ಇವರು ನನ್ನ ಮನದ ಎಚ್ಚರಿಕೆಯಾಗಿದ್ದವರು…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. 

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು. 

ಕಥೆಯ ಎಳೆಯೊಂದು ಸಿನೆಮಾ ಕಥೆ ಆಗುವ ಹಂತಗಳು ನನಗೆ ವಿಶೇಷವಾಗಿರುತ್ತವೆ. ಕಥೆ ಎಳೆ ಬಂದ ತಕ್ಷಣ ಅದು ಬರಹಕ್ಕೆ ಇಳಿಯುವುದಿಲ್ಲ. ಅದು ಮೊದಲಿಗೆ ನಾನಾ ರೂಪಗಳಲ್ಲಿ ತಲೆಯಲ್ಲಿ ಓಡಲು ಶುರು ಮಾಡುತ್ತದೆ. ಮೊದಲಿಗೆ ಅವು ಅಸ್ಪಷ್ಟ ಚಿತ್ರಗಳಾಗಿರುತ್ತವೆ, ಅದಕ್ಕೊಂದು ನಿರ್ದಿಷ್ಟ ರೂಪ ಇರುವುದೇ ಇಲ್ಲ. ಎಲ್ಲವೂ ಅಮೂರ್ತಗಳೇ, ಆ ಅಮೂರ್ತಗಳ ರಾಶಿಯ ನಡುವೆ ನನಗೆ ಬೇಕಿರುವ ಮೂರ್ತ ರೂಪಗಳನ್ನು ಹೆಕ್ಕಿ ಆಯ್ದು ಕೊಳ್ಳಬೇಕಾಗುತ್ತದೆ. ಆ ಹಂತವಂತೂ ವಿಚಿತ್ರವಾದ ನಶೆಯೇ ಸರಿ. 

ಮನಸ್ಸು ಒಂದೆಡೆ ಏಕಾಗ್ರತೆಗೆ ನಿಲ್ಲುವುದೇ ಇಲ್ಲ, ಬಾಹ್ಯ ಜಗತ್ತಿನಲ್ಲಿ ಏನೇ ಕೆಲಸ ಮಾಡುತ್ತಿದ್ದರೂ ತಲೆಯೊಳಗೆ ಆ ‘ಎಳೆ’ಯ ಕುರಿತಂತೇ ಚಿಂತನೆ, ಚರ್ಚೆ, ಸಂವಾದ, ಹೋರಾಟ, ಪ್ರತಿಭಟನೆ, ಕಿತ್ತಾಟ, ಗುದ್ದಾಟ, ಚೀರಾಟ ನಡೆಯುತ್ತಿರುತ್ತದೆ. 

‘ನಾತಿಚರಾಮಿಯ’ ಎಳೆಯ ಬಗ್ಗೆ ಸಂಪತ್ ಅವರು ಜೋಶ್ ನೀಡಿ ಹುರಿದುಂಬಿಸಿಯೇನೋ ಕಳಿಸಿಬಿಟ್ಟರು, ಆದರೆ ಆ ‘ಎಳೆ’ಯನ್ನು ಸಿನೆಮಾ ಆಗಿಸುವುದು ಹೇಗೆ? ಅದರ ಇತಿ ಮಿತಿಗಳೇನು? ಎಂದು ಯೋಚಿಸಲು ಶುರು ಮಾಡಿ ಎಲ್ಲೂ ಕೊನೆ ಮುಟ್ಟದೆ ಒದ್ದಾಡುವಾಗ ಒಂದು ನಿರ್ಣಯಕ್ಕೆ ಬಂದೆ. ಈ ಎಳೆಗೆ ಸಿನೆಮಾ ರೂಪ ಕೊಡುವ ಮೊದಲು, ವೈಯಕ್ತಿಕವಾಗಿ ನಾನು ಒಂದು ಬೇಸಿಕ್ ಕ್ಲಾರಿಟಿಗೆ ಬರಬೇಕಿತ್ತು.

ಈ ಎಳೆಯಲ್ಲಿ ನನ್ನ ಸ್ಟ್ಯಾಂಡ್ ಪಾಯಿಂಟ್ ಯಾವುದು ಹೇಗಿರಬೇಕು ಎಂದು. ಈ ಸ್ಟ್ಯಾಂಡ್ ಪಾಯಿಂಟ್ ಬಗ್ಗೆ ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತಾ ಸಾಗಿದಂತೆ, ಹೆಣ್ಣಿನ ಬಗ್ಗೆ ಒಂದು ಕಾಲದಲ್ಲಿ ಪುರುಷ ಪ್ರಧಾನ ಸಮಾಜದ ಪ್ರಭಾವದ ಸೊಕ್ಕಿನ ದೃಷ್ಟಿ ಕೋನ ಇದ್ದವನನ್ನು, ಹೆಣ್ಣಿನ ಆಯಾಮದಲ್ಲಿ ಯೋಚಿಸುವಂತೆ ಮಾಡಿದ ಘಟನೆಗಳನ್ನೆಲ್ಲಾ ಮೆಲುಕು ಹಾಕುತ್ತಾ ಹೋದೆ.

ನನ್ನ ಜೀವನದಲ್ಲಿ ನಡೆದಂತಹ ಕೆಲವು ಘಟನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಧೈರ್ಯ ನನಗಿಲ್ಲವಾದರೂ, ಆ ಘಟನೆಗಳ ಮೂಲಕ ಹೆಣ್ತನದ ಬಗ್ಗೆ ಸಾಕಷ್ಟು ಯೋಚಿಸುವಂತೆ ಮಾಡಿದ್ದರ ಕಾರಣಗಳು, ಈ ಸಿನೆಮಾದ ಮೂಲಕ ನಾನು ಪಡೆದುಕೊಳ್ಳಬೇಕಿರುವ ಸ್ಟ್ಯಾಂಡ್ ಪಾಯಿಂಟ್ ಬಗ್ಗೆ ಕ್ಲಾರಿಟಿ ಕೊಟ್ಟಿತು.

ಅದೇನೆಂದರೆ ಹೆಣ್ಣು, ಹೆಣ್ತನವೆಂದರೆ ಅದು ಬರೀ ಕಾಮವಷ್ಟೇ ಅಲ್ಲ. ಕಾಮ, ದೇಹದ ಇನ್ನಿತರ ಅವಶ್ಯಕತೆಗಳಲ್ಲಿ ಅದೂ ಒಂದಷ್ಟೇ. ಕಾಮದ ಮೂಲಕ ಹೆಣ್ಣಿನ ವ್ಯಕ್ತಿತ್ವ, ಜೀವನವನ್ನು ಅಳೆಯಲು ಸಾಧ್ಯವಾಗುವುದಿಲ್ಲ. ಗಂಡಿಗಿರುವಂತೆ ಹೆಣ್ಣಿಗೂ ಅದೊಂದು ಮೂಲಭೂತ ಅವಶ್ಯಕತೆಗಳಲ್ಲೊಂದು, ಅಷ್ಟೇ. ನನ್ನ ಸಿನೆಮಾದಲ್ಲಿ ನನ್ನ ಸ್ಟ್ಯಾಂಡ್ ಪಾಯಿಂಟ್ ಇದಾಗಬೇಕು ಎಂದು ನಿರ್ಧರಿಸಿದೆ. 

ಈ ರೀತಿಯ ನಿಲುವು ತಾಳಲು, ಪುರುಷ ಪ್ರಧಾನ ಮನಃಸ್ಥಿತಿಯಿಂದ ಜಿಡ್ಡುಗಟ್ಟಿದ ನನ್ನ ಚಿಂತನೆಗಳನ್ನು ಬದಲಾಯಿಸಿದ್ದ ಕೆಲವು ವೈಯಕ್ತಿಕ ಘಟನೆಗಳ ಜೊತೆಗೆ ಕಾರಣರಾದ ಕೆಲವರನ್ನು ನೆನಪಿಸಿಕೊಳ್ಳಲೇಬೇಕು. ಮೊದಲಿಗೆ ನನ್ನಪ್ಪ, ನಮ್ಮ ಇಡೀ ಕುಟುಂಬದಲ್ಲೇ ನಮ್ಮಪ್ಪನಷ್ಟು ಪ್ರಗತಿಪರ ಜೀವನವನ್ನು ಅಳವಡಿಸಿಕೊಂಡವರು ಇನ್ನೊಬ್ಬರಿಲ್ಲ. ಜೊತೆಗೆ ಅಮ್ಮ, ಕೆಲವೊಂದು ವಿಷಯಗಳಲ್ಲಿ ಹಠಮಾರಿತನ ತೋರುವ ಅಪ್ಪನ ಜೊತೆಗೆ ನಮ್ಮನ್ನೆಲ್ಲಾ ಬೆಳೆಸಿದವರು. ಹಾಗೂ ಸಾಕಷ್ಟು ವಿಷಯಗಳಲ್ಲಿ ಇಂದಿಗೂ ನನಗೆ ಅಚ್ಚರಿಯಾಗಿ ಕಾಣುವವರು.

ಮೂರನೆಯವರು ನನ್ನೆಲ್ಲಾ ಹುಚ್ಚು ಸಾಹಸಗಳಿಗೆ ಬೆನ್ನೆಲುಬಾಗಿ ನಿಲ್ಲುವ ನನ್ನ ಗುರುಗಳಾದ ಹೆಚ್ ಎ ಅನಿಲ್ ಕುಮಾರ್. ನನ್ನ ಸಂಪೂರ್ಣ ಚಿಂತನೆ ವ್ಯಕ್ತಿತ್ವಗಳನ್ನು ತಿದ್ದಿ ತೀಡಿದವರು, ನಾಲ್ಕನೆಯವರು ಸದಾ ನನ್ನ ಕಾಲೆಳೆಯುವ ಹಾಗೂ ತಮಾಷೆಯಾಗಿಯೇ ಟೀಕಿಸುವ ನೆಪದಲ್ಲಿ ನನ್ನೊಳಗಿನ ಅದೆಷ್ಟೋ ಅಸ್ಪಷ್ಟ ನಿಲುವುಗಳನ್ನು ತಿದ್ದಿಕೊಳ್ಳಲು ಸಹಾಯ ಮಾಡುವವರು ಎನ್ ಎ ಎಂ ಇಸ್ಮಾಯಿಲ್, ಐದನೆಯವರು ಡಾ ಎಂ ಎಸ್ ಆಶಾದೇವಿ ಮೇಡಂ.

ಆಶಾದೇವಿ ಮೇಡಂ ರವರ ‘ನಾರಿ ಕೇಳಾ’ ಅಂಕಣದ ರೆಗ್ಯುಲರ್ ಓದುಗ ನಾನು. ಅವರ ಪ್ರತಿ ಅಂಕಣದಲ್ಲೂ ಸ್ತ್ರೀವಾದಿ ಚಿಂತನೆಯ, ಅಥವಾ ಹಲವು ಪ್ರಕಾರಗಳಲ್ಲಿ ಸಮಾಜದಲ್ಲಿ ಹೆಣ್ಣಿನ ವಿಷಯವಾಗಿ ಹುಟ್ಟುವ ದೃಷ್ಟಿಕೋನಗಳನ್ನು ವಿಮರ್ಶಿಸಿ, ವಿವರಿಸಿ ಬರೆಯುತ್ತಿದ್ದ ‘ನಾರಿ ಕೇಳಾ’ ಅಂಕಣವು ನನ್ನನ್ನು ಸಾಕಷ್ಟು ಪ್ರಭಾವಿಸಿದೆ.

ಈ ‘ನಾತಿಚರಾಮಿ’ಯ ಎಳೆಯನ್ನು ಕುರಿತು ಚಿಂತಿಸುವಾಗ ನಾನು ಎಲ್ಲೆಲ್ಲಿ ಎಡವಬಾರದೆಂಬ ಎಚ್ಚರಿಕೆಯನ್ನು ಇವರೆಲ್ಲಾ ಪರೋಕ್ಷವಾಗಿ ನನ್ನನ್ನು ಪ್ರಭಾವಿಸುತ್ತಲೇ ಇದ್ದರು. ಇದರೆಲ್ಲದರ ಪ್ರಭಾವ ಹಾಗೂ ನನ್ನ ನಿಲುವುಗಳಲ್ಲಿ ಇದ್ದ ಸ್ಪಷ್ಟತೆಯಿಂದಾಗಿ ಕಥೆಯ ಎಳೆಯ ಕುರಿತಂತೆ ಕೆಲವೊಂದು ಸ್ಪಷ್ಟತೆಗಳು ಒಂದು ಬೇಸಿಕ್ ಆಕಾರ ಪಡೆಯುವುದಕ್ಕೆ ನೆರವಾಗಿ, ಮತ್ತೊಬ್ಬರಿಗೆ ಹೇಳುವಷ್ಟು ಕ್ಲಾರಿಟಿ ಬಂತು.

ಮೊದಲ ಎಳೆಯಾಗಿ ಮೂಡಿ ಬಂದ ಕತೆ ಹೀಗಿತ್ತು, ಐಟಿಯಲ್ಲಿ ಕೆಲಸ ಮಾಡುವ ಹೆಣ್ಣು, ಆಕೆಗೆ ಯಾವ ನಿರ್ಬಂಧವೂ ಇಲ್ಲ. ಇಷ್ಟಪಟ್ಟು ಪ್ರೀತಿ ಮಾಡಿ ಮನೆಯವರ ವಿರೋಧದ ನಡುವೆ ಮದುವೆಯಾಗಿ ಖುಷಿಯಾಗಿದ್ದ ಜೀವನ. ಗಂಡ ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದಾನೆ. ಇವತ್ತಿಗೂ ಗಂಡನ ಪ್ರೀತಿಯನ್ನೇ ನೆನೆಯುತ್ತಾ ಬದುಕುತ್ತಿರುವ ಹೆಣ್ಣಿನ ದೇಹ ಕಾಮ ಬಯಸುತ್ತಿದೆ.

ಆದರೆ, ಆಕೆಗೆ ಅದು ಯಾವುದೇ ಸಂಬಂಧದ ಮೂಲಕ ಬೇಡ. ಪ್ರೀತಿ ಬೇಡ. ಮರು ಮದುವೆಯೂ ಬೇಡ. ಆದರೆ ದೇಹದ ಹಸಿವು ದಿನೇ ದಿನೇ ಹೆಚ್ಚಾಗುತ್ತಿದೆ. ಅಂತಹ ಹೆಣ್ಣು ತನಗೆ ಪ್ರೀತಿ, ಸಂಬಂಧ ಬೇಡ. ಕಾಮ ಮಾತ್ರ ಬೇಕು ಎಂದು ಬಯಸಿದರೆ ಸಮಾಜ ಹೇಗೆ ರಿಯಾಕ್ಟ್ ಆಗುತ್ತೆ ಅನ್ನೋದೆ ಇಡೀ ಚಿತ್ರಕತೆ ಮಾಡುವ ಎಂದು ಒಂದು ಕ್ಲಾರಿಟಿಗೆ ಬಂದೆ.

ಆಕೆಯ ಬಳಿ ಹಣ ಇದೆ, ಒಂಟಿಯಾಗಿ ಬದುಕುತ್ತಿದ್ದಾಳೆ. ಕಾಮದ ಹಸಿವನ್ನು ನೀಗಿಸಿಕೊಳ್ಳಲು ಯಾವ ಅಡೆತಡೆಯೂ ಇಲ್ಲ. ಆದರೆ ಚಿಕ್ಕವಯಸ್ಸಿನಿಂದಲೂ ಆಕೆ ಬೆಳೆದು ಬಂದಿರುವ ಪರಿಸರ, ಪದ್ಧತಿ, ಪರಂಪರೆ, ಆಚಾರ-ವಿಚಾರ ಎಂಬ ಕಾಣದ ಬೇಲಿಗಳು ಆಕೆಯನ್ನು ನಿರ್ಬಂಧಿಸಿವೆ. ಇದೆಲ್ಲವನ್ನು ಮೀರಿ ಆಕೆ ಯಶಸ್ವಿಯಾಗುತ್ತಾಳಾ ಇಲ್ಲವಾ. ಇದು ಒನ್ಲೈನ್ ಕಥೆ !

‍ಲೇಖಕರು ಮಂಸೋರೆ

September 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: