ಈಗಲೂ ಪೋರ್ಕ್ ತಿನ್ನುವಾಗ ಇವೆಲ್ಲಾ ನೆನಪಾಗಿ ಖುಷಿಯೆನಿಸುತ್ತದೆ..

 

 

 

 

ಕೇಶವರೆಡ್ಡಿ ಹಂದ್ರಾಳ 

 

 

 

ಹದಿನೈದು ದಿನಗಳ ಹಿಂದೆ ಅರಸೀಕೆರೆ ಗೌರ್ನಮೆಂಟ್ ಜೂನಿಯರ್ ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ಅಲ್ಲೆ ಉಳಿದುಕೊಂಡಿದ್ದೆ. ಆತ್ಮೀಯ ಗೆಳೆಯರಾದ ಡಾಕ್ಟರ್ ಎಚ್. ಆರ್. ಸ್ವಾಮಿ ಮತ್ತು ಎಲ್ಐಸಿ ಡೆವಲಪ್ಮೆಂಟ್ ಆಫೀಸರ್ ವೆಂಕಟೇಶ್ ಊಟಕ್ಕೆ ಪೋರ್ಕ ಪ್ರೈ ಮಾಡಿಸಿದ್ದರು.

ಜೊತೆಗೆ ಕವಿಯಿತ್ರಿ ಮಮತಾ ಕಳುಹಿಸಿದ್ದ ಮಸ್ಸೊಪ್ಪು ಕೂಡ ಮಸ್ತಾಗಿತ್ತು.ಎಂಟು ವರ್ಷಗಳ ಹಿಂದೆ ನಾನು ಅರಸೀಕೆರೆಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ ಇವರಿಬ್ಬರು ಮನೆಯಿಂದ ಹುರುಳಿಕಾಳು ಸಾರ್,ಸೊಪ್ಪಿನ ಸಾರು ,ಮುದ್ದೆ ನಾನು ಉಳಿದುಕೊಂಡಿದ್ದ ಹೋಟೆಲ್ಗೆ ತಂದು ಕೊಟ್ಟು ಎರಡು ವರ್ಷ ನನ್ನ ಆರೋಗ್ಯ ಗಟ್ಟಿಯಾಗಿರಲು ಕಾರಣರಾದ ಪುಣ್ಯಾತ್ಮರು . ವೆಂಕಟೇಶ್ ವಾರಕ್ಕೊಮ್ಮೆಯಾದರೂ ಪೋರ್ಕ್ ಪ್ರೈ ( ಪಂದಿಕರಿ) ರೆಡಿ ಮಾಡಿಸುತ್ತಿದ್ದರು.

ಪೈಲ್ಸ್ ಖಾಯಿಲೆಗೆ ಹಂದಿ ಮಾಂಸ ಒಳ್ಳೆಯದೆಂದು ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಎರಡು ತಿಂಗಳಿಗೊಮ್ಮೆಯಾದರೂ ಹಂದಿ ಕೊಯ್ದು ಪಾಲಾಕುತ್ತಿದ್ದರು. ನಮ್ಮ ಕೇರಿಯ ಈರಪ್ಪಜ್ಜನಂತೂ ” ಗೂದೆ ರೋಗಕ್ಕೆ ಗೂಟಿ ಬಲೊಳ್ಳೆದಪ್ಪ.ತಿಂಗುಳ್ಗೊಂದಪ ತಗಂಡ್ರೆ ಗೊದ್ದೆ ಇಡೋವಾಗ ಗೋಳಂಬೋದೆ ಇರಲ್ಲ ” ಎಂದು ಹಂದಿ ಕೊಯ್ದ ದಿನ ಸಂಭ್ರಮಿಸುತ್ತಿದ್ದ. ಪೈಲ್ಸ್ ಇರುವ ಅನೇಕರು ನಿಯಮಿತವಾಗಿ ಹಂದಿಮಾಂಸ ತಿನ್ನುವುದನ್ನು ಈಗಲೂ ನೋಡುತ್ತಿದ್ದೇನೆ.

ಗೆಳೆಯ ಅಬ್ಬೂರರ ತಾಯಿ ಜಯಮ್ಮನವರ ಕೈನ ಹಂದಿ ಕರಿ,ಅಕ್ಕಿ ರೊಟ್ಟಿ ನೆನಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಹಳ್ಳಿಗಳಲ್ಲಿ ಮನೆಯ ಹೊರಗಿನ ಬಚ್ಚಲು ಮನೆಯಲ್ಲಿ ಬಾಡು ಸಾರು ಮಾಡುತ್ತಿದ್ದದ್ದು.ಹಂದಿ ಬಾಡು ತಿಂದ ದಿನ ಓದಲು ನಾವು ಪುಸ್ತಕಗಳನ್ನು ಮುಟ್ಟುತ್ತಿರಲಿಲ್ಲ. ನಮ್ಮ ಪಕ್ಕದ ಹಳ್ಳಿಗಳಾದ ಹನುಮಂತಪುರ ಮತ್ತು ತಗ್ಗಳ್ಳಿಗಳಲ್ಲಿ ಮಾತ್ರ ಹಂದಿ ಮೇಯಿಸುತ್ತಿದ್ದರು. ವರ್ಷದಲ್ಲಿ ಎರಡು ತಿಂಗಳು ಗ್ಯಾರಂಟಿ ನಮ್ಮ ಆಲೆಮನೆ ನಡೆಯುತ್ತಿತ್ತು. ಹಂದಿ ಮೇಯಿಸುತ್ತಿದ್ದವರು ಬಂದು ಆಲೆಮನೆಯಲ್ಲಿ ಸಂಗ್ರಹವಾಗುತ್ತಿದ್ದ ಮಡ್ಡಿಯನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದರು.

ಒಂದು ವರ್ಷ ನಾವು ಮೂರು ಎಕರೆಗೆ ಕಬ್ಬು ತುಳಿದಿದ್ದೆವು. ಇನ್ನೇನು ಆಲೆಮನೆ ಶುರುವಾಗಬೇಕು, ಆಗ ಹನಮಂತಪುರದ ನ್ಯಾತನಾಯ್ಕ ನಮ್ಮಪ್ಪನ ಹತ್ತಿರ ಬಂದು ” ಸಂಜೀವಣ್ಣ ಈ ಸಾರಿ ಯಂಗೂ ಆಲೆಮನೆ ಎಲ್ಡ್ ತಿಂಗ್ಳ್ ಆಡ್ತೈತೆ. ನೀನೆ ಅತ್ತ ನಾಲ್ಕು ಹಂದಿಮರಿ ತಂದ್ ಬಿಟ್ಕ .ರೊಪ್ಪದಾಗೆ ಜಾಗ ಬ್ಯಾರೆ ಐತೆ. ನಾನೆ ನೋಡ್ಕಂಬ್ತೀನಿ.ಒಳ್ಳೆ ಹಂದಿ ಗೊಬ್ರಾನು ಆಗ್ತೈತೆ. ಮೆಣಿಸಿನ ಗಿಡಕ್ಕೆ ತಾಪತ್ರಯಾನೂ ಇರಲ್ಲ…” ಎಂದಿದ್ದ. ನಮ್ಮ ದೊಡ್ಡಪ್ಪ ನಮ್ಮಪ್ಪನಿಗೆ ” ಬ್ಯಾಡ್ವಲೇ ಹಂದಿಗ್ಳು ನಮ್ಗತ್ ಬರಲ್ಲ…” ಎಂದು ಹೇಳಿದರೂ ಕೇಳದೆ ನ್ಯಾತನಾಯ್ಕನ ಜೊತೆ ಹೋಗಿ ನಾಲ್ಕು ಸುಮಾರಾಗಿಯೇ ಇದ್ದ ಹಂದಿ ಮರಿಗಳನ್ನು ಗಾಡಿಯಲ್ಲಿ ಹಾಕಿ ಕೊಂಡು ಬಂದಿದ್ದ.

ರೊಪ್ಪದಲ್ಲಿ ಸಣ್ಣ ಹಂದಿಗೂಡು ಎದ್ದಿತ್ತು. ಮಡ್ಡಿ ಜೊತೆಗೆ ಬತ್ತದ ತೌಡು , ಕಡ್ಲೆ ಹಿಂಡಿ ಇಟ್ಟು ಹಂದಿಮರಿಗಳು ತಿಂಗಳಲ್ಲಿಯೇ ಸಖತ್ತಾಗಿ ಬೆಳೆದಿದ್ದವು.ನ್ಯಾತನಾಯ್ಕ ಅವುಗಳಿಗೆ ಮೇವು ಇಡುತ್ತಿದ್ದರಿಂದಲೂ, ಮೈ ಸವರುತ್ತಿದ್ದರಿಂದಲೂ ಆತ ಹೇಳಿದ ಮಾತನ್ನು ಕೇಳುತ್ತಿದ್ದವು. ನ್ಯಾತನಾಯ್ಕನ ಬಂಧುವೊಬ್ಬರು ಹಿಂದೂಪುರದಲ್ಲಿ ಸತ್ತ ಸುದ್ದಿ ಬಂದು ” ಸಂಜೀವಣ್ಣಯ್ಯ ಒಂದಿನ ನೋಡ್ಕ ನಾಡಿದ್ದು ಹಿಟ್ನೊತ್ಗೆಲ್ಲ ಬಂದು ಬಿಡ್ತೀನಿ..” ಎಂದು ನ್ಯಾತನಾಯ್ಕ ಪುರವರದ ಕ್ರಾಸಿಗೆ ಸೈಕಲ್ನಲ್ಲಿ ಡ್ರಾಪ್ ತಗೊಂಡು ಬಸ್ಸು ಹತ್ತಿದ್ದ.

ಮಾರನೇ ದಿನ ಬೆಳಿಗ್ಗೆ ಹಂದಿಗಳಿಗೆ ಮಡ್ಡಿ ಜೊತೆಗೆ ತೌಡು ಕಲೆಸಿಕೊಂಡು ನಮ್ಮಪ್ಪನೆ ಇಡಲು ಹೋಗಿದ್ದ.‌ ಹುಡುಗರೆಲ್ಲ ಸುತ್ತಲೂ ಸುತ್ತಿಕೊಂಡಿದ್ದೆವು .ನಾಲ್ಕು ಹಂದಿಗಳೂ ಗುಟರಾಕುತ್ತಾ ಗಬಗಬ ತಿನ್ನುತ್ತಿರಬೇಕಾದರೆ ತಿಪ್ಪೆ ಕಡೆಯಿಂದ ನಾಯೊಂದು ಓಡಿಬಂದಿತ್ತು.ನಾಯಿ ಕಂಡ ಹಂದಿಗಳು ದಿಗಿಲು ಬಿದ್ದು ಓಡಿದ್ದವು.ಒಂದು ಹಂದಿ ಕುಕ್ಕರುಗಾಲಿನಲ್ಲಿ ಕುಳಿತಿದ್ದ ನಮ್ಮಪ್ಪನ ಮೇಲೆಯೇ ನುಗ್ಗಿತ್ತು.ನಮ್ಮಪ್ಪ ಹಿಂದಕ್ಕೆ ಬಿದ್ದಿದ್ದ. ಬೋಳು ತಲೆ ಕಲ್ಲು ಚಪ್ಪಡಿಯ ಮೇಲೆ ಬಿದ್ದು ಏಟಾಗಿ ರಕ್ತ ಬಂದಿತ್ತು.

ಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕಟ್ಟು ಕಟ್ಟಿಸಿ ಇಂಜಕ್ಷನ್ ಕೊಡಿಸಿಕೊಂಡು ಬಂದಿದ್ದೆವು.ನಮ್ಮ ದೊಡ್ಡಪ್ಪ ನಮ್ಮಪ್ಪನಿಗೆ ಕೇಳಿಸುವಂತೆ ” ನನ್ನ ಮಾತು ಎಲ್ ಕೇಳ್ತಾನೋ ನಿಮ್ಮಪ್ಪ. ಬಿದ್ದಾಗ ಹಂದಿಗಳು ತೊಲ್ಡ್ ಗಿಲ್ಡ್ ಮ್ಯಾಲೋಗಿದ್ರೆ ಏನ್ ಗತಿನೋ…” ಎಂದಿದ್ದ. ಅವೊತ್ತೆ ತಗ್ಗಳ್ಳಿಯ ಚನ್ನಾಬೋವಿಯನ್ನು ಕರೆಸಿ ಹಂದಿಗಳನ್ನು ಹೊಡೆದು ಕಳಿಸಿದ್ದರು. ಹಿಂದೂಪುರದಿಂದ ಬಂದ ನ್ಯಾತನಾಯ್ಕ “ಎಂಥ ಕೆಲ್ಸ ಆಗೋಯ್ತಣ್ಣ ..” ಎಂದು ತಲೆ ಕೆರೆದು ಕೊಂಡು ನಮ್ಮ ದೊಡ್ಡಪ್ಪನ ಬೈಯ್ಗಳನ್ನು ಕೇಳಿಸಿಕೊಂಡಿದ್ದ.ನಮ್ಮಪ್ಪನಿಗೆ ಸ್ವಲ್ಪದರಲ್ಲೆ ಗಂಡಾಂತರ ತಪ್ಪಿದ್ದಕ್ಕಾಗಿ ನಮ್ಮಮ್ಮ ಮನೆದೇವರಾದ ಜಿಲ್ಲಡಗುಂಟೆ ಆಂಜನೇಯನಿಗೆ ಹರಸಿಕೊಂಡು ಮುಡುಪಿನ ಪೆಟ್ಟಿಗೆಗೆ ಹತ್ತು ರೂಪಾಯಿ ಹಾಕಿದ್ದಳು.

ಈಗಲೂ ಪೋರ್ಕ್ ತಿನ್ನುವಾಗ ಇವೆಲ್ಲಾ ನೆನಪಾಗಿ ಖುಷಿಯೆನಿಸುತ್ತದೆ. ಇತ್ತೀಚೆಗಂತೂ ಆಹಾರದ ಬಗ್ಗೆಯೇ ದೊಡ್ಡ ದೊಡ್ಡ ಚರ್ಚೆಗಳು,ಸಂವಾದಗಳು, ಜಗಳಗಳು ನಡೆಯುತ್ತಿರುವುದನ್ನು ಕಂಡು ನಗು ಬರುತ್ತದೆ ನನಗೆ.ಆಹಾರ ಅವರವರ ಆಯ್ಕೆ. ಅದನ್ನು ಸಾರ್ವಜನಿಕಗೊಳಿಸುವುದಂತು ದಡ್ಡತನ ನನ್ನ ಮಟ್ಟಿಗೆ. ನಮ್ಮ ಹಳ್ಳಿಗಾಡಿನಲ್ಲಿ ಆಹಾರದ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡು ಬಡಿದಾಡಿದ್ದನ್ನು ನೋಡಿದ ನೆನಪು ಕೂಡ ನನಗಿಲ್ಲ. ಅವರವರ ಊಟ ಅವರವರಿಗೆ ದೇವರು. ಅನ್ನ ದೇವರ ಮುಂದೆ ಅನ್ಯ ದೇವರುಂಟೆ….‌? “ಅನ್ನ ಇಟ್ಟ ಮನೆಗೆ ಕನ್ನ ಹಾಕಬೇಡ” ಎಂದ ನಮ್ಮ ಹಿರಿಯರು ಅದನ್ನು ಬಹುತೇಕ ಪಾಲಿಸಿಕೊಂಡು ಬಂದರು.ಆದರೆ ಅದನ್ನು ಪಾಲಿಸಲು ಸಾಧ್ಯವಾಗದೆ ನಾವಿಂದು ಹೆಣಗಾಡುತ್ತಿದ್ದೇವೆ.

‍ಲೇಖಕರು avadhi

December 3, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. G Narayana

    nice recall of memory. I was working in LIC Arsikere from 1973 to 1979 and this article brought back my memories and the Mess food I enjoyed.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: