ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಘನಾ ಸುಧೀಂದ್ರ ಅಂಕಣ: ಆ ರಾತ್ರಿ ಹುಡುಗಿಗೆ ನಿದ್ದೆಯೇ ಬರಲಿಲ್ಲ..

ಆ ರಾತ್ರಿ ಹುಡುಗಿಗೆ ನಿದ್ದೆಯೇ ಬರಲಿಲ್ಲ.

ಎಲೆನಾಗೆ ತನ್ನ ದೇಶದ ದೊಡ್ಡ ಮನುಷ್ಯನ ಸಾವು ಎಷ್ಟು ಬಾಧಿಸುತ್ತಿದೆ, ಆತನ ಆತ್ಮಕ್ಕೆ ಶಾಂತಿ ಸಿಗಲು ಇಷ್ಟೆಲ್ಲಾ ಹೋರಾಟ ಅವಳೂ ಮಾಡುತ್ತಿದ್ದಾಳೆ ಅಂದರೆ ಅವಳಿಗೆ ಅವಳ ದೇಶದ ಚರಿತ್ರೆ ಎಷ್ಟು ಗೊತ್ತಿದೆ, ಅದರಲ್ಲಿ ಅವಳೆಷ್ಟು ತಲ್ಲೀನಳಾಗಿದ್ದಾಳೆ. ೪೦ನೇ ದಶಕದಲ್ಲಿ ಆದ ಸಾವು ಅವಳನ್ನು ಇಷ್ಟೊಂದು ಬಾಧಿಸುತ್ತದೆ ಎಂದರೆ ಅವಳಲ್ಲಿನ ದೇಶಪ್ರೇಮ ಎಷ್ಟರಮಟ್ಟದ್ದು ಎಂದು ಯೋಚಿಸುತ್ತಲೇ ಇದ್ದಳು. ಅವಳ ತಾತನ ಅವಳಿಗೆ ಕಾಡಿದ್ದು ಬಿಟ್ಟರೆ ಮತ್ತ್ಯಾವ ಸಾವು ಅವಳನ್ನ ಹೆಚ್ಚಾಗಿ ಕಾಡಿರಲ್ಲಿಲ್ಲ. ತನ್ನ ದೇಶದಲ್ಲಿ ಭಗತ್ ಸಿಂಗ್ ಸಾವು, ಮಹಾತ್ಮ ಗಾಂಧಿ ಸಾವು, ಸುಭಾಷ್ ಚಂದ್ರ ಬೋಸ್ ಸಾವು, ಹೋಮಿ ಬಾಬಾ ಸಾವು, ಅಬ್ದುಲ್ ಕಲಾಮ್ ಸಾವು  ಅಥವಾ ಇತ್ತೀಚೆಗೆ ಆದ  ಡಿ ಕೆ ರವಿ  ಸಾವು ಎಷ್ಟು ನನ್ನನ್ನ ಬಾಧಿಸಿತ್ತು ಎಂದು ಪ್ರಶ್ನೆ ಮಾಡಿಕೊಂಡಳು.

ಸ್ವಾತಂತ್ರ್ಯ ಪೂರ್ವದ ವಿಚಾರಗಳನ್ನ ಬದಿಗಿಟ್ಟು ಈಗ ತನ್ನ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ಅಲ್ಲಿ ಯಾರೋ ಸತ್ತರು ಎಂದರೆ ಅವಳು ೩ ಪೀಳಿಗೆಯ ನಂತರವೂ ಅದನ್ನ ಸ್ಮರಿಸಿಕೊಳ್ಳುತ್ತಾಳಾ ಎಂಬ ಪ್ರಶ್ನೆ ತನಗೆ ತಾನೆ ಹಾಕಿಕೊಂಡಳು. ಒಂದು ವಿಚಿತ್ರ ಒದ್ದಾಟದಲ್ಲಿ ಅವಳು ಸಿಲುಕಿಹಾಕಿಕೊಂಡಿದ್ದಳು. ಶಾಲೆಯಲ್ಲಿ ಹಾಡಿದ್ದ ದೇಶಭಕ್ತಿಗಳನ್ನ ಮಾತ್ರ ದೇಶಭಕ್ತಿ ಎಂದುಕೊಂಡು ಇದ್ದ ಇವಳಿಗೆ ಇದೊಂದು ಥರಹ ವಿಚಿತ್ರ ಪ್ರಶ್ನೆಯಾಗಿ ಕಾಡಲಾರಂಭಿಸಿತು.

ಕಂಪಾನಿಸ್ ಒಮ್ಮೊಮ್ಮೆ ಎಲೆನಾಳ ಮುತ್ತಾತನೋ ಅಥವಾ ಅವರ ಊರಿನವನೋ ಎಂದೂ ಸಂಶಯ ಪಟ್ಟುಕೊಂಡಿದ್ದಳು. ಒಂದು ಹೋರಾಟ ೩ ಪೀಳಿಗೆಯನ್ನು ದಾಟಿ ಬಂದಿದೆ ಎಂದರೆ ಅದಕ್ಕೆ ಎಷ್ಟು ಮಹತ್ವವಿರಬೇಕು, ಅಥವಾ ಯಾರೋ ಸ್ಪೇನಿನ ಏಕತೆಯನ್ನ ಒಡೆಯುವುದಕ್ಕೆ ಬೇರೆ ದೇಶದವರು ನಡೆಸುತ್ತಿರುವ ಹುನ್ನಾರವೇ ಎಂದೆಲ್ಲಾ ತಲೆ ಕೆಡಿಸಿಕೊಂಡು ಕೂತಳು. ಒಟ್ಟಿನಲ್ಲಿ ಆ ಪರ್ ಕತಲೂನ್ಯ,ಹೆಲೆನಾಳ ಅಳು ಎಲ್ಲವೂ ಅವಳನ್ನ ಬಾಧಿಸುತ್ತಿತ್ತು. ಒಂದು ಸಮಾಜವಾಗಿ ಈ ಕತಲನ್ನರು ಎಷ್ಟು ಒಗ್ಗಟ್ಟಿನಿಂದಿರುತ್ತಾರೆ ಎಂದು ಖುಷಿಪಟ್ಟುಕೊಂಡಳು. ತನ್ನ ಭಾಷೆ , ತನ್ನ ನಾಡು ಎಂದು ತಾನೂ ಹೋರಾಡಬೇಕು ಎಂದು ಅರಿತುಕೊಂಡಳು.

ಇನ್ನು ನಿದ್ದೆ ಮನೆ ಹಾಳಾಯ್ತು ಎಂದು ಯೂಟ್ಯೂಬಿನಲ್ಲಿ ರಾಜಕುಮಾರ್ ಸೀನ್ಸ್ ಎಂದು ಹಾಕಿಕೊಂಡು ಸ್ವಲ್ಪ ಸ್ವಾಭಿಮಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡಿದಳು. ಮೊದಲು “ನಾನ್ಯಾರು ಕಶ್ಯಪ ಬ್ರಹ್ಮನ ಮಗ” ಎಂದು ರೌದ್ರ ರೂಪದಲ್ಲಿ ಹಿರಣ್ಯಕಶಿಪು ಆದರೆ, ಇನ್ನೊಂದೆಡೆ “ಗಂಡುಗಲಿಗಳ ಗೆಲ್ಲೋ ಗುಂಡಿಗೆಯು ನಿನಗೆಲ್ಲೋ ಖಂಡಿಸದೆ ಉಳಿಸುವೆ ಹೋಗೊ ಹೋಗೆಲೋ” ಎಂದು ಧ್ವನಿ ಕೂಡಿಸುತ್ತಾ “ಕನ್ನಡಿಗರ ಪೌರುಷ, ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನಆಚಂದ್ರಾರ್ಕವಾಗಿ ನಿಲ್ಲುವಂಥದ್ದೇ ಹೊರತು..” ಎಂದು ಗಟ್ಟಿಯಾಗಿ ಕೂಗಿಕೊಳ್ಳಲು ಪ್ರಾರಂಭ ಮಾಡಿದಾಗ ಫ್ಲಾಟಿನಲ್ಲಿದ್ದ ಅಷ್ಟೂ ಜನರು ಎದ್ದು ಕಾಮನ್ ಸೆನ್ಸ್ ಇಲ್ವಾ ಎಂದು ಬೈದರು.

ರಾತ್ರಿ ಹನ್ನೊಂದು ಘಂಟೆಯಲ್ಲಿ ಇವಳ ವಾಯ್ಸ್ ಕೇಳಿ ಏನೋ ಆಗಿ ಹೋಯ್ತೆಂದುಕೊಂಡು ಓಡಿ ಅವಳ ಕೋಣೆಗೆ ಬಂದಿದ್ದರು. ಪ್ರೈವೆಸಿ ಅನ್ನೋದು ಅವರಿಗೆ ಬಹಳ ಮುಖ್ಯವಾದ ಅಂಶ, ಜೋರಾಗಿ ಕಿರುಚಬಾರದು, ಮಾತಾಡಬಾರದು ಮತ್ತು ಅವರ ಹತ್ತಿರ ಏನೇನೋ ಪ್ರಶ್ನೆಗಳನ್ನೂ ಕೇಳಬಾರದು ಎಂಬ ಅಲಿಖಿತ ನಿಯಮ ಹಾಕಿಕೊಂಡಿರುತ್ತಾರೆ. ನಮ್ಮ ಹಾಗೆ ವಯಸ್ಸು ಎಷ್ಟು, ಸಂಬಳ ಎಷ್ಟು, ಮದುವೆ ಆಗಿದೆಯಾ, ಮಕ್ಕಳು ಯಾವಾಗ ಎಂಬ ತೀರ ಖಾಸಗಿ ವಿಚಾರಗಳನ್ನ ಕೆದಕಿ ಕೇಳೋದಿಲ್ಲ.

ಎನಿವೇ ಅವಳು ಅಷ್ಟು ರಾತ್ರಿಯಲ್ಲಿ ಎಲ್ಲರನ್ನೂ ಎಬ್ಬಿಸಿದ್ದಕ್ಕೆ ಕ್ಷಮೆ ಕೇಳಿ, ಮೆಲ್ಲಗೆ ತನ್ನ ಹೆಡ್ ಫೋನಿನಲ್ಲಿ ” ಯಾರಿಹರು ನಿಮ್ಮಲಿ,ಮದಕರಿಯ ನಾಯಕ, ಕೆಚ್ಚೆದೆಯ ಎಚ್ಚಮ,ರಣಧೀರರು ನುಡಿದಾಸರು.ಉಳಿದಿಹುದು ನಿಮ್ಮಲಿ,ಹೊಯ್ಸಳರ ಕಿಡಿಗಳು.ಹೊನ್ನ ಮಳೆ ಸುರಿಸಿದ,ಅರಿರಾಯರ ತೋಳ್ಬಲಗಳು” ಎಂದು ಹಂಸಲೇಖಾರ ಹಾಡು ಹಾಕಿಕೊಂಡೇ ನಿದ್ದೆಗೆ ಜಾರಿದಳು. ಬೆಳಗ್ಗೆ ಎಲೆನಾ ಎಬ್ಬಿಸಿದಾಗಲೇ ಎಚ್ಚರವಾಗಿದ್ದು.

ಮಾಂಟ್ ಜ್ಯೂಕಿನ ಕೋಟೆಯೊಳಗೆ ಅವತ್ತು ಸ್ಪರ್ಧೆ. ಎಲ್ಲರೂ ತಮ್ಮ ತಮ್ಮ ಕೋಡಿಂಗ್ ಸ್ಕಿಲ್ಸ್ ತೋರಿಸಿ ವಾಯ್ಸನ್ನ ಸಿಂಥ್ ಮಾಡಿದ್ದರು. ಪರ್ ಕತಲೂನ್ಯ ಎಂಬ ಮಾತಂತೂ ಆ ಕೋಟೆಯೊಳಗೆ ಸಾವಿರಾರು ಬಾರಿ ಮೊಳಗಿತ್ತು. ಎಲ್ಲಾ ಸಮಯದಲ್ಲೂ ಎಲೆನಾ ಭಾವುಕಳಾಗಿಯೇ ಇದ್ದಳು. ಹುಡುಗಿಯ ಕಡೆಗೆ ತಿರುಗಿ ನೋಡಿ, “ನಿನ್ನ ದೇಶದ ಇಷ್ಟು ಭಾವುಕತೆಯ ವಾಕ್ಯ ಯಾವುದು” ಎಂದಳು. “ಹೇ ರಾಮ್” ಇರಬಹುದಾ ಅಥವಾ “ಜಯ್ ಜವಾನ್ ಜಯ್ ಕಿಸಾನ್” ಇರಬಹುದಾ, “ಭಾರತ ಮಾತೆಗೆ ಜೈ” ಇರಬಹುದಾ ಎಂದೆಲ್ಲಾ ಯೋಚನೆ ಮಾಡಿದಾಗ, “ಇಲ್ಲ ನನಗೆ ಯಾವ ಘೋಷ ವಾಕ್ಯವೋ ಏನೂ ಮಾಡಲ್ಲ, ಬಟ್ ಸರ್ವ ಜನಾಂಗದ ಶಾಂತಿಯ ತೋಟ ಎಂದು ಕುವೆಂಪು ನಾಡಗೀತಯಲ್ಲಿ ಬರೆದ್ದದ್ದು ಕೇಳಿದಾಗಲ್ಲೆಲ್ಲಾ ರೋಮಾಂಚನವಾಗುತ್ತದೆ” ಎಂದು ಗಂಭೀರವಾಗಿ ಹೇಳಿ ಕುಳಿತುಕೊಂಡಳು.

ಆಮೇಲೆ ಸ್ಪರ್ಧೆಯಲ್ಲಿ ಇಂದೂ ಮತ್ತು ಕತಲಾನ್ ಟೀಮಿನ ಎಲೆನಾ ಮತ್ತು ಹುಡುಗಿಗೆ ಎರಡನೇ ಬಹುಮಾನ ಬಂದಿದೆ ಎಂದು ಗೊತ್ತಾಯಿತು. ಅದಕ್ಕೆ ಎಷ್ಟೋ ಯೂರೋ ಬಹುಮಾನ ಎಂದೂ ಘೋಷಣೆ ಮಾಡಲಾಯಿತು. ಎಲೆನಾ ಆ ದುಡ್ಡು ಕತಲಾನ್ ಹೋರಾಟಕ್ಕೆ ಎಂದು ಸಮರ್ಪಣೆ ಮಾಡಿಬಿಟ್ಟಳು. “ಲಾಟರಿ ಹೊಡೆದರೆ ಆ ದುಡ್ಡೆಲ್ಲಾ ನಿನಗೆ ತಿಮ್ಮಪ್ಪ” ಎಂದು ಅವಳಜ್ಜಿ ಹೇಳುತ್ತಿದ್ದ ಮುಗ್ಧ ವಾಕ್ಯ ನೆನಪಿಸಿಕೊಂಡು ನಕ್ಕಳು. ದೇವರ ಹುಂಡಿಗೆ ದುಡ್ಡು ಹೋಗಬೇಕಾದರೆ ಲಾಟರಿ ಯಾಕೆ ಹೊಡಿಬೇಕು ಎಂಡು ನಗುತ್ತಿದ್ದ ಕಾಲವನ್ನ ನೆನಪಿಸಿಕೊಂಡಳು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ, ಅಲ್ಲಿನ ಸಂಸ್ಕೃತಿ ಇಲಾಖೆಯವರು ಭಾಷಣ ಶುರುಮಾಡಿದರು, “ನೀವೆಲ್ಲಾ ಕಂಪಾನಿಸಿನ ಧ್ವನಿಯನ್ನ ನಕಲು ಮಾಡಿದಿರಿ, ಅವನೊಂದು ಆಲದ ಮರ ಇದ್ದ ಹಾಗೆ, ಆ ಆಲದ ಮರ ಬಿದ್ದ ಮೇಲೆ ಕಾಡು ಹೇಗಿದೆ ಎಂದು ತಿಳಿದುಕೊಂಡಾಗಲೇ ಆ ಕಾಡು ಎಷ್ಟು ಸಮೃದ್ಧಿಯಾಗಿದೆ ಎಂದು ತಿಳಿಯುವುದು, ಇಲ್ಲದಿದ್ದರೆ ಹೋರಾಟವೆಲ್ಲವೂ ಅಲ್ಲೇ ಮುಗಿದುಬಿಡುತ್ತದೆ, ಕಂಪಾನಿಸ್ ಸತ್ತ ನಂತರ ಕತಲೂನ್ಯ ತನ್ನ ಅಸ್ಥಿತ್ವವನ್ನೇ ಕಳೆದುಕೊಂಡುಬಿಟ್ಟಿತ್ತು. ಫ್ರಾಂಕೋ ಎಂಬ ದೊರೆ ಸರ್ವಾಧಿಕಾರಿಯಾಗಿ ವರ್ತಿಸಲು ಪ್ರಾರಂಭಿಸಿದ. ೧೯೩೯ರಲ್ಲಿಯೇ ಸ್ಪೇನಿನಲ್ಲಿ ಬಹಳ ದೊಡ್ಡ ಹುದ್ದೆಯಲ್ಲಿದ್ದವನು ಸ್ಪೇನಿನ ದೊರೆಯಾಗಿ ಬಿಂಬಿತವಾದ. ಸ್ಪೇನಿನ ಕೌಡಿಯಾ ಸಹ ಆದ. ಈ ಸ್ಥಾನಮಾನ ಹಿಟ್ಲರಿಗೆ ಜರ್ಮನಿಯಲ್ಲಿದ್ದ ಫರ್ಹರ್ ಸ್ಥಾನಕ್ಕೆ ಈಕ್ವಿವಲೆಂಟ್.

ತನ್ನ ಸ್ಥಾನ ಭದ್ರ ಪಡಿಸಿಕೊಳ್ಳುವುದಕ್ಕೆ ಸ್ಪೇನಿನ ಮೂಲನಿವಾಸಿಗಳು ಇವರು, ಅದಾದ ನಂತರ ಬಂದವರು ಇನ್ನು ಮಿಕ್ಕಿದವರು, ಸ್ಪೇನಿನವರೆಲ್ಲಾ ಒಂದೇ ಭಾಷೆ ಮಾತಾಡಬೇಕು, ಒಂದೇ ರೀತಿಯ ಚರ್ಚಿಗೆ ಹೋಗಬೇಕು ಎಂದು ಒಂದೇ ಭಾಷೆ ಒಂದೇ ಧರ್ಮದ ಹೆಸರು ಹೇಳಿಕೊಂಡು ಒಂದೊಂದೆ ಸಣ್ಣ ಪ್ರಾಂತ್ಯವನ್ನು ನುಂಗಿ ನೀರುಕುಡಿಯಲು ಶುರು ಮಾಡಿದ. ಅವನ ವಿರುದ್ಧಾ ಯಾರೇ ಮಾತಾಡಿದರು ಅವರನ್ನ ದೇಶದ್ರೋಹದ ಅಧಾರದಲ್ಲಿ ಜೈಲಿಗೆ ಕಳುಹಿಸಿ ಅವರನ್ನ ಯಾವುದೇ ಕೋರ್ಟ್ ಕಟ್ಟಳೆಗೆ ಏರ್ಪಡಿಸದೆ ಅವರನ್ನ ಹಿಂಸೆ ಮಾಡಿ ಮಾಡಿ ಕೊಂದ.

ಖುದ್ದಾಗಿ ನಿಂತು ಕತಲೂನ್ಯಾದ ಭಾಷೆಯನ್ನು ಅಧಿಕೃತ ಭಾಷೆಯ ಲಿಸ್ಟಿನಿಂದ ತೆಗೆದುಹಾಕಿದ್ದ, ಸ್ಪೇನ್ ಒಂದೇ ಇಲ್ಲಿನ ಭಾಷಾ ಮಾಧ್ಯಮ ಎಂದು ಎಲ್ಲಾಕಡೆ ಪ್ರಚುರ ಪಡಿಸಿದ. ಎಲ್ಲಾ ಕಡೆ ಸೆನ್ಸರ್ ಶುರುವಾಯಿತು. ಎಡ ಗುಂಪನ್ನ ಜೈಲಿಗೆ ಹಾಕಿ , ಕತಲಾನ್ ಭಾಷೆಯನ್ನು ಬರೀ ಅಡುಗೆ ಮನೆಯ ಭಾಷೆಯನ್ನಾಗಿ ಮಾಡಿ ಪೂರ್ತಿ ಕತಲಾನ್ ಮಾಧ್ಯಮದ ಶಾಲೆಗಳು, ವಿಶ್ವವಿದ್ಯಾಲಯಗಳನ್ನ ಬಂದ್ ಮಾಡಲಾಯಿತು. ಎಷ್ಟೋ ಕತಲನ್ನರು ದೇಶ ಬಿಟ್ಟುಹೋದರು. ೪೦೦೦ ಮಂದಿಯನ್ನು ಸೆಡೇಷನ್ ಚಾರ್ಜಿನಲ್ಲಿ ಬಂಧಿಸಿ ಅವರೆಲ್ಲರನ್ನೂ ಕೊಲ್ಲಲಾಯಿತ. ಇಷ್ಟೆಲ್ಲಾ ಆಗುತ್ತಿರುವಾಗ ಸ್ಪೇನಿನ ಸಿವಿಲ್ ವಾರ್ ಕತಲೂನ್ಯಾದ ಬೊಕ್ಕಸವನ್ನ ಬರಿದು ಮಾಡಿತ್ತು. ದುಡ್ಡಿಲ್ಲ, ಊಟಕ್ಕೆ ಹಾಹಾಕಾರ, ಕೆಲಸವಿಲ್ಲದ ಸಮಯದಲ್ಲಿ ಕತಲೂನ್ಯಾ ಹೋರಾಟ ಹಳ್ಳ ಹಿಡಿಯಿತು.

ಆದರೆ ಫ್ರಾಂಕೋನ ಸರ್ಕಾರ ಆಟರ್ಕಿಯನ್ನ ಕಟ್ಟಲು ಶುರುಮಾಡಿತ್ತು, ಬೇರೆ ದೇಶದ ಉದ್ದಿಮೆಗಳು ಇಲ್ಲಿ ಬಂದವು. ಒಂದು ಕಾರ್ಪೋರೇಟ್ ಸಂಸ್ಕೃತಿಯ ಹಾಗೆ ಜನ ೯ಘಂಟೆಯಿಂದ ೬ ಘಂಟೆಯ ವರೆಗೆ ಸುಮ್ಮನೆ ಕೆಲಸ ಮಾಡಿದ್ದರು. ಅವತ್ತು ದೇಶದ ಉಳಿವಿಗಿಂತ, ಭಾಷೆಯ ಉಳಿವಿಗಿಂತ ಹಸಿವು ನೀಗಿಸಿಕೊಳ್ಳುವುದು ಮಾತ್ರ ಬೇಕಾಗಿತ್ತು. ಎಲ್ಲಾ ಸರ್ವಾಧಿಕಾರಿಗಳು ಅಷ್ಟೆ ಅವರ ಸುತ್ತ ಅವರನ್ನ ಉಘೇ ಉಘೇ ಅನ್ನುವವರನ್ನ ಮಾತ್ರ ಇಟ್ಟುಕೊಂಡು ಆಗಾಗ ಅಭಾವವನ್ನ ಸೃಷ್ಠಿ ಮಾಡಿ ತಮ್ಮಿಂದಲೇ ಜಗತ್ತು ಉದ್ಧಾರ ಆಗುತ್ತಿದೆಯೆಂದು ಭ್ರಮೆ ಏರ್ಪಡಿಸಿ ತಮ್ಮನ್ನ ತಾವು ಹೀರೋ ಎಂದೇ ಬಿಂಬಿಸಿಕೊಳ್ಳುತ್ತಾರೆ…. ” ಎಂದು ಹೇಳಿ ಒಂದು ನಿಮಿಷ ಮೌನದ ನಂತರ, “ಕಂಪಾನಿಸ್ ಸಾವು ಬರೀ ಒಂದು ಮನುಷ್ಯನ ಸಾವಲ್ಲ, ಕತಲೂನ್ಯಾದ ಒಟ್ಟು ಸ್ವಾಭಿಮಾನದ ಸಾವಾಗಿ ನಮ್ಮೆಲ್ಲರ ಕಣ್ಣುಮುಂದೆಯಿದೆ” ಎಂದು ಹೇಳಿ ವೇದಿಕೆ ಇಳಿದರು…

“ಕಂಪಾನಿಸ್ ಸಾವು ಬರೀ ಒಂದು ಮನುಷ್ಯನ ಸಾವಲ್ಲ, ಕತಲೂನ್ಯಾದ ಸ್ವಾಭಿಮಾನದ ಸಾವು” ಎಂಬುದು ರಾಜ್ ಕುಮಾರ್ ವಾಯ್ಸಿನಲ್ಲಿ ಹುಡುಗಿಯ ಮನಸ್ಸಿನಲ್ಲಿ ಎಕೋ ಆಗಲು ಶುರುವಾಯಿತು.

‍ಲೇಖಕರು avadhi

8 February, 2020

2 Comments

  1. Vishnu Bhat Hosmane

    ಚಂದ ಚಂದ

  2. T S SHRAVANA KUMARI

    ಸೊಗಸಾಗಿದೆ, ನನಗಿಷ್ಟದ ಅಂಕಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading