ಪದ್ಮನಾಭ ಆಗುಂಬೆ ಕತೆ- ಕುರುಡು ಮಂತ್ರ

ಪದ್ಮನಾಭ ಆಗುಂಬೆ

ತೆಣೆಯ ಮೇಲೆ ತೆಪ್ಪಗೆ ಕೂತಿದ್ದ ಟೀಕಪ್ಪನ ಮನಸ್ಸಿನಲ್ಲಿ ಗೊಂದಲ ಸಿಟ್ಟು ಹತಾಶೆ ದುಃಖಗಳು ಮಿಶ್ರಣವಾಗಿ ಹೊಯ್ದಾಡುತ್ತಿದ್ದವು.

ಎರಡನೇ ಪಿಯುಸಿ  ಫೇಲಾಗಿ ಮುಂದೆ ಪರೀಕ್ಷೆ ಕಟ್ಟುವುದೋ ಬೇಡವೋ, ಕಟ್ಟುವುದಾದರೆ  ಶಿವಮೊಗ್ಗದಲ್ಲಿ ರೂಮು ಮಾಡಿಕೊಂಡು ಸೀಮೆ ಎಣ್ಣೆ ಸ್ಟೋವು ಹಚ್ಚಿ ಮೈ ಕೈ ಮಸಿ ಮಾಡಿಕೊಳ್ಳುವ  ಸ್ವ-ಆಹಾರ ತಯಾರಿಕೆಯ ಶ್ರಮವೂ, ಗುಂಡೂರಾಯರ  ಹೋಟೆಲಿನಿಂದ ಎಂಟಾಣೆಯ ಸಾಂಬಾರು ತರುವ  ಶ್ರಮವೂ  ತಪ್ಪುತ್ತದೆಂದೂ,  ಬದಲು ತನ್ನೂರಾದ ಹಸಿರುಪೇಟೆಯಲ್ಲಿಯೇ  ಅವ್ವ ಬೇಯಿಸಿ ಹಾಕುವ ಗಂಜಿ, ಒಣಮೀನೋ, ಇಲ್ಲ ದೊಡ್ಲಿ ಕಾಯಿ ಉಪ್ಪಿನ ಕಾಯಿಯ ರುಚಿಯೇ  ಮೇಲೆಂದು, ಯೋಚಿಸಿದ್ದ ಟೀಕಪ್ಪ ಮನೆಯಲ್ಲಿಯೇ  ಓದಿ  ಪಿಯುಸಿ  ಪಾಸು ಮಾಡುವ ನಿರ್ಧಾರಕ್ಕೆ ಬಂದು, ಒಂದು ತಿಂಗಳಿಂದ ಮನೆಯಲ್ಲಿಯೇ ಕೂತಿದ್ದನು.

ಸಪ್ಪ್ಲಿಮೆಂಟರಿ ಪರೀಕ್ಷೆ ಕಟ್ಟುವುದಾದರೂ, ಬರುವ ಸೆಪ್ಟೆಂಬರಿನಲ್ಲಿಯೇ ಆದ್ದರಿಂದ ಈಗ ಮೇ ಜೂನ್ ತಿಂಗಳ ಹೊಸ ಮಳೆಯ ನೆಲದ ಕಂಪನ್ನೂ,  ಹುಲ್ಲು,  ಚಗಟೆ, ಕೆಸು,  ಇತ್ಯಾದಿ ಸ್ವಾವಲಂಬಿ ಮತ್ತು ಪರಾವಲಂಬಿ ಕುರುಚಲುಗಳು ತಂತಾನೇ ಹುಟ್ಟಿ,  ಕೆಂಪು ಮಣ್ಣಿನ ದೂಳು ನೆಲ, ಒಣ ಹುಲ್ಲಿನ ಕಂದು ನೆಲ ಹಸಿರು ಚಾಪೆಯ ಹೊದೆಯುವುದನ್ನು ಮನಸಾರೆ ಆಸ್ವಾದಿಸುವ ಉದ್ದೇಶದಿಂದಲೂ, ಮಳೆ ಹಿಡಿಯುವ ದಿನಗಳಲ್ಲಿ ಮಲೆನಾಡಿನ ಜನರಿಗೆ ಜನರಿಗೆ ಮದುವೆಯ ಕಾಲವಾದ್ದರಿಂದ ಒಂದೆರೆಡು ಮದುವೆಗಳಿಗೂ ಹಾಜರಾಗಿ ತನ್ನ ಪೇಟೆಯ ಶೈಲಿಯ ಮಾತು, ಪ್ಯಾಂಟು ಟೆರಿಕಾಟ್ ಶರ್ಟುಗಳನ್ನು ಹೈಸ್ಕೂಲು ಹೆಣ್ಣುಮಕ್ಕಳಿಗೆ ತೋರಿಸುವ ಉದ್ದೇಶದಿಂದಲೂ,  ಅಷ್ಟಲ್ಲದೇ  ಮಳೆ ಹಿಡಿಯುವ ಮೊದಲು ನಡೆಯುವ  ಭೂತದ ಹರಕೆ, ದೆಯ್ಯದ ಹರಕೆಯಲ್ಲಿ ಪಾಲ್ಗೊಂಡು ಕೋಳಿ ತುಂಡಿನ ಜೊತೆಗೆ ಕಡುಬು  ನುರಿಯುವ ಆಸೆಯಿಂದಲೂ ಹಾಗೂ ಹೊಸ ಮಳೆಯ ನೀರಿಗೆ ಹತ್ತುವ ಹತ್ತುಮೀನು ಕಡಿಯುವ ಕಾರಣದಿಂದಲೂ ಟೀಕಪ್ಪ ಹಾಗೆ ಮನೆಯಲ್ಲಿಯೇ ಕೂತಿದ್ದು.

ಟೀಕಪ್ಪನ ಮನಸ್ಸಿನಲ್ಲಿ ಗೊಂದಲ ಹತಾಶೆ ದುಃಖದ ಭಾವನೆಗಳು ಪುಂಖಾನುಪುಂಖವಾಗಿ ಹೊಮ್ಮುತ್ತಿದ್ದಕ್ಕೆ ಹಿಂದಿನ ದಿನ ನಡೆದ ಘಟನೆಯೇ ಕಾರಣವಾಗಿತ್ತು.  

ಟೀಕಪ್ಪನ ಅಪ್ಪ ತಮ್ಮಯ್ಯ ಗೌಡರು ತಮ್ಮ ಧರ್ಮ ಪತ್ನಿ ಪುಟ್ಟಮ್ಮ ಹೆಗ್ಗಡಿತಿಯೊಂದಿಗೆ ಹಸಿರುಪೇಟೆಯಲ್ಲಿ ನೆಲೆ ನಿಂತು ಎರಡು ದಶಕಗಳು ಕಳೆದು ಹೋಗಿದ್ದವು. ಪೇಟೆಗೆ ಬರುವುದಕ್ಕೆ ಮುಂಚೆ ಪಕ್ಕದ ಹಳ್ಳಿ ಕಾರೇಹಳ್ಳದಲ್ಲಿ ತನ್ನಪ್ಪ ಅವ್ವರಾದ ರಾಮಯ್ಯ ಗೌಡ ಮತ್ತು ಗಿಡ್ಡಮ್ಮ ಹೆಗ್ಗಡತಿಯೊಂದಿಗೆ ಎರೆಡೆಕ್ರೆ ಗೇಣಿಗದ್ದೆ ಮತ್ತು ಅರ್ಧ ಎಕರೆ ರಾಮಯ್ಯ ಗೌಡ ಸ್ವಪರಿಶ್ರಮದಿಂದ ಮಾಡಿದ ದರಖಾಸು ಅಡಿಕೆ ತೋಟದೊಂದಿಗೆ ವಾಸವಾಗಿದ್ದರು.

ಅದೆಂತೋ ಏನೋ ಒಂದೊಮ್ಮೆ ತಮ್ಮಯ್ಯ ಗೌಡನ ತಲೆಯಲ್ಲಿ ಮಿಂಚು ಸಂಚಾರವಾಗಿ, ತಾನು ಹಸಿರುಪೇಟೆಯಲ್ಲಿಯೇ ಹೋಗಿ ಮನೆ ಕಟ್ಟಬೇಕೆಂದೂ, ಅಲ್ಲಿಯೇ ವಾಸವಾಗಿದ್ದರೆ ಮಗ ಟೀಕಪ್ಪನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿರುತ್ತದೆಂದೂ ಅಂದುಕೊಂಡು, ಆ ಹೊತ್ತಿಗಾಗಲೇ ಉಳುವವನೇ ಹೊಲದೊಡೆಯನಾದ್ದರಿಂದ ಗೇಣಿ ಗದ್ದೆ ಸ್ವಂತದ್ದಾಗಿದ್ದು. 

ಅಪ್ಪ ರಾಮಯ್ಯ ಹೇಗೋ ಹೂಟೆ (ಉಳುಮೆ ಅನ್ನುವುದು ಮಲೆನಾಡಿಗರ ಭಾಷೆಯಲ್ಲಿ ಹೂಟೆ) ಮಾಡಿ ಬೆಳೆಯುವ ಭತ್ತವೂ ಜೊತೆಗೆ ಅಡಿಕೆಯ ಹಣವೂ ಬಂದೇ ಬರುತ್ತದೆಂದು ಗೊತ್ತಿದ್ದ ತಮ್ಮಯ್ಯ, ಜೀವನಕ್ಕೇನೂ ಅಡ್ಡಿಯಾಗುವುದಿಲ್ಲವೆಂದು ಅರಿತಿದ್ದನು. ಅಲ್ಲದೆ ಪೇಟೆಯಲ್ಲಿಯೇ ಇದ್ದರೆ ಭತ್ತದ ವ್ಯಾಪಾರವನ್ನೂ, ಸುತ್ತೂ ಹಳ್ಳಿಗಳಾದ ಮಲ್ಲಂದೂರು, ಹಂದಲಸು, ನೇರಲಕೊಡಿಗೆಗಳಲ್ಲಿ ಅಡಿಕೆ ಚೇಣಿಯನ್ನೂ ಮಾಡಬಹುದೆಂದುಕೊಂಡಿದ್ದನು. 

ಹಾಗೆ ಮಗನ ವಿದ್ಯಾಭ್ಯಾಸದ ಕಾರಣ ಕೊಟ್ಟ ತಮ್ಮಯ್ಯ ಅಂತೋ ಎಂತೋ ಹಸಿರುಪೇಟೆಯಲ್ಲಿ ಒಂದು ಮಂಗಳೂರು ಹಂಚಿನ ಮನೆಯನ್ನು ಕಟ್ಟಿಯೇ ಬಿಟ್ಟಿದ್ದನು. ಆ ಕಾಲದಲ್ಲೇನೂ ಜಾಗ ಕೊಳ್ಳಬೇಕಾಗಿರಲಿಲ್ಲ, ಮನೆ ಕಟ್ಟಿದ ಮೇಲೆ ಹಸಿರುಪೇಟೆ ಗ್ರಾಮ ಪಂಚಾಯಿತಿಯವರು ಹಕ್ಕು ಪತ್ರ ನೀಡಿ ಕಂದಾಯ ಪಡೆದು ರಸೀದಿಯನ್ನು ಕೊಡುತ್ತಿದ್ದರು.

ಮಗನ ವಿದ್ಯಾಭ್ಯಾಸದ ಸಕಾರಣ ಕೊಟ್ಟ ತಮ್ಮಯ್ಯನಿಗೆ ಕೆಲವೊಂದು ಮುಖ್ಯ ಸ್ವ-ಕಾರಣಗಳಿದ್ದವು. ಅದರಲ್ಲಿ ಅತಿ ಮುಖ್ಯವಾದವು ಹಸಿರುಪೇಟೆಯಲ್ಲಿರುವ ಎರೆಡೆರೆಡು ಸಾರಾಯಿ ಅಂಗಡಿಗಳೂ, ಒಂದು ಕಳ್ಳಂಗಡಿ ಇರುವುದೂ ಮತ್ತು ಜಮೀನ್ದಾರ್ ಆನಂದರಾಯರ ಮನೆಯ ಮಹಡಿಯ ಮೂಲೆಯಲ್ಲಿರುವ ಕೋಣೆಯೊಂದರಲ್ಲಿ ಸದಾ ನಡೆಯುವ ಇಸ್ಪೀಟಾಟ.

ಅಂದುಕೊಂಡಂತೆಯೇ ಪೇಟೆಗೆ ಬಂದು ಒಕ್ಕಲಾಯಿತು ತಮ್ಮಯ್ಯನ ಸಂಸಾರ.  ಸುಮಾರಾಗಿಯೇ ಶುರುವಾದ ಭತ್ತದ ವ್ಯಾಪಾರವೂ, ಅಡಿಕೆ ಚೇಣಿಯೂ ತಮ್ಮಯ್ಯನನ್ನು ಹಸಿರುಪೇಟೆಯ ಊರ ಗೌಡರು ಅನ್ನುವ ಹಂತಕ್ಕೆ ತಂದು ನಿಲ್ಲಿಸಿದವು. ಹಸಿರುಪೇಟೆಯಲ್ಲಿ ಆ ಕಾಲಕ್ಕೆ ಪ್ರಮುಖವಾಗಿದ್ದವರು ಗೌಡ ಸಾರಸ್ವತ ಕೊಂಕಣರು, ಕೆಲವಷ್ಟೇ ಮಂದಿ ಹವ್ಯಕ ಸ್ಮಾರ್ತರೂ ಮತ್ತು ಕನ್ನಡ ಜಿಲ್ಲೆಯಿಂದ ಬಂದ ತುಳುವ ಆಚಾರಿಗಳು, ಪೂಜಾರಿಗಳು, ಮರಕಾಲರು ಮತ್ತೊಂದಷ್ಟು ಹಳೆಪೈಕದವರು, ದೇವಾಡಿಗರು ಇತ್ಯಾದಿ ಇತ್ಯಾದಿ.  ಹಾಗಾಗಿಯೇ ತಮ್ಮಯ್ಯ ಗೌಡರಿಗೆ ಊರು ಗೌಡರ ಪಟ್ಟ ಒದಗಿದುದು. ಹಾಳೂರಿಗೆ ಉಳಿದವನೇ ಗೌಡನಲ್ಲವೇ?

ಆದರೆ ಆ ಪಟ್ಟ ಬಹಳ ದಿನ ಉಳಿಯಲಿಲ್ಲ; ಕಾಲಕ್ರಮೇಣ ತಮ್ಮಯ್ಯನ ಬಹುಪಾಲು ಸಮಯ ವ್ಯಾಪಾರಕ್ಕಾಗಲೀ, ಚೇಣಿಗಾಗಲಿ ಸೀಮಿತವಾಗದೇ ಸಾರಾಯಿ ಅಂಗಡಿಯಲ್ಲೂ, ಇಸ್ಪೀಟಾಟದ ಮನೆಯಲ್ಲೂ ವ್ಯಯವಾಗತೊಡಗಿತು. 

ತಮ್ಮಯ್ಯ ಪೇಟೆಗೆ ಬಂದ ೫ನೇ ವರುಷಕ್ಕೆ ಅವರಪ್ಪ ರಾಮಯ್ಯ ಒಂದು ದಿನ ಪೇಟೆಯಿಂದ ಕಾರೇಹಳ್ಳಕ್ಕೆ ಹೋಗುತ್ತಿರುವಾಗ ರಣ ಹೊಡೆದು (ಕಾರಣ ಗೊತ್ತಿಲ್ಲದೇ ಇದ್ದಕಿದ್ದಂತೆ ಯಾರಾದರೂ ಸತ್ತರೆ ಆ ಕಾಲದಲ್ಲಿ, ರಣ ಹೊಡೆಯಿತೋ ಇಲ್ಲ ದೆಯ್ಯ ಮೆಟ್ಟಿ ಸತ್ತ ಅಂತಲೋ ನಂಬುತ್ತಿದ್ದರು) ಸತ್ತು, ಅದಾದ ಒಂದೇ ತಿಂಗಳಿಗೆ ಗಿಡ್ಡಮ್ಮನೂ ವಾಂತಿಭೇದಿಯಾಗಿ ವೈಕುಂಠವಾಸಿಯಾಗಿದ್ದಳು. ಹಾಗಾಗಿ ಗದ್ದೆ ಸಾಗುವಳಿ ಮಾಡುವವರಿಲ್ಲದೆ ಬರುವ ಭತ್ತ ನಿಂತು ಹೋಗಿತ್ತು.

ಸಾಗುವಳಿಯೂ ಹುಟ್ಟುವಳಿಯೂ ಅನುಲೋಮಾನುಪಾತದಲ್ಲಿರುವವಾದ್ದರಿಂದ ಎರಡೂ ಇಳಿಕೆ ಕಂಡಿದ್ದವು. ಗದ್ದೆಯಂತೂ ಬೀಳು ಬಿದ್ದಿತ್ತು. ಹಾಗಿರುವಾಗ ತಮ್ಮಯ್ಯ ಸಾರಾಯಿ ಅಂಗಡಿಗಳಲ್ಲೂ, ಇಸ್ಪೀಟಾಟದ ಸದಸ್ಯರಲ್ಲೂ ಸಾಲ ಮಾಡಿಕೊಂಡು ಊರು ಬಿಡಬೇಕಾಗಿ ಬಂದು, ಒಂದು ತಣ್ಣನೆಯ ರಾತ್ರಿ ಯಾರಿಗೂ ಹೇಳದೆ ಕಾಣದಾಗಿದ್ದನು. ಹಾಗೆ ಊರು ಬಿಟ್ಟ ತಮ್ಮಯ್ಯಗೌಡ ದೂರದ ಹೆಬ್ರಿಗೆ ಹೋಗಿ ಅಲ್ಲಿನ ಗೋಡಂಬಿ ಕಾರ್ಖಾನೆಯೊಂದರಲ್ಲಿ ಮ್ಯಾನೇಜರ್ ಕಮ್ ಮಿಲ್ ಡ್ರೈವರ್ ನಾಗಿ ಕೆಲಸ ಮಾಡುತ್ತಿದ್ದನು.

ಅಡಿಕೆ ಕೊಯಿಲು ಕಾಲದಲ್ಲಿ ಪುಟ್ಟಮ್ಮ ಹೆಗ್ಗಡಿತಿ ಟೀಕಪ್ಪನನ್ನು ಜೊತೆಯಾಗಿ ಕರೆದೊಯ್ದು ಅವರಿವರ ಅಂಗಲಾಚಿ ಕೊನೆ ತೆಗೆಯಿಸಿ, ಕಾರೇಹಳ್ಳದಲ್ಲಿಯೇ ವಾಸವಾಗಿದ್ದ ತನ್ನ ಗಂಡನ ಚಿಕ್ಕಪ್ಪನ ಮಗನಾದ ಬಾಬಯ್ಯಗೌಡನ ಮನೆಯಲ್ಲಿಯೇ ಸುಲಿಸಿ, ಬೇಯಿಸಿ, ಒಣಗಿಸಿ, ಹಸ ಬೆಟ್ಟೆ ಗೊರಬಲು ಗೋಟು ಎಂದು ಆರಿಸಿ, ಬೇರೆ ಮಾಡಿ ಬಾಬಯ್ಯನ ಮೂಲಕವೇ ದೋಣಿಹಕ್ಕಲು ಸಾಬರಿಗೆ ಮಾರಿ ಬಂದ ಹಣದಲ್ಲಿ ವರುಷ ಪೂರ್ತಿ ತನ್ನ ಮತ್ತು ಮಗನಾದ ಟೀಕಪ್ಪನ ಜೀವನ ಸಾಗಿಸುತ್ತಿದ್ದಳು. ಅಡಿಕೆ ಮಾರಿದ ಹಣ ಐನೂರೋ ಎಂಟು ನೂರೋ ಬಂದರೆ ಬಾಬಯ್ಯ ಪಾಪದ ಪುಟ್ಟಮ್ಮನಿಗೆ ಕೊಡುತ್ತಿದ್ದುದು ಮಾತ್ರ ಬಂದ ಹಣದ ಮುಕ್ಕಾಲು ಭಾಗ. ಪುಟ್ಟಮ್ಮನಿಗೇನು ಬರ (ಬರಹ) ಬರುತ್ತಿತ್ತೇ, ಲೆಕ್ಕ ಮಾಡಲು?

ಗಂಡ ತಮ್ಮಯ್ಯನಿಗೆ ಸಾಕಷ್ಟು ದುಡಿಮೆಯಿದ್ದರೂ, ದುಡಿದ ದುಡ್ಡೆಲ್ಲವನ್ನೂ ಕುಡಿತ, ಇಸ್ಪೀಟಾಟ ಇತರೆ ದುಶ್ಚಟಗಳಿಗೇ ಸರಿ ಹೋಗಿಸುತ್ತಿದ್ದ. ವರ್ಷಕ್ಕೊಂದೆರೆಡಾವರ್ತಿ ಹಸಿರುಪೇಟೆಗೆ ಬರುವಾಗ ಕನ್ನಡ ಜಿಲ್ಲೆಯ ವಿಶೇಷ ತಿನಿಸುಗಳಾದ ಹನೆಬೊಂಡ, ಒಂದು ತಿಂಗಳಿಗಾಗುವಷ್ಟು ಒಣ ಮೀನು, ಚಟ್ಲಿ (ಸಿಗಡಿ)ಗಳನ್ನೂ ತಂದು, ಇರುವ ಮೂರೋ ನಾಲ್ಕೋ ದಿನವೂ  ಮನೆಯಲ್ಲಿದ್ದ ಕೋಳಿ ಮುರಿಸಿ, ರೊಟ್ಟಿ ಮಾಡಿಸಿ, ಸಾರಾಯಿ ಕಳ್ಳು ಕುಡಿದು ತಿಂದು ಮತ್ತೆ ಹೆಬ್ರಿಗೆ ಮರಳುತ್ತಿದ್ದ. ಹಸಿರುಪೇಟೆಯ ಇಸ್ಪೀಟಾಟದ ಸದಸ್ಯರು ಹಳೆಯ ಸಾಲವನ್ನು ಕೇಳುತ್ತಾರೆಂಬ ಭಯದಿಂದಲೋ ಏನೋ, ಆನಂದರಾಯರ ಮನೆ ಕಡೆಯೊಂದು ತಲೆ ಹಾಕುತ್ತಿರಲಿಲ್ಲ.

ಹಾಗೆ ಏರು ಪೇರಿಲ್ಲದೆ ನಡೆಯುತ್ತಿದ್ದ ಜೀವನದಲ್ಲಿ, ಟೀಕಪ್ಪ ಏಳನೇ ತರಗತಿಯವರೆಗೂ ಸರಕಾರೀ ಶಾಲೆಯಲ್ಲಿ ಓದಿ ಪಾಸಾದದ್ದು ಮಾತ್ರವಲ್ಲದೆ, ೭ರ ನಂತರ ನಡೆವ ಗ್ರಾಮೀಣ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಮೊದಲಿಗನಾಗಿ ಉತ್ತೀರ್ಣನಾಗಿ ವರುಷಕ್ಕೆ ಐನೂರು ರೂಪಾಯಿಗಳ ಕಾಲಕ್ಷೇಪಕ್ಕೆ (ಸ್ಕಾಲರ್ಶಿಪ್ (ವಿದ್ಯಾರ್ಥಿ ವೇತನ) ಅನ್ನುವುದು ಮಲೆನಾಡ ಹಳ್ಳಿಗರ ಭಾಷೆಯಲ್ಲಿ ಕಾಲಕ್ಷೇಪ ಆಗಿದೆ) ಅರ್ಹನಾಗಿದ್ದನು. ಅದು ಆ ಕಾಲಕ್ಕೆ ಹಸಿರುಪೇಟೆಯ ಸುತ್ತೂ ಹತ್ತು ಹಳ್ಳಿಗಳಲ್ಲಿ ಮನೆ ಮಾತಾಗಿತ್ತು. ಅನುತ್ತೀರ್ಣರಾಗುವ ಹುಡುಗ/ಹುಡುಗಿಯರ ಅಮ್ಮಂದಿರು “ನೋಡ್ರೋ ಆ ಪುಟ್ಟಮ್ಮನ ಮಗನ್ನ, ಓದಿ ಕಾಲಕ್ಷೇಪ ತಗುಂಡು ಅವನಮ್ಮನನ್ನೂ ಸಾಕ್ತನೆ, ನಿಮಗೇನು ದೊಡ್ಡ ರೋಗ ಬಂದದೆ ಕೊನೆ ಪಕ್ಷ ಪಾಸೂ ಮಾಡುಕ್ಕಾಗುದಿಲ್ಲನು” ಎನ್ನುತ್ತಿದ್ದರು.

ಹತ್ತನೆಯವರೆಗೂ ತರಗತಿಗೆ ಮೊದಲಿಗನಾಗೆ ಉತ್ತೀರ್ಣನಾಗುತ್ತಿದ್ದ ಟೀಕಪ್ಪ ಹತ್ತರಲ್ಲೂ ಫಸ್ಟ್ ಕ್ಲಾಸಿನಲ್ಲಿಯೇ ಪಾಸಾಗಿ ಪಿಯುಸಿ ಓದಲು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಸೇರಿಬಿಟ್ಟಿದ್ದನು. ಇತ್ತ ತೀರ್ಥಹಳ್ಳಿಯೂ, ಅತ್ತ ಶೃಂಗೇರಿ, ಅಥವಾ ಘಟ್ಟದ ಕೆಳಗಿನ ಉಡುಪಿಗಳು ಹತ್ತಿರವಾಗಿದ್ದರೂ ಶಿವಮೊಗ್ಗಕ್ಕೆ ಕಾಲೇಜಿಗೆ ಸೇರಲು ಒತ್ತಾಸೆಯಾಗಿದ್ದುದು ಅವನ ವಿದ್ಯಾರ್ಥಿವೇತನದ ಸ್ವಲ್ಪ ಉಳಿದ ಭಾಗವೇ ಹೊರತು ಅವನಪ್ಪನ ದುಡಿಮೆಯೂ ಅಲ್ಲ ಅಥವಾ ಅಡಿಕೆ ಮಾರಿ ಬರುವ ಹಣವೂ ಅಲ್ಲ.

ಹತ್ತರವರೆಗೂ ಪ್ರತಿ ವಿಷಯಗಳಲ್ಲೂ ೬೦ ಪ್ರತಿಶತದ ಮೇಲೆಯೇ ಅಂಕಗಳನ್ನು ಗಳಿಸುತ್ತಿದ್ದ ಟೀಕಪ್ಪ ಮೊದಲ ಪಿಯುಸಿಯಲ್ಲಿ ಶೇಕಡಾ ೩೫ ಕ್ಕೆ ಇಳಿದು ಬಿಟ್ಟಿದ್ದನು. ಸುದ್ದಿ ತಿಳಿದ ಅವನವ್ವ ಮೂಕವಾಗಿ ರೋಧಿಸಿದ್ದಷ್ಟೇ ಅಲ್ಲದೆ ತಮ್ಮ ಮನೆದೇವರಾದ ಪಂಜುರ್ಲಿಗೂ, ಊರಿನ ಕಾವಲು ದೈವವಾದ ಭೂತರಾಯನಿಗೂ ಮುಂದಿನ ವರ್ಷದ ಹರಕೆಗೆ ಒಂದೊಂದು ಕೋಳಿ ಹೆಚ್ಚಾಗಿಯೇ ಕೊಡುವುದಾಗಿ ಹರಕೆ ಹೊತ್ತಿದ್ದಳು. ಆದರೇನು ಮಾಡುವುದು ಕನ್ನಡ ಮಾಧ್ಯಮದಿಂದ ಏಕಾಏಕಿ ಇಂಗ್ಲಿಷು ಮಾಧ್ಯಮದಲ್ಲಿ ಪಿಸಿಎಂಬಿಗಳನ್ನು ಓದುವುದು ಮತ್ತು ಅರ್ಥ ಮಾಡಿಕೊಳ್ಳುವುದೂ ಟೀಕಪ್ಪನಿಗೆ ಕಬ್ಬಿಣದ ಕಡಲೆಯಂತಾಗಿತ್ತು. ಕಾಸ್ ಥೀಠ, ಟ್ಯಾನ್ ಥೀಠಗಳು ಅವನ ಪಾಲಿಗೆ ಕಾಸಿಟ್ಟ ಬರೆಗಳಂತಾಗುತ್ತಿದ್ದವು.

ಇದೀಗ ಎರಡನೇ ಪಿಯುಸಿಯಲ್ಲಿ ನಪಾಸಾಗಿ ಹಸಿರುಪೇಟೆಗೆ ಮರಳಿ ಬಂದಿದ್ದ ಟೀಕಪ್ಪ ತಾನು ಶಿವಮೊಗ್ಗಕ್ಕೆ ಕೊಂಡು ಹೋದ ಎಲ್ಲಾ ಸಾಮಾನುಗಳನ್ನೂ ಟ್ರಂಕು ಸಮೇತ ಮರಳಿ ತಂದಿದ್ದನು.  ಅವನಲ್ಲಿದ್ದುದಾದರೂ ಒಂದು ಜಮಖಾನ, ಒಂದು ಅತೀ ಕಡಿಮೆ ಬೆಲೆಯ ಬೆಡ್ಶೀಟು, ಪಿಯುಸಿಗೆ ಪ್ಯಾಂಟು ಹಾಕಲೇ ಬೇಕಾದ್ದರಿಂದ ಎರಡು ಪ್ಯಾಂಟು ಮತ್ತು ಎರಡು ಶರ್ಟುಗಳು, ಹಾಗೂ ಎರಡು ಹೈಸ್ಕೂಲಿನಲ್ಲಿ ಯೂನಿಫಾರ್ಮ್ ಆಗಿದ್ದ ಖಾಕಿಚೆಡ್ಡಿಗಳೇ ಈಗ ಒಳಚೆಡ್ಡಿಗಳು.

ಹಿಂದಿನ ದಿನ ಅವ್ವ ಪುಟ್ಟಮ್ಮನ ಅಣತಿಯಂತೆ, ಟೀಕ ತನ್ನ ಜಮಖಾನ, ಬೆಡ್ಶೀಟು ಇತ್ಯಾದಿಗಳನ್ನು ಒಗೆದು ಹಾಕಲು ಮಲಾಪಹಾರಿ ನದಿಯೆಂಬ ಹಳ್ಳಕ್ಕೆ ಹೋಗಿ ಭಾರವಾದ ಜಮಖಾನವನ್ನೂ ಬೆಡ್ಶೀಟನ್ನೂ ಜೊತೆಗೆ ಪ್ಯಾಂಟು ಶರ್ಟುಗಳನ್ನೂ ಒಗೆದು ತಂದು ಮನೆಯ ಹಿಂಭಾಗದ ಬಯಲಲ್ಲಿ ಒಣಗ ಹಾಕಿದ್ದನು.

ಅದೇ ದಿನ ಬೆಳಗ್ಗೆ ಪುಟ್ಟಮ್ಮ ತನ್ನಕ್ಕ ಬಾಳೇಹಳ್ಳಿಯ ಹಾಲಮ್ಮಕ್ಕಯ್ಯನ ಮನೆಗೆ ಹೋಗಬೇಕಾಗಿ ಬಂದುದರಿಂದ, ಟೀಕಪ್ಪ ಮನೆಗೆ ಒಂಟಿಯಾಗಿ ಬಿಟ್ಟಿದ್ದನು. ಬಟ್ಟೆ ಒಗೆದು, ಹೊಳೆಯಲ್ಲಿ ಈಜು ಬಿದ್ದು, ಮಿಂದು ಬಂದ ಟೀಕಪ್ಪ, ಅವ್ವ ಮಾಡಿಟ್ಟ ಗಂಜಿ ಜೊತೆಗೆ ಹುರಿದ ಮೆಣಸಿನಕಾಯಿಯನ್ನು ನೆಂಚಿಕೊಂಡು ಹೊಟ್ಟೆ ತುಂಬಾ ಉಂಡು ಜಗುಲಿಯಲ್ಲಿ ಕೆಮಿಸ್ಟ್ರಿ ಪುಸ್ತಕವನ್ನು ಓದಲು ಕುಳಿತಿದ್ದನು. ಹೊರಗೆ ಬಿರು ಬೇಸಗೆಯ ಬಿಸಿಲು, ಒಳಗೆ ತಂಪು, ಜಗುಲಿಗೆ ಬೀಸಿ ಬರುತ್ತಿದ್ದ ಗಾಳಿ ಆತನನ್ನು ಓದಲು ಬಿಡದೇ ನಿದ್ರೆಗೆ ಜಾರಿಸಿದವು.

ಸಂಜೆ ಎದ್ದಾಗ ಗಂಟೆ ಐದರ ಮೇಲಾಗಿತ್ತು. ರಾತ್ರಿಯ ಊಟಕ್ಕೆ ಅಡುಗೆಯನ್ನು ತಾನೇ ಮಾಡಬೇಕಾಗಿದ್ದುದರಿಂದ ಟೀಕಪ್ಪ ಅಡುಗೆ ಒಲೆಯ ಅಗ್ನಿ ದೇವನನ್ನು ಪುನರ್ ಪ್ರತಿಷ್ಠಾಪಿಸಿ, ಎಸರು ಇಟ್ಟು ಅರ್ಧ ಸಿದ್ದೆ (ಅಕ್ಕಿ ಅಳೆಯುವ ಬಿದಿರಿನಿಂದ ಮಾಡಿದ ಒಂದು ಮಾಪಕ) ಅಕ್ಕಿಯನ್ನು ಸುರಿದು ಗಂಜಿ ಬೇಯಿಸಲಾರಂಭಿಸಿದ. ಹಾಗೆ ಗಂಜಿ ಕುದಿಯುತ್ತಿದ್ದಾಗ ನೆಂಚಿಕೊಳ್ಳಲು ಏನಾದರೂ ವಿಶೇಷ ಮಾಡಬೇಕೆಂದು ಅಪ್ಪ ತಂದಿಟ್ಟಿದ್ದ ಒಣ ಮೀನುಗಳ ಪೈಕಿ ಏನಾದರೂ ಇದೆಯೇ ಎಂದು ಬಿಸಿಲು ಕಣೆಯ ಮೇಲಿಟ್ಟಿದ್ದ ಕರ್ರಗೆ ಹೊಳೆಯುತ್ತಿದ್ದ ಕುಕ್ಕೆಯ ಮುಚ್ಚುಳ ತೆಗೆದು ಹುಡುಕತೊಡಗಿದ.

ಆ ಕುಕ್ಕೆ ಹಲವು ದಶಕಗಳ ಮಳೆಗಾಲಗಳನ್ನು ಸಹಿಸಿಕೊಂಡಿತ್ತು. ವಾಟೆಯಿಂದಲೋ, ಬಿದಿರಿನಿಂದಲೋ ಮಾಡಿದ್ದಾದರೂ ಪ್ರತಿದಿನ ಉರಿ ಒಲೆಯ ಶಾಖ ತಾಗಿ ತಾಗಿ ಗಟ್ಟಿ ಮುಟ್ಟಾಗಿತ್ತು. ಸಣ್ಣ ಸಣ್ಣ ಚಟ್ಲಿಗಳೂ, ಒಂದೆರೆಡು ಸಂಡಿಗೆ ತುಂಡುಗಳೂ, (ಒಣಗಿಸಿದ ಮಾಂಸದ ತುಣುಕುಗಳನ್ನು ಸಂಡಿಗೆ ತುಂಡು ಎಂದು ಕರೆಯುತ್ತಾರೆ), ಒಂದೇ ಒಂದು ೪ ಚದುರ ಅಂಗುಲದ ಸ್ವರ್ಲು ಮೀನು ಕುಕ್ಕೆಯಲ್ಲಿ ಕುಳಿತಿದ್ದವು. ಸ್ವರ್ಲು ಮೀನನ್ನು ಕಂಡವನೇ ಟೀಕ, ಆ ರಾತ್ರಿಯ ನೆಂಚಿಕೆಯನ್ನು ಪಕ್ಕಾ ಮಾಡಿಕೊಂಡ ಸ್ವರ್ಲು ಮೀನಿನ ಚಟ್ನಿಯೆಂದು.

ಸ್ವರ್ಲು ಮೀನಿನ ತುಂಡನ್ನು ಹೊರಗೆ ತೆಗೆದು, ತೊಳೆದು, ಸಣ್ಣ ಸಣ್ಣ ಚೂರುಗಳಾಗಿ ಹೆಚ್ಚಿ ಅರಸಿನ ಪುಡಿ, ಉಪ್ಪು ಹಾಕಿ ಬದಿಗಿಟ್ಟ. ಒಲೆಯ ದಂಡೆಯ ಮೇಲಿದ್ದ ಒಂದೆರೆಡು ಒಣಗಿದ ತೆಂಗಿನ ಕಾಯಿ ಚೂರುಗಳನ್ನು ತೆಗೆದುಕೊಂಡು ಒರಳಿಗೆ ಹಾಕಿ ಕುಟ್ಟಿ ಪುಡಿಮಾಡಿಕೊಂಡ ಸ್ವಲ್ಪ ಮೆಂತೆ, ಓಮದಕಾಳುಗಳ ಜೊತೆಗೆ.  ಅಡ್ಡುಳಿ ಬಾಟಲಿಯನ್ನು ತೆಗೆದು, ಮೀನು ಚೂರುಗಳು, ಕುಟ್ಟಿಟ್ಟ ಕಾಯಿ ಮತ್ತು ಸಾಂಬಾರು ಪದಾರ್ಥಗಳೊಂದಿಗೆ ಬೆರಸಿ ರುಚಿಗೊಂದಿಷ್ಟು ಉಪ್ಪು ಸೇರಿಸಿ ಚಟ್ನಿಯನ್ನು ತಯ್ಯಾರು ಮಾಡಿದ. ಈ ಹಿಂದೆ ಗಂಜಿ, ಉಪ್ಪಿಟ್ಟು, ಅನ್ನ, ಸೀಯಂಬ್ರಾ ಮಾತ್ರ ಮಾಡಿದ್ದ ಅಥವಾ ಕಲಿತಿದ್ದ ಟೀಕಪ್ಪನಿಗೆ ಮೀನು ಚಟ್ನಿಯ ಪ್ರಯತ್ನ ಮೊದಲ ಭಾರಿಯಾದಾಗಿತ್ತು.

ಚಟ್ನಿಯೊಂದಷ್ಟನ್ನು ಬೆರಳಿನಿಂದ ತೆಗೆದ ಟೀಕ ನಾಲಿಗೆಯ ತುದಿಗೆ ತಾಗಿಸಿ ನೆಂಜಿ ನೋಡಿದ. ಏನೋ ಕಡಿಮೆಯಾಗಿದ್ದು ಗೊತ್ತಾಗಿ, ಎರಡು ಒಣ ಮೆಣಸಿನಕಾಯಿ ಮತ್ತೆರೆಡು ಮೆಣಸಿನ ಕಾಳುಗಳನ್ನು ಹಾಕಿ ಮತ್ತೆ ಒರಳಿನಲ್ಲಿ ಕುಟ್ಟಿದ. ಒಂದು ಹದಕ್ಕೆ ಚಟ್ನಿಯಾದ ಮೇಲೆ ಮತ್ತೊಮ್ಮೆ ನೆಂಜಿ ನೋಡಿ ಗನಾಗದೆ ಅಂದುಕೊಂಡು ಒರಳಿನಿಂದ ತೆಗೆದು ಒಂದು ಸಣ್ಣ ತಂಬಾಳೆಯಲ್ಲಿ ಹಾಕಿಟ್ಟ. ಬಿಸಿ ಗಂಜಿಯೊಂದಿಗೆ ಸ್ವರ್ಲು  ಮೀನಿನ ಚಟ್ನಿ ನೆಂಚಿಕೊಂಡು ಉಣ್ಣುವಾಗ ಆಹಾ ಅದೆಂತ ಸಂತೋಷ, ತಾನೇ ಮಾಡಿದ ಗಂಜಿಯೂ, ಚಟ್ನಿಯೂ ಅದೂ ಮೊದಲ ಭಾರಿ ಮಾಡಿದ್ದರಿಂದ ಇಮ್ಮಡಿ ರುಚಿ.

ಉಂಡು ಮಲಗಿದ ಟೀಕಪ್ಪ ಬೆಳೆಗೆದ್ದಾಗ ಹತ್ತು ಗಂಟೆಯಾಗಿದ್ದಂತೆಯೂ, ‘ಹೊರಕಡೆ’ ಹೋಗುವಾಗ ತಾನು ಹಿಂದಿನ ದಿನ ಒಗೆದು ಒಣಗಲು ಹಾಕಿದ್ದ ಶರ್ಟು ಮಕ್ಮಲ್ ಬಟ್ಟೆಯ ಜುಬ್ಬಾ ಆಗಿದ್ದಂತೆಯೂ, ಪ್ಯಾಂಟು “ಹರ ಜೀನ್ಸು” ಪ್ಯಾಂಟಾಗಿ, ಜಮಖಾನ ರತ್ನಗಂಬಳಿಯಾಗಿ ಅಲ್ಲಿಯೇ ಬಿದ್ದಿರುವಂತೆಯೂ, ಅವನ ಮನೆ ಪಕ್ಕದ ಬಯಲಿನಲ್ಲಿ ಬಿಡಾರ ಹಾಕಿದ್ದ ದೊಂಬರಾಟದವರ ಮಕ್ಕಳು ಆ ರತ್ನಗಂಬಳಿಯ ಮೇಲೆ ಹತ್ತಿ ಕುಣಿದದ್ದಷ್ಟೇ ಅಲ್ಲದೆ ಹೇಸಿಗೆಯನ್ನೂ ಮಾಡಿದ್ದಂತೆ ಕನಸು ಕಂಡ.

ಯತಾರ್ಥವಾಗಿ, ಉಂಡು ಮಲಗಿದ್ದ ಟೀಕಪ್ಪ ಬೆಳಗ್ಗೆ ಆರು ಗಂಟೆಗೇ ಎದ್ದು, ನಿನ್ನೆಯ ದಿನ ಸ್ವರ್ಲು ಮೀನಿನ ಚಟ್ನಿ ಮಾಡುವ ಸಂಭ್ರಮದಲ್ಲಿ ಒಣಗಹಾಕಿದ್ದ ಬಟ್ಟೆಗಳನ್ನು ಮನೆಗೆ ತರಲು ಮರೆತಿದ್ದನ್ನು ಆಗ ತಾನೇ ಜ್ಞಾಪಿಸಿಕೊಂಡು ಮನೆಯ ಹಿಂದೆ ಓಡಿದ. ಅವನ ಬಟ್ಟೆಗಳೆಲ್ಲವೂ ಅಲ್ಲಿಯೇ ಇದ್ದವು ಜಮಖಾನ ಒಂದನ್ನುಳಿದು. ಅರೆ, ಹಾಗಾದರೆ ಜಮಖಾನ ಏನಾಯಿತು!? ದೂರದಿಂದ ಬಂದ ಕಳ್ಳರೋ, ದೊಂಬರಾಟದವರೋ ಒಯ್ದಿದ್ದರೆ ಅಲ್ಲಿದ್ದ ಎಲ್ಲ ಬಟ್ಟೆಗಳನ್ನೂ ಕದಿಯುತ್ತಿದ್ದರು. ಇದು ಇನ್ಯಾರದೋ ಕೆಲಸ ಅಂದುಕೊಂಡ ಟೀಕಪ್ಪ ಹಾಗೆ ಏಕಮನಸ್ಕನಾಗಿ ಚಿಂತಾಕ್ರಾಂತನಾಗಿ ಕುಳಿತಿದ್ದುದು.

ಜಮಖಾನ ಹೋಯಿತಲ್ಲ ಎಂಬ ದುಃಖಕ್ಕಿಂತ, ಅವ್ವ ಪುಟ್ಟಮ್ಮ ಬಂದು ರಗಳೆ ಮಾಡುವುದಲ್ಲದೇ, ಹತ್ತು ನೆಂಟರಿಷ್ಟರ ಮುಂದೆಯೂ ಜಮಖಾನದ ವಿಷಯ ಮಾತ್ರವಲ್ಲದೆ ಪಿಯುಸಿ ಫೇಲಾಗಿರುವ ವಿಷಯವನ್ನೂ ಸೇರಿಸಿ ಹೇಳಿ ತನಗೆ ಆಗುವ ಅವಮಾನವನ್ನು ನೆನಸಿಕೊಂಡೇ ಆತ ಹತಾಶನಾಗಿದ್ದ.

ಆ ಜಮಖಾನ ತಮ್ಮಯ್ಯ ಗೌಡ ತನ್ನ ಮದುವೆಯ ಸಂದರ್ಭದಲ್ಲಿ ಶಿವಮೊಗ್ಗದಿಂದ ಕೊಂಡು ತಂದಿದ್ದು, ಅದರ ಎರಡೂ ಅಂಚಿನಲ್ಲೂ ಕಾರೇಹಳ್ಳ ತಮ್ಮಯ್ಯ ಗೌಡ ಎಂದು ಬರೆಸಲ್ಪಟ್ಟಿತ್ತು. ತಮ್ಮಯ್ಯ ಗೌಡ ಮನೆಗಾಗಿ ಮಾಡಿದ್ದ ಅಥವಾ ಕೊಂಡಿದ್ದ ಕೆಲವೇ ವಸ್ತುಗಳಲ್ಲಿ ಆ ಜಮಖಾನವೂ ಒಂದಾಗಿತ್ತು.

ಟೀಕಪ್ಪ ಶಿವಮೊಗ್ಗಕ್ಕೆ ಹೊರಡುವಾಗಲೂ, ಪುಟ್ಟಮ್ಮ ಭಾರಿ ಭಾರಿ ಟೀಕಪ್ಪನಿಗೆ ವಸ್ತುಗಳ ಬಗ್ಗೆ ನಿಗಾ ಇಡಲು ಅದರಲ್ಲೂ ಜಮಖಾನದ ಬಗ್ಗೆ ಒತ್ತಿ ಒತ್ತಿ ಹೇಳಿದ್ದಳು.  ಅಂಥಾದ್ದರಲ್ಲಿ ಶಿವಮೊಗ್ಗದಿಂದ ವಾಪಸ್ಸು ಬಂದ ಜಮಖಾನ ಹಸಿರುಪೇಟೆಯಲ್ಲಿಯೇ, ತನ್ನ ಮನೆ ಹಿಂದೆಯೇ ಕಳೆದುಹೋಗುವುದಂದರೇನು?

ದುಃಖಿತ ಟೀಕಪ್ಪ ತನ್ನ ಮುಖದಲ್ಲಿ ದುಃಖವನ್ನು ಮರೆಸುವ ಪ್ರಯತ್ನದೊಂದಿಗೆ ಬಲ ಪಕ್ಕದ ಮನೆಯ ಹಳೆಪೈಕದ ನಾಗಪ್ಪ ನಾಯ್ಕರ ಹೆಂಡತಿ ಸರಸಮ್ಮನನ್ನೂ, ಎಡಪಕ್ಕದ ಮನೆಯ ಕಬ್ಬಿಣದಾಚಾರರ ಹೆಂಡತಿ ಸುಶೀಲಕ್ಕನನ್ನೂ ಅವರವರ ಅಂತಸ್ತಿಗೆ ಹಾಗೂ ಗೌಡರ ಮನೆಯ ಸಂಬಂಧಕ್ಕೆ ಸರಿಯಾಗಿ ಸಂಭೋದಿಸಿ “ಒಗೆದು ಹಾಕಿದ ಜಮಖಾನವೊಂದು ಕಾಣ್ತಾ ಇಲ್ಲ, ನೀವೇನಾದ್ರೂ ನೋಡಿದ್ರ” ಎಂದು ಕೇಳಿದ.  

ದೊಂಬರಾಟದವರ ಬಿಡಾರಕ್ಕೆ ಹೋಗಿ ಹೆದರುತ್ತಾ ಹೆದರುತ್ತಾ (ದೊಂಬರಾಟದವರು ಮಾಡುವ ಕೆಲವೊಂದಷ್ಟು ಜಾದೂಗಳನ್ನು ನೋಡಿದ್ದ ಟೀಕಪ್ಪನಿಗೆ ಅವರನ್ನು ನೇರವಾಗಿ ಕೇಳಲು ಸ್ವಲ್ಪ ಭಯವಿತ್ತು) ಜಮಖಾನದ ಬಗ್ಗೆ ವಿಚಾರಿಸಿದ. ಈ ಎಲ್ಲ ಮೂಲಗಳಿಂದಲೂ ನಕಾರಾತ್ಮಕವಾದ ಅಂದರೆ ತಮಗೇನೂ ಗೊತ್ತಿಲ್ಲವೆಂಬ ಉತ್ತರಗಳೇ ಬಂದಾಗ ಟೀಕಪ್ಪನ ಮನಸ್ಸು ಇನ್ನೂ ಭಾರವಾಗಿ ದುಃಖವು ಅತಿಯಾಯಿತು.

ಹೊಳೆಸಾಲಿಗೆ ‘ಹೊರಕಡೆ’ ಹೋಗಿ ಬಂದು ಮತ್ತೆ ಅರ್ಧ ಸಿದ್ದೆಯ ಗಂಜಿ ಬೇಯಿಸಿ, ಅದೇ ಸ್ವರ್ಲು ಮೀನಿನ ಚಟ್ನಿಯೊಂದಿಗೆ ಉಂಡು, ನಿನ್ನೆ ಒಗೆದ ಪ್ಯಾಂಟು ಶರ್ಟು ಹಾಕಿಕೊಂಡು ಮನೆಯ ಬಾಗಿಲನ್ನು ಮುಂದೆ ಮಾಡಿ ಹೊರಟ ಬಸ್ಸ್ಟ್ಯಾಂಡ್ ಕಡೆಗೆ.

ಬಸ್ಟ್ಯಾಂಡಿಗೆ ಬಂದ ಟೀಕಪ್ಪ ಏನು ಮಾಡಬೇಕು, ಜಮಖಾನಾವನ್ನು ಹೇಗೆ ಮರಳಿ ಪಡೆಯಬೇಕು ಎಂಬುದರ ಕುರಿತೇ ಯೋಚಿಸುತ್ತಿದ್ದ. ಹಾಗೆ ಯೋಚಿಸುತ್ತಿದ್ದವನು ಅತ್ತ ಶೃಂಗೇರಿಯಿಂದ ಬಂದ ಗಜಾನನ ಬಸ್ಸಿಗೆ ಏರಿ ಕುಳಿತುಕೊಂಡ. ಕಂಡಕ್ಟರ್ ‘ಟಿಕೆಟ್ ಟಿಕೆಟ್, ನಿನಗೆಲ್ಲಿಗೋ ಹುಡುಗಾ’ ಎಂದು ಕೇಳಿದಾಗ ಮನಸ್ಸಲ್ಲಿ ನಿರ್ದಿಷ್ಟ ಗಮ್ಯಸ್ಥಾನವಿಲ್ಲದಿದ್ದರೂ ಟೀಕಪ್ಪ ತೀರ್ಥಹಳ್ಳಿ ಎಂದು ಹೇಳಿ ೨ ರೂಪಾಯಿಯ ಟಿಕೆಟ್ ಪಡೆದುಕೊಂಡ.

ಅರ್ಧ ಮುಕ್ಕಾಲು ಗಂಟೆಯ ಬಳಿಕ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ಲಿನಲ್ಲಿಳಿದ ಟೀಕಪ್ಪನಿಗೆ ಏನು ಮಾಡುವುದೆಂದು ತೋಚದೇ ಕಲ್ಕೂರರ ಹೋಟೆಲ್ಲಿಗೆ ಹೋಗಿ, ಒಂದು ಮಸಾಲೆ ದೋಸೆಯನ್ನು ತಿಂದು ಕಾಫಿ ಕುಡಿದು ಸೀದಾ ರಾಮೇಶ್ವರ ದೇವಸ್ಥಾನದ ಕಡೆ ಹೊರಟ. ದೇವಸ್ಥಾನದ ಹಿಂಬದಿಯ ತುಂಗಾ ತೀರಕ್ಕೆ ಬಂದು, ಕಲ್ಲು ಬಂಡೆಗಳ ರಾಶಿಯಲ್ಲಿ ಮರದ ನೆರಳಿದ್ದ ಒಂದು ಬಂಡೆಯ ಮೇಲೆ ಹಾಗೇ ಒರಗಿದ. ಅದ್ಯಾವ ಮಾಯದ ನಿದ್ರೆಯೋ, ಸುಮಾರು ಎರಡು ಗಂಟೆಗಳ ಕಾಲ ನಿದ್ರೆ ಮಾಡಿದ ಟೀಕಪ್ಪ ಎದ್ದು ನೋಡಿದಾಗ ಸಮಯ ಸುಮಾರು ಮಧ್ಯಾಹ್ನದ ಒಂದು ಗಂಟೆಯಾಗಿರಬಹುದೆಂದು ಅಂದಾಜಿಸಿದ. ಎದ್ದವನೇ ಹೊಳೆಯ ನೀರನ್ನು ಮುಖಕ್ಕೆ ಹಾಕಿಕೊಂಡು, ಎರಡು ಬೊಗಸೆ ನೀರನ್ನು ಕುಡಿದು ಮತ್ತೆ ತೀರ್ಥಹಳ್ಳಿ ಪೇಟೆಯ ಕಡೆ ನಡೆಯತೊಡಗಿದ. ಹಾಗೆ ಹಿಂದಿರುಗುವಾಗ ರಸ್ತೆಯಲ್ಲಿದ್ದ ಮಾರಿಕಾಂಬಾ ದೇವಸ್ಥಾನದ ಒಳ ಹೋಗಿ, ಆಗ ಯಾವ ಅರ್ಚಕರೂ ಇಲ್ಲದಿರುವ ಸಮಯವಾದ್ದರಿಂದ ಹೊರ ಪ್ರಾಂಗಣದಲ್ಲಿಯೇ ಪ್ರದಕ್ಷಿಣೆ ಹಾಕಿ ಗರುಡಗಂಭದ ಕೆಳಗಿದ್ದ ಕುಂಕುಮವನ್ನು ಅನಾಮಿಕದಿಂದ ಹಣೆಗಿಟ್ಟು, ಸುಮಾರು ಹತ್ತಿಪ್ಪತ್ತು ಚಿಟಿಕೆ ಕುಂಕುಮವನ್ನು ಕಾಗದದ ಚಿಕ್ಕ ಪೊಟ್ಟಣವನ್ನು ಮಾಡಿ ಕಟ್ಟಿಟ್ಟುಕೊಂಡ.

ಆಗುಂಬೆ ಸ್ಟ್ಯಾಂಡಿಗೆ ಬರುವಾಗ ಕಾಮತರ ತರಕಾರಿ ಅಂಗಡಿಯಲ್ಲಿ ಹತ್ತು ಪೈಸಕ್ಕೊಂದರಂತೆ ಎರಡು ನಿಂಬೆ ಹಣ್ಣುಗಳನ್ನು ಖರೀದಿಸಿದ.

ಆ ವೇಳೆಗಾಗಲೇ ಅದೇ ಗಜಾನನ ಬಸ್ಸು ಶಿವಮೊಗ್ಗದಿಂದ ತಿರುಗಿ ಬಂದು ಶೃಂಗೇರಿಯ ಕಡೆ ಮುಖ ಮಾಡಿ ನಿಂತಿತ್ತು. ಅಡ್ಡ ಪಂಚೆಯ ಏಜಂಟರೊಬ್ಬರು ‘ಯಾರ್ರೀ ಕೈಮರ ಮೇಗರವಳ್ಳಿ ಆಗುಂಬೆ ಶೃಂಗೇರಿ’ ಎಂದು ಕೂಗುತ್ತಿದ್ದರು.  ಬಸ್ಸು ಹತ್ತಿದ ಟೀಕಪ್ಪ ಮರಳಿ ಮನೆಗೆ ಬಂದಾಗ ಸಮಯ ಮಧ್ಯಾಹ್ನದ ಮೂರು ಆಗಿತ್ತು.

ಮನೆಗೆ ಬಂದವನೇ ಬಚ್ಚಲು ಒಲೆಯ ಬೂದಿಯೊಂದಷ್ಟನ್ನು ತೆಗೆದಿಟ್ಟುಕೊಂಡು, ಮನೆಯ ಹಿಂದಿನ ಬಯಲಿಗೆ ಹೋಗಿ ಹಿಂದಿನ ದಿನ ಜಮಖಾನವನ್ನು ಒಣಗಿ ಹಾಕಿದ್ದ ಜಾಗದಲ್ಲಿ ಎರಡು ನಿಂಬೆಹಣ್ಣುಗಳನ್ನು ಕೊಯ್ದು, ಜೇಬಿನಲ್ಲಿದ್ದ ಕುಂಕುಮವೊಂದಷ್ಟನ್ನು ನಿಂಬೆಯ ಹೋಳುಗಳಿಗೆ ಸವರಿ, ಒಂದು ಹಿಡಿಯಷ್ಟು ದೊಡ್ಡ ಕಲ್ಲೊಂದನ್ನು ಅಲ್ಲಿಯೇ ಆರಿಸಿ ಅದನ್ನು ಪ್ರತಿಷ್ಠಾಪಿಸಿ ಅದಕ್ಕೊಂದಷ್ಟು ಬೂದಿಯನ್ನೂ ಕುಂಕುಮವನ್ನೂ ಸವರಿದ.

ಮತ್ತಷ್ಟು ಕುಂಕುಮವನ್ನು ನೀರಿನಲ್ಲಿ ಕದಡಿ ಸುತ್ತೂ ಒಂದೆರಡು ಮೀಟರಿನಷ್ಟು ಜಾಗದಲ್ಲಿ ಸಿಂಪಡಿಸಿದ. ಹಾಗೆ ಮಾಡಿ ನೋಡುವವರಿಗೆ ಕುತೂಹಲ  ಉಂಟಾಗುವಂತ ದೃಶ್ಯವೊಂದನ್ನು ಸೃಷ್ಟಿಸಿದ.

ಅಂತದೊಂದು ನೋಟ ಸೃಷ್ಟಿಸಿದ ಟೀಕಪ್ಪ, ಮನೆ ಮುಂದಲ ರಸ್ತೆಯಲ್ಲಿ ಕೋಲು ಜಿಗಿ, ಕಲ್ಲು ಮನೆ, ಲಗೋರಿ  ಇತ್ಯಾದಿ  ಆಟವಾಡುತ್ತಿದ್ದ ಮಕ್ಕಳೆಲ್ಲರಿಗೂ ಮುಖ್ಯವಾಗಿ ಸರಸಮ್ಮನ ಮಗನಿಗೂ, ಸುಶೀಲಕ್ಕನ ಮಗಳಿಗೂ ಅಲ್ಲದೆ ದೊಂಬರಾಟದವರ ಒಂದೆರಡು  ಹುಡುಗರಿಗೂ, ತನ್ನ ಜಮಖಾನ ನಿನ್ನೆ ಕಳುವಾಗಿರುವುದಾಗ್ಯೂ, ತತ್ಸಂಬಂಧ ತಾನು ಘಟ್ಟದ ಕೆಳಗಿನ ಕೆಂಜೂರಿಗೆ ಹೋಗಿ ಕುಡುಬೆಯವರ ಹತ್ತಿರ  ಮಂತ್ರವನ್ನೂ, ಮಾಟವನ್ನೂ, ಮುಷ್ಠವನ್ನೂ ಮಾಡಿಸಿ ತಂದು ಜಮಖಾನ ಕದ್ದು ಹೋಗಿರುವ ಜಾಗದಲ್ಲಿ ಮಂತ್ರಿಸಿದ ವಸ್ತುಗಳನ್ನು ಸ್ಥಾಪನೆ ಮಾಡಿರುವುದಾಗಿಯೂ, ಕೆಂಜೂರು ಕುಡುಬೆಯವರ ಹೇಳಿಕೆ  ಪ್ರಕಾರ ಆ ದಿನ ಬೈಗಾಗುವುದರೊಳಗೆ  ಕದ್ದವರ ಮನೆಯಲ್ಲಿ ಒಂದಲ್ಲ ಒಂದು ಕುರು (ಕುರುಹು) ತೋರಿಯೇ ತೋರುತ್ತದೆಂದೂ, ಕುರು ತೋರಿದ ಮೇಲೆಯೂ ಜಮಖಾನ ಕಾಣದಿದ್ದಲ್ಲಿ ಕದ್ದವರು ರಕ್ತ ಕಾರಿ ಸಾಯುತ್ತಾರೆಂದೂ ವಿವರಿಸಿದ.

ಆ ಮಕ್ಕಳೆಲ್ಲರೂ ಭಯ ಮಿಶ್ರಿತ ಕುತೂಹಲದಿಂದ ಹಿಂದಿನ ಬಯಲಿಗೆ ಹೋಗಿ ಆ ಮಂತ್ರದ ಕಲ್ಲನ್ನೂ, ನಿಂಬೆ ಹಣ್ಣನ್ನೂ ನೋಡಿ ಅದೇ ಭಯ ಮಿಶ್ರಿತ ಭಾವದಿಂದ ತಂತಮ್ಮ ಮನೆಗಳಿಗೆ ಹೋಗಿ ಮಾಟದ ಸುದ್ದಿಯನ್ನು ಭಿತ್ತರಿಸಿದರು.

ಆ ವೇಳೆಗಾಗಲೇ ಗೋಧೂಳಿ ಸಮಯ ಕಳೆಯಲಾರಂಭಿಸಿತ್ತು. ಸರಸಮ್ಮ ತಮ್ಮೆಲ್ಲ ದನಕರುಗಳೂ ಕೊಟ್ಟಿಗೆಗೆ ಬಂದಿದ್ದಾವೋ ಎಂದು ನೋಡಿ, ಕರಾವು ಇದ್ದ ಗಂಗೆ ದನವೊಂದು ಬಾರದಿದ್ದುದ್ದನ್ನು ಗಮನಿಸಿ, ಹಾಗೆಯೇ ‘ಗಂಗೇ ಬಾ, ಅಂಬಾ ಬಾ’ ಎಂದು ಕರೆಯುತ್ತಾ ಮನೆಯ ಹಿಂದಿನ ಬಯಲು ದಾಟಿ ಗೌರಿಕಲ್ಲು ಬ್ಯಾಣದ ಹಿಟ್ಟುಂಡೆ ಹುಲ್ಲಿನ ಹಳ್ಳಕ್ಕೆ ಬಂದಾಗ ಹಳ್ಳದ ಬದಿಯಲ್ಲಿ ಗಂಗೆ ಶಾಂತವಾಗಿ ಮಲಗಿದ್ದಳು.

ಅನುಭವಿ ಹೆಂಗಸು ಸರಸಮ್ಮ ಗಂಗೆ ಸತ್ತಿರುವುದಾಗಿಯೂ, ಅದರ ಮೈಮೇಲೆ ಯಾವ ಗಾಯವೂ ಕಾಣದ್ದರಿಂದ ಅದು ಹುಲಿ ಅಥವಾ ಸೀಳುನಾಯಿಯ ಬೇಟೆಯಲ್ಲವೆಂದೂ, ಗಂಗೆ ‘ಬಳ್ಳಿ ಮುಟ್ಟಿಯೇ’ (ಜಾನುವಾರುಗಳಿಗೆ ಹಾವು ಕಚ್ಚಿ ಸತ್ತರೆ ಮಲೆನಾಡಿನಲ್ಲಿ ಬಳ್ಳಿ ಮುಟ್ಟಿ ಸತ್ತಿತು ಎನ್ನುತ್ತಾರೆ) ಸತ್ತಿರಬೇಕೆಂದು ಖಾತ್ರಿ ಪಡಿಸಿಕೊಂಡರು. ಆ ಕ್ಷಣವೇ ತನ್ನ ಮಗ ಭಿತ್ತರಿಸಿದ ಟೀಕಪ್ಪನ ಮಾಟದ ಜ್ಞಾಪಕ ಬಂದು ಅವಳ ಮೈ ಒಮ್ಮೆ ಝುಮ್ ಎಂದಿತು.  ಹಾಗೆ ಅವಸರ ಅವಸರವಾಗಿ ಮನೆಗೆ ಮರಳಿದ ಸರಸಮ್ಮ, ಪಿಠಾರಿಯೊಳಗಿಟ್ಟಿದ್ದ ಜಮಖಾನವನ್ನು ತೆಗೆದುಕೊಂಡು, ಯಾರೂ ಕಾಣದಂತೆ ಜಾಗ್ರತೆ ವಹಿಸಿ ಎಲ್ಲಿಂದ ನಿನ್ನೆ ತಂದಿದ್ದರೋ ಅಲ್ಲಿಯೇ ಹಾಕಿ ಮತ್ತೆ ಮನೆ ಸೇರಿ ತಮ್ಮ ರಾತ್ರಿಯ ಕೆಲಸಗಳಲ್ಲಿ ತೊಡಗಿಕೊಂಡರು.  

ಆ ಹೊತ್ತಿಗಾಗಲೇ ಸೂರ್ಯನೂ ಮರೆಯಾಗಿ ನಿಶೆಯು ಆವರಿಸುತ್ತಿದುದರಿಂದ ಬೇರೆ ಯಾರಿಗೂ ಅವರು ಕಾಣುವ ಸಂಧರ್ಭ ವಿರಳವೇ ಆಗಿತ್ತು.  ಹಾಗೆ ಜಮಖಾನವನ್ನು ಮರಳಿಸಲು ಟೀಕಪ್ಪನ ಮಂತ್ರದ ಭಯವೊಂದೇ ಅಲ್ಲದೇ, ಅದರಲ್ಲಿ ಬರೆದಿದ್ದ ಹೆಸರು ಕೂಡ ಕಾರಣವಾಗಿತ್ತು. ಕಳ್ಳತನದಲ್ಲಿ ಕೊಂಡುಬರುವಾಗ ಸರಸಮ್ಮ ಅದನ್ನು ಗಮನಿಸಿರಲಿಲ್ಲ. ಆದರೆ ಅದನ್ನು ಪಿಠಾರಿಯಲ್ಲಿಡುವಾಗ ನೋಡಿ, ಅದನ್ನು ಉಪಯೋಗಿಸುವ ಸಾಧ್ಯಾಸಾಧ್ಯತೆಗಳ ಕುರಿತು ನಿನ್ನೆಯಿಂದಲೇ ಯೋಚಿಸತೊಡಗಿದ್ದರು.

ಮತ್ತದೇ ಗಂಜಿ ಉಂಡ ಟೀಕಪ್ಪ ನಿದ್ರಾ ದೇವಿಗೆ ಶರಣಾದ. ತನಗೆ ಗಡ್ಡ ಮೀಸೆಗಳು ಮೊಳದುದ್ದ ಬೆಳೆದು ತಾನೊಬ್ಬ ಮಂತ್ರವಾದಿಯಾಗಿ ಜನರೆಲ್ಲರ ಕಷ್ಟಗಳಿಗೆ ಮಂತ್ರದಿಂದಲೇ ಪರಿಹಾರ ಕಲ್ಪಿಸಿಕೊಡುವ ಮಹಾನ್ ಮಾಟಗಾರನಾಗಿ, ತಾನು ಓದುತ್ತಿದ್ದ ಏನ್. ನರಸಿಂಹಯ್ಯನವರ ಕಾದಂಬರಿಗಳ ನಾಯಕ ಪತ್ತೇದಾರ ಪುರುಷೋತ್ತಮನಾಗಿ, ದೊಡ್ಡ ದೊಡ್ಡ ಕಳ್ಳತನ, ಕೊಲೆ ಕೇಸುಗಳನ್ನು ಪತ್ತೆ ಮಾಡಿದಂತೆಯೂ, ಅವ್ವ ಪುಟ್ಟಮ್ಮ ಸೌದೆ ಹೊರೆ ಹೊತ್ತು ಬರುತ್ತಿರುವಾಗ ಹುಲಿಯೊಂದು ಅಡ್ಡ ಬಂದಂತೆಯೂ, ತಾನು ಆ ಹುಲಿಯನ್ನು ತನ್ನಜ್ಜನ ಕೇಪಿನ ಕೋವಿಯಿಂದ ಹೊಡೆದಂತೆಯೂ, ಹುಲಿ ಸಾಯದೇ, ಮೊದಲು ಕುರ್ಕವಾಗಿ, ಕಬ್ಬೆಕ್ಕಾಗಿ, ಸೀಳು ನಾಯಿಯಾಗಿ ಅವನ ಮೇಲೆ ಹಾರಿ, ಕಾಲಿನ ಮೀನು ಖಂಡಕ್ಕೆ ಬಾಯಿ ಹಾಕಿ ಕಚ್ಚಿದಂತೆ, ಆ ಹೊತ್ತಿಗೆ ತನ್ನ ಸಹಪಾಠಿ ಶೈಲ ಬಂದು ತನ್ನನ್ನು ಅಪ್ಪಿ ಮುತ್ತು ಕೊಟ್ಟಂತೆಯೂ ಅಸಂಬದ್ಧವಾದ ಅನೇಕ ಕನಸುಗಳನ್ನು ಕಂಡ.

ಅರೆಬರೆಯ ನಿದ್ರೆ, ಕೆಟ್ಟ ಮತ್ತು ಒಳ್ಳೆಯ ಕನಸುಗಳು, ತೀರ್ಥಹಳ್ಳಿಯ ಶಾಂತ ತುಂಗೆ, ಮಾರಿಕಾಂಬೆಯ ಉಗ್ರ ಮೂರ್ತಿ ಹೀಗೆ ತಲೆಯಲ್ಲಿ ಕಲಸು ಮೇಲೋಗರದ ಮಿಶ್ರಣದೊಂದಿಗೆ ಬೆಳಿಗ್ಗೆ ಎದ್ದ ಟೀಕಪ್ಪನಿಗೆ ತಲೆ ನೋಯುತ್ತಿತ್ತು. ಎದ್ದವನೇ ಬಯಲಿಗೆ ಹೋಗಿ ನೋಡುತ್ತಾನೆ, ಅವನ ಜಮಖಾನ ಅನಾಥವಾಗಿ ಮುದ್ದೆಯಾಗಿ ಬಿದ್ದಿದೆ.  ಹರ್ಷಚಿತ್ತನಾಗಿ ಅದನ್ನೆತ್ತಿಕೊಂಡು ಮನೆಗೆ ಹೋಗಿ ಹಾಸಿಗೆ ತಡಿಗಳ ಮೇಲೆ ಮಡಸಿಟ್ಟ.

‍ಲೇಖಕರು Avadhi

September 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಯಂ. ಕೃಷ್ಣರಾಜ. ಭಟ್, ಹೆಬ್ರಿ

    ಉತ್ತರಭಾಗಕ್ಕಾಗಿ(Sequell) ಕಾಯುವಂತೆ ಕುತೂಹಲ ಮೂಡಿಸಿದ ಕಥೆ, ಅಭಿನಂದನೆಗಳು

    ಪ್ರತಿಕ್ರಿಯೆ
  2. Padmanabha Gowda

    ಯಂ. ಕೃಷ್ಣರಾಜ. ಭಟ್, ಹೆಬ್ರಿ ಯವರೆ
    ಧನ್ಯವಾದ.
    ಖಂಡಿತವಾಗಿಯೂ ಇದರ ಉತ್ತರಭಾಗ ಇದೆ. ಇದನ್ನು ಒಂದು ಕಿರು ಕಾದಂಬರಿಯಾಗಿ ಬೆಳೆಸುತ್ತಿದ್ದೇನೆ. ಸುಮಾರು 80% ಬರೆದು ಮುಗಿಸಿದ್ದೇನೆ.

    ಪ್ರತಿಕ್ರಿಯೆ
  3. Raghu

    Amazing narration curiosity retained to the last punctuation. Most importantly with very good kanada had a pleasant time reading

    ಪ್ರತಿಕ್ರಿಯೆ
    • ಪದ್ಮನಾಭ ಆಗುಂಬೆ

      ಧನ್ಯವಾದ
      ರಘು ಅವರೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: