’ಅಮ್ಮ ಕೊಟ್ಟ ಚಾಕುವಿನ ಅರ್ಥ…’ – ಚಿತ್ರಾ ಸಂತೋಷ್

ಅಮ್ಮ ಕೊಟ್ಟ ಚಾಕು

– ಚಿತ್ರಾ ಸಂತೋಷ್

ಇದನ್ನು ಜೋಪಾನವಾಗಿ ಇಟ್ಟುಕೋ.  ಬ್ಯಾಗಿಗೆ ಕೈ ಹಾಕಿದಾಗ ತಕ್ಷಣ ಕೈಗೆ ಸಿಗಬೇಕು.  ಅದಕ್ಕೆ ಇದನ್ನು ಒಂದು ಬದಿಯಲ್ಲಿ ಇಟ್ಟುಕೋ ಎಂದು ಅಮ್ಮ ಪುಟ್ಟ ಚಾಕೊಂದನ್ನು ಬ್ಯಾಗ್ ನಲ್ಲಿ ತುಂಬಿಸಿಟ್ಟಿದ್ದಳು. ಯಾಕಮ್ಮಾ? ಇದೆಲ್ಲಾ? ಎಂದು ಕೇಳಿದರೆ ಮೂರು ಮೈಲಿ ದೂರ ನಡೆದು ಹೋಗ್ತೀಯಾ. ಅದು ಬೇರೆ ಕಾಡುದಾರಿ. ಯಾರಾದ್ರೂ ಕೀಟಲೆ ಮಾಡಿದ್ರೆ…ಇದನ್ನು ತೋರಿಸು ಎಂದು ಹೇಳಿದ್ದಳು ಅಮ್ಮ. ಆಗ ನಾನು ನಾಲ್ಕನೇ ತರಗತಿ. ಟೀಚರ್ ಬ್ಯಾಗ್ ನೋಡಿದ್ರೆ ಅಂತ ಅಮ್ಮನ ಬಳಿ ಕೇಳಿದ್ರೆ, ನನ್ನ ಕೇಳಕೆ ಹೇಳು ಎಂದು ಅಷ್ಟಕ್ಕೆ ಬಾಯಿ ಮುಚ್ಚಿಸಿ ಬಿಡೋಳು.  ನಮ್ಮ ಮನೆಯಿಂದ ಶಾಲೆಗೆ ನಡೆದು ಹೋಗಬೇಕಿತ್ತು. ಒಂದು ಗಂಟೆಯ ಕಾಲು ನಡಿಗೆ. ಒಂದು ಕಾಲದಲ್ಲಿ ಹುಲಿ, ಆನೆಗಳು ಸುತ್ತಾಡುತ್ತಿದ್ದ ಸ್ಥಳವದು. ಪೈಕದ ಮಲೆ ಅದರ ಹೆಸರು. ನಮ್ಮ ಮನೆಯಿಂದ ಪೇಟೆಗೆ ಬರಬೇಕಾದರೆ ಈ ಮಲೆ ದಾಟಿ ಬರಬೇಕಿತ್ತು. ಕಾಡು ಹಂದಿಗಳು, ಕೋತಿಗಳು, ನರಿಗಳು, ಮೊಲಗಳು, ಕಾಡುಬೆಕ್ಕು ಆಗಾಗ ಕಾಣಸಿಗುತ್ತಿದ್ದವು. ನಮ್ಮ ತಲೆಮಾರಿಗೆ ಆನೆ, ಹುಲಿಗಳು ಮಾಯವಾಗಿದ್ದವು.

ಏಳು ಗಂಟೆಗೆ ಮನೆ ಬಿಟ್ಟರೆ ಎಂಟು ಕಾಲು ಹೊತ್ತಿಗೆ ಶಾಲೆಯಲ್ಲಿ. ಸಂಜೆ ನಾಲ್ಕೂವರೆ ಬಿಟ್ಟರೆ ಐದೂವರೆಗೆ ಮನೆಯಲ್ಲಿ. ಮಳೆ, ಮೋಡ ಇದ್ದರೆ ಸಂಪೂರ್ಣ ಕತ್ತಲಾದಂತೆ. ದಾರಿಗುಂಟ ದಟ್ಟ ಮರಗಳಿದ್ದುದರಿಂದ ಕತ್ತಲೆ ತುಂಬಿಕೊಂಡಂತೆ ಇರುತ್ತಿತ್ತು. ಮರದ ಪೊದೆಯಲ್ಲಿ ನಿಂತು ಹೆದರಿಸುವ ಊರ ಗೌಡರ ಗಂಡು ಮಕ್ಕಳಿಗೇನೂ ಕಡಿಮೆಯಿರಲಿಲ್ಲ. ಧನಿಕನ ಮಕ್ಕಳೆಂದರೆ ಅವರನ್ನು ಪ್ರಶ್ನೆ ಮಾಡುವಂತಿರಲಿಲ್ಲ. ಕೆಲವು ಹೆಣ್ಣು ಮಕ್ಕಳ ಹಿಂದೆ ಬಿದ್ದು ಕಿತಾಪತಿ ಮಾಡಿದ ಘಟನೆಗಳು ಸಾಕಷ್ಟಿದ್ದವು. ಇದೇ ಕಾರಣಕ್ಕಾಗಿ ಅಮ್ಮ ಚಾಕು ಇಟ್ಟಿದ್ದಳು. ಆದರೆ, ಅದು ಆ ವಯಸ್ಸಿನಲ್ಲಿ ನನಗೆ ಗೊತ್ತಿರಲಿಲ್ಲ! ಆ ಪುಂಡು ಪೋಕರಿಗಳ ಕುರಿತು ಊರಿನ ಮಹಿಳೆಯರು ಮಾತಾಡುವಾಗ ರಕ್ತ ಕುದಿಯುತ್ತಿತ್ತು.

ವರ್ಷ ಸರಿದಂತೆ ಅಮ್ಮ ಕೊಟ್ಟ ಚಾಕುವಿನ ಅರ್ಥ ತಿಳಿಯುತ್ತಿತ್ತು. ಅಮ್ಮ ಒಂದೊಂದಾಗಿ ಬಿಡಿಸಿ ಹೇಳುತ್ತಿದ್ದಳು. ಊರ ಗೌಡರ ಮಗನ ಉದಾಹರಣೆ ಕೊಟ್ಟು, ಹುಡುಗಿಯರಿಗೆ ಅವನು ತರಲೆ ಮಾಡಿದ ಘಟನೆಗಳನ್ನು ಹೇಳಿ ಈ ಚಾಕು ಹೇಗೆ ಉಪಯೋಗಕ್ಕೆ ಬರುತ್ತೆ ಎನ್ನುತ್ತಿದ್ದಳು. ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ದೊಡ್ಡ ಪಾಠವನ್ನೇ ಹೇಳೋಳು.

ನನ್ನಲ್ಲಿ ಬೆನ್ನಿಗೆ ಹಾಕುವ ಬ್ಯಾಗ್ ಇತ್ತು. ಅದರ ಬದಿಯಲ್ಲಿ ಅದನ್ನು ತುಂಬಿಸಿಡೋಳು. ಪ್ರತಿ ವಾರ ಅದು ತುಕ್ಕು ಹಿಡಿದಿದೆಯೇ? ಎಂದು ನೋಡಿ ಎಣ್ಣೆ ಸವರಿ ಇಡುತ್ತಿದ್ದಳು. ದಿನ ಸರಿದಂತೆ ಆ ಚಾಕು ಒಂದು ರೀತಿಯಲ್ಲಿ ನನಗೆ ಬಾಡಿಗಾರ್ಡ್ ಆಗಿಬಿಟ್ಟಿತ್ತು. ಅದು ಎಷ್ಟರ ಮಟ್ಟಿಗೆ ಉಪಯೋಗ ಬರುತ್ತೆ? ಎನ್ನುವುದಕ್ಕಿಂತ ಆ ಚಾಕು ಒಂದು ರೀತಿಯಲ್ಲಿ ನನ್ನೊಳಗೆ ಧೈರ್ಯವನ್ನು ತುಂಬುತ್ತಿತ್ತು. ಎಂಟನೇ ತರಗತಿಗೆ ಬಂದಾಗ ಅಮ್ಮ ಹಳೆ ಚಾಕು ಬೇಡ ಎಂದು ಹೊಸ ಚಾಕು ತಂದುಕೊಟ್ಟಿದ್ದಳು. ಹತ್ತನೇ ತರಗತಿ ಮುಗಿವ ತನಕವೂ ಚಾಕು ಬ್ಯಾಗ್ನೊಳಗೆ ಭದ್ರವಾಗಿರುತ್ತಿತ್ತು. ಪಿಯುಸಿಗೆ ಹಾಸ್ಟೇಲ್ ಸೇರುವ ಹೊತ್ತಿಗೆ ಚಾಕು ಮನೆಯಲ್ಲೇ ಬಿಟ್ಟು ಬಂದೆ. ಆದರೆ, ಬ್ಯಾಗ್ ಹೊತ್ತು ಹಾಸ್ಟೇಲ್ ಗೆ ಹೊರಡುವ ಮುಂದಿನ ರಾತ್ರಿಯಿಡೀ ಅಮ್ಮ ನನ್ನ ಎದೆ ಮೇಲೆ ಮಲಗಿಸಿಕೊಂಡು ರಕ್ಷಣೆಯ ಪಾಠ ಹೇಳಿದ್ದಳು. ಲೈಂಗಿಕ ಶಿಕ್ಷಣ, ಮಕ್ಕಳ ಶೀಲ ರಕ್ಷಣೆಯ ಕುರಿತಾಗಿ ಅಮ್ಮ ಅಚ್ಚುಕಟ್ಟಾಗಿ, ಶಿಸ್ತಿನಿಂದ ಹೇಳಿಕೊಟ್ಟಿದ್ದಳು. ಕೀಟಲೆ ಮಾಡುವ, ರೇಗಿಸುವ, ಪುಂಡಾಟ ನಡೆಸುವ ಗಂಡುಗಳಿಗೆ ತಿರುಗಿ ಹೊಡೆದರೂ ಪರವಾಗಿಲ್ಲ..ಆ ಕ್ಷಣ ನಿನಗೆ ತೋಚಿದ್ದು ಮಾಡಿ ನಿನ್ನ ನೀನು ರಕ್ಷಿಸಿಕೋ ಎಂದು ಅಮ್ಮ ಹೇಳಿದ್ದಳು.

*******

ಇಂದು ಹೆಣ್ಣುಮಕ್ಕಳು ಮೊದಲು ಮಾಡಬೇಕಾಗಿರುವುದು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು. ಕಾನೂನು, ಕಟ್ಟಳೆ, ಪೊಲೀಸ್, ಬಂಧನ ಅದೇನಿದ್ದರೂ ಮುಂದಿನ ಹೆಜ್ಜೆಯಾಗಿರುತ್ತದೆ. ಅದಕ್ಕೂ ಮೊದಲು ಆ ಕ್ಷಣದಲ್ಲಿ ನಾವು ನಮ್ಮನ್ನು ರಕ್ಷಿಸಿಕೊಳ್ಳುವ ಧೈರ್ಯ ತೋರುವುದು. ಧೈರ್ಯ ಇಲ್ಲದೆ ಎದೆ ಢವ ಢವ ಎನ್ನುತ್ತಿದ್ದರೂ ಎದುರಿಗಿದ್ದವರಿಗೆ ನಮ್ಮ ಪುಕ್ಕಲುತನ ಗೊತ್ತಾಗಬಾರದು. ನಾವು ಧೈರ್ಯವಂತರು ಎನ್ನುವುದನ್ನು ತೋರಿಸಿಕೊಳ್ಳಬೇಕು. ಕೈಗೆ ಕಲ್ಲು, ಚಪ್ಪಲಿ ಇನ್ನೇನು ಸಿಗುತ್ತೋ ಅದರಲ್ಲಿ ಹೊಡೆದುಬಿಡಿ. ಜೋರಾಗಿ ಕಿರುಚಿ ಬೈದುಬಿಡಿ. ಸ್ನೇಹಿತೆಯೊಬ್ಬರು ಹೇಳುತ್ತಿದ್ದರು ‘ಕೀಟಲೆ ಮಾಡಿದವನಿಗೆ ಬಾಟಲಿ ನೀರು ತಲೆ ಮೇಲೆ ಚೆಲ್ಲಿದ್ದೆ’ ಎಂದು. ಈ ರೀತಿಯ ತುಂಟಾಟಿಕೆಗಳನ್ನು ಮಾಡಿಯಾದರೂ ನಾವು ಬಚಾವಾಗಬಹುದು.

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. bharathi

    ಅಂಥಾ ಅಮ್ಮನನ್ನು ಪಡೆದ ನೀವು ನಿಜಕ್ಕೂ ಭಾಗ್ಯವಂತರು ಚಿತ್ರಾ … ಬರಹ ಚೆಂದಕ್ಕೆ ಮೂಡಿ ಬಂದಿದೆ

    ಪ್ರತಿಕ್ರಿಯೆ
  2. anu pavanje

    ಎಲ್ಲರಿಗೂ ಇ೦ತಹಾ ಅಮ್ಮನಿರಲಿ……….

    ಪ್ರತಿಕ್ರಿಯೆ
  3. Aparna Rao..

    ಮಾನಸಿಕವಾಗಿ ದೈರ್ಯ ತುಂಬುವ ಕೆಲಸ.. ಮಾಡಿದ್ದು ಒಳ್ಳೆಯದೇ.. ಅದರ ಬದಲಾಗಿ.. ಹೆಣ್ಣುಮಕ್ಕಳಿಗೆ ನೀನು ಹಾಗಿರು ಹೀಗಿರು .. ಹದ್ದುಬಸ್ತಿನಲ್ಲಿರು. ಗಂಡುಮಕ್ಕಳ ಕಡೆ ತಿರುಗಿ ನೋಡಲೂ ಬೇಡ..
    ಈ ರೀತಿಯ ನಕಾರಾತ್ಮಕ ಭಾವನೆ ಮೂಡಿಸುವುದು ತಪ್ಪು.

    ಪ್ರತಿಕ್ರಿಯೆ
  4. Sumathi Deepa Hegde

    ಗುಡ್ …ಅಮ್ಮನಿಗೆ ಒಂದು ಸಲಾಂ…

    ಪ್ರತಿಕ್ರಿಯೆ
  5. Samvartha 'Sahil'

    “ಇಂದು ಹೆಣ್ಣುಮಕ್ಕಳು ಮೊದಲು ಮಾಡಬೇಕಾಗಿರುವುದು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು” – If safeguarding oneself is the necessity then it is a reflection of the unsafe society! Our attempt, it appears, should be to build a safe society where there would be no need to safeguard oneself. True liberation would be achieved when a safe society is established and there is no need for a girl to carry a knife in her bag. Knife in the bag is good, but not enough, it appears to me.

    ಪ್ರತಿಕ್ರಿಯೆ
  6. samyuktha

    “ಇಂದು ಹೆಣ್ಣುಮಕ್ಕಳು ಮೊದಲು ಮಾಡಬೇಕಾಗಿರುವುದು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು.” 100% correct!

    ಪ್ರತಿಕ್ರಿಯೆ
  7. Anuradha.rao

    ನನ್ನ ಅಮ್ಮನೂ ನನಗೆ ಇದೆ ರೀತಿ ತಿಳಿ ಹೇಳಿದ್ದಳು …ನಾನು ನನ್ನ ಮಗಳಿಗೆ ಹೇಳಿಕೊಟ್ಟಿ ದ್ದೆ …Proud of your mother and you.

    ಪ್ರತಿಕ್ರಿಯೆ
  8. ಸಂತೋಷಕುಮಾರ್ ಮೆಹೆಂದಲೇ.

    ನೀವು ಬರೆದದ್ದು ನಿಜ. ಸುರಕ್ಷಾತೆ ಮೊದಲಿಗೆ ಬರಲಿ. ಕಾರಣ ನಾವೆಷ್ಟೇ ಸ್ತ್ರೀಗೆ ಸ್ವತಂತ್ರ ಬೇಡ್ವಾ.. ನಾವು ಡ್ರೆಸ್ ಮಾದಬಾರದಾ. ನಾವು ತಿರುಗಾದ್ಬಾರ್ದಾ ಎಂದೆಲ್ಲಾ ವಾದ ಮಾಡುವ ಮಹಿಳೆಯರಿಗೆ ಒಂದು ಮನವಿ. ಕಾನೂನಿನಲ್ಲಿ ಬಹಳಷ್ಟು ಸಮಾನತೆ ಇತ್ಯಾದಿ ಗಳಿವೆ. ಕಾನೂನು ಇವೆ.. ಪೋಲಿಸು ಇತ್ಯಾದಿ ಎಲ್ಲಾ ಇದೆ.. ಆದರೆ ಒಮ್ಮೆ ಘಟನೆ ನಡೆದು ಹೋದರೆ ಅದನ್ನು ಹಿಂದಕ್ಕೆ ಸುರುಳಿ ಸುತ್ತಿಸಲಾಗುವುದಿಲ್ಲ. ಇದನ್ನು ಅರಿತುಕೊಂದಲ್ಲಿ ಮತ್ತು ಎಲ್ಲಿಯೇ ಹೋಗುವಾಗ ಒಂದಷ್ಟು ಇಲ್ಲಿ ಬರೆದಂತೆ ಜಾಗ್ರತವಾಗಿದ್ದಲ್ಲಿ ಶೇ.೫೦ ಇದರಿಂದ ಪಾರಾದಂತೆಯೇ. ಕಾರಣ ಉಳಿದ ವಾದ ಚರ್ಚೆ, ಕಾನೂನು ಏನೇ ಇದ್ರೂ ಅದೆಲ್ಲಾ ನಂತರ ವಾದಕ್ಕೆ ಸಿಮಿತವೆ ಘಟನೆಯ ಹೊತ್ತಲ್ಲಿ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಸುರಕ್ಷತೆ ಮೊದಲು ಸರಿ..

    ಪ್ರತಿಕ್ರಿಯೆ
  9. usha rai

    modalu nammannu naave rakshisikoLLabekallade bEre yaaroo rakshisaru. adannE namma maakaLige tiLisihELabEku chithraa avara ammanante. iMtaha ammandiru Iga bEku.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: