಮದುವೆ ಮಾಡಿಯೇ ಬಿಟ್ಟರು. ಹುಡುಗ ಕಪ್ಪಾದರೂ ಚಿನ್ನದಂತಹ ಗುಣ ಹಾಗಾಗಿ ಮದುವೆಯಾದ ಮೇಲೆ ಆತನ ಬಣ್ಣದ ಬಗ್ಗೆ ಯೋಚನೆ ಬಿಟ್ಟು ತುಂಬಾ ಸಂತೋಷವಾಗಿದ್ದಾಳೆ. ನಾನು ಈಗಲೂ ರೇಗಿಸುವುದಿದೆ “ಏನೇ ಕಾಡಿಗೆ ತೋಗೊಳ್ಳೊದು ಬಿಟ್ಟು ಬಿಟ್ಟೆಯ” ಅಂತ. ಆಗೆಲ್ಲ ಮನದುಂಬಿ ನಗುತ್ತಾಳೆ.

ಇನ್ನೊಬ್ಬ ಗೆಳತಿಯ ಹುಡುಗನ ನಿರಾಕರಣೆಯ ಕಾರಣ ಸಕ್ಕತ್ ವಿಚಿತ್ರವಾಗಿದೆ. ಹುಡುಗ ಏನೋ ಎಲ್ಲರಿಗೂ ಇಷ್ಟವಾಗಿದ್ದ. ಸಾಮಾನ್ಯವಾಗಿ ಹೆಣ್ಣು ನೋಡಲು ಬಂದವರು ಹುಡುಗಿ ಮನೆಗೆ ಬಂದರೆ ಊಟ ಮಾಡುವುದಿಲ್ಲ. ಬರಿ ಕಾಫೀ ತಿಂಡಿ ತಗೊಳ್ಳುತ್ತಾರೆ ಆದರೆ ಈ ಹುಡುಗನ ಮನೆಯವರು ಬಹಳ ದೂರದ ಊರಿಂದ ಬಂದಿದ್ದರಿಂದ ಇವಳ ಮನೆಯವರು ಊಟ ಹಾಕಿದ್ದಾರೆ. ಹುಡುಗ ಪಾಪ ಸ್ವಲ್ಪ ಹೊಟ್ಟೆಬಾಕ, ಬೇಕಾದ್ದನ್ನೆಲ್ಲ ಕೇಳಿ ಕೇಳಿ ಮತ್ತೆ ಮತ್ತೆ ಹಾಕಿಸಿಕೊಂಡು ಚೆನ್ನಾಗಿ ಊಟ ಮಾಡಿದ್ದಾನೆ. ಸರಿ ಹುಡುಗಿ ನೋಡಿ ಊಟಾ ಮಾಡಿ ಅವರೆಲ್ಲ ಹೋದ ಬಳಿಕ ಇವಳು “ಹುಡುಗ ಬೇಡವೇ ಬೇಡ “ಅಂತ ಹಟ ಹಿಡಿದು ಬಿಟ್ಟಳು. ನಾನು ಕೇಳಿದಾಗ ಹೇಳಿದ್ದು “ಲೇ, ಬಾಳೆ ಎಲೆ ಒಂದು ಬಿಟ್ಟು ಇನ್ನೆಲ್ಲ ತಿಂದು ಹಾಕಿದ ಕಣೇ, ಆ ಬಕಾಸುರನ್ನ ಮದ್ವೆ ಆದ್ರೆ ಅಷ್ಟೇ, ಜೀವಮಾನ ಇಡೀ ಕೈಯಲ್ಲಿ ಸೌಟು ಹಿಡಿದಿರಬೇಕು, ನನ್ನಿಂದ ಆಗೋಲ್ಲ” ಅಂತ ಖಡಾಖಂಡಿತವಾಗಿ ನಿರಾಕರಿಸಿಬಿಟ್ಟಳು.

ಹೀಗೆ ಹುಡುಗಿ ನೋಡಲು ಬರುತ್ತಿದ್ದಾಗ ಹುಡುಗನ ಜೊತೆಯಲ್ಲಿ ಇಬ್ಬರೋ ಮೂವರೋ ಬರುತ್ತಿದ್ದವರು ಕೆಲವರಾದರೆ, ಇಡೀ ಬಳಗವನ್ನೆ ಕರೆದುಕೊಂಡು ಬರುತ್ತಿದ್ದವರು ಕೂಡ ಇದ್ದರು. ನನ್ನ ಸಹೋದ್ಯೋಗಿ ಒಬ್ಬರ ಮದುವೆ ಸಂದರ್ಭದಲ್ಲಿ ಅವರ ಭಾವಿಪತಿ ಅವರನ್ನು ನೋಡಲು ತಮ್ಮ ಬಳಗವನ್ನೆಲ್ಲ ಕರೆದುಕೊಂಡು ಬಂದಿದ್ದಾರೆ. ಇವರ ಮನೆಯವರು ಕೂಡ ಚೆನ್ನಾಗಿಯೇ ಕಾಫೀ ತಿಂಡಿ ಕೊಟ್ಟು ಉಪಚರಿಸಿದ್ದಾರೆ. ಎಲ್ಲಾ ಮಾತುಕತೆ ಮುಗಿದು ಹೊರಡುವ ಸಮಯದಲ್ಲಿ ಹುಡುಗನ  ಜೊತೆ ಬಂದಿದ್ದ ಅವರ ಅಕ್ಕನ ಮಗಳು, ಇನ್ನೂ ಚಿಕ್ಕವಳು, ತಿಂಡಿ ಇಟ್ಟಿದ್ದ ಟಿಪಾಯ್ ಮೇಲೆ ಲಕ್ಷಣವಾಗಿ ತನ್ನ ಕರ್ಚೀಫ್ ಹರಡಿ ತಟ್ಟೆಯಲ್ಲಿ ಉಳಿದಿದ್ದ ಖಾರಾ ಸ್ವೀಟ್ ಎಲ್ಲಾ ಅದಕ್ಕೆ ಸುರಿದುಕೊಂಡು ಕರ್ಚೀಫ್ ಗಂಟು ಕಟ್ಟಿ ತೆಗೆದುಕೊಂಡು ಹೋದಳಂತೆ. ನನ್ನ ಗೆಳತಿಯ ತಮ್ಮ ಅಂತೂ ನಗು ತಡೆಯಲಾರದೆ ಅವರುಗಳೆಲ್ಲ ಹೋಗುವವರೆಗೆ ಕಷ್ಟದಲ್ಲಿ ನಗು ತಡೆದುಕೊಂಡು ನಂತರ “ಅಕ್ಕಾ, ಈಗಲೂ ಯೋಚನೆ ಮಾಡೆ, ಈ ಹುಡುಗ ಬೇಕಾ ಅಂತ” ಎಂದು ಹೇಳಿಕೊಂಡು ಚೆನ್ನಾಗಿ ನಗಾಡಿ ಅವರ ಮದುವೆ ಆಗುವವರೆಗೂ ಅವರನ್ನು ಅಣಕಿಸಿ ಅಣಕಿಸಿ ಗೋಳು ಹಾಕಿಕೊಂಡನಂತೆ.

ತಮಾಷೆ ಎಂದರೆ ಹಾಗೆ ತಿಂಡಿ ತೆಗೆದುಕೊಂಡು ಹೋದ ಹುಡುಗಿ ಬೆಳೆದು ದೊಡ್ಡವಳಾದ ಮೇಲೆ ಅವಳನ್ನು ನೋಡಲು ಹುಡುಗ ಬಂದಿದ್ದಾಗ ಹುಡುಗನ ಜೊತೆ ಬಂದಿದ್ದ ಒಬ್ಬ ಹುಡುಗಿ ಅದೇ ರೀತಿ ಕರ್ಚೀಫ್ ನಲ್ಲಿ ತಿಂಡಿ ಕಟ್ಟಿಕೊಂಡು ಹೋಗುವುದನ್ನು ನೋಡಿದ ನನ್ನ ಗೆಳತಿ “ಇತಿಹಾಸ ಮರುಕಳಿಸುವುದು ಅಂದ್ರೆ ಇದೇ ಏನೋ” ಎಂದು ನಮ್ಮೊಟ್ಟಿಗೆ ಹೇಳಿಕೊಳ್ಳುತ್ತ ನಗಾಡಿದಳು.

ಹುಡುಗ ಹುಡುಗಿ ಪರಸ್ಪರ ನೋಡಿ ಒಪ್ಪಿಕೊಂಡರೆ ಮುಗಿದು ಹೋಗದು. ಮುಂದಿನ ಮಾತುಕತೆ, ಕೊಡೋದು ತಗೊಳ್ಳೋದು, ಎಲ್ಲಾ ಸೆಟಲ್ ಆಗಿ ಮದುವೆ ಮಾಡಿ ಮುಗಿಸುವಷ್ಟರಲ್ಲಿ ಹೆತ್ತವರು ಹೈರಾಣಾಗಿ ಹೋಗಿರುತ್ತಾರೆ. ಅದರಲ್ಲೂ ಜಾತಕ ನಂಬುವವರಾದ್ರೆ, ಎಲ್ಲಾ ಕೂಡಿ ಬಂದ್ರೂ ಜಾತಕ ಕೂಡಿ ಬಾರದೆ ಕಿತ್ತು ಹೋದ ಮದುವೆಗಳಿವೆ. ನನ್ನ ಅಮ್ಮನ ಗೆಳತಿಯೊಬ್ಬರ ಮಗಳು ಹೀಗೆ ಯಾವುದೋ ನಕ್ಷತ್ರದಲ್ಲಿ ಹುಟ್ಟಿ, ಅವಳ ಜಾತಕದಲ್ಲಿ ವಿಪರೀತ ದೋಷಗಳಿದ್ದು ಮದುವೆಗೆ ಹುಡುಗನನ್ನ ಹೇಗೆ ನೋಡೋದು ಅಂತ ಅವರಮ್ಮನಿಗೆ ವಿಪರೀತ ತಲೆ ನೋವಾಗಿತ್ತು. ಹುಡುಗಿಯೋ ಸಿಕ್ಕಾಪಟ್ಟೆ ಬೋಲ್ಡ್. ಅವಳಿಗೆ ಅದರಲ್ಲೆಲ್ಲ ಏನೂ ನಂಬಿಕೆ ಇರಲಿಲ್ಲ ಆದರೂ ಜನ ಕೇಳಬೇಕಲ್ಲ. ಕಡೆಗೆ ಅವಳೊಂದು ಉಪಾಯ ಮಾಡಿ ಒಬ್ಬ ಪ್ರಸಿದ್ಧ ಜ್ಯೋತಿಷಿಯ ಬಳಿ ತನ್ನ ಜನ್ಮ ದಿನಾಂಕವನ್ನು ತಪ್ಪು ಹೇಳಿ ಹೊಸ ಜಾತಕವನ್ನೇ ಬರೆಸಿಕೊಂಡು ಬಿಟ್ಟಳು. ಅವರಮ್ಮನಿಗೆ  ತುಂಬಾ ಅಳುಕಾದರೂ ಇವಳೇ ಧೈರ್ಯ ತುಂಬಿ, ನೋಡಲು ಬಂದ ಹುಡುಗ್ರಿಗೆ ಆ ಸುಳ್ಳು ಜಾತಕವನ್ನೆ ಕೊಟ್ಟು, ಕಡೆಗೆ ಒಂದು ಒಳ್ಳೆ ಸಂಬಂಧ ಕೂಡಿಯೇ ಬಿಟ್ಟಿತು. ಮದುವೆ ದಿನಾಂಕ ಎಲ್ಲ ನಿಗದಿಯಾಗಿ ಮದುವೆಗೆ ಇನ್ನೊಂದು ವಾರ ಇದ್ದಾಗ, ಎಷ್ಟೇ ಧೈರ್ಯ ಶಾಲಿಯಾದ್ರೂ ಇವಳಿಗೂ ಎಲ್ಲೋ ಮೋಸ ಮಾಡುತ್ತಿದ್ದೇನೆ ಅನ್ನಿಸಲು ಶುರುವಾಗಿ ಕೊನೆಗೆ ಹುಡುಗನನ್ನು ಭೇಟಿ ಮಾಡಿ ತನ್ನ ಸುಳ್ಳು ಜಾತಕದ ವಿಷಯ ಹೇಳಿ ಬಿಟ್ಟಳು. ಕೇಳಿದ ಹುಡುಗ ಹೊಟ್ಟೆ ತುಂಬಾ ನಗಾಡಿ, “ನನಗೂ ಜಾತಕದಲ್ಲಿ ಅಂತಹ ನಂಬಿಕೆ ಏನೂ ಇಲ್ಲಾ, ನಾನೂ ಯಾರಿಗೂ ಹೇಳೋಲ್ಲ, ನೀನೂ ಸುಮ್ಮನಿದ್ದು ಬಿಡು” ಎಂದು ಧೈರ್ಯ ಹೇಳಿದ ಬಳಿಕ ಅವರಿಬ್ಬರ ಮದುವೆ ಸರಾಗವಾಗಿ ನಡೆದೇ ಹೋಯಿತು. ಏನೂ ತೊಂದರೆ ಇಲ್ಲದೆ ಇಬ್ಬರೂ ಚೆನ್ನಾಗಿಯೇ ಬದುಕುವುದನ್ನು ನೋಡಿದಾಗ ನಮ್ಮ ಜಾತಕ ನಮ್ಮ ಕೈಯಲ್ಲಿ ಅನಿಸುತ್ತದೆ.

ನಮ್ಮ ಊರು ಕಡೆ ಬಳಗದಲ್ಲಿ ಜಾತಕ ಅಂತ ಏನೂ ಕೇಳೋದಿಲ್ಲ. ಮದುವೆ ನಿಗದಿಯಾದರೆ ಜೋಯಿಸರ ಹತ್ತಿರ ಹೋಗಿ ಹೆಸರು ಬಲ ಕೇಳ್ತಾರೆ. ಅಕಸ್ಮಾತ್ ಹೆಸರು ಬಲ ಕೂಡಿ ಬರದೇ ಹೋದ್ರೆ ಹುಡುಗ ಇಲ್ಲವೇ ಹುಡುಗಿಯ ಹೆಸರನ್ನೇ ಬದಲಾಯಿಸಿ ಬಿಟ್ಟು ಮದುವೆ ಮಾಡಿ ಬಿಡ್ತಾರೆ. ಅದೂ ಕೂಡ ತಾತ್ಕಾಲಿಕವಾಗಿ ಲಗ್ನ ಪತ್ರಿಕೆಗೆ ಹಾಕಲು, ಮದುವೆ ದಿನ ಚಪ್ಪರದಲ್ಲಿ ಅಲಂಕಾರದ ಬೋರ್ಡ್ ನಲ್ಲಿ ಹಾಕಲು ಮಾತ್ರ. ಮದುವೆಯಾದ ಬಳಿಕ ಯಥಾ ಪ್ರಕಾರ ತಮ್ಮ ಮೂಲ ಹೆಸರಿಗೆ ಮರಳಿ ಹೋಗಿ ಬಿಡುತ್ತಾರೆ ಎಷ್ಟು ಸುಲಭ ನೋಡಿ!

ಹಾಗೆ ಸುಲಭವಾಗಿ ಆದ ಮದುವೆಗಳ ಸಂಖ್ಯೆ ಕಡಿಮೆಯೇ. ಎಷ್ಟೋ ಮದುವೆಗಳಲ್ಲಿ ಹೆಣ್ಣಿನ ಮನೆಯವರು ಹುಡುಗನ ಕಡೆಯ ಡಿಮ್ಯಾಂಡ್ ಎಲ್ಲಾ ಪೂರೈಸುವಲ್ಲಿ ದಿವಾಳಿ ಎದ್ದು ಹೋಗದಿದ್ದರೆ ಸಾಕು ಅಂತ ಮಾಡಿ ಬಿಟ್ಟವರೂ ಸಾಕಷ್ಟಿದ್ದಾರೆ. ಅಂತಹ ಒಂದು ಪ್ರಸಂಗದಲ್ಲಿ ಹುಡುಗಿಯ ಅಮ್ಮ ವರನ ಕಡೆಯವರಿಗೆ ಸರಿಯಾಗಿ ಜೋರು ಮಾಡಿ ಕಳಿಸಿದ್ದರು. ಅವರು ನಮ್ಮ ನೆರೆಮನೆಯವರ ನೆಂಟರು. ಆಗಾಗ್ಗೆ ಅವರ ಮನೆಗೆ ಬರುತ್ತಿದ್ದ ಅವರ ಮನೆಯ ಹುಡುಗಿಗೆ ಪಾಪ ಸ್ವಲ್ಪ ಕಪ್ಪು ಅನ್ನೋ ಕಾರಣಕ್ಕೆ ಸುಮಾರು ವರಗಳು ನಿರಾಕರಿಸಿ ಹೋಗಿದ್ದರು. ಒಮ್ಮೆ ಒಬ್ಬ ಹುಡುಗ ಒಪ್ಪಿದ್ದರೂ ಅವನಷ್ಟುದ್ದಕ್ಕೂ ಸುರಿಯುವಷ್ಟು ವರದಕ್ಷಿಣೆ ಕೇಳಿದ್ದರು. ಮಾತುಕಥೆಗೆ ಕೂತಾಗಲೂ ಯಾವುದೇ ರೀತಿಯ ರಾಜಿಗೆ ಅವರು ಸಿದ್ಧರಿರಲಿಲ್ಲ. ಕೊನೆಗೆ ರೇಗಿ ಹೋಗಿ ಇವರೂ ಬೇಡ ಅಂತ ಬಿಟ್ಟುಬಿಟ್ಟರು. ಆ ಹೆಂಗಸು ನಮ್ಮ ನೆರೆಮನೆಯವರೊಂದಿಗೆ ಮಾತನಾಡುತ್ತ “ಅಲ್ಲ ಕಣ್ ಪುಷ್ಪ ಕೇಳೋಕ್ಕೆ ಒಂದು ಮಿತಿ ಬೇಡ್ವಾ, ಅವನಿಗೆ ಅಷ್ಟು ಖರ್ಚು ಮಾಡಿ ಮದ್ವೆ ಮಾಡಿ ಕೊಡೋ ಬದ್ಲು ಅದೇ ದುಡ್ಡು ನಮ್ಮ ಮಗಳ ಹೆಸರಲ್ಲಿ ಇಟ್ಟು ಸಾಕಿದರೆ ಆಗೊಲ್ವ, ಎಂಥಾ ದುರಾಸೆ ಜನ ಗೊತ್ತಾ, ಒಂಚೂರೂ ವರದಕ್ಷಿಣೆ ಕಮ್ಮಿ ಮಾಡಕ್ಕೆ ಒಪ್ಲೇ ಇಲ್ಲ, ನಂಗೂ ನೋಡಿ ನೋಡಿ ಸಾಕಾಗಿ, ನಿಮ್ ಮಗನ್ದೇನು ಚಿನ್ನದ್ದ, ಮೊದ್ಲು ಇಲ್ಲಿಂದ ಎದ್ದು ಹೋಗಿ ಅಂತ ಓಡಿಸ್ದೆ” ಅಂದಾಗ ಕೇಳುತ್ತಿದ್ದ ನಾವೆಲ್ಲಾ ಕಕ್ಕಾಬಿಕ್ಕಿ. ಅಂತೂ ಆ ದಿಟ್ಟ ಹೆಂಗಸು ತನ್ನ ಮಗಳಿಗೆ ಒಂದು ಪೈಸಾ ಕೂಡ ವರದಕ್ಷಿಣೆ ಕೇಳದ ಹುಡುಗನನ್ನೇ ಹುಡುಕಿ ಮದುವೆ ಮಾಡಿಯೇ ಬಿಟ್ಟರು.

ಆದರೆ ಕೆಲ ಸಂದರ್ಭಗಳಲ್ಲಿ ಡಿಮ್ಯಾಂಡ್ ಮಾಡೋದ್ರಲ್ಲಿ ಹುಡುಗಿ ಮನೆಯವರು ಕೂಡ ಏನೂ ಕಮ್ಮಿ ಇರೋದಿಲ್ಲ. ಮನೆ ಕಡೆ ಅನುಕೂಲವಾಗಿದ್ದು, ಚೆನ್ನಾಗಿ ಕೊಡುವ ಸಾಮರ್ಥ್ಯ ಇದ್ದರೆ ತಮ್ಮ ಮಗಳಿಗೆ ಇಂದ್ರ ಚಂದ್ರರೇ ಬೇಕು ಎನ್ನುವವರು ಕೂಡ ಇದ್ದಾರೆ. ನಮ್ಮ ಊರಿನಲ್ಲಿ ನಮ್ಮ ಅಜ್ಜಿ ಮನೆ ಕಡೆ ನೆಂಟರೊಬ್ಬರದು ಕೂಡು ಕುಟುಂಬ. ಮನೆ ಕಡೆ ಕೂಡ ಚೆನ್ನಾಗಿದ್ದರು. ಅವರ ಮನೆಯ ಒಂದು ಹುಡುಗಿಗೆ ಹೀಗೆ ಒಳ್ಳೇ ಕಡೆ ಕೊಡ್ಬೇಕು ಅಂತ ಅಂದುಕೊಂಡು, ಬಂದ ವರಗಳನ್ನೆಲ್ಲ ನಿರಾಕರಿಸುತ್ತಾ ಹೋಗಿ ಕೊನೆಗೆ ಹುಡುಗಿಗೆ ಮದುವೆಯ ವಯಸ್ಸು ಮೀರುತ್ತಾ ಬಂದರೂ ಅವರ ಅಂತಸ್ತಿಗೆ ತಕ್ಕಂತೆ ಹುಡುಗ ಸಿಕ್ಕಿರಲಿಲ್ಲ. ನನ್ನ ಮದುವೆಯಾಗಿದ್ದ ಹೊಸತರಲ್ಲಿ ಅಜ್ಜಿ ಮನೆಗೆ ಹೋಗಿದ್ದಾಗ ಒಂದು ದಿನ ಆ ಹುಡುಗಿಯ ಅಜ್ಜಿ ನಮ್ಮ ಮನೆಗೆ ಬಂದು ನನ್ನನ್ನು ಅವರ ಮನೆಗೆ ಊಟಕ್ಕೆ ಕರೆದರು.

ಬಂದವರು ನಮ್ಮ ಅಜ್ಜಿ, ಮಾವನ ಜೊತೆ ಮಾತನಾಡುತ್ತ ಕೂತರು. ನಮ್ಮ ಅಜ್ಜಿ ಅವರ ಜೊತೆ ಮಾತನಾಡುತ್ತಾ “ಅಲ್ಲ ಕಣ್ ಲೀಲಾ, ನಿಮ್ ಹುಡುಗಿ ನಮ್ ಈ ಹುಡ್ಗಿಗಿಂತ ಎರಡು ವರ್ಷಕ್ಕೆ ದೊಡ್ಡೊಳಲ್ವ, ಇನ್ನೂ ಆ ಹೆಣ್ ಗೆ ಮದ್ವೆ ಮಾಡ್ದೆ ಮಡಿಕೊಂಡಿದ್ದಿರಲ್ಲ. ನಿನಾದ್ರೂ ನಿನ್ ದೊಡ್ ಮಗನ್ಗೆ  ಬುದ್ಧಿ ಹೇಳೊಕಾಗ್ದ” ಅಂತ ಹೇಳಿದ್ದಕ್ಕೆ, ಅವರು ನಿಟ್ಟುಸಿರು ಬಿಡುತ್ತಾ “ನಾನೇನ್ ಮಾಡ್ಲಿ ಹೇಳ್ ತಿಮ್ಮಕ್ಕ, ಅವರಪ್ಪ ಡಾಕ್ಟ್ರೆ ಬೇಕು, ಇಂಜಿನೀರೆ ಬೇಕು ಅಂತ ಕೂತವನೆ, ಅವನ್ಗೆ ಯಾರು ಹೇಳೋರು ತೊಗೊ” ಅಂತು. ನಮ್ಮ ಮಾವನೂ ಸುಮಾರು ಗಂಡು ತೋರಿಸಿದ್ದರು ಆದರೆ ಯಾರನ್ನೂ ಅವರು ಒಪ್ಪಿರಲಿಲ್ಲ. ಹಾಗಾಗಿ ಕೇಳುತ್ತಾ ಕೂತಿದ್ದ ನಮ್ಮ ಮಾವ ಪಟ್ಟಾರನೆ “ಅಲ್ಲ ಕಣ್ ಲೀಲಕ್ಕ, ಡಾಕ್ಟ್ರು ಇಂಜಿನಿಯರ್ಗಳಗೇನು ಎರಡಿರ್ತವಾ, ಸುಮ್ನೆ ಮನೆ ಕಡೆ ನಿಮ್ಮಂಗೆ ಅನುಕೂಲವಾಗಿ ಇರೋರ್ಗೆ ಕೊಟ್ಟರಾಗ್ದ” ಅಂತ ರೇಗಿಯೇ ಬಿಟ್ಟರು. ಕೇಳುತ್ತಾ ಕೂತಿದ್ದ ನನಗೆ ನಗುವೇ ನಗು. ಆದ್ರೆ ಅಲ್ಲಿದ್ದವರೆಲ್ಲ ಸಹಜವಾಗಿಯೇ ಮಾತನಾಡುತ್ತ ಕೂತಿದ್ದು ನೋಡಿ, ಊರ ಕಡೆ ಭಾಷೆನೆ ಒರಟಲ್ಲವ ಅಂದು ಕೊಂಡು, ಹಲ್ಲು ಕಚ್ಚಿ ನಗು ತಡೆದು ಸುಮ್ಮನಾದೆ.

ಅವರು ಹೋದ ಮೇಲೆ ನಮ್ಮತ್ತೆ ನಮ್ಮ ಮಾವನ್ನ ತರಾಟೆಗೆ ತೆಗೆದುಕೊಳ್ಳುತ್ತ, “ಅಲ್ಲ ಹಂಗ ನೀವು ಹೇಳೋದು, ಈ ವೆಣ್ ಏನ್ ಅಂದಕೊಳ್ಳಲ್ಲಾ. ವಸಿ ನೋಡಿ  ಮಾತಾಡ್ಡ್ ಬಾರ್ದ” ಅಂತ ಗದರಿಸಿದರು. ಅದಕ್ಕೆ ನಮ್ಮ ಮಾವ ನನ್ನ ಕಡೆ ತಿರುಗಿ, “ನೀನೇ ಹೇಳವ್ವಾ, ನಾನೇನಾದರೂ ತಪ್ಪು ಹೇಳಿದ್ನ” ಅಂದಾಗ “ಅಯ್ಯೋ ಹೋಗ್ ಮಾವ, ನೀನೊಂದು” ಅಂತ ಬೈದರೂ, ನಂತರ ಒರಟು ಮಾತಾದರೂ  ಇಡೀ ಮದುವೆ ಅನ್ನೋ ವ್ಯವಸ್ಥೆಯ ಹಿಂದಿನ ಸತ್ಯವನ್ನ ಎರಡೇ ಮಾತುಗಳಲ್ಲಿ ಹೇಳಿಬಿಟ್ಟರಲ್ಲ ಅನಿಸಿದ್ದೂ ಹೌದು.

ನಮ್ಮ ಸಮಾಜ ಗಂಡು ಮಕ್ಕಳಿಗೆ  ಹೆಚ್ಚಿನ  ಪ್ರಾಶಸ್ತ್ಯ ಕೊಡುವುದರಿಂದ ಲಿಂಗ ಅನುಪಾತದಲ್ಲಿನ  ಹೆಣ್ಣುಮಕ್ಕಳ ಸಂಖ್ಯೆ ಬರಬರುತ್ತಾ ವರ್ಷಗಳು ಕಳೆದಂತೆಲ್ಲ ಕಡಿಮೆಯಾಗಿ ಹೋಗುತ್ತಿರುವುದು ಒಂದು ದುರಂತವೇ. ಹಾಗಾಗಿ ಇತ್ತೀಚೆಗೆ ಮದುವೆಗೆ ತಕ್ಕ ಹುಡುಗಿ ಸಿಗುವುದು ಕಡಿಮೆಯಾಗಿರುವುದರಿಂದ ವರದಕ್ಷಿಣೆ ಹಾವಳಿ ಎಷ್ಟೋ ಕಡಿಮೆಯಾಗಿದೆ. ಅಲ್ಲದೇ ಒಂದು ಇಲ್ಲವೇ ಎರಡು ಮಕ್ಕಳನ್ನು ಮಾತ್ರ ಇತ್ತೀಚಿನವರು ಮಾಡಿಕೊಂಡಿರೋದ್ದರಿಂದ, ಇರೋ ಒಬ್ಬಳೇ ಮಗಳನ್ನು ಯಾರಾದರೂ ಒಳ್ಳೆ ಕಡೆಗೆ ಕೊಡುವ ಅಂದುಕೊಂಡು ಹೆತ್ತವರು ಕೂಡ ಚೂಸಿಯಾಗಿ ಬಿಟ್ಟಿದ್ದಾರೆ.

ನಮ್ಮ ಊರ ಕಡೆಯಂತೂ ಇದು ಎಷ್ಟು ವಿಪರೀತಕ್ಕೆ ಹೋಗಿದೆ ಅಂದ್ರೆ ಕೆಲಸದಲ್ಲಿ ಇರೋ ಹುಡುಗನಿಗೆ ಮಾತ್ರ ಹುಡುಗಿ ಸುಲಭವಾಗಿ ಕೊಡುತ್ತಾರೆ ಆದರೆ ರೈತರಿಗೆ ಹುಡುಗಿ ಕೊಡೋದು ಮಾತ್ರ ಕಷ್ಟವೇ.

ನನ್ನ ಕಸಿನ್ ಒಬ್ಬ ಅಷ್ಟಾಗಿ ಓದದೆ ಊರಲ್ಲೇ ಇದ್ದು ತೋಟ ಗದ್ದೆ ಮಾಡಿಕೊಂಡು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರೂ ಅವನಿಗೆ ಹುಡುಗಿ ಸಿಗುವುದು ಬಹಳ ತಡವಾಗಿ ಹೋಯಿತು. ಅಂತೂ ಬಡವರ ಮನೆಯ ಹುಡುಗಿಯೊಬ್ಬಳು ಸಿಕ್ಕು ಎರಡೂ ಕಡೆ ಖರ್ಚು ಇವರೇ ವಹಿಸಿಕೊಂಡು ಮದುವೆ ಮಾಡಿಕೊಂಡರು. ಹುಡುಗನ ಅಣ್ಣ ಮದುವೆಗೆ ಕರೆಯಲು ಬಂದಿದ್ದಾಗ ನಾನು ಹಾಗೇ ಲೋಕಾಭಿರಾಮವಾಗಿ ಮಾತನಾಡುತ್ತ, “ಯಾವಾಗ ಮದ್ವೆ, ಏನ್ ವರದಕ್ಷಿಣೆ, ಎಷ್ಟು ಚಿನ್ನ, ಮಾತನಾಡಿದ್ದೀರಿ” ಅಂತ ವಿಚಾರಿಸಿದರೆ, ಆತ ನಗುತ್ತ “ನಿಮ್ಮದೊಳ್ಳೆ ಚೆನ್ನಾಯಿತು ಅಕ್ಕ, ರೈತರಿಗೆ ಹೆಣ್ಣು ಕೊಟ್ರೆ ಸಾಕಾಗಿದೆ, ಅದ್ರಲ್ಲಿ ವರದಕ್ಷಿಣೆ ಯಾರು ಕೊಡ್ತಾರೆ, ಬೆಂಗಳೂರಲ್ಲಿ ಯಾವುದಾದ್ರೂ ಆಫೀಸಲ್ಲಿ ಕಸ ಹೊಡೆದುಕೊಂಡು ಇದ್ರು, ಹುಡುಗ ಕೆಲಸದ ಮೇಲವ್ನೆ ಅಂತ ಹೆಣ್ ಕೊಡ್ತಾರೆ ಕಣಕ್ಕಾ ನಮ್ ಕಡೆ ಜನ, ಅದೇ ಎಷ್ಟೇ ಚೆನ್ನಾಗಿ ಬೇಸಾಯ ಮಾಡ್ ಕೊಂಡು ಹೋಯಿತ್ತಿದ್ರು ರೈತ್ರಿಗೆ ಹೆಣ್ ಕೊಡೋರೆ ದಿಕ್ಕಿಲ್ಲ. ಏನೋ ನನ್ ತಮ್ಮಂಗೆ ಎರಡು ಕಡೆ ಖರ್ಚು ನಾವೇ ಹಾಕ್ಕೊಂಡು, ಚಿನ್ನನೂ ನಾವೇ ಹಾಕಿ ಮದ್ವೆ ಮಾಡ್ಕೋತಾ ಇದೀವಿ” ಅಂದಾಗ, ಈ ರೀತಿಯಾದ್ರು ವರದಕ್ಷಿಣೆ ಕಾಟ ತಪ್ಪಿದೆಯಲ್ಲ ಅನಿಸಿದರೂ ಅದಕ್ಕೆ ಕಾರಣವಾದ ಲಿಂಗಭೇದ ನೆನೆಸಿದಾಗ ವಿಷಾದವೆನಿಸಿತು.

ಊರು ಕಡೆ ಈ ಕೆಲಸದಲ್ಲಿ ಇರೋರಿಗೆ ಹುಡುಗಿ ಕೊಡೋದು, ಅದರಲ್ಲೂ ಸರ್ಕಾರಿ ಕೆಲಸದಲ್ಲಿರೋರಿಗೆ ಮೊದಲ ಆದ್ಯತೆ, ಅನ್ನೋ ಮನೋಭಾವದ ಹೆಚ್ಚಿನ ಲಾಭ ಸಿಕ್ಕಿರುವುದು ಸರ್ಕಾರಿ ಶಾಲಾ ಶಿಕ್ಷಕರಿಗೆ. ಸ್ಕೂಲ್ ಮೇಷ್ಟ್ರು ಅಂದ ತಕ್ಷಣವೇ ಅವರಿಗೆ ಸಿಗೋ ಮರ್ಯಾದೆ  ಅಷ್ಟಿಷ್ಟಲ್ಲ. ಈಗೊಂದು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಟಿ ಸಿ ಹೆಚ್ ಮಾಡಿದರೆ ಸಾಕು ಕೆಲಸ ಗ್ಯಾರಂಟಿ ಅನ್ನೋ ಹಾಗೆ ಸರ್ಕಾರ ಹಲವಾರು ಸಾವಿರಗಟ್ಟಲೆ ಶಿಕ್ಷಕರ ನೇಮಕಾತಿ ಮಾಡಿಕೊಂಡಿತ್ತು. ಆಗ ಒಂದು ಸೀಸನ್ ನಲ್ಲಿ ಹೀಗೆ ಕೆಲಸ ಸಿಕ್ಕಿದ್ದ ಮೇಷ್ಟ್ರುಗಳಿಗೆ ಸಕ್ಕತ್ ಡಿಮ್ಯಂಡಪ್ಪೋ ಡಿಮ್ಯಾಂಡು. ಮೇಷ್ಟ್ರುಗಳಿಗೆ ಚೆನ್ನಾಗಿ ವರದಕ್ಷಿಣೆ, ಚಿನ್ನ ಬೈಕ್  ಕೊಟ್ಟು ಅದ್ಧೂರಿಯಾಗಿ ಮದ್ವೆ ಮಾಡಿ  ಕೊಡೋರು. ಅಂತಹ ಒಂದು ಕಾಲದಲ್ಲಿ ಒಮ್ಮೆ ನಮ್ಮ ಸಂಬಂಧದ ಹುಡುಗನೊಬ್ಬ ಎಂ.ಟೆಕ್ ಮಾಡಿಕೊಂಡು ಬೆಂಗಳೂರಿನಲ್ಲಿ ಖಾಸಗಿ ಕೆಲಸದಲ್ಲಿ ಇದ್ದವನು ಹುಡುಗಿ ನೋಡಲು ಅಂತ ಒಂದು ಹಳ್ಳಿಗೆ ಹೋಗಿದ್ದಾನೆ. ಅಲ್ಲಿ ಹುಡುಗಿ ನೋಡಿ ಎಲ್ಲಾ ಆದಮೇಲೆ ಹುಡುಗಿ ತಾತ ಮೆಲ್ಲ ಬಂದು ಇವನ ಪಕ್ಕ ಕುಳಿತು, ಮಾತಿಗೆ ಶುರು ಹಚ್ಚಿಕೊಂಡರು. “ಏನ್ ಓದಿದ್ದಿ ಮಗಾ, ಎಲ್ಲಿ ಕೆಲ್ಸ, ಸಂಬಳ ಎಷ್ಟು” ಈ ಎಲ್ಲಾ ಪ್ರಶ್ನೆಗೆ ಉತ್ತರಿಸಿದ ಬಳಿಕ ಒಂದು ನಿಮಿಷ ಸುಮ್ಮನೆ ಕೂತಿದ್ದ ತಾತ “ಅದ್ಯಕಪ್ಪಾ ಟಿ ಸಿ ಹೆಚ್ ಗೆ ಸೀಟ್ ಸಿಗ್ಲಿಲ್ವ ನಿಂಗೆ. ಪಾಪ ಪ್ರೈವೇಟ್ ಕೆಲ್ಸದಲ್ಲಿದ್ದಿಯಲ್ಲ” ಅಂದಾಗ ಇವನಿಗೆ ಗೊತ್ತಾಗಿ ಹೋಯಿತಂತೆ ಇನ್ನೂ ಈ ಹುಡುಗಿ ಯಾವ ಕಾರಣಕ್ಕೂ ನಂಗೆ ಕೊಡಲ್ಲ ಅಂತ.

ಈಗೀಗ ಕಾಲ ಬದಲಾಗುತ್ತಿದೆ. ಹುಡಗರಷ್ಟೇ ಹುಡುಗಿಯರ ವಿದ್ಯಾಭ್ಯಾಸಕ್ಕೂ ಕೂಡ ಮಹತ್ವ ನೀಡಿ, ಅವರೂ ಕೂಡ ಕೆಲಸಕ್ಕೆ ಸೇರಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿ ನಂತರ ಮದುವೆ ಯೋಚನೆ ಮಾಡುವ ಹೆತ್ತವರ ಸಂಖ್ಯೆ ಹೆಚ್ಚಾಗುತ್ತಿದೆ. ಹುಡುಗರಂತೆ ಮೊದಲು ಕರಿಯರ್ ನಂತರವೇ ಮದುವೆ ಅನ್ನುವ ಹುಡುಗಿಯರು ತಮ್ಮ ಜೀವನ ಸಂಗಾತಿಯ ಆಯ್ಕೆಯಲ್ಲೂ ಸಾಕಷ್ಟುಸ್ವಾತಂತ್ರ ತೆಗದು ಕೊಂಡಿದ್ದಾರೆ. ವರದಕ್ಷಿಣೆ ಪೂರ್ಣವಾಗಿ ಹೊರಟು ಹೋಗಿಲ್ಲವಾದರೂ ಕಡಿಮೆ ಯಾಗುತ್ತಿಯರುವುದು ಕೂಡ ಕಾಣುತ್ತಿದೆ. ಆದರೂ ಏನೇ ಆಗಲಿ ಹುಡುಗಿ ನೋಡುವ ಶಾಸ್ತ್ರ ಮಾತ್ರ ಬೇರೆ ಬೇರೆ ಸ್ವರೂಪಗಳಲ್ಲಿ ಆದ್ರೂ ಉಳಿದೇ ಉಳಿದಿದೆ.

‍ಲೇಖಕರು nalike

August 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Smitha Amrithraj.

    ಮದುವೆಯ ಸುತ್ತಾ ಇನ್ನೂ ಮುಗಿಯಾಲಾರ ದಷ್ಟು ಸಂಗತಿಗಳಿವೆ ಸಮತಾ.ಬರಹ ಎಂದಿನಂತೆ ಲವಲವಿಕೆಯಿಂದ ಓದಿಸಿಕೊಂಡು ಹೋಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: