ಇತ್ತೀಚಿಗಷ್ಟೇ ಬಿಡುಗಡೆಯಾದ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರ ‘ಸೂರ್ಯನ ಚೂರುಗಳು’
‘ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.
ಕನ್ನಡದ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು ಈ ಕೃತಿಯ ಕುರಿತ ಬರೆದ ಬರಹ ಇಲ್ಲಿದೆ.
-ಸುಬ್ರಾಯ ಚೊಕ್ಕಾಡಿ
ಪ್ರಿಯ ಕುಂ ವೀ,
ನೀವು ನನ್ನಂಥ ಬಡಪಾಯಿ ಓದುಗನಿಗೆ ಇಷ್ಟೊಂದು ಕಷ್ಟ ಕೊಡಬಾರದು ಮಾರಾಯರೇ!
ನಿಮ್ಮ ಸೂರ್ಯನ ಚೂರುಗಳು ಓದ್ತಾ ನಗ್ತಾ, ನಗ್ತಾ ಓದ್ತಾ ಹೊಟ್ಟೆ ಹುಣ್ಣಾದಂತಾಗಿ ಕೊನೆಗೆ ಕಣ್ಣೀರೂ ಬಂತು!ನಕ್ಕಿದ್ದು ನಿಮ್ಮ ಜಗದ್ವಿಖ್ಯಾತ ವಿಡಂಬನಾತ್ಮಕ ಶೈಲಿಯಲ್ಲಿ ದೊಡ್ಡವರ ಉಬ್ಬಿದ ಸ್ವಪ್ರತಿಷ್ಠೆಯ ಬಲೂನಿಗೆ ನಿಜದ ಸೂಜಿಮೊನೆಯನ್ನು ಚುಚ್ಚಿದ ರೀತಿಗಾಗಿ. ನಿಮ್ಮನ್ನು ನೀವೇ ತಮಾಷೆಗೆ ಒಡ್ಡಿಕೊಳ್ಳುವ ಕ್ರಮಕ್ಕಾಗಿ.ಕಣ್ಣೀರಾದದ್ದು ಕಾಣದೇ ಹೋದ ಸಣ್ಣವರ ದೊಡ್ಡತನದ ಅರಿವಿಗಾಗಿ,ಕಾಟ್ರಹಳ್ಳಿಯವರಂಥ ದುರಂತ ನಾಯಕರಿಗಾಗಿ!ಧುತ್ತರಗಿಯಂಥವರೂ ಹಸಿವಿನಿಂದ ಬಳಲಬೇಕಾಗಿ ಬಂದ ಸ್ಥಿತಿಗಾಗಿ! ಇವರಂಥ ಅವಧೂತರ ಥರ ಬದುಕಿದವರು ಊರಿಗೊಬ್ಬರಾದರೂ ಇರ್ತಾರೇನೋ ಅಂತ ನನಗನಿಸ್ತದೆ!
ಇಲ್ಲಿರುವ ಹನ್ನೊಂದು ಜನರ ಪೈಕಿ ಅನಂತಮೂರ್ತಿ, ಲಂಕೇಶ್, ಶಿವರುದ್ರಪ್ಪ, ಸಿದ್ಧಲಿಂಗಯ್ಯ ಹಾಗೂ ಚೆನ್ನಣ್ಣರ ಜತೆ ಒಡನಾಟವಿತ್ತು ನನಗೆ. ಲಂಕೇಶರ ನನ್ನ ತಂಗಿಗೊಂದು ಗಂಡು ಕೊಡಿ ನಾಟಕವನ್ನು ಕಳೆದ ಅರುವತ್ತರ ದಶಕದಲ್ಲೇ ನಮ್ಮ ಸುಮನಸಾದ ಮೂಲಕ ಪ್ರಕಟಿಸಿದ್ದೆ. ಅವರೆಲ್ಲರ ಅದ್ಭುತ ಪ್ರತಿಭೆ, ದೊಡ್ಡತನ, ಸಣ್ಣತನ ಮೊದಲಾದ ಅವರ ಒಳಹೊರಗುಗಳ ಸ್ವಲ್ಪ ಪರಿಚಯ ನನಗೂ ಇದೆ. ಅಗ್ರಹಾರ, ಮಲ್ಲೇಪುರಂ, ಕಾಟ್ರಹಳ್ಳಿಯವರನ್ನು ನಾಲ್ಕೈದು ಬಾರಿ ನೋಡಿದ್ದಿದೆ ಅಷ್ಟೆ. (ಆ ಕಡೆಯ ಸತೀಶ ಕುಲಕರ್ಣಿ, ಅಲ್ಲಮಪ್ರಭು ಮೊದಲಾದವರು ನನ್ನ ಒಂದು ಕಾಲದ ಮಿತ್ರರಾಗಿದ್ದರು! ಕಂಬಾರ,ಡಿ ಆರೆನ್,ಕಾಪಸೆ ಮೊದಲಾದವರ ಪರಿಚಯವೂ ಸಾಕಷ್ಟಿದೆ.) ಉಳಿದವರದು ನನ್ನ ಮಟ್ಟಿಗೆ ಹೊಸಪರಿಚಯ.
ಅನಂತಮೂರ್ತಿಯವರಿಗೆ ಒಂದು ಚೀಲ ಸಕ್ಕರೆ ಸಿಕ್ಕಿದ್ದು ,ಅವರ ಹಿಪಾಕ್ರೆಸಿ, ಶಿವರುದ್ರಪ್ಪರ ಕಾರ್ ಡ್ರೈವಿಂಗ್, ಸಿದ್ಧಲಿಂಗಯ್ಯರು ಶಿವಾಚಾರ್ಯರಾದುದು, ಚೆನ್ನಣ್ಣನ ಶತಮಾನದ ಹಸಿವು ಹಾಗೂ “ಥಂಗಿಯರ”ಭೇಟಿ, ಮಲ್ಲೇಪುರಂ ಅವರ ಬಹುಕೃತವೇಷಗಳು, ನಿಮ್ಮ “ರೌಡಿತನ”! (ನೀವು ರಾಯಲ್ ಸೀಮೆಯವರಲ್ಲವೇ?.). ಮೊದಲಾದವೆಲ್ಲ ಮಜಾ ಕೊಡುವುದರೊಂದಿಗೆ ಆಯಾ ವ್ಯಕ್ತಿಗಳ ಒಳಗಿನ ರೂಪವನ್ನು ಪ್ರದರ್ಶಿಸಿತು!ಮಲ್ಲೇಪುರಂ -ಭಾಗ 2. ಓದುವ ಆಸಕ್ತಿ ಇದೆ ನನಗೆ, ನೀವು ಕರುಣಿಸಿದರೆ! ಒಂದು ರೀತಿಯಲ್ಲಿ ಸಿದ್ಧಲಿಂಗಯ್ಯರು ಅನಂತಮೂರ್ತಿಯವರ ಇನ್ನೊಂದು ಮುಖ ಎನ್ನಬಹುದು.
ಈ ಕಂಬಾರ, ಸಿದ್ಧಲಿಂಗಯ್ಯ,ಡುಂಡಿರಾಜ್ ಮೊದಲಾದವರ ಕುರಿತು ನಾಡಿಗರ ಹಾಡುಗಳು, ಸಾಹಿತ್ಯದ ಭೂಗತಲೋಕದ ಪ್ರಸಿದ್ಧ ಹಾಡುಗಳಾಗಿವೆ. ನಿಮ್ಮ ಪುಸ್ತಕ ಓದ್ತಾ ಇವು ನೆನಪಾದವು!ಹಾಗೇ ಚೆನ್ನಣ್ಣನ ಕುರಿತಾದ ಬರೆಹದಲ್ಲಿ ನನ್ನ ಹೆಸರನ್ನೂ ಕಂಡೆ.
ಸೊಗಸಾದ ಬರೆಹಗಳಿರುವ ಕೃತಿ ಇದು. ತುಂಬಾ ಇಷ್ಟವಾಯಿತು.






0 Comments