-ವಿಜಯಶ್ರೀ ಹಾಲಾಡಿ
ಮಗು ದೊಡ್ಡದಾಗಿದೆ!
ಈ ದೊಡ್ಡ ಊರಿನಲ್ಲಿ
ಮಾಳಿಗೆ ಮೇಲಿನ
ಸಣ್ಣ ಮನೆಯೊಳಗೆ
ಅಡುಗೆ ಊಟ ತಿಂಡಿ
-ಮಾಡುವಾಗ, ನಿದ್ರಿಸುವಾಗ
ಬರೆಯುವಾಗ, ಓದುವಾಗ
ಸುತ್ತಮುತ್ತಲ ಮನೆಗಳ
ಸುದ್ಧಿ ಸೂರುಗಳು
ಬೇಡವೆಂದರೂ ಕಿಟಕಿಯಿಂದ
ತೂರಿ ಬರುತ್ತವೆ!
ಹಿಂದಿನ ಮನೆಯೊಂದರ
ಅತ್ತೆ ಸೊಸೆ ಜಗಳ
ನಮ್ಮ ನಿದ್ದೆಯನ್ನೂ ಕೆಡಿಸಿ
ಬದುಕಿನ ಭಂಗಗಳ
ಬಗೆಗೆ ತಲೆಬಿಸಿ ಮಾಡಿಸಿ
ಹಿಂದು ಮುಂದಿಲ್ಲದ
ಯೋಚನೆಗೆ ತಳ್ಳುತ್ತದೆ!
ಈಗ ಕೆಲ ಕಾಲದಿಂದ
ಅಲ್ಯಾವುದೋ ಮನೆಯಿಂದ
ತಡರಾತ್ರಿಯ ಮೇಲೆ
ಬೆಚ್ಚಿಬಿದ್ದಂತೆ ಕಿಟಾರನೆ
ಚೀರುವ ಮಗುವಿನ ಸದ್ದು!
ಎಚ್ಚರಾಗಿ ಹಾಸಿಗೆಯಲ್ಲಿ
ಕೂತು ಮಗನ
ಬಾಲ್ಯದತ್ತ ಓಡುತ್ತೇನೆ!
‘ನೀನೂ ಹೀಗೇ..
ಹುಟ್ಟಿದ ದಿನದಿಂದ
ವರ್ಷ ತುಂಬುವವರೆಗೂ
ರಾತ್ರಿ ನಿದ್ದೆ ಕೊಡದೆ
ಅತ್ತದ್ದು, ಆಟವಾಡಿದ್ದು…’
ಓದುತ್ತ ಕುಳಿತ
ಮಗನ ಮುಂದೆ
ನೆನಪಿನ ಚೀಲ
ಬಿಚ್ಚುತ್ತೇನೆ….
ಮುಂದುವರಿದ
ಮಗುವಿನ ಅಳು
ಸಂಕಟ ಹುಟ್ಟಿಸುತ್ತದೆ
ತೊಟ್ಟಿಲಲ್ಲಿ ಇರುವೆ ಕಚ್ಚಿತೋ
ಹೊಟ್ಟೆನೋವೋ, ಅಥವಾ
ತಾಯಿಗೆ ಹಾಲಿಲ್ಲವೋ..
ಪಾಪ! ಅವಳ ಊಟ ನಿದ್ದೆ
ಹೇಗೋ; ಚಿಂತೆ!
ನಿನ್ನೆ ಯಾವುದೋ ಹೊತ್ತಲ್ಲಿ
ಅದೇ ಮಗು ಹಟ ತೆಗೆದು
ಕೂಗುವಾಗ
ಇದ್ದಕ್ಕಿದ್ದಂತೆ ನಗು ಬಂದಿತು!
ನೋವಿನ ಪಟ್ಟಪಸೆಯಿಲ್ಲದ
ಖಾಲಿ ಹಾಡು!
ಆ ಆ ಆ ಎಂಬ
ಹುಸಿ ರಾಗ!
ಕಂಬನಿಯಿಲ್ಲದೆ ಜೊಲ್ಲಿಲ್ಲದೆ
ಮುಖ ಕಿವುಚದೆ
ಓರೆಗಣ್ಣಲ್ಲಿ ಅಮ್ಮನ ಸೆಳೆಯುವ
ಬಹುಶಃ ನಾನೆಂದೂ ಕಾಣಲಾಗದ
ಆ ಕಂದನ ಮುಖ
ಕಣ್ಣೆದುರಿಗೆ ಬಂದು
ಮನಸಾರೆ ನಕ್ಕೆ!






0 Comments