ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಡಿಯಾಗಿ ಆವರಿಸಿದ ‘ಅಳವು ಅರಿಯದ ಭಾಷೆ’

ನಿತ್ಯಾನಂದ ಬಿ ಶೆಟ್ಟಿ ‘ಅಳವು ಅರಿಯದ ಭಾಷೆ’

ಈ ಕೃತಿಯನ್ನು ‘ಕನ್ನಡ ಸಂಘ ಕಾಂತಾವರ’ ಪ್ರಕಟಿಸಿದೆ.

ಈ ಕೃತಿಯ ಕುರಿತು ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ.

ಸುಧಾ ಆಡುಕಳ

ಕಳೆದೊಂದು ವಾರದಿಂದ ನನ್ನನ್ನು ಇಡಿಯಾಗಿ ಆವರಿಸಿದ ಈ ಪುಸ್ತಕ ಓದಿನ ಅನುಭವವನ್ನು ಹಂಚಿಕೊಳ್ಳುವ ಮುನ್ನ ಪುಟ್ಟದೊಂದು ಮುನ್ನುಡಿ ಬೇಕೆನಿಸುತ್ತಿದೆ.

ಉತ್ತರ ಕನ್ನಡದ ಕಾಡಿನ ನಡುವೆ ಹುದುಗಿರುವ ಹಳ್ಳಿಯೊಂದರಲ್ಲಿ ತನ್ನ ಸುತ್ತಲಿನ ಅನಕ್ಷರಸ್ಥರಿಗೆ ಪ್ರತಿವರ್ಷವೂ ಬಯಲಾಟವನ್ನು ಕಲಿಸುತ್ತ, ಅದರಿಂದಾಗಿ ಊರಿನಲ್ಲಿ ಹುಟ್ಟುವ ಗುಂಪುಗಾರಿಕೆಯನ್ನು ಸಮರ್ಥವಾಗಿ ಎದುರಿಸುವ ಅಪ್ಪನಿಂದಾಗಿ ಯಕ್ಷಲೋಕ ನನ್ನ ಬಾಲ್ಯವನ್ನು ಇಡಿಯಾಗಿ ಆವರಿಸಿತ್ತು. ಕೃಷಿ ಕೆಲಸದ ಬಿಡುವಿನಲ್ಲಿ ಮನೆಯಲ್ಲೇನಾದರೂ ಸಂಭಾಷಣೆಗಳು ನಡೆದರೆ ಅದು ಆಟದ ಬಗೆಗೇ ಇರುತ್ತಿತ್ತು. ಅಪರೂಪಕ್ಕೆಲ್ಲಿಯಾದರೂ ಅಪ್ಪನ ಆಟದ ಸಂಗಾತಿಗಳು ಬೇರೆ ಊರಿನಿಂದ ಬಂದರೆ ರಾತ್ರಿ ಊಟದ ನಂತರ ಪ್ರಾರಂಭವಾಗುವ ಆಟದ ಸುದ್ಧಿ ಬೆಳಗಿನ ಜಾವದ ತನಕವೂ ಮುಂದುವರೆಯುತ್ತಿತ್ತು ಅಥವಾ ಅಪ್ಪನ ಬೀಡಿಕೊಟ್ಟೆಯ ಸ್ಟಾಕ್ ಮುಗಿಯುವವರೆಗೂ…. ಹೀಗಾಗಿ ಆಟದ ಸುದ್ಧಿ ಹೇಳುವುದು ಮತ್ತು ಕೇಳುವುದು ಆತ್ಮಸುಖವೆಂಬಷ್ಟು ಅಪ್ಯಾಯಮಾನವಾಗಿತ್ತು. ಹೀಗೆ ಸುದ್ದಿಯನ್ನು ಕೇಳಲು, ಹೇಳಲು ಸಹ ಆಟದ ಅಭಿನಯದಂತೆಯೆ ತಾಲೀಮು ಬೇಕು ಎನ್ನುವುದಕ್ಕೆ ಇಷ್ಟನ್ನು ಬರೆಯಬೇಕಾಯಿತು.

ಅಪ್ಪನ ಬಾಲವಾಗಿ ಬಾಲ್ಯದಲ್ಲಿ ನೋಡಿದ ಆಟಗಳಿಗೆ ಲೆಕ್ಕವಿರಲಿಲ್ಲ. ಹರೆಯಕ್ಕೆ ಬಂದಾಗ ಆಟ ನೋಡುಗರ ಒಡನಾಟ ಅಸುರಕ್ಷಿತ ಭಾವ ಹುಟ್ಟಿಸಿ ಆಟಕ್ಕೆ ಹೋಗುವುದು ನಿಂತರೂ ಮನೆಯಲ್ಲಿರುವ ಟೇಪರಿಕಾರ್ಡರ್ ನಲ್ಲಿ ಆಟ ಕೇಳುವ ಚಟಕ್ಕೆ ಕೊನೆಯೆಂಬುದಿರಲಿಲ್ಲ. ತೊಂಭತ್ತರ ದಶಕದಲ್ಲಿ ಹೊಸ ಪ್ರಸಂಗಗಳು ಶೂದ್ರ ತಪಸ್ವಿನಿ, ನಾಗಶ್ರೀ, ದರ್ಪಣ ಸುಂದರಿ…ಬಂದಾಗ ಮತ್ತೆ ಆಟ ನೋಡಿದ್ದೆ. ಮುಂದೆ ಫ್ರತಿವರ್ಷವೂ ಮೇಳಗಳು ವರ್ಷದ ತಿರುಗಾಟಕ್ಕೆ ಹೊಸಪ್ರಸಂಗಗಳನ್ನು ಘೋಷಿಸುತ್ತಾ, ಅವುಗಳಲ್ಲಿ ಕೆಲವು ಕತೆಗಳಿಗೆ ತಾಳ, ತಂತಿ ಇಲ್ಲದೇ, ಅಪ್ಪನಮಾತಿನಲ್ಲಿ ಹೇಳುವುದಾದರೆ, ” ಬೆಳಗಿಂಜಾವದಲ್ಲಿ ಕತೆ ಮುಗಿಸಲಾರದೇ ಭಾಗವತರು ಒದ್ದಾಡಿಬಿಟ್ರು. ರಂಗದ ತುಂಬ ಜನ ಬಂದ್ರೂ ಕತೆ ಮುಗಿಯುವಂತಿಲ್ಲ. ಹೊಸ ಪ್ರಸಂಗ ಒಂದು ಬ್ಯಾಡ ಮಾರಾಯ್ತಿ” ಎಂಬ ಷರಾದೊಂದಿಗೆ ಆಟದ ಚಟ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಹವ್ಯಕ ಕೂಟದಲ್ಲಿ ಆಗ ಎಲ್ಲಿಯಾದರೂ ನಾಲ್ಕು ಜನ ಸೇರಿದರೆ ಆಟದ ಸುದ್ದಿಯಲ್ಲದೇ ಬೇರೆ ಹರಟೆ ಇದ್ದರೆ ಕೇಳಿ!

ಈ ನಡುವೆ ಮದುವೆ, ನೌಕರಿ, ಮಕ್ಕಳು, ವರ್ಗಾವಣೆ ಎಂದೆಲ್ಲ ಸೇರಿ ಆಟ ನೋಡುವುದೇ ಬಿಟ್ಟುಹೋಗಿತ್ತು.‌ಅಲ್ಲೆಲ್ಲೋ ಮೂರು ತಾಸಿನ ಆಟ ನೋಡಿದರೆ ಅರೆಕಾಸಿನ ಮಜ್ಜಿಗೆಯೆಂದೆನಿಸುತ್ತಿತ್ತು. ರಾತ್ರಿಯಿಡೀ ಕುಳಿತು ಯಕ್ಷಗಾನ ನೋಡುವ ಕನಸು ಎರಡು ದಶಕಗಳ ಕಾಲ ಜಡವಾಗಿ ಮಲಗಿತ್ತು. ಅಂಥದೊಂದು ದಿನ ಆಟದ ಮಳ್ಳರಾಗಿದ್ದ ಗೆಳೆಯರೊಬ್ಬರ ಹುಮ್ಮಸ್ಸಿನಿಂದ ಪ್ರಸಿದ್ಧ ಡೇರೆ ಮೇಳವೊಂದರ ನೂತನ ಪ್ರಸಂಗಕ್ಕೆ ಸಂಭ್ರಮದಿಂದ ಹೊರಟಾಗಿತ್ತು. ಹೊಸಕತೆಯನ್ನು ಈಗಿನ ಕಲಾವಿದರ ಅಭಿನಯದಲ್ಲಿ ನೋಡುವ ಕುತೂಹಲ ಬೆಟ್ಟದಷ್ಟಿತ್ತು. ದೇಶಭಕ್ತಿಯ ಕಥಾನಕ ಹೊಂದಿದ ಆ ಪ್ರಸಂಗದಲ್ಲಿ ಶುರುವಇನಿಂದ ಕೊನೆಯವರೆಗೆ ಇನ್ನೊಂದು ಕೋಮಿನವರನ್ನು ಅಕಾರಣವಾಗಿ ಹೀಗಳೆಯುವ, ಶಿಕ್ಷಿಸುವ ಆ ಮೂಲಕವಾಗಿ ಧರ್ಮರಕ್ಷಣೆ ಮಾಡುವ ಅತಾರ್ಕಿಕ ಕತೆಯೊಂದರ ಪ್ರಸ್ತುತಿಯಿತ್ತು. ಒನ್ ಸೈಡೆಡ್ ಆಗಿದ್ದ ಆ ಕಥಾನಕದಲ್ಲಿ ಖಳನಾಯಕನೆಂದು ಕರೆಯುವ ವೇಷದ ಕನಿಷ್ಠ ಪೋಷಣೆಯನ್ನೂ ಪಾತ್ರಧಾರಿ ಮಾಡುತ್ತಿರಲಿಲ್ಲ. ನಾನು ನಿಮ್ಮ. ಹೆಣ್ಣುಗಳನ್ಮು ಅಪಹರಿಸಲೆಂದೇ ಬಂದಿರುವೆ, ನನ್ನ ಧರ್ಮಕ್ಕೆ ಸೇರದಿದ್ದರೆ ಕ್ರೂರವಾಗಿ ಕೊಲ್ಲುವೆ ಹೀಗೆ ಅವರ ಮಾತುಗಳಿರುತ್ತಿದ್ದವು. ಅವರ ಮಾತುಗಳಿಗದ ಪ್ರತಿಯಾಗಿ ನಾಯಕ ಪಾತ್ರಧಾರಿ ಚುನಾವಣಾ ಪ್ರಚಾರದಂತಿರುವ ಮಾರುದ್ದದ ಭಾಷಣವನ್ನು ಮಾಡುತ್ತಿದ್ದ. ಅಪರೂಪಕ್ಕೆ ಆಟ ನೋಡಲು ಹೊರಟ ನನಗೆ ನಿಜಕ್ಕೂ ಧಿಗ್ಭ್ರಮೆಯಾಗಿತ್ತು. ಅರೆ! ಈ ರೀತಿಯ ಸಂಭಾಷಣೆಯನ್ನು ಸುತ್ತೆಲ್ಲ ಕೇಳುವಂತೆ ಧ್ವನಿವರ್ಧಕದಲ್ಲಿ ಹೇಳುತ್ತಿದ್ದರಲ್ಲಾ, ಕೇಳಿಸಿಕೊಂಡವರಿಗೆ ಏನೆನಿಸಬಹುದು? ಎಂಬ ಭಾವ ಮೂಡಿ ಶಬ್ದದ ಲಜ್ಜೆ ಕಳೆದಂತೆ ತಲ್ಲಣಗೊಂಡಿದ್ದರೆ, ಇನ್ನುಳಿದವರು ಸಿಳ್ಳೆ, ಚಪ್ಪಾಳೆಯೊಂದಿಗೆ ಸಂಭಾಷಣೆಯನ್ನು ಆನಂದಿಸುತ್ತಿದ್ದರು.

ಆಟ ಮುಗಿದು ಮರುದಿನ ಸ್ನೇಹಿತರೊಂದಿಗೆ ಉದ್ವೇಗದಿಂದ ಈ ವಿಷಯ ಹಂಚಿಕೊಂಡರೆ ಅವರು ಇದೆಲ್ಲಾ ಸಾಮಾನ್ಯವಾಗಿ ಅದೆಷ್ಟೋ ಕಾಲವಾಯ್ತಲ್ಲ ಎಂದು ಹೇಳಿ ನನ್ನನ್ನು ಇನ್ನಷ್ಟು ಚಕಿತಗೊಳಿಸಿದರು! ಅಲ್ಲಿಂದ ಮುಂದೆ ನೂತನ ಪ್ರಸಂಗದ ಸಂಗದಿಂದ ದೂರವಿದ್ದರೂ ಪುರಾಣ ಕತೆಗಳಲ್ಲೂ ಕೆಲವೊಮ್ಮೆ ಅಪಸವ್ಯಗಳು ಕಂಡುದುಂಟು. ಅಳವು ಅರಿಯದ ಭಾಷೆ ಪುಸ್ತಕ ನಾನು ಆಟ ನೋಡದ ಆ ನಡುವಿನಲ್ಲಿ ಕಲೆಯೊಂದರ ಒಳಗೆ ನಡೆದ ಪಲ್ಲಟವನ್ನು ಮತ್ತು ಅದಕ್ಕೆ ಕಾರಣವಾದ ಸಾಮಾಜಿಕ ಬದಲಾವಣೆಯನ್ನು ಕಣ್ಣೆದುರು ಚಿತ್ರಿಸುತ್ತ ಸಾಗಿತು. ಕಲೆಯೊಂದು ಸಮಾಜವನ್ನು ಪ್ರಭಾವಿಸುವುದೋ ಅಥವಾ ಸಾಮಾಜಿಕ ಬದಲಾವಣೆಗಳು ಕಲೆಯಲ್ಲಿ ಪಲ್ಲಟವನ್ನು ಉಂಟುಮಾಡುತ್ತವೆಯೋ ಎಂಬ ಇಬ್ಬಗೆಯ ನೋಟವನ್ನು ಪುಸ್ತಕದುದ್ದಕ್ಕೂ ನೋಡಬಹುದು. ಬೀಜ, ವೃಕ್ಷ ನ್ಯಾಯದಂತೆ ಇವೆರಡೂ ಒಂದರೊಳಗೊಂದು ಹಾಸುಹೊಕ್ಕಾದ ಬಗೆಯನ್ನಿಲ್ಲಿ ಹಲವು ನಿದರ್ಶನಗಳ ನಿರೂಪಿಸಲಾಗಿದೆ.

ಪುಸ್ತಕದಲ್ಲಿ ಬಹಳ ಇಷ್ಟವಾದ ವಿಷಯವೆಂದರೆ ಲೇಖಕರು ಅನುಸರಿಸಿರುವ ಥೇಟ್ ತಾಳಮದ್ದಲೆಯ ರೀತಿಯ ಪ್ರಕಲ್ಪಗಳ ಕಟ್ಟುವಿಕೆ. ಚತುರ ಅರ್ಥಧಾರಿಯೊಬ್ಬ ದೂರದಲ್ಲೆಲ್ಲೋ ಕೈತೋರಿಸಿ ಚುಕ್ಕೆಗಳನ್ನಿಡುತ್ತಾ, ವಾಕ್ಝರಿಯ ಬೆಡಗಿನಿಂದ ಅವುಗಳನ್ನೊಂದುಗೂಡಿಸಿ ಚಿತ್ರವಾಗಿಸುತ್ತಾ, ಹೊರಾವರಣದ ಬೆರಗಿಗೆ ನಾವು ಸೋಲುತ್ತಿರುವಂತೆ ಚಿತ್ರದ ನಡುವಿನಲ್ಲಿ ಅವನಿಗೆ ಬೇಕಾದ ಚಿತ್ರಿಕೆಯನ್ಮು ಬರೆದು ಹೊರಗಿನ ಬೆಡಗೆಲ್ಲವನ್ನೂ ಅದರ ಭಾಗವಾಗಿಸಿ ಚಿತ್ರವನ್ನು ಇಡಿಯಾಗಿಸುತ್ತಾನೆ. ಮಾತಿನ ಮಂಟಪದಲ್ಲಿ ಜೀವತಳೆದ ಚಿತ್ರಿಕೆ ನಮ್ಮ ಚಿತ್ತಭಿತ್ತಿಯಲ್ಲಿ ಅಚ್ಛಳಿಯದೇ ಉಳಿದುಬಿಡುತ್ತದೆ. ಅಂಥದ್ದೇ ಚಿತ್ರಗಾರಿಕೆಯನ್ನು ಬರೆವಣಿಗೆಯುದ್ದಕ್ಕೂ ನಾವು ಕಾಣಬಹುದು.

ತನ್ನ ಕಾಲದ ಸತ್ಯವನ್ನು ಇದಿರ್ಗೊಳ್ಳಬೇಕೆಂಬ ದೃಢಸಂಕಲ್ಪದಿಂದ ತೊಡಗುವ ಲೇಖಕರು ಆಟಕ್ಕೆ ಹೊರಗಿನವರಲ್ಲ ಮತ್ತು ಕರಾವಳಿಯ ಈ ಕಲೆಯ ಬಗ್ಗೆ ಅಪರಿಮಿತ ಪ್ರೀತಿಯನ್ನು ಇಟ್ಟುಕೊಂಡವರು ಎಂಬುದು ಪುಸ್ತಕದ ಓದಿನುದ್ದಕ್ಕೂ ಖಚಿತವಾಗುತ್ತದೆ. ಆಶುನುಡಿಯನ್ನು ತನ್ನ ಮುಖ್ಯ ಭಾಗವಾಗಿಸಿಕೊಂಡ ವಿಶಿಷ್ಟ ಕಲೆಯು ಮಾತಿನ ಕೇಡಿಗೆ ಈಡಾದ ಪ್ರತಿ ಸಂದರ್ಭವನ್ನು ಉಲ್ಲೇಖಿಸುವಾಗಲೂ ಅವರು ಕೇಡುನುಡಿದವರನ್ನು ದೂಷಿಸದೇ, ಕೇಡು ನುಡಿಯಾಗಿ ಬಂದ ಬಗೆಯನ್ನು ವಿಶ್ಲೇಷಿಸಿರುವುದೇ ಅದಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಂದು ವಾಕ್ಯಕ್ಕೂ ಸತ್ಯದ ಪ್ರಮಾಣೀಕರಣವನ್ನು ನೀಡಿರುವುದರಿಂದ ನಿದರ್ಶನಗಳ ಆಯ್ಕೆಯ ಬಗ್ಗೆ ತಕರಾರೆತ್ತಬಹುದೇ ವಿನಃ ಆಯ್ಕೆಯಾದ ನಿದರ್ಶನಗಳ ಬಗ್ಗೆ ನುಡಿಯಲಾಗದು.

ಯಕ್ಷಗಾನದ ಮೂಲ, ಅದು ಬೆಳೆದು ಬಂದ ಬಗೆ, ವೇಷಧಾರಿಗಳು ಮತ್ತು ಮೇಳಗಳ ವಿವರ, ಬೆಳವಣಿಗೆಯ ಹಂತದಲ್ಲಿ ನಡೆದ ಪಲ್ಲಟಗಳು, ಇವುಗಳಿಗೆ ಪೂರಕವಾಗಿ ನೀಡಿದ ಚಿತ್ರಗಳು ಪುಸ್ತಕವನ್ನು ಯಕ್ಷಗಾನದ ಆಕರ ಗ್ರಂಥವನ್ನಾಗಿಸಿವೆ. ಕಲೇತಿಹಾಸದ ಸಂಪುಟದಲ್ಲಿ ಬರುವ ಅನೇಕ ಘಟನೆಗಳು ಪರಸ್ಪರ ತದ್ವಿರುದ್ಧವಾದ ಭಾವಗಳನ್ನು ಹೊಮ್ಮಿಸುತ್ತ ಕಲೆಯ ಇತಿಹಾಸದ ಸಂಕೀರ್ಣತೆಗಳನ್ನು ನಮ್ಮೆದುರು ಇಡುತ್ತವೆ. ಮುಂದಿನ ಅಧ್ಯಾಯವು ಮಾತನ್ನು ತನ್ನೊಡಲಿನಲ್ಲಿ ಹೊತ್ತ ಕಲೆಯೊಂದು ಅದನ್ನೇ ಬಂಡವಾಳವಾಗಿಸಿ ಹೊರಳಿದ ದಿಕ್ಕುಗಳನ್ನು ಅನ್ವೇಷಿಸುತ್ತದೆ. ಕಲಾ ಮೀಮಾಂಸೆಯ ಮುಂದಿನ ಅಧ್ಯಾಯ ಅದರ ವಿವಿಧ ಆಯಾಮಗಳ ಬಗ್ಗೆ ಚರ್ಚಿಸುತ್ತದೆ. ಕಲಾಮೀಮಾಂಸೆಯನ್ನು ಕೇಂದ್ರವಾಗಿಟ್ಟು ಒಂದು ಶತಮಾನದಲ್ಲಿ ಕರಾವಳಿಯಲ್ಲಿ ನಡೆದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬದಲಾವಣೆಯ ಸ್ವರೂಪವನ್ನು ಲೇಖಕರು ನಮ್ಮೆದುರು ತೆರೆದಿಟ್ಟಿದ್ದಾರೆ.

ಈ ಪುಸ್ತಕಕ್ಕೆ ಓದಿಸಿಕೊಳ್ಳುವ ಗುಣವಿಲ್ಲ ಎಂಬ ಮಾತು ಸಂವಾದವೊಂದರಲ್ಲಿ ಕೇಳಿಬಂತು. ಆಟ- ಕೂಟದ ಭಾಷೆಯ ವ್ಯಾಕರಣದಿಂದ ಹೊರಗಿರುವ ಓದುಗರ ಮಟ್ಟಿಗೆ ಇದು ಸತ್ಯವಾಗಬಹುದು. ಯಕ್ಷಗಾನದ ಆಯಾಮಗಳ ಪರಿಚಯವಿರುವವರಿಗೆ ಪುಸ್ತಕದ ಮೊದಲಾರ್ಧವು ತಾಳಮದ್ದಲೆಯ ಆಸ್ವಾದನೆಯಷ್ಟು ಸರಾಗವಾಗಿ ಓದಿಸಿಕೊಳ್ಳುತ್ತದೆ. ಸಿದ್ಧಾಂತಗಳೊಂದಿಗಿನ ಮುಖಾಮುಖಿಯ ಕೊನೆಯರ್ಧವು ತಾಳ್ಮೆಯನ್ನು ಬೇಡುತ್ತದೆ. ಲೇಖಕರೇ ಹೇಳುವಂತೆ ಇದೊಂದು ಯಕ್ಷಗಾನದ ಸಾಮಾಜಿಕ ಇತಿಹಾಸ, ಕಲಾಮೀಮಾಂಸೆಯ ಜತೆಗೆ ಹಾಸ್ಯಮೀಮಾಂಸೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಟ್ಟಿದ ಹೊಸದೊಂದು ಕಲಾಪ್ರಯೋಗ. ಇವೆಲ್ಲವನ್ನು ನಿರ್ವಚಿಸಲು ಇಲ್ಲಿ ಕುಂಬ್ಳೆ ಸುಂದರ ರಾವ್, ಗೋಪಾಲಕೃಷ್ಣ ಶೇಣಿ, ಅಮೃತ ಸೋಮೇಶ್ವರ, ಕೊರಗಪ್ಪ ಶೆಟ್ಟಿ ಹೀಗೆ ಕೆಲವರನ್ನು ಪ್ರಾತಿನಿಧಿಕವಾಗಿ ತೆಗೆದುದುಕೊಂಡಿದ್ದಾರೆ. ನಾಟಕದ ಸಂರಚನೆಯಂತೆ ಈ ಪುಸ್ತಕವು ಅಲ್ಲಮನ ವಚನವೆಂಬ ನಾಂದೀಪದ್ಯದಿಂದ ಆರಂಭವಾಗಿ ಅಡಿಗರ ಕನ್ನಡವೆಂದರೆ ಎಂಬ ಭರತವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ.

ಪುಸ್ತಕದ ಕೊನೆಯಲ್ಲಿ ವಿವಿಧ ಕ್ಷೇತ್ರಗಳ ಎಂಟು ಜನ ಪರಿಣಿತರ ಓದು ಕೂಡ ದಾಖಲಾಗಿದೆ. ಎಂಟು ಬಗೆಯ ಒಳನೋಟಗಳನ್ನು ಇವು ನೀಡುತ್ತವೆ. ಆಟವು ಅನ್ಯವೆಂದು ಭಾವಿಸಿದ ಎಂ. ಎನ್. ಇಸ್ಮಾಯಿಲ್ ಅವರ ಹಾಗೂ ಆಟದೊಳಗಿನ ದಿಗ್ಗಜರೆನಿಸಿದ ಪ್ರಭಾಕರ ಜೋಶಿಯವರ ಅನುಸಂಧಾನಗಳು ಇಲ್ಲಿವೆ. ತಮ್ಮ ಮೇಲಿನ ನಿರಂತರ ಅನುಚಿತ ಟೀಕೆಗಳ ಬಗ್ಗೆ ಧ್ವನಿಯೆತ್ತದಿರುವ ಅನ್ಯರ ಧೋರಣೆಗೆ ಸಮಾಜ ಬಿತ್ತಿದ ಭಯವು ಕಾರಣವೇನೋ ಎಂಬ ಲೇಖಕರ ಮಾತಿಗೆ ಇಸ್ಮಾಯಿಲ್ ಅವರ ಈ ಕಲೆ ಅವರಿಗೂ ಅನ್ಯವೇ ಎಂಬ ಮಾತು ಈ ಎರಡಲ್ಲದ ಇನ್ನೊಂದು ಆಯಾಮವನ್ನು ತೆರೆಯುತ್ತದೆ. ಪುಸ್ತಕದ ಅರ್ಪಣೆ, ನಾಂದಿ ಮತ್ತು ಭರತವಾಕ್ಯಗಳ ಆಯ್ಕೆಯ ಬಗ್ಗೆಯೂ ನೀಡುವ ಅಫ್ಡಿವೇಟ್ ಗಳು ಏನನ್ನು ಸೂಚಿಸುತ್ತವೆ ಎಂಬುದನ್ನೂ ನಾವು ಗಮನಿಸಬೇಕಿದೆ.

ಹಾಸ್ಯ- ಅಪಹಾಸ್ಯ, ಕೇಡು-ಕೀಟಲೆ, ರಾಜಕೀಯ-ಇತಿಹಾಸ ಇವುಗಳ ನಡುವಿನ ಪರಕ್ಕನ್ನು ತಿಳಿಸುವ ಭಾಷೆಯ ಹುಡುಕಾಟದ ಪ್ರಯಾಸದ ಪ್ರಯಾಣದಂತೆಯೂ ಪುಸ್ತಕವಿದೆ. ಹೊಸಕಾಲವು ತಂದಿಟ್ಟ ಹೊಸಬಗೆಯ ಸಂದಿಗ್ಧಗಳನ್ನು ಕಥಿಸಲು ಭಾಷೆಯೂ ಹೊಸದಾಗುವ ಅವಶ್ಯಕತೆಯಿದೆಯೇನೊ? ಹೀಗೆಲ್ಲಾ ಯೋಚಿಸುತ್ತಲೇ ಈ ಪುಸ್ತಕ ಓದಿನ ನಡುವೆ ಕೇಳಿದ ತಾಳಮದ್ದಲೆಯೊಂದರಲ್ಲಿ ಅದೇ ಅನ್ಯಕೋಮಿನ ಮೇಧಾವಿಯೊಬ್ಬರು ದೀಪದ ಕುಡಿಯನ್ನು ಬೆರಳಿಂದ ನಯವಾಗಿ ತೀಡಿ, ಮುಚ್ಚಟೆಯಿಂದ ದೀಪಬೆಳಗಿ ತಾಳಮದ್ದಲೆಯ ಸರಣಿಯನ್ನು ಉದ್ಘಾಟಿಸಿದ್ದು, ಶಿವನೆದುರು ರಾಮ ಪಾರಮ್ಯವನ್ನು ಸಾರುವ ಪ್ರಸಂಗದಲ್ಲಿ ರಾಮಕಥೆಯ ಎಳೆಎಳೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದು, ಸಭಿಕರ ಸಾಲಿನಲ್ಲಿ ಹವ್ಯಾಸಿಯಾಗಿ ವೇಷ ಹಾಕುವ ಅದೇ ಕೋಮಿನ ಅಧಿಕಾರಿಯೊಬ್ಬರು ತಲೆದೂಗುತ್ತಾ ಪ್ರಸಂಗವನ್ನು ಆಸ್ವಾದಿಸಿದ್ದು ಮತ್ತು ಇವೆಲ್ಲವೂ ದೇವಾಲಯದ ಆವಾರರಣದೊಳಗೆ ಘಟಿಸಿದ್ದು ಬೇಸಿಗೆಯಲ್ಲೂ ಬತ್ತದ ನದಿಯ ತನಿಸನ್ನು ಮನಸ್ಸಿಗೆ ನೀಡಿದ್ದಂತೂ ಸುಳ್ಳಲ್ಲ.

ಯಕ್ಷಗಾನದ ನಾಂದೀ ಪದ್ಯವೊಂದು ಅದನ್ನೇ ಹೇಳುತ್ತದೆ,

“ಅರೆರೆ ನಿನ್ನಯ ಮಹಿಮೆಯನು ಪೊಗಳಲಳವಲ್ಲ…..

‍ಲೇಖಕರು Admin

17 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading