ಸವಿ ಸವಿ ನೆನಪು ಸಾವಿರ ನೆನಪು..

 

 

 

 

 

ಸಿದ್ಧರಾಮ ಕೂಡ್ಲಿಗಿ

 

 

 

” ಅದು ೭೦ರ ದಶಕ. ಆಗ ಮೊಬೈಲ್, ಟಿವಿ ಅಂದರೆ ಏನಂತ ಗೊತ್ತಿಲ್ಲದ ಪ್ರಪಂಚವಾಗಿತ್ತು ನಮಗೆ. ರೇಡಿಯೋ ಒಂದೇ ನಮ್ಮ ಪ್ರಪಂಚ. ಅದನ್ನು ಹೊರತುಪಡಿಸಿದರೆ ಕತೆ ಪುಸ್ತಕಗಳು. ಅದಾವ ಭೂತ ಹೊಕ್ಕಿತ್ತೊ ನನಗೆ ಕತೆ ಪುಸ್ತಕಗಳೆಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಆಗ ಬರುತ್ತಿದ್ದ ಕಾಮಿಕ್ಸ್ ರೀತಿಯ ಕನ್ನಡದ ’ಚಂದಮಾಮ’, ’ಬಾಲಮಿತ್ರ’, ’ಬೊಂಬೆಮನೆ’ ಕತೆ ಪುಸ್ತಕಗಳೆಂದರೆ ಹಬ್ಬ.

ಪ್ರತಿ ತಿಂಗಳೂ ಈ ಕತೆ ಪುಸ್ತಕಗಳಿಗಾಗಿ ಕಾಯುತ್ತಿದ್ದೆ. ಅಂಗಡಿಗಳಿಗೆ ತಿಂಗಳ ಮೊದಲ ವಾರ ಇದಕ್ಕಾಗಿಯೇ ಎಡತಾಕುತ್ತಿದ್ದೆ. ಹೊಸ ಚಂದಮಾಮ, ಬಾಲಮಿತ್ರ ಪುಸ್ತಕ ಬಂದಿದೆಯೆಂದರೆ ಅದನ್ನು ಕೊಂಡುಕೊಳ್ಳಲೇಬೇಕು. ಅದನ್ನು ಮನೆಗೆ ತಂದು ಓದುತ್ತ ಕುಳಿತರೆ ಈಗಿನ ಮಕ್ಕಳ ” ಹ್ಯಾರಿಪೋಟರ್ ” ನ್ನು ಮೀರಿಸುವಂತೆಯೇ ಅದರಲ್ಲಿ ಮುಳುಗಿಬಿಡುತ್ತಿದ್ದೆ. ಅದರಲ್ಲಿಯ ಪ್ರತಿಯೊಂದು ಕತೆಗೂ ಅದ್ಭುತವಾದ ಚಿತ್ರಗಳಿರುತ್ತಿದ್ದವು.

ಆ ಚಿತ್ರಗಳ ಜೊತೆಗಿನ ಕತೆ ನನ್ನನ್ನು ಫ್ಯಾಂಟಸಿ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಅದನ್ನು ಪೂರ್ತಿ ಮುಗಿಸಿದ ಮೇಲೆಯೇ ಮೇಲೇಳುತ್ತಿದ್ದೆ. ಆ ಕತೆಗಳನ್ನು ಓದಿದಾಗ ಅದರೊಂದಿಗೇ ಒಂದಾಗಿ ಆ ಲೋಕದಲ್ಲಿಯೇ ವಿಹರಿಸುವಷ್ಟೂ ಕತೆಯ ಪ್ರಭಾವ ಇರುತ್ತಿತ್ತು. ಅತ್ಯಂತ ಸರಳ ಭಾಷೆ, ಸರಳ ವಾಕ್ಯಗಳು, ಪ್ರತಿ ಕತೆಯಲ್ಲೂ ಒಂದೊಂದು ನೀತಿ. ನಿಜವಾಗಿಯೂ ಆಗ ನನ್ನಂತಹ ಮಕ್ಕಳಿಗೆ ಆ ಪುಸ್ತಕಗಳು ಅದ್ಭುತ ಜ್ಞಾನ ಭಂಡಾರವೇ ಆಗಿದ್ದವು.

ಮಹಾಭಾರತ, ರಾಮಾಯಣ ಕತೆಗಳು ಅವುಗಳಲ್ಲಿನ ಪಾತ್ರಗಳು, ಒಳಕತೆಗಳು ಗೊತ್ತಾಗಿದ್ದೇ ಈ ಪುಸ್ತಕಗಳಿಂದ. ನಳದಮಯಂತಿ, ಕೀಚಕ, ಬಕಾಸುರ, ಭೀಮನ ಬಲ, ಅರ್ಜುನನ ವೀರತನ ಎಲ್ಲವೂ ನಮಗೆ ಯಾವುದೋ ಲೋಕಕ್ಕೆ ಕರೆದೊಯ್ಯುತ್ತಿದ್ದವು.

ಒಮ್ಮೆ ಯಾವುದೋ ಊರಿಗೆ ಬಸ್ ನಲ್ಲಿ ನನ್ನ ಅಪ್ಪ ನಾನು ಹೊರಟಿದ್ದೆವು. ನನಗೆ ಕತೆ ಪುಸ್ತಕಗಳನ್ನು ಕೊಡಿಸಲು ಅಪ್ಪನಿಗೂ ಖುಷಿ. ಅಪ್ಪನಿಗೆ ಕೇಳಿದೆ ಚಂದಮಾಮ ತೆಗೆದುಕೊಂಡು ಬರ್ತೀನಿ ಅಂತ. ಅಪ್ಪ ಖುಷಿಯಿಂದಲೇ ಕೊಡಿಸಿದರು. ನನಗೋ ಅದನ್ನು ಯಾವಾಗ ಓದಿಯೇನೋ ಎಂಬ ಸಡಗರದಿಂದ ಬಸ್ ನಲ್ಲಿಯೇ ಅದನ್ನು ಓದಲು ಶುರು ಮಾಡಿದೆ. ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ ನೋಡಿಕೊಡ್ತೀನಿ ಕೊಡು ಅಂತ ಇಸಿದುಕೊಂಡರು.

ಪಕ್ಕದಲ್ಲಿದ್ದ ಅಪ್ಪ ಆತನನ್ನು ಗದರಿಸಿಯೇಬಿಟ್ಟರು ” ಹುಡುಗ ಈಗ ಓದಬೇಕಂತ ತೊಗೊಂಡಾನ ಆಗ್ಲೇ ಕೈ ಹಾಕಿದ್ರಾ ? ನಿನಗ ಬೇಕಾದ್ರ ರೊಕ್ಕ ಕೊಟ್ಟು ಪುಸ್ತಕ ಖರೀದಿ ಮಾಡಿ ಓದು ” ಎಂದು ಸರ್ರನೆ ಆತನ ಕೈಯಿಂದ ಪುಸ್ತಕ ಸೆಳೆದು ನನ್ನ ಕೈಗೆ ಕೊಟ್ಟರು. ಅಪ್ಪನ ಬಗ್ಗೆ ನಾನು ಮನಸಿನಲ್ಲಿಯೇ ಎಷ್ಟು ಹೆಮ್ಮೆಪಟ್ಟೆನೋ ಏನೋ.

ಇದರ ಜೊತೆಯಲ್ಲಿಯೇ ಸುಧಾ, ತರಂಗ ವಾರಪತ್ರಿಕೆಗಳ ಅಳತೆಯಲ್ಲಿಯೇ ಅಮರ ಚಿತ್ರ ಕತೆ ಎಂಬ ಪುಸ್ತಕಗಳು ಪ್ರಕಟವಾಗುತ್ತಿದ್ದವು. ಅವುಗಳಲ್ಲಿ ಬರೀ ಚಿತ್ರಗಳ ಸರಣಿ. ಜೊತೆಯಲ್ಲಿಯೇ ಸಂಭಾಷಣೆಗಳು. ಚಿತ್ರ ಸಂಭಾಷಣೆ ಓದುತ್ತಾ ನಾವೂ ಆ ಪಾತ್ರವಾಗಿಬಿಡುತ್ತಿದ್ದೆವು. ಅಂತಹ ಅದ್ಭುತ ಪುಸ್ತಕಗಳು ಅವು. ಅವುಗಳನ್ನೂ ಖರೀದಿಸಿ ಓದಿದ್ದೇ ಓದಿದ್ದು.

ಓದಿನ ಹಸಿವೆ ಎಷ್ಟಿತ್ತೆಂದರೆ ಯಾವ ಊರಿಗೆ ಹೋದರೂ ಮೊದಲು ಪುಸ್ತಕದ ಅಂಗಡಿ ಅಲ್ಲಿ, ಅಮರ ಚಿತ್ರ ಕತೆ ಪುಸ್ತಕಗಳಿವೆಯಾ, ಚಂದಮಾಮ ಇದೆಯಾ ಇದನ್ನೇ ಹುಡುಕುತ್ತಿದ್ದೆ. ಅದಕ್ಕೆ ಪೂರಕವಾಗಿ ಅಪ್ಪನೂ ಪುಸ್ತಕ ಕೊಡಿಸುತ್ತಿದ್ದರು. ಒಂದು ದಿನವೂ ಬೇಸರಿಸಿದವರಲ್ಲ. ಮನೆಯಲ್ಲಿ ಅವೆಷ್ಟೋ ಪುಸ್ತಕಗಳಿದ್ದವು. ಸ್ವತ: ಅಪ್ಪ ಕವಿಯೂ ಆಗಿದ್ದುದರಿಂದ ಅವರಿಗೂ ಓದಿನ ಹವ್ಯಾಸವಿತ್ತು. ಅವರೂ ಕತೆ, ಕಾದಂಬರಿ, ಕವನ ಸಂಕಲನಗಳನ್ನು ಖರೀದಿಸುತ್ತಿದ್ದರು. ಅದು ನನಗೂ ಪೂರಕವಾಗಿತ್ತು.

ನಂತರ ಇಂಗ್ಲೀಷ್ ಕಾಮಿಕ್ಸ್ ಗಳ ಕನ್ನಡ ಅವತರಣಿಕೆ ಆರಂಭವಾದವು. ಫ್ಯಾಂಟಮ್, ಮಾಂಡ್ರೆಕ್ ಮುಂತಾದ ಇಂಗ್ಲೀಷ್ ಹೀರೋಗಳು ಕನ್ನಡದಲ್ಲಿ ಕಾಣಿಸಿಕೊಂಡರು. ಅವರ ಕಾಮಿಕ್ಸ್ ಗಳನ್ನು ತಂದು ಓದತೊಡಗಿದೆ. ಅದೆಷ್ಟು ಖುಷಿ ಕೊಡುತ್ತಿತ್ತೆಂದರೆ, ಆ ಲೋಕದಲ್ಲಿಯೇ ಮುಳುಗಿ ತೇಲುವಂತಾಗುತ್ತಿತ್ತು. ಮನಸಿಗೂ ಏನೋ ಖುಷಿ, ಉತ್ಸಾಹ. ಓದುವಿಕೆ, ಶಬ್ದಗಳ ಪರಿಚಯ, ಕತೆಯ ಪರಿಚಯ, ವಿವಿಧ ಪಾತ್ರ, ಪೌರಾಣಿಕ, ಐತಿಹಾಸಿಕ ವಿಷಯಗಳ ಪರಿಚಯವಾಗುತ್ತಿತ್ತು. ಮಕ್ಕಳಿಗೆ ಇವುಗಳನ್ನು ಪರಿಚಯಿಸಲು ಈ ಪುಸ್ತಕಗಳ ಕೊಡುಗೆ ಅಮೋಘ.

ಅದೇ ತಾನೇ ಹುಟ್ಟಿದ ಮಕ್ಕಳೂ ಮೊಬೈಲ್ ನಲ್ಲಿ ಗೇಮ್ ಇದೆಯಾ ಅಂತ ಹುಡುಕಿ ಅದರಲ್ಲೇ ಮುಳುಗಿದಾಗ ನನಗೆ ಈ ಮೇಲಿನ ಎಲ್ಲ ಘಟನೆಗಳು ನೆನಪಾಗುತ್ತವೆ. ಇಂತಹ ಪುಸ್ತಕಗಳಿಂದ ನಮ್ಮ ಮಕ್ಕಳು ವಂಚಿತರಾದರಲ್ಲ ಎಂದು ಬೇಸರವೂ ಆಗುತ್ತದೆ. ಕೆಲವೇ ದಶಕಗಳಲ್ಲಿ ಎಷ್ಟೊಂದು ಬದಲಾವಣೆ ? ”

 

‍ಲೇಖಕರು avadhi

December 2, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. G Narayana

    I too have nostalgic memory of those days when I used to enjoy the books and Library was my favourite place. really sad that my grandchildren miss those times and happiness they brought

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: