ಸೈಕೋ

ಮುನವ್ವರ್, ಜೋಗಿಬೆಟ್ಟು

ಆ ಸೈಕೋನನ್ನು ಪೊಲೀಸರು ಏನು ಮಾಡಿರಬಹುದು? ಹೊಡೆದಿರಬಹುದೇ? ಈ ಬ್ಯಾಗನ್ನು ಅವನ ಮನೆಗೆ ತಲುಪಿಸೋಣವೇ? ತಲುಪಿಸುವುದಾದರೂ ಹೇಗೆ? ಅದರಲ್ಲಿ ಅವನ ವಿಳಾಸವಿರಬಹುದೇ?” ಪ್ರತಾಪನ ಮನದೊಳಗೆ ನೂರಾರು ಚಿಂತೆಗಳು ಸುತ್ತತೊಡಗಿದವು.

ಹಲವು ಬಾರಿ ಚಿಂತಿಸಿ ಕೊನೆಗೇನೋ ತೀರ್ಮಾನಿಸಿ ಪ್ರತಾಪ ಮೆಲ್ಲಗೆ ಬ್ಯಾಗ್ ತೆರೆದ. ಒಂದಿಷ್ಟು ಪುಸ್ತಕಗಳಿದ್ದವು. ಇನ್ನಷ್ಟು ತಡಕಾಡಿದ ಅಲ್ಲೂ ಆತನಿಗೆ ವಿಳಾಸ ಸಿಗಲಿಲ್ಲ. ಇಡೀ ಬ್ಯಾಗನ್ನು ಜಾಲಾಡಿದಾಗ ಕೊ‌ನೆಯಲ್ಲೊಂದು ಮೆಡಿಕಲ್ ಸರ್ಟಿಫಿಕೇಟ್ ಇತ್ತು. ಅದರಲ್ಲೊಂದು ವಿಳಾಸ ಬರೆದಿತ್ತು. ನಿರಾಳವೆನಿಸಿ ಕೊನೆಗೆ ಅವನ ಮನೆಯವರಿಗಾದರೂ ಈ ಸುದ್ದಿ ಮುಟ್ಟಿಸಬಹುದಲ್ವಾ ಅನ್ನಿಸಿ ಅಲ್ಲೇ ಸೀಟಿಗೊರಗಿ ಕುಳಿತುಕೊಂಡ.

ಸುಮಾರು ಹೊತ್ತಿನ ಬಳಿಕ ರೈಲು ಮತ್ತೆ ವೇಗ ಕಡಿಮೆಗೊಳಿಸುತ್ತ ನಿಂತಿತು. ಮಣಭಾರದ ಬ್ಯಾಗನ್ನು ಹೊರುತ್ತಾ ಪ್ರತಾಪ್ ಬಂಟವಾಳದಲ್ಲಿ ಇಳಿದುಕೊಂಡ. ರೈಲು ನಿಲ್ದಾಣ ದಾಟಿ ಟೀ ಅಂಗಡಿ ಮುಂದೆ ಬಂದು, “ಒಂದು ಟೀ ಕೊಡಿ,” ಅಂದ. ದೇವರ ಹಾಡಿನ ಮಧ್ಯೆ ಬಿಸಿ ಟೀ ಲೋಟಕ್ಕೆ ಸೊರ್ರೆಂದು ಸುರಿವ ಸದ್ದು ಕೇಳಿತು. ಟೀ ಕೊಡುತ್ತಿದ್ದಂತೆ ಪ್ರತಾಪ್ ಅಂಗಡಿಯವನಲ್ಲಿ, “ಸರ್, ಈ ಅಡ್ರೆಸ್ ಎಲ್ಲಿ ಬರುತ್ತೆ? ಜಾರ್ಜ್, ಮನೆ ನಂ.೧೩೦, ಅಗ್ರಹಾರ ಬಂಟ್ವಾಳ,” ವಿಚಾರಿಸಿದ.‌ “ನಮಗೆಂತ ಗೊತ್ತಿರ್ತದೆ ಸಾರ್, ಓ ಅಲ್ಲಿದ್ದಾನಲ್ಲ, ಆ ಅಟೋದವನಲ್ಲಿ ಕೇಳಿ. ಮಂಗಳ ಗ್ರಹಕ್ಕೆ ಬೇಕಾದ್ರೂ ಕರ್ಕೊಂಡು ಹೋಗ್ತಾನೆ,” ಅಂತ ಅರೆಬರೆ ತೊಳೆದ ಸುಕ್ಕುಗಟ್ಟಿದ ಮುಖದಲ್ಲೇ ಹೇಳಿ ನಗುತ್ತಾ ಚಹಾದ ಹಣಕ್ಕೆ ಕೈ ಚಾಚಿದ.



ಪ್ರತಾಪ್ ಆಟೋದವನನ್ನು ಕೈ ಸನ್ನೆಯಲ್ಲೇ ಕರೆದ. ಆಗಷ್ಟೇ ಬೆಳಕು ಮೂಡುತ್ತಿತ್ತು. ಅವನು ಬರುವ ಹೊತ್ತಿಗೆ ಪ್ರತಾಪ್ ಟೀ ಅಂಗಡಿಯವನಲ್ಲಿ ಸುಮ್ಮನೆ ಕೇಳಿದ.
ಮತ್ತೆ ವ್ಯಾಪಾರವೆಲ್ಲಾ ಹೇಗುಂಟು?
ಬೋಣಿ ನಿಮ್ಮಿಂದಲೇ ಸರ್, ನೋಡ್ಬೇಕು. ಒಂದು ಸಾವಿರ, ಐನೂರೆಲ್ಲಾ ಆಗ್ತದೆ, ದೇವರ ದಯೆ,” ಅಂದು ನಸುನಕ್ಕ.
ಅಷ್ಟರಲ್ಲಿ ಆಟೋದವನು ಧಾವಿಸಿದ್ದ. ಅವನಿಗೆ ಅಡ್ರೆಸ್ ಹೇಳಿದ್ದೇ ತಡ, ಹೈವೇ ದಾಟಿಸಿ ಒಳ ರಸ್ತೆಯಲ್ಲಿ ರೊಯ್ಯೆಂದು ತಿರುಗಿಸಿ ಗಲ್ಲಿ ದಾಟಿಸಿ ೨೦ ನಿಮಿಷದಲ್ಲೇ ತಲುಪಿಸಿ, “ಇದೇ ಸರ್ ಮನೆ,” ಅಂದ.

ಅವನ ಬಾಡಿಗೆ ಕೊಟ್ಟು ಪ್ರತಾಪ ಬ್ಯಾಗನ್ನೂ ಕೆಳಕ್ಕಿಳಿಸಿದ. ಹೆಂಚು ಹಾಕಿದ್ದ ಚಂದದ ಮನೆ. ಎದುರಿನ ಚಾವಡಿಗೆ ಶೀಟ್ ಹೊದಿಸಿದ್ದರಿಂದ ಕರೆಯದೆಯೇ ಸ್ವಾಗತ ಕೋರಿದಷ್ಟು ಚೊಕ್ಕಟವಾಗಿತ್ತು. ಚಂದದ ಹೂವಿನ ಗಿಡಗಳು. ಬ್ಯಾಗ್ ಎತ್ತಿಕೊಂಡು ಮನೆ ಬಾಗಿಲಿಗೆ ಬಂದ. ಬೆಳಗಾಗುತ್ತಿರುವುದಷ್ಟೇ ಆದ್ದರಿಂದ ಪೇಪರ್ ಮತ್ತು ಹಾಲು ಮನೆ ಹೊರಗಿದ್ದರಿಂದ ಬಾಗಿಲಿನ್ನೂ ತೆರೆದಿರಲಿಲ್ಲವೆಂಬುವುದು ವೇದ್ಯವಾಗುತ್ತಿತ್ತು. ದೂರದಲ್ಲಿ ತೂಕಡಿಸುತ್ತಿದ್ದ ನಾಯಿ ಒಮ್ಮೆಲೇ ಜಾಗೃತಗೊಂಡು ಒಂದೇ ಸಮನೆ ಬೊಗಳತೊಡಗಿತು. ಗದ್ದಲ ಕೇಳಿ ಮಧ್ಯ ವಯಸ್ಸಿನ ಸಭ್ಯ ಹೆಣ್ಣುಮಗಳು ಹೊರ ಬಂದಳು.
ಯಾರು? ಯಾರು ಬೇಕಿತ್ತು?”
ಜಾರ್ಜ್ ಅವರ ಮನೆಯಲ್ವಾ?”
ಎಷ್ಟು ಸಲ ಹೇಳುವುದು ನಿಮಗೆಲ್ಲ, ಅವರನ್ನು ಹುಡುಕಿಕೊಂಡು ಮನೆಗೆ ಬರಬೇಡಿ ಅಂತ. ಅವರು ಮಾಡಿದ ತಪ್ಪನ್ನು ನಮ್ಮ ಮನೆಗೆ ತಂದು ನಮ್ಮನ್ನು ಅವಮಾನಿಸಬೇಡಿ. ದಯವಿಟ್ಟು ಹೋಗಿ,” ಸಿಡುಕಿದಂತೆ ಹೇಳಿ ಮುಗಿಸಿದಳು.

ಹಾಗಲ್ಲ, ಮೇಡಂ ಸಮಾಧಾನ ಮಾಡ್ಕೊಳ್ಳಿ. ನಿನ್ನೆ ರಾತ್ರಿ ನಿಮ್ಮ ಗಂಡ ಒಂದು ಹೆಣ್ಣು ಮಗುವೊಂದನ್ನು… ಅವರನ್ನು ಪೋಲಿಸರು ಬಂಧಿಸಿದರು. ಆಗ ಈ ಬ್ಯಾಗ್ ನನ್ನ ಬಳಿ ಉಳಿಯಿತು. ಅದು ಕೊಡಬೇಕಾಗಿತ್ತು ಅದಕ್ಕೆ ಬಂದೆ. ಕ್ಷಮಿಸಿ,” ಎಂದ. ಆತ ಮುಂದಿರಿಸಿದ ಬ್ಯಾಗನ್ನು ನಿರ್ವಿಕಾರದಿಂದ ಎತ್ತಿಕೊಂಡಳು.

ಅವರು ಮಾನಸಿಕ ಅಸ್ವಸ್ಥರಾಗಿ ಎರಡು ವರ್ಷವಾಯಿತು. ನಮಗೊಬ್ಳು ಸಣ್ಣ ಹೆಣ್ಣು ಮಗುವಿದ್ಳು. ಆ ಮಗು ಅಂದ್ರೆ ಅವರಿಗೆ ಪ್ರಾಣ‌. ಇಲ್ಲೇ ನೋಡಿ, ಆ ದಾರಿಯಲ್ಲೇ ಆಡ್ತಾ ಇದ್ದವಳು, ರಿಕ್ಷಾ ಅಪಘಾತವಾಗಿ ತೀರಿಕೊಂಡ್ಳು. ಆ ಬಳಿಕ ಅವರು ಮನೆಗೆ ಸರಿಯಾಗಿ ಬಂದದ್ದೇ ಇಲ್ಲ. ನೆರೆಯವರೆಲ್ಲಾ ನಿನ್ನ ಗಂಡ ವಿಕೃತ ಕಾಮಿಯಂತೆ, ಹೆಣ್ಣು ಮಕ್ಕಳನ್ನು ಕಂಡರೆ ಏನೆಲ್ಲಾ ವಿಕೃತವಾಗಿ ನಡೆದುಕೊಳ್ಳುತ್ತಾನಂತೆ ಎಂದು ಹೇಳಿ ಮನಸ್ಸಿಗೆ ಚುಚ್ಚುತ್ತಿದ್ದಾರೆ. ಅದಕ್ಕೇ ಸರ್, ಸಾಕಾಯಿತು ಆ ಪೀಡೆ. ಡೈವೋರ್ಸು ಕೇಳಿಕೊಂಡೆ, ಇನ್ನೆರಡು ವಾರಗಳಲ್ಲಿ ಸಿಗಬಹುದು,” ಎಂದು ಹೇಳಿ ಬಿಕ್ಕತೊಡಗಿದಳು.

ಸಮಾಧಾನ ಮಾಡಿ ಮೇಡಂ. ಸರಿ ನಾನು ಬರುತ್ತೇನೆ, ದೇವರು ಒಳ್ಳೆಯದು ಮಾಡಲಿ,” ಎಂದು ಹೇಳಿ ಪ್ರತಾಪ್ ಎದ್ದು ಬಂದ. ಅವನ ಮನಸ್ಸು ತುಂಬಾ ಅಪರಾಧಿ ಭಾವ‌. “ರೈಲಿನಲ್ಲಿ ಅಷ್ಟು ಜನರ ಮಧ್ಯೆ ಅವನನ್ನು ನಾವು ಅನುಮಾನಿಸುವಾಗ ಅವನಿಗೆ ಹೇಗಾಗಿರಬಹುದು. ಬಹುಶಃ ತನ್ನ ಕಳೆದು ಹೋದ ಮಗಳನ್ನು ಅವನು ಆ ಹುಡುಗಿಯಲ್ಲಿ ಕಂಡಿರಬಹುದಾ? ಹೆಣ್ಣು ಮಗುವನ್ನು ಮುಟ್ಟಿದ ಎಂಬ ಕಾರಣಕ್ಕೆ ನಾನು ಅವನಿಗೆ “ಸೈಕೋ” ಎಂಬ ಬಿರುದು ಕೊಟ್ಟದ್ದು ಥರವೇ? ನಾನು ಹಾಗೇ ಕರೆದ ಬಳಿಕ ಬೋಗಿಯ ಎಲ್ಲರೂ ಅವನನ್ನು ಪೋಲಿಸರಿಗೆ ಒಪ್ಪಿಸಲು ಧೈರ್ಯ ತೋರಿದರೇ?” ಇವಿಷ್ಟು ಪ್ರಶ್ನೆಗಳು ಅವನನ್ನು ಗುಂಗಿ ಹುಳುವಿನಂತೆ ಕೊರೆಯತೊಡಗಿದವು.



ಮಹಿಳೆ ಬ್ಯಾಗೆತ್ತಿಕೊಂಡು ಒಳ ನಡೆದಳು. ಪ್ರತಾಪ್ ಅಂಗಳ ದಾಟುತ್ತಿದ್ದಂತೆ ಜಗಲಿಯಲ್ಲಿ ಮಲಗಿದ್ದ  ನಾಯಿ ಮತ್ತೆ ಜಾಗೃತವಾಯಿತು. ಪ್ರತಾಪ್ ಅಪ್ರಯತ್ನವಾಗಿ ಅಲ್ಲೇ ನಿಲ್ಲಿಸಲಾಗಿದ್ದ ಬೈಕು ನೋಡುತ್ತಲೇ ಅದರ ಬಳಿಗೆ ಬಂದ. ಅದನ್ನೇ ನೋಡುತ್ತಾ ನಿಂತ. ಅಷ್ಟರಲ್ಲೇ ಹಿಂದಿನಿಂದ, “ಅದು ಅವರದ್ದು, ಹೋದ ವಾರ ಇಲ್ಲೇ ಬಿಟ್ಟು ಹೋಗಿದ್ದಾರೆ. ಏನು ಮಾಡುತ್ತಾರೋ ಗೊತ್ತಿಲ್ಲ.
ಅಲ್ಲ, ಅವರೇನಾದರೂ ಕವಿತೆ ಬರೆಯುತ್ತಾರೊ?
ಗೊತ್ತಿಲ್ಲ, ತುಂಬಾ ಓದಿದ್ದಾರೆ. ಪುಸ್ತಕಗಳ ರಾಶಿಯೇ ಇದೆ. ಅವರಿಗೆ ಓದು ತಲೆಗೆ ಹತ್ತಿರ್ಬೇಕು ಎಂದು ಜನ ಹೇಳುತ್ತಿದ್ದಾರೆ. ಮತ್ತೆ ದೇವರಿಗೇ ಗೊತ್ತು.”
ಸರಿ, ನಾನು ಬರುತ್ತೇನೆ,” ಎಂದು ಪ್ರತಾಪ್ ಹೊರಟು ಬಂದ.

ಒಂದು ವಾರ ಕಳೆದಿರಬಹುದು. ಕೂಳೂರು-ಬೈಕಂಪಾಡಿ ಫಲ್ಗುಣಿ ನದಿ ಸೇತುವೆ ದಾಟಬೇಕಾದರೆ ಸುಮಾರು ವಾಹನಗಳು ಸರತಿ ನಿಂತಿದ್ದವು. ಆ ಸಂಜೆ ಮಂಗಳೂರಿನ ಕಡಲಲ್ಲಿ ಸೂರ್ಯ ಕತ್ತು ಕೊಯ್ದು ಅಸುನೀಗುವವರೆಗೂ ಪ್ರತಾಪನಿಗೆ ಒಂದಿಂಚು ಟ್ರಾಫಿಕಿನಿಂದ ಹಂದಾಡಲಾಗಿರಲಿಲ್ಲ. ಬೈಕ್ ಇಂಜಿನ್ ಆಫ್ ಮಾಡಿ ಧೂಳು ನುಂಗಿಕೊಂಡು ಸುತ್ತಲ ಪ್ರಕೃತಿಯನ್ನೊಮ್ಮೆ ಸವಿಯತೊಡಗಿದ. ಕಂಟೈನರ್ ಲಾರಿಯೊಂದು ಹೊಸ ಸೇತುವೆ ಮೇಲೆ ಬಂದು ಸಿಲುಕಿ ಹಾಕಿಕೊಂಡಿದ್ದೇ ಈ ಅವಾಂತರಕ್ಕೆಲ್ಲಾ ಕಾರಣ. ಅದಾಗಲೇ ಚರ್ಚಿನ ಶಿಲುಬೆಗಳು ಮಿಂಚತೊಡಗಿದ್ದವು. ಫಲ್ಗುಣಿ ಕಡಲು ಸೇರುವಲ್ಲಿ ನಾಲ್ಕೈದು ಬೋಟುಗಳು ಲೈಟು ಹಾಕಿಕೊಂಡು ಮೀನು ಬೇಟೆ ಮುಗಿಸಿ ತೀರ ಸೇರುತ್ತಿದ್ದವು. ಬೀಸುವ ತಂಗಾಳಿಗೆ ತಲೆಯಾನಿಸುತ್ತಿದ್ದ ಕಲ್ಪವೃಕ್ಷಗಳು.‌

ಬಹುಶಃ ಅಲ್ಲಿ ನವಮಂಗಳೂರು ಬಂದರು ಬಾರದಿರುತ್ತಿದ್ದರೆ; ಈ ಧೂಳು, ವಾಹನ ದಟ್ಟನೆಗಳಿಲ್ಲದ ಚಂದದ ಪ್ರಕೃತಿ ಸೊಬಗು ಸವಿಯಬಹುದಿತ್ತೇನೋ. ಗೂಡಿಗೆ ಮರಳುತ್ತಿರುವ ಸಾವಿರಾರು ಕಡಲು ಹಕ್ಕಿಗಳು. ಅಷ್ಟು ರಾಶಿ ಹಕ್ಕಿಗಳಿಗೆ ಹೊಟ್ಟೆ ತುಂಬಿದರೆ ಕಡಲಲ್ಲಿ ಏನು ಉಳಿಯುತ್ತದೋ! ಒಮ್ಮೆ ಪ್ರತಾಪನ ಮನದಲ್ಲಿ ಹಾದು‌ ಹೋಯಿತು. ಇನ್ನು ಕಾಯುತ್ತಾ ಕುಳಿತರೆ ಬೆಂಗಳೂರಿನ ಸಿಲ್ಕ್ ರೋಡ್ ಟ್ರಾಫಿಕ್ ದಾಖಲೆ ಅಳಿಸಿಬಿಡಬಹುದು ಎಂದುಕೊಂಡು ಹೆದ್ದಾರಿಯ ಕೆಳಗೆ ಹೋಗಿದ್ದ ಆ ಮಣ್ಣು ರಸ್ತೆಗೆ ಅವನು ಬೈಕ್ ಇಳಿಸಿದ. ತುರಾತುರಿಯಲ್ಲಿ ಟ್ರಾಫಿಕ್ ದಾಟಿ ಹೋಗಿ ಮನೆಗೆ ತಲುಪುವಷ್ಟು ಅವಸರದ ಕೆಲಸವೂ ಅವನಿಗಿರಲಿಲ್ಲ. ಆ ಮಣ್ಣು ರಸ್ತೆ ಸುಮಾರು ದೂರ ಹೋದ ಬಳಿಕ ಫಲ್ಗುಣಿ ನದಿಯ ತೀರದಲ್ಲೇ ಕೊನೆಯಾಯಿತು.

ಬಹುಶಃ ಮರಳ ದಂಧೆಯ ಲಾರಿ ಚಾಲಕರು ಮಾಡಿದ ಕಳ್ಳದಾರಿ ಇರಬೇಕು. ಬೈಕ್ ನಿಲ್ಲಿಸಿ, ಸ್ವಲ್ಪ ಹೊತ್ತು ಹಾಗೆಯೇ ಕುಳಿತು ಸುತ್ತಲೂ ವೀಕ್ಷಿಸತೊಡಗಿದ. ಅದೊಂದು ಅತ್ಯಂತ ಸುಂದರ ಸಂಜೆ ಅನಿಸಿತವನಿಗೆ. ದೂರದಲ್ಲೊಂದು ಒಂಟಿ ಕಾಲುದಾರಿ ಕಾಣಿಸಿ, ಕುತೂಹಲ ಹುಟ್ಟಿ ಮೆಲ್ಲೆಗೆ ಕಾಲ್ನಡಿಗೆಯಲ್ಲೇ ಮುಂದುವರಿದ. ನಿರ್ಜನ ನದಿಯ ತೀರವದು. ಸುತ್ತಲೂ ಚಾಚಿಕೊಂಡ ಒಂದು ಬೃಹತ್ ದೇವದಾರು ಮರ. ಆ‌ ಮರಕ್ಕೆ ಒಂದು ನೂರು ವರ್ಷವಾದರೂ ಆಯುಸ್ಸಿರಬಹುದು. ಮುಂದೆ, ಹೊರಗೆ ನಿಶ್ಚಲವಾದಂತೆ ಒಳಗೊಳಗೆ ಹರಿವ ಗುಪ್ತಗಾಮಿನಿ ಫಲ್ಗುಣಿ. ಸೂರ್ಯ ಕಂತುವ ವೇಳೆ, ಅರಿಶಿನ ಹಚ್ಚಿದಂತಹ ಪರಿಸರ. ಒಂದು ಕ್ಷಣ ನಾಲಗೆ ತುದಿಯಲ್ಲೊಂದಿಷ್ಟು ಕವಿತೆಗಳು ಹುಟ್ಟಿಬಿಟ್ಟವು. ಅರೆಕ್ಷಣ ಜಾರ್ಜ್ ನೆನಪಿಗೆ ಬಂದು ಕಾಡತೊಡಗಿದ. ಮಗಳ ಅಕಾಲಿಕ ಮರಣ ಆತನನ್ನು ಮಾನಸಿಕ ಅಸ್ವಸ್ಥನಾಗಿ ಮಾಡಿದ್ದು, ಬಿರುಕು ಬಿಟ್ಟ ಸಂಬಂಧ. ಜಾರ್ಜನ ಒಂಟಿ ಜೀವನ ನೆನೆದು ಪ್ರತಾಪ್ ವ್ಯಾಕುಲಗೊಳ್ಳತೊಡಗಿದ.

ಚಿಂತಿಸುತ್ತಾ ಎದ್ದವನು, ಆ ದೇವದಾರ ಮರದ ದಪ್ಪ ಬೇರಿನ ಮೇಲೆ ಕುಳಿತುಕೊಂಡ. ಸೇತುವೆಯಲ್ಲಿ ಬೀದಿ‌ನಾಯಿಗಳಿಗಿಂತ ಕಡೆಯಾಗಿ ಹಾರನ್ ಹಾಕಿ ತಾಳ್ಮೆ ಕಳೆದುಕೊಳ್ಳುತ್ತಿರುವ ಸಣ್ಣ ವಾಹನಗಳು. ಇವರೆಲ್ಲಾ ಹಾರನ್ನು ಹಾಕಿದ ತಕ್ಷಣ ಕಂಟೈನರ್ ತನ್ನಿಂತಾನೇ ಎದ್ದು ಬದಿಗೆ ಸರಿದು ಬಿಡುತ್ತದೆ ಅನ್ನುವಷ್ಟು ಹೆಡ್ಡರಂತೆ ಕಿಟಕಿಯಿಂದ ತಲೆತೂರಿ ಶುದ್ಧ ಮಂಗಳೂರು ಭಾಷೆಯಲ್ಲಿ ಬೈಯ್ಯುತ್ತಾ ಹಾರನ್ ಹಾಕುತ್ತಿದ್ದ ಅವರ ಅವತಾರ ನೋಡಿ ಪ್ರತಾಪನಿಗೆ ನಗು ತಡೆಯಲಾಗಲಿಲ್ಲ. ತಾನೂ ಮನೆ ತಲುಪಲೇಬೇಕೆಂಬ ತುರಾತುರಿಯಲ್ಲಿ ಇದ್ದಿದ್ದರೆ ತನ್ನ ಅವಸ್ಥೆಯೂ ಇದರಿಂದ ಭಿನ್ನವಿರುತ್ತಿರಲಿಲ್ಲ ಅನಿಸಿತವನಿಗೆ. ಸುಮ್ಮನೆ ಬೇರಿನ ಮೇಲೆ ಕುಳಿತು ನದಿಗೆ ಕಲ್ಲೆಸೆಯತೊಡಗಿದ. “ಬ್ಳುಂ” ಎಂದು ಸದ್ದು‌ಮಾಡಿ ಚಿನ್ನದ ತೆರೆಗಳು ಕಂಪನ ಸೃಷ್ಟಿಸುತ್ತಿದ್ದವು. ಸುಮಾರು ಹತ್ತು ಕಲ್ಲೆಸೆದಿರಬಹುದು. ಸಮಗಾತ್ರದ‌‌ ಕಲ್ಲು ಅಲ್ಲೆಲ್ಲೂ ಸಿಗದೆ ಅವನೊಮ್ಮೆ ಎಡಕ್ಕೆ ಹೊರಳಿದ.

ಆಹ್! ತಥಾಕಥಿತ ಮರದ ಕಿಂಡಿಯಲ್ಲೊಂದು ಡೈರಿ. ಸುತ್ತಲೂ ನೋಡಿದ. ಆ ಸಂಜೆ ಅಲ್ಲಿ ಯಾರೂ ಇದ್ದಂತೆಯೂ ತೋರಲಿಲ್ಲ. ಮೆಲ್ಲಗೆ ಹತ್ತಿರ ಬಂದು ಆ ಪುಸ್ತಕವನ್ನೆತ್ತಿಕೊಂಡ. ಕುತೂಹಲ ಹುಟ್ಟಿ ಡೈರಿ ತೆರೆದರೆ ಮೊದಲ ಪುಟದಲ್ಲೊಂದು ಭಾವ ಚಿತ್ರ. ಸ್ಫುರದ್ರೂಪಿ ಯುವಕ. ಕ್ಲೀನ್ ಶೇವ್ ಮಾಡಿದ್ದ ಚಂದದ ಮುಖ ಭಾವ. ಹೆಸರು ಬರೆದಿಲ್ಲ. ಇನ್ನಷ್ಟು ಪುಟ ತೆರೆದರೆ ಕೊನೆಯ ಪುಟದಲ್ಲೊಂದು ಟಾಪ್ ಕಳೆದುಕೊಂಡ ಪೆನ್ನು. ಮತ್ತೆ ಮೊದಲ ಪುಟಕ್ಕೆ ಬಂದ.

ಕವಿತೆಗಳಿಗೆಲ್ಲಿಯ ಸಾಲ
ಹುಡುಕದಿರು ನದಿಮೂಲ”
ಕವಿತೆಗೆ ಯಾರು ಸಾಲ ಪಡೆಯುತ್ತಾರೆ. ನದಿಮೂಲ ಯಾಕೆ ಹುಡುಕಬೇಕು. ತಲೆ ಬುಡ ಅರ್ಥವಾಗದೆ ಪ್ರತಾಪ್ ಮತ್ತೊಂದು ಪುಟ ತೆರೆದ. ನಾಲ್ಕು ಸಾಲುಗಳ ಕಾಡುವ ಕವಿತೆಗಳ ಗುಚ್ಫ. ಮುದ್ದಾದ ದುಂಡಗಿನ ಕೈ ಬರಹ. ಅರ್ಧ ಡೈರಿ ಮುಗಿದರೆ,
ಮುಗಿಸಿ ಹೊರಡುವುದು ಸುಲಭವೇ
ಕಂಬಳಿ ಹುಳ ಸೋಗು ಹಾಕಿದಂತೆ”
ಹೀಗೊಂದು ಕವಿತೆ. ಮತ್ತೆ ಖಾಲಿ ಬಿಟ್ಟ ಎರಡು ಪುಟಗಳು. ಆ ಬಳಿಕ ಒಂದು ಮೊಂಬತ್ತಿಯ ಚಿತ್ರ.
ಬಳಿಕ ಬೇರೆ ಯಾರದ್ದೋ ಕೈಬರಹ. ಅವುಗಳು ಕವಿತೆಗಳೇ, ವಿಶಿಷ್ಟ ಶೈಲಿ. ಸೊಟ್ಟಗಿನ ಕೈ ಬರಹ. ಒಂದೇ ಡೈರಿಯಲ್ಲಿ ಎರಡು ಶೈಲಿಯ ಕೈ ಬರಹಗಳು. ಇದು ಹೇಗೆ ಸಾಧ್ಯ!

ರೆಕ್ಕೆ ಬಡಿಯುವ ಚಿಟ್ಟೆಗೆ
‌ಬದುಕು ತುಂಬಾ ಅಭಿಮಾನಿಗಳು
ತಲುಪಲಾಗದವರಿಗೆ ಬರೆದ
ಕವಿಗೆಂತಹ ಅವಮಾನ
ಯಾರೋ ಮೆಚ್ಚಿ ಚಪ್ಪಾಳೆ ತಟ್ಟುತ್ತಾರೆ
ಶಿಳ್ಳೆ ಹೊಡೆದು ಸ್ವಾಗತಿಸುತ್ತಾರೆ”

ಒಂದಷ್ಟು ನೈರಾಶ್ಯದ ಜೊಂಪಿನಲ್ಲಿ ಬರೆದ ಅದ್ಭುತ ಕವಿತೆಗಳು ಪ್ರತಾಪನನ್ನೂ ಬಹುವಾಗಿ ಕಾಡತೊಡಗಿದ್ದವು.

ಎರಡೂ ಕೈ ಬರಹ ತುಂಬಿದ ಡೈರಿಯಲ್ಲಿ ತುಂಬಾ ಅಸಂಬದ್ಧ ಬರಹ, ದುಃಖ ಸಂಕೇತದ ಚಿತ್ರಗಳು. ಕೆಲವು ಕವಿತೆಗಳು ಬಹಳ ದೀರ್ಘವಾಗಿದ್ದವು. ಕೆಲವು ಸಣ್ಣ ಗೆರೆಗಳಲ್ಲಿ ಮುಗಿಯುವ ಅಪೂರ್ಣ ಕವಿತೆಗಳು. ಅಲ್ಲಲ್ಲಿ ಗದ್ಯ ಬರಹಗಳೂ ಇವೆ. ಒಂದಕ್ಕೊಂದು ತಾಳೆಯಾಗದ ಪದಪುಂಜಗಳು. ವೈರಾಗ್ಯದ ತುರೀಯಾವಸ್ಥೆ ತಲುಪಿದ ಬರಹಗಳು. ತಾನು ಹಿಂದೆಂದೂ ಓದಿರದ ಭಾವ ಅಲ್ಲಿತ್ತು. ಒಂದೇ ಓದಿಗೆ ಸೆಳೆದುಬಿಡುವ ಮಾಂತ್ರಿಕ ಶಕ್ತಿ ಆ ಕವಿತೆಗಳಿಗಿದೆ ಎಂದು ಅನಿಸಿತು ಅವನಿಗೆ.

ವಿಳಾಸ ಹುಡುಕಿ ಬರಬೇಡಿ
‌‌ನಾನು  ಬದುಕಿಲ್ಲ
ಕವಿತ್ವ ಜೀವಂತವಿದ್ದರೆ
ನಾನು ಅದಕ್ಕೆ ಹೊಣೆಗಾರನಲ್ಲ”

ಈ ಕವಿತೆಗಳನ್ನು ಓದುತ್ತಾ ಕುಳಿತರೆ ಕಳೆದೇ ಹೋಗುವಷ್ಟು ತೀವ್ರವಾಗಿ ಕಾಡಿತವನಿಗೆ. ಡೈರಿ ಮುಚ್ಚಿದ. ಅದಾಗಲೇ ಸಾಕಷ್ಟು ಕತ್ತಲಾಗಿತ್ತು. ಬೆಳದಿಂಗಳು ಚೆಲ್ಲಿದ ಆ ಕಾಡು ದಾರಿ ವಿಶೇಷ ಅನುಭೂತಿ ಕೊಡತೊಡಗಿತು.

ಅಷ್ಟರಲ್ಲಿ ಪೊದೆಯ ದಾರಿಯಿಂದ ಯಾರೋ ಬಂದಂತಾಯಿತವನಿಗೆ. ಒಮ್ಮೆಲೆ ಬೆಚ್ಚಿ “ಯಾರು?” ಅಂದ ಅಷ್ಟರಲ್ಲಿ ಪೊದೆ ಮರೆಯಿಂದ ಆ ಒಂಟಿ ಜೀವ ಒಂದೇ ಸಮನೆ ಓಡತೊಡಗಿತು. ಪ್ರತಾಪನಿಗೆ‌ ದಿಗಿಲಾಗಿ ಹಿಂದೆಯೇ ಓಡತೊಡಗಿದ. ಅದಾಗಲೇ ಇವನಿಗಿಂತ ಸ್ವಲ್ಪ ದೂರದಲ್ಲಿ ಬೈಕು ನಿಲ್ಲಿಸಿದ ಅನಾಮಿಕ ಹೆಲ್ಮೆಟ್ ಧರಿಸಿ ಬೈಕ್ ಹತ್ತಿ ಹೊರಟೇ ಬಿಟ್ಟ. ತಕ್ಷಣವೇ ಕಾರ್ಯೋನ್ಮುಖನಾದ ಪ್ರತಾಪ್ ಡೈರಿಯನ್ನು ಬ್ಯಾಗಿನೊಳಕ್ಕೆ ತುರುಕಿ ಬೈಕ್ ಹತ್ತಿ ಬೆನ್ನಟ್ಟಿದ.

ಎಲ್ಲೋ ನೋಡಿದ್ದೆ ಎನೆನಿಸುವ ಬೈಕ್. ಬೆಂಬಿಡದೆ ಬೈಕ್ ಹಿಂದೆ ಬಿದ್ದ. ಕೂಳೂರು ದಾಟಿದ ಬೈಕ್ ಕೊಟ್ಟಾರ ತಲುಪಿರಬಹುದು. ಸಣ್ಣಗೆ ಮಳೆ. ಆ ಆಗಂತುಕ ವೇಗ ಹೆಚ್ಚಿಸಿದ. ಸರ್ಕಲ್ ದಾಟಬೇಕು ಎನ್ನುವಷ್ಟರಲ್ಲಿ ಎದುರಿನಿಂದ ಬರುತ್ತಿರುವ ಶರ ವೇಗದ ಬಸ್ಸು. ಒಮ್ಮೆಲೆ ಬ್ರೇಕ್ ಹಾಕಿದ್ದು ಕೇಳಿಸಿತು. ಪ್ರತಾಪನ ವೇಗ ಯಾಂತ್ರಿಕವಾಗಿ ತಗ್ಗಿತು.

ಕ್ಷಣಾರ್ಧದಲ್ಲೇ ಅವನ ಕಣ್ಣೆದಿರುಗೇ ಆಗಂತುಕನ ಬೈಕ್ ಆಕಾಶದಲ್ಲಿ ಹಾರಿದ್ದು‌ ಕಂಡಿತು. ಧಡಾಳ್ ಎಂದು ಬಿದ್ದ ಎರಡು ಸದ್ದು. ಆಗಂತುಕ ನೆಲಕ್ಕೆ ಬಿದ್ದ. ಆ ಬೆನ್ನಿಗೆ ಅದೇ ಬದಿಯಲ್ಲಿ ಶರ ವೇಗದಲ್ಲಿ ಲಾರಿಯೊಂದು “ಲಡಕ್” ಅಂದು ಅವನನ್ನು ಅಪ್ಪಚ್ಚಿ ಮಾಡಿ ಹೊರಟಿತು. ಓಹ್! ಎನ್ನುತ್ತಾ ಪ್ರತಾಪ್ ಕಣ್ಣು ಮುಚ್ಚಿಕೊಂಡ. ಇದೆಲ್ಲವೂ ಕ್ಷಣದಲ್ಲೇ ನಡೆದು ಹೋಗಿತ್ತು. “ಛೇ ಹಿಂಬಾಲಿಸಬಾರದಿತ್ತು,‌” ಅನಿಸಿತವನಿಗೆ. ಛಿಧ್ರಗೊಂಡ ದೇಹ. ಚೆಲ್ಲಾಪಿಲ್ಲಿಯಾಗಿದ್ದ ಆತನ ಕನ್ನಡಕ. ಜೇಬಿನಿಂದ ಬಿದ್ದ ಒಂದಷ್ಟು ಚೀಟಿಗಳು, ನೂರರ ಐದಾರು ನೋಟುಗಳು, ಬಾಚಣಿಕೆ.

ಆದರೂ ಆ ವ್ಯಕ್ತಿ ಯಾಕೆ ಈ ಸಂಜೆ ಬರಬೇಕಾಗಿತ್ತು. ನನ್ನನ್ನು ಕಂಡ ಕೂಡಲೇ ತಪ್ಪಿಸಿಕೊಳ್ಳುವ ಧಾವಂತ ಏನಿತ್ತೋ? ಕಳ್ಳನಿರಬಹುದೆ? ಈ ಡೈರಿ ಆತನದ್ದೇ? ಅದ್ಭುತ ಕವಿತೆಗಳನ್ನು ಬರೆದ ಕವಿ ಅವನೇ ಇರಬಹುದೆ? ಒಂದೂ ಅರ್ಥವಾಗದೆ ಇನ್ನಷ್ಟು ಹತ್ತಿರ ಬಂದ. ಒಬ್ಬ ಪ್ರಬುದ್ಧ ಪ್ರೇಮ ಕವಿಯಂತೆಯೋ, ಒಮ್ಮೆ ಅದ್ಭುತ ಪ್ರಕೃತಿ ಪ್ರೇಮಿಯಂತೆಯೋ ಕವಿ ಭಾವಗಳು ಪಲ್ಲಟವಾದ ಕವಿತೆ ಅವನಿಗೆ ನೆನಪಾಯಿತು.
ಭುವಿಯ ಕಾಲು ತೊಳೆವವಳೇ
ಅವಳ ಮಗುವ ಕೊಂದು
ಸಾಗುವವರ ಹೇಗೆ ತೇಲಿಸುತ್ತೀಯಾ?
ನೀನು ಕರುಣಾಮಯಿ
ಈಜು ಕಲಿತದ್ದಕ್ಕಾಗಿ
ನನ್ನ ಸಾಯಲೂ ಬಿಡಲಾರೆ!”

ಮತ್ತಷ್ಟು ಹತ್ತಿರ ಹೋದ. ರಕ್ತಸಿಕ್ತ ಮಾಂಸ ಮುದ್ದೆಗಳ ಮಧ್ಯೆ ಹೆಲ್ಮೆಟ್ ಹಾಕಿದ್ದ ಶಿರ ಹರಿದ ಮುಂಡ ಆತನನ್ನು ಅಕ್ಷರಶಃ ಬೆಚ್ಚುವಂತೆ ಮಾಡಿತು. “ಜಾರ್ಜ್? ಎ ಸೈಕೋ, ಹೌ ಇಟ್ ಈಸ್ ಪಾಸಿಬಲ್,” ಒಂದೂ ಅರ್ಥವಾಗದವನಂತೆ ಪ್ರತಾಪ್ ನಡುಗತೊಡಗಿದ. ಜನ ಸೇರಲಾರಂಭಿಸಿದರು. ಅಲ್ಲೇ ಅವನ ಪಾಕೆಟ್ನಿಂದ ಬಿದ್ದಿದ್ದ ಆ ಪಾಸ್ ಪೋರ್ಟ್ ಸೈಝ್ ಫೋಟೋವನ್ನು ಎತ್ತಿಕೊಂಡ. ಜನರ ಬೇಸರ, ಸಂತಾಪ ಮಾತುಗಳು ಸಣ್ಣಗೆ ಕೇಳಿಸುತ್ತಿತ್ತು. ಪ್ರತಾಪ್ ಆ ಜನಜಂಗುಳಿಯಿಂದ ದೂರವಾಗಿ ಹತ್ತಿರದ ಬಸ್ ಸ್ಟ್ಯಾಂಡಿಗೆ ಬಂದ.‌ ಅಧೈರ್ಯದಿಂದಲೇ ಆ ಡೈರಿ ತೆರೆದ. ಉಗುಳು ಮೆತ್ತಿ ಆ ಫೋಟೋವನ್ನು ಅವನ ಕೊನೆಯ ಕವಿತೆಯ ಇನ್ನೊಂದು ಮಗ್ಗುಲಲ್ಲಿ ಅಂಟಿಸಿದ. ಒಂದು ಪುಟ ಬಿಟ್ಟು ಚಂದದ ಮೊಂಬತ್ತಿಯೊಂದನ್ನು ಬಿಡಿಸಿದ. ಪುಟವೊಂದು ಕಳೆದು ತನ್ನದೇ ಭಾವವೊಂದು ಅಲ್ಲಿ ಬರೆದಿಟ್ಟ.

ಹುಡುಕ ಬೇಡಿ ನನ್ನನ್ನು
ಸತ್ತು ಹೋಗಿದ್ದೇನೆ
ಗೋರಿಯೂ ಸಿಗದಷ್ಟು
ದೂರ ಮಾಯವಾಗಿದ್ದೇನೆ!”

ನಿಮಿಷಾರ್ಧದಲ್ಲಿ ಅಂಬುಲೆನ್ಸ್ ಸೈರನ್ ಹತ್ತಿರವಾಗತೊಡಗಿದಂತೆ ಮಳೆಯು ಜೋರಾಗತೊಡಗಿತು. ಅನಿರೀಕ್ಷಿತ ಮಳೆಗೆ ಬಸ್ ಸ್ಟ್ಯಾಂಡಿನಲ್ಲಿ ತುಂಬಿದ್ದ ಜನರ ನಡುವೆ ಮೂಲೆಗೆ ನಿಂತಿದ್ದ ಹೆಣ್ಣು ಮಗುವೊಂದು ಪ್ರತಾಪನನ್ನು ನೋಡಿತು. ಪ್ರತಾಪ ಯಾಂತ್ರಿಕವಾಗಿಯೇ ನಕ್ಕ. ಅಪರಿಚಿತನೆಂಬ ಭಯವೋ, ಮಳೆಯ ಚಳಿಗೋ ಆ ಮಗು ತಾಯಿಯ ಸೆರಗಿನೊಳಗೆ ಮಗುಮ್ಮಾಗಿ ಸೇರಿಕೊಂಡಿತು.

‍ಲೇಖಕರು nalike

May 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: