ತಂತ್ರಾಂಶಕ್ಕೂ ಸ್ವಾತಂತ್ರ್ಯ ಬೇಕು..

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು.

ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ಓಂಹೆಸರು ಇರುತ್ತದೆ.

ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ ಮಾಡುತ್ತಿದ್ದಾರೆ.

ಸಂಚಯ, ಸಂಚಿ, ಕಿಂದರಿಜೋಗಿ ಹೀಗೆ ನಾನಾ ಮುಖಗಳಲ್ಲಿ ಅವರ ಪ್ರತಿಭೆ ಪ್ರಕಟವಾಗಿದೆ.

ತಂತ್ರಾಂಶ ಸ್ವಾತಂತ್ರ್ಯದ ಇತಿಹಾಸ ತಿಳಿಯೋಣ

ಖಾಸಗೀ ತಂತ್ರಾಂಶಗಳನ್ನು ಲೈಸೆನ್ಸ್ ಹಣ ಕೊಟ್ಟು ಖರೀದಿಸುವ ಬಳಕೆದಾರ – ಆ ತಂತ್ರಾಂಶ ಸೃಷ್ಟಿಸುವ ಪರಿಸರದಲ್ಲೇ ಬಂಧಿತನಾಗಿ ಅದರ ಕುಂದು-ಕೊರತೆಗಳಲ್ಲೇ ದಿನಗಳೆಯುವುದು, ಅದರ ಪರಿಹಾರಕ್ಕೆ ಮೂಲ ಕಂಪೆನಿಯನ್ನು ಎಡತಾಕುತ್ತಾ ಸಾಗುವುದು ಸಾಮಾನ್ಯ. ನಮ್ಮ ಮೈಕ್ರೋಸಾಪ್ಟ್‌ ವಿಂಡೋಸ್ ನಲ್ಲಿನ ತುಂಗಾ ಕನ್ನಡ ಫಾಂಟ್‌ ನಲ್ಲಿದ್ದ ತೊಂದರೆ, ಅದರ ರೆಂಡರಿಂಗ್‌ ನಲ್ಲಿದ್ದ ತೊಂದರೆ ಇತ್ಯಾದಿಗಳನ್ನು ಜ್ಞಾಪಿಸಿಕೊಳ್ಳಿ. ಇವತ್ತಿಗೂ ಇಂತಹ ಕೆಲವು ತೊಂದರೆಗಳು ಪ್ರಸ್ತುತ. ಐಫೋನ್ ಇರುವವರಿಗೂ ಖಾಸಗೀ ಕಂಪೆನಿಗಳ ಹಿಡಿತದಲ್ಲಿರುವ ತಂತ್ರಾಂಶಗಳ ತೊಂದರೆ ನಿವಾರಣೆಗೆ ಕಾಯದೇ ವಿಧಿ ಇಲ್ಲ.

ಕಂಪ್ಯೂಟರ್ ಕೊಂಡದ್ದು, ಅದಕ್ಕೆ ನನಗೆ ಬೇಕಾದ ಕೆಲಸವನ್ನು ಕಲಿಸಿ ನನ್ನ ಕೆಲಸ ಸುಲಭ ಮಾಡಿಕೊಳ್ಳುವುದು ಎಂದಾದರೆ, ಅದರ ಕಾರ್ಯವೈಖರಿಯನ್ನು, ಅದರಲ್ಲಿರುವ ತಂತ್ರಾಂಶಗಳನ್ನೂ ಕೂಡ ಬಳಕೆದಾರ ಅರಿತುಕೊಳ್ಳಲು ಸಾಧ್ಯವಾಗಿರಬೇಕಾದ್ದು ಮುಖ್ಯವಾಗುತ್ತದೆ. ಇಂದು ನಿಮ್ಮಲ್ಲಿ ಅನೇಕರು ಆಂಡ್ರಾಡ್ ಮೊಬೈಲ್ ಬಳಸಿ ಈ ಲೇಖನ ಓದುತ್ತಿದ್ದಲ್ಲಿ, ನಿಮ್ಮ ಮೊಬೈಲ್ ಫೋನ್ ಬಳಸುವ ಆಪರೇಟಿಂಗ್ ಸಿಸ್ಟಂ ಮತ್ತು ಅದಕ್ಕೆ ಹೃದಯ ಭಾಗದಂತಿರುವ ಕರ್ನೆಲ್ ಕೂಡ ಸ್ವತಂತ್ರ ತಂತ್ರಾಂಶವಾಗಿದ್ದು, ಅದರ ಸಂಪೂರ್ಣ ‍ಸೋರ್ಸ್‌ ಕೋಡ್ ನಮಗೆ ಇಂಟರ್ನೆಟ್ ‌ನಲ್ಲಿ ಲಭ್ಯ ಎಂದು ತಿಳಿದರೆ ಬಹಳ ಮಂದಿಗೆ ಆಶ್ಚರ್ಯವೂ ಆಗಬಹುದು. ಮುಂದೊಂದು ದಿನ ನೀವೋ, ನಿಮ್ಮಮುಂದಿನ ತಲೆಮಾರಿನವರೋ ಅದಕ್ಕೆ ತಮ್ಮದೇ ಕ್ರಿಯೇಟಿವಿಟಿ ಬಳಸಿ ಹೊಸ ಆಯಾಮವನ್ನು ತಂತ್ರಜ್ಞಾನ ಜಗತ್ತಿಗೆ ನೀಡಬಹುದು. ಏಕೆಂದರೆ – ಅದರ ಹೊರಗೂ ಒಳಗೂ ಏನು ನಡೆಯುತ್ತಿದೆ ಎನ್ನುವ ಅರಿವು ಪಡೆಯಲು ಬೇಕಿರುವ ಮುಕ್ತ ವ್ಯವಸ್ಥೆ – ಪರವಾನಗಿಗಳೂ, ಸೋರ್ಸ್ ‌ಕೋಡ್ ಇತ್ಯಾದಿ ಸೇರಿದಂತೆ – ನಿಮಗೆ ಎಲ್ಲವೂ ಲಭ್ಯವಿದೆ.

ಹೆಚ್ಚಿನ ಓದಿಗೆ:

ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜದ ಬಗ್ಗೆ ತಿಳಿಯಲಿಚ್ಚಿಸುವವರು ಸ್ವತಂತ್ರ ತಂತ್ರಾಂಶದ ಹರಿಕಾರ ರಿಚರ್ಡ್ ಸ್ಟಾಲ್ಮನ್ ಬರೆದಿರುವ ಪ್ರಬಂಧಗಳನ್ನು ಓದಲೇಬೇಕು.

ಗ್ನು ಯೋಜನೆ, ಸ್ವತಂತ್ರ ತಂತ್ರಾಂಶದ ವಿವರಣೆ, ಅದರ ತತ್ವಗಳು, ಪರವಾನಗಿಯ ಬಗ್ಗೆ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಅಭಿವೃದ್ದಿ ಪಡಿಸಿ ಹಂಚುವುದರ ಬಗ್ಗೆ, ಕಂಪ್ಯೂಟರ್, ಗ್ಲೋಬಲೈಸೇಷನ್‌ ಗಳ ಮಧ್ಯೆ ನಮ್ಮ ಗೋಪ್ಯತೆಗಳನ್ನು ಕಾಪಾಡುವುದರ ವಿಷಯವಾಗಿ ಸ್ಟಾಲ್ಮನ್ ತಮ್ಮ ಅರಿವನ್ನು ಇದರಲ್ಲಿ ಬಿಚ್ಚಿಟ್ಟಿದ್ದಾರೆ. ಅವರ ಎಲ್ಲ ಪ್ರಬಂಧಗಳನ್ನು ‍ಲಾರೆನ್ಸ್ ಲೆಸಿಗ್ (Lawrence Lessig) ಅವರ ಪರಿಚಯದೊಂದಿಗೆ, ಜಸುವ ಗೆ (Joshua Gay) ಅವರ ಸಂಪಾದನೆಯಲ್ಲಿ ಪುಸ್ತಕವನ್ನಾಗಿ ಮಾಡಿ ಗ್ನುವೆಬ್‌ಸೈಟ್‌ನಲ್ಲಿ ಲಭ್ಯವಾಗಿಸಿದ್ದಾರೆ.

ಉಲ್ಲೇಖಗಳು:

  1. ‍RMS Essays- https://www.gnu.org/philosophy/fsfs/rms-essays.pdf
  2. Writing Free Software Song https://www.gnu.org/music/writing-fs-song.html
  3. Free Software Song: https://www.gnu.org/music/free-software-song.html
  4. Article on Hackers by RMS – http://stallman.org/articles/on-hacking.html
  5. Free Software Foundation – https://www.fsf.org/
  6. GNU operating system project – https://www.gnu.org/

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಚಳುವಳಿಯ ಉದಯಕ್ಕೆ ಕಾರಣವಾದ ಕೆಲವು ಘಟನಾವಳಿಗಳನ್ನು ಈ ಮೂಲಕ ನಿಮ್ಮ ಎದುರಿಗೆ ಇಡುತ್ತಿದ್ದೇನೆ.

  • UNIX ಆಪರೇಟಿಂಗ್ ಸಿಸ್ಟಂ ೧೯೬೦ರಿಂದ ಬೆಲ್ಲ್ಯಾಬ್ಸ್ ನಲ್ಲಿ ರೂಪ ಪಡೆದು ಉಪಯೋಗಕ್ಕೆ ಅಣಿಯಾಯಿತು. ೧೯೭೦ರಲ್ಲಿ ಇದನ್ನು ಹೊರ ಪ್ರಪಂಚಕ್ಕೆ ಕೂಡ ಪರಿಚಯಿಸಲಾಯಿತು. ಇದರ ಲಭ್ಯತೆ ಮತ್ತು ಬಳಕೆಯ ಸುಲಭ ಸಾಧ್ಯತೆಯಿಂದಾಗಿ ಇದು ಯುನಿವರ್ಸಿಟಿಗಳು ಮತ್ತು ಉದ್ಯಮಗಳಲ್ಲಿ ಪ್ರಚುರವಾಗಿ, ಇದರ ಅಭಿವೃದಿಪಡಿಸಿದ ಆವೃತ್ತಿಗಳು ಎಲ್ಲೆಡೆ ಅಂಗೀಕೃತವಾಯಿತು. ಯುನಿಕ್ಸ್ ನ ರಚನೆಯ ವಿನ್ಯಾಸ ಇತರೆ ಆಪರೇಟಿಂಗ್ ಸಿಸ್ಟಂ ನಿರ್ಮಾತೃಗಳಿಗೆ ಪ್ರಭಾವ ಬೀರಿತು.
  • ೧೯೮೩ ರಲ್ಲಿ Richard Stallman (ರಿಚರ್ಡ್ ಸ್ಟಾಲ್ಮನ್ ) ಗ್ನು ಪ್ರಾಜೆಕ್ಟ್ ಅನ್ನು ಮುಕ್ತವಾದ, ಸ್ವತಂತ್ರವಾದ ಯುನಿಕ್ಸ್ ಮಾದರಿಯ ಆಪರೇಟಿಂಗ್ ಸಿಸ್ಟಂ ಸೃಷ್ಟಿಸುವ ಉದ್ದೇಶದಿಂದ ಪ್ರಾರಂಭಿಸಿದ. ಇದೇ ಯೋಜನೆಯ ಒಂದು ಮುಖ್ಯ ಭಾಗವಾಗಿ GNU General Public License (GPL) ಪರವಾನಗಿ ಕೂಡ ಬಂತು. ೧೯೯೦ರ ಪ್ರಥಮಾರ್ಧದ ಹೊತ್ತಿಗೆ ಪೂರ್ಣ ಪ್ರಮಾಣದ ಆಪರೇಟಿಂಗ್ ಸಿಸ್ಟಂ ತಯಾರಿಸಲಿಕ್ಕೆ ಬೇಕಾದ ತಂತ್ರಾಂಶಗಳು ಲಭ್ಯವಿದ್ದವು. ಆದರೂ, GNU kernel ಎಂದೇ ಕರೆಯಲ್ಪಟ್ಟ Hurd, ತಂತ್ರಾಂಶ ಅಭಿವೃದ್ದಿಗಾರರನ್ನು (Developers) ಸೆಳೆಯುವಲ್ಲಿ ವಿಫಲವಾಗಿ GNU ಅಪೂರ್ಣವಾಗಿಯೇ ಉಳಿಯಿತು.
  • ೧೯೮೦ರಲ್ಲಿ ಮತ್ತೊಂದು ಮುಕ್ತ ಆಪರೇಟಿಂಗ್ ಸಿಸ್ಟಂ Berkeley Software Distribution (BSD). ಇದನ್ನು AT&T ತಯಾರಿಸಿದ ಯುನಿಕ್ಸ್ ನ ೬ನೇ ಆವೃತ್ತಿಯಿಂದ ಯುನಿವರ್ಸಿಟ್ ಆಫ್ಕ್ಯಾಲಿಫೋರ್ನಿಯಾ, ಬರ್ಕ್ಲಿ ಅಭಿವೃದ್ದಿ ಪಡಿಸಿತು. BSD ಯಲ್ಲಿ AT&T ಅಭಿವೃದ್ದಿ ಪಡಿಸಿದ್ದ ತಂತ್ರಾಂಶದ ಭಾಗಗಳನ್ನು ಹೊಂದಿದ್ದರಿಂದ, AT&T ೧೯೯೦ರಲ್ಲಿ ಯುನಿವರ್ಸಿಟಿ ಅಫ್ಕ್ಯಾಲಿಫೋರ್ನಿಯಾದ ಮೇಲೆ ಕೋರ್ಟ್ ನಲ್ಲಿ ದಾವೆ ಹೂಡಿತು. ಇದು BSD ಯ ಅಭಿವೃದ್ಧಿ ಮತ್ತು ಬಳಕೆಯನ್ನು ಕುಂಠಿತಗೊಳಿಸಿತು. 
  • MINIX, ಶೈಕ್ಷಣಿಕ ಬಳಕೆಗೆಂದೇ ರೂಪಿತಗೊಂಡ ಯುನಿಕ್ಸ್ ಮಾದರಿಯ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು Andrew S. Tanenbaum ೧೯೮೭ರಲ್ಲಿ ಸಿದ್ಧಪಡಿಸಿದ. ಸೋರ್ಸ್‌ ಕೋಡ್ ಲಭ್ಯವಿದ್ದರೂ, ಇದರ ಬದಲಾವಣೆ ಮತ್ತು ವಿತರಣೆಯನ್ನು ತಡೆ ಹಿಡಿಯಲಾಗಿತ್ತು. ಜೊತೆಗೆ ಮಿನಿಕ್ಸ್, 16-bit ಸಿಸ್ಟಂಗಳಿಗೆ ರೂಪಿತವಾಗಿದ್ದು, ಅತಿ ವೇಗವಾಗಿ ಮತ್ತು ಅಗ್ಗವಾಗಿ ಬೆಳೆಯುತ್ತಿದ್ದ ಇಂಟೆಲ್ ನ 386 ಆರ್ಕಿಟೆಕ್ಚರ್ ನ ಪರ್ಸನಲ್ ಕಂಪ್ಯೂಟರ್ ಸಿಸ್ಟಂಗಳ 32-bit ಲಕ್ಷಣಗಳಿಗೆ ಸರಿ ಹೊಂದಿಕೆ ಆಗುತ್ತಿರಲಿಲ್ಲ.
  • ಈ ಎಲ್ಲ ಘಟನೆಗಳು ಮತ್ತು ಸವಿಸ್ತಾರವಾಗಿ ಎಲ್ಲಡೆ ಮುಕ್ತವಾಗಿ ಬಳಕೆಗೆ ಬರದ ಕರ್ನೆಲ್ ನ ಅಭಾವ ಲಿನಸ್ ಗೆ ಈ ಯೋಜನೆಯನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಲಿನಸ್ ತಾನೇ ಹೇಳುವಂತೆ GNU ಅಥವಾ 386BSD ಕರ್ನೆಲ್ ಗಳೇನಾದರೂ ಅಂದು ಲಭವಿದ್ದಿದ್ದರೆ, ಅವನು ಅಂದು ಲಿನಕ್ಸ್ ಕರ್ನೆಲ್ ಬರೆಯಲು ಕೂರುತ್ತಲೇ ಇರಲಿಲ್ಲವೇನೋ.

‌ಗ್ನೂ ಇತಿಹಾಸ

ಏನಿದು ಗ್ನೂ

ಗ್ನೂ ಯೋಜನೆಯನ್ನು ೧೯೮೪ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಭಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ. “ಗ್ನೂ” “GNU’s Not Unix”; ಎಂಬುದರ ಸಂಕ್ಷಿಪ್ತ ರೂಪವಾಗಿದೆ; ಇದನ್ನುಗ್ನೂ (g-noo) ಎಂದು ಉಚ್ಚರಿಸಲಾಗುತ್ತದೆ.

‍ಫ್ರೀ ಸಾಪ್ಟ್ವೇರ್ ಫೌಂಡೇಷನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (FSF) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ‌ನ್ನು ಒದಗಿಸುವ ಹೊಣೆ ಹೊತ್ತಿದೆ. ಎಫ್ಎಸ್ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ. ಗ್ನೂ ಯೋಜನೆ FSF ನ ಕಾರ್ಯ ಚಟುವಟಿಕೆಗಳನ್ನು ಸಂರಕ್ಷಿಸುವುದು, ಆಪರೇಟಿಂಗ್ ಸಿಸ್ಟಂನ ಉಪಯೋಗ, ಅಧ್ಯಯನ, ಅನುಕರಣೆ, ಬದಲಾವಣೆ, ಮತ್ತು ಮರುವಿತರಣೆಯ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸಿ, ಪ್ರಚಾರಗೊಳಿಸುವುದರೊಂದಿಗೆ ಸ್ವತಂತ್ರ ತಂತ್ರಾಂಶದ ಬಳಕೆದಾರರ ಹಕ್ಕುಗಳಿಗಾಗಿ ಹೋರಾಡುತ್ತದೆ. ಇದಲ್ಲದೆ ಅಂತರ್ಜಾಲದಲ್ಲಿ ಸಂವಾದ, ಮುದ್ರಣ, ಮತ್ತು ಸಂಘಟನೆಯ ಸ್ವಾತಂತ್ರ್ಯಗಳನ್ನು, ಖಾಸಗಿ ಸಂಪರ್ಕ ಮಾಧ್ಯಮಕ್ಕೆ ಎನ್ಕ್ರಿಪ್ಷನ್ ತಂತ್ರಾಂಶ ಬಳಕೆಯನ್ನು, ಮತ್ತು ಖಾಸಗಿ ಏಕಸ್ವಾಮ್ಯಗಳಿಂದ ತುಳಿತಕ್ಕೆ ಒಳಗಾಗದಂತಹ ತಂತ್ರಾಂಶ ಬರೆಯುವ ಹಕ್ಕನ್ನುಬೆಂಬಲಿಸುತ್ತದೆ. ನಿಮಗೆ ಈ ಸಮಸ್ಯೆಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವಲ್ಲಿ ಈ ಪುಸ್ತಕ ಸಹಾಯ ಮಾಡಲಿದೆ ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ.

Source: http://www.gnu.org/doc/fsfs3-hardcover.pdf

ಗ್ನೂ ಕರ್ನೆಲ್ ಪರಿ ಪೂರ್ಣವಾಗಿರಲಿಲ್ಲವಾದ ಕಾರಣ ಅದನ್ನು ‍ಲಿನಕ್ಸ್ ಟೋರ್ವಾಲ್ಡ್ಸ್ ಲಿನಕ್ಸ್ ಕರ್ನೆಲ್‌ ನೊಂದಿಗೆ ಬಳಸಲಾಯ್ತು. ಗ್ನೂ ಮತ್ತು ಲಿನಕ್ಸ್ ನ ಜೋಡಿಯೇ ಇಂದು ಲಕ್ಷಾಂತರ ಜನ ಬಳಸುತ್ತಿರುವ ಗ್ನೂ/ಲಿನಕ್ಸ್ ಆಪರೇಟಿಂಗ್ ಸಿಸ್ಟಂ, (ಕೆಲವೂಮ್ಮೆ ಇದನ್ನ ತಪ್ಪಾಗಿ ಲಿನಕ್ಸ್ ಎಂದು ಕರೆದದ್ದಿದೆ).  ಗ್ನೂ/ಲಿನಕ್ಸ್ ನ ಬಹಳಷ್ಟು ಆಕರಗಳು ಅಥವಾ “ವಿತರಣೆಗಳು” ಇಂದು ಲಭ್ಯವಿವೆ.

ಫ್ರೀ – ಕೇವಲ ‘ಉಚಿತ’ ಅಲ್ಲ – ಅದರಲ್ಲೂ ಇರಲಿ ಸ್ವಾತಂತ್ರ್ಯ, ಸ್ವಾವಲಂಬನೆ

‌2011ರಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಸಮುದಾಯ ಸಹಭಾಗಿತ್ವದ ಬಗ್ಗೆ, ಮೂಲಭೂತ ಹಕ್ಕುಗಳ ಬಗ್ಗೆ ಬೀದಿ ಬದಿಯ ವ್ಯಾಪಾರಿಗಳ ಹಕ್ಕಿಗೆ ಬೆಂಬಲಿಸುತ್ತಾ, ಫ್ರೀ ಸಾಫ್ಟ್ ವೇರ್ ಜಾಥಾ ಮಾಡಿದ ಚಿತ್ರಗಳು. ಕನ್ನಡದಲ್ಲಿ ಉಬುಂಟು ಹಾಗೂ ಡೆಬಿಯನ್ ಲೋಗೋಗಳನ್ನು ಮುದ್ರಿಸಿ ಹಂಚಿಕೊಂಡ ಖುಷಿಯೂ ನನ್ನದಾಗಿತ್ತು.

ಚಿತ್ರಗಳು :- Dipti Desai

ಜೊತೆಗೆ ‍ಸ್ಕೈ ಕ್ರಾಸರ್ ಕಂಡಂತೆ ಸೈಕಲ್ ಜಾಥಾ – ಓದಿ.

ರಿಚರ್ಡ್ ಸ್ಟಾಲ್ಮನ್ ಅರಿತ ಸತ್ಯ ತಿಳಿಯಿತೇ ಇಲ್ಲಾ ಇನ್ನೂ ಪ್ರಶ್ನೆಗಳಿವೆಯೇ? ಪ್ರತಿಕ್ರಿಯಿಸಿ. ಮುಂದಿನ ವಾರ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ನೀಡುವ ಸ್ವಾತಂತ್ರ್ಯಗಳ ಬಗ್ಗೆ ತಿಳಿಯೋಣ

‍ಲೇಖಕರು ಓಂಶಿವಪ್ರಕಾಶ್

September 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: