ಮಂಗನಕಾನಿನ ಮೀನು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ಬಂದು ದಡ ಮುಟ್ಟಿದಂತೆ.

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.

ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ಮೀನುಪೇಟೆಯ ತಿರುವಿನಲ್ಲಿಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ಅವಧಿನನ್ನ ಶಾಲ್ಮಲೆಅಂಕಣದಲ್ಲಿ ಸಿಗಲಿದ್ದಾರೆ.

ಲೆಕ್ಕ ಮಾಡಿದರೆ ಮೂವತ್ತು ಮನೆ ಹೆಕ್ಕಬಹುದಾದ ಊರು ಮಂಗನಕಾನು. ಊರ ಪ್ರವೇಶದ ಕಲ್ಲುಗುಜ್ಜು ರಸ್ತೆಯ ಅಂಚಿಗೆ ಒಂದು ದಪ್ಪಮರ. ಅದರ ಕಾಂಡಕ್ಕೆ ಒಂದು ಎತ್ತುಗೈಯೆತ್ತರಕ್ಕೆ ಮೂರಿಂಚಗಲದ ಹತ್ತಿಂಚು ಉದ್ದದ “ಮಂಗನಕಾನು” ಅಂತ ಸೊಟ್ಟಪಟ್ಟ ಹಳದಿ ಹೆಸರು ಬರೆದ, ಎರಡೂ ತುದಿಗೆ ಜಬರದಸ್ತ್ ಎರಡು ಪಕ್ಕಾಸು ಮೊಳೆ ಹೊಡೆಸಿಕೊಂಡ ತಗಡುಪಟ್ಟಿ. ಕಣ್ಣಿಗೆ ಎದ್ದು ಹೊಡೆಯದಿದ್ದರೂ ಮರದ ಕಾಂಡ ಮೇನ್ ರಸ್ತೆಗೆ ಚೂರು ವಾಲಿದ ಕಾರಣಕ್ಕೆ ಪಟ್ಟಿಯ ಮೇಲಿನ ಊರ ಹೆಸರು ನಿಗಾ ಇಟ್ಟರೆ ಕಾಣಿಸುತ್ತದೆ. ಇಲ್ಲಿ ಬಸ್ಸು ನಿಂತಾಗ ನಾವೂ ಗುದುಕಿ ಎಡಕ್ಕೆ ಒಂದು ಮಾರು ಅಗಲದ ದಿನ್ನೆರಸ್ತೆ ಹತ್ತಿ ಮತ್ತೆ ಇಳಿದು ಹಾಗೇ ಒಂದರ್ಧ ಕಿಮೀ ಮುಂದೆ ಹೋದರೆ ಊರು ಕಾಣಿಸಿಕೊಳ್ಳುತ್ತದೆ ನಮ್ಮೆದುರಿಗೆ.

ಧಾರವಾಡದ ಸೋಮೇಶ್ವರದಲ್ಲಿ ಹುಟ್ಟಿದ ಶಾಲ್ಮಲೆ ಪಶ್ಚಿಮಾಭಿಮುಖವಾಗಿ ಹರಿಯುತ್ತ ಕಲಘಟಗಿಯಲ್ಲಿ ಬೇಡ್ತಿಯ ಕೂಡಿಕೊಂಡು ಯಲ್ಲಾಪುರದಲ್ಲಿ ಮಾಗೋಡು ಜಲಪಾತವಾಗಿ ಧುಮುಕಿ ಅಂಕೋಲೆಯ ಗಂಗಾವಳಿ ನದಿಯಾಗಿ ಗಂಗೆ ದೇವಸ್ಥಾನದ ಹತ್ತಿರ ಅರಬ್ಬೀ ಸಮುದ್ರ ಸೇರುವ ತನಕದ ನೂರಾರು ಮೈಲಿ ಉದ್ದದ ಹರಿವಿನಲ್ಲಿ ಎರಡೂ ದಂಡೆಗುಂಟ ಇವೆ ಹಲವಾರು ಊರುಗಳು. ಮತ್ತಲ್ಲಿ ಕೃಷಿ ತೋಟಪಟ್ಟಿ ಮಾಡಿಕೊಂಡ ಜನ. ಹಾಗೇ ಪಾತಿದೋಣಿಯಿಟ್ಟುಕೊಂಡು ಮೀನು ಹಿಡಿದು ಬದುಕು ಸಾಗಿಸುವ ಹರಿಕಂತ್ರ, ಬೋವಿ, ದಾಲ್ದಿ ಜನ. ಮಂಗನಕಾನೂ ಕೂಡ ದಟ್ಟಾರಣ್ಯದ ಮಧ್ಯ ಹರಿವ ಶಾಲ್ಮಲೆಯ ತಟದ ಮೀನುಗಾರರ ಒಂದೂರು.

ನೀವು ಹೊರಟದ್ದು ಮಳೆಗಾಲದಲ್ಲೇ ಆದರೆ ಯಾವುಯಾವುದೋ ಬಳ್ಳಿ ಹಬ್ಬಿಸಿಕೊಂಡ, ಇದ್ದ ಬಿದ್ದ ಪಾಚಿ ಝರಿಗಿಡಗಳೆಲ್ಲ ಅವುಚಿಕೊಂಡ, ಕವೆಕೊಂಬೆಯಲ್ಲೆಲ್ಲ ಮರಗೆಸುವ ಬೆಳೆಸಿಕೊಂಡ, ಕೈ ಇಟ್ಟರೆ ಪಿಚಿಪಿಚಿ ಎಂಬ, ಎರಡಪ್ಪುಗೈ ಹಿಡಿದರೂ ಮುಗಿಯದ ಕಾಂಡಗಳ ಮರಗಳ ರಾಶಿ. ಮಂಗಟ್ಟೆ, ಗಿಳಿ, ಗುಬ್ಬಿ, ಪಿಕಳಾರ ನವಿಲು ಹೀಗೆ ಸಮ್ಮಿಶ್ರ ಹಕ್ಕಿಗಳ ಕೂಗು. ಏಕಕಾಲಕ್ಕೆ ಖುಷಿಯೂ ಭೀತಿಯೂ ಉಂಟಾಗುವ ಹಾದಿ ಅದು. ಹಾದಿ ಮುಗಿದು ಊರು ಹೊಕ್ಕರೆ (ಇಳಿದರೆ) ಕಾಣುವುದು ಅಲ್ಲಲ್ಲಿಯ ಎರಡು ಪಕ್ಕೆಯ ನೆಲದಪ್ಪಂತೆ ಇರುವ ಸಣ್ಣ ನಾಡ ಹೆಂಚಿನ ಮನೆಗಳು.

ಅದಕ್ಕೂ ಕೆಳಗೆ ಗಂಗಾವಳಿ. ಪ್ರತಿ ಮಳೆಗಾಲದಲ್ಲೂ ನೆರೆಯುಕ್ಕಿ ಮನೆ ಮುಳುಗುವ ಭೀತಿ ಹೊತ್ತುಕೊಂಡೇ ಬದುಕುವ ಜನಕ್ಕೆ ಹಳ್ಳ ಬಿಟ್ಟರೆ ಮತ್ತೆ ಬದುಕೂ ಇಲ್ಲ. ಬೆಳ್ಳಿಮೂಡಿದ ಕಣ್ಣುಕಪ್ಪಿಗೆ ಪುಟ್ಟ ಬಲೆ, ದೋಣಿ ಹಿಡಿದು ಹೊರಟರೆ ಬೆಳಗಾಗುವ ತನಕ  ಅರ್ಧ ಚೆಬ್ಬೆ (ಸಣ್ಣ ಬುಟ್ಟಿ) ಮಡ್ಲೆ, ಕೆಂಸ, ಏರಿ, ನೊಗಲೆ ಮುಂತಾದ ಹಳ್ಳದ ಮೀನು ಸಿಗುತ್ತವೆ. ಒಮ್ಮೊಮ್ಮೆ ಏನೂ ಇಲ್ಲ. ಭೂಮಿ ಕಾಣಿ ಏನೂ ಇಲ್ಲದ ಅವರಿಗೆ ಮೀನು ಹಿಡಿದರೆ ಮಾತ್ರ ಅಕ್ಕಿ ಕಾಯಿ ಮೆಣಸು..

ಅವರ ಪೈಕಿಯ ಹೊಂತಗಾರ ಹುಡುಗರು ‘ಈ ಹಳ್ಳ ನೆಚ್ಚಿಕೊಂಡರೆ ಆದೀತೇ…’ ಅಂತ ಆಳಸಮುದ್ರ ಮೀನುಗಾರಿಕೆಗೆ ಗೋವಾ, ಪಣಜಿ, ರತ್ನಾಗಿರಿ, ಮಂಗಳೂರಿಗೆ ಬೋಟಿ ಕೂಲಿಗೆ ಹೋಗುತ್ತಾರೆ. ಸಮುದ್ರದಲ್ಲೇ ಹಡಗಿನ ಮೇಲೆ ತಿಂಗಳುಗಟ್ಟಲೆ ಉಳಿಯುತ್ತಾರೆ. ಲಾಂಚುಗಳು ಅಲ್ಲಿಗೆ ಬಂದು ದಿನ ದಿನ ಮೀನು ತೋಡಿಕೊಂಡು ದಂಡೆಗೆ ಮರಳುತ್ತವೆ. ಬಲೆ ಹಾಕಲು, ಎಳೆಯಲು ಒಂದೊಂದು ಬೋಟಿಗೆ ಹತ್ತಾರು ಜನ ಬೇಕು. ಸಿಹಿ ನೀರಿನ ದೊಡ್ಡ ದೊಡ್ಡ ಕ್ಯಾನುಗಳು, ಎರಡು ಮೂಟೆ ಕುಚಲಕ್ಕಿ, ಒಂದು ಮೂಟೆ ತೆಂಗಿನಕಾಯಿ, ಖಾರದ ಒಣಮೆಣಸು, ವಾಟೆಹುಳಿ, ಉಪ್ಪು ಮತ್ತು ಮೀನು ಸಾರಿಗೆ ಅಗತ್ಯ ಸಾಮಾನಿನೊಂದಿಗೆ ಬೋಟಿ ಸಾವ್ಕಾರನೊಂದಿಗೆ ದಂಡೆ ಬಿಟ್ಟರೆ ಮತ್ತೆ ಎರಡು ತಿಂಗಳವರೆಗೆ ಊರು ಕಾಣುವ ಹಾಗಿಲ್ಲ.

ಹಡಗಿನಲ್ಲಿ ಮೂರೂ ಹೊತ್ತು ಮಿಡುಕುವ ಮೀನು ಕೊಯ್ದು ತಾಜಾ ತಾಜಾ ಸಾರು. ಕುಚಲಕ್ಕಿ ಹಬೆಯಾಡುವ ಅನ್ನ. ಇಷ್ಟುಂಡು… ಅಗಲ ಎದೆ, ಬಲೆಯ ಹಗ್ಗದ ಮಿಣಿ ಎಳೆದೂ ಎಳೆದೂ ಹುರಿಗೊಂಡ ತೋಳಿನೊಂದಿಗೆ ಮಿರಿಮಿರಿ ಅನ್ನುತ್ತ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಚೌತಿ, ದೀಪಾವಳಿಗೆ ಮನೆಗೆ ಬರುವ ಅವರನ್ನು ನೋಡಲು ಊರ ಪೋರಿಯರಿಗೆ ಎರಡು ಕಣ್ಣು ಸಾಲದು. ನಾಚಲು ಎರಡು ಗಲ್ಲ ಸಾಲದು.

ಸಿಕ್ಕ ಆರು ತಿಂಗಳ ಕೂಲಿಯಲ್ಲಿ ಕೈಗೊಂದು ಮಜಬೂತು ಚಿನ್ನದುಂಗುರ, ಕೊರಳಿಗೊಂದು ಚೈನು ಹಾಕಿಕೊಂಡು ವಾರಕ್ಕೆರಡು ಬಾರಿ ಪೇಟೆ ಸುತ್ತಿ ಸಾರ್ವಜನಿಕ ಗಣಪತಿಗೂ ನಡೆದುಕೊಂಡು, ಹಬ್ಬಕ್ಕೆಲ್ಲ ‘ಜಂಗಿ’ ಮಾಡಿ ಮತ್ತೆ ಮರಳಿ ಹೋಗುವಾಗ ಚೈನು ಉಂಗುರ ಮಾರಿಯೋ, ಬಿಡಿಸಿಕೊಳ್ಳಲು ಆಗುವುದಿಲ್ಲ ಎಂದು ಆಶೆಬಿಟ್ಟೇ ಅಡವಿಟ್ಟೋ, ಸಮುದ್ರದ ದಾರಿ ಹಿಡಿದು ಬಿಡುವ ಇವರಲ್ಲಿ ಬಹುತೇಕರಿಂದ ಮನೆಗೇನೂ ಅಂತಹ ಸಹಾಯ ಆಗದು.

ಬರುವಾಗ ತಲೆಯಲ್ಲೇನೋ ಇರುತ್ತದೆ ‘ಈಸಲವಾದ್ರೂ ಮನೆ ದುರಸ್ತಿ ಮಾಡಿಸಬೇಕು. ಹಿಂದೆ ಇನ್ನೊಂದು ಪಕ್ಕೆ ಹಿಡಿಯಬೇಕು. ಪ್ರತಿವರ್ಷವೂ ಹಳ್ಳ ಮನೆಯ ಕೋಳು ಹತ್ತುತ್ತದೆ ಸಾಧ್ಯವಾದರೆ ಎತ್ತರಗಟ್ಟಿನ ಜಾಗಕ್ಕೆ ಹೋಗಿ ಮನೆ ಕಟ್ಟಿಕೊಳ್ಳಬೇಕು. ‘ಇವ್ಯಾವುದೂ ಸಾಕಾರವಾಗುವುದಿಲ್ಲ ಕಾರಣ ಎಲ್ಲದಕ್ಕೂ ಅಡಚಣೆಯಾಗಿ ಈ ಶರಾಬು ಚಟವೂ ಒಂದು ಉಂಟಲ್ಲ. ಜನ ಒಳ್ಳೆಯವರು. ಆದರೆ ಕೈ ಸೋತು ಹೋದವರು.

ಹಾಗಾಗಿ ಊರಲ್ಲಿಯ ಮನೆ ಜನ ಇವರನ್ನು ನೆಚ್ಚುವುದಿಲ್ಲ. ತಮ್ಮ ಪಾಡಿಗೆ ತಾವು ಶಾಲ್ಮಲೆಯ ಮೀನಿಗೆ ಅಂಟಿಕೊಂಡು ದಿನ ಕಳೆಯುತ್ತಾರೆ. ಅವರಿಂದಾಗುವ ಒಂದೇ ಒಂದು ಮಹತ್ವದ ಲಾಭವೆಂದರೆ ಅಷ್ಟೇನೂ ರೇಟಿಲ್ಲದ ಮೀನನ್ನು ಬೋಟಿ ಸಾವ್ಕಾರನ ಒಪ್ಪಿಗೆ ಪಡೆದು ಸಿಗಿದು ಬೋಟಿಯ ದಕ್ಕೆಯ ಮೇಲೇ ತಮ್ಮ ತಮ್ಮದೆಂದು ಗುರುತಿಸಿಕೊಂಡ ಜಾಗದಲ್ಲಿ ಒಣಗಿಸಿಕೊಂಡು ಊರಿಗೆ ತರುತ್ತಾರೆ ಇವರು.

ಅದು ಮಾತ್ರ ಒಂದು ಗೋಣಿಯಷ್ಟೇ ಇರುತ್ತದೆ ಎನ್ನಿ. ಈ ಮೀನು ವರ್ಷಪೂರ್ತಿ ಸಾರಿಗೆ ಸಾಕು ಮನೆಯವರಿಗೆ. ಹಾಗಾಗಿ ಇಲ್ಲಿಯವರು ತಾವು ಹಿಡಿದ ಮೀನು ಸ್ವಂತಕ್ಕೆ ಬಳಸಿಕೊಳ್ಳದೆ ಮಾರಿ ಉಪ್ಪು ಮೆಣಸು ಕಾಯಿ ಕೊಳ್ಳುತ್ತಾರೆ. ಅವರ ಮನೆಯ ಮಡಿಕೆಯಲ್ಲಿ ಹಸಿಮೀನು ಸಾರು ಕುದಿವುದು ಬಹಳ ಕಮ್ಮಿ..

ಮಂಗನಕಾನಿನ ಹೆಂಗಸರು ಮೀನು ಮಾರುವುದಾದಲ್ಲಿ, ಅದೇ ಆಗಲೆ ಹೇಳಿದೆನಲ್ಲ ತಗಡುಪಟ್ಟಿ ಹೊಡೆಸಿಕೊಂಡ ಮರದ ಕಥೆಯಾ..!! ಆ ಮರದ ಕೆಳಗೆ ಬಂದು ಕುಳ್ಳುತ್ತಾರೆ. ಮಳೆಗಾಲದಲ್ಲಿ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವ ಕಾರಣಕ್ಕೂ ಆಯ್ತು, ರುಚಿಯ ಕಾರಣಕ್ಕೂ ಆಯ್ತು, ಹಳ್ಳದ ಮೀನಿಗೆ ಬೇಡಿಕೆ ಹೆಚ್ಚು. ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಹಾಯುವ ವಾಹನದವರು ನಿಂತು ಮೀನು ಕೊಳ್ಳುತ್ತಾರೆ.

ಮೀನಿನ ಖಯಾಲಿ ಇಲ್ಲದವರು ಕರಾವಳಿ ಮಲೆನಾಡಿನಲ್ಲಿ ಬಹಳ ಕಡಿಮೆ. ಹಾಗಾಗಿ ವಿಷಯ ಗೊತ್ತಿದ್ದವರು ಅದೇ ಹೊತ್ತಿಗೆ ಮನೆಯತನಕ ಹೋಗಿ ಮೀನುಕೊಳ್ಳುವುದೇ ಹೆಚ್ಚು. ನೀವು ಬಂದದ್ದು ಮೀನಿಗೆಂದು ಗೊತ್ತಾದರೆ. ನಿಮ್ಮ ಕುಳ್ಳಿಸಿ ಕೂಹೂಯ್ ಧ್ವನಿಯೊಂದನ್ನು ಹಳ್ಳದವರೆಗೆ ತೇಲಿ ಬಿಡುತ್ತಾಳೆ ಮನೆಯ ಹೆಂಗಸು. ಕೂಯ್..ಕುಕ್ಕಿ ಹೂಯ್..ಕುಕ್ಕೂಯ್… ಧ್ವನಿ ತಿರುಗಿ ಬಂದರೆ ಮೀನು ಇದೆ ಅಥವಾ ಇಲ್ಲ ಎಂಬುದನ್ನು ನಿಮಗವಳು ಹೇಳುತ್ತಾಳೆ. ಮಾರುತ್ತರದ ಧ್ವನಿ ಬರದಿದ್ದರೆ ನೀವು ಇನ್ನೂ ಕೊಂಚ ಹೊತ್ತು ಕಾಯಬೇಕು.

ಮಳೆಗಾಲದ ಹೊಳೆಯ ನೆಗಸಿಗೆ ಒಬ್ಬರೇ ಮೀನು ಹಿಡಿಯಲು ಸ್ವಲ್ಪ ಅಧೈರ್ಯ. ಹಾಗಾಗಿ ಒಬ್ಬರೇ ಹೋಗೋದು ಬಹಳ ಕಡಿಮೆ. ಸಣ್ಣ ದೋಣಿ ಬೇರೆ. ಆಚೆಮನೆ ಈಚೆಮನೆ ಗಂಡಸರಿಬ್ಬರು ಕೂಡಿಕೊಂಡು ಹೋಗುತ್ತಾರೆ. ಹೊಳೆಯ ಮೀನು ಹಿಡಿಯಲು ಅಪಾರ ತಾಳ್ಮೆ ಬೇಕು. ಸಿಕ್ಕೋದೂ ಕಡಿಮೆ.

ತಾಲೂಕಿನಿಂದ ಬಹಳ ದೂರ ಇರುವ ಕಾರಣಕ್ಕೆ ಮೀನು ಊಟದ ಹೊಟೇಲಿನವರ ರೇಟಿನ ಪೈಪೋಟಿ ಇಲ್ಲ ಇಲ್ಲಿ. ಐದುನೂರು ರೂಪಾಯಿಗೆ ಒಟ್ಟೂ ಮೀನು ಗುತ್ತಿಗೆಯಾದರೆ ಇನ್ನೂರೈವತ್ತರಂತೆ ಎರಡೂ ಮನೆಯವರು ಹಂಚಿಕೊಳ್ಳುತ್ತಾರೆ. ಯಾರ ಮನೆ ಹೆಂಗಸು ಮಾರಿಕೊಂಡು ಬಂದರೂ ಸತ್ಯ ಹೇಳುತ್ತಾರೆ. ಮೋಸ ಇಲ್ಲ, ನಿಯತ್ತಿನ ಜನ. ಮೀನು ಮತ್ತು ಹೊಳೆ ದೇವರು ಅವರಿಗೆ. ಹಬ್ಬಕ್ಕೆ ಹೊಳೆಗೂ ಒಂದು ಎಡೆ ಉಂಟು. ನೂಲು ಹುಣ್ಣಿಮೆಗೆ ನೂಲೂ ಹಾಕಿಸಿಕೊಳ್ಳುತ್ತದೆ ಹೊಳೆ.

ಬೇಸಿಗೆಯಲ್ಲಿ ಎದೆ ಮಟ್ಟದ ನೀರಿಗೆ ಹೋಗಿ ಕಲ್ಗ (oyster fish) ಕುಟ್ಟಿ, ಚಿಪ್ಪಿಕಲ್ಲು (clam mussel) ಹೆಕ್ಕಿ ಹೆಂಗಸರು ಚೂರು ಕಾಸು ಮಾಡಿಕೊಂಡು ಮಳೆಗಾಲಕ್ಕೆ ಪೂರ್ತಿ ಆಗುವ ಹಾಗೆ ಅಕ್ಕಿ ಕೊಂಡು ಅಟ್ಟದ ಮೇಲಿಟ್ಟುಕೊಳ್ಳುತ್ತಾರೆ. ಇಲ್ಲಾ ಹಳ್ಳ ಹತ್ತಿರವಿಲ್ಲದ ಊರಿನ ಸಂಬಂಧಿಕರ ಮನೆಯಲ್ಲಿಡುತ್ತಾರೆ. ನಿರಂತರ ಮಳೆಯಾದರೆ ಶಾಲ್ಮಲೆ ಸರಸರ ಏರಿ ತಣ್ಣಗೆ ಮನೆಯೊಳಗೆ ಹೊಕ್ಕಿ ಅಟ್ಟದವರೆಗೂ ಏರಿ ಬಿಡುತ್ತಾಳೆ. ರಾತ್ರಿ ಮಲಗುವ ಹಾಗಿಲ್ಲ. ಹೊಳೆ ಕಡೆಗೆ ಒಂದು ಕಣ್ಣು ಕಿವಿಯಿಟ್ಟುಕೊಂಡೇ ಕುಳ್ಳಬೇಕು.

ದನಕರ ಕೋಳಿ ಕುನ್ನಿ ಎಲ್ಲ ಜಾಗ್ರತೆ ಮಾಡಿಕೊಂಡು ದಿಣ್ಣೆ ಏರಿ ರಾತ್ರಿ ಬೆಳಗು ಮಾಡಬೇಕು. ನೆಗಸು ಹಾಗೇ ಇದ್ದರೆ ದೂರದ ಕಾಳಜಿ ಕೇಂದ್ರಕ್ಕೆ ನಾಕು ದಿನ ಹೋಗುಳಿದು ನೆರೆ ಇಳಿದ ಮೇಲೆ ಬಂದು ಮಂಡಿಯಷ್ಟೆತ್ತರಕ್ಕೆ ಮನೆಯೊಳಗೆ ರಾಶಿ ಬಿದ್ದ ಕರಿ ಅರಲು ತೆಗೆಯಬೇಕು. ಹಾವು ಹುಳ ಹುಪ್ಪಟೆ ಕಾಟ ಬೇರೆ. ಸಾಗಿದೆ ಬದುಕು ಹೀಗೆ… ದಂಡೆಯಂಚಿನ ಬದುಕು ಜೋಗುಳವೂ ಹೌದು ಬಿರುಗಾಳಿಯೂ ಹೌದು. ಹೊಂದಿಕೆಯ ಬದುಕು. ಏನೇ ಅನಾಹುತ ಮಾಡಿದರೂ ಹೊಳೆಗೊಂದು ಮಾತು ಬಯ್ದವರಲ್ಲ ಜನ.

ಗಂಗಾವಳಿ ನದಿ ಸಮುದ್ರ ಸೇರುವಲ್ಲಿನ ಊರಿನ ಹೆಸರೂ ಗಂಗಾವಳಿಯೇ. ಇಲ್ಲಿನ ಮಾದೇವಿಯೇ ಮದುವೆಯಾಗಿ ಮಂಗನಕಾನಿಗೆ ಹೋಗಿದ್ದಾಳೆ. ಬಾರ್ಜು ದಾಟುವಾಗೊಮ್ಮೆ ಪರಿಚಿತಳಾಗಿ ಮತ್ತೆ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದಳು. ತವರಿಗೆ ಬರುವಾಗ ಮೀನು ತರುತ್ತಾಳೆ ನಮಗೆ. ನಾವೂ ಖುಷಿ ಮಾಡಿ ಕಳಿಸುತ್ತೇವೆ ಅವಳನ್ನು. ಅವಳ ಕರೆಯ ಮೇರೆಗೆ ಮಂಗನಕಾನಿಗೂ ಹೋಗಿ ಬಂದಿರುವೆ ಒಮ್ಮೆ.

ಅಲ್ಲಿಯ ನೀರಲ್ಲೂ ಕಾಲು ಇಳಿಬಿಟ್ಟು “ಸಳಸಳ ಸರಿವ ಗಂಗಾವಳಿಯೇ ಎಲ್ಲಿಗೆ ಓಡುವೆಯೇ… ಇರು ನಾನೂ ಬರುವೇ…”ಎಂದೆಲ್ಲ ಗುಣುಗುಣಿಸಿ ಬಂದಿರುವೆ. ನನ್ನ ಬೆನ್ನಿಗೇ ಬಂದವಳು ಶಾಲ್ಮಲೆ ಸಮುದ್ರ ಸೇರಿಕೊಳ್ಳುವುದು ನನ್ನ ಮನೆಗೆ ಸಮೀಪದಲ್ಲೇ ತಾನೇ! ಹೊಳೆ, ಸಮುದ್ರದ ಮಾತನ್ನು ನಾವು ಕೇಳುತ್ತೇವೆ. ಮತ್ತೆ ನಮ್ಮ ಮಾತನ್ನು ಅವು!!

September 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. ಕಿರಣ ಭಟ್

    ಮೀನು..ಮೀನು!
    ಹೀರೇಕಾಯಿ ಬಗ್ಗೇನೂ ಬರೆ..

    ಪ್ರತಿಕ್ರಿಯೆ
  2. Prakash N.

    ಕರಾವಳಿಯನ್ನು “ಸಮುದ್ರ ಮೆಟ್ಟಿದ ನೆಲ” ಅನ್ನುವುದಕ್ಕಿಂತ “ಸಮುದ್ರ ಸವರುವ ನೆಲ” ಎನ್ನುವುದು ಹೆಚ್ಚು ಸರಿಯಾದೀತು. ಅಷ್ಟು ಆಪ್ತ. ಆ ಸಮುದ್ರದ ಅಲೆಗಳ ಆಪ್ತತೆಯೇ ಈ ಲೇಖನಮಾಲೆಗೂ.

    ಪ್ರತಿಕ್ರಿಯೆ
  3. ರೇಣುಕಾ ರಮಾನಂದ

    ಹೀರೆಕಾಯಿ ಬೆಂಡೆಕಾಯಿ ಪಟ್ಲಕಾಯಿ ಚಪ್ಪರ ಕಿರಣಣ್ಣಗೆ ಗುತ್ತಿಗೆಗೆ ಕೊಟ್ಟೇನೆ

    ಪ್ರತಿಕ್ರಿಯೆ
  4. ರೇಣುಕಾ ರಮಾನಂದ

    ಪ್ರಕಾಶಣ್ಣ..ಸಮುದ್ರದ ಆಪ್ತತೆಯನ್ನು ಈ ಲೇಖನಕ್ಕೆ ಹೋಲಿಸಿರಿ..ಬಹಳ ಖುಷಿಪಟ್ಟೆ

    ಪ್ರತಿಕ್ರಿಯೆ
  5. Smitha Amrithraj.

    ಆಪ್ತ ಬರಹ ರೇಣಕ್ಕಾ, ಹೊಳೆ,ಸಮುದ್ರ,ಕಾಡು,ಮೀನು,ಚಿತ್ರ ಪಟದಂತೆ ಮುಂದೆ ಸುಳಿದು ಹೋಯಿತು. ಮೀನುಗಾರ ರ ಮನೆಯ ಮಡಕೆಯಲ್ಲಿ ಮೀನು ಸಾರು ಕುದಿಯುವುದು ಕಡಿಮೆ…ಸಾಲು ಕಾಡಿತು. ಚೆಂದದ ಬರಹ.ಇಷ್ಟ ಆಯ್ತು. _ ಸ್ಮಿತಾ

    ಪ್ರತಿಕ್ರಿಯೆ
    • ರೇಣುಕಾ ರಮಾನಂದ

      ಸ್ಮಿತಾ..ಥ್ಯಾಂಕ್ಯೂ ಕಣೇ..ನನ್ನೆಲ್ಲ ಬರಹ ಓದಿ ಪ್ರತಿಕ್ರಿಯಿಸುವ ನಿನಗೆ ಶರಣೆಂಬೆ

      ಪ್ರತಿಕ್ರಿಯೆ
  6. ಪೂರ್ಣಿಮಾ ಸುರೇಶ್

    ರೇಣು,ಲೇಖನ ಓದಿ ಖುಷಿಪಟ್ಟೆ. ಸಮುದ್ರ ತಟದ ಪುಟ್ಟಪುಟ್ಟ ಊರು,ಅವರ ಜೀವನ ಕಣ್ಮುಂದೆ ತಂದಿರಿ

    ಪ್ರತಿಕ್ರಿಯೆ
  7. Sunanda Kadame

    ಹಲವು ತಳಮಳಗಳ ಹೊತ್ತು ಹರಿವ ಹೊಳೆಯ ಹೆಗಲನ್ನೇ ನಂಬಿ ಉಸಿರು ನಿಲ್ಲಿಸಿಕೊಂಡ ಜೀವಗಳೊಡಲ ಬವಣೆಯ ಪಕ್ಷಿನೋಟವನ್ನು ನಿಸೂರಾಗಿ ಕ್ಲಿಕ್ಕಿಸಿದ್ದೀಯ ರೇಣುಕಾ, ಈ ತರಹದ ಅಂಕಣಗಳು ನಿರಂತರ ಬರೆವಣಿಗೆಗೆ ನಡೆವ ಒಂದು ಹರಿತ ತಾಲೀಮು, ಮುಂದುವರೆಯಲಿ.

    ಪ್ರತಿಕ್ರಿಯೆ
  8. Kaidal Krishnamurthy

    ಶಾಲ್ಮಲಾಳ ಎದೆಯೊಳಗಿಳಿದು ಬೆಚ್ಚಗಿನ ಮಾತು ಕೇಳಿದ ಅನುಭವವಾಗುತ್ತದೆ, ನಿಮ್ಮ ಅಂಕಣವನ್ನು ಓದಿದಾಗ. ಗದ್ಯಕ್ಕೆ ಪದ್ಯದ ಹೃದಯ ಸಿಕ್ಕು ಹದದ ಲಯ ಬಂದಿದೆ. ಕವಿ ಹೃದಯಿಗಳೊಂದಿಗೆ ಸಾಗಲಿ ನಿಮ್ಮ ಹರಟೆ.

    ಪ್ರತಿಕ್ರಿಯೆ
  9. ರೇಣುಕಾ ರಮಾನಂದ

    ಪೂರ್ಣಿಮಾ ಥ್ಯಾಂಕ್ಯೂ ನಿಮ್ಮ ಓದಿಗೆ

    ಪ್ರತಿಕ್ರಿಯೆ
  10. ರೇಣುಕಾ ರಮಾನಂದ

    ಧನ್ಯವಾದ ಸುನಂದಕ್ಕ… ನಿಮ್ಮ ಓದಿಗೆ ನನ್ನ ಪ್ರೀತಿ

    ಪ್ರತಿಕ್ರಿಯೆ
  11. ರೇಣುಕಾ ರಮಾನಂದ

    ಖುಷಿಯಾಯ್ತು ಸುನಂದಕ್ಕ..ನಿಮ್ಮ ಓದಿಗೆ ನನ್ನ ಪ್ರೀತಿ

    ಪ್ರತಿಕ್ರಿಯೆ
  12. ರೇಣುಕಾ ರಮಾನಂದ

    ಧನ್ಯವಾದ ಕೃಷ್ಣಮೂರ್ತಿ ಸರ್..ನಿಮ್ಮ ಓದಿಗೆ ಖುಷಿಯಾಯ್ತು

    ಪ್ರತಿಕ್ರಿಯೆ
  13. ರೇಣುಕಾ ರಮಾನಂದ

    ಕಲಾ ಥ್ಯಾಂಕ್ಯೂ ವೆರಿ ಮಚ್..ನಿಮ್ಮ ಓದಿಗೆ ಖುಷಿಪಟ್ಟೆ

    ಪ್ರತಿಕ್ರಿಯೆ
  14. ಚಂದ್ರ ಶೇಖರ ತಿಮ್ಮಣ್ಣ ನಾಯಕ

    ಆಪ್ತ ಎನಿಸುವ ಕಥೆ ,ಹೊಳೆ ನೆರೆ ಪಾತಿ , ಹೊಳೆ ಮೀನಿನ ಹೆಸರುಗಳು ಓದುತ್ತಾ ಹೋದಂತೆ ಕಾಲಬುಡದಲ್ಲಿ ಸಂಗತಿ ನಡೆಯುತ್ತಿದೆ ಎಂದೆನಿಸುವ ಭಾವ ; ಮನಸಿಗೆ ಹಿತ ಕೊಟ್ಟ ನಿಮಗೆ ಶುಭವಾಗಲಿ ಯಶಸ್ಸು ನಿಮ್ಮದಾಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: