ಅಕೌಂಟಬಿಲಿಟಿಗೆ ಎಳ್ಳು ನೀರು… ಸಂವಿಧಾನ ಬೋರೋ ಬೋರು…

ಒಂದೇ ಒಂದು ಸ್ಟಾಟಿಸ್ಟಿಕ್ಸ್ ಸಾಕು ನಮ್ಮ ಸಂವಿಧಾನದ ಹಿತರಕ್ಷಕರಾಗಬೇಕಾದ ಸಂಸತ್ತಿನ ಸದಸ್ಯರು ಎತ್ತ ಸಾಗುತ್ತಿದ್ದಾರೆ ಎಂಬುದನ್ನು ತೋರಿಸಲು.

50ರ ದಶಕದಲ್ಲಿ ವರ್ಷಕ್ಕೆ 130  ದಿನಗಳಷ್ಟು ಕಾಲ ದೇಶದ ಲೋಕಸಭೆ ಕಲಾಪ ನಡೆಸುತ್ತಿತ್ತು. 2000 ನೇ ಇಸವಿಗೆ ತಲುಪುತ್ತಾ, ಈ ಪ್ರಮಾಣ ಬರಿಯ 70ದಿನಗಳಿಗೆ ಇಳಿದಿದೆ. ಅದರಲ್ಲೂ ವರ್ಷಕ್ಕೆ ಮೂರು ಬಾರಿ ಬಜೆಟ್ ಅಧಿವೇಶನ, ಮುಂಗಾರು ಅಧಿವೇಶನ ಮತ್ತು ಚಳಿಗಾಲದ ಅಧಿವೇಶನ ಎಂದು ಒಂದೊಂದು ತಿಂಗಳಾದರೂ ಸಭೆ ಸೇರಬೇಕಾಗಿರುವ ಸಂಸತ್ತು, ಸಭೆ ಸೇರಿದಲ್ಲೂ ಗೌಜಿ-ಗದ್ದಲ-ಮುಂದೂಡಿಕೆಗಳಲ್ಲಿ ಸಮಯ ನಾಶ ಆದದ್ದೇ ಹೆಚ್ಚು.

ಮೊನ್ನೆ ಗದ್ದಲ ಎದ್ದ ಬಳಿಕ, ಅಳೆದೂ ಸುರಿದೂ ಕೇಂದ್ರ ಸರಕಾರವು ಈ ವರ್ಷದ ಚಳಿಗಾಲದ ಅಧಿವೇಶನವನ್ನು ಗುಜರಾತಿನಲ್ಲಿ ಚುನಾವಣೆಗಳು ನಡೆದ ಬಳಿಕ ಡಿಸೆಂಬರ್ 15ರಿಂದ ಜನವರಿ 5ರ ತನಕ ನೆಸಲು ತೀರ್ಮಾನಿಸಿ, ಶಿಫಾರಸು ಮಾಡಿದೆ. ಅದರಲ್ಲೂ 25,26 ಕ್ರಿಸ್ಮಸ್ ರಜಾದಿನಗಳು. ಅಂದರೆ ಬರಿಯ 14ದಿನಗಳ ಕಲಾಪ ಇರಲಿದೆ.

ನೋಟು ರದ್ಧತಿಯ ಪರಿಣಾಮಗಳು ಮತ್ತು ಜಿ ಎಸ್ ಟಿ ಗೊಂದಲಗಳು ಹಸಿಹಸಿಯಾಗಿರುತ್ತಾ, ಅವುಗಳನ್ನು ಚರ್ಚಿಸಲು ಹಿಂದೆಂದಿಗಿಂತ ಹೆಚ್ಚು ಸಮಯ ನೀಡಬೇಕಾಗಿದ್ದ ಸಂಸತ್ತು ನಾಮ್ ಕೇ ವಾಸ್ತೇ ಅಧಿವೇಶನ ನಡೆಸಲು ತೀರ್ಮಾನಿಸಿದಂತಿದೆ. ಇದೇ ಸರಕಾರ ಕಳೆದ ವರ್ಷ ನವೆಂಬರ್ 16ರಿಂದ ಡಿಸೆಂಬರ್  26 ರ ತನಕ 22ದಿನಗಳ ಕಾಲ ನಡೆಸಿತ್ತು.  ಇದೇ ಸರಕಾರದ ಈ ವರ್ಷದ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯ ಉತ್ಪಾದಕತೆ  67% ಮತ್ತು ರಾಜ್ಯಸಭೆಯ ಉತ್ಪಾದಕತೆ  72% ಎಂದು ಅಂದಾಜಿಸಲಾಗಿದೆ.

ಈ ಅಧಿವೇಶನದಲ್ಲಿ ಟ್ರಿಪಲ್ ತಲಾಕ್ ಮಸೂದೆ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಗಳ ಜೊತೆಗೆ ಈಗ ಸುಗ್ರೀವಾಜ್ನೆಗಳ ರೂಪದಲ್ಲಿ ಜಾರಿಯಲ್ಲಿರುವ ಜಿ ಎಸ್ ಟಿ (ರಾಜ್ಯಗಳಿಗೆ ಪರಿಹಾರ ಮಸೂದೆ), ಇನ್ಸಾಲ್ವೆನ್ಸಿ ಮತ್ತು ದಿವಾಳಿ (ತಿದ್ದುಪಡಿ) ಮಸೂದೆ ಮತ್ತು ಭಾರತೀಯ ಅರಣ್ಯ ಕಾಯಿದೆ (ತಿದ್ದುಪಡಿ)ಗಳು  ಚರ್ಚೆಗೆ ಬರಬೇಕಾಗಿವೆ. ಆದರೆ, ಪ್ರತಿಪಕ್ಷಗಳು ಕೂಡ ಸರಕಾರವನ್ನು ಚರ್ಚೆಯ ಮೂಲಕ ಉತ್ತರದಾಯಿ ಮಾಡುವ ಬದಲು ಮಾಧ್ಯಮಗಳಲ್ಲೋ, ಚುನಾವಣಾ ಭಾಷಣಗಳಲ್ಲೋ ಹಿಟ್ ಅಂಡ್ ರನ್ ಟೀಕೆಗಳಿಗೆ ಒಳಪಡಿಸುವುದರಲ್ಲೇ ಸುಖ ಕಾಣುತ್ತಿವೆ.

ಸಂವಿಧಾನ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಲು ರಚಿಸಲಾಗಿದ್ದ ರಾಷ್ಟ್ರೀಯ ಕಮಿಷನ್ ಒಂದು ವರ್ಷದಲ್ಲಿ ಲೋಕಸಭೆ ಕನಿಷ್ಟ 120ದಿನ ಮತ್ತು ರಾಜ್ಯಸಭೆ ಕನಿಷ್ಟ 100 ದಿನಗಳ ಕಾಲ ನಡೆಯಬೇಕೆಂದು ಸೂಚಿಸಿತ್ತು. ಆದರೆ ಸರಕಾರ ಅದರ ಸಮೀಪಕ್ಕೂ ಬರುತ್ತಿಲ್ಲ. ಸಾರ್ವಜನಿಕರಿಗೆ ಇದನ್ನು ಪ್ರಶ್ನಿಸುವ ಅವಕಾಶವನ್ನೂ ಸಂವಿಧಾನ ಒದಗಿಸಿಲ್ಲ. ಸಂಸತ್ತು ಆರು ತಿಂಗಳಿಗೊಮ್ಮೆಯಾದರೂ ಅಧಿವೇಶನ ನಡೆಸುವಂತೆ ಮಾಡುವ ಅಧಿಕಾರ ರಾಷ್ಟ್ರಪತಿಗಳ ಕೈಯಲ್ಲಿದೆಯಾದರೂ, ಅವರು ಸರಕಾರದ ಸಲಹೆಗಳ ಮೂಲಕವೇ ನಡೆಯುವವರಾದುದರಿಂದ ಅಂತಿಮವಾಗಿ ಸರ್ಕಾರದ ನಿರ್ಧಾರದಂತೆಯೇ ಅಧಿವೇಶನ ನಡೆಯಬೇಕಾಗುತ್ತದೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಮುಂದೊಂದುದಿನ, ನ್ಯಾಯಾಂಗ ಈ ನಿಟ್ಟಿನಲ್ಲಿ ಹಸ್ತಕ್ಷೇಪ ಮಾಡಬೇಕಾಗಿ ಬಂದರೂ ಅಚ್ಚರಿ ಇಲ್ಲ.

ಕಲಾಪ ನಡೆದಾಗಲೂ ಅದೆಷ್ಟು ಕಳಪೆ ಆಗಿರುತ್ತದೆ ಮತ್ತು ಅನಾವಶ್ಯಕ ಗದ್ದಲಗಳಲ್ಲೇ ಕಾಲ ಹರಣವಾಗುತ್ತದೆ ಎಂಬುದಕ್ಕೆ ಒಳ್ಳೆಯ ಉದಾಹರಣೆ, ಈ 16ನೇ ಲೋಕಸಭೆಯ ಪ್ರಶ್ನೋತ್ತರ ಕಲಾಪ (ಅದು ಸರ್ಕಾರ ಪ್ರತಿಪಕ್ಷಗಳಿಗೆ ಉತ್ತರದಾಯಿ ಆಗಿ ನಿಲ್ಲಬೇಕಾದ ಪರೀಕ್ಷೆಯ ಸಮಯ). ಪ್ರಶ್ನೋತ್ತರ ವೇಳೆ ಲೋಕಸಭೆಯಲ್ಲಿ ಕೇವಲ 77% ಮತ್ತು ರಾಜ್ಯಸಭೆಯಲ್ಲಿ ಕೇವಲ 47%ದಷ್ಟು ಬಳಕೆ ಆಗಿದೆ ಎನ್ನುತ್ತಿದೆ ಅಂಕಿಸಂಖ್ಯೆಗಳು. ಸರ್ಕಾರ ಕೂಡ 16 ನೇ ಲೋಕಸಭೆಯ ಸದನದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಆಗಸ್ಟ್ 2017 ರ ವೇಳೆಗೆ ಕೇವಲ 50% ಆಶ್ವಾಸನೆಗಳನ್ನು ಈಡೇರಿಸಿದೆ ಕೇವಲ ಒಂದು ಅಡ್ಜರ್ನ್ ಮೆಂಟ್ ಮೋಷನ್ ಮೇಲೆ ಚರ್ಚೆ ಆಗಿದೆ ಎನ್ನುತ್ತದೆ ತಜ್ನರ ಲೆಕ್ಕಾಚಾರ.

ಸಂವಿಧಾನದ ತಳ ಅಲುಗಾಡಿಸುವಂತಹ ಬದಲಾವಣೆಗಳಲ್ಲಿ ನಿರತವಾಗಿರುವ ಸರಕಾರವೊಂದು ಅತ್ತ ಸದನದಲ್ಲೂ ಈ ಬದಲಾವಣೆಗಳ ಬಗ್ಗೆ ಗುಣಾತ್ಮಕ ಚರ್ಚೆಗೆ ಅವಕಾಶ ಮಾಡಿಕೊಡದೇ, ಇತ್ತ ಸರ್ಕಾರದ ಮುಖ್ಯಸ್ಥರು ಮುಕ್ತವಾಗಿ ಮಾಧ್ಯಮಗಳನ್ನೂ ಎದುರಿಸದೇ ತಮಗೆ ಬೇಕಾದದ್ದನ್ನು ಬೇಕಾದಂತೆ ಮಾಡುತ್ತಾ ಹೋಗುವುದೇ ಆಡಳಿತವೆಂದು ನಂಬಿ ನಡೆದಿರುವುದು ಖಂಡಿತಕ್ಕೂ ಸಂಸದೀಯ ಸದಾಚಾರ ಅಲ್ಲ.

ಈ ಬಗ್ಗೆ ಟೀಕೆಗಳು ಬಂದಾಗ ಸರ್ಕಾರದ ಕಡೆಯಿಂದ ಬರುತ್ತಿರುವ ಸಮಜಾಯಿಷಿಗಳೂ ಎಷ್ಟು ಬಾಲಿಷವಾಗಿವೆ ಎಂದರೆ, ಹಿಂದೆ ಕಾಂಗ್ರೆಸ್ ಸರಕಾರ ಹೀಗೆ ಮಾಡಿತ್ತು; ನಾವೂ ಮಾಡುತ್ತೇವೆ ಎನ್ನುವ ಮಟ್ಟದಲ್ಲಿದೆ. ಇತ್ತ ನಾಲ್ಕನೇ ಕಂಬ ಎಂದು  ಹೆಸರು ಹೊತ್ತಿರುವ  ಮಾಧ್ಯಮಗಳು ಸರ್ಕಾರದ ಮಡಿಲು ಹತ್ತಿ ಬೆರಳು ಚೀಪತೊಡಗಿರುವುದರಿಂದಾಗಿ, ಅಲ್ಲೋ ಇಲ್ಲೋ ಜೀವ ಹಿಡಿದುಕೊಂಡಿರುವ ಪ್ರತಿಪಕ್ಷಗಳ ಕತ್ತು ಕೂಡ ಹಿಚುಕಿಹೋಗಿದೆ. ಸ್ವಸ್ಥ- ಸಾಂವಿಧಾನಿಕ ಮಾತುಗಳು ಕೇಳಿಸದ ಹಂತಕ್ಕೆ ದೇಶ ತಲುಪುತ್ತಿದೆ.

 

‍ಲೇಖಕರು avadhi

December 4, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: