ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಸಿರು ಸಪ್ತಸ್ವರ ಮೀಟಿದರೆ

ತೇಲಿ ಬಿಡು ಬಂಧನ

 ಸರೋಜಿನಿ ಪಡಸಲಗಿ

ಮುಂಜಾವಿನ ಮಂಜಿನಲಿ ಮುಳುಗಿ
ಇಬ್ಬನಿಯಲಿ ತೊಯ್ದು ಮಿಂದೆದ್ದು
ನಳನಳಿಸಿ ಹೊಳೆದು ಮಿರುಗಲು
ಹಸಿರು ಸಿರಿಗ್ಯಾವ ಅಡೆ ತಡೆಯೋ

ಯಾವ ಕಟ್ಟು ಆ ಮೊಗ್ಗಿಗೆ
ಯಾವ ಬಂಧ ಆ ಅರಳಿಗೆ
ಜೊಂಪೆ ಜೊಂಪೆ ಹೂ ತೂಗೆ
ಪರವಶದಿ ಕೊಂಬೆ ಬಾಗಿದರೆ
ಯಾವ ಕಟ್ಟು ಅಲ್ಲಿ ವಿಧಿಸುವಿ

ಮೊಗ್ಗು ಬಿರಿದು ನಕ್ಕಾಗ
ಅರಳು ತುಟಿ ಅರಳಿಸಿದಾಗ
ಮನತುಂಬಿ ಎದೆಯಾಳದ
ಪ್ರೀತಿ ಸಿಹಿ ಜೇನು ಒಸರಿದಾಗ
ಯಾವ ಬಂಧನದ ಕಟ್ಟು ಕಟ್ಟುವಿ

ಸರಿದು ಹೋದ ಸಮಯದ
ನೆನಪಿನ ದೀಪ ಮನ ಬೆಳಗೆ
ಕಾಂತಿ ಮೊಗದಿ ನಗು ಸುರಿಸಿ
ಉಸಿರು ಸಪ್ತಸ್ವರ ಮೀಟಿದರೆ
ಯಾವ ಮರೆ ಅಲ್ಲಿ ಇರಿಸುವಿ

ಹಸಿರಿನೊಡಲ ಹೂ ಹಾಸಿನಲಿ
ಒಲವು ಮೆಲ್ಲಡಿ ಇಟ್ಟು ಬಂದು
ಎದೆಯ ಕದ ಸದ್ದಿಲ್ಲದೆ ತಟ್ಟಿದರೆ
ಸಿಕ್ಕ ಸಂದಿಯಲ್ಲಿ ನುಸುಳಿ ಬಂದರೆ
ಯಾವ ತಡೆ ಅಡ್ಡ ನಿಲ್ಲಿಸುವಿ

ಓಡುವ ಸಮಯದ ಬಂಡಿಯ
ಬಿಡದೇ ತಿರುಗುವ ಚಕ್ರದ
ಬೆನ್ನೇರಿ ನಲಿವು ತಿರು ತಿರುಗಿ
ನಗು ಬೀರಿ ಹಾರಿ ಬರುತಿರೆ
ಕಟ್ಟಲಹುದೆ ಆಣೆಕಟ್ಟು ನಲಿವಿನ ಬುಗ್ಗೆಗೆ

ಕ್ಷಣ ಭಂಗುರದ ಈ ಜೀವನದಿ
ಸುಮಧುರ ಗಳಿಗೆಯ ಮೆತ್ತೆಯಲಿ
ತಪ್ತ ಮನ ತಂಪಾಗಿ ತೃಪ್ತವಾಗಿರಲು
ಭುವಿಯಂಚ ಮುದ್ದಿಸುವ ಆಗಸದ ನೀಲಿಯಲಿ
ಕರಗಿ ಹೋಗಿ ತೇಲಿ ಬಿಡು
ನೋವು ಅಳಲಿನ ಬಂಧನ

‍ಲೇಖಕರು nalike

14 May, 2020

2 Comments

  1. Kumar Vantamure

    ತುಂಬಾ ಚೆನ್ನಾಗಿದೆ–
    ಒಮ್ಮೆ
    ಮತ್ತೊಮ್ಮೆ
    ಇನ್ನೊಮ್ಮೆ ಓದಿದರು ಒಲಿಯದ ತ್ರಪ್ತಿ.

  2. Sarojini Padasalgi

    ಧನ್ಯವಾದಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading