‘ಈಗ ಮದುವೆ ಆಗಿದೆ, ಆದರೆ ಕೆಲವು ಗಂಡಸರಿಗೆ ತಾಳಿಯೂ ಕಾಣೋದಿಲ್ಲ’ – ರೂಪಾ ರಾವ್

ಸಾಲಕ್ಕಾಗಿ ಅಡ್ಜಸ್ಟ್ ಆಗು ಅಂದಿದ್ದ ಆ ಗಂಡಸು

ರೂಪ ರಾವ್

ಒಂದು ಹುಡುಗಿ ಹೆಣ್ಣಾಗುವ ಘಳಿಗೆ ಅತಿ ಸಂಭ್ರಮದ ಘಳಿಗೆ. ಆದರೆ ಅ ಘಳಿಗೆ ಸುಮಾರು ಎಲ್ಲಾರ ಅಮ್ಮಂದಿರು ಅಳುತ್ತಾರೆ. ಮಗಳು ಹೆಣ್ಣಾದಳಲ್ಲ ಎಂಬ ಕಾರಣಕ್ಕಲ್ಲ. ತಾನು ಅನುಭವಿಸಿದ ನೋವು ನರಕಗಳನ್ನು ಮಗಳೂ ಅನುಭವಿಸಬೇಕಾಗುತ್ತಲ್ಲ ಎಂದು.

ಅಂತಹ ಘಳಿಗೆ ಬರುವುದಕ್ಕೂ ಮುಂಚೆಯೇ ಆ ಭಯ ನನಗೆ ಕಾಡಿತ್ತು. ಆಗಿನ್ನೂ ಒಂಬತ್ತನೇ ತರಗತಿಗೆ ಕಾಲಿಟ್ಟಿದ್ದೆ. ಯಾವುದೋ ಅಂಗಡಿಗೆ ಹೋಗುವ ಕಾರಣಕ್ಕಾಗಿ ಹೋದಾಗ , ಯಾವುದೋ ಗಂಡಸು ಏನೇನೋ ಅಸಭ್ಯವಾಗಿ ಹೇಳುತ್ತಾ ನನ್ನ ಹಿಂದೆಯೇ ಬರತೊಡಗಿದ.ಎಂಥ ವಿಷಮ ಘಳಿಗೆ ಎಂದರೆ ಅವನ್ಯಾಕೆ ಹಾಗೆಲ್ಲಾ ಹೇಳ್ತಿದಾನೆ ಅಂತಲೂ ನನಗೆ ಅರ್ಥ ಆಗಿರಲಿಲ್ಲ. ಮನೆಗೆ ಬಂದು ಯಾರಿಗೂ ಹೇಳದೆ ಅತ್ತಿದ್ದೆ.

ಅಲ್ಲಿಂದ ಮುಂದೆ ನಾನು ಹೇಗಿರಬೇಕೆಂಬ ಪಾಠ ಅಮ್ಮನಿಂದ ಬಂತು. ಆಗ ಹೆಣ್ಣಾಗಿದ್ದೆ…. ಒಳ್ಳೆಯ ಸ್ಪರ್ಷ ಕೆಟ್ಟ ಸ್ಪರ್ಷ ನೋಟಗಳ ವ್ಯತ್ಯಾಸ ತಿಳಿಯುತ್ತಿತ್ತು. ಆದರೂ ಬಸ್ ನಲ್ಲಿ ಸ್ಕೂಲಿಗೆ ಹೋಗುವಾಗ ಬೇಕಾಗಿಯೇ ಕೈ ಹಾಕಿ ನೂಕುವ ಕಂಡಕ್ಟರ್, ನನ್ನ ಹಿಂದೆ ಬಂದು ನಿಲ್ಲು ಎನ್ನುತ್ತಿದ್ದ ಡ್ರೈವರ್ ಇವರುಗಳನ್ನು ಎದುರಿಸಲಾಗಿರಲಿಲ್ಲ. ಸುಮ್ಮನೆ ಇವರುಗಳ ಸ್ಪರ್ಷ ತೀಟೆಗೆ ಮೂಕ ಪಶುಗಳಾಗುತ್ತಿದ್ದೆವು(ಅಕಸ್ಮಾತ್ ತಿರುಗಿಸಿ ಕೇಳಿದರೆ ಆ ಬಸ್ ನಮ್ಮ ಸ್ಟಾಪಿನಲ್ಲಿ ನಿಲ್ಲುತ್ತಿರಲಿಲ್ಲ. ನಿಂತರೂ ಒಂದಷ್ಟು ದೂರ ನಿಲ್ಲುತ್ತಿದ್ದೆವೆ. ನಾವುಗಳು ಓಡಿ ಹೋಗಿ ಹತ್ತಬೇಕಿತ್ತು.)

ಅಲ್ಲಿಂದ ಕಾಲೇಜಿಗೆ ಬಂದೆ . ಅಷ್ಟರಲಿ ಈವ್ ಟೀಸಿಂಗ್ಗೆ ಹೊಂದಿಕೊಂಡುಬಿಟ್ಟಿದ್ದೆ. ಜೊತೆಗೆ ಒಳ್ಳೆಯ ಹುಡುಗರೂ ಪರಿಚಯವಾದರು. ಕೆಟ್ಟವರಷ್ಟೆ ಅಲ್ಲ ಒಳ್ಳೆಯವರೂ ಇದ್ದಾರೆ ಈ ಲೋಕದಲ್ಲಿ ಅಂತನ್ನಿಸಿ ಸಂತೋಷವಾಗಿತ್ತು. ನಾನಾಗೆ ಸುರಕ್ಷಿತವಲಯಕ್ಕೆ ಸೇರಿದ್ದೆ. ಯಾವುದಾದರೂ ಹುಡುಗ ರೇಗಿಸಿದರೆ, ಅಥವ ಅಂದರೆ ಬೇರೆ ಹುಡುಗರು ಹೆದರಿಸಿ ಜಗಳವಾಡುತ್ತಿದ್ದರು . ಆಗ ಅನ್ನಿಸಿದ್ದು ಬಹುಷ ನನಗೂ ಅಣ್ಣನೋ ತಮ್ಮನೋ ಇದ್ದಿದ್ದರೆ ಅಥವ ಅಪ್ಪ ಎನಿಸಿಕೊಂಡ ವ್ಯಕ್ತಿ ನಮ್ಮನ್ನೂ ಸರಿಯಾಗಿ ನೋಡಿಕೊಂಡಿದ್ದರೆ ನಾನು ಅಷ್ಟೆಲ್ಲಾ ಕಷ್ಟ ಪಡಬೇಕಿತ್ತಿರಲಿಲ್ಲವೇನೋ ಅಂತ

ಓದು ಮುಗಿಸಿ ಕೆಲಸದ ಜಗತ್ತಿಗೆ ಬಂದೆ. ಸಾಫ್ಟ್ವೇರ್ ಜಗತ್ತಿಗೆ ಸೇರಿದ್ದೆ. ಆದರೆಅಲ್ಲಿನ ಕೊನೆಯ ದಿನ ಕರಾಳ ದಿನ ನನ್ನನು ಕೆಲಸದಿಂದ ತೆಗೆಯಲಾಗಿತ್ತು(ರಿಸೆಶನ್ ನೆಪ)… ಮೊದಲೇ ಕೆಲಸ ಕಳೆದುಕೊಂಡ ನೋವು ಮಾರನೆದಿನ ಪುಸ್ತಕಗಳನ್ನು ಹಿಂದಿರುಗಿಸಲು ಲೈಬ್ರರಿಗೆ ಹೋಗಿದ್ದೆ. ಇದಕ್ಕೂ ಮುಂಚೆ ಹಲವು ಬಾರಿ ಹೋಗುತ್ತಿದ್ದೆ. ಲೈಬ್ರೆರಿಯನ್ ಜೊತೆ ಮಾತನಾಡುತ್ತಿದ್ದೆ. ಆತನೂ ಚೆನ್ನಾಗಿ ಗೌರವದಿಂದಲೇ ಕಾಣುತ್ತಿದ್ದ. ಅಂದು ನನ್ನ ಕೊನೆಯ ದಿನವಾದ್ದರಿಂದ ಶನಿವಾರವಾದರೂ ಹೋಗಿದ್ದೆ. ಆವತ್ತು ಅಲ್ಲಿ ಜನ ಕಡಿಮೆ. ಕಡಿಮೆ ಏನು ಅಂದು ಯಾರೂ ಇರಲಿಲ್ಲ.

ಪುಸ್ತಕ ವಾಪಾಸ್ ತೆಗೆದುಕೊಂಡ ಆತ ಸಂದರ್ಶನದ ಬಗ್ಗೆ ಹೊಸ ಪುಸ್ತಕ ನಿಮಗೆ ಮುಂದೆ ಬೇರೆ ಕೆಲಸಕ್ಕೆ ಸೇರೋಕೆ ಯೂಸ್ ಆಗುತ್ತೆ ನೋಡಿ ಎಂದು ಕೊಟ್ಟ. ನಾನು ನಿಂತುಕೊಂಡೇ ಪುಸ್ತಕ ಹಾಗೆ ಪುಟಗಳನ್ನು ತಿರುಗಿಸುತ್ತಿದ್ದೆ . ಹಿಂದೆಯಿಂದ ಅಮಾನತ್ತಾಗಿ ಯಾರೋ ಹಿಡಿದರು. ಕಿರುಚದಂತೆ ಬಾಯಿ ಭದ್ರವಾಗಿ ಹಿಡಿದ…. ಎಂಥ ಅಸಹಾಯಕತೆ ಅದು. ………. ಕೈ ಕಾಲುಗಳು ನನ್ನ ವಶದಲ್ಲಿರಲಿಲ್ಲ. ಯಾರೋ ನನ್ನ ಆಕ್ರಮಿಸುತ್ತಿದ್ದಾರೆ ಎಂದನಿಸುತ್ತಿತ್ತು. ಇನ್ನು ತಡೆಯಲಾಗಲ್ಲಿಲ್ಲ ಎಲ್ಲೋ ಓದಿದ್ದ ನೆನಪು ಹಿಂದಿನ ಕಾಲನ್ನೆತ್ತಿ ಹಿಂದೆ ಜಾಡಿಸಿದೆ. ಗುರಿ ತಪ್ಪಿತ್ತು. ಏಟು ಅವನ ತೊಡೆಗೆ ಬಿತ್ತು ಅಷ್ಟೇ ಆ ನೋವಿಗೇನೋ ಬಾಯಿ ಹಿಡಿದಿದ್ದ ಆತನ ಕೈ ಸಡಿಲವಾಯ್ತು. ಕೂಡಲೇ ಕೈ ಕಚ್ಚಿ ಲೈಬ್ರರಿಯಿಂದ ಓಡಿ ಬಂದಿದ್ದೆ. ಗೇಟ್ ಬಳಿ ಇದ್ದ ಸೆಕ್ಯೂರಿಟಿಗಳು ಕಟ್ಟಿ ಹಾಕಿದ ನಾಯಿಗಳಂತೆ ಕಂಡವು. ಮನೆಗೆ ಧಾವಿಸಿದೆ . ಅಮ್ಮನಿಗೆ ಏನೂ ಹೇಳಲು ಮನಸು ಬರಲಿಲ್ಲ. ಮನೆಗೆ ನಾನೊಬ್ಬಳೆ ದಿಕ್ಕು . ನನಗೆ ಹೀಗಾಯ್ತು ಅಂದರೆ…. ಅಕ್ಕನ ಮದುವೆ ಬೇರೆ ಇತ್ತು. ಹಾಗಾಗಿ ಆ ವಿಷಯ ಯಾರಿಗೂ ಹೇಳಲಿಲ್ಲ . ವಿಷಯ ಮ್ಯಾನೇಜ್ಮೆಂಗಟ್ಗೆ ಹೇಳಬೇಕೆಂದುಕೊಂಡರೂ ಮನೆಗೆ ಕಳಿಸಿದ್ದ ಕಂಪೆನಿ ನನಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇರಲಿಲ್ಲ. ಹಾಗಾಗಿ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಹಾಕಿದೆ.

ಅದಾದ ನಂತರ ಎಷ್ಟೋ ಘಟನೆಗಳು ನಡೆಯುತ್ತಲೇ ಇದವು ಎಮ್ ಜಿ ರೋಡಿನಲ್ಲಿ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಕಾರ್ ನಿಲ್ಲಿಸಿ ಬರ್ತೀಯ ಎನ್ನುವಂತಹದ್ದು. ಹಿಂದೆಯೇ ಬಂದು ಮೈನಲ್ಲಿ ನಡುಕ ಹುಟ್ಟಿಸುವುದು. ಆದರೆ ತೀರ ಅಂತಹ ಕೆಟ್ಟ ಸನ್ನಿವೇಶ ಬಲವಂತ ಮಾಡುವುದು ನಡೆದಿರಲಿಲ್ಲ. ಅದಾದ ಮೇಲೆ ಕೆಲಸದಿಂದ ರೇಜಿಗೆ ಹುಟ್ಟಿ ಸ್ವಂತ ಉದ್ಯೋಗ ಆರಂಭಿಸಬೇಕಿತ್ತು. ಹತ್ತುವರ್ಷದ ಹಿಂದಿನ ಮಾತು ಸರಿಯಾಗಿ ೨೦೦೨

ಆಗ ೨೨ ವರ್ಷ ಇರಬೇಕು ನನಗೆ . ಬ್ಯಾಂಕ್ ಒಂದರಲ್ಲಿ ಸ್ವಂತ ಉದ್ಯೋಗಕ್ಕಾಗಿ ಲೋನ್ ಪಡೆಯಲು ಅರ್ಜಿ ಗುಜಾರಾಯಿಸಿದ್ದೆ. ಸರಕಾರದಿಂದ ಮಂಜೂರಾಗಿತ್ತು. ಅದನ್ನು ನನಗೆ ಕೊಡಲು ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ. ಕೊಟ್ಟೆವು.

ನಂತರ ಅವನ ಮನೆಯಲ್ಲಿದ್ದ ಕಂಪ್ಯೂಟರ್ಸ್ಗೆ ಸಾಫ್ಟವೇರ್ಸ್ ಇನ್ಸ್ಟಾಲ್ ಮಾಡಿಕೊಡಬೇಕೆಂದ. ಆಮೇಲೆ ಕಂಪ್ಯೂಟರ್ ರಿಪೇರಿಯಾಗುತ್ತಿದೆ ಅಂತ ಕರೆಯುತ್ತಿದ್ದ. ಹಾಗಾಗಿ ಒಂದೆರೆಡು ಬಾರಿ ಅವನ ಮನೆಗೆ ಹೋಗಿಯೂ ಇದ್ದೆ. ಅವನ ಹೆಂಡತಿ ತುಂಬಾ ಒಳ್ಳೆಯಾಕೆ. ನೋಡಲೂ ತುಂಬಾ ಚೆನ್ನಾಗಿದ್ದರು. ಚೆನ್ನಾಗಿ ಮಾತಾಡಿಸುತ್ತಿದ್ದರು. ಎಷ್ಟೋ ಬಾರಿ ಅಂದುಕೊಂಡಿದ್ದೆ ಎಷ್ಟು ಒಳ್ಳೆ ಹೆಂಡತಿ ಆದರೆ ಇವನುಮಾತ್ರ ಲಂಚಬೋಕ ಅಂತ.

ಹೀಗೆ ಒಂದು ಬಾರಿ ಒಮ್ಮೆಫೋನ್ ಮಾಡಿ ಕರೆದ. ಮನೆಯಲ್ಲಿ ಕಂಪ್ಯೂಟರ್ ಕೆಟ್ಟು ಹೋಗಿದೆ ಕೂಡಲೇ ಹೊರಟು ಬಾ. ಅಂತ.. ನಿಂತಕಾಲಲ್ಲಿ ರಾಜಾಜಿನಗರದ ಅವನ ಮನೆಗೆ ಹೋದೆ. ಬಾಗಿಲು ತೆರೆದು ಒಳ ಕರೆದ ಕಂಪ್ಯೂಟರ್ ಕೈ ಕೊಟ್ಟಿದೆ ಚೆಕ್ ಮಾಡು ಎಂದ . ಆಗಲೇ ಮನೆಯಲ್ಲಿ ಯಾರೊ ಇಲ್ಲದಿದ್ದದು ನನ್ನ ಗಮನಕ್ಕೆ ಬಂತು. ಯಾಕೋ ಭಯವಾಯ್ತು, ಏನೋ ನಡೆಯಬಹುದು ಅಂತ ನನ್ನ ಸಿಕ್ಸ್ಥ್ ಸೆನ್ಸ್ ಹೇಳುತ್ತಿತ್ತು. ಆದರೂ ಧೈರ್ಯಮಾಡಿಕೊಂಡು ಅವನ ಕಂಪ್ಯೂಟರ್ ನತ್ತ ಹೋದೆ..೪೪ ವರ್ಷದ ಆತ ಇದ್ದಕಿದ್ದ ಹಾಗೆ ಕೈ ಹಿಡಿದು ಎಳೆದುಕೊಂಡ ಅಪ್ಪಿಕೊಳ್ಳಲು ಹವಣಿಸತೊಡಗಿದ. ,ಮೊದಲೇ ಎಚ್ಚರಿಕೆ ಮತ್ತು ಅನುಮಾನದಲ್ಲಿ ಇದ್ದ ನಾನು ಸುಲಭವಾಗಿ ಅವನಿಂದ ತಪ್ಪಿಸಿಕೊಂಡೆ ಅವನತ್ತ ನೋಡದೇ ಅಲ್ಲಿಂದ ಓಡಿ ಬಂದೂ ಬಿಟ್ಟೆ. ಆದರೆ ಮಾರನೇ ದಿನದಿಂದ ಅವನ ಕಾಟ ಶುರುವಾಯ್ತು. ನೀನು ಒಪ್ಪಿಕೊಳ್ಳದಿದ್ದರೆ ನಿನಗೆ ಲೋನ್ ಕೊಡೋದಿಲ್ಲ ಅಂತ. ಅಕ್ಷರಷ: ಬ್ಲಾಕ್ ಮೇಲ್ ಮಾಡತೊಡಗಿದ. ಹತ್ತು ಪರ್ಸೆಂಟ್ ತಿಂಗಳಿಗೆ ಬಡ್ದಿ ಕೊಡುತ್ತಿದ್ದ ನಾನು ಈ ತೊಂದರೆಯನ್ನ ಯಾರಿಗೊ ಹೇಳಲಾಗದೆ ದಿನವೂ ಒದ್ದಾಡುತ್ತಿದ್ದೆ. ಲೋಕಾಯುಕ್ತರಿಗೆ ಮೇಲ್ ಮಾಡಿದೆ ನನ್ನ ಅಸಹಾಯಕತೆ ಕುರಿತು. ಅವರು ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂದರು . ನನ್ನ ಮುಂದೆ ಎರೆಡೇ ಆಪ್ಷನ್ ಒಂದು ಅವನೊಂದಿಗೆ ಆಡ್ಜಸ್ಟ್ ಮಾಡಿಕೊಳ್ಳುವುದು ಇಲ್ಲವೇ ಲೋನ್ ಆಸೆ ಮರೆತುಬಿಡುವುದು(ಇದನ್ನ ನನಗೆ ಅವನೇ ಹೇಳಿದ್ದ). ಕೊನೆಗೊಮ್ಮೆ ಆಗಿನ ಮುಖ್ಯಮಂತ್ರಿಗೆ ಮೇಲ್ ಮಾಡಿದೆ ಯಾವುದೇ ಹೋಪ್ಸ್ ಇರಲಿಲ್ಲ. ಆದರೆ ದೇವರು ನನ್ನಪಾಲಿಗಿದ್ದ. ಅವರೂ ನನ್ನ ತೊಂದರೆಗೆ ಸ್ಪಂದಿಸಿದರು. ಯಾರಿಗೂ ತಿಳಿಯದಂತೆ ಆ ಮ್ಯಾನೇಜರ್ ಅಲ್ಲಿಂದ ಎತ್ತಂಗಡೆ ಮಾಡಲ್ಪಟ್ಟು ಬೆಳಗಾವಿಗೆ ವರ್ಗವಾದ. ಇತ್ತ ಬ್ಯಾಂಕಿಗೆ ಹಂಗಾಮಿ ಮ್ಯಾನೇಜರ್ ಒಬ್ಬರು ಬಂದು , ನನ್ನ ಲೋನ್ ಸಿಕ್ಕಿಯೂ ಆಯ್ತು ಅದನ್ನು ಎರೆಡೇ ವರ್ಷದಲ್ಲಿ ತೀರಿಸಿಯೂ ಆಯ್ತು. . ಯಶಸ್ವಿ ಉದ್ಯಮಿ ಎನಿಸಿಕೊಂಡೆ.. ಅಗಿನ ಮುಖ್ಯಮಂತ್ರಿಯವರು ನನಗೆ ಕಳಿಸಿದ್ದ ಸಂದೇಶದಲ್ಲಿ ನೀನು ನಿನ್ನಂತೆ ಅನ್ಯಾಯ, ಆಕ್ರಮ, ತೊಂದರೆಗೊಳಗಾದ ಯುವತಿಯರಿಗೆ ಮಾರ್ಗದರ್ಶಿಯಾಗಬೇಕು ಅದೇ ನೀನು ಸಲ್ಲಿಸುವ ಧನ್ಯವಾದ ನನಗೆ ಎಂದಿದ್ದರು. ಆ ಮಾತನ್ನ ಪೂರ್ಣ ಮಾಡಬೇಕಿದೆ

ಈಗ ಮದುವೆ ಆಗಿದೆ. ಮತ್ತಾರ ಕಾಟವೂ ಇರೋದಿಲ್ಲ ಅಂದುಕೊಂಡರೆ ಕೆಲವು ಗಂಡಸರಿಗೆ ತಾಳಿಯೂ ಸಹಾ ಕಾಣೋದಿಲ್ಲ.

ಆದರೆ ಎಷ್ಟು ಜನ ಹೆಣ್ಣು ಮಕ್ಕಳು ಹೀಗೆ ಪಾರಾಗಬಲ್ಲರು?…….

ಅಪ್ಪ ಅಣ್ಣ ತಮ್ಮ ಯಾರ ಬೆಂಬಲವೂ ಇಲ್ಲದ ನನ್ನಂತಹ ಹೆಣ್ಣುಗಳಿಗೆ ಹೆಜ್ಜೆ ಹೆಜ್ಜೆಗೂ ನೂರಾರು ಕಾಮುಕ ಕಣ್ಣುಗಳು ಕಣ್ಣಿಂದಲೇ ತಿನ್ನುತ್ತಿವೆ….

ಅವಕಾಶ ಸಿಕ್ಕರೆ ವಯಸಾದ ಅಜ್ಜಿಯನ್ನೂ ಬಿಡದ ಗಂಡುಗಳನ್ನ ತಡೆಯೋಕೆ ಒಂದೆ ಉಪಾಯ ಎಂದರೆ ಭಯ ಹುಟ್ಟಿಸುವುದು . ಬಲವಂತವಾಗಿ ಅವಳನ್ನ ಅನುಭವಿಸಬೇಕು ಅನ್ನೋ ಯೋಚನೆ ಕೂಡ ತಲೆಯಲ್ಲಿ ಸುಳಿಯಬಾರದು.

ಅಂತಹ ಶಿಕ್ಷೆ ಯನ್ನ ಈಗ ಸೆರೆಸಿಕ್ಕಿರುವ ಎಲ್ಲಾ ಅತ್ಯಾಚಾರಿಗಳಿಗೂ ಕೊಡಬೇಕು, ಹಾಗೆ ಮಾಡಿದಲ್ಲಿ ಮಾತ್ರ ಅತ್ಯಾಚಾರ ತಡೆಗಟ್ಟಲು ಸಾಧ್ಯ. ಮನೋಭಾವವನ್ನ ಬದಲಾಯಿಸಬೇಕು ಎಂಬ ಮಾತೊ ಆಗಾಗ ಕೇಳುತ್ತಿರುತ್ತೇನೆ.

ಈಗಾಗಲೇ ಹೆಮ್ಮರವಾಗಿರುವ ಗಂಡಿನ ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ. ಅದೆನಿದ್ದರೂ ಹುಟ್ಟಿನಿಂದಲೇ ಪ್ರತಿಯೊಬ್ಬ ತಾಯಿ, ತಂದೆ ಶಿಕ್ಷಣ ಅಂದರೆ ಹೆಣ್ಣುಗಳನ್ನು ಗೌರವಿಸದಿದ್ದರೂ ಪರವಾಗಿಲ್ಲ. ಅವರನ್ನ ಸೆಕ್ಸೆ ಸಿಂಬಲ್ ಆಗಿ ನೋಡಬಾರದೆಂಬ ಶಿಕ್ಷಣ ಕೊಡಬೇಕು, ಅದು ಮುಂದಿನ ಪೀಳಿಗೆಗೆ ಆಯ್ತು. ಈಗಿನವರಿಗೆ ಕೇವಲ ದಂಡಂ ದಶಗುಣ್ಂ ಭವೇತ್. ಅಷ್ಟೇ

ಪ್ರತಿ ಹೆಣ್ಣೂ ತನ್ನ ಬಳಿ ಚೂರಿಯಂತಹ ಆಯುಧ ಇಟ್ಟುಕೊಳ್ಳಬೇಕು. ಗನ್ ಲೈಸೆನ್ಸ್ ಇದ್ದಲ್ಲಿ ಇನ್ನೂ ಒಳ್ಳೆಯದು. ಸುಟ್ಟಬಿಡಬೇಕು ಅಥವ ಚುಚ್ಚಿಬಿಡಬೇಕು, ಇಂತಹ ಅತ್ಯಾಚಾರಿಗಳನ್ನ ಒಂದೆರ್ಡು ಬಾರಿ ಹೀಗೆ ಆಯಿತು ಎಂದು ಸುದ್ದಿ ಹರಡಿದರೆ ಅತ್ಯಾಚಾರ ಮನೋಭಾವ ಬಲವಂತವಾಗಿ ಮಾಯವಾಗುತ್ತದೆ ಭಯದ ಕಾರಣದಿಂದ..

 

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. bharathi

    ನೀವು ಬಿಡದೇ ಪ್ರತಿಭಟಿಸಿದ ರೀತಿ ತುಂಬ ಮೆಚ್ಚುಗೆಯಾಯ್ತು ರೂಪಾ …

    ಪ್ರತಿಕ್ರಿಯೆ
  2. N.VISWANATHA

    Maduve agide athava illa ennuvudu kelavu neecha gandasarigi aprasthutha.Avaralli amanusha buddhi melugai agiruttade.Sari tappugala vyathyasa avara vivechana shakthige meeriddu.Muslim deshagalannu eee sandharbhadalli navu mecchhalebeku.

    ಪ್ರತಿಕ್ರಿಯೆ
  3. veena s

    ನಮ್ಮ ಮಕ್ಕಳನ್ನು ಧೈರ್ಯವಂತರಾಗಿ ಬೆಳೆಸಬೇಕು ಮತ್ತು ಎಲ್ಲದರ ಬಗ್ಗೆ ಸರಿಯಾಗಿ ಎಚ್ಚರ ತಿಳುವಳಿಕೆ ಕೊಡುತ್ತಿರಬೇಕು . ನಿಮ್ಮ ಧೈರ್ಯಕ್ಕೆ ನಿಮಗೊಂದು ಸಲಾಂ .

    ಪ್ರತಿಕ್ರಿಯೆ
  4. Shama Nandibetta

    ನಿಮ್ಮ ಧೈರ್ಯಕ್ಕೆ ಸಲಾಂ ರುಪಾ..

    ಪ್ರತಿಕ್ರಿಯೆ
  5. Hussain

    ಲಜ್ಜೆಗೆಟ್ಟ ಸಮಾಜದ ವಾಸ್ತವ ಮುಖವನ್ನು ತಮ್ಮದೇ ಜೀವನದ ಘಟನೆಯ ಮೂಲಕ ತೆರೆದಿಟ್ಟಿದ್ದೀರಿ… ನಿರೂಪಣೆ ಮತ್ತು ವಿಷಯ ಇಷ್ಟವಾಯ್ತು

    ಪ್ರತಿಕ್ರಿಯೆ
  6. SrinidhiRao

    Roopa Dheere neevu.. devaru sadha nimmannu rakshane madali… epariya kasha kodade irali.. mundendoo

    ಪ್ರತಿಕ್ರಿಯೆ
  7. Tejaswini Hegde

    ಪ್ರತಿ ಹೆಣ್ಣೂ ತನ್ನ ಬಳಿ ಚೂರಿಯಂತಹ ಆಯುಧ ಇಟ್ಟುಕೊಳ್ಳಬೇಕು. ಗನ್ ಲೈಸೆನ್ಸ್ ಇದ್ದಲ್ಲಿ ಇನ್ನೂ ಒಳ್ಳೆಯದು. ಸುಟ್ಟಬಿಡಬೇಕು ಅಥವ ಚುಚ್ಚಿಬಿಡಬೇಕು, ಇಂತಹ ಅತ್ಯಾಚಾರಿಗಳನ್ನ ಒಂದೆರ್ಡು ಬಾರಿ ಹೀಗೆ ಆಯಿತು ಎಂದು ಸುದ್ದಿ ಹರಡಿದರೆ ಅತ್ಯಾಚಾರ ಮನೋಭಾವ ಬಲವಂತವಾಗಿ ಮಾಯವಾಗುತ್ತದೆ ಭಯದ ಕಾರಣದಿಂದ..>>> Agreed Roopa… Really u are very brave!!

    ಪ್ರತಿಕ್ರಿಯೆ
  8. Mahesh

    ಅನ್ಯಾಯ, ಆಕ್ರಮ, ತೊಂದರೆಗೊಳಗಾದ ಯುವತಿಯರಿಗೆ ಮಾರ್ಗದರ್ಶಿಯಾಗಬೇಕು…heege dhairyavaagiri…

    ಪ್ರತಿಕ್ರಿಯೆ
  9. sukhesh

    “ಪ್ರತಿ ಹೆಣ್ಣೂ ತನ್ನ ಬಳಿ ಚೂರಿಯಂತಹ ಆಯುಧ ಇಟ್ಟುಕೊಳ್ಳಬೇಕು. ಗನ್ ಲೈಸೆನ್ಸ್ ಇದ್ದಲ್ಲಿ ಇನ್ನೂ ಒಳ್ಳೆಯದು. ಸುಟ್ಟಬಿಡಬೇಕು ಅಥವ ಚುಚ್ಚಿಬಿಡಬೇಕು”
    ನಾನು ಸಾಧಾರಣವಾಗಿ ಹಿಂಸೆಯನ್ನ ಬೆಂಬಲಿಸೊಲ್ಲ. ಆದರೆ ಈ ಒಂದು ವಿಷಯದಲ್ಲಿ ಮಾತ್ರ ಯಾವ ಮುಲಾಜು ಇಲ್ಲದೆ ನಿಮ್ಮ ಮಾತನ್ನ ಒಪ್ಪುತ್ತೇನೆ. ಯಾಕೆ ಅಂದರೆ ಮಹಿಳೆ ಮಕ್ಕಳ ಮೇಲಿನ ಇಂತಾ ಅಪರಾಧಗಳನ್ನ ಯಾರೂ ಕ್ಷಮಿಸೋಕೆ ಆಗಲ್ಲ… ಮನುಷ್ಯ ಮ್ರಗಕ್ಕಿಂತ ಕಡೆ ಆಗೋಕೆ ಹೊರಟಾಗ ಸಾಯಿಸಿಬಿಡಬೇಕು. ಬೇರೆ ದಾರಿಯೇ ಇಲ್ಲ.

    ಪ್ರತಿಕ್ರಿಯೆ
  10. Roopa

    ಮೆಚ್ಚಿದ ಎಲ್ಲಾರಿಗೂ ಧನ್ಯವಾದಗಳು
    ಇದರಲ್ಲಿ ಧೈರ್ಯವಂತಿಕೆ ಅನ್ನುವುದಕ್ಕಿಂತ , ನನಗಿದ್ದ ತಿಳುವಳಿಕೆ ಸಹಾಯ ಮಾಡಿತು… ಅತ್ಯಾಚಾರ ಅಥವ ಆಟಾಕ್ ಆದಾಗ ಹೇಗೆ ಹೊಡೆಯಬೇಕು ಆನ್ನುವುದಕ್ಕೆ ಆಗಲೂ ಹೀಗೆ ಒಂದು ಮೇಲ್ ಬಂದಿತ್ತು. ಹಾಗೆ ಲೋಕಾಯುಕ್ತ ಅಥವ ಮಾಹಿತಿ ತಂತ್ರಜ್ನಾನ ಬಗ್ಗೆಯೂ ಅಲ್ಪಸ್ವಲ್ಪ ತಿಳಿದ್ದಿದ್ದು ಸಹಾಯ ಮಾಡಿತು. ಆದರೆ ಈಗ ಆ ತಿಳುವಳಿಕೆಯನ್ನ ಮೀರಿದ ಮಾಹಿತಿಯನ್ನ ಎಲ್ಲಾ ಹುಡುಗಿಯರಿಗೆ ಕೊಡುವ ಅಗತ್ಯ ಬಂದಿದೆ.. .
    ಪುರುಷರೇ ದಯವಿಟ್ಟು ನಿಮ್ಮ ಸುತ್ತಮುತ್ತಲಿನವರಿಗೆ ನಿಮ್ಮ ಅಣ್ಣ ತಮ್ಮಂದಿರಿಗೆ ಮಕ್ಕಳಿಗೆ ಈ ಎಲ್ಲ ಅನುಭವಗಳ ಹಿಂದಿನ ಕಣ್ಣೀರಿನ ಕತೆಯನ್ನೊ ಜೊತೆಗೆ ಅವರಿಗಾಗುವ ಅಪಾಯವನ್ನು ವಿವರಿಸಿ ಹೇಳಿ ಅಂತ ಕೇಳಿಕೊಳ್ಳಲಾರೆ. ಆದರೆ ಸಮಯ ಸಂದರ್ಭ ನೋಡಿ ಉದಾಹರಣೆಯಂತೆ ನೀಡಿ… ಅತ್ಯಾಚಾರವನ್ನು ತಡೆಗಟ್ಟಲು ಮಹಿಳೆಯರೂಂದಿಗೆ ಕೈ ಜೋಡಿಸಿ
    ಮಹಿಳೆಯರೇ ಹೇಗೆಲ್ಲಾ ತೊಂದರೆಗಳಾಗಬಹುದು ಎಂದು ಮನದಟ್ಟು ಮಾಡಿಕೊಂಡು ಮುನ್ನೆಚ್ಚರಿಕೆ ತೆಗೆದುಕೊಂಡೆ ಓಡಾಡಿ. ನಿಮ್ಮ ಸುತ್ತಮುತ್ತಲಿನ ಹುಡುಗಿಯರಿಗೂ ಇವುಗಳ ಬಗ್ಗೆ ವಿವರಿಸಿ…
    ಆಗಷ್ಟೇ ಇಷ್ಟೇಲ್ಲಾವನ್ನು ಈ ತೆರೆದ ವೇದಿಕೆಯಲ್ಲಿ ಬರೆದ ನಮ್ಮ ಬರಹಗಳಿಗೆ ಸಾರ್ಥಕತೆ

    ಪ್ರತಿಕ್ರಿಯೆ
  11. ಆಸು ಹೆಗ್ಡೆ

    ರೂಪಾ, ಕೆಟ್ಟ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಿ ಪಾರಾಗಿ ಬಂದಿರುವ ತಮ್ಮ ಉದಾಹರಣೆಗಳು ಈ ಸಮಾಜಕ್ಕೆ ಹಿಡಿದಿರುವ ಕನ್ನಡಿಯ ಹಾಗೆ ಇವೆ.
    ಆದರೆ, ಓರ್ವ ಹೆಣ್ಣು ಮಗಳಿಗೆ ಪ್ರತಿ ಹೆಜ್ಜೆಯಲ್ಲೂ ಇಂಥ ಸಮಸ್ಯೆಗಳು ಎದುರಾಗುತ್ತವೆ ಅನ್ನುವುದು ವಾಸ್ತವ.
    ಸಮಸ್ಯೆಗಳನ್ನು ಎದುರಿಸುವ ಬಗ್ಗೆ, ಆಯುಧಗಳನ್ನು ಜೊತೆಗೊಯ್ಯುವ ತಮ್ಮ ಸಲಹೆ ಮೊದಲನೋಟಕ್ಕೆ ಸ್ವೀಕಾರಾರ್ಹವೆಂದು ಕಂಡರೂ, ಆ ಆಯುಧಗಳೇ,ಅನಾಯಾಸವಾಗಿ ಎದುರಾಳಿಗಳ ಕೈಸೇರಿ ಅವರ ಉಪಯೋಗಕ್ಕೆ ಬಂದುಬಿಡುವ ಸಾಧ್ಯತೆಗಳು ಜಾಸ್ತಿ.
    ಏಕೆಂದರೆ, ಕಾಮಾತುರನಾದವನಿಗೆ ಭಯವೂ ಇರುವುದಿಲ್ಲ ಲಜ್ಜೆಯೂ ಇರುವುದಿಲ್ಲ. ಸಾಮಾಜಿಕ ಬದಲಾವಣೆಯ ಅಗತ್ಯ ಎಲ್ಲಕ್ಕಿಂತ ಹೆಚ್ಚಿನದು.
    ಇನ್ನು ಇವೆಲ್ಲಕ್ಕಿಂತಲೂ ಮಿಗಿಲಾಗಿ ಹೆಣ್ಣುಮಕ್ಕಳು ಜಾಗ್ರತರಾಗಿರಬೇಕಾದುದು, ಅನುಕಂಪ ತೋರಿಸಿಕೊಂಡು, ಸಹಾಯಹಸ್ತ ಚಾಚಿಕೊಂಡು, ಸನಿಹ ಬರುವ ಗೋಮುಖವ್ಯಾಘ್ರಗಳಿಂದ. ಏಕೆಂದರೆ ಅನುಚಿತ ವ್ಯಕ್ತಿಗಳ ಮೇಲಿನ ಅತಿಯಾದ ನಂಬಿಕೆಯೇ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಗಳು ಜಾಸ್ತಿ. ನನಗಂತೂ ಚಿತ್ರರಂಗ ಹಾಗೂ ಮುದ್ರಣ ಮತ್ತು ದೃಶ್ಯಮಾಧ್ಯಮದ ಮಂದಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಸಮಸ್ಯೆಗಳಿಗೆ ಬಹುಮಟ್ಟಿಗೆ ಕಡಿವಾಣ ಹಾಕಬಹುದೆಂಬ ನಂಬಿಕೆ ಇದೆ.

    ಪ್ರತಿಕ್ರಿಯೆ
  12. ಜಗನ್ನಾಧ

    ನೀವು ಮಾಡಿದ ಹೋರಾಟ ಮೆಚ್ಚಲೇ ಬೇಕು ನಿಮ್ಮಂತೆ ಇತರರೂ ಸಿದ್ದರಾಗಲಿ…

    ಪ್ರತಿಕ್ರಿಯೆ
  13. Roopa

    “ನನಗಂತೂ ಚಿತ್ರರಂಗ ಹಾಗೂ ಮುದ್ರಣ ಮತ್ತು ದೃಶ್ಯಮಾಧ್ಯಮದ ಮಂದಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಸಮಸ್ಯೆಗಳಿಗೆ ಬಹುಮಟ್ಟಿಗೆ ಕಡಿವಾಣ ಹಾಕಬಹುದೆಂಬ ನಂಬಿಕೆ ಇದೆ.”
    ಸುರೇಶ್
    ನಿಜ ನಿಮ್ಮ ಮಾತನ್ನ ಒಪ್ಪುತ್ತೇನೆ. ಆದರೆ ಈ ಸಿನಿಮಾದಲ್ಲೇ ಅತ್ಯಾಚಾರ ,ಮತ್ತು ಹಿಂಸೆಯನ್ನ ವೈಭವೀಕರಿಸಿ ತೋರಿಸುತ್ತಾರೆ . ಅವರಿಂದ ಮತ್ತೇನನ್ನೂ ನಿರೀಕ್ಷಿಸಬಹುದು. ?

    ಪ್ರತಿಕ್ರಿಯೆ
  14. Prasad V Murthy

    ಧೈರ್ಯ ಎಂದರೆ ಹೀಗಿರಬೇಕು! ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ ಮೆಚ್ಚುವಂತದ್ದು. ಇಂತಹ ಪೈಶಾಚಿಕ ಕೃತ್ಯಗಳ ಮೇಲಿನ ಕಾನೂನು ಇನ್ನಷ್ಟು ತೀಕ್ಷ್ಣವಾಗಬೇಕು. ಕನಸ್ಸು ಮನಸ್ಸಿನಲ್ಲಿಯೂ ಊಹಿಸಿರಬಾರದು ಅಂತಹ ಶಿಕ್ಷೆಗಳಾಗಬೇಕು! ಆಗಲೇ ಬುದ್ಧಿ ಕಲಿಯೋದು ಈ ಅಸಹ್ಯ ಪಿಶಾಚಿಗಳು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: