ರೇಣುಕಾ ರಮಾನಂದ ಕವಿತೆ: ಒಂದು ಸಿಗುರು ಪ್ಲೈ ಉಡ್ ಪೀಸು

ರೇಣುಕಾ ರಮಾನಂದ

ಬಹಳ ವರ್ಷದ ಹಿಂದೆ ಮುಚ್ಚಿಹೋದ
ಅಂಗಡಿಯ ಗಲ್ಲಾಪೆಟ್ಟಿಗೆ
ಯಿಂದೆದ್ದು ಎಸೆಯಲ್ಪಟ್ಟ ಒಂದು ಸಿಗುರು
ಫ್ಲೈ ಉಡ್ ಪೀಸು ಯಾವ ಕೆಲಸಕ್ಕೆ ಬರುತ್ತದೆ
ಹೇಳಿ ನೋಡುವಾ ಎಂದರೆ
ಯಾರಾದರೂ ನಕ್ಕಾರು
ಅದನ್ನೆಂಥ ಕೇಳುವುದು
ಒಲೆಗೆ ದೂಡಿಬಿಡಿ
ಒಬ್ಬರು ಮೀಯಲು ಎರಡು ಚೊಂಬು ಬಿಸಿನೀರು
ಕಾಯ್ದೀತು ಎಂದು ಹೇಳಿ
ಮುಂದೆ ಹೋದಾರು

ಅಂಡು ಬಗ್ಗಿಸಿ ಮಂಡಿಗಾಲೂರಿ
ಕುಳ್ಳುವ,
ಹಾಗೆ ಕುಳಿತೇ ಓದುವ ಬರೆಯುವ
ಕೆಲಸಗಳನ್ನು ಒಟ್ಟಿಗೆ ಮಾಡಬಹುದು
ಅದರ ಮೇಲೆ ಎಂದರೆ
ನಿಮಗೆಂಥ ಮರುಳು
ನೆನಪಿಡಿ ನೀವೇ ಅಂದಿದ್ದು
ಅದು ಒಂದು ಬದಿ ಮುಕ್ಕಾದ
ಸಣ್ಣ ಪ್ಲೈ ಉಡ್ ಪೀಸು
ಜ್ಞಾಪಿಸಿಯಾರು
‘ಅದರಿಂದ ಏನೆಂದರೆ ಏನೂ ಆಗಲಿಕ್ಕಿಲ್ಲ’
ಪೆನ್ನುಹಿಡಿದು ಸಹಿ ಹಾಕಿ ಬೇಕಿದ್ದರೆ
ಬರೆದುಕೊಟ್ಟಾರು

ರಸ್ತೆಯಂಚಿನ ಕಲ್ಲುಗುಂಡು, ಇಟ್ಟಂಗಿ ಚೂರುಗಳು
ಯಾವುದಕ್ಕಾದೀತು
ಎಂದರೆ ಸಿಟ್ಟು ಏರಿ
ನಿಮಗೆ ಬೇರೆ ಕೆಲಸವಿಲ್ಲವಾ
ಎನ್ನುತ್ತ ಮೈ ಮೇಲೆಯೇ ಬಂದಾರು
ಹೋಗಿ ಹೋಗಿ
ಅಲ್ಲೆಲ್ಲಾದರೂ ಮುಷ್ಕರ ದೊಂಬಿ ಗಲಾಟೆ
ಗಳಿದ್ದರೆ ವಾಹನಗಳನ್ನು,ಅಂಗಡಿಗಳನ್ನು
ಜಖಂ ಮಾಡಿ ಇವುಗಳಿಂದ
ಅಥವಾ ಒಂದಿಬ್ಬರು ಜನರ ತಲೆ ಒಡೆಯಲೂ
ಬಳಸಬಹುದು ಇವುಗಳನ್ನು ನೀವು ಎನ್ನುತ್ತ
ತಲೆಹಿಡಿದಾರು

ಇಲ್ಲಿ ನೋಡಿ
ಅಟ್ಟಣಿಗೆ ಮಾಡಬಹುದು ಹೀಗ್ಹೀಗೆ..
ಇದೇ ಕಲ್ಲು,ಇಟ್ಟಂಗಿಗಳನ್ನು
ಅದೇ ಪ್ಲೈ ಉಡ್ಡಿನ ಸಿಗುರಿನಡಿಗೆ ಜೋಡಿಸಿ
ಈ ಕೆಲಸ ನಡೆದಿರುವುದು
ಆಗಲೇ ಹೇಳಿದ ಹಾಗೆ
ಒಬ್ಬ ಮಗನಿಗಾಗಿ
ಅವನ ಓದು ಬರಹಕ್ಕಾಗಿ
ರಸ್ತೆಯಂಚಿನ ಚರಂಡಿಯ ಮೇಲೆ
ಶೂ ಪಾಲೀಶು ಕಮ್ ಚಪ್ಪಲಿ ಹೊಲಿಯುವ
ಒಬ್ಬ ಬಾರೀಕು ಅಪ್ಪನ ಬಗಲಲ್ಲಿ

ಸುಡುವುದು
ಜಖಂ ಮಾಡುವುದು
ರಕ್ತ ಚಲ್ಲುವುದು
ಇದಿಷ್ಟೇ ನೋಡಿದ್ದು ನಾವು
ಕೇಳಿದ್ದು ಹೇಳಿದ್ದು ಕೂಡ ಇದನ್ನೇ
ಪಾಠ ಮಾಡಿದ್ದು ‘ಚಪ್ಪಲಿ ಬಿಡುವ
ಜಾಗದಲ್ಲಿ ನಿನ್ನ ಪಠ್ಯಪುಸ್ತಕಗಳನ್ನು ಅಪ್ಪಿತಪ್ಪಿಯೂ
ಇಡಬೇಡ ಅದೇ ಬೇರೆ ಇದೇ ಬೇರೆ ‘
ಎಂಬ ಭಿನ್ನತೆಯನ್ನ…
ಬೇರೆ ಸಾಧ್ಯತೆಗಳು ನಮ್ಮ ತಲೆಗೆ
ಹೊಳೆಯುವುದಿಲ್ಲ

ಅಪ್ಪನಿಗೆ ಮಾತ್ರ ಗೊತ್ತಿದೆ ಹೊಟ್ಟೆ ತುಂಬಿಸುವ
ಪಾಲೀಶಿನ ಶೂವಿಗೂ
ಓದಿ ಬರೆದು ಜ್ಞಾನಿಯಾಗಲಿರುವ ಮಗನಿಗೂ
ಒಂದೇ ಬಗೆಯ ಹದನಾದ ಎತ್ತರದ ಅವಶ್ಯಕತೆಯಿದೆ
ಮತ್ತದಕ್ಕೆ ಇಷ್ಟೇ ಇಷ್ಟು ಸಣ್ಣ ಜಾಗ
ಸಿಗುರು ಪ್ಲೈ ಉಡ್ ಪೀಸು
ನಾಲ್ಕು ಗುಂಡುಗಲ್ಲುಗಳು
ಸಾಕಾಗುತ್ತದೆ.

‍ಲೇಖಕರು avadhi

February 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Amba

    ಸಿಗುರು ಪ್ಲೈವುಡ್ ಪೀಸ್ ಮತ್ತು ನಾಲ್ಕು ಗುಂಡು ಕಲ್ಲುಗಳ್ಳಲ್ಲಿ ಎಂತ ಸತ್ಯವನ್ನ ಕಂಡಿದ್ದೀರಾ ಮತ್ತು ತಿಳಿಸಿ ಕೊಟ್ಟಿದ್ದೀರಿ ನಮಗೆ ರೇಣುಕಾ ಅವರೇ. ಸುಂದರ ಕವನಕ್ಕಾಗಿ ಧನ್ಯವಾದಗಳು.

    ಪ್ರತಿಕ್ರಿಯೆ
  2. sumangalagmngala

    ತುಂಬ ತಟ್ಟಿತು ನಿಮ್ಮ ಕವಿತೆ…ನಾವ್ಯಾರೂ ಗಮನಿಸದ ಸಂಗತಿಯನ್ನು ಎಷ್ಟು ಚೆನ್ನಾಗಿ ಇಲ್ಲಿ ದಾಟಿಸಿದ್ದೀರಿ… ಜೊತೆಗೇ ಒಂದಿಷ್ಟು ನಿಟ್ಟುಸುರುಗಳನ್ನು ಕೂಡ. 

    ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ರೇಣುಕಾ, ಬಹಳ ಚೆನ್ನಾದ ಕವಿತೆ. ಮರೆಯಲಾಗದ ಕವಿತೆ.

    ಪ್ರತಿಕ್ರಿಯೆ
  4. Geeta G Hegde

    ಯಾವ ವಸ್ತುವೂ ನಿಕ್ರಷ್ಟವಲ್ಲ ಎಂಬುದನ್ನು ಕವಿತೆಯಲ್ಲಿ ಚೆನ್ನಾಗಿ ಬಿಂಬಿಸಿದ್ದೀರಾ. ಮತ್ತೆ ಮತ್ತೆ ಓದುವಂತಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: